ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡಲ ತೀರದಿಂದ: ‘ಅಬ್ಬಲಿಗೆ’ಯ ಶೋಭಾ ಹಿರೇಕೈ

ಈ ವಾರದ ಕವಯಿತ್ರಿ ಶೋಭಾ ಹಿರೇಕೈ ಕಂಡ್ರಾಜಿ.

ತಮ್ಮ ಚೊಚ್ಚಲ ಕವನ ಸಂಕಲನ `ಅವ್ವ ಮತ್ತು ಅಬ್ಬಲಿಗೆ’ಯನ್ನು ೨೦೧೯ರಲ್ಲಿ ಪ್ರಕಟಿಸಿದರು.

 `ಅವಧಿ’ಯಲ್ಲಿ ಅವರ ಕವಿತೆಗಳು ಮೊದಲು ಪ್ರಕಟವಾದವು. ಕಡಲ ತೀರದ ವಿಶಿಷ್ಟ ಪ್ರತಿಮೆಗಳ ಮೂಲಕ ಶೋಭಾ ಕಾವ್ಯಲೋಕದಲ್ಲಿ ತಾವು ಬರುತ್ತಿರುವುದರ ಬಗ್ಗೆ ಸ್ಪಷ್ಟವಾಗಿ ಸಾರಿದರು. ಯೋಧ ತಂದೆಯನ್ನು ಕಳೆದುಕೊಂಡ ಮಗಳೊಬ್ಬಳ ತಳಮಳ ಹೇಳುವ `ಗುರ್ ಮೆಹರ್ ಅಂತರಂಗ’, ಯುದ್ಧ,ಬಂದೂಕುಗಳು ಕುರ್ಚಿ ಗಟ್ಟಿಮಾಡಿಕೊಳ್ಳುವವರ ತೆವಲಿಗೆ ಎಂಬ ಧ್ವನಿಯ ಕವಿತೆಗಳು ಶೋಭಾ ಬರಹದ ಪ್ರಧಾನ ಧಾರೆಯ ಕವಿತೆಗಳು.

ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಶೋಭಾ ವೈಚಾರಿಕ ಆಲೋಚನಾ ಕ್ರಮ ಹೊಂದಿದವರು. ಕಾಡಿನ ನಡುವಿನ ಹಿರೇಕೈ ಗ್ರಾಮದಲ್ಲಿ ಬೆಳೆದ ಕವಯಿತ್ರಿ ಗ್ರಾಮೀಣ ಪರಿಸರದ ನಂಟು ಸತತವಾಗಿ ಉಳಿಸಿಕೊಂಡಿದ್ದಾರೆ. ಸಿದ್ದಾಪುರ ತಾಲೂಕಿನ ಅರೇಹಳ್ಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುವ ಶೋಭಾ ಮೊದಲು ನೌಕರಿ ಮಾಡಿದ್ದು, ಖಾನಾಪುರ ತಾಲೂಕಿನ ಕಣಕಂಬಿ ಬಳಿಯ ಚಿಗುಳೆ ಗ್ರಾಮದ ಮರಾಠಿಶಾಲೆಯಲ್ಲಿ, ಕನ್ನಡ ಶಿಕ್ಷಕಿಯಾಗಿ.

ಕಣಕಂಬಿಯಲ್ಲಿದ್ದ ಕಾರಣ ಮರಾಠಿಯನ್ನು ಕಲಿತ ಇವರು, ಕನ್ನಡದಲ್ಲಿ ಸಮರ್ಥವಾಗಿ ಕವಿತೆ ಬರೆಯುತ್ತಿದ್ದಾರೆ. ಇವರ ಕಾವ್ಯದ ಮತ್ತೊಂದು ವಿಶೇಷತೆ ಎಂದರೆ ಸರಳವಾಗಿ ಕಾವ್ಯವನ್ನು ಓದುಗನಿಗೆ ತಲುಪಿಸುವುದು. ಮತ್ತು ದುಃಖಕ್ಕೆ ಮುಖಾಮುಖಿಯಾಗುವುದು. ಬೆವರು ಹಾಗೂ ಶ್ರಮವನ್ನು ಕವಿತೆಯ ವಸ್ತುವಾಗಿಸುವುದು. ನೋವಿಗೆ ಮಿಡಿಯುವುದು ಕನ್ನಡ ಕಾವ್ಯದ ಗುಣ. ಅಲ್ಲದೇ ದೇವರನ್ನು ಪ್ರಶ್ನಿಸುವ ಪರಂಪರೆ ಕನ್ನಡ ಕಾವ್ಯಕ್ಕೆ ಇದೆ. ಅಂಥ ಕಾವ್ಯ ಗುಣವನ್ನು ಶೋಭಾ ಅವರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರವೇಶದ ಸಂಬಂಧ ವಿವಾದ ಎದ್ದಾಗ ಬರೆದ `ಹೆಚ್ಚೆಂದರೇನು ಮಾಡಿಯೇನು’ ಎಂಬ ಕವಿತೆಯಲ್ಲಿ ಕಾಣಬಹುದು.

ನನ್ನ ಕವಿತೆ ದಿನವಿಡೀ ಬೆವರ ಮಿಂದು, ಸಂಜೆ ಬೆನ್ನ ನೋವಿಗೆಂದು ಕೊಂಚ ಗುಟುಕೇರಿಸಿ ; ಮಾತಿಲ್ಲದೇ ಜಗುಲಿ ಕಟ್ಟೆಗೊರಗಿ ಬಿಡುವ ನನ್ನಪ್ಪನಂಥ ಅಪ್ಪಂದರಿಗಾಗಿ ಎಂಬ ಸಾಲುಗಳು ಶೋಭಾ ಅವರ ಕವಿತೆಯ ದಿಕ್ಕನ್ನು ತೋರಿಸುತ್ತವೆ. `ಉಯಿಲೊಂದ ಬರೆದಿಡುವೆ’ ಕವಿತೆಯಲ್ಲಿ ಧರ್ಮ ಧರ್ಮಗಳ ಮಧ್ಯೆ ಉರಿಯುತ್ತಿರುವ ಜ್ವಾಲೆ ನೋಡುತ್ತಾ, ನನಗೆ ನನ್ನ ಜಾತಿ ಧರ್ಮ ಮರೆತುಹೋಗಿದೆ. ಪ್ರೇಮ ಧರ್ಮವೊಂದು ಹುಟ್ಟಿಬಿಡಲಿ ನನ್ನ ರಕ್ತದಿಂದ… ಎಂಬ ಆಶಯವನ್ನು ಜನತೆಯ ಮುಂದಿಡುತ್ತಾರೆ.

ಶೋಭಾ ಅವರ ಪತಿ ರವೀಂದ್ರ ಕೆ ನಾಯ್ಕ ಶೀಗೇಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯರು. ಶೋಭಾ ಅವರ ಓದು ಬರಹದ ಜೊತೆಗಾರರು.
………………………………

ನಿಮ್ಮ ಕವಿತೆ ನಿಮ್ಮ ಹಾಗೆ..??

ತೀರಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಬರೆದದ್ದು ತೀರಾ ಕಡಿಮೆ. ಅದನ್ನಾದರೂ ಯಾಕೆ ಬರೆದೆನೆಂದರೆ, ಬರೆಯಲೇ ಬೇಕು ಅನ್ನಿಸಿದ್ದನ್ನು ಬರೆಯದೇ ಇರಲು ಆಗದಿರುವುದಕ್ಕೆ. ತೀರಾ ಭಾವುಕ ಘಟನೆಗಳಾದರೆ ಬರೆದು ಹಗುರಾಗುವುದಕ್ಕೆ. ಸಾಂದರ್ಭಿಕ ಬರಹಗಳಾದರೆ, ನನ್ನ ಜವಾಬ್ದಾರಿಯನ್ನು, ಮನದ ಇಂಗಿತವನ್ನು ವ್ಯಕ್ತಪಡಿಸುವುದಕ್ಕೆ. ಬರೆದ ಕಥೆ ಕೇವಲ ಒಂದೇ ಕೈ ಬೆರಳೆಣಿಕೆಯಷ್ಟಿವೆಯಾದರೂ.. ಅವಾದರೂ ನನ್ನ ಅಕ್ಕಪಕ್ಕದಲ್ಲಿ ನಡೆದ ಘಟನೆಗಳೇ.. ನನ್ನ ಕಾಡಿದ್ದಕ್ಕೆ.

ಕುಟುಂಬದಲ್ಲಿ ಅಕ್ಷರ ಕಲಿತ ಮೊದಲ ತಲೆಮಾರಿನವಳಾಗಿ, ಅದೇ ಅಕ್ಷರಗಳ ರೂಪದಲ್ಲಿ ಅಳಿದ ಮೇಲೂ ಉಳಿದು ಬಿಡುವ ಹಂಬಲಕ್ಕೆ. ಮತ್ತೂ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸಮಾಜದಲ್ಲಿ ಸಿಗುವ ಮಾನ್ಯತೆಗೆ. ಮತ್ತು ಅರವತ್ತರ ನಂತರ, ಬೇಡದ ಶಿಕ್ಷಕಿಯಾಗೋ.. ತಾಯಿಯಾಗೋ…. ಅತ್ತೆಯಾಗೋ… ಹೆಂಡತಿಯಾಗೋ ಇರುವ ಬದಲು ; ಸಾಹಿತ್ಯದ ಸಾಮೀಪ್ಯದಲ್ಲಿ, ಅರಳು ಮರಳಾಗುವ ಹೊತ್ತಲ್ಲಿ, ಮತ್ತೆ ಅರಳಬಹುದೆಂಬ ಎದೆಯಾಸೆಗೆ ಈಗಿನ ಬರಹದ ಮೂಲಕ ಬುನಾದಿ ಹಾಕಿಕೊಳ್ಳುತ್ತಿರುವೆನೇನೋ.. ಅನ್ನಿಸುತ್ತಿದೆ.

ಕತೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ?

ಯಾವುದೇ ಘಟನೆಗಳು ತೀವ್ರವಾಗಿ ಮನಸ್ಸಿಗೆ ನಾಟುವಂತಿದ್ದರೆ, ಪದೇ ಪದೇ ನೆನಪಲ್ಲಿ ಸುಳಿಯುತ್ತಿದ್ದರೆ ಅದನ್ನು ಬರಹದಲ್ಲಿ ಹಿಡಿದಿಡಬೇಕೆನಿಸುತ್ತದೆ. ಕಾವ್ಯ ಅಥವಾ ಕವಿತೆ ಹುಟ್ಟುವ ಕ್ಷಣ ಇದೇ ಅಂತ ನಿಖರವಾಗಿ ಹೇಳಲಾರೆ. ಯಾವಾಗ ಬರೆಯುತ್ತೇನೆಯೋ.. ಅದೇ ಕಾವ್ಯ ಕ್ಷಣ.

ಕಥೆ, ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೆ ?

ಬಾಲ್ಯ, ಹರೆಯದ ಭಾವಗಳೆಲ್ಲ ಪಕ್ವವಾಗಿ, ಪಾಕವಾಗಿ ಹದ ಬಂದಾಗಲೇ.. ನಿಜವಾದ ಬರಹದ ಸವಿ ಸಿಗುವುದು. ಖಂಡಿತ ನನ್ನ ಬರಹದಲ್ಲೂ ಬಾಲ್ಯ, ಹರೆಯದ ಪ್ರಭಾವವಿದೆ.

ಕಥೆ, ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ, ವಸ್ತು ಯಾವುದು ?

ವಾಸ್ತವ ಹಾಗೂ ವೃತ್ತಿ ಬದುಕಿನ ಕಾರಣದಿಂದಾಗಿ ನಗರ ಹಾಗೂ ಹಳ್ಳಿಯೊಂದರ ದಿನ ನಿತ್ಯದ ದರ್ಶನದಿಂದಾಗಿ ಮತ್ತು ನಾನೂ ಅಪ್ಪಟ ಹಳ್ಳಿಯ ಮಗಳೇ ಆಗಿರುವುದರಿಂದ, ಗ್ರಾಮೀಣ ಬದುಕು ಹಾಗೂ ಅಲ್ಲಿಯ ಸಂಸ್ಕೃತಿ ನನ್ನನ್ನು ಸದಾ ಕಾಡುತ್ತದೆ. ಸಮಾಜದಲ್ಲಿ ಜಾತಿ, ಧರ್ಮಗಳು ಹಿಂದಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗುತ್ತಿವೆಯೇನೋ ಅನ್ನಿಸಿದಾಗೆಲ್ಲ ಈ ವಿಷಯಗಳು ತುಂಬಾ ಕಾಡುತ್ತವೆ. ಶ್ರಮಿಕರ ಬೆವರಿಗಿಲ್ಲದ ಬೆಲೆ ನನ್ನ ಬರಹವನ್ನು ಕಾಡಿದೆ. ನನ್ನ ಬರಹದಲ್ಲಿ ಹೆಣ್ಣಿನ ತಾಯ್ತನದ ಎಳೆಯೊಂದು ಕಾಣಿಸಿಕೊಳ್ಳದೆ ಪದಗಳ ಹೆಣೆದಿರುತ್ತದೆ. ಇದು ಕೂಡಾ ನನ್ನ ಕಾವ್ಯದ ವಿಷಯ ವಸ್ತು.

ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?

ಕುವೆಂಪುರವರು ` ವಿಚಾರ ಕ್ರಾಂತಿಗೆ ಆಹ್ವಾನ’ ಎನ್ನುವ ಪುಸ್ತಕದಲ್ಲಿ ರಾಜಕೀಯದ ಕುರಿತು ತಮ್ಮ ನಿಲುವನ್ನು ತುಂಬಾ ಸ್ಪಷ್ಟವಾಗಿ ಬರೆಯುತ್ತಾರೆ. ಅದೇನೆಂದರೆ… ” ಈಗ ನಮ್ಮ ರಾಜಕೀಯ ರಂಗ ಹೇಗಿದೆಯೆಂದರೆ, ಪ್ರಾಮಾಣಿಕರೂ, ಸಂಭಾವಿತರೂ, ಸುಸಂಸ್ಕೃತರೂ ಯಾರೂ ಅದರ ಹತ್ತಿರ ಸುಳಿಯಲೂ ಅಂಜುತ್ತಾರೆ. ಚುನಾವಣೆಯ ರೀತಿಯನ್ನೇ ಬದಲಾಯಿಸದಿದ್ದರೆ ಮಾನ ಮರ್ಯಾದೆಯುಳ್ಳ ಯಾವ ಪ್ರಾಮಾಣಿಕ ಯೋಗ್ಯನೂ ಅದರಲ್ಲಿ ಪಾಲ್ಗೊಳ್ಳುವ ಸಂಭವವಿಲ್ಲ. ಹಣದ ಹೊಳೆ ಹರಿಸಿ ಚುನಾವಣೆಯನ್ನು ಗೆಲ್ಲುವ ಯಾವ ವ್ಯಕ್ತಿಯಾಗಲೀ, ಯಾವ ಪಕ್ಷವಾಗಲೀ, ಭ್ರಷ್ಟಾಚಾರಕ್ಕೆ ಬಲಿಯಾಗದೆ ಇರಲು ಸಾಧ್ಯವೇ ಇಲ್ಲ. ಆದ್ದರಿಂದ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಮತ್ತು ನಿಜವಾದ ಪ್ರಜಾಸತ್ತತೆಯನ್ನು ರಕ್ಷಿಸುವ ಇಚ್ಛೆ ನಿಮಗಿದ್ದರೆ, ಇಂದಿನ ರೀತಿಯ ಧನಾಶ್ರಿತ ಚುನಾವಣೆಯ ಪದ್ಧತಿಯನ್ನೇ ಬದಲಾಯಿಸಿ, ಅದನ್ನು ಗುಣಾಶ್ರಿತವನ್ನಾಗಿ ಪರಿವರ್ತಿಸುವ ಕರ್ತವ್ಯ ನಿಮ್ಮ ಹೆಗಲ ಮೇಲೆ ಬೀಳುತ್ತದೆ. ಉಗ್ರ ಕ್ರಾಂತಿಯಿಂದಲಾದರೂ ನೀವು ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳು, ಸಮಯ ಸಾಧಕರು, ಗೂಂಡಾಗಳು, ಕಳ್ಳಸಂತೆಕೋರರು, ಕಳ್ಳ ಸಾಗಣೆಯ ಖದೀಮರು, ಚಾರಿತ್ರ್ಯ ಹೀನರೂ, ಪ್ರಜಾಸತ್ತೆಯ ಹುಸಿ ಹೆಸರಿನ ಹಿಂದೆ ಪ್ರಚ್ಛನ್ನ ಸರ್ವಾಧಿಕಾರ ನಡೆಸುತ್ತಾರೆ.” ಇದನ್ನು ಓದಿದ ಮೇಲೆ ಮತ್ತೆ ನನ್ನ ಪ್ರತಿಕ್ರಿಯೆಯ ಪುನರಾವರ್ತನೆಯ ಅಗತ್ಯವಿಲ್ಲವೆನಿಸುತ್ತದೆ.

ಧರ್ಮ, ದೇವರುಗಳ ವಿಷಯದಲ್ಲಿ ನಿಮ್ಮ ನಿಲುವೇನು ?

ಧರ್ಮ , ದೇವರುಗಳ ವಿಷಯ ಬಂದಾಗ ಕೆಲವರು ಇದು ಸೂಕ್ಷ್ಮ ವಿಷಯ, ತಟಸ್ಥ ಮನೋಭಾವನೆಯೇ ಸರಿ ಎಂಬ ಧೋರಣೆ ಹೊಂದಿರುತ್ತಾರೆ. ಆದರೆ ನನಗನ್ನಿಸುವುದೆನೆಂದರೆ, ಇಂಥ ಸೂಕ್ಷ್ಮ ವಿಷಯಗಳ ಬಗ್ಗೆಯೇ ಮಾತನಾಡಬೇಕು. ಪರಿಣಾಮ ಮಾತ್ರ ಧನಾತ್ಮಕವಾಗಿರಬೇಕು. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ನೀರೆರೆದಂತಿರಬೇಕು. ಧರ್ಮದ ವಿಷಯದಲ್ಲಿ ಲೋಹಿಯಾ ಒಂದು ಕಡೆ ಬಹಳ ಅರ್ಥಪೂರ್ಣವಾಗಿ ಹೇಳುತ್ತಾರೆ. “ಒಂದು ಧರ್ಮಕ್ಕೆ ನಾಲ್ಕು ಉಪಯೋಗಗಳಿವೆ. ಮೊದಲನೆಯದು ದೇಶ ಕಷ್ಟದಲ್ಲಿರುವಾಗ ಅದನ್ನು ರಕ್ಷಿಸುವ ಉಪಾಯ. ಸ್ಟಾಲಿನ್ ಕೂಡಾ ಹಿಟ್ಲರ್ ದಾಳಿ ಮಾಡಿದಾಗ ರಷ್ಯನ್ ಚರ್ಚ್ ಬಳಸಿಕೊಂಡು, ಜನರನ್ನು ಒಟ್ಟು ಮಾಡಿ ವೈರಿಯನ್ನು ವಿರೋಧಿಸಿದ. ಎರಡನೆಯದು ಆಸ್ತಿಯನ್ನು ಉಳಿಸಿಕೊಳ್ಳುವ ಉಪಾಯ. ಬಡವರು ತಮ್ಮ ಮೇಲೆ ದಂಗೆ ಏಳದಂತೆ ನೋಡಿಕೊಳ್ಳಲು ಅವರ ಮೇಲೆ ಆಸ್ತಿವಂತರು ಎರಚುವ ಮಂಕುಬೂದಿಯಾಗಿ ಇದು ಕೆಲಸ ಮಾಡುತ್ತದೆ. ಮೂರನೆಯದ್ದು ನಮ್ಮ ಮಕ್ಕಳಿಗೆ ಕೆಲವು ಒಳ್ಳೆಯ ಮೌಲ್ಯಗಳನ್ನು, ನೈತಿಕ ಮೌಲ್ಯಗಳನ್ನು ದಾಟಿಸುವ ವಿಧಾನ. ನಾಲ್ಕನೆಯದ್ದು ಯಾವುದೆಂದರೆ, ಧರ್ಮ ಒಂದು ಧ್ಯಾನದ ಶಿಸ್ತು. ಇದು ಎಲ್ಲಾ ಧರ್ಮಗಳಲ್ಲಿಯೂ ಇದೆ. ಲೋಹಿಯಾರ ಹೇಳಿಕೆಗಳು ಸಾರ್ವಕಾಲಿಕ ಸತ್ಯ ಅನ್ನಿಸಿದ್ದರಿಂದ ಹಂಚಿಕೊಂಡೆ.

ಮತ್ತು ಒಂದೇ ವಾಕ್ಯದಲ್ಲಿ ಧರ್ಮ ಮತ್ತು ದೇವರ ವಿಷಯದಲ್ಲಿ ನನ್ನ ಅಭಿಪ್ರಾಯ ಹೇಳಬೇಕೆಂದರೆ ; ಧರ್ಮ ಸದಾ `ಕಾಡುವ’ ಹಾಗೂ ದೇವರು ಸದಾ `ಹುಡುಕಾಡುವ’ ಸಂಗತಿ ನನಗೆ.

ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೇನನ್ನಿಸುತ್ತದೆ ?

ಈ ಪ್ರಶ್ನೆ ಸಾಹಿತ್ಯ ವಲಯದ ಸಾಂಸ್ಕೃತಿಕ ವಾತಾವರಣ ಅಂದುಕೊಳ್ಳುವೆ. ಸಾಹಿತಿಗಳು, ಸಹೃದಯರೇ ಹಣ ಒಟ್ಟುಗೂಡಿಸಿ ನಡೆಸುವ ಮೇಳಗಳು ಇವೆ. ಮೇ ಸಾಹಿತ್ಯ ಮೇಳ, ಜನನುಡಿ ಇದಕ್ಕೆ ಉದಾಹರಣೆ. ಇನ್ನು ನುಡಿ ಜಾತ್ರೆಗಳು, ಗೋಷ್ಠಿಗಳು, ಸಾಹಿತ್ಯೋತ್ಸವಗಳು, ಏನೇ ಇರಲಿ ಅವು ಕೇವಲ ಸುಶಿಕ್ಷಿತ ವಲಯಕ್ಕಷ್ಟೇ ಸೀಮಿತವಾಗಿರದೆ ನನ್ನ ಹಳ್ಳಿಗಳ ಅಶಿಕ್ಷಿತ ವಲಯಕ್ಕೂ ತಟ್ಟುವಂತಿರಬೇಕು. ಕುಗ್ರಾಮಗಳನ್ನು ಆಯ್ದುಕೊಂಡು ಸ್ವಲ್ಪ ಮಟ್ಟಿಗಾದರೂ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ಮುಟ್ಟಿಸಬೇಕು. ಆಸಕ್ತಿ ಹುಟ್ಟಿಸುವ ಕಾರ್ಯಕ್ರಮಗಳಾಗಿ ಬದಲಾಗಬೇಕು. ಮುಖ್ಯವಾಗಿ ಇಂಥಹ ಸಾಂಸ್ಕೃತಿಕ ವೇದಿಕೆಗಳು ಜಾತಿ ಪ್ರಭಾವ ಮತ್ತು ರಾಜಕೀಯ ಪ್ರಭಾವದಿಂದ ಮುಕ್ತವಾಗಿರಬೇಕು.

ದೇಶದ ಚಲನೆಯ ಬಗ್ಗೆ ನಿಮಗೇನನ್ನಿಸುತ್ತದೆ ?

ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಾಗ, ಜಗತ್ತಿನ ಜಾಯಮಾನವೊಂದು, ದೇಶಕ್ಕೆ ದೇಶವನ್ನೇ ಸ್ತಬ್ದಗೊಳಿಸಿದ ಈ ಸಂದರ್ಭದಲ್ಲಿ, ದೇಶದ ಚಲನೆಯ ಬಗ್ಗೆ ಉತ್ತರಿಸುವಾಗ ಸಾವೇ ಸುತ್ತುವರಿದಷ್ಟು ಭಯವೆನಿಸುತ್ತಿದೆ. ಎಲ್ಲಿಂದಲೋ ಇಲ್ಲಿಗೆ ಬಂದ ಸೂಕ್ಷ್ಮ ಅಣುವೊಂದು ಅಣುಬಾಂಬನ್ನೇ ಸೃಷ್ಟಿಸಿಕೊಂಡು ಬೀಗುವ ಮನುಷ್ಯನನ್ನೇ ಹಿಚುಕುತ್ತಿರುವಾಗ , ದೇಶದ ಚಲನೆ ಸಂಪೂರ್ಣವಾಗಿ ಪ್ರಕೃತಿಯನ್ನೇ ಅವಲಂಬಿತವಾಗಿದೆ ಎಂಬ ಸತ್ಯ ಮನವರಿಕೆಯಾಗುತ್ತಿದೆ. ಮೊದಲೇ ಸಂಪೂರ್ಣವಾಗಿ ತಳ ಹಿಡಿದ ಆರ್ಥಿಕ ಮಟ್ಟ, ನಿರುದ್ಯೋಗ ಸಮಸ್ಯೆಯಿಂದ ಕಂಗಾಲಾಗಿ ನಿಂತಿರುವ ಯುವ ಜನತೆ, ಬೀದಿಗೆ ಬಿದ್ದ ಕಾರ್ಮಿಕರ ಜೀವನ, ಎಂದೆಂದೂ ಬದಲಾಗದ ಈ ನೆಲದ ಶ್ರಮಿಕರ ಬದುಕು, ಎಲ್ಲವೂ ಕಣ್ಮುಂದೆ ಬಂದರೆ, ನನ್ನ ದೇಶದ ಚಲನೆಗೆ ಆಮೆ ವೇಗ ಅನ್ನಿಸುತ್ತದೆ. ಆದರೆ ಆಮೆ ವೇಗದಲ್ಲೂ ನನ್ನ ದೇಶ ಮೊಲದ ವೇಗವನ್ನು ಮೀರಿಸಿ, ಗುರಿ ಮುಟ್ಟಬಲ್ಲದು ಎಂಬ ವಿಶ್ವಾಸವಿದೆ.

ಕನ್ನಡ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ?

ಇಷ್ಟದ ಸಾಹಿತಿಗಳಲ್ಲಿ ಇವರೇ .. ಅಂತ ಒಬ್ಬರನ್ನೋ.. ಅಥವಾ ನಾಲ್ಕೈದು ಜನರನ್ನೋ ಬೊಟ್ಟು ಮಾಡಿ ತೋರಿಸಲಾರೆ. ನಮ್ಮ ಶಾಲಾ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಯಾರು ಇವರಲ್ಲಿ ನಿಮಗಿಷ್ಟ ಹೇಳಿ ಅಂದರೆ, ಒಬ್ಬಿಬ್ಬರನ್ನು ಹೇಳಲಾದೀತೆ ನನಗೆ? ಹಾಗೆಯೇ ಈ ಪ್ರಶ್ನೆಗೆ ಉತ್ತರ ಕೂಡಾ. ವ್ಯಾಸ, ವಾಲ್ಮೀಕಿ, ರತ್ನತ್ರಯರು, ವಚನಕಾರರಿಂದ ಹಿಡಿದು, ಈಗ ನಾನು ಹಚ್ಚಿಕೊಂಡು, ನೆಚ್ಚಿಕೊಂಡು ಓದುವ ಎಲ್ಲಾ ಬರಹಗಾರರವರೆಗೂ.. ಎಲ್ಲರೂ ಒಂದೊಂದು ರೀತಿಯಲ್ಲಿ ಇಷ್ಟವಾಗುತ್ತಾರೆ. ಮಲೆನಾಡಿನ ಮಗಳಾದ್ದರಿಂದ ಕುವೆಂಪು `ಮತ್ತು ಪೂರ್ಣಚಂದ್ರ ತೇಜಸ್ವಿಯವರನ್ನು ಓದುವಾಗ ಕೆಲವು ಘಟನೆಗಳು ನನ್ನೂರಲ್ಲೇ ನಡೆದವೇನೋ ಅನ್ನಿಸಿ , ಕುವೆಂಪು, ಪೂರ್ಣಚಂದ್ರ ತೇಜಸ್ವಿ ತುಂಬಾ ಕಾಡುತ್ತಾರೆ.

ಈಚೆಗೆ ನೀವು ಓದಿದ ಪುಸ್ತಕಗಳಾವವು?

ಮಲೆನಾಡಿನ ಚಿತ್ರಗಳು ಮತ್ತು ಎಚ್.ಎಸ್. ಅನುಪಮಾ ಅವರ ನಾನು ಕಸ್ತೂರ್.

ನಿಮ್ಮ ಜೀವನದ ಮರೆಯದ ಘಟನೆಗಳಾವವು ?

ಮರೆಯದ ಘಟನೆಗಳು ಹಲವು ಇವೆ. ಒಂದು ಹೇಳಬೇಕೆಂದರೆ, ನನ್ನ ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಬೆಳಗಾವಿಯ ಗಡಿ ಭಾಗದಲ್ಲಿ ಸೇವೆ ಸಲ್ಲಿಸುತಿದ್ದೆ. ಕನ್ನಡ ರಾಜ್ಯೋತ್ಸವವನ್ನು ಕಪ್ಪು ಬಟ್ಟೆ ಕಟ್ಟಿಕೊಂಡು `ಕರಾಳ ದಿನ’ ಅಂತ ಆಚರಿಸುವ ಊರು ಅದು. ಆ ಊರಲ್ಲಿ ಸೈನ್ಯದಿಂದ ನಿವೃತ್ತಿ ಹೊಂದಿದ ಒಬ್ಬರೇ ಒಬ್ಬ ಹಿರಿಯರಿಗೆ ಮಾತ್ರ ಕನ್ನಡ ಮಾತಾಡುವಷ್ಟು ಬರುತಿತ್ತು. ಮರಾಠಿ ಊರಿನ ಆ ತಂದೆ ಈ ಮಲೆನಾಡಿನ ಮಗಳನ್ನು, ಸ್ವಂತ ಮಗಳಂತೆ ನೋಡಿಕೊಂಡರು. ನಾನು ಇಲ್ಲಿಗೆ ಬಂದ ಮೇಲೆ ಅವರು ಅನಾರೋಗ್ಯದಿಂದಾಗಿ `ಕೋಮಾ’ ಸ್ಥಿತಿ ತಲುಪಿದ್ದು ತಿಳಿದು, ನನ್ನ ಕುಟುಂಬದ ಜೊತೆ ನೋಡಲು ಹೋದೆ. ಆಗ ಅವರ ಹೆಣ್ಣು ಮಕ್ಕಳು “ಬಾಯಿ, ನೀವು ಕನ್ನಡದಲ್ಲೇ ಮಾತಾಡಿ, ಕನ್ನಡದಲ್ಲೇ ಕರೆಯಿರಿ, ನಮ್ಮ `ನಾನಾ’ ಎಚ್ಚರಾಗ್ತಾರೆ ಅಂತ ಮರಾಠಿಯಲ್ಲೇ ಹೇಳುತ್ತಾ ರೋಧಿಸುತ್ತಿದ್ದ ದೃಶ್ಯ ನೆನಪಾದಾಗಲೆಲ್ಲ ನಾನೂ ಕಣ್ಣೀರಾಗುತ್ತೇನೆ
ನಾನು ನೋಡಿ ಬಂದು ಎಂಟನೇ ದಿನಕ್ಕೆ ಆ ತಂದೆ ಇನ್ನಿಲ್ಲವಾದರು ಎಂಬ ಸುದ್ದಿ ಬಂದಿತು. ನಾನು ಆ ದಿನ ಮರಾಠಿ ಊರಿನಲ್ಲಿ ಯಾವುದೋ ಜನ್ಮದ ನನ್ನ ತಂದೆಯೊಂದಿಗೆ ಮಾತಾಡಿದ ನನ್ನ ಕನ್ನಡದ ಮಾತು, ಮತ್ತು ನಾ ಬಂದದ್ದು ಗೊತ್ತಾಗಿಯೋ, ಗೊತ್ತಿಲ್ಲದೆಯೋ . ಅವರ ಕಣ್ಣಂಚಲ್ಲಿ ಆ ಜಾರಿದ ಹನಿಗಳನ್ನು ಮಾತ್ರ ನಾ ಜೀವ ಇರುವವರೆಗೂ ಮರೆಯಲಾರೆ. ಆ ದಿನ ನಾ ಹೊರಳಿ ಬರುವಾಗ ಊರಿಗೇ ಊರೇ ನನ್ನ ಉಡಿ ತುಂಬಿ ಕಳಿಸಿತು. ನಾನು ಮಾತ್ರ ಅಳುತ್ತಲೇ ಬಂದಿದ್ದೆ. ಭಾಷೆ, ಗಡಿ , ರಕ್ತ ಯಾವುದೂ ನಮ್ಮ ಬಾಂಧವ್ಯಕ್ಕೆ ಅಡ್ಡಿಯಾಗಲಿಲ್ಲ.

। ಇದು ಈ ಮೊದಲು ‘ಕಡಲವಾಣಿ’ಯಲ್ಲಿ ಪ್ರಕಟವಾಗಿದೆ ।

‍ಲೇಖಕರು avadhi

22 April, 2020

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Shobha Hirekai

    ಧನ್ಯವಾದಗಳು ಅವಧಿ ಬಳಗಕ್ಕೆ ಮತ್ತು ಮೋಹನ್ ಸರ್ ರವರಿಗೆ ಹಾಗೂ ಈ ಮೊದಲು ಕಡಲುವಾಣಿಯಲಿ ಸಂದರ್ಶಿಸಿದ ನಾಗರಾಜ್ ಹರಪನಹಳ್ಳಿ ಸರ್ ರವರಿಗೆ. ಕಡಲವಾಣಿ ಬಳಗಕ್ಕೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading