ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಟ್ಟೆಯ ಮೂಲೆಯಲ್ಲಿ ಕುಳಿತವ…

ಶ್ರವಣಕುಮಾರಿ ಟಿ.ಎಸ್

ತರಕಾರಿ ಸಿಪ್ಪೆಯನ್ನು ಹಿತ್ತಲಿನ ಮೂಲೆಯ ಗೊಬ್ಬರದ ಗುಂಡಿಗೆ ಎಸೆಯಲು ಬಂದಿದ್ದ ಸರಸ್ವತಿ ಹಾಗೇ ಬೀದಿಯ ಕೊನೆಯಲ್ಲಿ ಕಾಣುತ್ತಿದ್ದ ಬಸ್ಟ್ಯಾಂಡಿನ ಕಡೆಗೆ ದಿನದಂತೆ ಕಣ್ಣು ಹರಿಸಿದಳು. ಕಾಣುವ ಅದೇ ಸಣ್ಣ ನಿಲ್ದಾಣ.

ದಿನಕ್ಕೆಲ್ಲಾ ಅಬ್ಬಬ್ಬಾ ಎಂದರೆ ಒಂದು ಹತ್ತು ಬಸ್ಸು ಓಡಾಡುವ ಊರಿಗೆ ಇನ್ನೆಷ್ಟು ದೊಡ್ಡ ಜಾಗ ಬೇಕು. ಅಲ್ಲೇ ಇದ್ದ ಅರಳಿ ಮರ. ಅದರ ಸುತ್ತಲಿನ ಕಟ್ಟೆಯೇ ಬಸ್ಸಿಗೆ ಕಾಯುವ ಜನರ ತಂಗುದಾಣ. ಅಲ್ಲೇ ಹತ್ತು ಹೆಜ್ಜೆ ದೂರದಲ್ಲಿ ಪರಮಣ್ಣನ ಬ್ರೆಡ್ಡು, ಬನ್ನು, ಬಿಸ್ಕತ್ತು, ಬಾಳೆಹಣ್ಣು, ಪೆಪ್ಪರ್‌ಮೆಂಟು, ಎಲೆ, ಸುಪಾರಿ, ಹೊಗೆಸೊಪ್ಪು, ಸಿಗರೇಟು, ಬೀಡಿ ಇತ್ಯಾದಿಗಳನ್ನು ಮಾರುವ ಗೂಡಂಗಡಿ.

ಹಾಗೆಯೇ ಒಳಗೇ ಒಂದು ಮೂಲೆಯಲ್ಲಿಟ್ಟುಕೊಂಡಿರುವ ಸ್ಟೌವಿನ ಮೇಲೆ ಗಿರಾಕಿಗಳ ಡಿಮ್ಯಾಂಡಿನ ಮೇರೆಗೆ ಚಾ, ಕಾಫಿ ಕಾಸಿ ಕೊಡುವ ಚಾಯ್‌ ದೂಕಾನ್.‌ ಅದರ ಮುಂದೆ ಹಾಕಿದ್ದ ಎರಡು ಮರದ ಬೆಂಚಿನಲ್ಲಿ ಊರಲ್ಲಿ ಹೊತ್ತು ಹೋಗದ ಹಲವರು ಜಮಾಯಿಸಿ ಕಾಫಿ, ಚಾ ಕುಡಿಯುತ್ತಲೋ, ಎಲಡಿಕೆ ಅಗಿಯುತ್ತಲೋ, ಬೀಡಿ ಸಿಗರೇಟು ಸೇದುತ್ತಲೋ ಕೂತು ಗಪ್ಪಾ ಹೊಡೆಯುವ ಜಾಗ ಅದು.

ಅವನಂಗಡಿಗೆ ಬರುತ್ತಿದ್ದ ಎರಡು ಕನ್ನಡ ಪತ್ರಿಕೆಗಳನ್ನು ಓದುತ್ತಾ ದೇಶದ, ರಾಜ್ಯದ, ಊರಿನ ರಾಜಕೀಯದ ಆಗುಹೋಗುಗಳ ಬಗ್ಗೆ ಮಾತಾಡಿ ಟೈಂಪಾಸ್‌ ಮಾಡುವ ಕೆಲವು ದಿನನಿತ್ಯದ ಗಿರಾಕಿಗಳೂ ಇದ್ದರು. ಎರಡೂ ಬೆಂಚು ತುಂಬಿಬಿಟ್ಟರೆ ಗುಂಪು ಅರಳಿ ಕಟ್ಟೆಗೆ ಮುಂದುವರೆಯುವುದೂ ಇತ್ತು.

ದಿನವೂ ಏನೋ ಕೆಲಸದ ಮೇಲೆ ಹಿತ್ತಲಿಗೆ ಬಂದಾಗಲೆಲ್ಲಾ ಬೇಲಿಯಾಚೆಗೆ ಕಾಣುವ ಈ ಬಸ್ಟ್ಯಾಂಡಿನ ಕಡೆಗೊಂದು ಕಣ್ಣು ಹಾಯಿಸುವುದು ಸರಸ್ವತಿಯ ರೂಢಿ. ತಾಲ್ಲೂಕು ಕೇಂದ್ರದಿಂದ ಇತ್ತೀಚೆಗಷ್ಟೇ ಈ ಊರಿಗೆ ಬಂದಿದ್ದವಳಿಗೆ ಇಲ್ಲಿ ಅಷ್ಟಾಗಿ ಪರಿಚಿತರಿಲ್ಲ; ಮಾಡಿಕೊಳ್ಳಲೂ ಹೋಗಿಲ್ಲ.

ಹಾಗಾಗಿ ಅಲ್ಲಿ ಕಣ್ಣು ತಿರುಗಿಸಿದಾಗೆಲ್ಲಾ ಜನರು ಕಾಣುತ್ತಿದ್ದುದು ಅವಳಿಗೆ ಒಂಟಿಯಲ್ಲ, ನಾನು ಜನರ ಮಧ್ಯೆಯೇ ಇದ್ದೇನೆ ಎನ್ನುವ ಭಾವನೆ ಹುಟ್ಟಿಸುತ್ತಿತ್ತು.

ಮಗ ಸುದೀಪ ಬೆಂಗಳೂರಲ್ಲಿ ಹಾಸ್ಟೆಲಿನಲ್ಲಿದ್ದುಕೊಂಡು ಓದುತ್ತಿದ್ದಾನೆ. ಮಗಳು ಸುರಭಿಯ ಸಂಸಾರವೂ ಬೆಂಗಳೂರಲ್ಲೇ ಇದೆ. ಗಂಡ ವಾಗೀಶ ಕೆಲಸ ಮಾಡುವುದು ಬ್ಯಾಂಕಿನಲ್ಲಿ. ಇತ್ತೀಚೆಗಷ್ಟೇ ವರ್ಗವಾಗಿ ಇಲ್ಲಿಗೆ ಬಂದಿರುವುದು.

ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಆದಷ್ಟೂ ನಗರಗಳಲ್ಲೇ ಕೆಲಸ ಮಾಡಿದವನಿಗೆ, ಗ್ರಾಮಾಂತರ, ಅರೆಗ್ರಾಮಾಂತರ ಪ್ರದೇಶಗಳಲ್ಲಿ ಕೆಲಸ ಮಾಡಿಲ್ಲವೆಂದು ಕಡೆಯ ಐದು ವರ್ಷ ಸೇವಾವಧಿ ಇರುವಾಗ, ಇದೇ ತಾಲೂಕಿನ ಕೇಂದ್ರಕ್ಕೆ ಎರಡು ವರ್ಷದ ಹಿಂದೆ ವರ್ಗಾವಣೆ ಮಾಡಿದ್ದರು.

ಅಲ್ಲಿನ ಅವಧಿ ಮುಗಿದ ಮೇಲೆ ಗ್ರಾಮಾಂತರ ಸೇವೆಯನ್ನೂ ಮುಗಿಸಿಕೊಂಡೇ ಹೋಗಿಬಿಡೋಣವೆಂದು ಕೇಳಿಕೊಂಡು ಇರುವುದರಲ್ಲಿ ಅನುಕೂಲವಾಗಿರುವ ಈ ಊರಿಗೆ ಬಂದಿದ್ದಾಗಿತ್ತು. ನಗರದಲ್ಲಿ ಜನರ ಮಧ್ಯೆ ಜೀವನವನ್ನೆಲ್ಲಾ ಕಳೆದವಳಿಗೆ ಇಲ್ಲಿಗೆ ಹೊಂದಿಕೊಳ್ಳುವುದು ಕಷ್ಟವಾದರೂ, ಹೇಗೋ ಇನ್ನೆರಡು ವರ್ಷವಾದ ಮೇಲೆ ಮತ್ತೆ ಸೇವಾವಧಿಯ ಕಡೆಯ ಹೆಜ್ಜೆಯೆಂದು ಬೆಂಗಳೂರಿಗೆ ಹೋಗುವ ಅವಕಾಶವಿದೆ; ಅಷ್ಟರಲ್ಲಿ ಸುದೀಪನ ಓದೂ ಮುಗಿದಿರುತ್ತದೆ. ಅವನಿಗೊಂದು ಕೆಲಸ ಸಿಕ್ಕರೆ ಅಲ್ಲೇ ಮನೆಮಾಡಿಕೊಂಡು ಇರಬಹುದು ಎನ್ನುವ ಯೋಚನೆ ಅವರಿಬ್ಬರದು.

ಇನ್ನೂ ಬಂದು ಎರಡು ತಿಂಗಳಾಗಿದೆಯಷ್ಟೇ. ಯಾರ ಪರಿಚಯವೂ ಆಗುವಂತಹ ಸಂದರ್ಭ ಒದಗಿ ಬಂದಿಲ್ಲ. ದೊಡ್ಡ ದೊಡ್ಡ ಬೇಲಿಯೊಳಗೆ ಒಂದೊಂದೇ ಮನೆಗಳು. ಒಂದು ಪಕ್ಕದ ಮನೆಯಲ್ಲಿ ನಾಲ್ಕು ಜನ ಮದುವೆಯಾಗದ ಹುಡುಗರು ಒಟ್ಟಿಗೆ ಇದ್ದಾರೆ. ಎಲ್ಲೆಲ್ಲಿ ಕೆಲಸದಲ್ಲಿದ್ದಾರೋ ದಿನವೂ ಬೆಳಗ್ಗೆ ಹೋದರೆ ರಾತ್ರಿಗೆ ಒಬ್ಬೊಬ್ಬರಾಗಿ ಬರುತ್ತಾರೆ.

ಈ ಪಕ್ಕದ ಮನೆಯಲ್ಲಿರುವುದು ಒಂದು ವಯಸ್ಸಾದ ಅಜ್ಜ, ಅವರ ಮಗ, ಸೊಸೆ. ಮಕ್ಕಳು ಇಲ್ಲಿರುವಂತೆ ಕಾಣುತ್ತಿಲ್ಲ. ಅಜ್ಜನಿಗೆ ಅಷ್ಟು ಅರಾಮಿಲ್ಲದಿರುವುದರಿಂದ, ಮೂರು ಹೊತ್ತೂ ಏನಾದರೊಂದಕ್ಕೆ ಕರೆಯುತ್ತಲೇ ಇರುತ್ತಾರೆ. ಸೊಸೆಗೆ ಅವರ ಸೇವೆಯೂ ಸೇರಿಕೊಂಡು ಮನೆಗೆಲಸವೇ ಸರಿಹೋಗುತ್ತದೇನೋ, ಮುಖ ನೋಡಿದರೆ ಒಂದು ಮುಗುಳ್ನಗೆ ಬಿಟ್ಟರೆ ಮಾತನಾಡುವ ಉತ್ಸಾಹವನ್ನೇನೂ ತೋರಿಸಿಲ್ಲ.

ದಿನದಂತೆಯೇ ಇಂದೂ ಒಂದು ಘಳಿಗೆ ಆ ಕಡೆ ತಿರುಗಿದವಳಿಗೆ ಅರಳಿಮರದ ಕಟ್ಟೆಯ ಈ ಮೂಲೆಯಲ್ಲಿ ಒಬ್ಬನೇ ಮೈತುಂಬಾ ಶಾಲನ್ನು ಹೊದ್ದು, ಈ ದಿಕ್ಕಿಗೇ ತಿರುಗಿ ಮಂಡಿಯ ಮೇಲೆ ಮುಖವೂರಿ ಕುಳಿತಿದ್ದ ವ್ಯಕ್ತಿಯ ಕಡೆ ಗಮನ ಹರಿಯಿತು.. ಒಂದು ಕ್ಷಣ ದಿಟ್ಟಿಸಿದವಳೆಗೆ ಅವನು ಶಂಕರನೇ ಇರಬಹುದೇನೋ ಅನ್ನಿಸಿಬಿಟ್ಟಿತು!!

ಅಷ್ಟೊಂದು ಸ್ಪಷ್ಟವಾಗಿ ಕಾಣದಿದ್ದರೂ, ಹೊದ್ದಿದ್ದ ಅವನ ಬಳಿ ಇದ್ದ ಅದೇ ಮಣ್ಣಿನ ಬಣ್ಣದ ಶಾಲು, ಹೆಚ್ಚು ಕಡಿಮೆ ಅವನದೇ ಆಕಾರ, ಕುಳಿತಿದ್ದ ಭಂಗಿ ಎಲ್ಲವನ್ನೂ ನೋಡಿದ ಕ್ಷಣದಲ್ಲೇ ಏಕೋ ಭಯವಾಗಿ ಮನೆಯೊಳಗೆ ಓಡಿದಂತೆಯೇ ಹೋಗಿ ಹಿತ್ತಲ ಬಾಗಿಲನ್ನು ಜಡಿದು ನಡುಮನೆಗೆ ಬಂದು ಧೊಪ್ಪನೆ ಕುಳಿತಳು.

ಅದು ಶಂಕರನೇ…?! ಮತ್ತೆ ಅನುಮಾನ ಕಾಡಿತು. ಇಲ್ಲ… ಇರಲಿಕ್ಕಿಲ್ಲ… ಅವನಿಗೆ ನಾವು ಈ ಊರಲ್ಲಿರುವುದು ಗೊತ್ತಾಗುವ ಅವಕಾಶವಿರಲಿಲ್ಲ. ಆದರೂ ಹೇಗಾದರೂ ಪತ್ತೆ ಮಾಡಿದ್ದರೆ?! ಎಂದುಕೊಂಡವಳಿಗೆ ನೆಮ್ಮದಿಯಿಲ್ಲವಾಯಿತು. ಈಗೇನಾದರೂ ಅವನು ಬಂದು ಬಾಗಿಲು ಬಡಿದರೆ……!! ಸರಸ್ವತಿಯ ಎದೆ ಹೊಡೆದುಕೊಳ್ಳತೊಡಗಿತು. ಏನೇನೋ ಯೋಚನೆ ತಲೆಯನ್ನು ಕೊರೆಯತೊಡಗಿತು.

ಏನಾದರಾಗಲೀ.. ಇನ್ನೊಂದು ಸಲ ಹಿತ್ತಿಲ ಬಾಗಿಲಿಂದ ಹಣಿಕಿ ನೋಡಿಕೊಂಡು ಬಂದರೆ ಹೇಗೆ… ಸುಮ್ಮಸುಮ್ಮನೆ ಕಳವಳ ಬೇಡ ಎನ್ನಿಸಿ ಯಾರಿಗೂ ಕೇಳಿಸಿದ ಹಾಗೇನೋ ಅನ್ನುವಂತೆ ನಿಧಾನವಾಗಿ ನಡೆದು ಸದ್ದಾಗದ ಹಾಗೆ ಹಿತ್ತಲ ಬಾಗಿಲ ಅಗುಳಿಯನ್ನು ಸರಿಸಿದಳು. ಹಣಿಕಿದರೆ ಯಾರೂ ಕಂಡಂತಾಗಲಿಲ್ಲ. ಸ್ವಲ್ಪ ಧೈರ್ಯವಹಿಸಿ ನಾಲ್ಕು ಹೆಜ್ಜೆ ಮುಂದೆ ಬಂದು ನೋಡಿದರೆ ಅವನು ಇನ್ನೂ ಹಾಗೆಯೇ ಕುಳಿತಿದ್ದಾನೆ.

ಅವನೇನಾದರೂ ಸ್ವಲ್ಪ ತಲೆ ಮೇಲೆತ್ತಿದರೆ ತಾನು ಕಂಡೇ ಬಿಡುತ್ತೀನೇನೋ ಎನ್ನಿಸಿಬಿಟ್ಟು ಸರಕ್ಕನೆ ಹಿಂತಿರುಗಿ ಬಾಗಿಲ ಅಗುಳಿ ಹಾಕಿಕೊಂಡಳು. ಈಗಲೂ ಮುಖ ಕಾಣಲಿಲ್ಲ… ಹೌದೋ ಅಲ್ಲವೋ ಗೊತ್ತಾಗುತ್ತಿಲ್ಲ. ಅವನಿರಲಾರದು. ನಾವಿಲ್ಲಿಗೆ ಬಂದಿರುವ ವಿಷಯ ಇನ್ನೂ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಅವನಿಗೆ ಹೇಗೆ ತಿಳಿಯತ್ತೆ ಎಂದು ಹುಸಿ ಧೈರ್ಯವನ್ನು ತಂದುಕೊಂಡಳು.

ಹಾಲಿನ ಗಡಿಯಾರ ಹನ್ನೆರಡು ಗಂಟೆ ತೋರಿಸಿತು. ಓ.. ತರಕಾರಿ ಹೆಚ್ಚಿರುವುದನ್ನು ಬಿಟ್ಟರೆ ಇನ್ನೂ ಯಾವ ಕೆಲಸವೂ ಆಗಿಲ್ಲ. ಎರಡು ಗಂಟೆಗೆ ಸರಿಯಾಗಿ ಗಂಡ ಊಟಕ್ಕೆ ಬರುವ ಹೊತ್ತಿಗೆ ಸ್ವಲ್ಪವಾದರೂ ಆರಿರಬೇಕು. ತುಂಬಾ ಬಿಸಿ ಇದ್ದರೆ ಅವಸರದಲ್ಲಿ ತಿನ್ನೋದಕ್ಕೆ ಆಗದೆ ಒದ್ದಾಡುತ್ತಾರೆ ಎಂದುಕೊಳ್ಳುತ್ತಾ ಕುಕ್ಕರನ್ನು ಜೋಡಿಸತೊಡಗಿದಳು.

ಅಕ್ಕಿಯನ್ನು ತೆಗೆದುಕೊಳ್ಳುವಾಗ ಒಂದರ್ಧ ಪಾವು ಹೆಚ್ಚಾಗೇ ಹಾಕಿಬಿಡಲೇ. ಅಕಸ್ಮಾತ್‌ ಅವನು ಬಂದು ಬಿಟ್ಟರೆ! ಎನ್ನಿಸಿ ತನ್ನ ಯೋಚನೆಗೆ ತಾನೇ ಭಯಪಟ್ಟು ದಿನದಷ್ಟೇ ಅಕ್ಕಿಯನ್ನು ತೊಳೆದು ಕುಕ್ಕರನ್ನು ಒಲೆಯ ಮೇಲೇರಿಸಿದಳು. ಕೂಗುವಷ್ಟರಲ್ಲಿ ಹುಳಿಯ ಮಸಾಲೆ ರುಬ್ಬಿಕೊಂಡುಬಿಟ್ಟರೆ ಕೆಲಸ ಬೇಗಾಗುತ್ತದೆ ಎಂದುಕೊಂಡು ಆ ಕೆಲಸವನ್ನೂ ಮುಗಿಸಿಕೊಂಡಳು.

ಒಂದು ಕಾಲದಲ್ಲಿ ತನಗೆ ಅಷ್ಟೊಂದು ಆತ್ಮೀಯನಾಗಿದ್ದ, ಈ ಪ್ರೀತಿ ಜೀವವಿರುವವರೆಗೂ ಹೀಗೇ ಇರತ್ತೆ ಅನ್ನುವಷ್ಟು ಹತ್ತಿರವಾಗಿದ್ದವನನ್ನು ಇಂದು ಕಂಡರೆ ಹೆದರಿಕೊಳ್ಳುವ ಹಾಗಾದ್ದಕ್ಕೆ ಅವಳಿಗೆ ಖೇದವೆನಿಸಿತು.

ಬೂದುಗುಂಬಳಕಾಯಿ, ಕಡಲೇಕಾಳು ಹಾಕಿದ ಹುಳಿಯೆಂದರೆ ಶಂಕರನಿಗೆ ಪ್ರಾಣ. ಜೊತೆಗೆ ಅಮ್ಮ ಅರಳು ಸಂಡಿಗೆ, ಬಾಳಕ ಕರೆದುಬಿಟ್ಟರಂತೂ ಅವನಿಗೆ ಎರಡೆರಡು ಬಾಯಿ. ಕರಿದಿದ್ದರಲ್ಲಿ ಅರ್ಧದಷ್ಟು ಸಂಡಿಗೆಯನ್ನು ಅವನೊಬ್ಬನೇ ಮುಗಿಸುತ್ತಿದ್ದ. ಬಾಳಕವನ್ನು ನುರಿದು ಅದನ್ನು ಹುಳಿಯನ್ನಕ್ಕೆ ಬೆರಸಿಕೊಂಡು ಸಂಡಿಗೆಯೊಂದಿಗೆ ಬ್ರಹ್ಮಾನಂದವನ್ನು ಅನುಭವಿಸಿಕೊಂಡು ತಿನ್ನುತ್ತಿದ್ದ.

 

ಮಿಕ್ಕವರಿಗೆ ಇದೆಯೋ ಇಲ್ಲವೋ ಯಾವುದರ ಗಮನವೂ ಅವನಿಗೆ ಇರುತ್ತಿರಲಿಲ್ಲ. ಅಮ್ಮನಾದರೂ ಬೇರೆಯವರಿಗೆ ಎಣಿಸಿ ಹಾಕಿ ಇವನಿಗಷ್ಟು ಜಾಸ್ತಿಯೇ ಹಾಕುತ್ತಿದ್ದರು. ಇವತ್ತು ಅದೇ ಅಡುಗೆ. ಅಕಸ್ಮಾತ್‌ ಬಂದರೆ ಒಂದು ತುತ್ತು ಕಲಸಿಕೊಡಬಹುದೇನೋ… ಎಂದುಕೊಂಡವಳು ತಕ್ಷಣವೇ ಅಬ್ಬಾ ಬರುವುದು ಮಾತ್ರ ಬೇಡ. ಖಂಡಿತವಾಗಿಯೂ ಬೇಡ. ಬೇಡವೇ ಬೇಡ; ಎಂದು ಹತ್ತು ಹತ್ತು ಸಲ ಮನದಲ್ಲೇ ಹೇಳಿಕೊಂಡಳು.

ಚಿಕ್ಕಂದಿನಲ್ಲಿ ಅತಿ ಪ್ರಿಯನಾಗಿದ್ದ ಅಣ್ಣ ಅವನೇ. ಸರಸ್ವತಿಯೇ ಕಡೆಯವಳು. ಅವರಿಬ್ಬರ ಮೇಲೆ ಇಬ್ಬರು ಅಕ್ಕ, ಒಬ್ಬ ಅಣ್ಣ. ಶಂಕರನಿಗೂ, ಇನ್ನೊಬ್ಬಣ್ಣ ವಾಸುದೇವನಿಗೂ ಐದು ವರ್ಷ ವ್ಯತ್ಯಾಸ. ಇಬ್ಬರು ಅಕ್ಕಂದಿರು ಲಕ್ಷ್ಮಿ ಗೌರಿ ಇನ್ನೂ ದೊಡ್ಡವರು.

ಇವರಿಬ್ಬರಿಗೂ ವಯಸ್ಸಿನ ಅಂತರ ಕಡಿಮೆಯಿದ್ದುದರಿಂದ, ಎಲ್ಲಾ ತುಂಟಾಟಗಳಿಗೂ ಜೊತೆಯಾಗುತ್ತಿದ್ದು, ಏನು ತಪ್ಪು ಮಾಡಿದ್ದರೂ ಒಬ್ಬರಿಗೊಬ್ಬರು ಅದನ್ನು ಮುಚ್ಚಿ ಹಾಕಲು ಸಹಕರಿಸುತ್ತಿದ್ದು ಎಲ್ಲ ರೀತಿಯಿಂದ ಹತ್ತಿರವಾಗಿದ್ದರು. ಇಬ್ಬರೂ ಸೇರಿ ಮಾಡಿದ ಸಾಹಸಗಳಿಗೆ ಕೊನೆಯಿಲ್ಲ.

ರಜೆಯ ದಿನಗಳಲ್ಲಿ ಬೆಳ್ಳಂಬೆಳಗ್ಗೆಯೇ ಅಗಸಿಕೆರೆಯಲ್ಲಿ ಬಟ್ಟೆ ಒಗೆದುಕೊಂಡು ಬರುತ್ತೇವೆಂದು ಸುಳ್ಳು ಹೇಳಿ ಬಟ್ಟೆಯನ್ನೆಲ್ಲಾ ಗಂಟು ಕಟ್ಟಿಕೊಂಡು ಮತ್ತಿದುರ್ಗವನ್ನು ಹತ್ತಿ ಅಲ್ಲಿನ ಝರಿಯಲ್ಲಿ ಬಟ್ಟೆ ಒಗೆಯುತ್ತಾ ಮನಸಾರ ನೀರಲ್ಲಿ ಆಡಿ, ಹಾಕಿಕೊಂಡಿದ್ದ ಬಟ್ಟೆಯನ್ನೆಲ್ಲಾ ನೆನಸಿಕೊಂಡು ಅದು ಒಣಗುವ ಮೊದಲು ಮನೆಗೆ ಹೋದರೆ ಏಟುಗಳು ಬೀಳುತ್ತವೆಂದು ಅಕ್ಕಪಕ್ಕದಲ್ಲಿದ್ದ ಬೋರೆ ಹಣ್ಣು, ಕಿರುನೆಲ್ಲಿಕಾಯಿ, ಹಣ್ಣಿಗೆ ತಿರುಗುತ್ತಿದ್ದ ಹುಣಸೇಕಾಯಿ, ಬೇಲದ ಹಣ್ಣು, ಮಾವಿನ ಮರಗಳನ್ನು ಹುಡುಕಿಕೊಂಡು ಹೋಗುತ್ತಿದ್ದ ದಿನಗಳನ್ನು ಮರೆಯುವುದಾದರೂ ಹೇಗೆ?

ಅವನ ಸ್ನೇಹಿತರು ಕೊಟ್ಟ ಚಾಕಲೇಟನ್ನೋ, ಪೇರಳೇ ಹಣ್ಣನ್ನೋ ಕಾಗೆ ಎಂಜಲು ಮಾಡಿ ಸರಸ್ವತಿಗೆ ಕೊಡದೇ ತಿಂದಿದ್ದೇ ಇಲ್ಲ. ಯಾರಾದರೂ ಗುರುತಿನವರು ಇವರಿಬ್ಬರು ಮತ್ತಿ ದುರ್ಗದಲ್ಲಿ ಅಡ್ಡಾಡುತ್ತಿದ್ದುದನ್ನು ಅಮ್ಮನಿಗೆ ಹೇಳಿದರೆ ಅವತ್ತು ಸಹಸ್ರನಾಮಾರ್ಚನೆ. ಅಲ್ಲಿ ಹುಲಿ, ಕರಡಿಗಳು ಓಡಾಡುತ್ವೆ ಅಂತಾರೆ. ಇನ್ನೊಂದು ಸಲ ಅಲ್ಲಿಗೆ ಹೋಗಿದ್ದು ಗೊತ್ತಾದ್ರೆ ಕಾಲು ಮುರೀತೀನಿ ಅಂತ ಅಮ್ಮ ಹೇಳಿದ ಎರಡು ದಿನ ಸುಮ್ಮನಿದ್ದು ಮೂರನೆಯ ದಿನ ಅದೇ ಚಾಳಿ ಮುಂದುವರೆಯುತ್ತಿತ್ತು.

ಅಪ್ಪನಿಗೆ ಹೋಟೆಲಿನ ಮಸಾಲೆದೋಸೆಯ ಚಪಲ. ವಾರದಲ್ಲೊಂದೆರಡು ದಿನ ಹೋಗಿ ತಿಂದು ಬರುತ್ತಿದ್ದರು. ಮನೆಯವರೆಲ್ಲರಿಗೂ ತಂದುಕೊಡುವಷ್ಟು ದುಡ್ಡಿರುತ್ತಿರಲಿಲ್ಲ. ಅದು ಹೇಗೆ ಶಂಕರನಿಗೆ ಅವರು ಹೋಟೆಲಿಗೆ ಹೋಗುವ ವಾಸನೆ ತಿಳಿಯುತ್ತಿತ್ತೋ ಇವಳನ್ನೂ ಎಳೆದುಕೊಂಡು ಬೀದಿಯ ಕೊನೆಯಲ್ಲಿ ಕಾದು ನಿಂತಿರುತ್ತಿದ್ದ.

ಅಪ್ಪ ನಾವೂ ಬರ್ತೀವಿ ಎಂದಾಗ ವಿಧಿಯಿಲ್ಲದೆ ಕರೆದುಕೊಂಡು ಹೋಗಿ ಇಬ್ಬರಿಗೂ ಕೊಡಿಸುತ್ತಿದ್ದರು. ಜೇಬಲ್ಲಿ ಅಷ್ಟು ಕಾಸಿಲ್ಲದಿದ್ದರೆ ಅಲ್ಲೇ ಅಂಗಡಿಯಲ್ಲಿ ಏನಾದರೊಂದನ್ನು ಕೊಡಿಸಿ ನೀವು ಮನೆಗೆ ಹೋಗಿ ನಾನು ಇನ್ನೆಲ್ಲಿಗೋ ಹೋಗಬೇಕು ಎಂದು ವಾಪಸ್ಸು ಮನೆಗೆ ಅಟ್ಟುತ್ತಿದ್ದರು. ಸಿಕ್ಕಿದ್ದಷ್ಟೇ ಲಾಭ ಎಂದುಕೊಂಡು ವಾಪಸಾಗುತ್ತಿದ್ದರು.

ಹಾಗೇ ಯಾವುದೇ ಹೊಸ ಪಿಕ್ಚರ್‌ ಬಂದರೂ ಅಪ್ಪ ತಪ್ಪಿಸುತ್ತಿರಲಿಲ್ಲ. ಅವರು ಹೋಗುವ ದಿನವನ್ನು ಅವನು ಹೇಗೋ ತಿಳಿದುಕೊಂಡು, ಟಾಕೀಸಿನ ಗೇಟಿನಲ್ಲಿ ಇಬ್ಬರೂ ನಿಂತಿರುತ್ತಿದ್ದರು. ಭಂಡ ಮುಂಡೇವಾ ಎಂದು ಪ್ರೀತಿಯಿಂದ ಗದರಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ಇಂತಹ ಸಾಹಸ ಕಾರ್ಯಗಳಿಂದ ಅಮ್ಮನಿಗೆ ಕೋಪ ಬಂದು ದೊಣ್ಣೆ ತೆಗೆದುಕೊಂಡು ಬಂದರೆ ಎಂದೂ ಸರಸ್ವತಿಗೆ ಏಟು ಬೀಳಲು ಅವನು ಬಿಡುತ್ತಿರಲಿಲ್ಲ.

ಅವಳಿಗೆ ಹಾಕೋ ಏಟು ನಂಗೇ ಹಾಕು. ನಾನೇ ಅವಳನ್ನ ಕರ್ಕೊಂಡು ಹೋಗಿದ್ದು ಎಂದು ಅಡ್ಡಬರುತ್ತಿದ್ದ. ಅಣ್ಣತಂಗಿಯ ಈ ಪ್ರೀತಿಗೆ ಅಮ್ಮನಿಗೆ ಹೃದಯ ತುಂಬಿಬಂದು ಇಬ್ಬರಿಗೂ ಏಟು ತಪ್ಪುತ್ತಿತ್ತು.‌ ಅವಳಿಗೆ ಹೋಂವರ್ಕ್‌ ಮಾಡಲು ಬೇಜಾರಾದಾಗೆಲ್ಲಾ ತಾನೇ ಬರೆದುಕೊಡುತ್ತಿದ್ದ. ಅಷ್ಟು ಪ್ರೀತಿಯ ಅಣ್ಣ ಈಗ…..

ಕುಕ್ಕರ್ ಇಳಿದಿತ್ತು. ಹುಳಿಗೆ ಕೂಡಿಟ್ಟು ಒಗ್ಗರಣೆ ಮಾಡಿದ್ದಾಯಿತು. ಇನ್ನೂ ಒಂದು ಗಂಟೆ. ಇವರಿಗೂ ಇಷ್ಟ ಸಂಡಿಗೆ, ಬಾಳಕ ಕರೆದರೆ ಹೇಗೆ ಎನ್ನಿಸಿದರೂ ಯಾಕೋ ಅರಳಿಮರದ ಕೆಳಗೆ ಕುಳಿತಿರುವವನ ನೆನಪಾಗಿ ಇವತ್ತು ಬೇಡ ಎಂದುಕೊಂಡು ಸುಮ್ಮನಾದಳು. ಅವನು ಇನ್ನೂ ಅಲ್ಲೇ ಇದ್ದಾನೇನೋ ಎಂದು ನೋಡುವ ಭಯಮಿಶ್ರಿತ ಕುತೂಹಲವಾಯಿತು. ಬೇಡ ಬೇಡ ಎಂದುಕೊಂಡರೂ, ತಡೆಯಲಾಗದೆ ಮತ್ತೆ ಹಿತ್ತಲಿನ ಅಗಳಿಯನ್ನು ಸರಿಸಿ ಇಣುಕಿದಳು.

ಚಾ ದೂಕಾನಿನಲ್ಲಾಗಲೀ, ಅರಳಿಕಟ್ಟೆಯ ಮೇಲಾಗಲೀ ತುಂಬಾ ಜನ ಕಾಣಲಿಲ್ಲ. ಎಲ್ಲೋ ಒಬ್ಬಿಬ್ಬರು ಕಂಡರು. ಹಾಗಾದರೆ ಹೊರಟೇ ಹೋದನೇನೋ ಎಂದುಕೊಂಡು ಇನ್ನೂ ಸ್ವಲ್ಪ ಮುಂದೆ ಬಂದು ಅರಳಿಕಟ್ಟೆಯ ಕಡೆಗೆ ಕಣ್ಣು ಹಾಯಿಸಿದಳು. ಮರದ ಆ ಬದಿಯ ನೆರಳಿನಲ್ಲಿ ಶಾಲು ಹೊದ್ದು ಮಲಗಿದ್ದು ಕಾಲುಗಳು ಕಂಡವು.

ಹೇಗೂ ಮಲಗಿದ್ದಾನೆ, ಹತ್ತಿರ ಹೋಗಿ ಒಮ್ಮೆ ಅವನೇನಾ ಎಂದು ನೋಡಿಕೊಂಡು ಬಂದರೆ ಹೇಗೆ ಎನ್ನಿಸಿತು. ಒಳಬಂದು ಅಗಣಿ ಸರಿಸಿ ಗಡಿಯಾರ ನೋಡಿದಳು. ಗಂಡ ಬರಲು ಇನ್ನೂ ಮುಕ್ಕಾಲು ಗಂಟೆಯಿದೆ. ಐದು ನಿಮಿಷವೂ ಆಗುವುದಿಲ್ಲ; ಹೀಗೆ ಹೋಗಿ ಹಾಗೆ ಬಂದರೆ ಹೇಗೆ ಎಂದುಕೊಳ್ಳುತ್ತಾ ಮುಂಬಾಗಿಲ ಬಳಿ ಬಂದು ಚಪ್ಪಲಿ ಹಾಕಿಕೊಳ್ಳುವಾಗ ಅವನಿಗೆ ಮುಸುಕು ಹಾಕಿ ಮಲಗುವ ಅಭ್ಯಾಸ.

ಹಾಗೇನಾದರೂ ಮುಸುಕು ಹಾಕಿಕೊಂಡಿದ್ದರೆ ಗೊತ್ತಾಗುವುದು ಹೇಗೆ… ಇಲ್ಲಾ ನಾನು ಅಲ್ಲಿ ನಿಂತಾಗ ಅಕಸ್ಮಾತ್‌ ಅವನಿಗೆ ಎಚ್ಚರಾಗಿ ಬಿಟ್ಟರೆ!! ಒಮ್ಮೆಲೆ ಅವಳಿಗೆ ಮೈ ನಡುಕ ಬಂತು. ನೋಡಿ ತಾನೆ ಏನಾಗಬೇಕಿದೆ. ಕರೆಯುವಂತಿದ್ದೇನೆಯೆ… ಖಂಡಿತಾ ಬೇಡ ಎಂದುಕೊಳ್ಳುತ್ತಾ ಚಪ್ಪಲಿ ಬಿಟ್ಟು ಬಂದು ಮತ್ತೆ ನಡುಮನೆಯ ಕುರ್ಚಿಯ ಮೇಲೆ ಕುಳಿತುಕೊಂಡಳು. ತಲೆ ಸಿಡಿಯುತ್ತಿದೆ ಎನ್ನಿಸಿ ಒತ್ತಿ ಹಿಡಿದುಕೊಂಡಳು.

ಹೀಗೆ ತಲೆ ಸಿಡಿಯುವುದು ಚಿಕ್ಕಂದಿನಿಂದಲೂ ಮಾಮೂಲು. ಅವಳು ನೋವಿಂದ ನರಳುತ್ತಿದ್ದರೆ ಅಮೃತಾಂಜನವನ್ನು ಹಚ್ಚಿ ಎಷ್ಟು ಹಿತವಾಗುವಂತೆ ತಲೆ ಒತ್ತಿ ಕೊಡುತ್ತಿದ್ದ. ಈಗ ವಾಸೀನಾ, ಈಗ ಪರವಾಗಿಲ್ಲವಾ ಎನ್ನುತ್ತಾ ನಿದ್ದೆ ಬರುವವರೆಗೂ ಪಕ್ಕದಲ್ಲೇ ಕುಳಿತಿರುತ್ತಿದ್ದವನನ್ನು ನೆನೆದು ಕಣ್ಣಲ್ಲಿ ನೀರಾಡಿತು.

ಕೆಲಸಕ್ಕೆಂದು ಬೆಂಗಳೂರಿಗೆ ಹೋಗುವವರೆಗೂ, ಕೆಲಸಕ್ಕೆ ಸೇರಿದ ಮೇಲೂ ಒಂದಷ್ಟು ವರ್ಷ ಚೆನ್ನಾಗಿದ್ದವನಿಗೆ ಇದ್ದಕ್ಕಿದ್ದ ಹಾಗೆ ಅದೇನಾಯಿತು?! ಕೈಯಲ್ಲಿ ಒಳ್ಳೆಯ ಸರ್ಕಾರಿ ಕೆಲಸವಿತ್ತು. ಚೆನ್ನಾಗಿ ದುಡಿಯುತ್ತಿದ್ದ. ಇನ್ನೂ ಮದುವೆಯಾಗಿಲ್ಲದಿದ್ದರಿಂದ ಸರಸ್ವತಿಯ ಮದುವೆಯ ಮುಕ್ಕಾಲು ಖರ್ಚನ್ನು ತಾನೇ ವಹಿಸಿಕೊಂಡಿದ್ದ.

ಅಷ್ಟಲ್ಲದೆ ತನ್ನದೇ ಸ್ವಂತ ಉಡುಗೊರೆಯೆಂದು ಒಂದು ಮುತ್ತು ಹವಳದ ಓಲೆಯನ್ನು ಕೊಟ್ಟಿದ್ದ. ತಲೆಸ್ನಾನದ ಸಮಯದಲ್ಲಿ ಬಿಟ್ಟರೆ ಅದನ್ನವಳು ತೆಗೆದದ್ದೇ ಇರಲಿಲ್ಲ. ಅವಳ ಮದುವೆಯಾದ ಹೊಸತರಲ್ಲಿ ಮೈಸೂರಿನ ಮನೆಗೆ ಹದಿನೈದು ದಿನಕ್ಕೆ ಒಂದು ಸಲವಾದರೂ ಬರುತ್ತಿದ್ದ.

ಸುರಭಿ ಹುಟ್ಟಿದಾಗ ಅವಳ ನಾಮಕರಣಕ್ಕೆ ಬಂಗಾರದ ಸರವನ್ನು ಮಾಡಿಸಿಕೊಂಡು ತಂದಿದ್ದ. ಅವಳನ್ನು ನೋಡಬೇಕೆಂದು ಅನಿಸಿದಾಗೆಲ್ಲಾ ಮೈಸೂರಿಗೆ ಬರುತ್ತಿದ್ದ. ಬರುವಾಗೆಲ್ಲಾ ಹೊಸ ಹೊಸ ಬಟ್ಟೆಗಳು, ಆಟದ ಸಾಮಾನುಗಳು… ಇನ್ನೂ ಸ್ವಲ್ಪ ದೊಡ್ಡವಳಾದಾಗ ಚಾಕಲೇಟು ಬಿಸ್ಕತ್ತುಗಳು… ಅವಳನ್ನೆಷ್ಟು ಮೆರೆಸಿದರೂ ಅವನಿಗೆ ತೃಪ್ತಿಯಿರಲಿಲ್ಲ.

ಅಂಥವನಿಗೆ ಇದ್ದಕ್ಕಿದ್ದಂತೆ ಏನಾಯಿತೋ… ಎರಡು ತಿಂಗಳಾದರೂ ಬರಲಿಲ್ಲ…. ಮೊಬೈಲ್‌ ಇದ್ದ ಕಾಲವಲ್ಲ. ಆಫೀಸಿಗೆ ಫೋನ್‌ ಮಾಡಿದರೆ ಅಲ್ಲಿಂದ ಟ್ರಾನ್ಸ್ಫರ್‌ ಆಗಿ ಮುಖ್ಯ ಕಛೇರಿಯಲ್ಲಿದ್ದಾನೆಂದು ಹೇಳಿದವರು ಅಲ್ಲಿ ಅವನು ಸಿಗುವ ನಂಬರ್‌ ಗೊತ್ತಿಲ್ಲ ಎಂದುಬಿಟ್ಟರು. ಇನ್ನೆರಡು ತಿಂಗಳು ಕಳೆದರೂ ಏನೂ ಸುದ್ದಿಯಿಲ್ಲ.

ಅಮ್ಮನಿಗೆ ಟ್ರಂಕಾಲ್‌ ಮಾಡಿ ಅವಳಿಗೇನಾದರೂ ಗೊತ್ತೆ ಎಂದು ಕೇಳಿದರೆ ತಿಂಗಳುಗಟ್ಟಲೆ ಊರಿಗೂ ಹೋಗಿರಲಿಲ್ಲವಂತೆ. ಯಾವ ಸುದ್ದಿಯೂ ಇಲ್ಲ. ಅಪ್ಪ ಅವನನ್ನು ಹುಡುಕಿಕೊಂಡು ಒಂದು ಶನಿವಾರ ಹೋದಾಗ ಅವನಿದ್ದ ರೂಮನ್ನು ಖಾಲಿ ಮಾಡಿದ್ದ.

ಸೋಮವಾರ ಬೆಳಗಿನ ತನಕ ಕಾದು, ಹಳೆಯ ಆಫೀಸಿನಲ್ಲಿ ಸಿಕ್ಕದೆ ಹೊಸ ಆಫೀಸಿಗೆ ಹುಡುಕಿಕೊಂಡು ಹೋದಾಗ ಹೆಚ್ಚಿಗೆ ಏನೂ ಮಾತನಾಡದೆ ಆ ವಾರದ ಕೊನೆಗೆ ಊರಿಗೆ ಬರತ್ತೇನೆಂದು ಹೇಳಿದನಂತೆ. ಆ ವಾರವೂ ಕಳೆದು ಇನ್ನೂ ಎರಡು ವಾರವಾದ ಮೇಲೆ ಊರಿಗೆ ಹೋದವನು ಏನೂ ಮಾತನಾಡಲಿಲ್ಲವಂತೆ.

ಅಮ್ಮ ತನ್ನ ಮೇಲೆ ಆಣೆ ಹಾಕಿಕೊಂಡಾಗ ಯಾವುದೋ ಸುಳಿಯಲ್ಲಿ ಸಿಕ್ಕಿಕೊಂಡಿದೀನಿ; ಬಿಡಿಸಿಕೊಂಡ ಮೇಲೆ ಹೇಳ್ತೀನಿ ಅಂದು ಬೆಂಗಳೂರಿಗೆ ವಾಪಸ್ಸು ಹೊರಟನಂತೆ. ಏನಾಗಿರಬಹುದು ಎಂದು ಅಪ್ಪ ಲಕ್ಷ್ಮಿಗೆ ವಿಚಾರಿಸಲು ಹೇಳಿ ಅವಳು ಅವಳ ಗಂಡ ಹೇಗೆ ಹೇಗೋ ಪತ್ತೆ ಮಾಡಿದಾಗ ಅವನು ಯಾರೋ ಕ್ರಿಶ್ಚಿಯನ್‌ ಹುಡುಗಿಯನ್ನು ಮದುವೆಯಾಗಿದ್ದು ತಿಳಿಯಿತಂತೆ.

ತಕ್ಷಣವೇ ಬೆಂಗಳೂರಿಗೆ ಹೋಗಿ ಅಪ್ಪ ಘಟ್ಟಿಸಿ ಕೇಳಿದರೆ ಯಾವ ಉತ್ತರವೂ ಇಲ್ಲದೆ ಸುಮ್ಮನೆ ತಲೆತಗ್ಗಿಸಿ ನಿಂತಿದ್ದನಂತೆ. ಇನ್ನು ಅವನು ನಮ್ಮ ಪಾಲಿಗೆ ಸತ್ತ ಎಂದುಕೊಂಡು ಅಪ್ಪ ಊರಿಗೆ ವಾಪಸ್ಸು ಬಂದರು. ಇದನ್ನ ಯಾವ ಸುಖದ ಸುದ್ದಿ ಅಂತ ನಿಂಗೆ ಹೇಳಲೇ ಎಂದು ಅಮ್ಮ ಹೇಳಿದಾಗ ಸರಸ್ವತಿಗೆ ನಂಬಲೇ ಆಗಲಿಲ್ಲ.

ವಿಷಯ ತಿಳಿದದ್ದೇ ಒಂದು ದಿನ ಗಂಡನನ್ನೂ ಕರೆದುಕೊಂಡು ನೋಡಲು ಹೋದಾಗ ಅವಳ ಬಳಿಯೂ ಏನನ್ನೂ ಸರಿಯಾಗಿ ಹೇಳಲಿಲ್ಲ. ಮೋಸ ಹೋದೆ ಸರೂ. ಬಿಡಿಸಿಕೊಳ್ಳಕ್ಕೆ ಪ್ರಯತ್ನ ಪಡ್ತಿದೀನಿ ಅಂದ. ಮುಖಕ್ಕೆ ಮುಖ ಕೊಟ್ಟು ಮಾತಾಡಲಿಲ್ಲ. ತುಂಬಾ ಅಳು ಬಂದು ಬಿಕ್ಕಿ ಬಿಕ್ಕಿ ಅತ್ತಳು. ಸುಮ್ಮನೇ ಬೆನ್ನ ಮೇಲೆ ಕೈಯಾಡಿಸಿ ಅಳ್ಬೇಡ ಕಣೆ; ಎಲ್ಲಾ ಸರಿಹೋಗತ್ತೆ ಎಂದು ತಾನೂ ಕಣ್ಣಲ್ಲಿ ನೀರು ತಂದುಕೊಂಡ.

ಅವಳ ಮುಂದೆ ಹೇಳಲು ಹಿಂಜರಿಯುತ್ತಿದ್ದಾನೇನೋ ಎಂದುಕೊಂಡು ವಾಗೀಶ ಅವನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಕೇಳಿದರೂ. ಎಲ್ಲಾ ಸಿಗ್ಗಂಟಾಗಿದೆ. ಸರಿ ಹೋದ ಮೇಲೆ ಹೇಳ್ತೀನಿ ಎಂದಷ್ಟೇ ಉತ್ತರ. ಸರಿ. ನಿನಗೆ ಏನು ಸಹಾಯ ಬೇಕಾದರೂ ಕೇಳು. ನಾವಿಬ್ಬರೂ ಇದ್ದೀವಿ ಎಂದು ಇಬ್ಬರೂ ಸಮಾಧಾನ ಹೇಳಿ ಬಂದರು.

ಇಂದೂ ಆ ಪ್ರಸಂಗವನ್ನು ನೆನೆಸಿಕೊಂಡು ಸರಸ್ವತಿಗೆ ಕಣ್ಣಲ್ಲಿ ನೀರಾಡಿತು. ಚಿಕ್ಕಂದಿನಲ್ಲಿ ಎಷ್ಟೆಲ್ಲಾ ಹಂಚಿಕೊಳ್ಳುತ್ತಿದ್ದವನು ತನ್ನ ಸಮಸ್ಯೆಯನ್ನೇಕೆ ಹಂಚಿಕೊಳ್ಳಲಿಲ್ಲ ಎನ್ನುವುದು ಅವಳಿಗೊಂದು ಸದಾ ಕಾಡುವ ನೋವು…

ಆಗಿನ್ನೂ ಮೊಬೈಲ್‌ ಇಲ್ಲದ ಕಾಲ. ಕಾಗದ ಬರೆಯುವುದಕ್ಕೆ ಅಫೀಸಿನ ವಿಳಾಸ ಬಿಟ್ಟರೆ ಬೇರೆ ಇಲ್ಲ. ಬರೆದ ಯಾವ ಪತ್ರಕ್ಕೂ ಉತ್ತರವಿಲ್ಲ. ತಡೆಯಲಾಗದೆ ಇನ್ನೊಂದು ಆರು ತಿಂಗಳು ಬಿಟ್ಟು ಅವನ ಆಫೀಸಿನ ಬಳಿಗೆ ಹೋದರೆ ಅವನು ಆಫೀಸಿಗೆ ಬಂದು ಮೂರು ತಿಂಗಳಾಗಿದೆ. ಮೆಮೋ ಕಳಿಸಲೂ ಅವನ ವಿಳಾಸವಿಲ್ಲ ಎಂದರು.

ಇವನನ್ನು ಹುಡುಕುವುದು ಹೇಗೆ ಎಂದು ಸರಸ್ವತಿಗೆ ತಲೆಕೆಟ್ಟು ಹೋಯಿತು. ಸುದೀಪನ ಬಾಣಂತನಕ್ಕೆ ಊರಿಗೆ ಹೋದಾಗಲೂ ದಿನವೂ ಇದೇ ವಿಷಯಕ್ಕೆ ತಾಯಿ, ಮಗಳು ಒದ್ದುಕೊಳ್ಳುತ್ತಿದ್ದರು. ಬೆಂಗಳೂರಲ್ಲೇ ಇದ್ದ ಲಕ್ಷ್ಮಿಗೂ ಅವನು ಸಿಕ್ಕಿರಲಿಲ್ಲ. ವಾಗೀಶನಿಗೆ ವರ್ಗವಾಗಿ ಮಗು ಸುದೀಪ ಮತ್ತು ಸುರಭಿಯೊಂದಿಗೆ ಶಿವಮೊಗ್ಗವನ್ನು ಸೇರಿದ್ದಾಗಿತ್ತು.

ಒಂದು ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಬಂದು ಮನೆ ಬಾಗಿಲು ತಟ್ಟಿದ. ಸಂಭ್ರಮ, ಆಶ್ಚರ್ಯ ಎರಡೂ ಆಯಿತು. ತಬ್ಬಿಕೊಂಡು ಅತ್ತುಬಿಟ್ಟಳು. ಅವನ ಕಣ್ಣಲ್ಲೂ ನೀರು. ನಿಂಗೆ ಹೇಗೆ ಗೊತ್ತಾಯ್ತೋ ನಾವು ಇಲ್ಲಿರೋದು?! ಎಂದರೆ ನೀನೆಲ್ಲಿದ್ದರೂ ನಂಗೆ ಗೊತ್ತಾಗತ್ತೆ ಕಣೆ ಅಂದನೇ ಹೊರತು ಹೇಗೆ ತಿಳಿಯಿತು ಎಂದು ಹೇಳಲಿಲ್ಲ. ಅವಳಿಗೂ ಬೇಕಿರಲಿಲ್ಲ. ಮಗುವಿಗೆ ಹೊಸ ಬಟ್ಟೆಗಳನ್ನು ತಂದಿದ್ದ. ಭಾವನೊಂದಿಗೆ ಹರಟಿದ.

ಸುರಭಿಯನ್ನು ಎತ್ತಿ ಮುದ್ದಾಡಿದ. ಎರಡು ದಿನ ಸಂತೋಷವಾಗಿ ಕಳೆಯಿತು. ಇಬ್ಬರೂ ಯಾವ ವಿಷಯವನ್ನೂ ಕೇಳಲು ಹೋಗಲಿಲ್ಲ; ಹೇಳುವುದಾದರೆ ಅವನೇ ಹೇಳಲಿ ಎಂದು ಸುಮ್ಮನಾದರು. ಮೂರನೆಯ ದಿನ ನಾನು ಹೊರಡ್ಬೇಕು ಕಣೆ. ಅರ್ಜೆಂಟಾಗಿ ಒಂದು ಹತ್ತು ಸಾವಿರವಿದ್ದರೆ ಬೇಕಿತ್ತು ಎಂದ. ಅಷ್ಟೊಂದು ದುಡ್ಡು ನನ್ನ ಹತ್ರ ಎಲ್ಲಿರತ್ತೋ ನಿಮ್ಮ ಭಾವನ್ನ ಕೇಳಿ ನೋಡ್ತೀನಿ ಎಂದಳು. ಅವರೂ ಇಲ್ಲವೆನ್ನಲಿಲ್ಲ.

ಮಧ್ಯಾಹ್ನ ಮನೆಗೆ ಬರುವಾಗ ತಂದು ಕೊಟ್ಟರು. ಆಫೀಸಿನ ಕಡೆಯಿಂದ ದುಡ್ಡು ಬರೋದಿದೆ ಭಾವ; ಇನ್ನೆರಡು ತಿಂಗಳಲ್ಲಿ ವಾಪಸ್ಸು ತಂದು ಕೊಡ್ತೀನಿ  ಅಂದ. ಪರವಾಗಿಲ್ಲ ಅಂತಾ ಅರ್ಜೆಂಟೇನೂ ಇಲ್ಲ. ನಿಮಗಾದಾಗ ಕೊಡಿ ಎಂದರು.

ಅದ್ಯಾವ ಘಳಿಗೆಯಲ್ಲಿ ಹಾಗೆಂದರೋ ಅವನು ಆಗೀಗ ಬರುವುದು ಹತ್ತು ಸಾವಿರ, ಮೂರು ಸಾವಿರ, ಐದು ಸಾವಿರ ಅಂತ ಕೇಳೋದು ಮಾಮೂಲಿಯಾಯಿತು. ಶಿವಮೊಗ್ಗದಿಂದ ಬಳ್ಳಾರಿ, ಅಲ್ಲಿಂದ ಬೀದರ್‌, ದಾವಣಗೆರೆ, ತುಮಕೂರು ಹೀಗೆ ಅವರು ಯಾವ ಯಾವ ಊರು ಸುತ್ತಿದರೂ ಅಲ್ಲಲ್ಲಿಗೇ ಬಂದ. ಕೊಟ್ಟ ಯಾವ ದುಡ್ಡೂ ಮರಳಿ ವಾಪಸ್ಸು ಬರಲಿಲ್ಲ. ಪ್ರತಿಸಲವೂ ಅದೇ ಕತೆ.

ಈಗ ಸರಸ್ವತಿಯ ಸಂಸಾರವೂ ದೊಡ್ಡದಾಗಿತ್ತು. ಇಬ್ಬರು ಮಕ್ಕಳ ಓದು, ಜವಾಬ್ದಾರಿ, ಒಬ್ಬರ ಸಂಬಳ… ಅವಳಿಗಂತೂ ಗಂಡನನ್ನು ಎದುರಿಸುವುದೇ ಒಂದು ದೊಡ್ಡ ಸಮಸ್ಯೆಯಾಯಿತು. ಹಾಸನದಲ್ಲಿದ್ದಾಗ ಹೀಗೇ ಬಂದ. ʻಐದು ಸಾವಿರ ಬೇಕುʼ ಎಂದು ಮಾಮೂಲಿನಂತೆ ಕೇಳಿದ.

ವಾಗೀಶನಿಗೂ ಸಾಕಾಗಿತ್ತೇನೋ. “ತಪ್ಪು ತಿಳೀಬೇಡಿ ಶಂಕರ್.‌ ಈಗ ನಮ್ಮ ಸಂಸಾರದ ಅವಶ್ಯಕತೆಗಳೂ ಜಾಸ್ತಿ ಆಗ್ತಾ ಇದೆ. ಹೀಗೆ ಸದಾ ದುಡ್ಡು ಕೊಡೋಕಾಗಲ್ಲ” ಎಂದರು. ಶಂಕರ ಸರಸ್ವತಿಯ ಮುಖವನ್ನೇ ನೋಡಿದ. ಅವಳಾದರೂ ಏನು ಹೇಳಬಹುದಿತ್ತು. ಕೊಡಲು ಅವಳು ದುಡಿಯುತ್ತಿಲ್ಲವೇ. “ಸರಿ ಬಿಡಿ. ಪರವಾಗಿಲ್ಲ. ನಾನು ನಾಳೆ ಬೆಳಗ್ಗೆ ಹೊರಡ್ತೀನಿ” ಎಂದು ಮರುದಿನ ಬೆಳಗ್ಗೆಯೇ ಹೊರಟ.

ಒಂದು ಹದಿನೈದು ದಿನವಾದ ಮೇಲೆ ಸುರಭಿ “ಅಮ್ಮಾ. ನನ್ನ ಡ್ರಾನಲ್ಲಿ ಇಟ್ಟಿದ್ದ ಮಾಮ ಕೊಟ್ಟಿದ್ದ ಸರ ಕಾಣ್ತಿಲ್ಲ; ನೀನೇನಾದ್ರೂ ನೋಡಿದ್ಯಾ” ಎಂದಾಗ ಏನೇನೋ ಯೋಚನೆ ಬಂದು ತಲೆ ಕೆಟ್ಟಿತು. ಇಲ್ಲ… ಹಾಗಿರಲಾರದು ಎಂದುಕೊಂಡರೂ ಸಂಶಯದ ಕೀಟ ಮನದೊಳಗೆ ಹೊಕ್ಕೇ ಬಿಟ್ಟಿತು.

ಅವನಿಗೆ ಅವಶ್ಯಕತೆ ಇತ್ತು ಅಂದಾಕ್ಷಣ ಅವನೇ ಅಷ್ಟು ಆಸೆಪಟ್ಟು ಮಗುವಿಗೆ ತಂದುಕೊಟ್ಟಿದ್ದ ಸರವನ್ನು ಅವನೇ ತೆಗೆದುಕೊಂಡು ಬಿಟ್ಟ ಎಂದು ಹೇಗೆ, ಏಕೆ ತೀರ್ಮಾನಿಸಬೇಕು ಎಂದು ತನ್ನ ತರ್ಕಕ್ಕೆ ತಾನೇ ಸಮಾಧಾನ ಪಟ್ಟುಕೊಂಡು “ಎಲ್ಲಿಟ್ಟಿದ್ದೆಯೋ ಇಲ್ಲಾ ಎಲ್ಲಿ ಬೀಳಿಸಿಕೊಂಡು ಬಂದೆಯೋ ಇನ್ನೊಂದು ಸಲ ಸರಿಯಾಗಿ ಹುಡುಕಿ ನೋಡು” ಎಂದು ಅವಳನ್ನೇ ದೂರಿದರೂ ಅದು ಇನ್ನು ಸಿಕ್ಕುವುದಿಲ್ಲ ಎಂದು ಅರ್ಥವಾಗಿತ್ತು. ಸುರಭಿಗೂ ಸಂಶಯ ಬಂದಿತ್ತೇ?! ಏನೋ ಆ ವಿಷಯ ಹಾಗೇ ಮುಚ್ಚಿಹೋಯಿತು…

ಈ ಮಧ್ಯೆ ಲಕ್ಷ್ಮಿ ಫೋನ್‌ ಮಾಡಿ ತನ್ನ, ಗೌರಿಯ, ವಾಸುದೇವನ ಹತ್ತಿರವೂ ಅಷ್ಟಿಷ್ಟು ತೆಗೆದುಕೊಂಡು ಯಾವುದನ್ನೂ ಮರಳಿ ಕೊಟ್ಟಿಲ್ಲ ಎಂದು ಫೋನ್‌ ಮಾಡಿ ತಿಳಿಸಿದ್ದಳು. ಅವನ ಕೆಲಸ ಹೋಗಿದೆ. ಹೆಂಡತಿಯ ಜೊತೆಗೂ ಇಲ್ಲ.

ಅವಳೊಮ್ಮೆ ಮಾರ್ಕೆಟ್‌ನಲ್ಲಿ ಸಿಕ್ಕವಳು ಮನೆಯಲ್ಲಿ ಇಟ್ಟಿದ್ದ ದುಡ್ಡನ್ನೆಲ್ಲಾ ಲಪಟಾಯಿಸಿಬಿಡುತ್ತಿದ್ದ. ಮನೆಯಲ್ಲಿ ದುಡ್ಡಿಡುವುದನ್ನೇ ಬಂದು ಮಾಡಿದ ಮೇಲೆ ಬೆಲೆ ಬಾಳೋ ಸಾಮಾನುಗಳನ್ನೆಲ್ಲಾ ಮಾರಿ ಸಿನಿಮಾ, ಹೋಟಲ್ಲು, ರೇಸು ಅಂತ ಖರ್ಚುಮಾಡಿ ಮನೆಯೆಲ್ಲಾ ಬೋಳು ಮಾಡಿದ. ತಡೀಲಾಗದೆ ಒದ್ದು ಆಚೆ ಓಡಿಸಿದ್ದೇನೆ. ನಿಮ್ಮಗಳ ಮನೆಗೇನಾದರೂ ಬಂದರೆ ಹುಷಾರು ಅಂದಳು ಕಣೆ ಅಂದಳು.

ಅಯ್ಯೋ ಇದ್ಯಾವ ಹೊಸ ಕತೆ ಎಂದು ಸರಸ್ವತಿ ಮರುಗಿದರೂ ಗಂಡನ ಮುಂದೆ ಏನನ್ನೂ ಹೇಳಲಿಲ್ಲ. ನಂತರವೂ ಆಗೀಗ ಬರುತ್ತಿದ್ದ. ಸಹಜವಾಗೇ ಮಾತಾಡುತ್ತಿದ್ದ. ದುಡ್ಡು ಕೇಳಿದಾಗ ಮಾತ್ರ ಸಂಕಟವಾಗುತ್ತಿತ್ತು. ನೀನು ಮದುವೆಯಾಗಿದ್ದೆಯಲ್ಲ ಆ ಹೆಂಡತಿಯ ಕತೆ ಏನೋ. ನೀವಿಬ್ಬರೂ ಜೊತೆಯಲ್ಲಿಲ್ಲವಾ? ಸರಿಯಾಗಿ ತಿಳಿದುಕೊಂಡೇ ಬಿಡೋಣ ಎಂದುಕೊಂಡು ಕೇಳಿದಳು ಒಂದು ಸಲ.

ಅದೊಂದು ದುರಂತ ಅಧ್ಯಾಯ ಕಣೆ. ಈಗ ನನ್ನ ಪಾಲಿಗೆ ಯಾರೂ ಇಲ್ಲ. ಕೆಲಸ ಹೋದ ತಕ್ಷಣ ನನ್ನನ್ನ ಮನೆಯಿಂದ ಆಚೆ ಹಾಕಿದ್ಳು ಎಂದ ಕಹಿಯಾಗಿ. ಯಾವುದು ಸತ್ಯವೋ, ಯಾವುದು ಸುಳ್ಳೊ ಮನಸ್ಸಿಗಂತೂ ತುಂಬಾ ನೋವಾಯಿತು. ನೀನು ಬೇಕಾದ್ರೆ ಇಲ್ಲೇ ಇದ್ಬಿಡೋ. ನಿನ್ನೂ ಒಂದು ಮಗೂಂತ ಅಂದುಕೊಂಡು ನೋಡ್ಕೊಂಡು ಬಿಡ್ತೀನಿ. ದುಡ್ಡು ಮಾತ್ರ ಕೇಳ್ಬೇಡ. ನಂಗೆ ತುಂಬಾ ಕಷ್ಟ ಆಗತ್ತೆ ಅಂದಳು.

ಮತ್ತೆ ದುಡ್ಡು ಕೇಳಲಿಲ್ಲ. ಹೋಗುವ ಮಾತೆತ್ತದೆ ಒಂದಷ್ಟು ದಿನ ಉಳಿದುಕೊಂಡ. ಹೊತ್ತಲ್ಲದ ಹೊತ್ತಲ್ಲಿ ಕಾಫಿ ಕೊಡು ಎನ್ನುವುದು; ಎಷ್ಟೋ ವೇಳೆ ಸಂಜೆ ಮನೆಯಿಂದ ಹೊರಟರೆ ಎಲ್ಲಾದರೂ ಹೋಟಲಲ್ಲಿ ತಿಂದು ಸೆಕೆಂಡ್‌ ಶೋ ಸಿನಿಮಾ ನೋಡಿಕೊಂಡು ಸರಿ ರಾತ್ರಿಗೆ ಬರುವುದು. ಯಾವುದಕ್ಕೂ ಒಂದು ವ್ಯವಸ್ಥೆ ಎನ್ನುವುದಿಲ್ಲ. ಆದರೂ ಹಾಳಾಗಲಿ. ಸರಿ ಕೆಲಸವೂ ಇಲ್ಲ; ಎಲ್ಲೋ ಅಲೆದುಕೊಂಡು ಅವರಿವರ ಬಳಿ ಅನ್ನಿಸಿಕೊಳ್ಳುವ ಬದಲು ನಮ್ಮ ಮನೆಯಲ್ಲೇ ಇದ್ದುಕೊಂಡಿರಲಿ ಎಂದುಕೊಂಡು ಒಂದು ರೀತಿಯಲ್ಲಿ ಸಮಾಧಾನವಾಗೇ ಇದ್ದಳು.

ಇದ್ದಕ್ಕಿದ್ದ ಹಾಗೇ ಒಂದು ದಿನ ಬೆಳಗ್ಗೆ ಹೊರಟು ನಿಂತ. “ಇದೇನೋ ಹೊರಟು ಬಿಟ್ಟೆ” ಅಂದರೆ “ಬೆಂಗಳೂರಿಗೆ ಹೋಗಿ ನನ್ನ ಪಿ. ಎಫ್.‌ ಸೆಟಲ್‌ ಆಯ್ತಾ ನೋಡಿಕೊಂಡು ಬರ್ತೀನಿ” ಎಂದವನೇ ತಿಂಡಿಯನ್ನೂ ತಿನ್ನದೆ ನಿಂತ ಕಾಲಲ್ಲೇ ಹೊರಟು ಹೋದ.

ವಾಗೀಶ ದಿನನಿತ್ಯದಂತೆ ಬ್ಯಾಂಕಿಗೆ ಹೊರಟವರು ಒಳಗೆ ಬಂದು ನಿನ್ನೆ ಡ್ರಾವರ್‌ನಲ್ಲಿ ಐದು ಸಾವಿರ ದುಡ್ಡು ತಂದಿಟ್ಟಿದ್ದೆ. ಸುದೀಪನ ಟ್ಯೂಷನ್‌ಗೆ ಕಟ್ಟಕ್ಕೇಂತ. ಈಗ ಕಾಣ್ತಿಲ್ಲ. ನೀನೇನಾದ್ರೂ ನೋಡಿದ್ಯಾ ಅವಳ ಕಣ್ಣೊಳಗೆ ಕಣ್ಣಿಟ್ಟು ಕೇಳಿದರು. ನಂಗೊತ್ತಿಲ್ಲ. ನಾನು ಯಾವ ದುಡ್ಡನ್ನೂ ನೋಡ್ಲಿಲ್ಲ ಎಂದಳು.

ಅವರ ಕಣ್ಣಲ್ಲೂ ಅನುಮಾನದ ನೆರಳು ಕಂಡಿತೆ?! ನಿಂತ ನೆಲವೇ ಕುಸಿದ ಹಾಗಾಯಿತು. ಮುಂದೇನೂ ಕೇಳಲಿಲ್ಲ. ಸುಮ್ಮನೇ ಹೋಗಿ ಬಿಟ್ಟರು. ಒಂದೆರಡು ತಿಂಗಳು ಕಳೆದ ಬಳಿಕ ಮತ್ತೆ ಶಂಕರ ಬಂದ. ಹೇಗೆ ಅವನನ್ನು ಕೇಳುವುದು? ಅವನು ಇರುವಷ್ಟು ಕಾಲವೂ ಅವನ ಹಿಂದೆಯೇ ಕಣ್ಣು ಕಾದುಕೊಂಡು ಇದ್ದದ್ದಾಯಿತು.

ನಾಲ್ಕು ದಿನ ಬಿಟ್ಟು ಮತ್ತೆ ಅದೇ ಹಳೆಯ ವರಸೆ. ಹೇಗಾದ್ರೂ ಮಾಡಿ ಭಾವನ ಹತ್ತಿರ ಒಂದು ಹತ್ತು ಸಾವಿರ ಕೊಡ್ಸೆ. ಬಿಲ್‌ ಸ್ಯಾಂಕ್ಷನ್‌ ಆಗಿದೆ. ಒಟ್ಟು ನಾಲ್ಕು ಲಕ್ಷದ ಅರವತ್ತೈದು ಸಾವಿರ ಬರಬೇಕು. ಕೇಸ್‌ ವರ್ಕರ್‌ ಹತ್ತು ಸಾವಿರ ಲಂಚ ಕೇಳ್ತಿದಾನೆ. ಈ ಸಲ ಕೊಡು. ಇನ್ನೆಂದೂ ನಿನ್ನನ್ನ ದುಡ್ಡು ಕೇಳಲ್ಲ ಎಂದ. ಕೇಳಿ ನೋಡ್ತೀನಿ ಎಂದವಳು ಗಂಡನನ್ನು ಕೇಳಿದಳು.

ಅವನ ಯಾವ ಮಾತನ್ನೂ ನಾನು ನಂಬಲ್ಲ. ದುಡ್ಡೂ ಕೊಡಲ್ಲ. ನಿನ್ನ ಪ್ರೀತಿಯ ಅಣ್ಣ ಅಂತ ಮನೆಗೆ ಬಂದ್ರೆ ಸುಮ್ಮನಿದೀನಿ ಅಷ್ಟೆ ಎಂದು ಬ್ಯಾಂಕಿಗೆ ಹೊರಟರು. ಅವರ ಹತ್ತಿರ ಇಲ್ಲಂತೆ ಕಣೋ ಎಂದು ತಲೆತಗ್ಗಿಸಿ ಕಷ್ಟ ಪಟ್ಟು ಹೇಳಿದಳು. ಸುಮ್ಮನೇ ಕುಳಿತಿದ್ದವನು ಹೋಗಲಿ ಬೆಂಗಳೂರಲ್ಲೇ ಯಾರಾದ್ರೂ ಫ್ರೆಂಡ್ಸ್‌ ಹತ್ರ ಕೇಳಿ ಇಸ್ಕೊಳೋಣ ಅಂದ್ರೆ ಬಸ್‌ಚಾರ್ಜಿಗೂ ನನ್ನ ಹತ್ರ ದುಡ್ಡಿಲ್ಲ ಕಣೆ ಎಂದು ತಲೆತಗ್ಗಿಸಿದ.

ಸರಸ್ವತಿ ತನ್ನ ಹತ್ತಿರ ಉಳಿಸಿಟ್ಟುಕೊಂಡಿದ್ದ ಸಾವಿರ ರೂಪಾಯನ್ನು ಎತ್ತಿ ಕೊಟ್ಟಳು. ಇನ್ಮೇಲೆ ಬಂದ್ರೆ ದುಡ್ಮಾತ್ರ ಕೇಳ್ಬೇಡ್ವೋ. ನಂಗೆ ತುಂಬಾ ಹಿಂಸೆಯಾಗತ್ತೆ ಅಂತ ದೇಹವನ್ನೇ ಹಿಡಿ ಮಾಡಿಕೊಂಡು ಹೇಳಿದಳು. ಇಲ್ಲ ಬಿಡೇ. ಇನ್ಮುಂದೆ ನಿಂಗೆ ಕಷ್ಟ ಕೊಡಲ್ಲ. ಹೇಗೂ ನಂದೇ ದುಡ್ಡು ಬರ್ತಾ ಇದ್ಯಲ್ಲ. ಇದುವರ್ಗೂ ಭಾವನ ಹತ್ರ ಇಸ್ಕೊಂಡಿರೋ ದುಡ್ಡನ್ನ ಲೆಕ್ಕ ಹಾಕಿಟ್ಟಿದೀನಿ. ವಾಪಸ್ಸು ತಂದು ಕೊಡ್ತೀನಿ ಎಂದು ಊಟ ಮಾಡಿಕೊಂಡು ಹೊರಟ.

ಗೇಟಿನವರೆಗೆ ಅವನನ್ನು ಕಳಿಸಿ ಅವನು ಹೋಗುವುದನ್ನೇ ಸ್ವಲ್ಪ ಹೊತ್ತು ನೋಡುತ್ತಾ ನಿಂತಿದ್ದು ಒಳಬಂದಳು. ಬೆಳಗ್ಗೆ ಎರೆದುಕೊಂಡು ಗಡಿಬಿಡಿಯಲ್ಲಿ ಗಂಟುಹಾಕಿಕೊಂಡಿದ್ದ ತಲೆಗೂದಲನ್ನು ಬಿಚ್ಚಿ ಬಾಚಿಕೊಂಡು ಬಿಚ್ಚಿಟ್ಟಿದ್ದ ಓಲೆ, ಬಳೆಗಳನ್ನು ಹಾಕಿಕೊಳ್ಳೋಣವೆಂದು ಬೀರುವನ್ನು ತೆರೆದರೆ ಅವನು ಮದುವೆಯಲ್ಲಿ ಕೊಟ್ಟಿದ್ದ ಓಲೆಯೂ ಇಲ್ಲ; ವಾಗೀಶ ಶ್ರೀಮಂತದಲ್ಲಿ ಕೊಡಿಸಿದ್ದ ಬಳೆಗಳೂ ಇಲ್ಲ. ಇಡೀ ಬೀರುವನ್ನು ಜಾಲಾಡಿದಳು.

ಇಡಬಹುದಾದ ಎಲ್ಲ ಜಾಗವನ್ನೂ ನೋಡಿದಳು. ಹಾಗೆ ಎಂದೂ ಮರೆತು ಇಟ್ಟವಳು ಅಲ್ಲ. ಕಣ್ಣುಮುಚ್ಚಿಕೊಂಡು ಕೈಹಾಕಿದರೂ ಸಿಗುವಷ್ಟು ಜತನದಿಂದ ಸಾಮಾನುಗಳನ್ನು ಇಡುವವಳು. ಇಂದು ಕಾಣುತ್ತಿಲ್ಲವೆಂದರೆ????

ನನ್ನ ಬಳಿಯೇ ಶಂಕರ ಇಂತ ಮೋಸ ಮಾಡಿಬಿಟ್ಟನೆ?! ಅವನಿಗೆ ಹೇಗಾದರೂ ಮನಸ್ಸು ಬಂತು?! ದುಡ್ಡಿನ ಅವಶ್ಯಕತೆಯ ಮುಂದೆ ಪ್ರೀತಿ, ವಾತ್ಸಲ್ಯ, ಸಂಬಂಧ ಎಲ್ಲವೂ ಗೌಣವಾಗಿಬಿಡುತ್ತದೆಯೇ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು? ಇವರ ಹತ್ತಿರ ಹೇಗೆ ಹೇಳುವುದು ಒಂದೂ ಅರ್ಥವಾಗದೇ ಸರಸ್ವತಿ ಬಿಕ್ಕಿಬಿಕ್ಕಿ ಅತ್ತಳು. ಎಂದಿನಂತೆ ಊಟಕ್ಕೆ ಬಂದ ವಾಗೀಶ ಅವಳ ಸ್ಥಿತಿ ನೋಡಿ ಕಂಗಾಲಾದರು.

ವಿಷಯ ತಿಳಿದವರೇ ಅವಳನ್ನು ಮತ್ತಷ್ಟು ನೋಯಿಸದೆ ಹತ್ತು ಸಾವಿರ ಕೊಟ್ಟಿದ್ದರೇ ಒಳ್ಳೆಯದಿತ್ತೇನೋ. ಹೋಗಲಿ ಬಿಡು ಋಣ ತೀರಿತು. ನನ್ನ ಒಂದೇ ಮಾತು ಕೇಳು. ಇನ್ನು ಯಾವ ಕಾರಣಕ್ಕೂ ಅವನನ್ನು ಮನೆಯೊಳಗೆ ಸೇರಿಸ್ಬೇಡ. ಹಾಗೇನಾದರೂ ಬಂದರೆ ಮುಲಾಜಿಲ್ಲದೆ ನಾನು ಹೊರಗೆ ಕಳಿಸ್ತೀನಿ. ನೀನು ಅಡ್ಡ ಬಂದ್ರೆ ಇನ್ನು ನಾನು ಸುಮ್ನಿರಲ್ಲ. ಈಗೇಳು. ಊಟ ಬಡ್ಸು ಎಂದವರೇ ಊಟ ಮಾಡಿಕೊಂಡು ಹೊರಟರು.

ವಿಷಯ ತಿಳಿದ ಅಮ್ಮ ತುಂಬಾ ನೊಂದುಕೊಂಡಳು. ನಿನ್ನೊಬ್ಬಳ ಹತ್ರಾನೇ ಅಲ್ಲ. ವಾಸುದೇವ, ಲಕ್ಷ್ಮಿ, ಗೌರಿ ಎಲ್ಲರ ಹತ್ರಾನೂ ಆಗೀಗ ಇಸ್ಕೊಂಡಿದಾನಂತೆ. ಆದ್ರೆ ಅವರ್ಯಾರೂ ನಿನ್ನಷ್ಟು ಯಾಮಾರಿಲ್ಲ. ಒಂದೆರಡು ಸಲ ಕೊಟ್ಟ ಹಾಗೆ ಮಾಡಿ ಇನ್ನು ಮುಂದೆ ನಮ್ಮ ಮನೆಗೆ ಬರ್ಬೇಡ ಅಂತ ಮುಖಕ್ಕೇ ಹೇಳಿ ಕಳ್ಸಿದಾರಂತೆ.

ಎಲ್ಲಾ ಕೇಳಿದ್ರೆ ಹೊಟ್ಟೆ ಉರಿಯತ್ತೆ ಕಣೆ. ನೀನೂ ಇನ್ಮುಂದೆ ನಿನ್ನ ಸಂಸಾರ ಮಾತ್ರ ನೋಡ್ಕೋ. ಅವ್ನನ್ನ ಯಾರೂ ಉದ್ಧಾರ ಮಾಡಕ್ಕಾಗಲ್ಲ. ಹೇಗಿದ್ದವನು ಹೇಗಾಗಿಬಿಟ್ಟ ಎಂದು ಅತ್ತುಕೊಂಡಳು. “ಸರಿಯಮ್ಮ. ನೀನು ಬೇಜಾರು ಮಾಡ್ಕೋಬೇಡ” ಎಂದು ಅವಳಿಗೇ ಸಮಾಧಾನ ಹೇಳಿದ್ದಾಯಿತು. ಅವನಿಗೂ ಏನಾಯಿತೋ… ಆಮೇಲೆ ಬರಲಿಲ್ಲ.

ವರ್ಷದ ಹಿಂದೆ ಸುರಭಿಗೆ ಜಯನಗರ ಕಾಂಪ್ಲೆಕ್ಸ್‌ನಲ್ಲಿ ಸಿಕ್ಕವನು “ಒಂದೆರಡು ಸಾವಿರ ರೂಪಾಯಿದ್ರೆ ಕೊಡೆ” ಅಂತ ಕೇಳಿದ್ನಂತೆ. ಫೋನ್‌ ಮಾಡಿ ಹೇಳಿದ್ದಳು. “ಕೇಳಿದ್ರೆ ಇಲ್ಲಾನ್ನೋದು ಹೇಗಮ್ಮಾ. ಕೊಟ್ಟೆ. ಈಗ ಹತ್ತು ವರ್ಷ ವಯಸ್ಸು ಜಾಸ್ತಿ ಆದ ಹಾಗೆ ಅನ್ಸುತ್ತೆ. ಅಸಂಬದ್ಧವಾಗಿ ಮಾತಾಡ್ತಾರೆ” ಅಂದಳು. “ಇವತ್ತಿಗಾಯ್ತು, ಇನ್ಮುಂದೆ ಕೇಳಿದ್ರೆ ಖಂಡಿತಾ ಇಲ್ಲಾನ್ನು. ನಿಮ್ಮ ಮನೆ ಎಲ್ಲಿದೆ ಅಂತ ಮಾತ್ರ ಯಾವ ಕಾರಣಕ್ಕೂ ಹೇಳ್ಬೇಡ” ಎನ್ನುವಾಗ ಅಮ್ಮ ತನಗೆ ಹೇಳಿದ್ದು ನೆನಪಿಗೆ ಬಂದು ಸಂಕಟವಾಯಿತು.

ನಾಲ್ಕು ವರ್ಷದ ಮೇಲೆ ಇವತ್ತೇ ಅವನನ್ನ ನೋಡ್ತಿರೋದು ಎಂದುಕೊಂಡಳು. ತಕ್ಷಣವೇ ಅರೇ ಅದು ಅವನೇ ಅಂತ ಹೇಗೆ ಹೇಳೋದು ಎಂದುಕೊಳ್ಳುತ್ತಿರುವಾಗಲೇ ವಾಗೀಶ ಊಟಕ್ಕೆ ಬಂದಾಯಿತು. ಇಬ್ಬರೂ ಒಟ್ಟಿಗೆ ಊಟಕ್ಕೆ ಕುಳಿತರು. ಯೋಚನೆಯಲ್ಲೇ ಮುಳುಗಿಹೋದವಳ ಊಟ ಮುಂದೆ ಸಾಗದೆ ಬರೀ ಬೆರಳುಗಳು ಅಗುಳಿನೊಂದಿಗೆ ಆಟವಾಡುತ್ತಿದ್ದುದನ್ನು ನೋಡಿದ ವಾಗೀಶ “ಏನು ಯೋಚ್ನೆ ಮಾಡ್ತಿದೀಯ ತಟ್ಟೆ ಮುಂದೆ ಕೂತ್ಕೊಂಡು” ಎಂದರು.

ಬಾಯಿತಪ್ಪಿ “ಶಂಕರ..” ಎಂದು ಬಂದೇ ಬಿಟ್ಟಿತು. ತಕ್ಷಣವೇ ಸಾವರಿಸಿಕೊಂಡು, “ಅಲ್ಲಾ.. ಶಂಕರನಿಗೆ ಈ ಬೂದುಗುಂಬಳಕಾಯಿ, ಕಡಲೇಕಾಳಿನ ಹುಳಿ ಅಂದ್ರೆ ತುಂಬಾ ಇಷ್ಟ” ಅಂದಳು. “ನಿಂಗಿನ್ನೂ ಅವನ ವಾಂಛೆ ಹೋಗಿಲ್ವಾ. ಬೇಗ ಊಟ ಮುಗ್ಸು. ನೀನು ಬಾಗಿಲು ಹಾಕ್ಕೊಳಕ್ಕೆ ಬಂದ್ರೆ ನಾನು ಹೊರಡಬಹುದು. ನಿನಗೆ ಅವನ ನೆನಪು ಬರೋದಾದ್ರೆ ಇನ್ಮುಂದೆ ಈ ಹುಳಿ ಮಾಡ್ಲೇಬೇಡ” ಎನ್ನುತ್ತಾ ಊಟ ಮುಗಿಸಿ ಎದ್ದರು.

ಅವರನ್ನು ಕಳಿಸಿದ ನಂತರ ಎಲ್ಲವನ್ನೂ ಎತ್ತಿಟ್ಟು, ಒರಸಿ ಅಡುಗೆಮನೆಯ ಬಾಗಿಲೆಳೆದುಕೊಂಡು ಬಂದು ಹಾಲಿನ ಚಾಪೆಯ ಮೇಲೆ ಉರುಳಿಕೊಂಡವಳು ಮತ್ತೆ ಯೋಚನೆಯಲ್ಲೇ ಮುಳುಗಿ ಹೋದಳು. ಏಳುವಾಗ ಆಗಲೇ ನಾಲ್ಕು ಗಂಟೆಯಾಗಿತ್ತು. “ಅವನಿನ್ನೂ ಅಲ್ಲೇ ಇದ್ದರೆ… ಒಂದು ಸಲ ಯಾಕೆ ನೋಡಬಾರದು” ಎನ್ನುವ ಕೆಟ್ಟ ಕುತೂಹಲದಿಂದ ಹಿತ್ತಲ ಬಾಗಿಲು ತೆಗೆದು ಹೊರಬಂದಳು.

ಅರಳಿ ಕಟ್ಟೆಯ ಮೂಲೆಯಲ್ಲಿ ಅವನು ಯಾರೊಂದಿಗೋ ಮಾತಾಡುತ್ತಾ ಕುಳಿತ ಹಾಗಿತ್ತು. ಮುಖ ಸರಿಯಾಗಿ ಕಾಣುತ್ತಿಲ್ಲ… ʻತಿರುಗಿ ನೋಡಿಬಿಟ್ಟರೆ… ನಾನು ಕಂಡುಬಿಟ್ಟರೆ…ʼ ಎನ್ನಿಸಿ ಭಯವಾಯಿತು. ಅಗಳಿ ಹಾಕಿಕೊಂಡು ವಾಪಸ್ಸು ಬಂದು ಕಾಫಿ ಬೆರೆಸಿಕೊಂಡು ಹಾಲಿನ ಕುರ್ಚಿಯಲ್ಲಿ ಬಂದು ಕುಳಿತವಳ ತಲೆಯಲ್ಲಿ ಮತ್ತೆ ಅವನೇ.

ಅವನು ಬರೀ ಕಾಫಿಯನ್ನು ಎಂದೂ ಕುಡಿಯುತ್ತಿರಲಿಲ್ಲ. ಜೊತೆಗೆ ಹಚ್ಚಿದವಲಕ್ಕಿಯೋ, ಕೋಡುಬಳೆಯೋ ಕಡೆಗೆ ಉಪ್ಪಿನ ಬಿಸ್ಕತ್ತಾದರೂ ಬೇಕಿತ್ತು. ಅವನಿಗಾಗಿ ಅಮ್ಮ ಏನಾದರೊಂದನ್ನು ಇಟ್ಟೇ ಇರುತ್ತಿದ್ದಳು. ಯೋಚನೆಗೆ ಕೊನೆಯಿಲ್ಲ… ಇವತ್ಯಾಕೆ ಇಷ್ಟು ಕಾಡುತ್ತಿದ್ದಾನೆ… ಅವನು ಶಂಕರನಾಗಿರದಿರಲಿ.. ಮುಂದಿನ ಕೆಲಸ ನೋಡೋಣ ಎಂದುಕೊಂಡು ಅಡುಗೆಮನೆಗೆ ಹೋದಳು.

ತಲೆಯಿಂದ ಅವನನ್ನು ಹೊರಹಾಕಲು ಮಕ್ಕಳ ಬಗ್ಗೆ ಯೋಚಿಸುತ್ತಾ ಕೈ ಬಚ್ಚಲಲ್ಲಿ ರಾಶಿ ಬಿದ್ದಿದ್ದ ಪಾತ್ರೆಗಳನ್ನು ತೊಳೆಯಲು ಶುರುಮಾಡಿದಳು. ಪಾತ್ರೆಯಲ್ಲಿದ್ದ ಉಳಿಕೆಯನ್ನೆಲ್ಲಾ ಒಂದು ಸಣ್ಣ ಬೋಗುಣಿಗೆ ಸುರಿದುಕೊಂಡು ಎಲ್ಲ ಪಾತ್ರೆಗಳನ್ನೂ ಫಳಫಳ ತೊಳೆದಿಟ್ಟಳು.

ಸರಿ.. ಈ ಕಸವನ್ನು ಗೊಬ್ಬರಗುಂಡಿಗೆ ಚೆಲ್ಲಿ ಬಂದು ಇದನ್ನೂ ತೊಳೆದುಬಿಟ್ಟರೆ ಇಂದಿನ ಪಾತ್ರೆ ತೊಳೆಯುವ ಕೆಲಸ ಮುಗಿಯಿತು ಎಂದುಕೊಂಡು ಹಿತ್ತಲ ಬಾಗಿಲನ್ನು ತೆರೆದು ಗೊಬ್ಬರದ ಗುಂಡಿಗೆ ಸುರಿಯುವಾಗ ಇಲ್ಲಿಯವರೆಗೂ ಮರವೆಯಾಗಿದ್ದು ತಕ್ಷಣ ಜ್ಞಾಪಕಕ್ಕೆ ಬಂದು ಸರ್ರನೆ ಅರಳಿ ಕಟ್ಟೆಯತ್ತ ತಿರುಗಿದಳು.

ಅಲ್ಲಿ ಈಗ ಯಾರೂ ಕಾಣುತ್ತಿಲ್ಲ. ಥತ್!‌ ಅವನು ಯಾರೋ ಏನೋ. ನಾನು ಬೆಳಗಿನಿಂದ ಸುಮ್ಮಸುಮ್ಮನೆ ಹೆದರಿದೆ ಎಂದುಕೊಂಡು ನೆಮ್ಮದಿಯಾಗಿ ಒಳಗೆ ಬಂದು ಖಾಲಿಯಾಗಿದ್ದ ಬೋಗುಣಿಯನ್ನು ತೊಳೆಯುತ್ತಿರುವಾಗ ಬಾಗಿಲು ಬಡಿದ ಶಬ್ದ ಕೇಳಿಸಿತು. ಇವರು ಇಷ್ಟು ಬೇಗ ಬರುವುದಿಲ್ಲವಲ್ಲ; ನನಗೆಲ್ಲೋ ಭ್ರಾಂತಿ ಎಂದುಕೊಂಡವಳು ಒಂದು ನಿಮಿಷ ಕೆಲಸ ನಿಲ್ಲಿಸಿ ಕೇಳಿಸಿಕೊಂಡಳು.

ಮತ್ತೆ ಬಾಗಿಲು ಬಡಿಯುತ್ತಿರುವ ಶಬ್ಧ… ಅಕಸ್ಮಾತ್‌ ಅದು ಅವನೇ ಆಗಿದ್ದರೆ…! ಕಟ್ಟೆಯಿಂದ ಎದ್ದು ಬಂದು ಸೀದಾ ಮನೆಬಾಗಿಲನ್ನು ಬಡಿಯುತ್ತಿದ್ದರೆ… ಬಾಗಿಲು ತೆಗೆದ ಮೇಲೆ ಒಳಗೆ ಬರಬೇಡ ಅಂತ ನನಗೆ ಹೇಳಕ್ಕಾಗತ್ತಾ…? ತೆಗೆದ ತಕ್ಷಣ ಒಳಗೆ ನುಗ್ಗೇ ಬಿಟ್ಟರೆ…! ಅಯ್ಯೋ ಇದೆಂಥ ಪರೀಕ್ಷೆ… ಎಂದು ಬೆದರುತ್ತಾ ಏನು ಮಾಡಲೂ ತೋರದೆ ತಟ್ಟುತ್ತಿರುವ ಬಾಗಿಲನ್ನು ಅಡುಗೆಮನೆಯಿಂದ ನಿಶ್ಯಬ್ದವಾಗಿ ನೋಡುತ್ತಾ ಕುಸಿದು ಕುಳಿತಳು.

‍ಲೇಖಕರು

18 December, 2019

2 Comments

  1. T S SHRAVANA KUMARI

    ನನ್ನ ಕತೆಯನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು

    ಥ್ಯಾಂಕ್ಯೂ ಟೀಮ್‌ ಅವಧಿ…
    ಥ್ಯಾಂಕ್ಯೂ ಮೋಹನ್‌ ಸರ್

  2. ಶ್ರೀನಿವಾಸ್ ಬಿ.ಎಸ್

    ತುಂಬಾ ಆಪ್ತವಾದ ಬರಹ.ಮನಮುಟ್ಟುವ ಕಥೆ.ಅಭಿನಂದನೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading