-ಪಾಲಹಳ್ಳಿ ವಿಶ್ವನಾಥ್
ಧರ್ಮ vs ಡಾರ್ವಿನ್
ಸರಿಸುಮಾರು 100 ವರ್ಷಗಳ ಹಿಂದೆ ವಿಜ್ಞಾನದ ಬಗ್ಗೆ ಅಮೆರಿಕದ ಪುಟ್ಟ ಊರೊಂದರಲ್ಲಿ ಒಂದು ಮಹತ್ವದ ವಿಚಾರಣೆ ನಡೆಯಿತು. ಇದು ಸಾಂಪ್ರದಾಯಿಕ ಧಾರ್ಮಿಕ ನಂಬಿಕೆಗಳನ್ನು ಆಧುನಿಕ ವೈಜ್ಞಾನಿಕ ಚಿಂತನೆಯ ವಿರುದ್ಧ ನಿಲ್ಲಿಸಿತು. ಗಣ್ಯ ವಕೀಲರುಗಳು ಅದ್ಭುತವಾಗಿ ವಾದ ಮಾಡಿದ ಈ ವಿಚಾರಣೆಯು –ಸ್ಕೋಪ್ಸ (ಮಂಕಿ) ಟ್ರಯಲ್ – ಇಡೀ ದೇಶದ ಗಮನವನ್ನು ಸೆಳೆದು ಅಮೆರಿಕದಲ್ಲಿ ವಿಕಾಸ ವಾದದ ಭವಿಷ್ಯವನ್ನು ರೂಪಿಸಿತು ಇದೆ. ರೀತಿಯ ವಿಚಾರಣೆಯೊಂದು17ನೆಯ ಶತಮಾನದಲ್ಲೂ ನಡೆದಿದ್ದು ಆಗ ಧರ್ಮದ ರಥಕ್ಕೆ ಬಲಿಯಾದವನು ಮೇರು ವಿಜ್ಞಾನಿ ಗೆಲೆಲಿಯೋ; ಈಗ ಏಟು ಬಿದ್ದದ್ದು ಪರೋಕ್ಷವಾಗಿ ಡಾರ್ವಿನ್ ರಿಗೆ ಮತ್ತು ನೇರವಾಗಿ ಶಾಲಾ ಶಿಕ್ಷಕ ಜಾನ್ ಸ್ಕೋಪ್ಸನಿಗೆ. 1925 ರಲ್ಲಿ ನಡೆದ ಈ ವಿಚಾರಣೆಯು ಶಿಕ್ಷಣ, ವಿಜ್ಞಾನ ಮತ್ತು ಧರ್ಮದ ಚರ್ಚೆಯಲ್ಲಿ ಒಂದು ಹೆಗ್ಗುರುತು ಪ್ರಕರಣವಾಗಿದೆ.
ಹಿನ್ನೆಲೆ
ಚಾರ್ಲ್ಸ್ ಡಾರ್ವಿನ್ ತಮ್ಮ ಸಿದ್ಧಾಂತಗಳನ್ನು ಎರಡು ಪುಸ್ತಕಗಳ ಮೂಲಕ ಮಂಡಿಸಿದರು :
1) 1859 ರಲ್ಲಿ ‘ಪ್ರಭೇದಗಳ ಮೂಲ’ (ದಿ ಆರಿಜಿನ್ ಆಫ್ ಸ್ಪೀಸೀಸ್) ದಲ್ಲಿ ಪ್ರಾಣಿಗಳ ವಿಕಾಸದ ಮತ್ತು
2) ನಿರ್ದಿಷ್ಟವಾಗಿ ಮನುಷ್ಯನ ಬಗ್ಗೆ 1871ರಲ್ಲಿ ಮನುಷ್ಯನ ಸಂತತಿ (ಡಿಸೆಂಟ್ ಆಫ್ ಮ್ಯಾನ್). ಹಿಂದಿನ ಎಲ್ಲ ಸಿದ್ಧಾಂತಗಳಿಗಿಂತ ಇವು ನೈಸರ್ಗಿಕ ಪ್ರಪಂಚದ ಬಗ್ಗೆ ನಮ್ಮ ತಿಳುವಳಿಕೆಯನ್ನು ಮೂಲಭೂತವಾಗಿ ಬದಲಾಯಸಿದವು.
ಅವರ ಸಿದ್ಧಾಂತಗಳ ಪ್ರಕಾರ,
1) ಭೂಮಿಯ ಮೇಲಿನ ಎಲ್ಲಾ ಜೀವಿಗಳು, ಸಸ್ಯಗಳೂ ಕೂಡ, ಒಂದು ಸಾಮಾನ್ಯ ಪೂರ್ವಜರನ್ನು ಹೊಂದಿದ್ದು ಪರಿಸರಕ್ಕೆ ಅನುಗುಣವಾಗಿ ಲಕ್ಷಾಂತರ ವರ್ಷಗಳಲ್ಲಿ ವೈವಿಧ್ಯಮಯವಾಗಿ ವಿಕಸನಗೊಂಡಿವೆ. ತಮ್ಮ ತಮ್ಮ ಪರಿಸರಕ್ಕೆ ಸರಿಯಾಗಿ ಹೊಂದಿಕೊಳ್ಳುವ ಗುಣಗಳಿದ್ದಲ್ಲಿ ಅವು ಬದುಕುಳಿದು ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಅವುಗಳ ಗುಣಗಳು ಮುಂದಿನ ಪೀಳಿಗೆಗೆ ಹರಡುತ್ತವೆ, ಪ್ರಕೃತಿಯಲ್ಲಿ ಬದುಕಲು ಅಗತ್ಯವಾದ ಲಕ್ಷಣಗಳನ್ನು ಹೊಂದಿರುವ ಜೀವಿಗಳು ಹೆಚ್ಚು ಕಾಲ ಬದುಕುತ್ತವೆ ಮತ್ತು ತಮ್ಮ ಸಂತತಿಯನ್ನು ವೃದ್ಧಿ ಮಾಡುತ್ತವೆ. ಉದಾಹರಣೆಗೆ, ಒಂದು ನಿರ್ದಿಷ್ಟ ಪರಿಸರದಲ್ಲಿ ಅತಿ ವೇಗವಾಗಿ ಓಡುವ ಜಿಂಕೆ, ನಿಧಾನವಾಗಿ ಓಡುವ ಜಿಂಕೆಗಿಂತ ಬದುಕುಳಿಯುವ ಸಾಧ್ಯತೆ ಹೆಚ್ಚು. ಈ ಲಕ್ಷಣಗಳು ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತವೆ. ಹೀಗೆ, ಪ್ರಕೃತಿಯು ತಾನಾಗಿಯೇ ಉತ್ತಮ ಲಕ್ಷಣಗಳನ್ನು ಆಯ್ಕೆ ಮಾಡುತ್ತದೆ. ಕಾಲಾನಂತರದಲ್ಲಿ ಕ್ರಮೇಣ ಬದಲಾವಣೆಗಳಿಗೆ ಮತ್ತು ಹೊಸ ಪ್ರಭೇದಗಳ (species) ಉಗಮಕ್ಕೆ ಕಾರಣವಾಗುತ್ತವೆ.
2) ಅವರ “ದಿ ಡಿಸೆಂಟ್ ಆಫ್ ಮ್ಯಾನ್” ಕೃತಿಯು ಮಾನವ ಜನಾಂಗಕ್ಕೂ ಅವರ ವಿಕಾಸವಾದದ ಸಿದ್ಧಾಂತವನ್ನು ವಿಸ್ತರಿಸಿ ಮನುಷ್ಯರೂ ನೈಸರ್ಗಿಕ ಆಯ್ಕೆಗಳಿಗೆ ಒಳಪಟ್ಟು ಪೂರ್ವಜ ಜೀವಿಗಳಿಂದ ವಿಕಸನಗೊಂಡಿದ್ದಾರೆ ಎಂದು ಪ್ರತಿಪಾದಿಸಿದರು. ನಿರ್ದಿಷ್ಟವಾಗಿ ಮಾನವರು ಮತ್ತು ಕೋತಿಗಳಿಗೆ ಸಾಮಾನ್ಯ ಪೂರ್ವಜರಿದ್ದಾರೆ ಎಂದು ಅವರು ಮಂಡಿಸಿ ಕೋತಿಗಳ ನಡುವಿನ ನಿಕಟ ಅಂಗರಚನಾತ್ಮಕ ಮತ್ತು ನಡವಳಿಕೆಯ ಸಾಮ್ಯತೆಗಳನ್ನು (ಸಾಮಾನ್ಯ ದೇಹ ರಚನೆ, ಭ್ರೂಣಗಳ ಬೆಳವಣಿಗೆ ಇತ್ಯಾದ) ತೋರಿಸಿದರು ಇದರ ಜೊತೆಗೆ, ಮಾನವನ ಬುದ್ಧಿಶಕ್ತಿ, ಭಾಷೆಯಂತಹ ಗುಣಲಕ್ಷಣಗಳೂ ಸಹ ವಿಕಸನಗೊಂಡಿವೆ. ಗುಂಪಿನ ಉಳಿವಿಗಾಗಿ ಸಹಾಯಕವಾಗುವಂತಹ ಸಾಮಾಜಿಕ ಸಹಜ ಗುಣಗಳು ನಮ್ಮ ಪೂರ್ವಜರಲ್ಲಿ ಅಭಿವೃದ್ಧಿಗೊಂಡಿವೆ ಎಂದು ಪ್ರತಿಪಾದಿಸಿದರು.
ಡಾರ್ವಿನರ ಈ ಕ್ರಾಂತಿಕಾರಿ ಕಲ್ಪನೆಗೆ ಹಲವಾರು ಕಡೆಯಿಂದ – ವೈಜ್ಞಾನಿಕ, ಧಾರ್ಮಿಕ ಮತ್ತು ತಾತ್ವಿಕ – ಆಕ್ಷೇಪಣೆಗಳು ಬಂದಿದ್ದು ಸಹಜವೇ.
(1) ವೈಜ್ಞಾನಿಕ – ಡಾರ್ವಿನ್ ಅವರ ಸಿದ್ಧಾಂತದಲ್ಲಿ ವಿಕಾಸವು ಕ್ರಮೇಣ ಬದಲಾವಣೆಯ ಪ್ರಕ್ರಿಯೆಯಾದ್ದರಿಂದ ಭೂಮಿಗೆ ಬಹಳ ಹೆಚ್ಚು ವಯಸ್ಸಿನ ಅವಶ್ಯಕತೆಯನ್ನು ಪ್ರಸ್ತಾಪಿಸಿದ್ದು, ಇದು ಆಗಿನ ವೈ ಜ್ಞಾನಿಕ ತಿಳುವಳಿಕೆಯೊಂದಿಗೆ ತಕ್ಷಣವೇ ಘರ್ಷಿಸಿತು. ಭೌತವಿಜ್ಞಾನ ಭೂಮಿಗೆ 100 ಮಿಲಿಯ ವರ್ಷ ವಯಸ್ಸನ್ನು ನಿಗಡಿಮಾಡಿದ್ದು ವಿಕಾಸಕ್ಕೆ ಬೇಕಾಗಿದ್ದ ಸಮಯಕ್ಕಿಂತ ಬಹಳ ಕಡಿಮೆ ಯಾಗಿತ್ತು ಭೂಮಿಯ ವಯಸ್ಸು ನಿಜವಾಗಿಯೂ ಬಹಳ ಹೆಚ್ಚು (3 + ಬಿಲಿಯ ವರ್ಷಗಳು) ಎಂದು 20 ನೆಯ ಶತಮಾನದ ವಿಕರಿಣಶೀಲತೆಯ ಪ್ರಯೋಗಗಳು ತೋರಿಸುವ ತನಕ ಇದು ಒಗಟಾಗಿಯೇ ಉಳಿದಿತ್ತು. 1860 ರಲ್ಲಿ ಗ್ರೆಗರ್ ಮೆಂಡೆಲ್ ಎಂಬ ಪಾದ್ರಿಯ ಸಂಶೋಧನೆಗಳು ಪೋಷಕರಿಂದ ಸಂತತಿಗೆ ಗುಣಲಕ್ಷಣಗಳನ್ನು ಪ್ರತ್ಯೇಕ ಘಟಕಗಳ (ಜೀನ್ಸ್) ಮೂಲಕ ಹೇಗೆ ರವಾನಿಸಲಾಗುತ್ತದೆ ಎಂದು ತೋರಿಸಿ ಆಧುನಿಕ ತಳಿಶಾಸ್ತ್ರ (ಜೆನೆಟಿಕ್ಸ್) ಕ್ಕೆ ಅಡಿಪಾಯ ಹಾಕಿದವು; ಆದರೆ 20 ನೇ ಶತಮಾನದ ಆರಂಭದಲ್ಲಿ ಆ ಸಂಶೋಧನೆಗಳ ಮಹತ್ವ ತಿಳಿದಾಗ ಮಾತ್ರ ಡಾರ್ವಿನರ ಸಿದ್ಧಾಂತಕ್ಕೆ ಜೀವಶಾಸ್ತ್ರದಿಂದಲೇ ಬೆಂಬಲ ಸಿಕ್ಕಿತು.
(2) ತಾತ್ವಿಕವಾಗಿ, ಜಗತ್ತಿನಲ್ಲಿ ಮಾನವನ ವಿಶಿಷ್ಟ ಸ್ಥಾನ ದಲ್ಲಿ ನಂಬಿಕೆಯನ್ನು ಹೊಂದಿದ್ದ ಅನೇಕರಿಗೆ ಡಾರ್ವಿನರ್ ವಿಚಾರಗಳು ಗೊಂದಲ ಉಂಟುಮಾಡಿದವು. ಮಾನವರು, ಮಂಗಗಳು ಮತ್ತು ಇತರ ಪ್ರಾಣಿಗಳಿಗೆ ಒಂದೇ ಮೂಲ ಎಂಬ ಕಲ್ಪನೆಯನ್ನು ಮಾನವ ಘನತೆಯ ಮೇಲಿನ ದಾಳಿ ಎಂದು ಪರಿಗಣಿಸಲಾಯಿತು. ನೈಸರ್ಗಿಕ ಆಯ್ಕೆಯು ಕುರುಡು, ಯಾಂತ್ರಿಕ ಪ್ರಕ್ರಿಯೆಯಾಗಿದ್ದು, ಯಾವುದೇ ಪ್ರಮುಖ ಗುರಿಯಿಲ್ಲದಿರುವುದು ಆಘಾತವನ್ನು ಉಂಟುಮಾಡಿತು.
(3) ಆದರೆ ಧಾರ್ಮಿಕ ಆಕ್ಷೇಪಣೆಗಳು ಬಹಳವೇ ಇದ್ದವು. ಅನೇಕ ಕ್ರೈಸ್ತರು ಬೈಬಲನ ಸೃಷ್ಟಿಯ ಕಥೆಗಳನ್ನು ಸಂಪೂರ್ಣವಾಗಿ ನಂಬಿದ್ದರಿಂದ ಈ ವಿರೋಧ ಹುಟ್ಟಿ ಬೆಳೆಯುತ್ತಲೇ ಹೋಯಿತು . ದೇವರು ಪ್ರತಿಯೊಂದು ಜಾತಿಯನ್ನು ವಿಶಿಷ್ಟ ಮತ್ತು ಬದಲಾಗದ ರೂಪವಾಗಿ ಸೃಷ್ಟಿಸಿದ್ದಾನೆ ಎಂಬ ನಂಬಿಕೆಗೆ ಇದು ನೇರವಾಗಿ ವಿರುದ್ಧವಾಗಿತ್ತು. ಭೂಮಿಗೆ ಬೈಬಲ್ಲಿನಲ್ಲಿರುವುದಕ್ಕಿಂತ ಅಪಾರ ವಯಸ್ಸನ್ನು ಈ ಸಿದ್ಧಾಂತ ಸೂಚಿಸುತ್ತಿತ್ತು ಅದಲ್ಲದೆ ಸೃಷ್ಟಿಕರ್ತನ ಆವಶ್ಯಕತೆ ಇಲ್ಲದೆ ಉದ್ದೇಶರಹಿತ ಜಗತ್ತನ್ನು ಸೂಚಿಸಿತು. ರಾಜಕೀಯ ವ್ಯಂಗ್ಯಚಿತ್ರಗಳು (1871ರಲ್ಲಿ ‘ ಪಂಚ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗಚಿತ್ರ (ಚಿತ್ರ 1)ವನ್ನು ತೋರಿಸಿದೆ) ಮತ್ತು ವಿಡಂಬನಾತ್ಮಕ ಬರಹಗಳು ಡಾರ್ವಿನ್ ಮತ್ತು ಅವನ ವಿಚಾರಗಳನ್ನು ಅವಹೇಳನಮಾಡಿದವು ಮುಂದಿನ ದಶಕಗಳಲ್ಲಿ ನಿಧಾನವಾಗಿ ಡಾರ್ವಿನರ ಸಿದ್ಧಾಂತವನ್ನು ಜನತೆ ಒಪ್ಪಿಕೊಳ್ಳಲಾರಂಭಿಸಿದರೂ. ಧಾರ್ಮಿಕ ಗುಂಪುಗಳಿಂದ ಆಗ ಈಗ ವರೋಧ ಬರುತ್ತಲೇ ಇದ್ದು ಈ ವಿಷಯದಲ್ಲಿ ಸರ್ಕಾರ ತಲೆಹಾಕಲಿಲ್ಲ. ಆದರೆ 1925 ರಲ್ಲಿ ಸ್ಥಿತಿ ಬದಲಾಯಿತು
ವಿಚಾರಣೆ:
ಅಮೆರಿಕದ ದಕ್ಷಿಣ ರಾಜ್ಯಗಳಲ್ಲಿ ಧಾರ್ಮಿಕ ಭಾವನೆಗಳು ಹೆಚ್ಚೇ ಇದ್ದವು. ಬ್ಯಾಪ್ ಟಿಸ್ಟ್ ಮತ್ತು ಹಲವಾರು ಕ್ರೈಸ್ತ ಪಂಗಡದವರು ದಕ್ಷಿಣದ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದರು ಅಲ್ಲಿ ನಗರೀಕರಣ ಹೆಚ್ಚಿಲ್ಲದೆ ಸಮುದಾಯಗಳು ಸಣ್ಣ ಪುಟ್ಟ ಊರುಗಳಲ್ಲಿ ವಾಸವಾಗಿದ್ದು ಕೌಟಂಬಿಕ ಮೌಲ್ಯಗಳು ಮುಖ್ಯವಾಗಿದ್ದು ಹೊರ ಪ್ರಭಾವಗಳು ಇಲ್ಲದೆ ಸಂಕುಚಿತ ಮನೋಭಾವ ಉಂಟಾಗುವುದು ಅದಕ್ಕೆ ಮುಖ್ಯ ಕಾರಣ ಎಂದು ತಜ್ಞರ ಅಭಿಪ್ರಾಯ. ದಕ್ಷಿಣದಲ್ಲಿ ಅನೇಕರು ಡಾರ್ವಿನ್ ಸಿದ್ಧಾಂತವನ್ನು ಬೈಬಲ್‌ನ ಅಕ್ಷರಶಃ ವ್ಯಾಖ್ಯಾನದ ಮೇಲೆ ನೇರ ಆಕ್ರಮಣವೆಂದು ಪರಿಗಣಿಸುತ್ತಿದ್ದರು. ಇದಲ್ಲದೆ 20ನೇ ಶತಮಾನದ ಆರಂಭದ ವೇಗದ ಸಾಮಾಜಿಕ ಬದಲಾವಣೆಗಳು ಮತ್ತು ವೈಜ್ಞಾನಿಕ ಪ್ರಗತಿಗಳು ಮೂಲಭೂತವಾದದ ಬೆಳವಣಿಗೆಗೆ ಉತ್ತೇಜನ ನೀಡಿತು, ಅಲ್ಲಿ 1920ರ ದಶಕದಲ್ಲಿ ಟೆನೆಸಿ ಎಂಬ ಪ್ರಾಂತ್ಯದ ಚಿಕ್ಕ ಊರಾದ ಡೇಟನ್ ನಲ್ಲಿದ್ದ ಬಟ್ಲರ್ ಎಂಬ ಹೆಸರಿನ ಒಬ್ಬ ಶ್ರೀಮಂತ ರೈತನಿಗೆ ಡಾರ್ವಿನ್ ಸಿದ್ಧಾಂತಗಳು ಸಮಾಜದ ಮೇಲೆ ಉಂಟುಮಾಡಬಹುದಾದ ಪರಿಣಾಮಗಳ ಬಗ್ಗೆ ಯೋಚನೆಗಳು ಶುರುವಾಗಿ ಇವುಗಳಿಂದ ಪ್ರಭಾವಿತರಾಗಿ ಜನ ನಾಸ್ತಿಕರಾಗಿಬಿಡುತ್ತಾರೆ ಎಂಬ ಭಯ ಬಂದಿತು. ಶಾಲಾ ಮಟ್ಟದಲ್ಲಿಯೇ ಈ ಸಿದ್ಧಾಂತಗಳು ಹರಡುತ್ತಿವೆ ಎಂದು ಅವನ ಗಮನಕ್ಕೆ ಬಂದಿತು. ಇದನ್ನು ಹೇಗಾದರೂ ನಿಲ್ಲಿಸಬೇಕೆಂದು ಅವನೂ ಶಾಸಕನೂ ಆದ್ದರಿಂದ ರಾಜ್ಯದ ವಿಧಾನ ಸಭೆಯಲ್ಲಿ ಪ್ರಚಾರಮಾಡಿದನು. ಹೀಗೆ ಮಾರ್ಚ್ 1925 ರಲ್ಲಿ ಬಟ್ಲರ್ ಕಾಯ್ದೆಯು ಟೆನ್ನೆಸ್ಸೀ ರಾಜ್ಯದ ಕಾನೂನಾಯಿತು ಅದರ ಪ್ರಕಾರ,” ರಾಜ್ಯ ಬೆಂಬಲಿತ ಶಾಲೆಗಳಲ್ಲಿ ಶಿಕ್ಷಕರು “ಬೈಬಲ್‌ನಲ್ಲಿ ಹೇಳಿರುವಂತೆ ಮನುಷ್ಯನ ದೈವಿಕ ಸೃಷ್ಟಿಯ ಕಥೆಯನ್ನು ಒಪ್ಪದಿ ರುವ ಯಾವುದೇ ಸಿದ್ಧಾಂತವನ್ನು ಕಲಿಸುವುದು ತಪ್ಪು ಮತ್ತು ಬದಲಿಗೆ ವಿಕಾಸವಾದದ ಪ್ರತಿಪಾದನೆಗಳನ್ನು ಕಲಿಸುವುದು ಕಾನೂನುಬಾಹಿರ” ಎಂದು ಪ್ರಚಾರವಾಯಿತು.

ಈ ಕಾನೂನಿಗೆ ಬಲಿಯಾದವನು ಜಾನ್ ಸ್ಕೋಪ್ಸ್ (ಚಿತ್ರ 2) ಎಂಬ ಅರೆಕಾಲಿಕ ವಿಜ್ಞಾನ ಶಿಕ್ಷಕನಾಗಿದ್ದ 24ರ ಹರೆಯದ ಯುವಕ. ವಿಪರ್ಯಾಸವೆಂದರೆ, ಸ್ಕೋಪ್ಸ್ ವಿಕಾಸವಾದಿ ಆಗಿರಲಿಲ್ಲ, ಅಥವಾ ಅವರು ವಿಕಾಸವನ್ನು ಸ್ಪಷ್ಟವಾಗಿ ಕಲಿಸಿದ್ದಾರೆಯೇ ಎಂದು ಖಚಿತವಾಗಿರಲಿಲ್ಲ. ಆದಾಗ್ಯೂ, ಸ್ಥಳೀಯ ಉದ್ಯಮಿಯೊಬ್ಬನು ಬಟ್ಲರ್ ಕಾಯ್ದೆಯನ್ನು ಪ್ರಶ್ನಿಸುವ ಮೂಲಕ ಸಣ್ಣ ಊರಾದ ಡೇಟನ್‌ಗೆ ರಾಷ್ಟ್ರೀಯ ಗಮನ ಮತ್ತು ಆರ್ಥಿಕ ಪ್ರಯೋಜನವನ್ನು ತರುವ ಅವಕಾಶವನ್ನು ಕಂಡನು. ವಿಕಾಸದ ಸಿದ್ಧಾಂತವನ್ನು ಒಳಗೊಂಡ ಪಠ್ಯಪುಸ್ತಕದಿಂದ ಕಲಿಸಿದ್ದೇನೆ ಎಂದು ಒಪ್ಪಿಕೊಳ್ಳಲು ಅವರು ಸ್ಕೋಪ್ಸ್ ಅವರನ್ನು ಮನವೊಲಿಸಿದರು, ಮೇ 1925 ರಲ್ಲಿ ಸರಕಾರ ಸ್ಕೋಪ್ ನನ್ನು ಬಂದಿಸಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿತು .
ಜುಲೈ 1925 ರಲ್ಲಿ ವಿಚಾರಣೆ ಪ್ರಾರಂಭ ವಾಯಿತು (ಚಿತ್ರ 3) ಸ್ಕೋಪ್ಸ್ ಪರವಾಗಿ ರಕ್ಷಣಾ ತಂಡವನ್ನು ಮುನ್ನಡೆಸಿದ್ದು ಕ್ಲಾರೆನ್ಸ್ ಡಾರೋ ಎಂಬ ದೇಶದ ಪ್ರಸಿದ್ಧ ಮತ್ತು ವಾಕ್ಚಾತುರ್ಯದ ವಕೀಲ; ಬೌದ್ಧಿಕ ಸ್ವಾತಂತ್ರ್ಯದ ಪ್ರಬಲ ರಕ್ಷಕ. ಡಾರೋ ಬಟ್ಲರ್ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಲು ಮತ್ತು ಶೈಕ್ಷಣಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಬಯಸಿದ್ದರು.ಸ್ಕೋಪ್ಸ್ ವಿರುದ್ಧ ಪ್ರಾಸಿಕ್ಯೂಷನ್ ತಂಡವನ್ನು ಮುನ್ನಡೆಸಿದ್ದು ವಿಲಿಯಂ ಜೆನ್ನಿಂಗ್ಸ್ ಬ್ರಿಯಾನ್, ರಾಜಕಾರಣಿ ಮತ್ತು ಧಾರ್ಮಿಕ ಮೂಲಭೂತವಾದಿ ಕ್ರಿಶ್ಚಿಯನ್. ಈ ವಿಚಾರಣೆಯನ್ನು ಆಧುನಿಕ ವಿಜ್ಞಾನ ಮತ್ತು ಜಾತ್ಯತೀತತೆಯ ಅಪಾಯಗಳಿಂದ ಬೈಬಲ್‌ನ ಸತ್ಯವನ್ನು ರಕ್ಷಿಸುವ ಧರ್ಮಯುದ್ಧವೆಂದು ಪರಿಗಣಿಸಿದ್ದರು. ಅವರ ಗುರಿ ಬಟ್ಲರ್ ಕಾಯ್ದೆಯನ್ನು ಎತ್ತಿಹಿಡಿಯುವುದು ಮತ್ತು ಬೈಬಲ್‌ನ ಅಕ್ಷರಶಃ ಸತ್ಯವನ್ನು ದೃಢಪಡಿಸುವುದು. ಡೇಟನ್‌ನಲ್ಲಿನ ವಾತಾವರಣವು ರೋಮಾಂಚನಕಾರಿಯಾಗಿತ್ತು. ದೇಶದಾದ್ಯಂತದ ವರದಿಗಾರರು ಸಣ್ಣ ಪಟ್ಟಣಕ್ಕೆ ಧಾವಿಸಿದರು.ವಿಚಾರಣೆಯು ರೇಡಿಯೋದಲ್ಲಿ ನೇರ ಪ್ರಸಾರವಾಗಿ ಹೆಚ್ಚು ಮಾಧ್ಯಮ ಪ್ರಸಾರವನ್ನು ಪಡೆಯಿತು. ಅವರಿಬ್ಬರು ಪಟ್ಟಾಗಿರುವ ಚಿತ್ರಗಳನ್ನು (ಚಿತ್ರ 4) ತೋರಿಸಿದೆ.
ವಿಚಾರಣೆಯು ಸ್ಕೋಪ್ಸ್ ಅವರ ಅಪರಾಧಕ್ಕಿಂತ ಹೆಚ್ಚಾಗಿ ವಿಜ್ಞಾನ ಮತ್ತು ಧರ್ಮದ ನಡುವಿನ ಮೂಲಭೂತ ಚರ್ಚೆಯ ಬಗ್ಗೆ ಇತ್ತು. ಡಾರೋ ವಿಕಾಸದ ಬೋಧನೆಯನ್ನು ನಿಷೇಧಿಸುವ ಅಸಂಬದ್ಧತೆಯನ್ನು ಪ್ರದರ್ಶಿಸುವುದು ಮತ್ತು ಮೂಲಭೂತವಾದಿಗಳು ಹೊಂದಿದ್ದ ಬೈಬಲ್‌ನ ಸಂಕುಚಿತ ವ್ಯಾಖ್ಯಾನವನ್ನು ಬಯಲಿಗೆಳೆಯುವತ್ತ ಗಮನ ಹರಿಸಿದರು. ಒಂದು ನಾಟಕೀಯ ಮತ್ತು ಅಭೂತಪೂರ್ವ ವಿಷಯವೆಂದರೇ ಡಾರೋ ಸ್ವತಃ ಬ್ರಿಯಾನ್ ಅವರನ್ನು ಬೈಬಲ್ ಕುರಿತ ತಜ್ಞರಾಗಿ ಸಾಕ್ಷಿಗೆ ಕರೆದರು. ಭೂಮಿಯ ವಯಸ್ಸು ಮತ್ತು ಸೃಷ್ಟಿಯ ಸಮಯಕ್ಕೆ ಸಂಬಂಧಿಸಿದಂತೆ ಬಹಳ ವಾದ ವಿವಾದಗಳು ನಡೆದು ಬೈಬಲನ್ನು ಅಕ್ಷರಶಃ: ಸ್ವೀಕರಿಸಬಾರದೆಂದು ಡಾರೋ ಎಚ್ಚರಿಕೆ ಇತ್ತರು ಒಟ್ಟಿನಲ್ಲಿ ವಿಚಾರಣೆ 11 ದಿನ ನಡೆಯಿತು. ಮೊದಲೇ ನಿರೀಕ್ಷಿಸಿ ದ ಹಾಗೆ, ಸ್ಥಳೀಯ ಧಾರ್ಮಿಕ ವ್ಯಕ್ತಿಗಳಿಂದ ಕೂಡಿದ್ದ ನ್ಯಾಯಾಧೀಶರ ತಂಡವು ಜಾನ್ ಟಿ. ಸ್ಕೋಪ್ಸ್ ತಪ್ಪಿತಸ್ಥರೆಂದು ಕಂಡುಹಿಡಿಯಲು ಕೇವಲ ಒಂಬತ್ತು ನಿಮಿಷಗಳನ್ನು ತೆಗೆದುಕೊಂಡಿತು. ಅವರಿಗೆ $100 ದಂಡ ವಿಧಿಸಲಾಯಿತು. ಸ್ಕೋಪ್ಸ್ ವಿಚಾರಣೆಯು ವಿಕಾಸ ಮತ್ತು ಸೃಷ್ಟಿವಾದದ ಬೋಧನೆಯ ಕುರಿತು ಭವಿಷ್ಯದ ಕಾನೂನು ಹೋರಾಟಗಳಿಗೆ ಅಡಿಪಾಯ ಹಾಕಿತು.
ನಂತರ

ಸ್ಕೋಪ್ಸ್ ವಿಚಾರಣೆಯು ಅಮೆರಿಕದಲ್ಲಿ ಆಳವಾದ ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಬೀರಿತು: ಸಾರ್ವಜನಿಕ ಶಾಲೆಗಳಲ್ಲಿ, ವಿಶೇಷವಾಗಿ ದಕ್ಷಿಣದಲ್ಲಿ, ಹಲವು ದಶಕಗಳ ಕಾಲ ವಿಕಾಸದ ಬೋಧನೆಯ ಮೇಲೆ ತೀವ್ರ ಪರಿಣಾಮ ಬೀರಿತು. ಅನೇಕ ಪಠ್ಯಪುಸ್ತಕ ಪ್ರಕಾಶಕರು ವಿವಾದವನ್ನು ತಪ್ಪಿಸಲು ವಿಕಾಸಕ್ಕೆ ಸಂಬಂಧಿಸಿದ ಉಲ್ಲೇಖಗಳನ್ನು ಕಡಿಮೆ ಮಾಡಿದರು ಅಥವಾ ತೆಗೆದುಹಾಕಿದರು. ವಿಚಾರಣೆಯು ನಗರ, ಹೆಚ್ಚು ಜಾತ್ಯತೀತ ಮತ್ತು ವೈಜ್ಞಾನಿಕವಾಗಿ ಆಧಾರಿತ ಅಮೆರಿಕಾ ಮತ್ತು ಗ್ರಾಮೀಣ, ಹೆಚ್ಚು ಧಾರ್ಮಿಕವಾಗಿ ಸಾಂಪ್ರದಾಯಿಕ ಅಮೆರಿಕಾ ನಡುವಿನ ಸಾಂಸ್ಕೃತಿಕ ವಿಭಜನೆಯನ್ನು ಗಟ್ಟಿಗೊಳಿಸಿತು, ಈ ವಿಭಜನೆಯು ಇಂದಿಗೂ ವಿವಿಧ ರೂಪಗಳಲ್ಲಿ ಪ್ರತಿಧ್ವನಿಸುತ್ತದೆ. ಇದು ಪ್ರಸಿದ್ಧ 1955ರ ನಾಟಕ ಮತ್ತು 1960 ರ್ ಸಿನೆಮಾ “ಇನ್ಹೆರಿಟ್ ದಿ ವಿಂಡ್” (Inherit the Wind) ಗೆ ಪ್ರೇರಣೆ ನೀಡಿ ಈ ವಿಚಾರಣೆ ಅಮೆರಿಕದ ಹೊರಗೂ ಖ್ಯಾತಿ ಗಳಿಸಿತು. ಇದು ಇಂದಿಗೂ ಪ್ರತಿಧ್ವನಿಸುತ್ತಿರುವ ಆಳವಾದ ಸಾಮಾಜಿಕ ವಿಭಜನೆಗಳನ್ನು ಪ್ರತಿಬಿಂಬಿಸುತ್ತದೆ. ಒಂದು ಇತ್ತೀಚಿನ ಸಮೀಕ್ಷೆಯ ಪ್ರಕಾರ ಸರಿಸುಮಾರು 17% ಅಮೇರಿಕನ್ ಜನತೆ ಮಾನವ ವಿಕಾಸದ ಕಲ್ಪನೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಮತ್ತು 24% ಅಮೆರಿಕನ್ನರು ಯಾವುದೇ ದೈವಿಕ ಹಸ್ತಕ್ಷೇಪವಿಲ್ಲದೆ ಮಾನವರು ವಿಕಸನಗೊಂಡಿದ್ದಾರೆ ಎಂದು ನಂಬುತ್ತಾರೆ.
ಕಡೆಯದಾಗಿ ಭಾರತ ಈ ವಿಕಾಸದ ಪರಿಕಲ್ಪನೆಗಳನ್ನು ಹೇಗೆ ಸ್ವೀಕರಿಸಿತು? ನಮ್ಮ ಪುರಾಣಗಳಲ್ಲಿ ವವಿಧ ಯುಗಗಳ (ಸತ್ಯ, ತ್ರೇತಾ ಇತ್ಯಾದಿ) ಲೆಕ್ಕಗಳಿದ್ದು ವಿಶ್ವ ಬಹಳ ಹಳೆಯದ್ದು ಎಂಬ ಅಭಿಪಾಯ ಮೊದಲಿನಿಂ ದಲೂ ಇದೆ. ಆದರೆ ಅದಕ್ಕೆ ಯಾವ ವೈಜ್ಞಾನಿಕವೂ ಆಧಾರ ಇದ್ದ ಹಾಗೆ ಕಾಣುವುದಲ್ಲ. ಆದರೆ ವಿಜ್ಞಾನ ಭೂಮಿಯ ವಯಸ್ಸನ್ನು ಪಳಿಯುಳಿಕೆಗಳ ಸಂಶೋಧನೆಯಿಂದ, ವಿಕಾಸವಾದದಿಂದ ಮತ್ತು ಆಧುನಿಕ ಪ್ರಯೋಗಳಿಂದ ನಿರ್ಧರಿಸಿದೆ. ಡಾರ್ವಿನ್ ಸಿದ್ಧಾಂತದ ಮತ್ತೊಂದು ಪ್ರತಿಪಾದನೆ ವಾನರ ನಾರರ ಸಂಬಂಧ. ರಾಮಾಯಣದ ಹನುಮಾನ್ ಇತ್ಯಾದಿ ಕಪಿಗಳು ನಮ್ಮ ಸಂಸ್ಕೃತಿಯ ಅಂಗವೇ ಆಗಿದ್ದು ಈ ವಿಷಯ ಯಾವ ಗೊಂದಲವನ್ನೂ ಉಂಟುಮಾಡಲಿಲ್ಲ. ದಶಾವತಾರದ ಪರಿಕಲ್ಪನೆಗಳು ವಿಕಾಸ ಪ್ರಕ್ರಿಯೆಗಳನ್ನು ಹೋಲುತ್ತವೆ ಎಂಬುದನ್ನು ಅನೇಕರು ಹೇಳುತ್ತಾರೆ. ಖ್ಯಾತ ಜೀವವಿಜ್ಞಾನಿ ಜೆ. ಬಿ. ಎಸ್,ಹಾಲ್ಡೇನರು ಕೂಡ ಇದನ್ನು ಗುರುತಿಸಿದ್ದರಂತೆ. ಇಲ್ಲಿಯೂ ಯಾವ ವೈಜ್ಞಾನಿಕ ಆಧಾರವೂ ಕಾಣುತ್ತಿಲ್ಲ. ಒಟ್ಟಿನಲ್ಲಿ ಡಾರ್ವಿನರ ಸಿದ್ಧಾಂತಗಳಿಗೆ ಭಾರತದಲ್ಲಿ ಯಾವ ವಿರೋಧವೂ ಬಂದಿಲ್ಲ. ಇತ್ತೀಚೇಗೆ ಈ ವಿಷಯದ ಬೋಧನೆಯನ್ನು ಶಾಲೆಗಳಿಂದ ತೆಗೆದುಹಾಕಿ ಕಾಲೇಜಿಗೆ ಸೇರಿಸಿದ್ದಾರಂತೆ! ಕಾರಣ ತಿಳಿಯದು.






0 Comments