
ವಾರವೊಂದರಿಂದ ಸುಮಾರು ೧೦-೧೫ ಬೇರೆ ಬೇರೆ ಬೇಸಿಗೆ ಶಿಬಿರದ ಜಾಹೀರಾತುಗಳು ಕಣ್ಣಿಗೆ ಬಿದ್ದಿವೆ..
ಫೇಸ್ಬುಕ್ಕಿನಲ್ಲಿ, ಪಾಂಪ್ಲೆಟ್ಟುಗಳಲ್ಲಿ , ದಾರಿಬದಿಯ ಪೋಸ್ಟರ್ ಗಳಲ್ಲಿ ಹೀಗೆ ಸುಮಾರು ರೂಪದಲ್ಲಿ! ಇದನ್ನೆಲ್ಲಾ ನೋಡುತ್ತಿದ್ದಂತೆ ಬೇಸಿಗೆ ರಜೆ ಬಂತೆಂಬ ನೆನಪಾಗಿ ಒಂದೆಡೆ ಖುಷಿ ಹೊನಲಾಗಿ ಹರಿದರೆ ಮತ್ತೊಂದೆಡೆ ‘ಅಯ್ಯೋ’ ಅನಿಸಿಬಿಡುತ್ತದೆ.
ಖುಷಿಯಾಗುವುದಕ್ಕೆ ಅಜ್ಜಿಯ ಮನೆಯ ಕಾರಣ ಬಿಟ್ಟು ಮತ್ತೇನೂ ಇಲ್ಲ.. ರಜೆಯಲ್ಲೂ ದಿನಾ ಬೆಳಗ್ಗೆ ಬೇಗ ಎದ್ದು ರೆಡಿಯಾಗಿ ಶಾಲೆಗೆ ಹೋಗುವ ತೆರದಲ್ಲೇ ಶಿಬಿರಕ್ಕೆ ಹೋಗಿ ಬರುವ ಈಗಿನ ಮಕ್ಕಳನ್ನು ನೆನೆಸಿಕೊಂಡಾಗೆಲ್ಲಾ ಯಾವುದೋ ಬೇಜಾರು ಕಾಡುತ್ತದೆ.
ರಿಸಲ್ಟ್ ಬಂದ ದಿನ ಚಾಕೊಲೇಟ್ ಡಬ್ಬ ಹಿಡಿದು ಅಜ್ಜಿ ಮನೆಗೆ ದಾರಿ ಹಿಡಿದರೆ ವಾಪಸ್ ಬರುತ್ತಿದ್ದುದು ಮತ್ತೆ ಸ್ಕೂಲ್ ಶುರುವಾದ ಮೇಲೆಯೇ! ಅಜ್ಜಿ ಮನೆಯದು ಇರೋದು ಪಶ್ಚಿಮ ಘಟ್ಟದ ಮಧ್ಯದಲ್ಲೆಲ್ಲೋ.. ಎರಡರಿಂದ ಮೂರು ಬಸ್ ಬದಲಾಯಿಸಿ ಸೀತಾ ನದಿಯ ದಂಡೆ ತಲುಪುವ ಹೊತ್ತಿಗೆ ಮಾವನ ಜೀಪ್ ನಮ್ಮ ದಾರಿ ಕಾಯುತ್ತಾ ನಿಂತಿರುತ್ತಿತ್ತು. ಮತ್ತೆ ೩- ೪ ಕಿ.ಮೀ ಕಾಡೊಳಗಿನ ಘಾಟಿ ರಸ್ತೆ.
ಅಕಸ್ಮಾತ್ ಮಾವನಿಗೆ ಬರಲಾಗದಿದ್ದರೆ ನಡೆದೇ ಸಾಗಬೇಕು ಆ ಹಾದಿಯನ್ನು. ಅಜ್ಜಿ ಮನೆ ತಲುಪಿದ ಕ್ಷಣ ಮೂಡುತ್ತಿದ್ದ ಖುಷಿ ಅದೆಷ್ಟಿರುತ್ತೆಂದರೆ ಮತ್ತೆರೆಡು ತಿಂಗಳಿಗೆ ಸಾಲುವಷ್ಟು.. ಎಲ್ಲರಿಗೂ ಚಾಕೊಲೇಟ್ ಹಂಚಿ, ನಡೆದು ಬಂದಿದ್ದರೆ ಕಾಲಿಗೆ ಹತ್ತಿದ್ದ ಇಂಬಳವನ್ನೆಲ್ಲಾ ತೆಗೆದು , ಕುಚಲಕ್ಕಿ ಅನ್ನ ತಿಂದು ಮಲಗಿದರೆ ಮಾರನೆಯ ದಿನದಿಂದ ಬೇರೆಯದೇ ಲೋಕ!
ವಯೋವೃದ್ಧರಿಂದ ಹಿಡಿದು ತಿಂಗಳ ಮಗುವಿನವರೆಗಿನ ವಯೋಮಾನದ ಸುಮಾರು ೪೦ ರಿಂದ ೫೦ ಜನ ಮನೆಯಲ್ಲಿ ಸೇರುತ್ತಿದ್ದರು ಬೇಸಿಗೆಯೆಂದರೆ. ನಾವು ಕಸಿನ್ಸ್ ಗಳೇ ಇಪ್ಪತ್ತರಿಂದ ಇಪ್ಪತ್ತೈದು ಮಕ್ಕಳಿರುತ್ತಿದ್ದೆವು. ತಿಂಡಿ ತಿಂದು ಮನೆಯಿಂದ ಹೊರಬಿದ್ದರೆ ಮರಳಿ ಸೇರುವುದು ಊಟಕ್ಕೇ! ಹಾಲು ಕರೆದು, ಕಟ್ಟು ಬಿಚ್ಚಿದ ದನಕರುಗಳನ್ನೆಲ್ಲಾ ಕರೆದುಕೊಂಡು ಕಾಡಿಗೆ ಹೊರಟುಬಿಡುತ್ತಿದ್ದೆವು.
ಸಿಂಪಲ್ಲಾಗಿ ಹೇಳಬೇಕೆಂದರೆ ದಿನವೂ ದನ ಮೇಯಿಸುವುದೊಂದೇ ಕೆಲಸ ನಮಗೆಲ್ಲಾ.. ಮನೆಯಿಂದ ಕಾಡು ತಲುಪುವ ತನಕ ದನಗಳು ಕಣ್ಮುಂದೆ ಇರುತ್ತಿದ್ದವು ಅಷ್ಟೇ , ಆಮೇಲೆ ನಾವೆಲ್ಲೋ ಅವುಗಳೆಲ್ಲೋ. ಪಾಪ ಅವುಗಳಿಗೆ ವರ್ಷ ಪೂರ್ತಿಯ ಅಭ್ಯಾಸದಂತೆ ಯಾವ ಎಡವಟ್ಟೂ ಮಾಡಿಕೊಳ್ಳದೆ ಮೇಯ್ದು, ಮರಳಿ ಹೋಗುವ ಹೊತ್ತಿಗೆ ಸರಿಯಾಗಿ ನಾವಿದ್ದ ಜಾಗಕ್ಕೇ ಬಂದು , ಎಲ್ಲರೂ ಒಟ್ಟಾಗಿ ಸೇರಿ ಮನೆಗೆ ಹೋಗುತ್ತಿದ್ದೆವು.
ಈಗಲೂ ನಂಗೊಂದು ಅನುಮಾನವಿದೆ.. ನಾವು ದನ ಮೇಯಿಸಲು ಹೋಗುತ್ತಿದ್ದದ್ದಾ ಅಥವಾ ದನಗಳು ನಮ್ಮನ್ನು ನೋಡಿಕೊಳ್ಳಲು ಜೊತೆಗೆ ಬರುತ್ತಿದ್ದವಾ ಎಂದು! ನಡುನಡುವೆ ಪಾಪದ ದನಗಳ ಬಳಿ ಹೋಗಿ , ಹಾಲು ಕುಡಿದುಬಿಡುತ್ತಿದ್ದೆವು. ಸಂಜೆ ಹಾಲು ಕರೆಯುವ ಹೊತ್ತಿಗಿನ ದೊಡ್ಡಮ್ಮನ ಬೈಗುಳಕ್ಕೆ ಸಿಕ್ಕಿಬೀಳದ ಹಾಗೆ ಓಡುವುದೇ ಸವಾಲು ಎಲ್ಲರಿಗೂ..
ಏನಾದರಾಗಲಿ, ದನಗಳು ಮೇಯುತ್ತಿದ್ದಷ್ಟು ಕಾಲವೂ ನಾವು ಕಳೆಯುತ್ತಿದ್ದ ಸಮಯ ಅತ್ಯದ್ಭುತವಾದದ್ದು. ಅದೊಂದು ಮನೆ ಕಟ್ಟುವ ಆಟ ಪ್ರತಿ ದಿನವೂ ನಡೆಯುತ್ತಿತ್ತು. ಕಟಾವಾದ ಗದ್ದೆಯ ಮಧ್ಯದಲ್ಲಿ ನಾಲ್ಕು ಕೋಲೂರಿ, ಮೇಲೆ ತೆಂಗಿನ ಗರಿ ಹಾಸಿ ಕಟ್ಟುವ ಮನೆಗೆ ಇನ್ನಿಲ್ಲದ ಸಂಭ್ರಮ ನಮ್ಮದು. ಸುಮಾರು ಹದಿನೈದು ದಿನಗಳ ಸತತ ಪರಿಶ್ರಮದ ನಂತರ ಮನೆ ಎದ್ದು ನಿಲ್ಲುತ್ತಿತ್ತು. ಶುಭ ಮುಹೂರ್ತದಲ್ಲೊಂದು ದಿನ ಮನೆಯಿಂದ ಕೇಳಿ ತಂದ ಕೊಟ್ಟೆ ಕಡುಬಿನ ಜೊತೆಯಲ್ಲಿ ಗೃಹಪ್ರವೇಶವೂ ಸಾಂಗವಾಗಿ ನೆರವೇರುತ್ತಿತ್ತು. ರಜೆಯ ಉಳಿದ ದಿನದಲ್ಲಿ ಆ ಮನೆ ನೆರಳನ್ನು ಒದಗಿಸುತ್ತಾ ನಮ್ಮ ಮಾವು, ಹಲಸು, ಪೇರಳೆ, ಪನ್ನೇರಳೆಗಳನ್ನು ಅಡಗಿಸಿಡುವ ಜಾಗವಾಗಿರುತ್ತಿತ್ತು.
ಅಪರೂಪಕ್ಕೊಂದೊಂದು ದಿನ ದನ ಮೇಯಿಸುವುದಕ್ಕೆ ರಜೆ ಮಾಡಿ, ಮನೆಯಲ್ಲಿನ ಹಪ್ಪಳದ ಕಾರ್ಖಾನೆಗೆ ನೇಮಿಸಲಾಗುತ್ತಿತ್ತು. ದನಗಳಿಗೆ ಆ ದಿನಗಳಲ್ಲಿ ‘ಅಯ್ಯಪ್ಪಾ ಆರಾಮು ಇವತ್ತು’ ಅನಿಸುತ್ತಿತ್ತೇನೋ.. ದೊಡ್ಡ ದೊಡ್ಡ ಹಲಸಿನ ಕಾಯಿಗಳನ್ನು ಹಿಂದಿನ ದಿನವೇ ತಂದು , ತೊಳೆ ಬಿಡಿಸಿ, ನೆನೆಸಿ, ರುಬ್ಬಿಡುತ್ತಿದ್ದರು. ಮಾರನೇ ದಿನ ಉಂಡೆ ಮಾಡುವುದು, ಮಣೆಗಳ ಸಹಾಯದಿಂದ ಹಪ್ಪಳದ ಆಕಾರಕ್ಕೆ ತರುವುದು , ತೆಂಗಿನ ಮಡ್ಲಿನ ಮೇಲೆ ಹಪ್ಪಳವನ್ನು ಒಣಗಿಸುವುದು ಎಲ್ಲ ನಮ್ಮ ಕೆಲಸ. ಆಗೊಂದಿಷ್ಟು ಕಥೆ, ತಲೆಹರಟೆ, ಆಟ, ಬೈಗುಳ..
ಮುಂದಿನ ಒಂದು ವರ್ಷ ಅಮ್ಮ ಹಪ್ಪಳ ಕರೆದಾಗೆಲ್ಲಾ ಇದೆಲ್ಲವೂ ನೆನಪಾಗಿ ನಗು ಮೂಡುತ್ತಿತ್ತು. ಸಂಜೆಯ ಸಮಯಕ್ಕೆ ಬೆಜಕೆರೆ ತರುವ ಕೆಲಸ. ಕೊಟ್ಟಿಗೆಗೆ ಹಾಕಲು ಕಾಡಲ್ಲಿ ಬಿದ್ದಿದ್ದ ತರಗೆಲೆಗಳನ್ನೆಲ್ಲಾ ಆರಿಸಿ ದೊಡ್ಡ ಬಿದಿರು ಬುಟ್ಟಿಗಳಲ್ಲಿ ತುಂಬಿ ಮನೆಗೆ ತರುತ್ತಾರೆ. ಎಲೆಗಳನ್ನೆಲ್ಲಾ ಗುಡಿಸಿ ಬುಟ್ಟಿಗೆ ತುಂಬುವಾಗ , ಸಣ್ಣ ಮಕ್ಕಳನ್ನೆಲ್ಲಾ ಬುಟ್ಟಿಯೊಳಗೆ ನಿಲ್ಲಿಸಿ ಕುಣಿ ಎನ್ನುತ್ತಿದ್ದರು. ಎಲೆಗಳೆಲ್ಲಾ ಭಾರ ಬಿದ್ದಾಗ ಒತ್ತೊತ್ತಾಗಿ ಸೇರಿ , ಹೆಚ್ಚು ಹಿಡಿಸುತ್ತದೆ ಎಂಬ ಕಾರಣಕ್ಕೆ..
ನಮ್ಮ ಅಳಿಲು ಸೇವೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡುತ್ತಿದ್ದೆವು. ತರಕಾರಿ ತೋಟದ ಉಸ್ತುವಾರಿ, ಅಂಗಳದಲ್ಲಿ ಹಬ್ಬಿದ ಹೂ ಗಿಡಗಳ ದೇಖಾರೇಖಿ, ನಾಯಿ-ಬೆಕ್ಕಿನ ಉಪಚಾರ ಎಲ್ಲವೂ ನಮ್ಮದೇ.. ಕತ್ತಲಾದ ಮೇಲೆ ಕೈ ಕಾಲು ಮುಖ ತೊಳೆದು ದೇವರೆದುರು ಭಜನೆಯಾಗಬೇಕು. ಮತ್ತೆ ಪಡಿಮಂಚದಲ್ಲಿ ಕನಸು ಹೆಣೆಯುತ್ತಾ ಕೂತರೆ , ಮರುದಿನದ ಬೆಳಗಿಗೇ ಎಚ್ಚರವಾಗುತ್ತಿದ್ದುದು..
ಇವೆಲ್ಲದರ ಜೊತೆಗೆ ಮರ ಹತ್ತುವುದು, ಯಾವುದೋ ನೀರು ತೊರೆಯ ಜಾಡು ಹಿಡಿದು ಮೂಲ ಹುಡುಕಲು ಹೋಗುವುದು, ಸಲಕರಣೆಗಳೇ ಇಲ್ಲದೇ ಎಳನೀರು ಬೀಳಿಸಿ , ಕಲ್ಲಲ್ಲಿ ಕೆತ್ತಿ , ನೀರು ಕುಡಿದು , ಯಾರಿಗೂ ಕಾಣದಂತೆ ಬೊಂಡ ಎಸೆದು ಹೋಗುವುದು, ಹಿಟ್ಟಿನ ಮಿಲ್ ನ ಎಲ್ಲಾ ಸ್ಕ್ರೂ ಗಳನ್ನು ಅದಲು ಬದಲು ಮಾಡುವುದು, ಮನೆಯಂಗಳವನ್ನೆಲ್ಲಾ ನೀರು ಸುರಿದು ರಂಪ ಮಾಡೋದು , ಎಲ್ಲವೂ ನಡೆಯುತ್ತಿತ್ತು. ಎಲ್ಲದಕ್ಕೂ permission ಬೇಕಿಲ್ಲದೇ ಹೋದರೂ ಗೇರುಬೀಜದ ವಿಷಯದಲ್ಲಿ ಮಾತ್ರ ಅಜ್ಜ ತುಂಬಾ ಕಟ್ಟುನಿಟ್ಟು..
ಅವರಿಗೆ ತಿಳಿಯದಂತೆ ಗೇರುಬೀಜ ಹೆಕ್ಕಿ, ಬಚ್ಚಲು ಒಲೆಗೆ ಹಾಕಿ ಸುಟ್ಟು, ಕದ್ದು ತಿನ್ನುವ process ನೆನೆದರೆ ಈಗಲೂ ಬಾಯಲ್ಲಿ ನೀರೂರತ್ತೆ. ಕರಾವಳಿಯಲ್ಲಿ ಭೂತಕೋಲ ತುಂಬಾ ಪ್ರಸಿದ್ಧವಾದದ್ದು.. ನಮ್ಮಜ್ಜನ ಮನೆಯಲ್ಲಂತೂ ಮನೆಯದೇ ದೇವಸ್ಥಾನ , ಭೂತ ಕೊಟ್ಟಿಗೆ ಎಲ್ಲವೂ ಇದೆ!
ಪ್ರತಿ ವರ್ಷವೂ ಏಪ್ರಿಲ್ -ಮೇ ಸಮಯದಲ್ಲೇ ಕಾಲಾವಧಿ ಉತ್ಸವ ನಡೆಯುವುದರಿಂದ ಎರಡೆರಡು ಲಡ್ಡು ಬಂದು ಬಾಯಿಗೆ ಬಿದ್ದಷ್ಟೇ ಖುಷಿ ನಮಗೆಲ್ಲಾ. ರಾತ್ರಿಯಿಡೀ ಕೋಲದಲ್ಲಿ ವೇಷ ಕಟ್ಟುವವರನ್ನು ನೋಡಿ ಮಾರನೇ ದಿನ ಅದನ್ನೇ ಇಮಿಟೇಟ್ ಮಾಡುವುದೇ ಒಂದು ಸೊಗಸು. ಆ ಬಣ್ಣ, ದೊಂದಿ ಬೆಳಕು, ಗಗ್ಗರ , ಅವರ ಬಟ್ಟೆ ಎಲ್ಲವೂ ಸೇರಿ ಅಸಂಖ್ಯಾತ ಬೆರಗುಗಳನ್ನು ನಮ್ಮೊಳಗೆ ಹುಟ್ಟುಹಾಕಿಬಿಟ್ಟಿವೆ.
ಆ ಎರಡು ತಿಂಗಳು ಫೋನಿಲ್ಲ, ಟಿ.ವಿ ಇಲ್ಲ, ಕಡೆಗೆ ಕರೆಂಟ್ ಸಹ ಇಲ್ಲದ ಊರಿನಲ್ಲಿ ಬದುಕೆಷ್ಟು ಸುಲಭ, ಸುಂದರ ಹಾಗೂ ಸುಲಲಿತವಾಗಿ ನಡೆದು ಹೋಗುತ್ತಿತ್ತೆಂದರೆ, ಈಗಲೂ ಆಶ್ಚರ್ಯವಾಗತ್ತೆ..
ಕಾಡಲ್ಲೆಲ್ಲೋ ಬಿದ್ದಾಗ ಮಾಡಿಕೊಳ್ಳುವ ಪ್ರಥಮ ಚಿಕಿತ್ಸೆಯಿಂದ ಹಿಡಿದು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಪರಿಯವರೆಗೆ, ಅಕಸ್ಮಾತ್ ಕಾಡು ಪ್ರಾಣಿಗಳು ಎದುರಾದರೆ ಹೇಗೆ ಎದುರಿಸಬೇಕು ಎಂಬುದರಿಂದ ನೀರಿನ ಬಳಿ ಎಷ್ಟು ಜಾಗರೂಕರಾಗಿರಬೇಕು ಎಂಬಲ್ಲಿಯವರೆಗೆ , ಮಕ್ಕಳು ರಚ್ಚೆ ಹಿಡಿದಾಗ ಹೇಗೆ ಸಮಾಧಾನಿಸಬೇಕು ಎಂಬಲ್ಲಿಂದ ವಯಸ್ಸಾದವರನ್ನು ಎಷ್ಟು ಪ್ರೀತಿಯಿಂದ ಕಾಣಬೇಕು ಎಂಬಲ್ಲಿಯವರೆಗೆ ಎಲ್ಲವನ್ನೂ ಆಗಲೇ ಕಲಿತಿದ್ದು..
ಯಾರ ಸಹಾಯವೂ ಇಲ್ಲದೇ ನಮ್ಮ ದಿನಗಳನ್ನು ನಾವೇ ರೂಪಿಸಿಕೊಳ್ಳುವ ಮತ್ತು ಸ್ವತಂತ್ರರಾಗಿರುವ ಎಲ್ಲ ಹಕ್ಕೂ ನಮಗಲ್ಲಿ ದಕ್ಕುತ್ತಿತ್ತು. ಬೇಜಾರು ಎಂಬ ಪದವೇ ಸುಳಿಯದಂತೆ ದಿನಗಳನ್ನು ಕಟ್ಟಿಕೊಳ್ಳುವ ಕಲೆ ನಮಗೆ ಕರಗತವಾಗಿತ್ತು.. ಅಲ್ಲಷ್ಟು ಖುಷಿಯಿತ್ತು, ಕನಸಿತ್ತು , ಸಡಗರವಿತ್ತು! ಬದುಕನ್ನ ಸಂಭ್ರಮಿಸೋ ಕಲೆ ಜೊತೆಯಾಗ್ತಿತ್ತು.
ಆ ಹರಿಯೋ ನದಿಯ ಮಧ್ಯೆ, ಕಾಡಿನ ಕಲರವದ ಮಧ್ಯೆ , ಗದ್ದೆ ತೋಟಗಳ ಮಧ್ಯೆ ನಮ್ಮನ್ನ ನಾವು ಕಂಡುಕೊಳ್ಳುವ ಸಾಧ್ಯತೆಗಳಿತ್ತು. ಯಾವುದೇ ಅಸಹಜ ದೊಂಬರಾಟಗಳಿಲ್ಲದೆ ಬದುಕು ತಂತಾನೇ ಅರಳುವ ಪ್ರಕ್ರಿಯೆಯೊಂದು ನಮಗೆ ತಿಳಿಯುತ್ತಿತ್ತು. ಅಲ್ಲಿ ಕಲಿತ ಪಾಠಗಳು ಇವತ್ತಿಗೂ ಬದುಕಲ್ಲಿ ಜೊತೆಯಾಗಿವೆ ಮತ್ತು ಕೈ ಹಿಡಿದಿವೆ ಎಂದರೆ ಸುಳ್ಳಲ್ಲ..
ಕ್ರಿಕೆಟ್, ಕೇರಂ, ಚೆಸ್, ರಂಗಭೂಮಿ, ಸಂಗೀತ, ಕರಾಟೆ, ನೃತ್ಯ ಹೀಗೆ ನೂರು ಆಯ್ಕೆಗಳನ್ನು ಹಿಡಿದು ನಿಂತಿರೋ ಶಿಬಿರಗಳಲ್ಲಿ ಕಾಡಿನ ಘಮಲು ಹೇಗೆ ಹುಟ್ಟೀತು? ಆ ಮಕ್ಕಳಲ್ಲಿ ಅಜ್ಜನ ಪಡಿಮಂಚದ ಕಥೆ, ಅಂಗಳದ ಕಟ್ಟೆಯ ಮೇಲೆ ಹಬ್ಬಿದ್ದ ಬಟನ್ ರೋಸ್ ನ ಬಣ್ಣ , ಹಿತ್ತಲ ಪನ್ನೇರಳೆಯ ಸವಿ ಹೇಗೆ ಹರಡಿಕೊಂಡೀತು?
ಆ ಶಿಬಿರಗಳಲ್ಲಿ ನಡೆಯೋ ಕಡೆಯ ದಿನದ competition ಗೆ ಮತ್ತೆ ಸ್ಪರ್ಧೆಗೆ ನಿಲ್ಲೋ ಮಕ್ಕಳು, ಬದುಕ ರೇಸ್ ನಲ್ಲಿ ನಡೆದೂ ಗೆಲ್ಲಬಹುದೆಂಬ ಪಾಠವ ಕಲಿವುದೆಂತು? ಇದೆಲ್ಲವನ್ನೂ ಮೀರಿ.. ಮುಂದಿನ ಪೀಳಿಗೆಗೆ ಯಾವ ಕಥೆ ಹೇಳಲಿಕ್ಕಿದ್ದೀತು ಅವರಲ್ಲಿ? ಯಾಕೋ ವಿಚಾರಗಳು ಮನಸಲ್ಲಿ ಗೊಂದಲವನ್ನು ಮೂಡಿಸಿ , ಅತಿ ಎನಿಸುವಷ್ಟು ಗಾಬರಿಯನ್ನು ಹುಟ್ಟುಹಾಕುತ್ತವೆ. ಎಲ್ಲ ಬೇಸಿಗೆ ಶಿಬಿರಗಳೂ ಅಜ್ಜಿಯ ಮನೆಯಷ್ಟು ಖುಷಿಯನ್ನೇ ಮಕ್ಕಳಿಗೆ ಕೊಡಲಿ ಎಂಬ ಹಾರೈಕೆಯೊಂದನ್ನು ಬಿಟ್ಟು ಮತ್ತೇನೂ ಉಳಿದಿಲ್ಲ ನನ್ನಲ್ಲಿ..






ಓದಿ ತುಂಬ ಖುಷಿಯೂ, ನಿಮ್ಮಷ್ಟೇ ಗಾಬರಿಯೂ ನಮ್ಮದಾಗಿದೆ,. ಅವರೇನು ಕತೆ ಹೇಳಿ ಯಾರು ಎಂಬ ನಿಮ್ಮ ಉದ್ಗಾರವಂತೂ ಕಂಗಾಲಾಗುವಂತೆ ಮಾಡಿತು.
ಲಾಯ್ಕಿತ್ತು ಸುಗ್ಗತ್ತಿ ಕಥೆ