ಪ್ರಸಾದ್ ನಾಯ್ಕ್ ‘ಅವಧಿ’ಗೆ ಸುಪರಿಚಿತರು. ೫೦ಕ್ಕೂ ಹೆಚ್ಚು ವಾರ ಕಾಲ ತಮ್ಮ ಅಂಗೋಲಾದ ನೆನಪುಗಳನ್ನು ‘ಅವಧಿ’ಯ ಓದುಗರೊಂದಿಗೆ ಹಂಚಿಕೊಂಡವರು. ಇದನ್ನು ‘ಬಹುರೂಪಿ’ ‘ಹಾಯ್ ಅಂಗೋಲಾ..!’ ಹೆಸರಿನಲ್ಲಿ ಪುಸ್ತಕವಾಗಿ ಹೊರತಂದಿದೆ. ಅದನ್ನು ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
ಈ ಕೃತಿ ಶಿವಮೊಗ್ಗ ಕರ್ನಾಟಕ ಸಂಘದ ವರ್ಷದ ಅತ್ಯುತ್ತಮ ಪ್ರವಾಸ ಕಥನ ಪ್ರಶಸ್ತಿ ಗಳಿಸಿತು.
ಚುರುಕು ಬರವಣಿಗೆಯ, ಕಾಡುವಂತೆ ಮಾಡುವ ಇವರ ಹೊಸ ಧಾರಾವಾಹಿ ಓಶೋ ಬಳಗದಲ್ಲಿದ್ದ, ಎಲ್ಲರನ್ನೂ ಇನ್ನಿಲ್ಲದಂತೆ ಕಾಡಿಸಿದ ಮಾ ಆನಂದ್ ಶೀಲಾ ಬಗ್ಗೆ.
ಓದಿ-
ಪ್ರಸಾದ್ ನಾಯ್ಕ್
”ಎಪ್ಪತ್ತು ವರ್ಷದ ರಾಕ್ ಸ್ಟಾರ್ ಒಬ್ಬರನ್ನು ನೀವು ನೋಡಿದ್ದಿದೆಯಾ?”
ನನ್ನ ಪಕ್ಕದಲ್ಲಿ ಕುಳಿತಿದ್ದ, ಇಪ್ಪತ್ತೈದರ ಆಸುಪಾಸಿನ ತರುಣಿಯೊಬ್ಬಳು ಕೇಳಿದಾಗ ನನಗರಿವಿಲ್ಲದಂತೆಯೇ ನಕ್ಕುಬಿಟ್ಟಿದ್ದೆ. ಕಣ್ಣಾರೆ ನೋಡ್ತಾನೇ ಇದ್ದೀವಲ್ವಾ ನಾವಿಬ್ರೂ, ಅಂದೆ. ಇಲ್ಲಿಗೆ ಬಂದು ಇಷ್ಟು ಹೊತ್ತಾದರೂ, ಈಗಲೂ ಇದೊಂದು ಕನಸಿನಂತೆ ಅನ್ನಿಸುತ್ತಿದೆ ಎಂದಳಾಕೆ. ಆ ತರುಣಿಯ ಮಾತನ್ನು ಒಂದರೆಕ್ಷಣ ಪಕ್ಕಕ್ಕಿಟ್ಟು ಸುತ್ತಲೂ ಸುಮ್ಮನೆ ಕಣ್ಣಾಡಿಸಿದರೆ ಅಲ್ಲಿ ನೆರೆದಿದ್ದ ಬಹುತೇಕರು ಅದೇ ಸ್ಥಿತಿಯಲ್ಲಿರುವಂತೆ ಕಂಡುಬಂದಿತು.
ತಮ್ಮ ಕಣ್ಣುಗಳನ್ನು ಕಿತ್ತು ವೇದಿಕೆಗೆ ಅಂಟಿಸಿಟ್ಟವರಂತೆ ಎಲ್ಲರ ನೋಟವೂ ಒಂದೇ ದಿಕ್ಕಿನತ್ತ ತಲ್ಲೀನ. ಇಂಥಾ ಸಮಾರಂಭಗಳಿಗೆ ಬರುವುದು ತಲೆಗೂದಲು ಹಣ್ಣಾಗಿರುವ ಜನರಷ್ಟೇ, ನೀನು ಹೋದರೆ ನಿನಗೆ ಡಯಾಪರ್ ತೊಡಿಸಲಾಗುವುದು ಅಂತೆಲ್ಲಾ ವ್ಯಂಗ್ಯೋಕ್ತಿಗಳನ್ನು ಕೇಳಿಸಿಕೊಂಡಿದ್ದ ನನಗೂ, ಹೀಗೆಲ್ಲಾ ಹೇಳಿದ ಒಂದಿಬ್ಬರಿಗೂ ಅಲ್ಲಿ ಅಚ್ಚರಿಯಾಗಿದ್ದು ಸಹಜವೇ ಆಗಿತ್ತು.

ಆಧ್ಯಾತ್ಮವೆಂಬುದು ಮಾತುಕತೆಯ ಪ್ರಮುಖ ಥೀಮ್ ಆಗಿದ್ದರೂ ಅಲ್ಲಿ ನೆರೆದಿದ್ದ ಬಹಳಷ್ಟು ಮಂದಿ ಯುವವರ್ಗದವರೇ ಆಗಿದ್ದರು. ಹಾಗೆಂದು ಅವರೆಲ್ಲಾ ಅಲ್ಲಿ ಆಧ್ಯಾತ್ಮಕ್ಕೆಂದೇ ಬಂದಿದ್ದರೇ? ಉತ್ತರಿಸುವುದು ಕಷ್ಟ. ಹೌದು ಎಂದರೆ ಹೌದು, ಅಲ್ಲ ಎಂದರೆ ಅಲ್ಲ ಅನ್ನಬಹುದಷ್ಟೇ!
ಏಕೆಂದರೆ ಆಧ್ಯಾತ್ಮವೆನ್ನುವುದು ಸಮಾಜದೆದುರು ಅದೆಷ್ಟೋ ಶತಮಾನಗಳಿಂದ ನೂರಾರು ಬಗೆಗಳಲ್ಲಿ ಪ್ರಸ್ತುತಗೊಂಡಿದೆ, ತಿರುಚಲ್ಪಟ್ಟಿದೆ. ಧರ್ಮಗಳ ಹೆಸರಿನಲ್ಲಿ ಸಾಮಾಜಿಕ, ಸಾಂಸ್ಕೃಂತಿಕ ಕ್ರಾಂತಿಗಳಾಗಿವೆ. ವಿಶ್ವದಾದ್ಯಂತ ಭೀಕರವೆನ್ನಿಸುವಷ್ಟು ಹಿಂಸೆ-ದಂಗೆ-ರಕ್ತಪಾತಗಳಾಗಿವೆ, ಆಗುತ್ತಲೂ ಇವೆ.
ಹಿಮಾಲಯದ ಗುಹೆಗಳಲ್ಲಿ ತಪಸ್ಸು ಮಾಡುತ್ತಿದ್ದ ಸಾತ್ವಿಕ ಋಷಿಗಳಿಂದ ಹಿಡಿದು, ಅಲಿಸ್ಟರ್ ಕ್ರೌಲೇಯಂಥಾ ತಾಂತ್ರಿಕರ ವಿಕ್ಷಿಪ್ತತೆಯವರೆಗೂ, ನಮ್ಮ ನಡುವಿನ ಇಂದಿನ ಹೈಟೆಕ್ ಗುರುಗಳವರೆಗೂ ಧರ್ಮ-ಆಚರಣೆಯ ಪರಿಕಲ್ಪನೆಗಳು ಕಾಲಾನುಕ್ರಮದಲ್ಲಿ ಏನೇನೋ ಆಗಿ ಅಗತ್ಯಕ್ಕಿಂತಲೂ ಹೆಚ್ಚು ಸಂಕೀರ್ಣವಾಗಿಬಿಟ್ಟಿದೆ. ಹೀಗಾಗಿ ಮುಂದಿನ ಕೆಲ ಶತಮಾನಗಳವರೆಗೂ ಆಧ್ಯಾತ್ಮದ ಮಾರುಕಟ್ಟೆಯು ಆರ್ಥಿಕವಾಗಿ ಮತ್ತಷ್ಟು ಸಮೃದ್ಧವಾಗಿ ಬೆಳೆದರೆ ಅಚ್ಚರಿಯೇನಿಲ್ಲ.
ಕಾರ್ಯಕ್ರಮದ ಆರಂಭಕ್ಕೆ ಮುನ್ನ ಬಂದವರೆಲ್ಲಾ ಉಪಾಹಾರ ಸೇವಿಸುತ್ತಿರುವ ಜೊತೆಗೇ ಹೊಸ ಪರಿಚಯಗಳೂ ಆಗುತ್ತಿದ್ದವು. ಹಸಿರನ್ನೇ ಹೊದ್ದುಕೊಂಡಿರುವ ಅಂಥಾ ಪುಟ್ಟ ಸ್ವರ್ಗಗಳಲ್ಲಿ ಸಮಾನಮನಸ್ಕರು ಮತ್ತು ಕಾಫಿಯ ಜೊತೆ ಹರಟೆ ಹೊಡೆಯುವ ಖುಷಿಯೇ ಬೇರೆ. ಓಶೋ ಬಗ್ಗೆ ನಿಮ್ಮ ಅಭಿಪ್ರಾಯವೇನು?’, ರೋದಿಸುತ್ತಿದ್ದ ಬೆಕ್ಕೊಂದಕ್ಕೆ ಬಿಸ್ಕೀಟು ತಿನ್ನಿಸುವುದರಲ್ಲಿ ಮಗ್ನನಾಗಿದ್ದ ನನಗೆ ಒಬ್ಬರು ಕೇಳಿದರು.
ಮೊದಲಿನಿಂದಲೂ ದೇವಮಾನವರುಗಳ ಲೋಕದಿಂದ ಸುರಕ್ಷಿತ ದೂರವನ್ನು ಕಾಯ್ದುಕೊಂಡಿರುವ ನಾನೀಗ ಕೊಂಚ ತಡವರಿಸಿದೆ. ಆದರೂ ಇಂದಿನ ಮಾಡರ್ನ್ ಆಧ್ಯಾತ್ಮ ಗುರುಗಳ ಮೇಲಿರುವ ಓಶೋರ ದಟ್ಟ ಪ್ರಭಾವದ ಬಗ್ಗೆ ನನಗೆ ತಿಳಿದಷ್ಟು ಹೇಳಿದೆ. ನೋಡಲು ಓಶೋರಂತೆ ಕಾಣುವ, ಅವರಂತೆಯೇ ದಿರಿಸು ಧರಿಸುವ ಮತ್ತು ಅವರ ಶೈಲಿಯಲ್ಲೇ ಮಾತನಾಡುತ್ತಾ ಈಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುವ ಓರ್ವ ಹೈಟೆಕ್ ಗುರುಗಳೊಬ್ಬರ ಬಗ್ಗೆಯೂ ನಾವೆಲ್ಲಾ ಹಾಯಾಗಿ ಹರಟೆ ಹೊಡೆದೆವು.
ನಂತರ ನೋಡಿದಾಗ ಅಲ್ಲಿದ್ದ ಬಹಳಷ್ಟು ಮಂದಿಗೂ ಓಶೋ ಬಗ್ಗೆ ಅಷ್ಟೇನೂ ತಿಳಿದಿಲ್ಲವೆಂಬುದು ಮನವರಿಕೆಯಾಗಿ ನನಗೆ ಸಮಾಧಾನವಾಯಿತು. ಓಶೋ ಬಗ್ಗೆ ಎಲ್ಲೋ ಒಂದಷ್ಟು ಓದಿಯೋ ಕೇಳಿಯೋ ಬಂದವರೇ ಅಲ್ಲಿದ್ದವರೆಲ್ಲಾ. ನನ್ನ ಮಟ್ಟಿಗಂತೂ ಓಶೋ ಎಂದರೆ ಲೋಲಕದಂತೆ. ಅದು ಎರಡು ಲೋಹದ ತಟ್ಟೆಗಳ ನಡುವೆ ನಿರಂತರವಾಗಿ ಚಲನೆಯಲ್ಲಿರುವ ಒಂದು ಲೋಲಕ.
ಒಂದು ಲೋಹದ ತಟ್ಟೆಯು ಯಶಸ್ಸಿನದ್ದಾದರೆ ಮತ್ತೊಂದು ಲೋಹದ ತಟ್ಟೆಯು ಕುಖ್ಯಾತಿಯದ್ದು. ಲೋಲಕದ ಗುಂಡು ಇಬ್ಬದಿಯ ಈ ತಟ್ಟೆಗಳಿಗೆ ಬಡಿದಾಗಲೆಲ್ಲಾ ಶಬ್ದತರಂಗಗಳು ಧ್ವನಿಸಿ ಓಶೋರ ಇರುವಿಕೆಯನ್ನು ಜಗತ್ತಿಗೆ ತೋರಿಸುತ್ತಿದ್ದವು. ಆದರೆ ಈ ಸದ್ದಿನ ಗಲಾಟೆಯಲ್ಲಿ ಲೋಹದ ತಟ್ಟೆಗಳ ನಡುವಿನ ಲೋಲಕದ ಚಲನೆಯು ಮಾತ್ರ ಜಗತ್ತಿಗೆ ಅಷ್ಟಾಗಿ ದಕ್ಕಲೇ ಇಲ್ಲ.
ಇನ್ನು ಲೋಲಕದ ಚಲನೆಯ ಈ ಭಾಗವು ಜನರಿಗೆ ಹೇಳಿಕೊಳ್ಳುವಷ್ಟು ದಕ್ಕಲಿಲ್ಲವೆಂಬ ಮಾತ್ರಕ್ಕೆ ಅದರ ಅಸ್ತಿತ್ವವನ್ನೇ ನಿರಾಕರಿಸುವುದು ಮೂರ್ಖತನವಾಗಿಬಿಡುತ್ತದೆ. ಹೀಗಾಗಿ ಒಂದು ರೀತಿಯಲ್ಲಿ ಓಶೋ ಒಗಟಾಗಿಯೇ ಉಳಿದುಬಿಟ್ಟರು. ಅದೊಂದು ಮುಗಿಯದ ಕೌತುಕ.
ಓಶೋ ಹುಟ್ಟುಹಾಕಿದ್ದ ಆ ದೈತ್ಯ ಸಾಮ್ರಾಜ್ಯದಲ್ಲಿ ತೀರಾ ಸಾಮಾನ್ಯರಿದ್ದರು, ಅಬ್ಬೇಪಾರಿಗಳಂತೆ ಅಲೆದಾಡುತ್ತಿದ್ದ ಹಿಪ್ಪಿಗಳಿದ್ದರು, ಡ್ರಗ್ಸ್-ಸೆಕ್ಸ್ ವ್ಯಸನಕ್ಕೀಡಾದವರಿದ್ದರು. ಕರೆನ್ಸಿ ನೋಟುಗಳ ಹಾಸಿಗೆಯಲ್ಲೇ ಹೊರಳಾಡುತ್ತಿದ್ದ ಉದ್ಯಮಿಗಳು, ರಾಜಕಾರಣಿಗಳು, ಹಾಲಿವುಡ್ ಖ್ಯಾತನಾಮರಿದ್ದರು.
ಇಷ್ಟೆಲ್ಲಾ ಇದ್ದರೂ ಓಶೋರ ರೋಚಕ ಏಳುಬೀಳಿನ ಕಥೆಗಳಲ್ಲಿ ಅವರಷ್ಟೇ ತೀವ್ರವಾಗಿ ಸುದ್ದಿಯಲ್ಲಿದ್ದ, ಸದಾ ಒಂದಲ್ಲಾ ಒಂದು ವಿವಾದದ ಕೇಂದ್ರಬಿಂದುವಾಗಿದ್ದ, ಕೊನೆಗೆ ಓಶೋರಷ್ಟೇ ಒಗಟಾಗಿ ಉಳಿದುಹೋದ ಏಕೈಕ ವ್ಯಕ್ತಿಯೆಂದರೆ ಮಾ ಆನಂದ್ ಶೀಲಾ. ಶೀಲಾ ಒಂದು ಕಾಲದಲ್ಲಿ ಓಶೋರವರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದವರು. ಸಂಪತ್ತಿನಿಂದ ತುಳುಕುತ್ತಿದ್ದ ಓಶೋರ ಸಾಮ್ರಾಜ್ಯದಲ್ಲಿ ಓಶೋರ ಬಲಗೈಯಂತೆ, ಸೆಕೆಂಡ್ ಇನ್ ಪೊಸಿಷನ್ ಆಗಿದ್ದು ಬೀಗಿದವರು.
ಓಶೋ ಮತ್ತು ವಿವಾದಗಳೆಂದರೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದ್ಯಾವ ಬಗೆಯ ಪ್ರಚಾರವಾದರೂ ಸರಿ. ಆದರೆ ಸದಾ ಪ್ರಚಾರದಲ್ಲಿರಬೇಕು, ಎಂಬುದನ್ನೇ ಓಶೋ, ಅವರ ಆಪ್ತವಲಯದ ಅನುಯಾಯಿಗಳು ಮತ್ತು ಅವರ ಸಂಸ್ಥೆಗಳು ಎಪ್ಪತ್ತರ ದಶಕದಿಂದಲೂ ಪಾಲಿಸುತ್ತಾ ಭಾರೀ ಯಶಸ್ಸನ್ನು ಕಂಡಿವೆ. ಈ ಮಾರ್ಕೆಟಿಂಗ್ ತಂತ್ರಗಳು ಕಾಲಾನುಕ್ರಮದಲ್ಲಿ ಮಾಧ್ಯಮಗಳಲ್ಲೂ, ಆಕರ ಗ್ರಂಥಗಳಲ್ಲೂ ಅಧಿಕೃತವಾಗಿ ದಾಖಲಾಗಿವೆ ಕೂಡ. ಹಾಗಿದ್ದರೆ ಅಂದೂ ಕೂಡ ಸಮಾರಂಭಕ್ಕೆ ಬಂದಿದ್ದ ಆಸಕ್ತರನ್ನು ಅಂಥದ್ದೊಂದು ತಂತ್ರಕ್ಕೆ ದಾಳದಂತೆ ಬಳಸಿಕೊಳ್ಳಲಾಗುತ್ತಿತ್ತೇ?
ಹೌದು!, ಎಂದು ಪ್ರತಿಭಟನೆಯ ಧಾಟಿಯಲ್ಲಿ ಕೊಂಚ ಕಟುವಾಗಿಯೇ ಅಂದಿದ್ದರು ಬಂದವರಲ್ಲೊಬ್ಬರು. ಹಾಗೇನೂ ಇಲ್ಲ, ನೀವು ಆರಾಮಾಗಿರಿ ಪ್ಲೀಸ್, ಎಂದು ಇತ್ತ ತಿಪ್ಪೆ ಸಾರಿಸಲು ಯತ್ನಿಸಿದರು ಆಯೋಜಕರು.
ಎರಡು ದಿನಗಳ ಹಿಂದಷ್ಟೇ, ಅಂದರೆ ಸೆಪ್ಟೆಂಬರ್ 29 ರಂದು ಮಾ ಆನಂದ್ ಶೀಲಾ ಮತ್ತು ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ರವರನ್ನು ಅತಿಥಿಗಳನ್ನಾಗಿ ಕರೆಸಿ, ಗುರುಗ್ರಾಮದ ವಿಲಾಸಿ ಹೋಟೇಲಿನಲ್ಲಿ ಹೈ-ಪ್ರೊಫೈಲ್ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಆ ಸರಣಿಯ ಮುಂದುವರಿದ ಭಾಗವೇ ನಾವುಗಳು ಅಂದು ಸೇರಿದ್ದ ಪುಟ್ಟ, ಸುಂದರ ಸಂಜೆ.
ಆದರೆ ಈ ಕಾರ್ಯಕ್ರಮವನ್ನು ನೆಟ್-ಫ್ಲಿಕ್ಸ್ ಮತ್ತು ಧರ್ಮ ಪ್ರೊಡಕ್ಷನ್ಸ್ (ಕರಣ್ ಜೋಹರ್ ಒಡೆತನದ ಸಂಸ್ಥೆ) ತಂಡಗಳು ಚಿತ್ರೀಕರಿಸುತ್ತಿವೆಯೆಂಬ ಮಾತುಗಳು ಹರಿದಾಡತೊಡಗಿದಾಗಲೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಆಸಕ್ತರು ಆಯೋಜಕರನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಷ್ಟು ದುಬಾರಿ ಟಿಕೆಟ್ ತೆತ್ತು ಬಂದಿದ್ದೇವಲ್ವಾ. ಆಗ ಈ ಅಂಶವನ್ನೇಕೆ ಹೇಳಿರಲಿಲ್ಲ?’, ಎಂಬುದು ಕೆಲವರ ಪ್ರಶ್ನೆ. ಪ್ರಶ್ನೆಯೇನೋ ಕೇಳಬೇಕಾದದ್ದೇ. ಆದರೆ ಆಯೋಜಕರ ಉತ್ತರವೋ ಅಡ್ಡಗೋಡೆಯ ಮೇಲಿಟ್ಟ ದೀಪ.
ಅಲ್ಲಾ… ಟಿಕೆಟ್ ದರವನ್ನು ಇಷ್ಟು ದುಬಾರಿ ಇಟ್ಟಿದ್ದರೂ ಜನಜಂಗುಳಿಯು ಈ ಮಟ್ಟಿಗೆ ಜಮೆಯಾಗಿದೆಯಲ್ವಾ?, ಎಂಬುದೇ ಕಳೆದ ಒಂದೆರಡು ತಾಸುಗಳಿಂದ ಆ ಪರಿಸರದಲ್ಲಿ ಜನರ ನಡುವೆ ಹರಿದಾಡುತ್ತಿದ್ದ ಪ್ರಶ್ನೆಯಾಗಿತ್ತು. ಓಶೋರವರ ದೇಹಾಂತ್ಯವಾಗಿ ಅಜಮಾಸು ಮೂರು ದಶಕಗಳು ಸಂದರೂ, ಓಶೋ ಮತ್ತು ಮಾ ಆನಂದ್ ಶೀಲಾರ ಜನಪ್ರಿಯತೆಯು ಅದ್ಯಾವ ಮಟ್ಟಿಗಿದೆ ಎಂಬುದಕ್ಕೆ ಸಾಕ್ಷಿಯಂತಿತ್ತು ಆ ಸಂಜೆ.
ಜನಪ್ರಿಯತೆಯಲ್ಲವೆಂದರೆ ಕುಖ್ಯಾತಿಯೆಂದರೂ ಸರಿಯೇ. ಒಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ಹೆಚ್ಚೆಂದರೆ ಇಪ್ಪತ್ತರಿಂದ ಮೂವತ್ತು ಮಂದಿಯನ್ನು ನಿರೀಕ್ಷಿಸುತ್ತಿದ್ದ ನನ್ನಂಥವರಿಗೆ ಅಲ್ಲಿ ನೆರೆದಿದ್ದ ನೂರು-ನೂರೈವತ್ತು ಜನರನ್ನು ಕಂಡಾಗ ಭಾರೀ ಅಚ್ಚರಿ.
ಒಂದು ರೀತಿಯಲ್ಲಿ ಇದು ನೆಟ್-ಫ್ಲಿಕ್ಸ್ ಜನಪ್ರಿಯತೆಗೂ ಸಾಕ್ಷಿ. ಅಲ್ಲಿ ಬಂದಿದ್ದ ಬಹಳಷ್ಟು ಯುವಕ-ಯುವತಿಯರು ನೆಟ್-ಫ್ಲಿಕ್ಸ್ ನಲ್ಲಿ ಪ್ರಸಾರವಾಗಿದ್ದ ‘ವೈಲ್ಡ್ ವೈಲ್ಡ್ ಕಂಟ್ರಿ’ ಡಾಕ್ಯುಮೆಂಟರಿಯನ್ನು ವೀಕ್ಷಿಸಿ ಬೆಚ್ಚಿಬಿದ್ದು ಬಂದವರು. ಓಶೋ ಅವರಿಗೆ ಮೊದಲೇ ಒಂದಷ್ಟು ತಿಳಿದಿರಬಹುದೇನೋ. ಆದರೆ ಹಿಪ್ಪಿ ಚಳುವಳಿಯ ಬಗ್ಗೆ ಅಷ್ಟಾಗಿ ತಿಳಿದಿಲ್ಲದ ಮಿಲೇನಿಯಲ್ ವರ್ಗಕ್ಕೆ ಮಾ ಆನಂದ್ ಶೀಲಾ ಎಂಬ ವಿವಾದಾತ್ಮಕ ಚಹರೆಯ ಅಸಲಿ ಪರಿಚಯವಾಗಿದ್ದು ಈ ಡಾಕ್ಯುಮೆಂಟರಿಯ ಮೂಲಕವೇ.
ಹೀಗಾಗಿ ಶೀಲಾರ ಮಾತುಗಳಿಗೆ ಕಿವಿಯಾಗಲು, ಆಕೆಯನ್ನು ನೋಡಲು ಇದ್ದ ಕುತೂಹಲವು ಸಹಜವೇ ಅನ್ನಿ. ಬಹುಷಃ ನೆಟ್-ಫ್ಲಿಕ್ಸ್ ತಂಡದ ಇರುವಿಕೆ ಮತ್ತು ಪೂರ್ವ ಅನುಮತಿಯ ಹೊರತಾಗಿಯೇ ನಡೆಯುತ್ತಿದ್ದ ಸಮಾರಂಭದ ಚಿತ್ರೀಕರಣವನ್ನು ನಿರ್ಲಕ್ಷಿಸುವ ಮಟ್ಟಿಗೆ ಆಸಕ್ತರು ಹೋಗಿದ್ದು ಈ ಡಾಕ್ಯುಮೆಂಟರಿಯು ಹುಟ್ಟಿಸಿದ್ದ ವಿವಾದಾತ್ಮಕ ಅಲೆಯ ಪರಿಣಾಮವೇ ಸರಿ.

ಮಾ ಆನಂದ್ ಶೀಲಾ
ಅಷ್ಟಕ್ಕೂ ಮಾ ಆನಂದ್ ಶೀಲಾ ಎಂಬ ಈ ಮಹಿಳೆಯನ್ನು ಪರಿಚಯಿಸುವ ಬಗೆಯಾದರೂ ಹೇಗೆ? ಆಕೆಯನ್ನು ಸನ್ಯಾಸಿನಿಯೆನ್ನಬೇಕೇ, ಓಶೋರ ಬದುಕಿನ ಪ್ರಮುಖ ಅಧ್ಯಾಯವೆನ್ನಬೇಕೇ, ಪ್ರೇಮಿಯೆನ್ನಬೇಕೇ, ನಾಯಕಿಯೆನ್ನಬೇಕೇ, ಖಳನಾಯಕಿಯೆನ್ನಬೇಕೇ, ದುರಂತ ನಾಯಕಿಯೆನ್ನಬೇಕೇ, ಬಾಯಿಬಿಟ್ಟರೆ ಅಂತಾರಾಷ್ಟ್ರೀಯ ಮಾಧ್ಯಮಗಳತ್ತ ಕಿಡಿಕಾರುತ್ತಿದ್ದ ಬೆಂಕಿಯುಂಡೆ ಎನ್ನಬೇಕೇ, ಹತ್ಯೆ-ವಂಚನೆ-ಷಡ್ಯಂತ್ರ-ಬಾಂಬ್ ದಾಳಿಗಳಂಥಾ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದ ಅಪರಾಧಿಯೆನ್ನಬೇಕೇ, ಜೈಲುಶಿಕ್ಷೆಯ ಕೋಟಾ ಮುಗಿಸಿ ಹೊರಬಂದವರೆಂದು ಪ್ರಾಯಶ್ಚಿತ್ತದ ಹಾದಿಯಲ್ಲಿರುವ ವೃದ್ಧೆಯೆನ್ನಬೇಕೇ? ಅದುವೇ ಗೊಂದಲ.!
ಏಕೆಂದರೆ ಶೀಲಾ ಇವೆಲ್ಲವೂ ಆಗಿದ್ದರು. ಇನ್ನು ಅದರಾಚೆಗಿನ ಅವರದ್ದೇ ಆದ ಖಾಸಗಿ ವ್ಯಕ್ತಿತ್ವವೂ ಇತ್ತು. ಹೀಗಾಗಿ ಓಶೋರಂತೆಯೇ ಶೀಲಾ ಕೂಡ ಯಶಸ್ಸು-ಖ್ಯಾತಿ-ಕುಖ್ಯಾತಿಗಳ ವಿಲಕ್ಷಣ ಸಂಗಮ. ಬಗೆದಷ್ಟೂ ಮುಗಿಯದ ಕಥೆಗಳ ಕೌತುಕ.
ಆನಂದ್ ಶೀಲಾ ಎಂಬ ಹೆಸರು ಬಂದಾಗಲೆಲ್ಲಾ ನನಗೆ ನೆನಪಾಗುವುದು ಪ್ರತಿಭಾವಂತ ಕವಿ ಆಮೀರ್ ಖುಸ್ರೋ. ಖುಸ್ರೋ ಆ ಕಾಲದ ಮಹಾದಾರ್ಶನಿಕನಾಗಿದ್ದ ನಿಜಾಮುದ್ದೀನ್ ಔಲಿಯಾರ ಖಾಸಾ ಶಿಷ್ಯನಾಗಿದ್ದ. ಆತ ನಿಜಾಮುದ್ದೀನ್ ಔಲಿಯಾರ ಸಮಕಾಲೀನನಾಗಿದ್ದ ದಿಲ್ಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಯ ಆಸ್ಥಾನಕವಿಯೂ ಆಗಿದ್ದ.
ಎಲ್ಲಿಯ ವಿಲಾಸ, ಎಲ್ಲಿಯ ವೈರಾಗ್ಯ? ಆದರೆ ವಿಲಾಸ-ವೈರಾಗ್ಯಗಳೆರಡನ್ನೂ ಬಹಳ ನಾಜೂಕಾಗಿ ಸಂಭಾಳಿಸಿದವನು ಖುಸ್ರೋ. ಖುಸ್ರೋ ತನ್ನ ಗುರುವಾದ ಔಲಿಯಾರನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸಿದವನು. ಔಲಿಯಾರ ವ್ಯಕ್ತಿತ್ವಕ್ಕಿದ್ದಂತೆ ಆತನ ದೈತ್ಯಪ್ರತಿಭೆಯಲ್ಲೂ ದೈವತ್ವದ ಸ್ಪರ್ಶ ಸಾಕಷ್ಟಿತ್ತು.
ಎರಡು ದ್ವಾರಗಳಿರುವ ನನ್ನ ದರ್ಗಾದ ಬಾಗಿಲಿಗೆ ದಿಲ್ಲಿಯ ಸುಲ್ತಾನರು ಆ ಬಾಗಿಲಿನಿಂದ ಬಂದರೆ ನಾನು ಮತ್ತೊಂದು ಬಾಗಿಲಿನಿಂದ ಹೊರನಡೆಯುತ್ತೇನೆ, ಎಂದವರು ಔಲಿಯಾ. ಅಂಥಾ ಔಲಿಯಾರ ಪಟ್ಟಶಿಷ್ಯನಾಗಿದ್ದ ಖುಸ್ರೋ ಮಹಾತ್ವಾಕಾಂಕ್ಷಿಯಾಗಿದ್ದ ಅಲ್ಲಾವುದ್ದೀನ್ ಖಿಲ್ಜಿಗೂ ಬಹಳ ಆಪ್ತನಾಗಿದ್ದ. ಲೌಕಿಕದ ಭಾಗವಾಗಿದ್ದರೂ ಅದಕ್ಕೆ ಅಂಟಿಕೊಳ್ಳದೆ, ಅಲೌಕಿಕ ಜಗತ್ತಿನ ಅನುಭೂತಿಯನ್ನು ಸವಿಯುತ್ತಾ ಅರ್ಥಪೂರ್ಣವಾಗಿ ಬದುಕುವ ಕೌಶಲ್ಯವು ಖುಸ್ರೋನಿಗೆ ಸಿದ್ದಿಸಿತ್ತು.

ಮಾ ಆನಂದ್ ಶೀಲಾ, ಶ್ರೀ ರಜನೀಶ
ಆದರೆ ಆನಂದ್ ಶೀಲಾ? ಹಲವಾರು ಕಾರಣಗಳಿಂದಾಗಿ ಅತ್ತ ಸನ್ಯಾಸಿನಿಯೂ ಆಗದೆ, ಇತ್ತ ಜಗತ್ತಿಗೂ ಅರ್ಹಳಾಗದೆ ಆಕೆ ಎಲ್ಲಿಯೂ ಸಲ್ಲದವರಾಗದೆ ಉಳಿದುಬಿಟ್ಟವರು. ಮಾಧ್ಯಮಗಳ ಯಾವ ಕ್ಯಾಮರಾಗಳು ಆಕೆ ಹೆಜ್ಜೆಯಿಟ್ಟಲ್ಲೆಲ್ಲಾ ಅವರನ್ನು ನಿರಂತರವಾಗಿ ಹಿಂಬಾಲಿಸಿದವೋ, ಅವೇ ಕ್ಯಾಮರಾಗಳು ಇನ್ನಿಲ್ಲದಂತೆ ಅವರ ಜನ್ಮಜಾಲಾಡಿದ್ದವು.
ಓಶೋರವರಿಗೂ ಈ ಮಾತು ಅನ್ವಯಿಸುತ್ತದೆ. ಓಶೋರಿಂದಲೇ ಪ್ರವರ್ಧಮಾನಕ್ಕೆ ಬಂದ ಶೀಲಾರನ್ನು ಅಷ್ಟೇ ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಗಿದ್ದು ಕೂಡ ಓಶೋ ರಜನೀಶ್. ಇಂದು ಶೀಲಾ ತಮ್ಮ ಬದುಕನ್ನು ಅಡ್ವೆಂಚರ್ ಎಂದು ಕರೆದುಕೊಳ್ಳಬಹುದೇನೋ. ಆದರೆ ಅದು ಯಾವ ಅಪಾಯಕಾರಿ ‘ದುಸ್ಸಾಹಸ’ಕ್ಕೂ ಕಮ್ಮಿಯಿರಲಿಲ್ಲ. ಈ ಶಕ್ತಿಪ್ರದರ್ಶನಗಳ ಆಟದಲ್ಲಿ ಇವರೆಲ್ಲಾ ಒತ್ತೆಯಿಟ್ಟಿದ್ದು ಅದೆಷ್ಟೋ ಅಮಾಯಕ ನಾಗರಿಕರ ಅನ್ನ, ಬದುಕು ಮತ್ತು ಪ್ರಾಣ. ಹೀಗಾಗಿಯೇ ಶೀಲಾರಂಥಾ ಸಂಕೀರ್ಣ ವ್ಯಕ್ತಿತ್ವವನ್ನು ಇದಿಷ್ಟೇ ಎಂದು ಸರಾಗವಾಗಿ ಪರಿಚಯಿಸುವುದು ಕಷ್ಟ.
ಇಂತಿಪ್ಪ ಶೀಲಾರನ್ನು ಅಕ್ಟೋಬರ್ 02 ರ ಸಂಜೆಯಂದು ನಾನು ಹೊಸ ರೂಪದಲ್ಲಿ ನೋಡಿದಾಗ ಅಚ್ಚರಿಯಾಗದಿರಲಿಲ್ಲ. ‘ವೈಲ್ಡ್ ವೈಲ್ಡ್ ಕಂಟ್ರಿ’ ಡಾಕ್ಯುಮೆಂಟರಿಯು ತನ್ನನ್ನು ನಿರ್ದೋಷಿಯೆಂದು ಸಾಬೀತು ಮಾಡಿದೆ ಎಂದು ಶೀಲಾ ಅಂದುಕೊಂಡರೇ? ಡಾಕ್ಯುಮೆಂಟರಿಯಾಗಲಿ, ಶೀಲಾರವರು ಖುದ್ದಾಗಿ ಬರೆದಿದ್ದ ಬೆಸ್ಟ್-ಸೆಲ್ಲರ್ ಕೃತಿಯಾಗಲೀ ನಿಜಕ್ಕೂ ಅವರ ಯಾವ ಮುಖವನ್ನು ಜನರ ಮುಂದಿಟ್ಟಿತ್ತು? ಈ ವಿಶಿಷ್ಟವಾದ ಸಂಜೆಯು ಡಾಕ್ಯುಮೆಂಟರಿಯು ಹುಟ್ಟುಹಾಕಿದ್ದ ವಿವಾದವನ್ನು ಎನ್-ಕ್ಯಾಶ್ ಮಾಡಿಕೊಳ್ಳುವ ಒಂದು ವ್ಯವಸ್ಥಿತ ಪ್ರಯತ್ನವಾಗಿತ್ತೇ? ಇವೆಲ್ಲಾ ಪ್ರಶ್ನೆಗಳು ಅಂಥದ್ದೊಂದು ಅಪರೂಪದ ವಾತಾವರಣದಲ್ಲಿ ಮೂಡುವುದು ಸಹಜವೇ ಆಗಿತ್ತು.
ಉಫ್… ಇಲ್ಲಿಯ ಸೆಟಪ್ ಇಷ್ಟು ಇನ್-ಫಾರ್ಮಲ್ ಆಗಿದ್ದರೂ, ಇಳಿವಯಸ್ಸು ಆಕೆಯನ್ನು ಮೃದುವಾಗಿಸಿರುವಂತೆ ಮೇಲ್ನೋಟಕ್ಕೆ ಅನ್ನಿಸಿದರೂ, ರಂಗಪ್ರವೇಶಕ್ಕೆ ‘ರಾಕ್ ಸ್ಟಾರ್’ ಮಟ್ಟದ ಆಕರ್ಷಣೆಯಿತ್ತಲ್ವಾ? ಎಂದು ಕಣ್ಣರಳಿಸುತ್ತಿದ್ದಳು ನನ್ನ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಓರ್ವ ಯುವತಿ. ಈವರೆಗೆ ಆನಂದ್ ಶೀಲಾರ ‘ರಾಕ್ ಸ್ಟಾರ್’ ರೂಪವನ್ನು ನೋಡಿಲ್ವಲ್ಲಾ. ಇಂದು ಇದೂ ಆಗಿಹೋಗಲಿ ಬಿಡಿ, ಅಂದೆ ನಾನು.
ಇತ್ತ ತಮ್ಮ ಆಸನಗಳಲ್ಲಿ ಕುಳಿತಿದ್ದ ಆಸಕ್ತರು ಕುರ್ಚಿಯ ತುದಿಯವರೆಗೆ ಬಂದು ಈ ಅಪರೂಪದ ದೃಶ್ಯವನ್ನು ನೋಡುತ್ತಲೇ ಇದ್ದರು. ಒಂದು ಕಡೆ ಉತ್ಸಾಹಭರಿತ ಚಪ್ಪಾಳೆಯಾದರೆ, ಮತ್ತೊಂದೆಡೆ ಹೂ… ಹೂ… ಎಂಬ ಚಿಯರಿಂಗ್ ಧ್ವನಿಗಳು. ಉಳಿದವರಿಗೆ ಇಂದು ಯಾವ್ಯಾವ ಕಂಡುಕೇಳಿರದ ಕತೆಗಳು ತೆರೆದುಕೊಳ್ಳಲಿವೆಯೆಂಬ ತೀವ್ರ ಕುತೂಹಲ.
‘ವೈಲ್ಡ್ ಕಂಟ್ರಿ’ಯ ‘ವೈಲ್ಡ್ ಲೇಡಿ’ ಬಂದಾದ ನಂತರ ಇನ್ನೇನು ತಡ? ಇನ್ನೇನಿದ್ದರೂ ಖಾರ ಪ್ರಶ್ನೋತ್ತರಗಳ ಶರಪ್ರಯೋಗಗಳಿಗೆ ಮತ್ತು ಶೀಲಾರ ಎಂದಿನ ವಿಲಕ್ಷಣ ಜೋಕುಗಳಿಗೆ ವೇದಿಕೆಯು ಸಿದ್ಧವಾಗಿತ್ತು.
| ಇನ್ನುಳಿದದ್ದು ನಾಳೆಗೆ ।






0 Comments