ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓಲಾ ಬಾರ್ಸಿಲೋನಾ!- ಭಾರತದಲ್ಲಿ ಒಂದು ದಿನವೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರಲ್ಲಿಲ್ಲ..

5

”ಟ್ರಿಣ್ ಟ್ರಿಣ್” ಎಂದು ಎಲೆನಾಳ ಫೋನ್ ರಿಂಗ್ ಆಗುತ್ತಲೇ ಇತ್ತು. ಈ ಪೌ ಕ್ಲಾರೀಸಿನ ವಿಷಯ ತಿಳಿಯುವಾಗ ಗೌಹಾರಳನ್ನ ಬಿಟ್ಟು ಬಂದಿದ್ದು ಹುಡುಗಿಗೆ ನೆನಪಾಯ್ತು. ಗೌಹಾರಿಗೆ ಫೋನ್ ಹಚ್ಚಿದರೆ, ಫೋನ್ ಸ್ವಿಚ್ ಆಫ್ ಆಗಿತ್ತು. ಚೆನ್ನಾಗಿ ಕಾಣುವ ಹುಡುಗರನ್ನ ನಂಬಿಕೊಂಡು ತನ್ನ ಸ್ನೇಹಿತರನ್ನೇ ಮರೆತುಬಿಟ್ಟೆನಲ್ಲಾ ಎಂದು ಬೇಜಾರು ಮಾಡಿಕೊಂಡಳು.

ಗೌಹಾರ್ ಕಝಾಕಿನವಳಾದರೂ ಮಂಗೋಲಿಯನ್ ಹಾಗೆ ಕಾಣುತ್ತಿದ್ದಳು. ಯುರೋಪಿನವರಿಗೆ ಅವಳು ಚೈನೀಸ್ ಅಷ್ಟೆ. ಚೈನಾ ಇತ್ತೀಚೆಗೆ ಇಲ್ಲಿನ ಕತಲಾನ್ ಮತ್ತು ಸ್ಪೇನಿನ ಸರ್ಕಾರದ ವಿರುದ್ಧ ಹೋರಾಡುವವರಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಗುಮಾನಿಯೊಂದಿಗೆ ಸುಮಾರು ಜನರನ್ನ ಅನುಮಾನದ ಮೇರೆಯೇ ಜೈಲಿಗೆ ಹಾಕುತ್ತಿದ್ದರು.

ಹುಡುಗಿ ಇವೆಲ್ಲವನ್ನ ಒಮ್ಮೊಮ್ಮೆ ಫೋನಿನಲ್ಲಿ ಅವಳ ತಾತನ ಓರಗೆಯವರಿಗೆ ಹೇಳುವಾಗ, ಎಮರ್ಜನ್ಸಿ ಸಮಯದಲ್ಲಿ ಭಾರತದಲ್ಲಿಯೂ ಹೀಗೆಯೆ ಆಗಿತ್ತು ಎಂದು ಅನ್ನುತ್ತಿದ್ದರು. ಹುಡುಗಿ ಮಾತ್ರ ಭಯ ಪಟ್ಟುಕೊಂಡೇ ಮತ್ತೆ ಎಲೆನಾಗೆ ಕರೆ ಮಾಡಿದ್ದಳು. ಅವಳ ಫೋನ್ ಸ್ವಿಚ್ ಆಫ್ ಆಗಿತ್ತು.

ಓಹ್ ಏನ್ ಕಥೆ ಎಂದು ಯೋಚಿಸುತ್ತಾ ನಿಂತಿದ್ದಳು. ಟಿಯರ್ ಗ್ಯಾಸ್, ಗುಂಡಿನ ಶಬ್ಧದ ಮಧ್ಯೆ ದೊಡ್ಡ ನಾಲ್ಕು ಪೊಲಿಸ್ ವ್ಯಾನ್ ಬಂದು ಅಲ್ಲಿದ್ದ ಸುಮಾರು ಜನರನ್ನ ಎತ್ತಾಕಿಕೊಂಡು ಹೋಯಿತು. ಎಂಥ ಸಾವು ಮಾರಾಯ ಇದು ಥೇಟ್ ಟೀವಿಯಲ್ಲಿ ತೋರಿಸಿದ ಹಾಗೆ ಇದೆಯಲ್ಲಾ ಎಂದು ಗೌಹರಿಗೆ ಮೆಸೇಜು ಕಳಿಸಿ ಮನೆಗೆ ಹೋದಳು..

ಮನೆಗೆ ಹೋಗುವಷ್ಟರಲ್ಲಿ ಅವಳ ಮನೆಯೊಡತಿ ಅತ್ತುಕೊಂಡೇ ಬಾಗಿಲು ತೆಗೆದಳು, ಗೌಹರ್ ಪೊಲೀಸ್ ಠಾಣೆಯಲ್ಲಿದ್ದಾಳೆ ಎಂದು ಜೋರಾಗಿ ಅಳಲು ಶುರುಮಾಡಿದ್ದಳು. ಅವಳನ್ನ ಆ ಜಾಗಕ್ಕೆ ಕರೆದುಕೊಂಡು ಹೋಗಿದ್ದೇ ತಪ್ಪಾಯಿತು ಎಂದು ಮನಸಿನಲ್ಲಿಯೇ ಅಂದುಕೊಂಡು ಅವಳ ರೂಮಿಗೆ ಹೋಗಿ ಅವಳ ಪಾಸ್ಪೋರ್ಟನ್ನ ತೆಗೆದು ಇಬ್ಬರೂ ಪೊಲೀಸ್ ಠಾಣೆಯ ಹತ್ತಿರ ಹೋದರು.

ಒಂದು ದಿನ ಭಾರತದಲ್ಲಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರಲ್ಲಿಲ್ಲ, ಪಾಸ್ ಪೋರ್ಟ್ ವೆರಿಫಿಕೇಷನ್ ಸಹ ಅವರೇ ಬಂದು ಮಾಡಿದ್ದರು. ಒಂದು ಟ್ರಾಫಿಕ್ ಫೈನ್ ಕಟ್ಟಿಲ್ಲ, ಒಮ್ಮೆಯೂ ಕೋರ್ಟ್ ಮೆಟ್ಟಲೇರಿರಲ್ಲಿಲ್ಲ, ಏನಪ್ಪಾ ಈ ದೇಶಕ್ಕೆ ಬಂದು ನನ್ನ ಕರ್ಮ ಎಂದು ಅಂದುಕೊಂಡೇ ಠಾಣೆಗೆ ಹೋದಳು.

ಭಾರತದಲ್ಲಿ ತೋರಿಸಿದ ಹಾಗೆ ಒಂದು ಲಾಕಪ್, ಕಾನ್ಸ್ಟೇಬಲ್ಲು, ಬೇಡಿ, ಲಾಠಿ, ಗನ್ನು ಏನೂ ಕಾಣಲ್ಲಿಲ್ಲ. ಸುಸಜ್ಜಿತ ಕಾರ್ಪೊರೇಟ್ ಆಫೀಸಿದ್ದಂಗಿತ್ತು. ಪ್ರತಿ ಜೈಲಿಗೂ ಒಂದು ಕ್ಲೋಸ್ಡ್ ಅಟ್ಯಾಚ್ಡ್ ಟಾಯ್ಲೆಟ್ ಇತ್ತು.

ನಿಧಾನಕ್ಕೆ ಅವಳ ಮನೆಯೊಡತಿ ಎಲ್ಲಾ ವಿಚಾರಿಸಿ, ಅವಳು ಸೀತಾಮಾತೆಯ ಪ್ರತಿರೂಪ, ಅವಳಷ್ಟು ಒಳ್ಳೆಯ ಹುಡುಗಿಯನ್ನು ನಾನು ನೋಡೇ ಇಲ್ಲ, ಮುಸ್ಲಿಮ್ ಆದರೂ ಯಾವ ಭಯವೂ ಇಲ್ಲ, ೧ನೇ ತಾರೀಖಿಗೆ ಸರಿಯಾಗಿ ಬಾಡಿಗೆ ಕಟ್ಟುತ್ತಾಳೆ, ಅವಳಮ್ಮ ನನಗೆ ಸ್ವೆಟರ್ ಕಳಿಸಿದ್ದಾಳೆ, ಅದು ಇದು ಎಂದು ಹೋದವಾರ ಮೀನಿನ ಪಾತ್ರೆಗೆ ಜಗಳ ಆಡಿದ್ದನ್ನ ಮರೆತು ಹೇಳಿದಳು.

ಮಾ ನೀನಾ ಮಾ ನೀನಾ ಎಂದು ಪ್ರತಿ ವಾಕ್ಯದ ನಂತರ ಹೇಳಿದಳು. ನೀನಾ ಎಂದರೆ ಮಗಳೆಂದರ್ಥ. ಇವಷ್ಟನ್ನೂ ರೈಟಿಂಗಿನಲ್ಲಿ ಬರಿ ಎಂದು ಪೊಲೀಸ್ ಮುಲಾಜಿಲ್ಲದೇ ಹೇಳಿದ. ಅವಳನ್ನ ಮತ್ತೆ ಹೀಗೆ ಪ್ರತಿಭಟನೆಯ ಗುಂಪಿನಲ್ಲಿ ನೋಡಿದರೆ ನಿನ್ನ ಬಾಡಿಗೆಯ ಪರವಾನಗಿ ರದ್ದುಮಾಡಿ , ಮತ್ತು ಅವಳನ್ನ ಗಡಿಪಾರು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ ಪೊಲೀಸ್ ಮಹಾಶಯ.

ಮನೆಯೊಡತಿ ಹುಡುಗಿಯ ಮುಖ ನೋಡಿ, ಇವಳಿಂದಲೇ ಅವಳು ಹೋಗಿದ್ದು, ಇವಳ ಇಂಡಿಯನ್ ಅಡುಗೆಯಿಂದಲೇ ಎಲ್ಲಾ ಆಗಿದ್ದು ಎಂದು ಮೂತಿ ತಿವಿದು ಬರೆಯಲು ಶುರು ಮಾಡಿದಳು. ಹುಡುಗಿಗೆ ಎಲ್ಲಿ ಇತ್ತೋ ರೋಷ, ಇದೇ ಏನ್ರಿ ನಿಮ್ಮ ಡೆಮಾಕ್ರಸಿ, ಸುಮ್ಮನೆ ಗುಂಪಲ್ಲಿ ಕಾಣಿಸಿಕೊಂಡವರನ್ನ ಒಳಗೆ ಹಾಕುತ್ತೀರಲ್ಲಾ, ನಮ್ಮ ದೇಶದ ಮಿನಿಸ್ಟರಿಗೆ ಟ್ವೀಟ್ ಮಾಡಿದರೆ ಸಾಕು, ನಿಮ್ಮ ಮರ್ಯಾದೆಯೆಲ್ಲಾ ಮೂರು ಕಾಸಿಗೆ ಹರಾಜಾಗುತ್ತದೆ, ರಾಂಬ್ಲಾಸಲ್ಲಿ ಎಷ್ಟು ಜನ ಕಳ್ಳರಿದ್ದಾರೆ ಅವರನ್ನ ಹಿಡಿಯೋದು ಬಿಟ್ಟು ಬರೀ ಇಂಥದ್ದು ಮಾಡಿ.. ಎಂದು ಪಟಪಟನೆ ಇಂಗ್ಲೀಷಿನಲ್ಲಿ ಬೈಯಲು ಶುರುಮಾಡಿದಳು.

‘ಪಾಕಿ’ ಎಂದು ಪೊಲೀಸಿನವನೂ ಅಂದ. ಒಂದು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದಳು , ಓಹ್ ಇಂದೂ , ಸಿ ಸಿ ಎಂದು ಸುಮ್ಮನಾದ. ಅಲ್ಲಿನ ಪೊಲೀಸರಿಗೂ ಸಂದಿಗ್ಧ. ಅವರು ಕತಲನಾದರೂ ಅವರ ಜನದ ವಿರುದ್ಧ ಹೋರಾಡಲೇ ಬೇಕು ಯಾಕೆಂದರೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಅವರಿಗೆ ಇದೆ .

ಒಂದು ಕಡೆ ದೇಶ, ಮತ್ತೊಂದು ಕಡೆ ಇವರ ಕರ್ತವ್ಯ ಯಾವುದನ್ನೂ ಬಿಡದೇ ಅವರ ಕೆಲಸ ಅವರು ಮಾಡುತ್ತಲೇ ಇರಬೇಕು. ಹೀಗೆಂದುಕೊಂಡೇ ಗೌಹರ್ಳನ್ನ ನೋಡಲು ಒಳ ಹೋದಳು. ಅಲ್ಲಿ ಅವಳ ಹಾಗೆ ಗಂಡಸರು, ಹೆಂಗಸರು ಇದ್ದರೆ. ಎಲ್ಲರೂ ಅವರವರ ಜನರ ಬರುವಿಕೆಗಾಗಿ ಕಾಯುತ್ತಿದ್ದರು. ಇಲ್ಲ ಕೆಲವು ಲಾ ವಿದ್ಯಾರ್ಥಿಗಳು ಇನ್ನೂ ಅಲ್ಲೇ ಘೋಷಣೆ ಕೂಗುತ್ತಿದ್ದರೆ. ‘ಒಲಾ ಸೆನೊರೀಟಾ’ ಎಂದು ಪರಿಚಿತ ಧ್ವನಿ ಕೇಳಿಸಿತು. ಹಿಂದೆ ತಿರುಗಿದರೆ ಎಲೆನಾ…

‘ಉಶಪ್ಪಾ ಏನು ನಿನ್ನ ಕಥೆ’ ಎಂದು ನಕ್ಕಳು. ‘ಇದು ೪ ಜಿ ಜೈಲುವಾಸ’ ಎಂದು ಖುಷಿಯಾಗೇ ಅಂದಳು. ಅವಳ ಮುತ್ತಾತ, ತಾತ, ಅಜ್ಜಿ, ಅಪ್ಪ ಮತ್ತು ಅಮ್ಮ ಕತಲೂನ್ಯಾದ ಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿದ್ದರಂತೆ. ಜೈಲು ಬೇಲು ಯಾವುದೂ ಹೊಸದಲ್ಲ ಎಂದು ಹೇಳುತ್ತಲಿದ್ದಳು. ಅವಳನ್ನ ಇನ್ನಷ್ಟು ವಿಚಾರಣೆ ಮಾಡಿದ ಮೇಲೆ ಬಿಡುವ ಹಾಗೆ ಕಾಣುತ್ತಿತ್ತು.

ನೋಡು ಹುಡುಗಿ, ಹಳೇ ಕಥೆಯ ಹಾಗೆ ನಮ್ಮ ದೇಶಕ್ಕಾಗಿ ನಾವು ಹೋರಾಡುವ ಬದಲು ಮತ್ಯಾರೋ ಹೋರಾಡಿ ಅವರ ಪಾಲಿಗೆ ದೇಶ ಹೋದುದ್ದರ ಹಾಗೆ ಆಗಿದೆ ನಿನ್ನ ಮತ್ತು ಗೌಹಾರಳ ಕಥೆ ಎಂದು ನಕ್ಕಳು. ನೋ ನೋ ನನ್ನನ್ನ ಜೈಲಿಗೆ ಹಾಕಿಲ್ಲ, ನಾನು ಅವಳನ್ನ ನೋಡಲು ಬಂದೆ ಎಂದು ಸಮಜಾಯಿಷಿ ಹುಡುಗಿ ಹೇಳಿದರೂ ಸಹ, ಎಲೆನಾ ನಕ್ಕು, ಜೈಲಿಗೆ ಹೋದೋರೆಲ್ಲಾ ಕ್ರಿಮಿನಲ್ಸಾ ಹಾಗಾದ್ರೆ. ನಿಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಆಗಿಲ್ವಾ ಹೇಳು ನೀನೆ ಎಂದು ಮರು ಪ್ರಶ್ನೆ ಹಾಕಿದಳು.

ಹುಡುಗಿ ಎಷ್ಟೆ ಸ್ವಾತಂತ್ರ್ಯ ಅದು ಇದು ಎಂದು ಮಾತಾಡಿದರು ಅವಳಿಗೆ ಪೊಲೀಸ್, ಈ ಕೋರ್ಟಿನ ಬಗ್ಗೆ ತುಂಬಾ ಮಡಿವಂತಿಕೆ ಇತ್ತು. ದುಡ್ಡಿದ್ದವರು, ಜನ ಗೊತ್ತಿದ್ದವರಿಗೆ ನ್ಯಾಯ ನೀತಿ ಧರ್ಮವೆಲ್ಲಾ, ಮಿಕ್ಕವರಿಗೆ ಇಲ್ಲ ಎಂದು ಕೆಲವು ವಿಷಯಗಳಿಂದ ಕಂಡುಕೊಂಡಿದ್ದಳು.

ಗೌಹರ್ ಸಿಕ್ಕು, ಅವಳನ್ನ ಮನೆಗೆ ಕರೆದುಕೊಂಡು ಹೋಗಲು ತಯಾರಾದಾಗ, ಮಿಲಿಟರಿಯವರು ಮೂವರನ್ನು ತಡೆದರು. ಸೆಡೇಶನ್ ವಿಷಯವಾಗಿ ಇವಳನ್ನ ಒಳಗೆ ಹಾಕಿದ್ದರಿಂದ ಬೇರೆ ಪ್ರೊಸೀಜರ್ಸ್ ಮಾಡಬೇಕಿತ್ತು. ಜಾನ್ ಸೆಬಾಸ್ಟಿಯನ್ ಅವರ ವೆರಿಫಿಕೇಶನ್ ಮಾಡುತ್ತಲಿದ್ದರು.

ಜಾನ್ ಹುಡುಗಿ ಇದ್ದ ಬದ್ದ ನೋಟೀಸನ್ನ, ಚರಿತ್ರೆಯ ಸ್ನಿಪ್ಪೆಟ್ಟುಗಳನ್ನ ಓದುತ್ತಿದ್ದನ್ನು ನೋಡಿ, ಈ ಫೋಟೋ ಸ್ಪಾನಿಷ್ ವಾರ್ ಆಫ್ ಸಕ್ಸೆಷನ್ನದ್ದು. ಇವನು ಎರಡನೇ ಚಾರ್ಲ್ಸ್ ಎಂದು ಚರಿತ್ರೆಯ ಮೇಷ್ಟ್ರ ಹಾಗೆ ಪಾಠ ಮಾಡುತ್ತಿದ್ದರು.

ನಮ್ಮಲ್ಲಿ ಗಾಂಧೀಜಿ, ಅಂಬೇಡ್ಕರ್ ಫೋಟೊ ಮತ್ತೆ ಇನ್ಯಾರದ್ದೋ ಫೋಟೋ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಹಾಕಬೇಕಾದರೆ ಎಷ್ಟು ಗಲಾಟೆಯಾಗುತ್ತೋ ಅಷ್ಟೆ ಗಲಾಟೆ ಇಲ್ಲೂ ಆಗುತ್ತಿತ್ತು. ಕಾರಿಡಾರಿನಲ್ಲಿ ಓಡಾಡುತ್ತಿದ್ದ ಒಬ್ಬ ಹೋರಾಟಗಾರ ಆ ಎರಡೂ ಫೋಟೋಗೂ ಹುಡುಗಿಯ ಕಣ್ಣ ಮುಂದೆಯೇ ಚಪ್ಪಲಿ ಬಿಸಾಕಿ ಗಾಜು ಒಡೆದ.

ಜಾನ್ ಮಾತಾಡುತ್ತಾ ಹೇಳುತ್ತಾ ಇದ್ದರು, ನೋಡಿ ೧೭ನೇ ಶತಮಾನದಲ್ಲಿ ಕತಲೂನ್ಯ ಇಂಗ್ಲೆಂಡಿಗೆ ಮತ್ತು ಡಚ್ಚರಿಗೆ ವೈನ್ ಆಮದು ಮಾಡಿ ಮಾಡಿ ತಮ್ಮ ಹಣಕಾಸಿನ ವ್ಯವಸ್ಥೆಯನ್ನ ಚೆನ್ನಾಗಿ ಇಟ್ಟುಕೊಂಡಿದ್ದರು. ಅರ್ಧ ಫ್ರಾನ್ಸ್ ಮತ್ತು ಅರ್ಧ ಸ್ಪೇನಿನವರು ಆಳುತ್ತಿದ್ದರಲ್ಲವಾ, ಅರ್ಧರ್ಧ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದರು.

ಫ್ರಾನ್ಸಿನ ಸಚಿವ ಜೀನ್ ಬ್ಯಾಪ್ಟಿಸ್ಟೆ ಕಾಲ್ಬೆರ್ಟಿಗೆ ಆಮದಿನ ವಿಚಾರದಲ್ಲಿ ಡಚ್ಚರ ಜೊತೆ ವಾಗ್ಯುದ್ಧವಾಯಿತು. ಡಚ್ಚರು ಫಾನ್ಸಿನ ವಿರುದ್ಧ ೯ ವರ್ಷಗಳ ಯುದ್ಧದಲ್ಲಿಯೂ ಭಾಗಿಯಾಗಿದ್ದರು. ಹೀಗಾಗಿ ಇಂಗ್ಲೆಂಡಿನ ಜೊತೆ ಆಮದು ವ್ಯವಹಾರ ಮಾತ್ರ ಇಟ್ಟುಕೊಳ್ಳಬೇಕಾಯಿತು.

ಮಕ್ಕಳಿಲ್ಲದ ಎರಡನೇ ಚಾರ್ಲ್ಸ್ ಸತ್ತ ನಂತರ ಬಾರ್ಬನ್ ಮನೆತನದ ಐದನೇ ಫಿಲಿಪ್ಸ್ ನ ಗದ್ದುಗೆಗೆ ಏರಿಸಿದರು. ಆದರೆ ಇಂಗ್ಲೆಂಡು, ಆಸ್ಟ್ರಿಯಾ ಮತ್ತು ಯುನೈಟೆಡ್ ರಿಪಬ್ಲಿಕ್ ಎಂದು ಕರೆಯುವ ಡಚ್ಚರು ಹಾಬ್ಸ್ಬರ್ಗ್ ಮನೆತನದ ಮೂರನೇ ಚಾರ್ಲ್ಸ್ ನನ್ನ ಬೆಂಬಲ ಕೊಟ್ಟು ಸುಮ್ಮನೆ ಒಂದು ದಂಗೆ ಎಬ್ಬಿಸಿದರು.

ಆಮೇಲೆ ಕತಲೂನ್ಯಾದ ಕೋರ್ಟಿನಲ್ಲಿ ಫಿಲಿಪ್ಸ್ ನನ್ನೇ ರಾಜನಾಗಿ ಒಪ್ಪಿಕೊಳ್ಳೋದಕ್ಕೆ ಒಂದಷ್ಟು ಷರತ್ತುಗಳನ್ನು ಹಾಕಿ ೧೭೦೧ ರಿಂದ ೧೭೦೨ ರವರೆಗೆ ನಿರಂತರ ಹೋರಾಟ ಮಾಡಿ ಕತಲೂನ್ಯಾಗೆ ಎಲ್ಲಾ ಸ್ವಾಯತ್ತತೆವನ್ನ ಕಾಪಾಡಿಕೊಂಡರು. ಬಾರ್ಸಿಲೋನಾದ ಬಂದರನ್ನ ಫ್ರೀ ಬಂದರೆಂದು ಘೋಷಿಸಲಾಯಿತು.

ಅಮೇರಿಕಾದವರ ಜೊತೆಗೆ ಸಹ ಅವರ ವ್ಯಾಪಾರ ಮುಂದುವರಿಸಲಾಗುತ್ತಿತ್ತು. ಮೆಲ್ಲಗೆ ಬಲ್ಜಿಯಂ, ದಕ್ಷಿಣ ಆಸ್ಟ್ರಿಯಾವನ್ನ ಫಿಲಿಪ್ ಯುದ್ಧದಲ್ಲಿ ಕಳೆದುಕೊಂಡ. ಈ ಸ್ಪ್ಯಾನಿಷ್ ವಾರ್ ಆಫ್ ಸಕ್ಸೆಷನ್ ಎಂದು ಕರೆಯುವ ಈ ಯುದ್ಧದಲ್ಲಿ ಚಾರ್ಲ್ಸ್ ಗೆದ್ದ.

೧೭೦೧ ರಿಂದ ೧೭೧೪ ನಡೆದ ಭೀಕರ ಯುದ್ಧದಲ್ಲಿ ಚಾರ್ಸ್ಲಿನ ಎಕ್ಸ್ಟರ್ನಲ್ ಅಫೇರ್ಸ್ ಮುಂದುವರೆಯಿತೇ ಹೊರತು, ವೆಲೆನ್ಶಿಯಾ, ಕತಲನ್ ಮತ್ತು ಅರಗನ್ನರಿಗೆ ಒಂದು ಇನಿತೂ ಉಪಯೋಗವಾಗಲ್ಲಿಲ್ಲ. ೧೭೧೩ ರಲ್ಲಿ ಸಹಿ ಮಾಡಿದ ಯೂಟರೆಕ್ಟಿನ ಒಪ್ಪಂದವೂ ಬಾರ್ಬನ್ ಮನೆತನದವರ ಹಿಂಸೆಯನ್ನ ಕಡಿಮೆ ಮಾಡಲು ಆಗಲಿಲ್ಲ. ಬಾರ್ಸಿಲೋನಾ ಕತಲೂನ್ಯಾದ ರಾಜಧಾನಿಯೆಂದು ಘೋಷಿಸಿದ್ದನ್ನ ಹಿಂತೆಗೆದುಕೊಳ್ಳಲಾಯಿತು.

ರಾಜನನ್ನ ಮತ್ತು ಗದ್ದುಗೆಯನ್ನ ಕಟುವಾಗಿ ಟೀಕಿಸುವವರಿಗೆ ಸೆಡೀಷನ್ ಕಾನೂನು ತಂದು ಎಲ್ಲರನ್ನೂ ಒಳಗೆ ಹಾಕಲು ಶುರು ಮಾಡಿದರು. ಕತಲನ್ನರು. ವೆಲೆಂಷಿಯಾ ಮತ್ತು ಅರಗನ್ನರ ಸ್ವಾಯತ್ತತ್ತೆಯನ್ನು ಕಿತ್ತೊಗೆದು ಕೋರ್ಟು, ಕಚೇರಿಯೆಲ್ಲವನ್ನ ತೆಗೆದು ಕಾಸ್ಟಿಲನ್ನರ ಕಾನೂನ್ನನ್ನ ಪ್ರತಿಷ್ಠಾಪನೆ ಬಲವಂತವಾಗಿ ಮಾಡಿದ್ದರು.

ಇವರ ಭಾಷೆ, ಸಂಸ್ಕೃತಿ ಮತ್ತು ಅವರ ವಿಶ್ವವಿದ್ಯಾಲಯವನ್ನೂ ಬಂದ್ ಮಾಡಿ ಕತಲಾನ್ ಎಂಬ ಭಾಷೆಯನ್ನೇ ನಿಷೇಧ ಮಾಡಿ ಅವರಿಗೆ ಬಲವಂತವಾಗಿ ಸ್ಪ್ಯಾನಿಷ್ ಭಾಷೆಯನ್ನು ಹೇರಿದರು… ಎಂದು ಹೇಳುವಷ್ಟರಲ್ಲಿ ಠಾಣೆಯಲ್ಲೇ ಪೊಲೀಸಿನವರ ಬಂದೂಕು ಕಿತ್ತುಕೊಂಡ ಹೋರಾಟಗಾರ ಅವನ್ನನ್ನೇ ಸುಟ್ಟುಹಾಕಿಕೊಳ್ಳುವೆ ಎಂದು ಡ್ರಾಮಾ ಶುರು ಮಾಡಿದ…

ಅವರ ಭಾಷೆಯನ್ನೇ ಕಿತ್ತುಕೊಂಡ ಜನರನ್ನ ಹೀಗೆ ನಡೆಸಿಕೊಳ್ಳಬೇಕೋ, ಅಥವಾ ಭಾಷೆಯನ್ನೇ ಬಿಡಬೇಕೋ ಎಂಬ ಗೊಂದಲದಲ್ಲಿರುವ ಜನರ ದುಃಖ ಹುಡುಗಿಗೆ ಅರ್ಥವಾಯಿತು. ಅವಳ ಬ್ಲೂ ಪಾಸ್ ಪೋರ್ಟ್ ನೋಡುತ್ತಾ ನಿಂತಳು….

ಮುಂದೆ ಗೌಹಾರ್ ಬಂದು ಬೆನ್ನು ತಡವಿದಾಗಲೇ ಅವಳು ಜಾಗೃತವಾದದ್ದು… ಅವಳೂ ಕತಲಾನ್ ನ್ಯಾಷನಲಿಸ್ಟ್ ಆಗೋದಾ ಎಂದು ಯೋಚಿಸುತ್ತಾ ಹೋದಳು…

‍ಲೇಖಕರು

14 December, 2019

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading