ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದು ಜನಮೇಜಯ : ಶಿಕ್ಷಣದಲ್ಲಿ ಅದಕ್ಕಿಂತಲೂ ಹೆಚ್ಚು ಜೀವನದಲ್ಲಿ rank ಪಡೆಯಲು ಸಾಹಿತ್ಯ ಓದಿ

(ಇಲ್ಲಿಯವರೆಗೆ…)

ಇತ್ತೀಚೆಗೆ ಫೇಸ್ ಬುಕ್ ನಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಪುಸ್ತಕಗಳು ಯಾವುವು ಎಂದು ನಡೆದ ಒಂದು ಖೋಖೋ ಆಟದಲ್ಲಿ ಬಹಳ ಜನರ ಪಟ್ಟಿಯಲ್ಲಿ ಸಾಹಿತ್ಯದ ಪುಸ್ತಕಗಳೇ ರಾರಾಜಿಸಿದವು . ಬೇರೇ ಪುಸ್ತಕಗಳನ್ನು ಹೆಸರಿಸಿದ್ದು ಕೆಲವೇ ಕೆಲವರು. ನನಗೆ ಸಾಹಿತ್ಯೇತರ ಪಠ್ಯೇತರ ಪುಸ್ತಕಗಳೂ ಬಹಳ ಆಸಕ್ತಿಕರವಾಗಿ ಕಂಡಿವೆ. ನನ್ನ ವ್ಯಕ್ತಿತ್ವವನ್ನು ರೂಪಿಸಿವೆ. ಮನರಂಜನೆಯನ್ನೂ ನೀಡಿವೆ. ಗಣಿತದ ಪುಸ್ತಕಗಳೂ ಕೂಡ. ಈ ಓದು ಕೂಡ ನನಗೆ ಸಣ್ಣ ಪ್ರಮಾಣದಲ್ಲಿಯೇ ಆದರೂ ಹೈಸ್ಕೂಲ್ ಹಂತದಲ್ಲಿಯೇ ಆರಂಭವಾಯಿತು.
ನಾನು ಎಲ್ಲಿಗೆ ಹೋದರೂ , ಯಾರ ಮನೆಗೆ ಹೋದರೂ ಸಿದುಗುವುದು ಒಂದು ಅಭ್ಯಾಸವಾಗಿಬಿಟ್ಟಿದೆ., ಪುಸ್ತಕಗಳಿಗಾಗಿ. ಒಳ್ಳೆಯ ಪುಸ್ತಕಗಳ ಸಂಗ್ರಹವನ್ನು ಕಂಡೆನೋ ನನ್ನ ಮುಂದಿನ ಕಾರ್ಯಕ್ರಮ ಮುಂದೂಡಲ್ಪಟ್ಟಿತು ಎಂದೇ ಅರ್ಥ. ಹೈಸ್ಕೂಲು ಹಂತದಲ್ಲಿಯೇ ಬೆರೆಯವರ ಮನೆಗೆ ಹೋದಾಗ ಪುಸ್ತಕಗಳಿಗಾಗಿ ಹುಡುಕಾಡುತ್ತಿದ್ದೆ . ಆಗೆಲ್ಲಾ ಅಲ್ಲಿ ಯಾವ ಸಾಹಿತ್ಯದ ಪುಸ್ತಕಗಳೂ ಕಾಣುತ್ತಿರಲಿಲ್ಲ. ಸಾಮಾನ್ಯವಾಗಿ ಕಾಣುತ್ತಿದ್ದ ಪುಸ್ತಕಗಳು ಆ ಮನೆಯ ಹಿರಿಯರ ಶಾಲಾ ಪಠ್ಯ ಪುಸ್ತಕಗಳು ಮಾತ್ರ ಅದನ್ನು ಅವರು ಕಾದಿರಿಸಿದ್ದರೆ. ನಾನು ಅವುಗಳನ್ನೇ ಬೇಡಿ ಹೊತ್ತುಕೊಂಡು ಬರುತ್ತಿದ್ದೆ. ಹತ್ತಾರು ವರ್ಷಗಳ ಹಿಂದಿನ ಭೂಗೋಳ, ಚರಿತ್ರೆ , ಕೆಲ ವಿಜ್ಞಾನ , ಅಪರೂಪಕ್ಕೆ ಒಂದೆರಡು ಗಣಿತ ಪುಸ್ತಕಗಳು ಕೂಡ. ನಾನು ಅವುಗಳನ್ನೂ ಆಸಕ್ತಿಯಿಂದ ಓದುತ್ತಿದ್ದೆ . ಅಲ್ಲಿ ನೀಡಿದ ವಿವರಗಳು, ನಿರೂಪಣೆಯ ಭಿನ್ನ ರೀತಿ . ಇವುಗಳನ್ನು ಪಠ್ಯ ಪುಸ್ತಕಗಳ ಜೊತೆಯಲ್ಲಿಯೇ ಸೇರಿಸಬಿಡಬಹುದು ಹಲವರು. ಆದರೆ ಇಂತಹ ಪುಸ್ತಕಗಳ ಒಳಗಿದ್ದ ವಿವರಗಳು ನಮ್ಮ ಻ಂದಿನ ಪಠ್ಯ ಕ್ರಮಕ್ಕೆ ಹೊರಗಿನವಾಗಿರುತ್ತಿದ್ದವು. ಆದರೂ ನನಗೆ ಕುತೂಹಲವುಂಟು ಮಾಡುತ್ತಿದ್ದವು . ಇವುಗಳನ್ನೂ ನನ್ನ ಪಠ್ಯೇತರ , ಸಾಹಿತ್ಯೇತರ ಓದಿಗೇ ಸೇರಿಸುತ್ತೇನೆ. ಆ ಸಮಯದಲ್ಲಿ ನನಗೆ ಸಿಕ್ಕ ಪ್ರಸಿದ್ಧ ಗ್ರೀಕ್ ರೇಖಾಗಣಿತ ಶಾಸ್ತ್ರಜ್ಞ ಯೂಕ್ಲಿಡ್ ನ ಪುಸ್ತಕ ಸಿಕ್ಕಿತು. ಅದೊಂದು ನಿಧಿಯೇ ಸಿಕ್ಕಂತಾಯಿತು. ಅದನ್ನೂ ಒಂದೇ ಓದಿಗೆ ಓದಿ ಬಿಟ್ಟೆ. ಮತ್ತು ಹಲವು ದಿನಗಳ ಕಾಲ ವರ್ಕ್ ಮಾಡಿದೆ . ಅದು ನನಗೆ ಬಹಳ ಖುಷಿ ಕೊಟ್ಟಿತು. ಒಂದು ತರಾ ಒಳ್ಳೆಯ ಕಾದಂಬರಿ ಓದಿದಂತೆಯೇ ಮನಸ್ಸು ಅರಳಿತು. ಇದನ್ನು ನನ್ನ ಮೇಲೆ ಪ್ರಭಾವ ಬೀರಿದ , ಮನರಂಜನೆ ನೀಡಿದ ಮರೆಯಲಾಗದ ಪುಸ್ತಕಗಳ ಪಟ್ಟಿಗೆ ಸೇರಿಸಬಾರದೇ ? ನಾನಂತೂ ಸೇರಿಸುತ್ತೇನೆ.
ಹೈಸ್ಕೂಲ್ ಹಂತದಲ್ಲಿ ಸಾಮಾನ್ಯವಾಗಿ ಜನಪ್ರಿಯ ಕಾದಂಬರಿಕಾರರೆಂದು ಪ್ರಸಿದ್ಧಿ ಪಡೆದ ನಾನು ಅನಕೃರವರ , ತರಾಸುರವರ ಸರಿಸುಮಾರು ಎಲ್ಲಾ ಕಾದಂಬರಿಗಳನ್ನು ಓದಿದೆ. ತ್ರಿವೇಣಿಯವರ ಕಾದಂಬರಿಗಳನ್ನೆಲ್ಲಾ ಓದಿ ಮುಗಿಸಿದೆ. ಕೊರಟಿ ಮೊದಲಾದವರು ಬರೆದ ಐತಿಹಾಸಿಕ ಕಾದಂಬರಿಗಳನ್ನು ಕೂಡ .ಅದರಲ್ಲಿ ನನ್ನನ್ನು ನೆನಪಿರುವುದು ಅನಕೃರವರ ಸಂಧ್ಯಾರಾಗ , ಉದಯರಾಗ ಮೊದಲಾದ ಸಂಗೀತಗಾರ ಪ್ರಧಾನ ಕಾದಂಬರಿಗಳು , ಗೋರ್ಕಿಯವರ ತಾಯಿ ಕಾದಂಬರಿಗೆ ಪ್ರತಿ ಎಂಬಂತೆ ಬರೆದ ಅನಕೃರವರ ತಾಯಿ ಎಂಬರ್ಥದ ಹೆಸರಿನ ಕಾದಂಬರಿ , ಅಂದು ದೊಡ್ಡ ವಿವಾದ ಹುಟ್ಟು ಹಾಕಿದ ನಗ್ನ ಸತ್ಯ , ಶನಿಸಂತಾನ, ಅವರ ಕಥೆಗಳು. ತರಾಸುರವರ ಅಂದು ಪ್ರಕಟವಾಗಿದ್ದ ಕಾದಂಬರಿಗಳು ಅವರ ಚಿತ್ರದುರ್ಗ ಪಾಳೆಯಗಾರರ ಇತಿಹಾಸದ ಸರಣಿ-ಕಂಬನಿಯ ಕುಯಿಲು, ರಕ್ತರಾತ್ರಿ , ತಿರುಗುಬಾಣ , ಹೊಸ ಹಗಲು , ವಿಜಯೋತ್ಸವ ಮತ್ತು ಹಂಸಗೀತೆ. ಅವರ ಇತರ ಕಾದಂಬರಿಗಳಲ್ಲಿ ನನಗೆ ಶಿಲ್ಪಶ್ರೀ ಮಾತ್ರ ನೆನಪಿದೆ. ಇವೆಲ್ಲಾ ನನಗೆ ಇತಿಹಾಸದ ಬಗ್ಗೆ ಎಂದೂ ಅಳಿಯದ ಆಸಕ್ತಿಯನ್ನು ಮೂಡಿಸಿದವು . ನಾನು ಭಾರತದ ಹಾಗೂ ಕರ್ನಾಟಕದ ಪ್ರಸಿದ್ಧ ಇತಿಹಾಸಕಾರರ ಕೃತಿಗಳನ್ನು ಅಧ್ಯಯನ ಮಾಡುವುದು ಮಾತ್ರವೇ ಅಲ್ಲದೆ ಚರಿತ್ರೆ ಶಾಸ್ತ್ರಕ್ಕೆ ಸಂಬಂಧಿಸಿದ ವಿಶ್ವದ ಕೆಲ ಕೃತಿಗಳನ್ನು ಕೂಡ . ಇವು ಕರ್ನಾಟಕದ ಜನೇತಿಹಾಸದ ಬಗ್ಗೆ ಅಂದರೆ ರಾಜರ ಇತಿಹಾಸಕ್ಕಿಂತ ಭಿನ್ನವಾಗಿ ಜನರ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನಕ್ಕೆ ಕೈ ಹಾಕುವುದಕ್ಕೂ ಆರಂಭದ ಸ್ಪೂರ್ತಿ ಇವುಗಳಿಂದಲೇ ಸಿಕ್ಕಿತೆನ್ನಬಹುದು. .ತ್ರಿವೇಣಿಯವರ ಮನಶ್ಶಾಸ್ತ್ರ ಆಧಾರಿತ ಕಾದಂಬರಿಗಳು ನನಗೆ ಹೊಸ ಲೋಕವನ್ನೇ ತೆರೆದವು. ಮುಚ್ಚಿದ ಬಾಗಿಲು , ಬೆಕ್ಕಿನ ಕಣ್ಣು , ಶರಪಂಜರ ಮತ್ತು ಕಥೆಗಳು ಅವರ ಇತರ ಕಾದಂಬರಿಗಳು ಕೂಡ ಪಾತ್ರಗಳ ಮಾನಸಿಕ ಲೋಕವನ್ನು ಚಿತ್ರಿಸಿವೆ. ಹಣ್ಣೆಲೆ ಚಿಗುರಿದಾಗ , ಕಾಶೀ ಯಾತ್ರೆ , ಅಪಸ್ವರ, ಅಪಜಯ , ಕಂಕಣ ಭಾಗ್ಯ ಈ ಕಾದಂಬರಿಗಳು ಇನ್ನೂ ನನ್ನ ನೆನಪಿನಲ್ಲಿ ಚಿರವಾಗಿವೆ . ಅವರ ಕಾದಂಬರಿಗಳು ನನಗೆ ಮನಶ್ಶಾಸ್ತ್ರದ ಸಂಶೋಧನಾ ಕೃತಿಗಳನ್ನು –ಫ್ರಾಯಿಡ್ , ಕಾರ್ಲ ಯೂಂಗ್ ಮೊದಲಾದ ಮಹಾನ್ ಸಂಶೋಧಕರ ಕೃತಿಗಳು ಮಾತ್ರವಲ್ಲದೆ ಶಿಕ್ಷಣ ಮನಶ್ಶಾಸ್ತ್ರ , ಸಾಮಾಜಿಕ ಮನಶ್ಶಾಸ್ತ್ರ ಕೃತಿಗಳನ್ನು ಓದಲು ಪ್ರೇರಣೆ ನೀಡಿವೆ.
ಈ ಎರಡು ವಿಭಾಗಗಳಲ್ಲಿ ಎರಡು ವೈಜ್ಞಾನಿಕ ಪ್ರಬಂಧಗಳನ್ನೂ ಬರೆದಿದ್ದೇನೆ. ಮನಶ್ಶಾಸ್ತ್ರದಲ್ಲಿ ಇತ್ತೀಚಿನ ಕೆಲ ಹೊಸ ಸಿದ್ಧಾಂತಗಳನ್ನು ಮುಂದಿಟ್ಟ ಎರಿಕ್ ಬರ್ನ್ ನ ಗೇಮ್ಸ್ ಪೀಪಲ್ ಪ್ಲೇ , ಐ ಆಂ ಓಕೆ ಯು ಆರ್ ಓಕೆ ನನಗೆ ಹೊಸ ಹೊಳಹುಗಳನ್ನು ನೀಡಿವೆ. ಹೈಸ್ಕೂಲಿನ ಹಂತದಲ್ಲಿಯೇ ನಾನು ಯಾವುದೇ ಘಟನೆಗಳ ವಿವರಣೆ ನೀಡುವಾಗ ಆ ಘಟನೆಗಳ ಪಾತ್ರಧಾರಿಗಳ ವರ್ತನೆ ಮತ್ತು ಅವರ ಮನಸ್ಸಿನಲ್ಲಿ ನಡೆಯುತ್ತಿರಬಹುದಾದ ಕ್ರಿಯೆಗಳ ಸಮೇತ ವರ್ಣಿಸುತ್ತಿದ್ದೆ. ಇದನ್ನು ಕೆಲವರು ಗಮನಿಸಿ ನೀನು ಈ ವಯಸ್ಸಿಗೇ ಇದನ್ನೆಲ್ಲ ಗಮನಿಸುವುದನ್ನು ಎಲ್ಲಿಂದ ಕಲಿತೆ ಎಂದು ಕೇಳುತ್ತಿದ್ದರು. ಈಗಲೂ ನಾನು ಯಾವ ಕೆಲಸ ಮಾಡಿದರೂ ಕೂಡ ವಿವಿದ ಜನರ ಮನಸ್ಸನ್ನು ತಿಳಿದುಕೊಂಡು ಕೆಲಸ ಮಾಡುವುದಕ್ಕೆ ಮಾಡುತ್ತಿರುತ್ತೇನೆ. ಅನೇಕ ಕೌಟುಂಬಿಕ ವ್ಯಾಜ್ಯಗಳನ್ನು , ಇತರ ವ್ಯಾಜ್ಯಗಳನ್ನು ಪರಿಹರಿಸಲು ಬಹಳ ಸಹಾಯವಾಗಿದೆ
ಶಾಲೆಯ ಹಂತದ ಈ ಓದು-ಚಂದಮಾಮ ಮತ್ತು ಜನಪ್ರಿಯ ಕಾದಂಬರಿಗಳ ಓದು- ನನಗೆ ಇಡೀ ಜೀವನದುದ್ದಕ್ಕೂ ಎಲ್ಲ ರಂಗಗಳಲ್ಲೂ ಪರಿಣಾಮ ಬೀರುವಂತಹ ಪರಿಣಾಮ ಉಂಟು ಮಾಡಿದೆ. ಮುಖ್ಯವಾಗಿ ಮಗ್ನನಾಗಿ ಓದುವುದನ್ನು ದಕ್ಕಿಸಿದೆ. ಓದುವುದಕ್ಕೆ ಹಿಡಿದರೆ ಪ್ರಳಯ ಕೂಡ ನನ್ನನ್ನು ಕದಲಿಸುವುದಿಲ್ಲ . ನಮ್ಮ ತಾಯಿಗಂತೂ ನನ್ನನ್ನು ಊಟಕ್ಕೆಬ್ಬಿಸುವುದು ಒಂದು ಯಜ್ಞ ಮಾಡಿದಷ್ಟು ಕಷ್ಟವಾಗಿ ಬಿಡುತ್ತಿತ್ತು. ಊಟ ಮಾಡುವಾಗಲೂ ಒಂದಲ್ಲ ಒಂದು ಪುಸ್ತಕ ನನ್ನ ತೊಡೆಯ ಮೇಲೆ . ಊಟ ಏನು ಮಾಡಿದೆನೋ , ಯಾವಾಗ ಊಟ ಮುಗಿಯಿತೋ , ಯಾವಾಗ ಕೈ ತೊಳೆದೆನೋ ನನಗಂತೂ ಗೊತ್ತಾಗುತ್ತಿರಲಿಲ್ಲ . ಕೈ ಒಣಗಿ ಹೋಗಿದೆ ಕೈ ತೊಳೆದು ಏಳು ಎಂದು ಹತ್ತಾರು ಬಾರಿ ಹೇಳಬೇಕಾಗುತ್ತಿತ್ತು . ಈ ಮಗ್ನತೆಯ ಜೊತೆಗೆ ಮತ್ತೊಂದು ಲಾಭ ಓದಿನ ವೇಗ ಒಂದು ಗಂಟೆಯಲ್ಲಿಯೆ ಒಂದು 100 -150 ಪುಟಗಳ ಸಣ್ಣ ಕಾದಂಬರಿ ಮುಗಿದು ಹೋಗುತ್ತದೆ. ಒಂದು ಪುಸ್ತಕ ಹಿಡಿದರೆ ಮುಗಿಯಿತು ಅದು ಮುಗಿಯುವವರೆಗೂ ಹಗಲೂ ರಾತ್ರಿ ಓದಿ ಮುಗಿಸಿಬಿಡುತ್ತೇನೆ . ಇನ್ನೊಂದು ಪ್ರಮುಖ ಲಾಭ ಅರ್ಥ ಮಾಡಿಕೊಳ್ಳುವ ಅಥವಾ ಗ್ರಾಸ್ಪಿಂಗ್ ಸಾಮರ್ಥ್ಯದ ಹೆಚ್ಚಳ . ಎಲ್ಲಕ್ಕಿಂತ ಮಿಗಿಲಾಗಿ ನೆನಪಿನ ಶಕ್ತಿ. ಅದು ಬಹಳ ವಿಸ್ತಾರವಾಗಿ ಬಿಟ್ಟಿದೆ, ಅದು ಹಲವಾರು ಕೊಠಡಿಗಳಿರುವ ದೊಡ್ಡ ಬಂಗಲೆಯಂತೆ ಆಗಿದೆ ಎಂದು ಹಲವು ಸಭೆಗಳಲ್ಲಿ ವರ್ಣಿಸಿಕೊಂಡಿದ್ದೇನೆ.
ಈ ಕಾರಣದಿಂದ ನಾನು ಪುಸ್ತಕ ಓದದ ಜಾಗವೇ ಇಲ್ಲ. 60 ರಿಂದ 90 ರ ದಶಕದವರೆಗೂ ರಸ್ತೆಯಲ್ಲಿ ನಡೆಯುವಾಗಲೇ ಅನೇಕ ಕಾದಂಬರಿಗಳನ್ನು ಓದಿ ಮುಗಿಸಿದ್ದೇನೆ. ಅದರಿಂದಾಗಿ ಶಾಲೆ , ಕಾಲೇಜುಗಳಿಗೆ ಮೂರರಿಂದ ಆರು ಕಿ,ಮೀ ವರೆಗೂ ನಡೆಯುವುದು ನನಗೆ ಕಷ್ಟವಾಗಿ ಕಾಣಲೇ ಇಲ್ಲ. ರೈಲು , ಬಸ್ ಪ್ರಯಾಣ ಇರಲಿ ಎರಡು ಚಕ್ರದ ವಾಹನದಲ್ಲಿ ಹಿಂದೆ ಕೂತು ಹೋಗುವಾಗಲೂ ಅನೇಕ ಪುಸ್ತಕಗಳನ್ನು ಓದಿದ್ದೇನೆ. ನಾನು ಹಲವು ಕಾಲೇಜುಗಳು ವಿದ್ಯಾರ್ಥಿ ನಿಲಯಗಳಲ್ಲಿ ಓದುವುದು ಹೇಗೆ, ನೆನಪಿಟ್ಟುಕೊಳ್ಳವುದು ಹೇಗೆ ಎಂಬ ಉಪನ್ಯಾಸ ನೀಡಿದ್ದೇನೆ ಈ ಎಲ್ಲಾ ಕಡೆ ಸಾಹಿತ್ಯದ ಓದಿನ ಬಗ್ಗೆ ಮೇಲೆ ಹೇಳಿದ ಪರಿಣಾಮಗಳನ್ನೆಲ್ಲಾ ವಿವರಿಸಿ ಎಲ್ಲಾ ಕಾದಂಬರಿ , ಕಥೆಗಳನ್ನು ಓದುವುದು ಹೇಗೆ ಅವರು ತಮ್ಮ ತಾಂತ್ರಿಕ ವಿದ್ಯಾಭ್ಯಾಸದಲ್ಲಿಯೂ ನೆರವಾಗಬಲ್ಲುದು ಎಂದು ಒತ್ತಿ ಹೇಳುತ್ತೇನೆ. ಉತ್ತಮ ವಿದ್ಯಾಭ್ಯಾಸದಲ್ಲಿ ರ್ಯಾಂಕ್ ಪಡೆಯುವದಕ್ಕೂ ಸಹಾಯವಾಗುತ್ತದೆ. ಜೀವನದಲ್ಲಿ ರ್ಯಾಂಕ್ ಪಡೆಯುವುದಕ್ಕಂತೂ ಅತಿ ಅವಶ್ಯ ೆಂದು ಹೇಳುತ್ತೇನೆ. ಅರ್ಥಶಾಸ್ತ್ರದ ಉಪನ್ಯಾಸ ನೀಡುವ ಸಂದರ್ಭದಲ್ಲಿಯೂ ಕೂಡ ಕಾದಂಬರಿಗಳ ಉದಾಹರಣೆ ನೀಡುತ್ತೇನೆ. ಕರ್ನಾಟಕದ ಸಾಮಾಜಿಕ ರಚನೆಯನ್ನು ಅರ್ಥ ಮಾಡಿಕೊಳ್ಳಲು ವಿವಿಧ ಭಾಗಗಳ ಕಾದಂಬರಿಕಾರರ ಹತ್ತು ಕಾದಂಬರಿಗಳ ಪಟ್ಟಿಯನ್ನು ನೀಡುತ್ತೇನೆ .ಹೀಗೆ ಯಾರು ಒಪ್ಪಲಿ , ಬಿಡಲಿ ನನಗೆ ಕಥೆ , ಕಾದಂಬರಿ ಓದು ಸರ್ವ ಓದಿನ ಬುನಾದಿಯಾಗಿ ಕಂಡಿದೆ.
ಅದೇ ಸಮಯದಲ್ಲಿ ಮೇಲೆ ವಿವರಿಸಿದಂತೆ ಓದನ್ನು ಕೇವಲ ಸಾಹಿತ್ಯಕ್ಕೆ ಸೀಮಿತಗೊಳಿಸುವುದೂ ಕೂಡ ನಿಮ್ಮ ವ್ಯಕ್ತಿತ್ವ ಪೂರ್ಣವಾಗಿ ಅರಳುವುದಕ್ಕೆ ದೊಡ್ಡ ಅಡ್ಡಿಯಾಗುತ್ತದೆ. ಇತಿಹಾಸ , ಸಾಮಾಜಿಕ , ಮನಶ್ಶಾಸ್ತ್ರ , ವಿಜ್ಞಾನ , ವೈಚಾರಿಕ ರಾಜಕೀಯ ಮುಂತಾದ ಓದುಗಳೂ ಕೂಡ ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಮಾಜವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅತೀ ಅಗತ್ಯ ಎಂದು ನನ್ನ ಭಾವನೆ. ಸಾಹಿತ್ಯಕ್ಕೆ ನೀಡುವ ಅತಿ ಪ್ರಾಧಾನ್ಯತೆ ಸಾಹಿತ್ಯದ ಓದಿಗೇ ಹಾನಿಯನ್ನುಂಟು ಮಾಡುತ್ತದೆ ಎಂದೆನಿಸುತ್ತದೆ.
(ಮುಂದುವರಿಯುತ್ತದೆ…)
 

‍ಲೇಖಕರು G

15 September, 2014

2 Comments

  1. Bharavi

    ನಿಮ್ಮ ಲೇಖನದಲ್ಲಿ ನನ್ನ ಒಂದು ಅಭ್ಯಾಸವನ್ನು ಕಂಡೆ. ಅದು ನಡೆಯುತ್ತಾ ಓದುವುದು. ನಿರ್ಜನ ರಸ್ತೆ, ಪ್ರದೇಶಗಳಲ್ಲಿ ಈ ಕತೆ-ಕಾದಂಬರಿಗಳ ಓದಿನ ಜೊತೆಗೆ ಪರೀಕ್ಷೆಗೆ ತಯಾರಿಯೂ ಹೆಚ್ಚಾಗಿ ಇದೇ ವಿಧಾನದಲ್ಲಿ ನಡೆಯುತ್ತಿತ್ತು.ನೆನಪಿಸಿದಕ್ಕೆ ಋಣಿ….

  2. sudha chidanand gowd

    ನಿಜ, ಒಂದೇ ಬಗೆಯ ಓದು ಕೂಡಾ ಓದನ್ನು ಸೀಮಿತಗೊಳಿಸುತ್ತದೆ.
    ಸಾಹಿತ್ಯಕ್ಕಾಗಿ ಸಾಹಿತ್ಯ ಎನ್ನುವುದನ್ನು ಬದುಕಿಗಾಗಿ ಓದು ಎಂದುಕೊಂಡರೇನೆ ಹೆಚ್ಚು ಉಪಯುಕ್ತ.
    ಇದುವರೆಗಿನ ಲೇಖನಗಳಲ್ಲೇ ಇದು ಒಳ್ಳೇ ಲೇಖನ.

Trackbacks/Pingbacks

  1. ಓದು ಜನಮೇಜಯ : ಉದಯನ, ವಾಸವದತ್ತೆಯರ ಸ್ವಪ್ನದಲ್ಲಿ « ಅವಧಿ / Avadhi - [...] ಓದು ಜನಮೇಜಯ : ಉದಯನ, ವಾಸವದತ್ತೆಯರ ಸ್ವಪ್ನದಲ್ಲಿ September 17, 2014 (ಇಲ್ಲಿಯವರೆಗೆ…) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading