‘‘ ಬನದಿ ತೊಟ್ಟಿಲ ಕಟ್ಟಿ ಲವ ಕುಶರನ್ನು ತೂಗ್ಯಾಳೋ ಸೀತಾಮಾತೆ’
ಜಾನಪದರು ತಮ್ಮ ತಾಯ ಮಮತೆಯ ರಾಮಾಯಣವನ್ನು ಕಟ್ಟಿದ್ದಾರೆ .“ ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ, ತಿಂಥಿಣಿಯ ರಘುವರ ಚರಿತೆಯಲಿ ಕಾಲಡಲು ತೆರಪಿಲ್ಲ “ ಎಂದು ಕುಮಾರವ್ಯಾಸ ಹೇಳಿದ್ದಾನೆ. ಇದನ್ನು ಹೇಳುವಾಗ ಅವನ ಕಣ್ಣಿಗೆ ಕಂಡದ್ದು ಕೇವಲ ಕವಿಗಳ ಸೃಷ್ಠಿ ಮಾತ್ರ. ಆದರೆ ಜಾನಪದ ರಾಮಾಯಣಗಳ ವೈವಿಧ್ಯವನ್ನು ನೊಡಿದರೆ ಜಾನಪದ ರಾಮಾಯಣಗಳ ಭಾರವೇ ಸಾಕು ಫಣಿರಾಯ ತಿಣುಕುವಂತೆ ಮಾಡುವುದಕ್ಕೆ . ಎಂತಹ ಅಮೋಘ ಕಲ್ಪನೆಗಳು ಹಾಗೂ ಪಾತ್ರ ಚಿತ್ರಣ. ನನಗಂತೂ ಅವು ಸಂತೋಷ ಮತ್ತು ಅಚ್ಚರಿಯನ್ನು ತಂದಿವೆ. ಜಾನಪದದ ಬಗ್ಗೆ ತಿಳಿವಿರುವವರು ಊಹಿಸಬಹದಾದಂತೆ ಜಾನಪದ ರಾಮಾಯಣವೆಂಬುದು ನಿಜವಾಗಿ ಸೀತಾಯಣ –ಸೀತೆಯ ಸಂಕಟಗಳು , ಭಾವನೆಗಳೇ ಪ್ರಧಾನ . ಜಾನಪದರ ಬಹಳಷ್ಟು ರಾಮಾಯಣಗಳು ಆರಂಭವಾಗುವುದು ರಾಮನ ಹುಟ್ಟು ಮತ್ತು ಪುತ್ರ ಕಾಮೇಷ್ಠಿ ಯಾಗದಿಂದಲ್ಲ. ಬದಲಾಗಿ ಸೀತೆಯ ಹುಟ್ಟಿನ ಕಥನದಿಂದ. ಸೀತೆಯ ಹುಟ್ಟು ಎಲ್ಲರಿಗೂ ಒಗಟಾಗಿಯೇ ಉಳಿದಿದೆ. ಜಾನಪದರಿಗೂ. ಅವಳು ರಾವಣನ ಮಗಳಾಗಿದ್ದಿರಬಹುದು ಮತ್ತು ತಂದೆಯೇ ಮಗಲನ್ನು ಕಾಮಿಸಿದನೆಂಬ ವಿಚಿತ್ರ ಅವರನ್ನು ಬಹುವಾಗಿ ಕಾಡಿದೆ. ಇದನ್ನು ಹೇಗೆ ವಿವರಿಸಬಹುದೆಂದು ತಲೆಕೆಡಿಸಿಕೊಂಡಿದ್ದಾರೆ. ಒಂದೆರಡು ಉದಾಹರಣೆಗಳು ಹೀಗಿವೆ
ರಾವಣನೇ ಸೀತೆಯನ್ನು ಗರ್ಭ ಧರಿಸಿ ಹೆತ್ತನೆಂಬ ಕಲ್ಪನೆ ಒಂದು ಜಾನಪದ ಸಂಪ್ರದಾಯದ ಕಥೆ. ರಾವಣ , ಮಂಡೋದರಿಯರಿಗೆ ಬಹುಕಾಲ ಮಕ್ಕಳಿರಲಿಲ್ಲ. ದೀರ್ಘ ತಪಸ್ಸಿನ ನಂತರ ಅವನಿಗೆ ಸಾಧುವಿನ ರೂಪದಲ್ಲಿ ಕಾಣಿಸಿಕೊಂಡ ಶಿವ ಮಂತ್ರಿಸಿದ ಮಾವಿನ ಹಣ್ಣೊಂದನ್ನು ಕೊಟ್ಟು ಹಣ್ಣನ್ನು ಮಂಡೋದರಿಗೆ ಕೊಡಬೇಕೆಂದೂ , ವಾಟೆಯನ್ನು ರಾವಣ ತಿನ್ನಬೇಕೆಂದೂ ವಿಧಿಸಿದ. ಆಗಲೇ ರಾವಣನ ಗುಣ ಹೊರಬೀಳುತ್ತದೆ. ಅದನ್ನು ಶಿವನೇ ಹೀಗೆ ಹೇಳುತ್ತಾನೆ
“ ನಿನಗೊಂದು ವರವ ಕೊಟ್ಟಿನಲ್ಲ ರಾವುಳ
ನಿನ್ಗೆ ಮಾವಿನ ಹಣ್ಣ ಕೊಟ್ಟಿದ್ದೀನಿ ರಾವುಳ
ಇದ ಯಾರು ಹಂಚಿ ಊಟ ಮಾಡುತಿರಿ ರಾವುಳ “
ಎಂದು ಶಿವ ಕೇಳುತಾನೆ . ಅದಕ್ಕೆ ರಾವಣ ಏನು ಹೇಳುತ್ತಾನೆ :
“ ವಾಡಿಕೆ ಕೊಡುವಾಗ ನನ್ನ ಮಡದಿ ಮಂಡೋದರಿಗೆ
ಹಣ್ಣನ್ನು ಕೊಡುತೀನಿ ನಾನು ಗೊರಟೆಯ ನೆಕ್ಕುತೀನಿ “
ಅದಕ್ಕೆ ಶಿವ ಹೇಳುತ್ತಾನೆ :
“” ಬಾಯಲ್ಲಿ ಒಂದು ನನಗೆ ಹೇಳುತೀಯ ರಾವುಳ
ನೀನು ಹೊಟ್ಟೆಲೊಂದು ಇಸ ನೀನು ಇಡುತೀಯ ರಾವುಳ
ಅದರ ಫಲ ಮುಂದೆ ನೋಡುತೀಯ ರಾವುಳ “
ಆದರೆ ಅದನ್ನು ರಾವಣ ದುರಾಸೆಯಿಂದ ಹಣ್ಣನ್ನು ತಾನೇ ತಿಂದು ವಾಟೆಯನ್ನು ಮಂಡೋದರಿಗೆ ಕೊಟ್ಟನಂತೆ. ಅದರಿಂದ ತಿರುವು ಮುರುವಾಗಿ ರಾವಣನೆ ಗರ್ಭ ಧರಿಸಿದನಂತೆ . ಆಗ ರಾವಣನೇ ಬಸರನ್ನು ಹೊರಬೇಕಾಯಿತು. ಹೀಗೆ ರಾವಣನ ದುರ್ಬುದ್ಧಿ ಸೀತೆ ಹುಟ್ಟುವುದಕ್ಕೆ ಮೊದಲೇ ಹೀಗೆ ವ್ಯಕ್ತವಾಯಿತು ಮಾತ್ರವಲ್ಲ ಸೀತೆಯ ಜನನದ ವೈಚಿತ್ರ್ಯಕ್ಕೂ ಕಾರಣವಾಯಿತು.
“ ಎರಡು ತಿಂಗಳಿಗೆ ನೋಡು ಹಳವಡಿಕೆ ಬಂದಿನ್ನು
ನರಲೋಕಕ್ಕೆ ಮೊಕವ್ಯಾಗೆ ತೋರಲಿ.
ಐದೂವೆ ತಿಂಗಳಿಗೆ ಕಷ್ಟ ಕೊಟ್ಟೆಯಲ್ಲ ಶಿವನೆ
ನಾನು ನೀಚುಲಾರೆ ನೀಚುಲಾರೆ ದೇವ ಹೇಗೆ ಬಾಳಲಯ್ಯ
ಅಂತ ದುಕ್ಕಾವ ಮಾಡುತಾನೆ
ಒಂಬತ್ತು ತಿಂಗಳಿಗೆ ತುಂಬಿ ಬಂದಿತು ಹೆರಿಗೆ.
ಅವನ ಮೂಗಿನಾಗಿಂದ ಬರುತಾಳೆ ಸೀತೆ
ಸೀನೂವೆ ಬಂದಾಗ ಅವಳು ಸೀತಮ್ಮ ಹುಟ್ಟುತಾಳೆ .

ಗಂಡಾದ ರಾವಣ ಮಗುವನ್ನು ಹೆರುವುದು ಹೇಗೆ . ಅದಕ್ಕೆ ಜನಪದರ ಕಲ್ಪನೆ ನೋಡಿ ಹೇಗಿದೆ : ನವಮಾಸ ತುಂಬಿದ ಮೆಲೆ ಸೀತೆ ರಾವಣನ ಮೂಗಿನಿಂದ ಸೀನುವಾಗ ಹುಟ್ಟಿದಳಂತೆ . ಾದ್ದರಿಂದಲೇ ಅವಳು ಸೀತೆ . ಹೀಗೆ ಸೀತೆ ರಾವಣನ ಮಗಳು ಮಾತ್ರವಲ್ಲ ಅವನ ಹೊಟ್ಟೆಯಲ್ಲಿಯೇ ಹುಟ್ಟಿದ ಮಗಳು . ಮುಂದೆ ಮಗಳ ಾರೈಕೆಯನ್ನೂ ತಾನೆ ಮಾಡುತ್ತಾನೆ. ನಂತರ ಜೋಯಿಸರನ್ನು ಮಗುವಿನ ಭವಿಷ್ಯದ ಬಗ್ಗೆ ವಿಚಾರಿಸಿದಾಗ ಮಗುವಿನಿಂದ ಘೋರ ಪರಿಣಾಮವಾಗುತ್ತದೆ ಎಂದು ಮಗುವನ್ನು ತೊರೆಯಬೇಕೆಂದು ಹೇಳಿಕೆಯಾಗುತ್ತದೆ. ಕೊನೆಗೆ ಮಗುವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಹಾಕಿ ನದಿಯಲ್ಲಿ ತೇಲಿಬಿಡುತ್ತಾರೆ. ಈ ಪೆಟ್ಟಿಗೆ ನದಿಯಲ್ಲಿ ಸ್ನಾನ ಮಾಡುವಾಗ ಜಲಕಾವತಿ ಪಟ್ಟಣದ ರಾಜನಿಗೆ ಸಿಗುತ್ತದೆ.
ಮತ್ತೊಂದು ಸಂಪ್ರದಾಯದಲ್ಲೂ ಮಗು ರಾವಣನ ಮೂಗಿನಿಂದಲೇ ಸೀನುವಾಗ ಹುಟ್ಟುತ್ತದೆ. ಆದರೆ ಸೀತೆ ತಾವರೆಯ ಮೊಗ್ಗಿನೊಳಗೆ ಇರುತ್ತಾಳೆ ಆ ಹೂವನ್ನು ರಾವಣ ಮೂಸಿ ನೋಡುವಾಗ ದೇಹದ ೊಳಗೆ ಸೇರಿಕೊಳ್ಳುತ್ತದೆ. ಮುಂದೆ ಸೀನುವಾಗ ಹೊರಬರುತ್ತದೆ. ಮುಂದೆ ರಾವಣ ತನಗೆ ಗೊತ್ತಿಲ್ಲದೆ ( ಒಂದು ಸಂಪ್ರದಾಯದಲ್ಲಿ ಗೊತ್ತಿದ್ದೂ ಸೀತೆಯನ್ನು ಮದುವೆಯಾಗಲು ಮುಂದುವರೆಯುತ್ತಾನೆ. ) ತನ್ನ ಮಗಳನ್ನೇ ಸ್ವಯಂವರದಲ್ಲಿ ಗೆಲ್ಲಲು ಮುಂದಾಗುವುದು , ಸೋಲುವುದು ಇವೆಲ್ಲಾ ನಡೆಯುತ್ತವೆ.
ಜಾನಪದರು ತಮ್ಮ ಜಾನಪದ ಕಥೆಗಳಲ್ಲಿ ಮಾಂತ್ರಿಕತೆಯನ್ನು ಕಲ್ಪಿಸಿಕೊಂಡಂತೆಯೇ ರಾಮಾಯಣವನ್ನೂ ಕಲ್ಪಿಸಿಕೊಳ್ಳುತ್ತಾರೆ. ರಾಮ ೊಮ್ಮೆ ನದಿಯೊಂದರಲ್ಲಿ ಮೂಗು ಸ್ವಚ್ಚ ಮಾಡಿಕೊಂಡು ಸೀತಾಗ ಅವನ ಗೊಣ್ಣೆಯಿಂದ ಲವಕುಶಲು ಎಂದು ಎರಡು ಮೀನುಗಳು ಹುಟ್ಟಿದವಂತೆ. ಮುಂದೆ ಸೀತೆಯನ್ನು ರಾಮ ಕಾಡಿಗಟ್ಟಿದಾಗ ಸೀತೆ ಆತ್ಮ ಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದಳಂತೆ . ಆಗ ಈ ಮೀನುಗಳು ಅವಳನ್ನು ರಕ್ಷಿಸುತ್ತವೆ . ಮತ್ತು ವಾಲ್ಮೀಕಿಯ ಆಶ್ರಮಕ್ಕೆ ಹೋಗಲು ತಿಳಿಸುತ್ತಾರೆ. ಆದಕ್ಕೆ ಕೃತಜ್ಞತಾ ರೂಪವಾಗಿ ಸೀತೆ ತನಗೆ ಹುಟ್ಟಿದ ಅವಳಿ ಮಕ್ಕಳಿಗೆ ಲವ ಕುಶ ಎಂದು ಹೆಸರಿಡುತ್ತಾಳೆ.
ಹೀಗೆ ಅನೇಕ ಭಿನ್ನತೆಗಳನ್ನು ಜಾನಪದ ಗೀತೆಗಳಲ್ಲಿ ಕಾಣುತ್ತೇವೆ. ರಾಮ , ಲಕ್ಷ್ಮಣರನ್ನು ಮದುವೆಗೆ ಮೊದಲೆ ವನವಾಸಕ್ಕೆ ಕಳುಹಿಸುವುದು , ಸೀತೆಯ ಸ್ವಯಂವರದ ವಿಷಯ ತಿಳಿದಾಗ ಅಲ್ಲಿಗೆ ಹೋಗುವುದು. ಸೀತೆಯ ಗುಟ್ಟು-ಗುಣಗಳನ್ನು ತಿಳಿದುಕೊಳ್ಳಲು ಲಕ್ಷ್ಮಣ ಅನೇಕ ಪರೀಕ್ಷೆಗಳನ್ನು ಒಡ್ಡುವುದು, ಹೀಗೆ
ಬಹಳ ಭಿನ್ನವಾದ ಕೆಲವು ಪ್ರಸಂಗಗಳಿವೆ. ಒಂದು ಜಾನಪದ ಸಂಪ್ರದಾಯದಲ್ಲಿ ಶೂರ್ಪನಖಿಯ ಗಂಡನನ್ನು ರಾವಣ ಕೊಲ್ಲುತ್ತಾನೆ ಅದಕ್ಕೆ ಸೇಡು ತೀರಿಸಿಕೊಳ್ಳಬೇಕೆಂದು ರಾವಣನನ್ನು ಕೊಲ್ಲಲು ಶೂರ್ಪನಖಿಯೇ ವಿವಿಧ ಪ್ರಯತ್ನಗಳನ್ನು ಮಾಡುತ್ತಾಳೆ. ಮತ್ತೊಂದು ಪ್ರಸಂಗ ಮಂಡೋದರಿಯನ್ನು ರಾವಣ ಬೇರೆಯೇ ನಗರದಲ್ಲಿಟ್ಟಿರುತ್ತಾನೆ . ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಮೊದಲು ಮಂಡೋದರಿಯ ಪಟ್ಟಣಕ್ಕೆ ಬಂದು ಮಂಡೋದರಿಯನ್ನೇ ಭೇಟಿಯಾಗುತ್ತಾರೆ. ಅವಳು ರಾವಣನ ಗುಟ್ಟನ್ನೆಲ್ಲಾ ರಾಮ, ಲಕ್ಷ್ಮಣರಿಗೆ ಹೇಳುತ್ತಾಳೆ ಮಂಡೋದರಿ .ಅವನ ಜೀವ ಎಲ್ಲಿರುತ್ತದೆ ಎಂಬ ಪರಮ ರಹಸ್ಯವನ್ನೂ
ಮತ್ತೊಮದು ಸಂಪ್ರದಾಯದಲ್ಲಿ ಹನುಮಂತ ಲಂಕೆಗೆ ಹಚ್ಚಿದ ಬೆಂಕಿಯನ್ನು ಆರಿಸವುದರಲ್ಲಿ ತೊಡಗಿದ್ದಾನೆ ರಾವಣ . ಆಗಲೇ ರಾಮ ಅವನ ಮೇಲೆ ಬಾಣ ಹೂಡಿ ಕೊಲ್ಲುತ್ತಾನೆ , ರಾವಣ ಬೆಡ ಬೆಡ ಎಂದು ಬೇಡಿಕೊಳ್ಳುತ್ತಿರುವಾಗಲೇ.
ಹೀಗೆ ಜಾನಪದರು ತಮ್ಮ ಬದುಕು, ಕಲ್ಪನೆಗೆ ಅನುಗುಣವಾಗಿ ಬೇರೆ ಬೇರೆ ಸಂಪ್ರದಾಯಗಳಲ್ಲಿ ವಿವಿಧ ರಾಮಾಯಣಗಳನ್ನು ರೂಪಿಸಿಕೊಂಡಿದ್ದಾರೆ. ಅವರಿಗೆ ರಾಮ , ರಾವಣ , ಸೀತೆಯರೇ ಬೇರೆ . ಆದ್ದರಿಂದ ಇದೇ ರಾಮಾಯಣ , ಿದೊಂದೇ ರಾಮಾಯಣ ಎಂದು ಪಟ್ಟು ಹಿಡಿಯುವುದೇ ರಾಮಾಯಣಕ್ಕೂ , ಅದರ ಪಾತ್ರಗಳಿಗೂ ಅನ್ಯಾಯ ಮಾಡಿದಂತೆ.
ಈ ಎಲ್ಲ ರೂಪಗಳು –ಶಿಷ್ಠವೆಂದು ಕರೆಯಲ್ಪಡುವ ಕಾವ್ಯಗಳು , ಮತ್ತು ಜಾನಪದ ಕಥನಗಳು ಇವುಗಳಲ್ಲಿ ಕಾಣುವ ವೈವಿಧ್ಯ ನನಗೆ ರಾಮಾಯಣದ ಬಗ್ಗೆ ಅನ್ವೇಷಣೆ ನಡೆಸಲು ಧೈರ್ಯವನ್ನೂ , ಸ್ಪೂರ್ತಿಯನ್ನೂ ನೀಡಿದವು.
(ಮುಂದುವರಿಯುವುದು…)
ಓದು ಜನಮೇಜಯ : ರಾವಣನೇ ಗರ್ಭ ಧರಿಸಿ ಸೀತೆಯನ್ನು ಹೆತ್ತ ಕಥೆ ಕೇಳಿದ್ದೀರಾ!
ನಿಮಗೆ ಇವೂ ಇಷ್ಟವಾಗಬಹುದು…
4 Comments
Trackbacks/Pingbacks
- ಓದು ಜನಮೇಜಯ : ‘ದಶರಥ‘ ನನ್ನನ್ನು ಕನ್ನಡದಲ್ಲಿ ಫೇಲು ಮಾಡ ಹೊರಟಿದ್ದು « ಅವಧಿ / Avadhi - [...] ಓದು ಜನಮೇಜಯ : ‘ದಶರಥ‘ ನನ್ನನ್ನು ಕನ್ನಡದಲ್ಲಿ ಫೇಲು ಮಾಡ ಹೊರಟಿದ್ದು September 20, 2014 (ಇಲ್ಲಿಯವರೆಗೆ…) [...]





ತೊಳಲಾಡಿದನು ಓದುಗ ರಾಮಾಯಣದ ವೈವಿಧ್ಯದಲ್ಲಿ…ಚೆನ್ನಾಗಿದೆ…ಆಸಕ್ತಿಯ ವಿಷಯವಿದು.
-Anil
ಸರ್ ಜನಪದ ರಾಮಾಯಣದ ವೈವಿಧ್ಯಗಳನ್ನು, ಅದರಲ್ಲಿ ಬರುವ ಪ್ರಸಂಗಗಳನ್ನು ಲೆಕ್ಕಕ್ಕಿಡುವುದೇ ಕಷ್ಟವಾಗಿದೆ, ಅಷ್ಟಿವೆ.
ನಮ್ಮ ಕಡೆಯ ಒಂದು ಕಥೆ ಕೇಳಿ. ಸಾಮಾನ್ಯವಾಗಿ ಹಳ್ಳಿಗಳ ಕಡೆ ಏನಾದರೂ ಕಷ್ಟ ಬಂದರೆ, ಆಗಬಾರದ್ದು ಆಗಿಹೋದರೆ, ಅಂಥಹದ್ದನ್ನು ಕೇಳಿದರೆ ‘ರಾಮ ರಾಮಾ’ ಎನ್ನುತ್ತೇವೆ ಅಲ್ಲವೆ? ಹಾಗಾದರೆ ಮೊದಲು ಅದನ್ನು ಬಳಸಿದ್ದು ಯಾರು? ಎಂಬುದಕ್ಕೆ ಈ ಕಥೆ
ಸಮುದ್ರ ದಾಟಿಕೊಂಡು ಲಂಕೆಯಲ್ಲಿ ಕಪಿಸೈನ್ಯದ ಜೊತೆ ಬೀಡು ಬಿಟ್ಟ ರಾಮನಿಗೆ ಒಂದು ಅನುಮಾನ. ನಾನೇನೊ ರಾವಣನನ್ನು ಸೋಲಿಸಿ ಸೀತೆಯನ್ನು ಪಡೆಯಬಹುದು. ಆದರೆ ಸೀತೆಗೆ ನಾನು ಇಷ್ಟವಾಗದೇ ಹೋದರೆ? ಅವಳ ಬಗ್ಗೆ ಆಂಜನೇಯ ಹೇಳಿರಬಹುದು. ಅದು ಎಷ್ಟೆಂದರೂ ಒಂದು ಕೋತಿ. ಯಾವುದಕ್ಕೂ ನಾನೇ ಒಮ್ಮೆ ಸೀತೆಯನ್ನು ಸಂಧಿಸಿ ಅವಳ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಬೇಕು ಅನ್ನಿಸುತ್ತದೆ. ತಕ್ಷಣ ಆತ ಜೋಗಿಯ ವೇಷ ಧರಿಸಿ ಸೀತೆಯ ಬಳಿಗೆ ಬರುತ್ತಾನೆ. ರಾಮನನ್ನು ಕುರಿತು ಹೊಗಳುತ್ತಾ ಹಾಡುತ್ತಾ ಸೀತೆಯೊಂದಿಗೆ ಮಾತಿಗಿಳಿಯುತ್ತಾನೆ. ಕೊನೆಯಲ್ಲಿ, ಸೀತಾದೇವಿ. ನೀನೇನೊ ಇಲ್ಲಿ ರಾಮನಿಗಾಗಿ ಹಂಬಲಿಸುತ್ತಿದ್ದೀಯಾ. ಅಲ್ಲಿ ರಾಮ ನಿನ್ನನ್ನು ಮರೆತು ಯಾವುದೋ ಹೆಣ್ಣನ್ನು ಕಟ್ಟಿಕೊಂಡಿಲ್ಲ ಎಂದು ಏನು ಹೇಗೆ ಹೇಳುವುದು. ನೀನು ಸುಮ್ಮನ್ನೆ ಬೇರೆಯವರನ್ನು ಏಕೆ ಮದುವೆಯಾಗಬಾರದು. ನನ್ನನ್ನೇ ಆದರೂ ಪರವಾಗಿಲ್ಲ ಎನ್ನುತ್ತಾನೆ ಜೋಗಿರಾಮ! ಅದನ್ನು ಕೇಳಿದ ತಕ್ಷಣ ಸೀತೆ ‘ರಾಮ ರಾಮಾ’ ಎಂದು ಕಿವಿಮುಚ್ಚಿಕೊಳ್ಳುತ್ತಾಳೆ. ಅಂದಿನಿಂದ ಕಷ್ಟದ ಬಂದಾಗ, ಕಹಿ ಸುದ್ದಿ ಕೇಳಿದಾಗ ಜನ ‘ರಾಮ ರಾಮ’ ಎಂದು ಕಿವಿಮುಚ್ಚಿಕೊಳ್ಳುತ್ತಾರೆ!
ರಾಮಾಯಣ ನಮ್ಮ ಜನಮನದೊಳಕ್ಕೆ ಇಳಿದಿರುವುದು ಇಂತಹ ಪ್ರಸಂಗಗಳಿಂದಲೇ! ‘ರಾಮಂಗೆ ಪಿರಿದಲ್ತೆ ರಾಮಾಯಣಂ’ ಎಂದು ಕುವೆಂಪು ಹೇಳಿರುವುದು ಈ ಅರ್ಥದಲ್ಲಿಯೆ.
ಇಲ್ಲಿ ವಾಲ್ಮೀಕಿ ಕೃತ ರಾಮಾಯಣದ ಕಥೆ ಕೇಳಿ ಜನ ತಮ್ಮದೇ ಆದ ಕಥೆಗಳನ್ನು ಕಟ್ಟುತ್ತಾ ಹೋದರೆ? ಅಥವಾ ಜನಪದ ಕಥೆಗಳನ್ನು ಆಧರಿಸಿಯೇ ವಾಲ್ಮೀಕಿ ತನ್ನದೇ ಆದ ರಾಮಾಯಣವನ್ನು ಹಾಡಿದನೆ? ಈ ಹಿನ್ನೆಲೆಯಲ್ಲೂ ಯೋಚಿಸಬೇಕಾಗಿದೆ. ಏಕೆಂದರೆ ಒಂದು ಸಾಹಿಕ್ಕೆ ಸಾಹಿತ್ಯ ಹೂವಾದರೆ, ಜಾನಪದ ಬೇರು!
ನಾನು ಚಿಕ್ಕ೦ದಿನಲ್ಲಿ ಕೇಳಿದ್ದು: ಅಯೋಧ್ಯೆಗೆ ರಾಮಸೀತೆ ವಾಪಸ್ಸು ಹೋದ ನ೦ತರ ಒ೦ದು ದಿನ್ ರಾಮ ಅ೦ತ:ಪುರಕೆ ಹೋಗುತ್ತಾನೆ. ಅಲ್ಲಿ ಹೋದಾಗ ಸೀತೆ ತಲ್ಲೀನಳಾಗಿ ಯಾವುದೋ ಚಿತ್ರ ಬರೆಯುತ್ತಿದ್ದಾಳೆ. ಬಗ್ಗಿ ನೋಡಿದರೆ ಅದು ರಾವಣನ ಚಿತ್ರ ! .. ಮು೦ದೆ ಸೀತೆ ವನವಾಸಕ್ಕೆ ಹೋಗುತ್ತಾಳೆ ! ಇದನ್ನ್ಜೂ ನೀವು ಬರೆದಿರುವುದನ್ನೂ ಸೇರಿಸಿದರೆ ಅದು ಎಲೆಕ್ಟ್ರಾ ಕಾ೦ಪ್ಲೆಕ್ಸ್ ಆಗುತ್ತದೆ
ನಾನು ನನ್ನ ಜ್ಜಿಯಿಂದ ಕೆಳಿದ ಕಥೆ: ರಾವಣ ಒಮ್ಮೆ ತಪಸ್ಸಿಗೆ ಹೋಗುತ್ತಾನೆ. ಹೋಗುವಾಗ ಯಾವುದೋ ಒಂದು ದ್ಜರವವನ್ಲನು ಮಂತ್ರಿಸಿ ಮಡಕೆಯಲ್ಲಿ ಇಟ್ಟು ಮಂಡೋದರಿಯ ಕೈಗೆ ಒಪ್ಪಿಸಿ “ಅದನ್ನು ತೆಗೆಯಬಾರದು ತೆರೆದರೆ ಅಪಾಯ”ಎಂದು ಅಪ್ಪಣೆ ಮಾಡುತ್ತಾನೆ. ಸುಮಾರು ವರ್ಷ ರಾವಣನ ಸುದ್ದಿ ಇರುವುದಿಲ್ಲ. ರಾವಣ ಸತ್ತಿರವೆನೆಂದು ಭಾವಿಸಿ ಮಂಡೋದರಿ ಆ ಮಡಕೆಯಲ್ಲಿ ಇರುವ ದ್ರವವನ್ನು ಕುಡಿದು ಸಾಯಲು ಪ್ರಯತ್ನಿಸುತ್ತಾಳೆ. ಆದರೆ ಅವಳು ಸಾಯುವುದಿಲ್ಲ ಬದಲಿಗೆ ಬಸಿರಾಗುತ್ತಾಳೆ. ಹೆಣ್ಣು ಮಗುವನ್ನು ಹೆರುತ್ತಾಳೆ. ಗಂಡನಿಲ್ಲದ ವೇಳೆ ಹುಟ್ಟಿದ ಮಗುವನ್ನು ಇಟ್ಟುಕೊಂಡರೆ ತನು ಅಪವಾದಕ್ಕೆ ಆಹಾರವಾಗುತ್ತೇನೆ ಎಂದು ಆ ಮಗುವನ್ನು ತಂದು ಮಿಥೆಲೆಗೆ ತಂದು ಮಣ್ಣಿನಡಿ ಹೂಳಿಸುತ್ತಾಳೆ. ಅದೇ ಮಗು ಜನಕನಿಗೆ ದೊರಕಿ ಜಾನಕಿಯಾಗುತ್ತಾಳೆ.