ನನ್ನ ಬಳಿ ಈಗ ಎಷ್ಟು ಸಾವಿರ ಪುಸ್ತಕಗಳು ಇವೆಯೆಂಬುದು ಸರಿಯಾಗಿ ಲೆಕ್ಕ ಮಾಡಲಾಗಿಲ್ಲ. ಹತ್ತಿರ ಹತ್ತಿರ ಹತ್ತು ಸಾವಿರವಂತೂ ಇರಬಹುದು . ಪುಸ್ತಕ ಬೈಗುಳು ಎಂದು ಒಂದು ಕೆಟಗರಿಯಿದೆ. ನನ್ನ ಹೆಂಡತಿಯಿಂದ ಅದನ್ನು ಒಂದು ದಿನ ಕೇಳದೆ ಇದ್ದರೂ ನನಗೆ ಮಾತ್ರವಲ್ಲ ನನ್ನ ಪುಸ್ತಕಗಳಿಗೂ ದಿನ ಮುಗಿದಂತೆನಿಸುವುದಿಲ್ಲ. ಅವಳಾದರೂ ಏನು ಮಾಡಿಯಾಳು. ಇತ್ತೀಚೆಗೆ ಕೊಂಡಿರುವ ನನ್ನ ಹತ್ತು ಚದರದ ಮನೆಯ ಎಲ್ಲಾ ಗೋಡೆಗಳೂ ಪುಸ್ತಕದ ಬೀರುಗಳಾಗಿ , ಮತ್ತೆ ಎಲ್ಲೆಂದರಲ್ಲಿ ನೆಲದ ಮೇಲೆಲ್ಲಾ ಹರಡಿ, ನಮ್ಮ ಹಾಲ್, ರೂಂ, ಡೈನಿಂಗ್ ಟೇಬಲ್ ಇವುಗಳಲ್ಲಿ ಎಲ್ಲೆಲ್ಲಿ ಜಾಗ ಸಿಗುತ್ತದೆಯೋ ಅಲ್ಲೆಲ್ಲಾ ನಾನು ದಿನ ನಿತ್ಯ ಉಪಯೋಗಿಸುವ ಪುಸ್ತಕಗಳೇ ತುಂಬಿದರೆ! ಮತ್ತೂ ಜಾಗ ಸಾಲದೆ ಅದಕ್ಕಾಗಿಯೇ ಲಕ್ಷಗಟ್ಟಲೇ ಸುರಿದು ಒಂದು ಜಾಗ ಮಾಡಬೇಕಾಗಿ ಬಂದರೆ ಮತ್ತೇನು ಮಾಡಿಯಾಳು. ಇಷ್ಟೆಲ್ಲಾ ಆದ ಮೇಲೂ ಮತ್ತೆ ನನ್ನ ಕಛೇರಿಯಲ್ಲಿ ಕೆಲವು ಸಾವಿರ ಪುಸ್ತಕಗಳಿವೆ ಅವನ್ನೂ ಮನೆಗೆ ತರಬೇಕಾಗುತ್ತದೆ ಎಂದರೆ.
ನನ್ನ ಈ ಪುಸ್ತಕ ಸಂಗ್ರಹ ಆರಂಭವಾಗಿದ್ದು ನನ್ನ ಎಸ್ ಎಸ್ ಎಲ್ ಸಿ, ಪೀಯೂಸಿ ದಿನಗಳಲ್ಲಿ. ನಮ್ಮ ತಂದೆಯವರು ಆ ವೇಳೆಗೆ ಒಂಬತ್ತು ಜನರ ಹೊಟ್ಟೆಯನ್ನು, ಶಿಕ್ಷಣದ ವೆಚ್ಚವನ್ನು ತೂಗಿಸಬೇಕಾಗಿತ್ತು. ಇನ್ನು ನನಗೆ ಪುಸ್ತಕ ಕೊಳ್ಳಲು ಹಣ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಡಿಮೆ ವೆಚ್ಚದಲ್ಲಿ ಸಂಸಾರ ತೂಗಿಸಲು ಹಲವು ಯೋಚನೆಗಳನ್ನು ಮಾಡಬೇಕಾಗುತ್ತಿತ್ತು ಅವರು. ಇದೇ ನನಗೆ ಪುಸ್ತಕ ಕೊಳ್ಳಲು ಬಜೆಟ್ ಒದಗಿಸಿತು ಎನ್ನುವುದೇ ಒಂದು ವಿಶೇಷ .ನಾವು ವಾಸವಾಗಿದ್ದ ಜಾಗದಿಂದ ದೂರ ಇದ್ದ ನಾವು ಹಿಂದೆ ವಾಸವಾಗಿದ್ದ ಜಾಗದಲ್ಲಿದ್ದ ರೇಷನ್ ಅಂಗಡಿಯಿಂದ ಪ್ರತಿವಾರವೂ ರೇಷನ್ ತರಬೇಕಾಗುತ್ತಿತ್ತು. ಅವರು ಅದರ ಸಲುವಾಗಿ ಬಸ್ ಗೆ ಎಷ್ಟು ಬೇಕೋ ಅಷ್ಟು ಹಣ ಕೊಟ್ಟು ಮನೆಗೆ ಹಿರಿಯ ಮಗನಾದ ನನ್ನನ್ನು ಕಳುಹಿಸುತ್ತಿದ್ದರು.
ಅಂತಹ ಒಂದು ಪ್ರಸಂಗದಲ್ಲಿ ರೇಷನ್ ಕೊಂಡು ಸಿಟಿ ಮಾರ್ಕೆಟ್ ನ ಬಳಿ ಬಸ್ ಬದಲಾಯಿಸುವುದಕ್ಕಾಗಿ ಕಾಯುತ್ತಿದ್ದೆ. ಆಗೆಲ್ಲಾ ಬೆಂಗಳೂರಿನ ಕೇಂದ್ರ ಮೆಜೆಸ್ಟಿಕ್ ಅಲ್ಲ. ಸಿಟಿ ಮಾರ್ಕೆಟ್ ಅಗಿತ್ತು . ಆಗ ನನಗೆ ಒಂದು ಫೂಟ್ ಪಾತಿನ ಮೆಲೆ ಹಳೆ ಪುಸ್ತಕದ ಅಂಗಡಿ ಕಣ್ಣಿಗೆ ಬಿತ್ತು. ಅಲ್ಲಿ ಪುಸ್ತಕಗಳನ್ನು ನೊಡಿ ಅವುಗಳ ಬೆಲೆ ಕೇಳಿದೆ. ಅದರ ಬೆಲೆ ಎಂಟಾಣೆ ಎಂದರು. ನನ್ನ ಜೋಬಿನಲ್ಲಿ ಅಷ್ಟಿತ್ತು. ಹಿಂದೆ ಮುಂದೆ ನೋಡದೆ ಕೊಟ್ಟು ಪುಸ್ತಕ ಕೊಂಡುಬಿಟ್ಟೆ. ಸರಿ ಮುಂದೆ, ಮುಂದಿನ ಬಸ್ ಚಾರ್ಜ್ ಗೆ ( ಆಗ ಬಸ್ ಚಾರ್ಜ್ ಎಂದರೆ 20 ಪೈಸೆ., 30 ಪೈಸೆ.) ಹಣ ಇರಲಿಲ್ಲ. ನಡೆಯುವುದೇನು ನನಗೆ ಹೊಸದೆ. ರೇಷನ್ ಚೀಲ ಹೆಗಲ ಮೇಲೆ ಹೊತ್ತು ನಡೆಯಲಾರಂಭಿಸಿದೆ. ನಡೆಯುತ್ತಲೇ ಕೊಂಡ ಪುಸ್ತಕವನ್ನು ಓದಲಾರಂಭಿಸಿದೆ. ಹಾಗೆ ನಾನು ಕೊಂಡ ಮೊದಲ ಪುಸ್ತಕ ನನ್ನ ಮೆಚ್ಚಿನ ಹಲವು ಕವನಗಳಿದ್ದ ಕೊಳಲು ಕವನ ಸಂಗ್ರಹ. ಕುವೆಂಪುರವರ ಮೊದಲ ಕವನ ಸಂಗ್ರಹವೂ ಕೂಡ. ಯಾರಿಗೋ ಪಠ್ಯ ಪುಸ್ತಕವಾಗಿದ್ದು ವರ್ಷ ಮುಗಿದ ಮೇಲೇ ಹಳೆ ಪುಸ್ತಕದ ಅಂಗಡಿಗೆ ಬಂದಿತ್ತು.
ಹೀಗೆ ವಾರಕ್ಕೊಂದು ಪುಸ್ತಕ ನನ್ನದಾಗತೊಡಗಿತು. ಅನಕೃ , ತರಾಸುರವರ ಅನೇಕ ಕಾದಂಬರಿಗಳು ಕೈಲಾಸಂ ರವರ ನಾಟಕಗಳು ಹೀಗೆ ನನ್ನವಾದವು. ಮುಂದೆ ನಮ್ಮ ತಂದೆ ರಾಜಾಜಿನಗರದಲ್ಲಿ ಬಿಡಿಎದ ಅಂದಿನ ರೂಪ ಸಿಐಟಿಬಿ ಸಿಕ್ಕ ಜಾಗದಲ್ಲಿ ಮನೆ ಕಟ್ಟಿಸಲಾರಂಭಿಸಿದರು. ನಾನು ಕಟ್ಟಲ್ಪಡುತ್ತಿದ್ದ ಮನೆಗೆ ರಾತ್ರಿ ಕಾವಲುಗಾರನಾದೆ. ಬೆಳಗ್ಗೆ ಮೈಸೂರು ರಸ್ತೆಯ ಬ್ಯಾಟರಾಯನಪುರದ ನಮ್ಮ ಮನೆಯಿಂದ ಬಸವನಗುಡಿಗೆ ಕಾಲೇಜಿಗೆ ಹೋಗುವುದು . ಅಲ್ಲಿಂದ ಕಾಲೇಜು ಬಿಟ್ಟ ಮೇಲೆ ರಾಜಾಜಿನಗರಕ್ಕೆ ಹೋಗುವುದು, ರಾತ್ರಿ ಅಲ್ಲಿದ್ದು ಬೆಳಗ್ಗೆ ಮತ್ತೆ ಮೈಸೂರು ರಸ್ತೆಯ ಮನೆಗೆ ಹೋಗುವುದು, ಇದು ನನ್ನ ದಿನ ನಿತ್ಯದ ಚರಿ. ಈ ಕೆಲಸಗಳಿಗಾಗಿ ನನಗೆ ಬಸ್ ಚಾರ್ಜ್ ಗೆ ಹೆಚ್ಚು ಹಣ ಸಿಗತೊಡಗಿತು. ನಾನು ನಡೆದು ಪ್ರತಿದಿನವು ಅಂದಿನ ಬೆಂಗಳೂರಿಗೆ ಒಂದು ಸುತ್ತು ಪ್ರದಕ್ಷಿಣೆ ಬರುತ್ತಿದ್ದೆ. ಈ ದಾರಿಯಲ್ಲಿ ನನಗೆ ಬಳೆ ಪೇಟೆಯ ಹಳೆ ಪುಸ್ತಕದ ಅಂಗಡಿಗಳು ಕಣ್ಣಿಗೆ ಬಿದ್ದವು. ಇನ್ನೂ ಆಗತಾನೆ ಅಲ್ಲಿ ಹೊಸದಾಗಿ ಈ ಅಂಗಡಿಗಳು ಸೇರಲಾರಂಭಿಸಿದ್ದುವು. ಸರಿಸುಮಾರು ವಾರಕ್ಕೆ ಮೂರು- ನಾಲ್ಕು ಪುಸ್ತಕ ಕೊಳ್ಳಲಾರಂಭಿಸಿದೆ. ನೋಡಿ, ನಾನು ಎಷ್ಟು ಪುಸ್ತಕ ಶ್ರೀಮಂತನಾದೆ ಎಂದು. ಇಂತಹ ಭಾಗ್ಯ ಎಷ್ಟು ಜನಕ್ಕೆ ಸಿಕ್ಕಿದೆ? ಜೊತೆಗೆ ನನ್ನ ಈ ಸಂಗ್ರಹ ನಮ್ಮ ತಂದೆಯವರ ಕಣ್ಣಿಗೆ ಬೀಳದಂತೆ ರಕ್ಷಿಸಿಡಲು ಹೊಸ ಮನೆಯ ಅಟ್ಟದ ಮೇಲೆ ಒಂದು ಗೂಡು ಮಾಡಿಕೊಳ್ಳುವ ಅವಕಾಶ ದೊರಕಿತ್ತು ಹೊಸ ಮನೆಯಲ್ಲಿ. ಹೀಗೆ ನಮ್ಮ ಈ ಹೊಸ ಮನೆಗೆ ಮೊದಲು “ಗೃಹ ಪ್ರವೇಶ” ಮಾಡಿದ ಗೃಹ ವಸ್ತುಗಳೇ ಪುಸ್ತಕಗಳು . ಇದಕ್ಕಿಂತ ಶುಭಾರಂಭ ಬೇಕೆ? ಆದ್ದರಿಂದಲೇ ನಮ್ಮ ಮನೆಯವರೆಲ್ಲಾ ಸರಸ್ವತೀ ಪುತ್ರರೇ.

ಒಂದು ಕಡೆ ಲೈಬ್ರರಿ ಪುಸ್ತಕಗಳು ಮತ್ತು ಮತ್ತೊಂದು ಕಡೆ ನಾನು ಕೊಂಡ ಪುಸ್ತಕಗಳು. ಹೀಗೆ ನನ್ನ ಓದು ಹಲವು ಪಟ್ಟಾಯಿತು. ಈ ಮಾಲೆಯ ಹಿಂದಿನ ಲೇಖನಗಳನ್ನು ಓದಿ ನಾನು ಕೇವಲ ಸಂಸ್ಕೃತ ನಾಟಕಗಳು ಮತ್ತು ರಾಮಾಯಣಗಳು ಇವುಗಳನ್ನು ಮಾತ್ರವೆ ನನ್ನ ಓದು ಎಂದು ಭಾವಿಸೀರಿ. ಈ ಅವಧಿಯಲ್ಲೇ ನಾನು ಕೈಲಾಸಂರವರ ನಾಟಕಗಳಿಂದ ಸಂಸರ ನಾಟಕಗಳು, ಕುವೆಂಪು, ಮಾಸ್ತಿಯವರ ನಾಟಕಗಳು, ಮಾಸ್ತಿ, ಕುವೆಂಪು, ಬೇಂದ್ರೆ, ಪುತಿನ, ಪರಮೇಶ್ವರ ಭಟ್ಟ, ಗೋವಿಂದ ಪೈ, ಪಂಜೆ ಮಂಗೇಶರಾವ್ ಮೊದಲಾದವರ ಕವನ ಸಂಗ್ರಹಗಳು, ಶಿವರಾಮ ಕಾರಂತರ ಕಾದಂಬರಿಗಳು , ಗೋರೂರ ನಮ್ಮ ಊರಿನ ರಸಿಕರು ಇತ್ಯಾದಿ ನನ್ನಸಂಗ್ರಹ ಸೇರಿದ ಮತ್ತು ನಾನು ಓದಿದ ಕನ್ನಡ ಸಾಹಿತ್ಯ. ಕರಾಕೃರವರ ಜಾನಪದ ಸಾಹಿತ್ಯ ಮಾಲೆ ನನ್ನ ಪ್ರಿಯ ಓದುಗಳಲ್ಲೊಂದಾಗಿತ್ತು .ಹಳೇ ಪುಸ್ತಕಗಳ ಅಂಗಡಿಯಲ್ಲಿ ಬಹಳ ಕಡಿಮೆ ವೆಚ್ಚದಲ್ಲಿ ನನಗೆ ಪುಸ್ತಕಗಳು ದೊರೆಯುತ್ತಿದ್ದವು ನಿಜ, ಆದರೆ ಅದರಲ್ಲಿ ಕೆಲ ಮುಖ್ಯ ಕೊರತೆಗಳಿದ್ದುವು. ಏನೆಂದರೆ ಹಿಂದಿನ ವರ್ಷ ಪಠ್ಯಗಳಾಗಿದ್ದ ಮುಂದಿನ ವರ್ಷ ಮುಂದುವರೆಸದಿದ್ದ ಪುಸ್ತಕಗಳು ಮಾತ್ರ ದೊರಕುತ್ತಿದ್ದವು. ಆದ್ದರಿಂದ ನನಗೇ ಗೊತ್ತಿಲ್ಲದಂತೆ ನನ್ನ ಓದು ನನ್ನ ಇಚ್ಚೆಗೆ ಒಳಗಾಗಿರಲಿಲ್ಲ. ಈ ಪಠ್ಯಗಳನ್ನು ಆರಿಸುವವರ ಕೃಪೆಗೆ ಒಳಗಾಗಿತ್ತು. ಆದ್ದರಿಂದ ನನಗೆ ಸಿಕ್ಕ ಪುಸ್ತಕಗಳು ಮೈಸೂರು ವಿಶ್ವ ವಿದ್ಯಾಲಯ ನಿಯಮಿಸಿದ ಪಠ್ಯ ಪುಸ್ತಕಗಳು ಅವರ ಕಣ್ಣಿಗೆ ಬೀಳದವರು ನನ್ನ ಕಣ್ಣಿಗೆ ಕೂಡ ಮರೆಯಾಗಿದ್ದರು ಅನೇಕ ವರ್ಷಗಳು. ಈ ಅಲಭ್ಯತೆ ನನ್ನ ಅಭಿರುಚಿಯನ್ನು ನಿಯಂತ್ರಿಸಿದೆ ಎಂಬುದನ್ನು ಬಹಳ ಕಾಲದ ನಂತರ ಕಂಡುಕೊಂಡೆ. ಉತ್ತರ ಕರ್ನಾಟಕದ ನವೋದಯ ಸಾಹಿತಿಗಳಲ್ಲಿ ಬೇಂದ್ರೆಯವರು ಬಿಟ್ಟರೆ ಬಹಳ ಜನರ ಹೆಸರು ಕೂಡ ಗೊತ್ತಿರಲಿಲ್ಲ. ಉದಾ : ಶ್ರೀರಂಗರ ಅನೇಕ ನಾಟಕಗಳನ್ನು ಇಂದೂ ನಾನು ಓದಿಲ್ಲ. ಹಾಗೆ ಶಂಬಾ , ರಾವ್ ಬಹದ್ದೂರ್ ರವರು , ಕರ್ಕಿ , ಮಧುರ ಚೆನ್ನರು ಬೆಟಗೇರಿ ಕೃಷ್ಣ ಶರ್ಮರು ಹೀಗೆ . ಮತ್ತೊಂದು ಈ ರೀತಿಯ ಒಮಿಷನ್ ಎಂದರೆ ನೈಜ ಪ್ರಗತಿಶೀಲ ಸಾಹಿತಿಗಳಾದ ನಿರಂಜನ , ಬಸವರಾಜ ಕಟ್ಟೀಮನಿ . ಚದುರಂಗರ ಸರ್ವ ಮಂಗಳಾ ಮಾತ್ರ ಸಿಕ್ಕಿತ್ತು.
ಇನ್ನು ನನಗೆ ಪುಸ್ತಕ ಮಾರಾಟ ಮಾಡುತ್ತಿದ್ದ ಹಲವು ಹಳೇ ಪುಸ್ತಕದಂಗಡಿಯವರನ್ನು ನೆನೆಸಿಕೊಳ್ಳಲೇ ಬೇಕು.ಬಳೇ ಪೇಟೆಯ ಹಳೇ ಪುಸ್ತಕದ ಅಂಗಡಿಯವರ ಎರಡು ಮೂರು ತಲೆಮಾರುಗಳನ್ನು ನಾನು ನೋಡಿದ್ದೇನೆ. ಅದರಲ್ಲಿ ಬಹಳ ಜನ ಮುಸ್ಲಿಮರು . ಓದು ಬರಹ ಬಹಳವೇನು ಗೊತ್ತಿಲ್ಲದವರು. ಕನ್ನಡ, ಇಂಗ್ಲಿಷ್ ಅಕ್ಷರಗಳನ್ನು ಗುರುತು ಹಿಡಿಯಲು ಹೇಗೋ ತಿಳಿದುಕೊಂಡಿರುತ್ತಾರೆ. ಆದರೂ ಒಂದು ಪುಸ್ತಕದ ಮೌಲ್ಯವೇನು ಎಂದು ಅವರಿಗೆ ಒಂದು ಅಂದಾಜಿರುತ್ತದೆ. ಆದರೆ ಅಂದಾಜು ಮಾತ್ರ. ಇಂತವರೇಕೆ ಈ ವ್ಯಾಪಾರಕ್ಕಿಳಿಯುತ್ತಾರೆ ಎಂದು ಬಹಳ ದಿನಗಳ ನಂತರ ಹೊಳೆಯಿತು. ಬೀದಿ ಬೀದಿ ಸುತ್ತಿ ಹಳೇ ಪೇಪರ್ ಗಳನ್ನು ಮನೆ ಮನೆಗಳಿಂದ ಕೊಳ್ಳುವವರು ಹೆಚ್ಚಾಗಿ ಮುಸ್ಲಿಮರೇ . ಈ ವೃತ್ತಿಯಿಂದ ಅವರೇ ಕೊಟ್ಟುಕೊಂಡ ಪ್ರಮೋಷನ್ ಪುಸ್ತಕ ವ್ಯಾಪಾರ . ಪುಸ್ತಕಗಳ ಬಗೆಗಿನ ಅವರ ತಿಳುವಳಿಕೆಯ ಮಿತಿಯನ್ನು ನಾನು ಬಹಳ ದುರುಪಯೋಗ ಪಡಿಸಿಕೊಂಡಿದ್ದೇನೆ . ಅಲ್ಲಿ ನನಗೆ ಅನೇಕ ಮುತ್ತು , ರತ್ನಗಳು ದೊರಕಿವೆ. ಬಹಳ ಅಗ್ಗವಾಗಿ . ನನ್ನ ಜೇಬಿನ ಅಳವಿಗೆ ತಕ್ಕನಾಗಿ. ಪಂಪ , ರನ್ನರ ಕಾವ್ಯಗಳು , ಸಾವಿರಾರು ರೂ ಬೆಲೆಯ ಇತಿಹಾಸದ, ಸಮಾಜ ವಿಜ್ಞಾನ ಮತ್ತು ವಿಜ್ನಾನದ ಪುಸ್ತಕಗಳು 50 – ನೂರು ರೂಗೆ ನನಗೆ ಅಲ್ಲಿ ದೊರಕಿವೆ. ಅದರಲ್ಲಿ ಒಂದು ಸಂಧಿಯಲ್ಲಿ ಅಂಗಡಿಯಿದ್ದ ಒಬ್ಬ ಸಾಬಣ್ಣನಂತೂ ನನಗೆ ಪ್ರಿಯವಾದ ಪುಸ್ತಕಗಳನ್ನು ನನಗಾಗಿ ಕಾದಿರಿಸಿ ಕೊಡುತ್ತಿದ್ದ . ಅವನ ಮತ್ತು ಅಂತಹವರನೇಕರ ಉಪಕಾರ ಎಂತು ಮರೆಯಲಿ. ಕೆಲವರು ನನ್ನ ಪುಸ್ತಕಗಳ ಹಸಿವನ್ನು ನೋಡಿ ದೂರದಲ್ಲೆಲ್ಲೋ ಇದ್ದ ಅವರ ಮನೆಗಳು ಅಥವಾ ಪುಸ್ತಕಗಳ ಉಗ್ರಾಣಗಳಿಗೇ ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ತೆಗೆದುಕೊಂಡು ಹೋಗಿ ಸ್ವಾಮಿ, ನಿಮ್ಮಂತವರು ಓದುವುದು ಹೆಚ್ಚೋ ನಾವು ಕೊಡುವುದು ಹೆಚ್ಚೋ ಎಂದು ಪ್ರೀತಿ ತೋರಿಸಿದ್ದಾರೆ. ನೂರಾರು ರೂ ಪುಸ್ತಕಗಳನ್ನು ಸಾಲವಾಗಿ ಕೊಟ್ಟಿದ್ದಾರೆ. ಮನೆಯಲ್ಲಿ ಪುಸ್ತಕ ಹುಡುಕುವುದರಲ್ಲಿ ಮುಳುಗಿ ಹೋದ ನನಗೆ ಊಟವನ್ನೂ ಕೊಟ್ಟಿದ್ದಾರೆ. ಅವರ ಸಂತತಿ ಸಾವಿರವಾಗಲಿ ಎಂದು ಪುರಂದರ ದಾಸರಂತೆ ಹಾರೈಸುವುದು ನನ್ನ ಕರ್ತವ್ಯ. ಇತ್ತೀಚೆಗೆ ಅವರ ವೃತ್ತಿಯೂ ಬಹಳ ತೊಂದರೆಯಲ್ಲಿದೆ . ಮಾರುಕಟ್ಟೆ ಮನೋಭಾವದ ಶಿಕ್ಷಣದಿಂದಾಗಿ ಅವರಲ್ಲಿ ಸಾಹಿತ್ಯದ ಪುಸ್ತಕಗಳನ್ನು ನೋಡುವುದು ಕಷ್ಠವಾಗಿದೆ.
(ಮುಂದುವರಿಯುವುದು…)
ಓದು ಜನಮೇಜಯ : ಬಳೇಪೇಟೆಯ ಗಲ್ಲಿಗಳಲ್ಲಿ ಸಿಕ್ಕ ಮುತ್ತು ರತ್ನಗಳು..
ನಿಮಗೆ ಇವೂ ಇಷ್ಟವಾಗಬಹುದು…
2 Comments
Trackbacks/Pingbacks
- ಓದು ಜನಮೇಜಯ : ಫಿಸಿಕ್ಸ್ ಪರೀಕ್ಷೆಗೆ ’ತಿರುಗು ಬಾಣ’ « ಅವಧಿ / Avadhi - [...] ಓದು ಜನಮೇಜಯ : ಫಿಸಿಕ್ಸ್ ಪರೀಕ್ಷೆಗೆ ’ತಿರುಗು ಬಾಣ’ September 22, 2014 (ಇಲ್ಲಿಯವರೆಗೆ…) [...]





Some years earlier, I got Manohar Malgaonkar’s “Bend in the river Ganges” for only 9 Rs. Now a new book after long search would cost more than 300 Rs. You don’t get a good cup of tea for Rs. 9/-.
ಇವತ್ತಿನ ದಿನ ಒಂದು ಹೊತ್ತಿನ ಊಟಕ್ಕೆ ಐವತ್ತೋ ಅರವತ್ತೊ ನೀಡಬೇಕು. ಇಂತಹ ದಿನ ಮಾನದಲ್ಲೂ ಹತ್ತೋ ಐದಕ್ಕೋ ಪುಸ್ತಕ ಮಾರುವ ಅಂಗಡಿಗಳು ಇನ್ನೂ ಇವೆ.ನಾಗರಾಜ್ ರವರ ರೀತಿ ನಾನೂ ನೂರಾರು ಪುಸ್ತಕಗಳ ಕೊಂಡು ಓದಿದ್ದೇನೆ.ಅವರ ಬಗ್ಗೆ ಬರೆದದ್ದಕ್ಕೆ ದನ್ಯವಾದಗಳು.