ಪಿಯುಸಿಯಲ್ಲಿ ನಾನು ಎದುರಿಸಿದ ಒಂದು ಪರೀಕ್ಷೆಯ ಬಗೆಯನ್ನು ವಿವರಿಸಿದ್ದೇನೆ . ವಿಜ್ಞಾನದ ವಿದ್ಯಾರ್ಥಿಗೆ ಕನ್ನಡಕ್ಕಿಂತ ಮುಖ್ಯವಾದದ್ದು ಐಚ್ಛಿಕ ವಿಷಯವಾದ ವಿಜ್ಞಾನದ ವಿಷಯಗಳು ಅದೇ ಮುಂದಿನ ಭವಿಷ್ಯಕ್ಕೆ ತಿರುವು ಕೊಡುವಂತಹದು ಎಂದು ಎಲ್ಲರಿಗೂ ತಿಳಿದ ವಿಷಯ. ಅದಕ್ಕಾಗಿಯೇ ಎರಡು ವರ್ಷ ಪೂರ್ತಿ ಮೀಸಲಿಡುವವರನ್ನು ಇಂದು ನೋಡುತ್ತೇವೆ. ನಾನು ಕನ್ನಡದ ಸಾಹಿತ್ಯದ ಅಧ್ಯಯನಕ್ಕೆ ವರ್ಷ ಪೂರ್ತಿ ಮೀಸಲಿಟ್ಟರೂ ಪರೀಕ್ಷೆ ಸಮಯದಲ್ಲಾದರೂ ವಿಜ್ಞಾನದ ವಿಷಯಗಳನ್ನು ಓದಿಕೊಳ್ಳಬೇಕೆಂದು ಸಂಕಲ್ಪ ಮಾಡಿಕೊಂಡೆ .
ಮೊದಲ ವಿಷಯವಾಗಿ ಫಿಸಿಕ್ಸ್ ಪರೀಕ್ಷೆ ಬಂತು. ಆಗಲೂ ನಾನು ಕಟ್ಟಿಸುತ್ತಿದ್ದ ಹೊಸಮನೆಯ ಕಾವಲುಗಾರನಾಗಿದ್ದೆ. ಅಲ್ಲಿಗೆ ರಾತ್ರಿ ಹೋಗಿ ಹೊಸದಾಗಿ ಹಾಕಿದ ಸಜ್ಜಾದ ಮೇಲಿದ್ದ ಫಿಸಿಕ್ಸ್ ಪುಸ್ತಕಗಳನ್ನು ತೆಗೆದುಕೊಳ್ಳಲು ಏಣಿ ಹತ್ತಿದೆ. ಅಲ್ಲಿ ನನಗೆ ಮೊದಲು ಕಂಡದ್ದು ತರಾಸುರವರ ತಿರುಗು ಬಾಣ ಕಾದಂಬರಿ. ಅದರ ಜೊತೆಯಲ್ಲಿಯೇ ಇಟ್ಟಿದ್ದೆ , ಕಂಬನಿಯ ಕುಯಿಲು ಮತ್ತು ರಕ್ತ ರಾತ್ರಿಗಳನ್ನು . ಇವುಗಳನ್ನು ನಾನು ಹಿಂದೆಯೇ ಓದಿದ್ದರೂ ಕೆಲ ದಿನಗಳ ಹಿಂದೆ ಹಳೆ ಪುಸ್ತಕದ ಅಂಗಡಿಯಲ್ಲಿ ಕೊಂಡು ಸ್ವಂತ ಮಾಡಿಕೊಂಡು ಅಲ್ಲಿ ಮುಚ್ಚಿಟ್ಟಿದ್ದೆ .ಸರಿ ಸ್ವಲ್ಪ ಓದಿಬಿಡೋಣ . ಮಸೆ ಮಸೆ ಕೊಡಲಿ ಮಸೆ ಓದಿ ನಂತರ ಫಿಸಿಕ್ಸ್ ಗೆ ಕೈ ಹಾಕೋಣ ಎಂದು ಅದನ್ನು ಓದಲು ಆರಂಭಿಸಿದೆ.
ಪ್ರಧಾನಿ ಪರುಶುರಾಮಪ್ಪನವರ ತಂತ್ರಗಳು , ನಾಗತಿಯರ ಆತಂಕಗಳು ಇವುಗಳನ್ನು ಅಲ್ಲಿನ ವೀರರಸದ ಉದ್ವೇಗದ ಮಾತುಗಳನ್ನು ಓದುತ್ತಾ ಇನ್ನು ಸ್ವಲ್ಪ , ಮತ್ತು ಸ್ವಲ್ಪಮಾತ್ರ ನೋಡೋಣ ಎಂದುಕೊಳ್ಳುತ್ತಾ ನನ್ನನ್ನೇ ನಾನು ಮರೆತೇ ಬಿಟ್ಟೆ. ತಿರುಗು ಬಾಣ ವನ್ನು ಮತ್ತೊಮ್ಮೆ ಓದಿ ಮುಗಿಸಿದೆ. ಆ ವೇಳೆಗಾಗಲೇ ರಾತ್ರಿ ಒಂದು ಗಂಟೆ. ಆಗ ಫಿಸಿಕ್ಸ್ ಓದಲು ಹೋದರೆ ಬೆಳಗ್ಗೆ ಏಳುವುದೇ ಹೆಚ್ಚು ಕಮ್ಮಿಯಾದೀತೆಂದು ಹೆದರಿ , ಬೆಳಗ್ಗೆ ಒಮ್ಮೆ ಕಣ್ಣಾಡಿಸೋಣವೆಂದು ಮಲಗಿದೆ. ಬೆಳಗ್ಗೆ ಏಳುವ ವೇಳೆಗೆ ಎಂಟು ಗಂಟೆಯಾಗಿ ಬಿಟ್ಟಿತ್ತು. ಅವಸರದಲ್ಲಿ ಸಿದ್ಧನಾಗಿ ಪುಸ್ತಕಗಳನ್ನು ತೆಗೆದುಕೊಂಡು ಹೊರಟೆ. ಹೋಗುವಾಗ ಬಸ್ ನಲ್ಲಿ ಆತುರದಲ್ಲಿ ಕಣ್ಣಾಡಿಸಿದ್ದೇ ನಾನು ಫಿಸಿಕ್ಸ್ ಪರೀಕ್ಷೆಯ ಹಿಂದಿನ ದಿನ ಓದಿದ್ದು ಎನ್ನಬಹುದು.
ಪರೀಕ್ಷೆಯಲ್ಲಿ ನಾನು ವರ್ಷವೆಲ್ಲಾ ತರಗತಿಯಲ್ಲಿ ಕೇಳಿಸಿಕೊಂಡು ಅರ್ಥ ಮಾಡಿಕೊಂಡದ್ದು ಸಾಕಷ್ಟು ಪ್ರಯೋಜನಕ್ಕೆ ಬಂದಿತು. ಪಾಸಾಗುವ ಬಗ್ಗೆ ಯಾವ ಸಂಶಯವೂ ಇರಲಿಲ್ಲ. ಹಿಂದಿನ ದಿನ ರಿವೈಸ್ ಮಾಡಿದ್ದರೆ ಇನ್ನೂ ಹತ್ತು ಅಂಕಗಳನ್ನು ಪಡೆಯುವುದು ಸಾಧ್ಯವಿತ್ತು ಎಂಬುದೇನೋ ನಿಜ. ಫಲಿತಾಂಶ ಬಂದಾಗ ನಾನು ಲೆಕ್ಕ ಹಾಕಿದ್ದಂತೆಯೇ ಫಿಸಿಕ್ಸ್ ನಲ್ಲಿ ಮೊದಲ ದರ್ಜೆಯಲ್ಲಿ ಪಾಸಾಗಿತ್ತು. ಗಣಿತದಲ್ಲಿ 99 ಅಂಕಗಳು . ಒಟ್ಟಾರೆ ಮೊದಲ ದರ್ಜೆಗಿಂತ ಸ್ವಲ್ಪ ಹೆಚ್ಚು ಅಂಕಗಳು ಬಂದಿದ್ದವು. ಈಗ ಮುಂದೆ ಡಿಗ್ರಿಯಲ್ಲಿ ಯಾವ ಕೋರ್ಸ್ ಗೆ ಎಂಬ ಪ್ರಶ್ನೆ ಎದ್ದಿತು. ನನಗೆ ಕನ್ನಡ ಐಚ್ಛಿಕ ವಿಷಯ ತೆಗೆದುಕೊಂಡು ಡಿಗ್ರಿ ಮಾಡಬೇಕೆಂದು ಬಲವಾದ ಆಸೆ. ಆದರೆ ಅಂದಿನ ಮತ್ತು ಎಂದಿನ ರೂಢಿಯಂತೆ ವಿಜ್ಞಾನ ಐಚ್ಛಿಕ ತೆಗೆದುಕೊಂಡು ಫರ್ಸ್ಟ್ ಕ್ಲಾಸ್ ಬಂದವನು ಇಂಜನಿಯರಿಂಗ್ ಅಲ್ಲದೆ ಬೇರೇನು ಡಿಗ್ರಿ ಆರಿಸಿಕೊಳ್ಳುತ್ತಾರೆ ( ಅಂದು ಪಿಸಿಬಿ ಬೇರೇ , ಮತ್ತು ಪಿಸಿಎಂ ಬೇರೆ ಆದ್ದರಿಂದ ಮೆಡಿಕಲ್ ಕೋರ್ಸ್ ಸಾಧ್ಯತೆ ಮುಚ್ಚಿಹೋಗಿತ್ತು ) ನನ್ನ ಮಿತ್ರರು ಇಂಜನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಅರ್ಜಿ ಹಾಕಿದರು. ನನಗೆ ಎಷ್ಟೇ ಇಚ್ಛೆ ಇದ್ದರೂ ನಮ್ಮ ತಂದೆಯವರ ಮುಂದೆ ಎಂದು ಉಸುರಲೂ ಆಗಲಿಲ್ಲ. ಒಲ್ಲದ ಮನಸ್ಸಿನಿಂದಲೇ ಇಂಜನಿಯರಿಂಗ್ ಪ್ರವೇಶದ ಮೌಖಿಕ ಪರೀಕ್ಷೆಗೆ ಹಾಜರಾದೆ .

ಇಲ್ಲಿ ಒಂದು ಸಂಗತಿ ಹೇಳಬೇಕು. ಇಂಟರ್ ವ್ಯೂಗೆ ಹಾಜರಾದ ದಿನ ನನ್ನ ಕಾಲು ಬಹಳ ನೋಯುತ್ತಿತ್ತು . ಏಕೆಂದರೆ ನನ್ನ ಚಪ್ಪಲಿ ಕಾಲನ್ನು ಕಚ್ಚಿತ್ತು. ಎಕೆಂದರೆ ನನ್ನ ಜೀವನದಲ್ಲಿ ಅದೇ ಮೊದಲ ಬಾರಿಗೆ ಆದರ ಹಿಂದಿನ ದಿನ ನನಗೆ ಚಪ್ಪಲಿ ದೊರಕಿದ್ದವು. ಏಕೆಂದರೆ ಇಂಜನಿಯರಿಂಗ್ ಇಂಟರ್ ವ್ಯೂ ಗೆ ಹೋದಾಗ ನಾನು ಎಂದಿನಂತೆ ಬರಿಗಾಲಲ್ಲಿದ್ದರೆ ಅಲ್ಲಿ ಪರೀಕ್ಷೆ ನಡೆಸುವವರು ಏನೆಂದು ಕೊಳ್ಳುವರೋ ಎಂಬ ಕಾರಣಕ್ಕೆ ಮೊದಲ ಬಾರಿಗೆ ಚಪ್ಪಲಿ ಹಾಕಿದ್ದೆ . ಅಲ್ಲಿಯವರೆಗೆ ದಿನವೂ ನಾಲ್ಕಾರು ಕಿ.ಮೀ ದಾರಿ ಸವೆಸುತ್ತಿದ್ದ ನನ್ನ ಪಾದಗಳು ಯಾವುದೇ ಪಾದರಕ್ಷೆಗಳನ್ನು ಧರಿಸುವ ಭಾಗ್ಯ ಕಂಡಿರಲಿಲ್ಲ. ಆ ನೋವನಲ್ಲಿಯೇ ಕುಂಟುತ್ತಾ ಹೋದ ನಾನು ಎಷ್ಟು ಸಮರ್ಪಕವಾಗಿ ಉತ್ತರ ಹೇಳಿದೆನೋ ಗೊತ್ತಿಲ್ಲ . ನನಗೆ ಅಂದು ರಾಜ್ಯದಲ್ಲಿದ್ದ ನಾಲ್ಕಾರು ಇಂಜನಿಯರಿಂಗ್ ಕಾಲೆಜುಗಳಲ್ಲಿ ಪ್ರವೇಶ ದೊರೆಯಲಿಲ್ಲ . ಆದರೆ ಮಂಗಳೂರು ಬಳಿಯ ಸುರತ್ಕಲ್ಲ ನಲ್ಲಿದ್ದ ಕೇಂದ್ರ ಸರ್ಕಾರದ ರೀಜನಲ್ ಇಂಜನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಸಿಕ್ಕಿತು. ದೂರದ ಊರಿನಲ್ಲಿ ಹಾಸ್ಟೆಲ್ ನಲ್ಲಿರ ಬೇಕಾಗಿತ್ತು . ಮನೆಯಿಂದ ದೂರವಾಗಿರುವುದು ನನಗೆ ಪ್ರಿಯವಾದ ವಿಷಯವೇ ಆದರೂ ಹಾಸ್ಟೆಲ್ ವೆಚ್ಚವನ್ನು ಭರಿಸುವ ಶಕ್ತಿ ನಮ್ಮ ಕುಟುಂಬಕ್ಕೆ ಇರಲಿಲ್ಲ. ಆದ್ದರಿಂದ ಬೇರೆ ಕೋರ್ಸ್ ಗಳನ್ನು ಹುಡುಕಬೇಕಾಯಿತು.
ಕೊನೆಗೆ ಬಿಸ್ಸಿ ಕೃಷಿಯಲ್ಲಿ ಪ್ರವೇಶ ಪಟ್ಟಿಗೆ ಮೊದಲಿಗನಾಗಿ ಸೀಟು ದೊರಕಿತು. ಇದರಿಂದಾಗಿ ಕೆಲ ತಿಂಗಳುಗಳ ನಂತರ ನನಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ( ಐಸಿಎಆರ್ ) ಯ ರಾಷ್ಟ್ರೀಯ ವಿದ್ಯಾರ್ಥಿ ವೇತನ ದೊರಕಿದ್ದು ನನ್ನ ಶಿಕ್ಷಣದ ವೆಚ್ಚವನ್ನು ಭರಿಸಿದ್ದಲ್ಲದೆ ನಾವು ಕಟ್ಟಿಸಿದ ಮನೆಯ ವಾರ್ಷಿಕ ಸಾಲದ ಕಂತು ತೀರಿಸುವುದಕ್ಕೂ ಆಗುತ್ತಿತ್ತು. ಅಲ್ಲಿ ಎಲ್ಲಾ ಪ್ರೊಫೆಶನಲ್ ಕೋರ್ಸ್ ಗಳಲ್ಲಿರುವಂತೆ ಕನ್ನಡ ಎಂಬ ವಿಷಯವೇ ಇರಲಿಲ್ಲ. ಮೊದಲ ವರ್ಷಕ್ಕೆ ಇಂಗ್ಲಿಷ್ ಇತ್ತು . ಆದರೆ ರೈತರೊಂದಿಗೆ ವ್ಯವಹರಿಸಬೇಕಾದ ಕೃಷಿ ಶಿಕ್ಷಣದಲ್ಲಿಯೂ ಕನ್ನಡ ವಿಷಯವೇ ಇಲ್ಲದ್ದು ನಮ್ಮ ಶಿಕ್ಷಣ ಪದ್ಧತಿಯಲ್ಲಿ ಸ್ವಂತ ಚಿಂತನೆಯನ್ನೇ ಇಲ್ಲದ ಪರಾನುಕರಣೆಯ ದುಸ್ಥಿತಿಯ ಸೂಚಕವಾಗಿದೆ. ಎಲ್ಲಾ ಪ್ರೊಫೆಷನಲ್ ಕೋರ್ಸ್ ಗಳಲ್ಲೂ ಕನ್ನಡ ಒಂದು ವಿಷಯವಾಗಿ ಮೂರು ವರ್ಷವೂ ಕಲಿಯಬೇಕು . ಏಕೆಂದರೆ ವೈದ್ಯರು , ಇಂಜಿನಿಯರರು ಕೂಡ ಕನ್ನಡ ಮಾತಾನಾಡುವ ಜನರೊಂದಿಗೆ ವ್ಯವಹರಿಸಬೇಕಲ್ಲವೇ ಆದರೆ ಅಂದೂ , ಇಂದೂ ಅಲ್ಲಿ ಕನ್ನಡದ ಮಾತೇ ಇಲ್ಲ. ಆದ್ದರಿಂದಲೇ ಪದವಿ ಪಡೆದವರು ಕನ್ನಡ ಮಾತಾಡಬೇಕಾದಾಗ ಒದ್ದಾಡುವುದನ್ನು ನೋಡ ಬೇಕು. ಅಷ್ಟು ಮಾತ್ರವೇ ಅಲ್ಲದೆ ದೇಶದೆಲ್ಲೆಡೆಯಲ್ಲಿ ಸಾಮಾನ್ಯ ಜನರಿಗೆ ಅವರದೇ ದೇಹದ ವೈದ್ಯಕೀಯ ವಿವರಗಳು ಅರ್ಥವಾಗದೆ ಎಷ್ಟೊಂದು ಅವಾಂತರಗಳು ಮತ್ತು ಹೊಸ ಮೂಢ ನಂಬಿಕೆಗಳು ಬೆಳೆದಿವೆಯೋ ! ನಮ್ಮ ಗ್ರಾಮೀಣ ಜನರು ತಮ್ಮ ಕಾಯಿಲೆಗಳ ಬಗ್ಗೆ ವೈದ್ಯರು ಹೇಳಿದ್ದನ್ನು ತಮ್ಮ ತಮ್ಮಲ್ಲೇ ವಿವರಿಸಿಕೊಳ್ಳುವುದನ್ನು ಕೇಳಬೇಕು. ಇಂತಹ ಸ್ಥಿತಿಗೆ ಅವರನ್ನು ದೂಡಿದ್ದಲ್ಲದೆ ಸಾಹಿತ್ಯದ ಓದಿನಿಂದ ವಂಚಿತವಾದ ವೈದ್ಯರು , ಇಂಜನಿಯರುಗಳು ಹಾಗೂ ಇತರ ವೃತ್ತಿ ಪದವೀಧರರು ಮಾನವೀಯ ಹಾಗೂ ಸಾಮಾಜಿಕ ಮೌಲ್ಯಗಳಲ್ಲಿಯೇ ಒಂದು ಕೊರೆಯನ್ನು ಅನುಭವಿಸುತ್ತಿದ್ದಾರೆ.
(ಮುಂದುವರಿಯುವುದು…)
ಓದು ಜನಮೇಜಯ : ಫಿಸಿಕ್ಸ್ ಪರೀಕ್ಷೆಗೆ ’ತಿರುಗು ಬಾಣ’
ನಿಮಗೆ ಇವೂ ಇಷ್ಟವಾಗಬಹುದು…





My God! you are a true ‘book worm’ Sir, I have not seen/heard anyone as avid reader as you. Thank you for writing this series.
Interesting, wonderful narration…
ನಮ್ಮ ನಡುವೆ ಮೂರು ಸಾಮಾನ್ಯ( ಕಾಮನ್) ಅಂಶಗಳಿವೆ.
1.ನಾನೂ ಬಿ.ಎಸ್ಸಿ(ಕೃಷಿ) ಪದವೀಧರ
2.ನನಗೂ ಮೆರಿಟ್ ಲಿಸ್ಟ್‍ನಲ್ಲಿ ಮೊದಲ ಸೀಟು ದೊರೆಯಿತು
3. ನನಗೂ ಐ.ಸಿ.ಎ.ಆರ್. ಸ್ಕಾಲರ್‍ಷಿಪ್ ದೊರೆಯಿತು
ನಿಮ್ಮಷ್ಟಲ್ಲದಿದ್ದರು ಸಹ ನಾನೂ ಪುಸ್ತಕಪೋತ. ಆದರೆ ನೀವು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಸಾಹಿತ್ಯ ಸಂಸ್ಕೃತಿ, ತತ್ವಚಿಂತನೆ ಕುರಿತ ಪುಸ್ತಕಗಳ ಅಭಾವ ನಾವು ಓದುವಕಾಲಕ್ಕೆ ಇರಲಿಲ್ಲ.ನನ್ನ ಬದುಕು ಬದಲಾಗಲೂ ಹೆಬ್ಬಾಳ, ಜಿಕೆವಿಕೆ ಗ್ರಂಥಾಲುಗಳೇ ಕಾರಣ
ಪುಸ್ತಕ ಪೋತ ,,,, ವಾಹ್ ಎಷ್ಟು ಚೆನ್ನಾಗಿದೆ ಈ ಪದ ಅಂದರೆ ನಾಗರಾಜ್ ಮತ್ತು ಅಂಥಹ ಸಕಲ ಪುಸ್ತಕಾಧೀನರಿಗೂ ಒಪ್ಪುವ ಪದ !