ನನ್ನ ಮುಖ್ಯಮಂತ್ರಿ ಪಟ್ಟವನ್ನು ನಾನು ಕೇವಲ ಆರು ತಿಂಗಳಲ್ಲಿಯೇ ಖಾಲಿ ಮಾಡಬೇಕಾಯಿತು. ನಾನು ರಾಜೀನಾಮೆ ನೀಡದೆಯೇ ಮತ್ತು ನನ್ನ ವಿಶ್ವಾಸ ಮತ ಪಡೆಯಲು ಆದೇಶ ಇಲ್ಲದೆಯೇ ಮತ್ತು ಸೋಲಾಗದೆಯೇ . ನಮ್ಮ ತಂದೆಯವರಿಗೆ ಆರು ತಿಂಗಳ ತರಬೇತಿಗೆಂದು ಗಂಗಾವತಿಗೆ ಕಳುಹಿಸಿದ ಪರಿಣಾಮ ನಾವು ಮತ್ತೆ ಊರು ಬಿಡಬೇಕಾಯಿತು. ಮೊದಲಬಾರಿಗೆ ನಾವು ನಮ್ಮ ತಂದೆಯ ಊರಿಗೆ- ತುಮಕೂರಿಗೆ ಕೇವಲ ನಾಲ್ಕು ಕಿ.ಮೀ. ದೂರದಲ್ಲಿರುವ ಗೂಳೂರಿಗೆ ಹೋಗಿ ನೆಲಸಿದೆವು. ನಮಗೆ ಆಗ ಎಲ್ . ಎಸ್ ಎಂಬುದು ಪಬ್ಲಿಕ್ ಪರೀಕ್ಷೆ . ಎಸ್ ಎಸ್ ಎಲ್ ಸಿಯಂತೆಯೇ ಮುಖ್ಯ ಪರೀಕ್ಷೆ ಎಂದು ಪರಿಗಣಿತವಾಗಿತ್ತು ಆದರೆ ಅಂತಹ ವರ್ಷದಲ್ಲಿಯೇ ಒಂದೇ ವರ್ಷದಲ್ಲಿ ಎರಡು ಶಾಲೆ. ಹೊಸ ಶಾಲೆ ಹೊಸ ಉಪಾಧ್ಯಾಯರುಗಳು , ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಯಿತು. ಅದೂ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ . ಇದರಿಂದ ನನಗೆ ಪಠ್ಯ ಬಾಹಿರ ಓದು , ಪುಸ್ತಕಗಳ ಲಭ್ಯತೆ ತುಂಡುಗಡಿಯಿತು.
ಮತ್ತೆ ನನಗೆ ಅವು ಲಭ್ಯವಾಗಿದ್ದು ನಾನು ಹೈಸ್ಕೂಲಿಗೆ ಸೇರಿದ ನಂತರವೇ . ನನ್ನ ಜೀವನದಲ್ಲಿ ಇದೊಂದು ಮುಖ್ಯ ತಿರುವು. ನನ್ನ ಓದು ಚರಿತ್ರೆಯಲ್ಲಿಯೂ . ನಮ್ಮ ತಂದೆಗೆ ಮಕ್ಕಳನ್ನು ಚೆನ್ನಾಗಿ ‘ ಓದಿಸಬೇಕು ‘ , ಅವರು ಉನ್ನತ ಹುದ್ದೆ ಪಡೆಯಬೇಕು. ತನ್ನಂತೆ ಕಷ್ಟ ಪಡಬಾರದು . ಹೀಗೆ ಅನೇಕ ತಂದೆ ತಾಯಿಗಳಂತೆ ತಮ್ಮ ಬದುಕಿನಲ್ಲಿ ಈಡೇರಿಸಿಕೊಳ್ಳಲಾಗದ ಆಸೆಗಳನ್ನು ಮಕ್ಕಳ ಮೂಲಕ ಈಡೇರಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ., ಅವರು ಹೇರುತ್ತಿದ್ದ ಒತ್ತಡ , ನೀಡುತ್ತಿದ್ದ ಶಿಕ್ಷೆಗಳು , ಅದರಿಂದ ಮಕ್ಕಳ ಬೆಳವಣಿಗೆಯ ಮೇಲೆ ಆಗುತ್ತಿದ್ದ ವಿಪರೀತ ಪರಿಣಾಮಗಳು ಅದರ ಪರಿವೆ ಇರಲಿಲ್ಲ. ಆದರೆ ಇದರಿಂದ ನೆಗಟೀವ್ ಪರಿಣಾಮಗಳಂತೆಯೇ ಪಾಸಿಟೀವ್ ಕೂಡ ಇದ್ದವು ಎನ್ನುವುದಕ್ಕೆ ನನ್ನ ಹೈಸ್ಕೂಲಿನ ಆಯ್ಕೆಯೇ ಸಾಕ್ಷಿ . ಗೂಳೂರಿನ ಶಾಲೆಯ ಮುಖ್ಯೋಪಾಧ್ಯಾಯರು ನಮ್ಮ ತಂದೆಯವರಿಗೆ ಹುಡುಗ ಬುದ್ಧಿವಂತ . ಶಾಲೆಗಳು , ಜಿಲ್ಲೆಯ ಬದಲಾವಣೆಯ ನಡುವೆಯೂ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದ್ದಾನೆ . ಆದ್ದರಿಂದ ಒಳ್ಳೆಯ ಶಾಲೆಗೆ ಸೇರಿಸಿ ಎಂದು ಸಲಹೆ ನೀಡಿದರು. ಸರಿ . ನಮ್ಮ ತಂದೆಯವರು ಇಂತಹ ಸಂದರ್ಭಗಳಲ್ಲಿ ಯಾವಾಗಲೂ ಮಾಡುವಂತೆ ಯಾರ ಜೊತೆಯೆಲ್ಲಾ ಸಮಾಲೋಚನೆ ಮಾಡಿದರೋ ಗೊತ್ತಿಲ್ಲ.ಅಂತೂ ಬೆಂಗಳೂರಿನ ಬಸವನ ಗುಡಿಯ ನ್ಯಾಷನಲ್ ಹೈಸ್ಕೂಲು ಒಳ್ಳೆಯದು , ಅಲ್ಲಿ ನಾನು ಗಳಿಸಿದ ಅಂಕಗಳಿಗೆ ಸೀಟು ದೊರೆಯಬಹದು ಎಂದು ವಿಚಾರಿಸಿಕೊಂಡರು. ನನಗೆ ಅಲ್ಲಿ 1963 ರಲ್ಲಿ ಪ್ರವೇಶ ದೊರೆಯಿತು.
ಶಾಲೆಯಲ್ಲಿ ಪ್ರವೇಶವೇನೋ ದೊರೆಯಿತು. ಆದರೆ ನಾನು ಇರುವುದೆಲ್ಲಿ ಎಂಬ ಸಮಸ್ಯೆ ಎದುರಾಯಿತು. ಏಕೆಂದರೆ ನಮ್ಮ ತಂದೆಯವರಿಗೆ ತರಬೇತಿ ಮುಗಿದ ನಂತರ ಇನ್ನೂ ಹೊಂಗೇನಹಳ್ಳಿಯಲ್ಲಿಯೇ ಮುಂದುವರೆಸಿದ್ದರು. ಆದ್ದರಿಂದ ಕುಟುಂಬವೂ ಅಲ್ಲಿಯೇ ಮುಂದುವರೆದಿತ್ತು. ನಾನು ಮಾತ್ರ ಬೆಂಗಳೂರಿನಲ್ಲಿ. ಆಗಲೇ ಏಳು ಜನರಿದ್ದ ನಮ್ಮ ಕುಟುಂಬವನ್ನು ಸಾಕಲು ನಮ್ಮ ತಂದೆಯವರ ಆದಾಯ ಸಾಕಾಗುತ್ತಿರಲಿಲ್ಲ.ಆದ್ದರಿಂದ ನಮ್ಮ ಹೈಸ್ಕೂಲಿನ ವಿದ್ಯಾರ್ಥಿಗಳಿಗೂ ಅವಶ್ಯವಿದ್ದರೆ ಪ್ರವೇಶ ದೊರಕಬಹುದಾಗಿದ್ದ ನ್ಯಾಷನಲ್ ಕಾಲೇಜು ಹಾಸ್ಟೆಲ್ ನ ಪ್ರವೇಶವಾಗಲೀ ಮತ್ಯಾವುದಾದರೂ ಹಾಸ್ಟೆಲುಗಳಲ್ಲಿ ಇರುವುದಾಗಲೀ ನಮಗೆ ಕನಸಿನ ಮಾತಾಗಿತ್ತು.

ಆಗ ಪ್ರಸಿದ್ಧ ಹೆಚ್ಚೆನ್ ( ನ್ಯಾಷನಲ್ ಕಾಲೇಜು ಪ್ರಿನ್ಸಿಪಾಲರಾಗಿದ್ದ ಹೆಚ್ ಎನ್ ನರಸಿಂಹಯ್ಯನವರು ) ರವರೂ ವಾಸವಾಗಿದ್ದ ನ್ಯಾಷನಲ್ ಕಾಲೇಜು ಹಾಸ್ಟೆಲ್ ನ ಲ್ಲಿ ನನ್ನ ಇರುವಿಕೆ ಸಾಧ್ಯವಾಗಿದ್ದರೆ ನನ್ನ ಜೀವನ ಯಾವ್ಯಾವ ತಿರುವು ಪಡೆಯಬಹುದಾಗಿತ್ತೋ ಬಲ್ಲವರ್ಯಾರು ? ಎಲ್ಲಿ ವಾಸ ಮಾಡುವುದೆಂದು ಪರದಾಡುತ್ತಿದ್ದಾಗ ನಮ್ಮ ನೆರವಿಗೆ ಬಂದವರು ನಮ್ಮ ದೂರದ ಬಂಧುವಾದ ಸಿಳ್ಳು ಮಾಮ. ಅವರ ಮನೆ ಇದ್ದದ್ದು ಬೆಂಗಳೂರಿನ ಲಾಲ್ ಬಾಗ್ ಬಳಿಯ ಸಿದ್ಧಾಪುರದಲ್ಲಿ. ಅದೊಂದು ನಗರದೊಳಗೆ ಸಿಕ್ಕಿ ಹಾಕಿಕೊಂಡು ಬಣ್ಣಗೆಟ್ಟ ಹಳ್ಳಿ.ಕೆಲವೇ ಶ್ರೀಮಂತರಿದ್ದರೂ ನಗರದ ಬಡವರು , ಕೆಳ ಮಧ್ಯಮ ವರ್ಗದವರು ಮಾತ್ರವೇ ಇರುತ್ತಿದ್ದ ಹಳ್ಳಿಯಲ್ಲದ ಹಳ್ಳಿ . ಅಲ್ಲಿಂದ ಹೈಸ್ಕೂಲ್ ವರೆಗೆ ಸುಮಾರು ನಾಲ್ಕು ಕಿಮೀ ದಾರಿ ನಡೆದುಕೊಂಡೇ ಶಾಲೆಗೆ ಬರುತ್ತಿದ್ದೆ. ನಮ್ಮ ಕುಟುಂಬದಿಂದ ದೂರವಾಗಿ ಮತ್ತೊಬ್ಬರ ಮನೆಯಲ್ಲಿ ಇದ್ದದ್ದು ಅನೇಕ ರೀತಿಯ ಸಮಸ್ಯೆಗಳನ್ನು ತಂದೊಡ್ಡಿದರೂ ನನ್ನ ಪಠ್ಯೇತರ ಓದಿಗೆ ಸ್ವಾತಂತ್ರ್ಯ ದೊರಕಿತ್ತು.
ನ್ಯಾಷನಲ್ ಹೈಸ್ಕೂಲಿನ ನಮ್ಮ ಅಧ್ಯಾಪಕರುಗಳಲ್ಲಿ ಯಾರೂ ವಿಶೇಷವಾಗಿ ಪಠ್ಯೇತರ ಓದಿಗೆ ಪ್ರೋತ್ಸಾಹವನ್ನು ನೀಡದಿದ್ದರೂ( ಈ ಬಗ್ಗೆ ಮುಂದಿನ ಕಂತುಗಳಲ್ಲಿ ) ಆ ವಾತಾವರಣದಲ್ಲಿಯೇ ಸಾಹಿತ್ಯ ಉಸಿರಾಡುತ್ತಿದೆಯೇನೋ ಎಂಬಂತಿತ್ತು. ಮೊತ್ತ ಮೊದಲ ಬಾರಿಗೆ ಒಂದು ವಾಚನಾಲಯ ಮತ್ತು ಸೀಮಿತವಾದರೂ ಒಂದು ಶಾಲಾ ಲೈಬ್ರರಿ . ಮತ್ತು ಆ ಶಾಲೆಯಲ್ಲಿಯೇ ಈ ಹಾಲಿನಲ್ಲಿಯೇ ಟಿ.ಪಿ ಕೈಲಾಸಂ ರವರು ತಮ್ಮ ಅನೇಕ ನಾಟಕಗಳನ್ನು ಬರೆಸಿದರು, ಆಡಿಸಿದರು ಎಂಬ ಐತಿಹ್ಯಗಳು. ನಾನು ಬರಗೆಟ್ಟವನಂತೆ ಸಮಯ ಸಿಕ್ಕಾಗೆಲ್ಲಾ ಶಾಲಾ ವಾಚನಾಲಯವನ್ನು ಬಳಸುತ್ತಿದ್ದೆ. ಲೈಬ್ರರಿಯಲ್ಲಿ ನಮಗೆ 15 ದಿನಗಳಿಗೊಮ್ಮೆ ಕೊಡುತ್ತಿದ್ದ ಪುಸ್ತಕಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಇದು ಶಾಲೆಯಲ್ಲಿ ನನ್ನ ಮೊದಲ ದಿನಗಳು. ಈ ವಾಚನಾಲಯದಲ್ಲಿಯೇ ಮೊದಲು ಚಂದಮಾಮ ಪತ್ರಿಕೆಯನ್ನು ನೋಡಿದ್ದು. ಇಲ್ಲಿಯೇ ಗೋಕುಲ , ಮತ್ತು ಆ ಸಮಯದಲ್ಲಿಯೇ ಹೊಸದಾಗಿ ಆರಂಭವಾಗಿದ್ದ ಸುಧಾಗಳನ್ನು ಓದಿದ್ದು .. ಅವುಗಳು ನನ್ನ ಮೊದಲ ದಿನಗಳ ಓದಿನ ಹಸಿವನ್ನು ತಣಿಸಿದವು. ಭವಾನ್ಸ್ ಜರ್ನಲ್ ನಂತಹ ಕೆಲ ಇಂಗ್ಲಿಷಿನ ಕೆಲ ಪತ್ರಿಕೆಗಳೂ ಬರುತ್ತಿದ್ದರೂ ನನ್ನ ಗಮನವನ್ನು ಅವು ಸೆಳೆಯಲಿಲ್ಲ.
ಈ ಶಾಲಾ ಲೈಬ್ರರಿಯ ಮೂಲಕವೇ ‘ ಪುರುಷಾ ಮೃಗ ( ಡಾ. ಜೆಕಿಲ್ ಅಂಡ್ ಮಿಸ್ಟರ್ ಹೈಡ್ ) , ’ ನೊಂದ ಜೀವಿ ( ಲೆ ಮಿಸರಬಲ್ಸ್ ನ ಸಂಗ್ರಹಾನುವಾದ ) ‘ ಮೊದಲಾದ ಅನುವಾದಿತ ಕಾದಂಬರಿಗಳನ್ನು ಓದಿದ್ದು ಆ ಮೂಲಕ ಜಗತ್ತಿನ ಕಾದಂಬರಿ ಲೋಕದ ಪರಿಚಯವಾಗಿದ್ದು ಆಗಲೇ . ಆಗಲೇ ‘ ಕಸ್ತೂರಿ ‘ ಮತ್ತು ಅದರ ಪುಸ್ತಕ ವಿಭಾಗ ನನ್ನನ್ನು ಸೆಳೆಯಿತು. ಬಹಳ ಕಾಲ ನನಗೆ ಕನ್ನಡ ಮತ್ತು ಜಗತ್ತಿನ ಕಾದಂಬರಿ ಲೋಕದ ಪರಿಚಯ ಮಾಡಿಸಿದ ‘ ಕಸ್ತೂರಿ ‘ ಗೆ ನಾನು ಋಣಿ.
ಹೀಗೆ ಶಾಲೆಗೆ ನಡೆಯುತ್ತಾ ಓಡಾಡುತ್ತಿರುವಾಗ ಒಮ್ಮೊಮ್ಮೆ ಲಾಲ್ ಬಾಗ್ ಶೋ ನಡೆಯುವ ದಿನಗಳಲ್ಲಿ ನಮಗೆ ಲಾಲ್ ಬಾಗ್ ಮೂಲಕ ಬರುವ ಹತ್ತಿರದ ನಮ್ಮ ಹಾದಿಗೆ ಪ್ರವೇಶವಿರುತ್ತಿರಲಿಲ್ಲ. ಆಗ ಸುತ್ತಿ ಬಳಸಿ ಮನೆಗೆ ಹೋಗಬೇಕಾಗುತ್ತಿತ್ತು. ಅಂತಹ ಒಂದು ದಿನದಲ್ಲಿ ನನಗೆ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಎಂಬ ನಾಮ ಫಲಕ ಕಣ್ಣಿಗೆ ಬಿತ್ತು. ಅದರ ಪಕ್ಕದಲ್ಲಿ ಲೈಬ್ರರಿ ಎಂಬ ಬೋರ್ಡೂ ಇದ್ದದ್ದು ನನ್ನ ಸಂತೋಷ ಹಾಗೂ ಕುತೂಹಲವನ್ನು ಕೆರಳಿಸಿತು.
(ಇನ್ನೂ ಇದೆ….)
ಓದು ಜನಮೇಜಯ : ನ್ಯಾಶನಲ್ ಹೈಸ್ಕೂಲಿನಲ್ಲಿ ಸಿಕ್ಕ ಪುಸ್ತಕಗಳು
ನಿಮಗೆ ಇವೂ ಇಷ್ಟವಾಗಬಹುದು…
4 Comments
Trackbacks/Pingbacks
- ಓದು ಜನಮೇಜಯ : ‘ಕಳ್ಳ ಕಳ್ಳ ಹಿಡಿಯಿರಿ’! « ಅವಧಿ / Avadhi - [...] (ಇಲ್ಲಿಯವರೆಗೆ) [...]





ಮುಂದುವರೆಯಲಿ…ಚೆನ್ನಾಗಿದೆ
ಎಂದೂ ಮರೆಯದ ಸವಿನೆನಪುಗಳು ಸರ್.. ಪ್ರತಿಯೊಬ್ಬರು ತಮ್ಮ ಜೀವನದ ಮಧುರ ಕ್ಷಣಗಳನ್ನು ಮೆಲಕು ಹಾಕುವಂತೆ ಮಾಡುತ್ತಿದೆ ಸರ್…
ನಾಗರಾಜ್ ಜೀ… ನಿಮ್ಮ ಅನುಭವಗಳನ್ನು ಓದುತ್ತಿದ್ದೇನೆ. ನನ್ನನ್ನು ೧೮ ವರ್ಷ ಅನ್ನ ಹಾಕಿ ಕಾಪಾಡಿದ್ದು; ಉಪಸಂಪಾದಕನಾಗಿ, ಮುಖ್ಯ ಉಪಸಂಪಾದಕನಾಗಿ ಮತ್ತು ಸಹ ಸಂಪಾದಕನಾಗಿ ನನ್ನನ್ನು ಬೆಳೆಸಿದ್ದು ಈ ‘ಕಸ್ತೂರಿ’ಯೇ. ಪ್ರತಿ ಬಾರಿಯೂ ‘ಪುಸ್ತಕ ವಿಭಾಗ’ಕ್ಕೆ ಆಯ್ಕೆ ಮಾಡುವಾಗ ಈ ಸಲ ರನ್ನವನ್ನು ಕೊಡಬೇಕೋ, ಚಿನ್ನವನ್ನು ಕೊಡಬೇಕೋ ಎಂಬ ಗೊಂದಲದಲ್ಲಿ ಬೀಳುತ್ತಿದ್ದೆವು.
uttama Lekhana- raghuram AR