ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದು ಜನಮೇಜಯ : ‘ದಶರಥ‘ ನನ್ನನ್ನು ಕನ್ನಡದಲ್ಲಿ ಫೇಲು ಮಾಡ ಹೊರಟಿದ್ದು

(ಇಲ್ಲಿಯವರೆಗೆ…)

ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬೀಳುವ ದಿನ . ಅಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಬೋರ್ಡ್ಗಳ ಮೇಲೆ ಅಂಟಿಸುವ ಫಲಿತಾಂಶದ ಪಟ್ಟಿಗಳನ್ನು ಗದ್ದಲದಲ್ಲಿ ತೂರಿ ನೋಡಿಕೊಂಡು ಬರಬೇಕು ಮತ್ತು ಮನೆಗೆ ಬಂದು ಹೇಳಿದಾಗಲೇ ಅವರಿಗೆ ಫಲಿತಾಂಶ ತಿಳಿಯಬೇಕು .ಎಲ್ಲಿ ಹೋದರೂ ಅದರಲ್ಲಿಯೂ ಫಲಿತಾಂಶದ ದಿನದಂತ ಮುಖ್ಯ ದಿನಗಳಲ್ಲಿಯೂ ನಮ್ಮ ಜೊತೆಗೇ ತಂದೆ ತಾಯಂದಿರೂ ಬರುವ ಪದ್ಧತಿ ಇರಲಿಲ್ಲ.
ಬೆಳಗ್ಗೆ ಏಳು ಗಂಟೆಗೆ ಎದ್ದು ಮನೆಯಿಂದ ಹೊರಟೆ . ಆರು ಕಿ.ಮೀ ನಡೆಯಬೇಕಲ್ಲ. ಆಗ ನಮ್ಮ ತಂದೆ ಫಲಿತಾಂಶ ಏನಾದರಾಗಲಿ ಕ್ಷೇಮವಾಗಿ ಮನೆಗೆ ಬಂದುಬಿಡು ಎಂದು ಎಚ್ಚರಿಸಿದರು. ಇಲ್ಲಿಯವರೆಗೆ ಫಲಿತಾಂಶ ನೋಡಲು ಹೋಗುವಾಗ ಯಾವಾಗಲೂ ಈ ಮಾತು ಹೇಳಿರಲಿಲ್ಲ. ಹೇಗಿದ್ದರೂ ಒಳ್ಳೆ ಅಂಕಗಳನ್ನು ಪಡೆದು ಪಾಸಾಗಿರುತ್ತಾನೆ ಯಾಕೆ ಅನವಶ್ಯಕ ಎಚ್ಚರಿಕೆ ನೀಡಬೇಕು ಎಂದು ಬಗೆಯುತ್ತಿದ್ದರು. ಆದರೆ ಈ ಬಾರಿ ಒತ್ತಿ ಒತ್ತಿ ಹೇಳಿದರು. ಇದು ಪಿಯುಸಿ , ಒಂದು ಮುಖ್ಯ ಹಂತ ಎಂದಿರಬೇಕು . ಅಥವಾ ಫಲಿತಾಂಶದ ದಿನ ಹತ್ತಿರವಾಗುತ್ತಾ ಬಂದಂತೆಲ್ಲಾ ನನ್ನೊಳಗೆ ನಡೆಯುತ್ತಿದ್ದ ತಳಮಳವನ್ನು ಸೂಕ್ಷ್ಮವಾಗಿ ಗಮನಿಸಿರಬೇಕು.
ನಾನು ಏನಿಲ್ಲ , ಪಾಸಾದರೆ ಫರ್ಸ್ಟ್ ಕ್ಲಾಸಿನಲ್ಲಿ ಪಾಸಾಗುತ್ತೇನೆ ಇಲ್ಲದಿದ್ದರೆ ಫೇಲು ಎಂದೆ. ಹುಷಾರು ಏನಾದರೂ ನೆಟ್ಟಗೆ ಮನೆಗೆ ಬಾ ನಾವೆಲ್ಲ ಕಾಯುತ್ತಿರುತ್ತೇವೆ ಎಂದರು. ದಿನ ದಿನದ ದೀರ್ಘ ನಡಿಗೆ ಅಂದು ಮತ್ತಷ್ಟು ದೀರ್ಘವಾಗಿತ್ತು.
ಇಲ್ಲಿಯವೆರೆಗೆ ನಾನು ಫೇಲಾಗಬಹುದು ಎಂದು ಕನಸಿನಲ್ಲಿಯೂ ಯೋಚಿಸಿದವನಲ್ಲ. ಮೊದಲ ಬಾರಿ ಅದು ನನ್ನ ಬಳಿ ಸುಳಿಯುವಂತೆ ಕಾಣುತ್ತಿತ್ತು. ಸಾಮಾನ್ಯವಾಗಿ ನಾನು ಪರೀಕ್ಷೆಗಳನ್ನು ಮುಗಿಸಿ ಬಂದವನೇ ಪ್ರಶ್ನೆ ಪತ್ರಿಕೆಯನ್ನು ಮುಂದಿಟ್ಟುಕೊಂಡು ನಾನು ಬರೆದ ಉತ್ತರಗಳನ್ನು ನೆನಪಿಸಿಕೊಂಡು ನಾನೇ ಅಂಕಗಳನ್ನು ಹಾಕಿಕೊಳ್ಳುತ್ತಿದ್ದೆ . ಸಾಮಾನ್ಯವಾಗಿ ಗಣಿತ ಮಾತ್ರವಲ್ಲ ವಿಜ್ಞಾನ ವಿಷಯಗಳಲ್ಲಿಯೂ ನಾನು ಲೆಕ್ಕಿಸಿದ್ದಕ್ಕೆ ಒಂದೆರಡು ಅಂಕಗಳ ವ್ಯತ್ಯಾಸವಷ್ಟೇ ಆಗುತ್ತಿತ್ತು. ಭಾಷೆಗಳ ವಿಷಯದಲ್ಲಿಯೂ ಬಹಳ ವ್ಯತ್ಯಾಸವಾಗುತ್ತಿರಲಿಲ್ಲ. ಈ ಬಾರಿಯೂ ಕೂಡ ನಾನು ಗಳಿಸಬಹುದಾದ ಅಂಕಗಳನ್ನು ಲೆಕ್ಕ ಹಾಕಿದ್ದೆ.
ಗಣಿತದಲ್ಲಿ ನೂರಕ್ಕೆ ನೂರು , ರಸಾಯನ ಶಾಸ್ತ್ರದಲ್ಲಿ ಎಂಬತ್ತು , ಭೌತಶಾಸ್ತ್ರದಲ್ಲಿ …… , ಇಂಗ್ಲಿಷಿನಲ್ಲಿ , ಕನ್ನಡದಲ್ಲಿ ? ಕನ್ನಡದಲ್ಲಿ ಬರಬಹುದಾದ ಅಂಕಗಳನ್ನು ಲೆಕ್ಕ ಹಾಕಿದ್ದೇ ಹಾಕಿದ್ದು .. ಎಷ್ಟು ಬಾರಿಯೋ ನನಗೇ ಗೊತ್ತಿರಲಿಲ್ಲ. ಎಷ್ಟು ಬಾರಿ ಲೆಕ್ಕ ಹಾಕಿದರೂ ಅದು 30 ನ್ನು ಮೀರಲಿಲ್ಲ. ಸರಿ ಈ ಬಾರಿ ಫೇಲು ಎಂದು ಎದೆ ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸಿದ್ದೆ. ಒಂದೆಡೆ ದುಃಖ ಮೋಡಕಟ್ಟುತ್ತಿದ್ದರೆ ಮತ್ತೊಂದು ಕಡೆ ಆಶಾ ಭಾವನೆಯ ಮಿಂಚು ಮೂಡುತ್ತಿತ್ತು . ಯಾರಾದರೂ ನನ್ನ ಉತ್ತರಗಳ ವಿಶೇಷ ಪರಿಸ್ಥಿತಿ ಬಗ್ಗೆ ಕನಿಕರ ತೋರಿಸಿ 35 ಕೊಟ್ಟು ತಳ್ಳಿಬಿಡಬಹುದೇನೋ ಎಂದು. ಮತ್ತೆ ಮಾಯವಾಗುತ್ತಿತ್ತು ಅದು ಹೇಗೆ ಸಾಧ್ಯ ಎಂದು ನಾನು ಬರೆದ ಉತ್ತರಗಳು ನನ್ನೆದುರು ನಿಂತು ಅಣಕಿಸುತ್ತಿದ್ದವು.
ಸರಿ . ಕಾಲೆಳೆದುಕೊಂಡು ಕಾಲೇಜಿನ ಹಾದಿ ಹಿಡಿದೆ. ದಾರಿಯುದ್ದಕ್ಕೂ ನನಗೆ ನನ್ನ ಸ್ಥಿತಿಯಲ್ಲಡಗಿದ ವ್ಯಂಗ್ಯದ ಬಗ್ಗೆ ಅಚ್ಚರಿ, ನಾನೇ ತಂದುಕೊಂಡ ಸಂಕಟದ ಬಗ್ಗೆ ಪರಿತಾಪ . ಭವಿಷ್ಯಕ್ಕೆ ಬಹಳ ಮುಖ್ಯವಾದ ಐಚ್ಛಿಕ ವಿಷಯಗಳನ್ನೂ ಪಕ್ಕಕ್ಕೆಸೆದು , ಪಿಯುಸಿಯ ಸರಿಸುಮಾರು ಇಡೀ ವರ್ಷವನ್ನು ಕನ್ನಡದ ಪದತಲಕ್ಕರ್ಪಿಸಿದ ನಾನು ಈಗ ಅದೇ ಕನ್ನಡದಲ್ಲಿ ಫೇಲಾಗುವ ಪ್ರಸಂಗ ! ! ! ಅಹಾ ! ಇಂತಹ ಗತಿಯಾರಿಗಾದರೂ ಎಂದಾದರೂ ಬಂದದ್ದುಂಟೆ !

ಕೊನೆಗೆ ಕಾಲೇಜು ಪ್ರಾಂಗಣ ತಲುಪಿದೆ. ಇನ್ನೂ ಅದೇ ತಾನೆ ಫಲಿತಾಂಶದ ಹಾಳೆಗಳನ್ನು ಹಚ್ಚಲು ಸಿದ್ಧಗೊಳಿಸುತ್ತಿದ್ದರು. ಹತ್ತಿರ ಯಾರನ್ನೂ ಬಿಡುತ್ತಿರಲಿಲ್ಲ. ಗೆಳೆಯರು ದೂರ ನಿಂತು ನಮ್ಮ ನಮ್ಮ ಆತಂಕಗಳನ್ನು ಮಾತಿನಲ್ಲಿ ನಗೆಯಲ್ಲಿ ಮುಳುಗಿಸಲು ಕಷ್ಟಪಡುತ್ತಿದ್ದೆವು . ಮಲಗಿಸಿಕೊಂಡು ಫಲಿತಾಂಶದ ಶೀಟುಗಳನ್ನು ಹಚ್ಚುತ್ತಿದ್ದ ಬೋರ್ಡ್ ಗಳನ್ನು ಎಬ್ಬಿಸಿ ನಿಲ್ಲಿಸಿದರು. ಎಲ್ಲರೂ ಒಮ್ಮೆಗೇ ನುಗ್ಗಿದೆವು. ಆ ಗಡಿಬಿಡಿಯಲ್ಲಿ ಯಾರದೋ ಫಲಿತಾಂಶ ಯಾರಿಗೋ ತಾಳೆ ಮಾಡಿ ಗಾಬರಿ ಮಾಡಿಕೊಳ್ಳುತ್ತಿದ್ದೆವು. ಕೊನೆಗೆ ನನ್ನ ಗೆಳೆಯನೊಬ್ಬ , ಹೇ ಗೂಳೂರ್ ನೀನು ಪಾಸು ಕಣೋ , ಫಸ್ಟ್ ಕ್ಲಾಸು ಎಂದು ಕೂಗಿದ.. ನನ್ನ ಕಿವಿಗಳನ್ನು ನಾನೆ ನಂಬಲಾಗಲಿಲ್ಲ . ಎಲ್ಲಿ , ಎಲ್ಲಿ ಎಂದು ಅವನು ತೋರಿಸಿದ ಕಡೆ ನೋಡಿದೆ . ಅದು ನಿಜವಾಗಿತ್ತು. ಮತ್ತೆ ಮತ್ತೆ ನೋಡಿದೆ. ಬೇರೆಯವರು ನೀವು ಮಾತ್ರ ಫಲಿತಾಂಶ ನೋಡುವವರೇನ್ರಿ , ಇನ್ನೂ ಎಷ್ಟೊಂದು ಜನರಿದ್ದಾರೆ ಜಾಗ ಬಿಡ್ರೀ ಎಂದು ಗದರುವವರೆಗೆ ನೋಡಿಯೇ ನೋಡಿದೆ. ಅಂತೂ ನಮ್ಮ ತಂದೆಗೆ ನಾನು ಹೇಳಿದ್ದರಲ್ಲಿ ಅರ್ಧ ಭಾಗ ನಿಜವಾಗಿತ್ತು . ಪ್ರಿಯವಾದ ಭಾಗವೇ ನಿಜವಾಗಿತ್ತು. ನಾನು ಬೆಳಗ್ಗೆ ಹೇಳಿದ ರೀತಿಗೆ ಮನೆಯಲ್ಲಿ ಬಹಳ ಆತಂಕದಿಂದ ಕಾಯುತ್ತಿರುತ್ತಾರೆಂದು ಮನೆಯ ಕಡೆ ಹೊರಟೆ. ಈಗ ಜಗತ್ತು ಉಲ್ಲಾಸಮಯವಾಗಿ ಕಾಣುತ್ತಿತ್ತು. ಓಡುತ್ತಾ ಎಂಬಂತೆ ಬೇಗ ಬೇಗನೇ ಸಾಗಿದೆ .
ಪಾಸಾಗಲು ಬೇಕಾದ 35 ಬರಲು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಿದ್ದವನಿಗೆ ಕನ್ನಡದಲ್ಲಿ ಎರಡನೇ ದರ್ಜೆ ಎಂದರೆ 50 ಕ್ಕಿಂತ ಸ್ವಲ್ಪ ಹೆಚ್ಚೇ ಎನ್ನುವ ಅಂಕಗಳು ದೊರೆತಿದ್ದವು. ಇದು ನನಗೆ ನೂರಕ್ಕೆ ನೂರು ಅಂಕಗಳು ಬಂದಂತೆನಿಸಿತ್ತು. ಈ ಆನಂದಕ್ಕೂ, ಹಿಂದಿನ ತಿಂಗಳು ಪೂರ್ತಾ ಅನುಭವಿಸಿದ ಆತಂಕಕ್ಕೂ ಕಾರಣವೇನು ? ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ.
ನಾನು ಇಡೀ ವರ್ಷ ಪೂರ್ತಿ ಕನ್ನಡದ ಪಠ್ಯ ಪುಸ್ತಕದ ನೆವದಲ್ಲಿ ಕನ್ನಡವನ್ನೇ ಸಂಸ್ಕೃತ , ತಮಿಳು , ಹಿಂದಿ ಮಲೆಯಾಳಂ ಎಲ್ಲವನ್ನೂ ಕನ್ನಡದಲ್ಲಿಯೇ ಓದಿದ್ನಾ . ಸರಿ ಪಿಯೂಸಿ ಪಬ್ಲಿಕ್ ಪರೀಕ್ಷೆಗೆ ಹೋಗಿ ಕುಳಿತುಕೊಂಡೆ . ಪ್ರಶ್ನ ಪತ್ರಿಕೆ ನನ್ನ ಕೈಗೆ ಕೊಟ್ಟರು ನೋಡಿ .  ಮೊದಲನೇ ಪ್ರಶ್ನೆ ನೋಡಿದೆ 15 ಅಂಕಗಳಿಗೆ ಪ್ರತಿಮಾ ನಾಟಕದ ಎರಡು ಪಾತ್ರ ಚಿತ್ರಣ –ದಶರಥ , ಸೀತೆಯರು ಮಾಡಬೇಕು . ಸರಿ ಶುರು ಮಾಡಿದೆ . ಬರೆದೆ ಬರೆದೆ ಬರೆದೇ ಬರೆದೆ. ಕಾಲದ ಪರಿವೆಯಿಲ್ಲದೇ ಓದುತ್ತಿದ್ದನೆಲ್ಲಾ ಅದೇ ರೀತಿ ಕಾಲದ ಪರಿವೆಯಿಲ್ಲದೆ ದಶರಥನ ಪಾತ್ರ ಚಿತ್ರಣ ಮಾಡಿದೆ. ಭಾಸ , ಕುವೆಂಪು , ತುಳಸೀದಾಸ, ಶೇಕ್ಸ್ಪಿಯರ್ ನ ಕಿಂಗ್ ಲಿಯರ್, ಏಆರ್ ಕೃಷ್ಣ ಮೂರ್ತಿ ಹೀಗೆ ಎಲ್ಲಾ ನನ್ನ ಕೈ ಹಿಡಿದು ಬರೆಸಿದರು. ನಾರಣಪ್ಪ ಹೇಳುತ್ತಾನಲ್ಲಾ ವೀರನಾರಾಯಣನೇ ಕವಿ , ಲಿಪಿಕಾರ ಕುವರವ್ಯಾಸ ಅಂತ,  ಹಾಗೇಯೇ . ಏಳೂವರೆ ಮಾರ್ಕಸ್ ನ ಪ್ರಶ್ನೆಗೆ ಮೂರು ಗಂಟೆಯ ಪತ್ರಿಕೆಯಲ್ಲಿ ಕೇವಲ ಒಂದೂವರೆ ಗಂಟೆ ಬರೆದಿದ್ದೆ. ಬರೆದು ಮುಗಿಸಿದ ಮೇಲೆ ನೋಡುತ್ತೇನೆ, ಗಾಬರಿಯಾಯಿತು . ಇನ್ನು ಇರುವ ಒಂದೂವರೆಗಂಟೆಯಲ್ಲಿ 93 ಅಂಕಗಳಿಗೆ ಉತ್ತರ ಬರೆಯಬೇಕು. ಬೆವರು ಕಿತ್ತುಕೊಂಡು ಬಂದಿತು.
ಆಗಲೇ ನಾನು ತೀರ್ಮಾನಿಸಿದೆ ಈಗ ನಾನು ಪಾಸು ಮಾಡಬೇಕೆಂದರೆ ಆದಷ್ಟೂ ಹೆಚ್ಚು ಪ್ರಶ್ನೆಗಳ ಸಂಖ್ಯೆ ಹಾಕಿ ಕೆಲ ವಾಕ್ಯ ಬರೆದು ಅವಸರದಿಂದೆ ಮುಂದೆ ಓಡಬೇಕು. ಈಗ ಸೀತೆಯ ಪಾತ್ರ ಚಿತ್ರಣ . ಸೀತೆಯ ಕ್ಷಮೆ ಕೋರಿ ನನ್ನದೇ ಆದ ಒಂದೂ ವಾಕ್ಯವಿಲ್ಲದೆ ವಿವೇಕಾನಂದರ ‘’ ಇನ್ ದಿ ಫುಟ್ ಪ್ರಿಂಟ್ಸ್ ಆಫ್ ಸೀತಾ ‘ ಲೇಖನ, ಕುವೆಂಪು , ಜಾನಪದಗಳ ಉಲ್ಲೇಖನಗಳನ್ನು ಭಟ್ಟಿಯಿಳಿಸಿ ಮುಂದೆ ಸಾಗಿದೆ. ಹೀಗೆ ಅತ್ಯಂತ ಅತೃಪ್ತಿಕರ ಉತ್ತರ ಬರೆದು ಕೊನೆಗೆ 67 ಅಂಕಗಳಷ್ಟು ಪ್ರಶ್ನೆಗಳ ಸಂಖ್ಯೆಗಳನ್ನಾದರೂ ನಮೂದಿಸುವಷ್ಟರಲ್ಲಿ ಗಂಟೆ ಬಾರಿಸಿತು.
ಈ ಸಂಗತಿಯನ್ನು ಮನೆಯಲ್ಲಿ ಯಾರ ಬಳಿಯಾದರೂ ಉಸುರಲುಂಟೇ ? ನಮ್ಮ ತಂದೆಗೆ ತಿಳಿದರೆ ಏನಾಗಬಹುದು ಊಹಿಸಿ. ನನ್ನ ಮನಸ್ಸಿನೊಳಗೇ ಅದುಮಿಟ್ಟುಕೊಢು ಉಸಿರುಗಟ್ಟಿದೆ.
ಫಲಿತಾಂಶ ಬಂದ ದಿನ ಅದೆಲ್ಲಾ ಕಟ್ಟೆಯೊಡೆದು ಹರಿಯಿತು. ಕಣ್ಣೀರಾಗಿ , ಆನಂದವಾಗಿ. ಅಂದು ನನಗೆ ಸಂತೋಷವಾದಂತೆ ಇಡೀ ಜೀವನದಲ್ಲಿ ಹರುಷ ಉಕ್ಕಿದ್ದು ಬಹಳ ಒಂದೆರಡು ಬಾರಿ ಮಾತ್ರ. ನನ್ನ ಆ ಉತ್ತರ ಪತ್ರಿಕೆಯನ್ನು ಮೌಲ್ಯ ಮಾಪನ ಮಾಡಿದವರು ಆಯಾ ಪ್ರಶ್ನೆಯ ಉತ್ತರಕ್ಕೆ ಸರಿಯಾಗಿ ಅಂಕ ಎಂಬ ಯಾಂತ್ರಿಕವಾದ ಮನುಷ್ಯನಾಗಿದ್ದರೆ ! ಅಂತೂ ಪೀಯೂಸಿ ದಾಟಿದೆ ದಶರಥನ ಕೃಪೆಯಿಂದ.
 
(ಮುಂದುವರಿಯುವುದು…)
 

‍ಲೇಖಕರು G

20 September, 2014

4 Comments

  1. Prabhakar M. Nimbargi

    Lucky guy! The valuer might have thought that one who writes such a good answer to a small question must be having the capacity to answer the remaining. I too faced the same dilemma in physics practicals at B.Sc.I, but I got 45/50. That I took to B-stream is another matter.

  2. Anitha Naresh Manchi

    ಸೂಪರ್ 🙂

  3. ಅಮರದೀಪ್ ಪಿ. ಎಸ್

    chennagide sir…..

  4. Bharavi

    ಇದು ನನ್ನ ಪಿ.ಯು ವಿನ ಫಲಿತಾಂಶದ ದಿನವನ್ನು ನೆನಪಿಸಿತು. ಆದರಿಲ್ಲಿ ಒಂದೇ ವ್ಯತ್ಯಾಸ….ನನಗೆ ಕನ್ನಡ ಸುಲಭ…ಕೆಮಿಸ್ತ್ರಿ ಕಬ್ಬಿಣದ ಕಡಲೆಯಾಗಿತ್ತು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading