ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದು ಜನಮೇಜಯ : 'ಕಳ್ಳ ಕಳ್ಳ ಹಿಡಿಯಿರಿ'!

(ಇಲ್ಲಿಯವರೆಗೆ)

ವರ್ಲ್ಡ್ ಕಲ್ಚರ್ ( ವಿಶ್ವ ಸಂಸ್ಕೃತಿ ) ಒಳಗೆ ಪ್ರವೇಶಿಸುವ ಕುತೂಹಲ ತೀವ್ರವಾಗಿದ್ದರೂ ಹಳ್ಳಿಯಿಂದ ಬಂದ ನನಗೆ ಹಿಂಜರಿಕೆಯೂ ಬಹಳವಾಗಿತ್ತು . ಆ ಸಂಸ್ಥೆಯ ಹೆಸರೇ ಇದರಲ್ಲಿ ನಮಗೆ ಪ್ರವೇಶವಿದೆಯೇ ಎಂಬ ಪ್ರಶ್ನೆಯನ್ನು ಹಾಕುತ್ತಿತ್ತು. ಇನ್ನು ಕಟ್ಟಡವೂ ಕೂಡ . ಕೆಲ ದಿನ ಅದರ ಮುಂದೆಯೇ ತಮ್ಮ ಮೆಚ್ಚಿನ ಹುಡುಗಿಯರ ಮನೆಯ ಮುಂದೆ ಅಂಜಿಕೆಯಿಂದಲೇ ಸುಳಿಯುವ ಹುಡುಗರಂತೆ ಸುಳಿದಾಡುತ್ತಿದ್ದೆ. ನನ್ನಂತಹ ಎಳೆಯರು ಯಾರಾದರೂ ಅದರ ಒಳಗೆ ಹೋಗುವವರು ಕಾಣುತ್ತಾರೇನೋ ಎಂದು ಅರಸಿ ನೋಡಿದೆ. ಅದರ ಒಳಗೆ ಹೋಗುತ್ತಿದ್ದವರೆಲ್ಲಾ ಜ್ಞಾನ ವೃದ್ಧರಂತೆ ಕಾಣುತ್ತಿದ್ದರು. ಇದು ನನಗೆ ನಿರಾಸೆಯನ್ನುಂಟು ಮಾಡುತ್ತಿತ್ತು. ಕೊನೆಗೊಂದು ದಿನ ತಡೆಯಲಾರದೆ ಅದರೊಳಕ್ಕೆ ಹೋಗುತ್ತಿದ್ದವರನ್ನು ಅಡ್ಡಗಟ್ಟಿ ಕೇಳಯೇ ಬಿಟ್ಟೆ. ಅವರೊಂದಿಗೇ ಒಳಕ್ಕೆ ಪ್ರವೇಶವನ್ನೂ ಮಾಡಿದೆ. ಒಳಗೆ ಹೋಗಿ ನೋಡುತ್ತೇನೆ ಅಲ್ಲಿದ್ದ ಪುಸ್ತಕಗಳೆಲ್ಲಾ ನನ್ನ ಮಸ್ತಕದ ಮೇಲೆ ಹೊರಬೇಕಾದವೇ ಹೊರತು ಒಳಗೆ ಇಳಿಯುವ ಪುಸ್ತಕಗಳಲ್ಲ ಎಂದೆನ್ನಿಸಿತು.
ನಿರಾಸೆಯಿಂದ ತಿರುಗಿ ಹೋಗುವಷ್ಟರಲ್ಲಿ ಮೇಲಿನ ಮಹಡಿಗೆ ಹೋಗುವ ಮೆಟ್ಟಲುಗಳ ಬಳಿ ಮಕ್ಕಳ ಪುಸ್ತಕಗಳ ವಿಭಾಗ ಎಂಬ ಬೋರ್ಡ್ ಕಾಣಿಸಿತು. ಅದು ನನ್ನ ಪ್ರೀತಿಯ ಹುಡುಗಿ ನನ್ನ ಕಡೆ ನೋಡಿ ನಸು ನಕ್ಕಂತೆ ಕಂಡು ಖುಷಿಯಿಂದ ಓಡು ಹೆಜ್ಜೆಗಳಲ್ಲಿ ಮೆಟ್ಟಲುಗಳನ್ನೇರಿದೆ. ಅಲ್ಲಿ ಒಂದು ಹಾಲ್ ನಲ್ಲಿ ಬಾಲ ಪತ್ರಿಕೆಗಳು , ಕೆಲ ಪುಸ್ತಕಗಳು ಮಾತ್ರ ಇದ್ದವು. ಮಕ್ಕಳು ಇಬ್ಬರೋ ಮೂವರೋ . ಅವುಗಳನ್ನು ಸಿಕ್ಕ ಸಮಯದಲ್ಲೆಲ್ಲಾ ತಿರುವಿ ಹಾಕಿದೆ.
ಹೀಗೆ ಈ ಲೈಬ್ರರಿಯ ಜೊತೆ ನನ್ನ ಸಂಗಾತ ಸಾಗಿರಲು ಒಂದು ಶನಿವಾರ ಅರ್ಧ ದಿನದ ಶಾಲೆಯನ್ನು ಮುಗಿಸಿ ವರ್ಲ್ಡ್ ಕಲ್ಚರ್ ಲೈಬ್ರರಿಯನ್ನು ಹೊಕ್ಕೆ. ಅಂದು ಹೆಚ್ಚು ಸಮಯವಿದ್ದುದರಿಂದ ಮಕ್ಕಳ ವಿಭಾಗದ ಮಡುಕು ಮೂಲೆಯನ್ನೆಲ್ಲಾ ಸಿದುಗಲು ಮೊದಲಿಟ್ಟೆ. ಅಲ್ಲಿ ಮುಖ್ಯ ಹಾಲ್ ಗೆ ಸೇರಿಕೊಂಡಂತೆ ಕೆಲ ಕೊಠಡಿಗಳಿದ್ದುವು. ಅದರಲ್ಲಿ ಒಂದು ಕೊಠಡಿಯಲ್ಲಿ ಚಂದಮಾಮದ ಅನೇಕ ವರ್ಷಗಳ ಹಳೆಯ ಸಂಚಿಕೆಗಳನ್ನು ಸಂಪುಟಗಳನ್ನಾಗಿ ಬೈಂಡ್ ಮಾಡಿ ಜೋಡಿಸಿಟ್ಟಿದ್ದರು. ಅದನ್ನು ನೋಡಿ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದೊಂದನ್ನಾಗಿ ತೆಗೆದು ನೋಡಲು ಪ್ರಾರಂಭಿಸಿದೆ. ಒಂದಕ್ಕಿಂತ ಒಂದು ಸಂಪುಟ ಒಳಗಿನ ಕಥೆಗಳ ಆಕರ್ಷಣೆಯಿಂದ ಸೆಳೆಯುತ್ತಿತ್ತು. ಆ ಒಳ ಕೋಣೆಯಲ್ಲಿ ಓದುತ್ತಾ ಕುಳಿತು ಬಿಟ್ಟೆ. ಕುಳಿತೇ ಬಿಟ್ಟೆ.ಕೆಲ ಕಾಲದ ನಂತರ ಹೊಟ್ಟೆ ತನ್ನ ಕೆಲಸವನ್ನು ಆರಂಭಿಸಿ ಕಾಲದ ವಾರ್ನಿಂಗ್ ನೀಡಲಾರಂಭಿಸಿತು. ಅದಕ್ಕೆ ಗದರಿಸಿ ನನ್ನ ಓದಿನಲ್ಲಿ ಮುಳುಗಿ ಬಿಟ್ಟೆ . ಕೊನೆಗೆ ಅದು ಬಲವಾಗಿ ಕೊರೆಯಲಾರಂಭಿಸಿತು. ಏಳಲೇ ಬೇಕಾಯಿತು. ಎದ್ದೆ .
ಕೊಠಡಿಯ ಹೊರಗೆ ಬಂದು ನೋಡಿದೆ .ಅಲ್ಲಿ ನೀರವ ಮೌನ . ಹಾಲ್ ನ ಬಾಗಿಲ ಬಳಿ ಬಂದರೆ ಅದಕ್ಕೆ ಬೀಗ . ಆಗಲೇ ಅರಿವಾಗಿದ್ದು ನಾನು ಪುಸ್ತಕ ಪ್ರೇಮದಪ್ಪುಗೆಯಲ್ಲಿ ನಿಜವಾಗಿಯೇ ಬಂಧಿಯಾಗಿದ್ದೇನೆ ಎಂದು. ಇಂದು ಶನಿವಾರ. ಈ ಲೈಬ್ರರಿಗೆ ಭಾನುವಾರ ರಜೆ. ಮತ್ತೆ ತೆರೆಯುವುದೇ ಸೋಮುವಾರ. ಹೊಟ್ಟೆಯ ತಾಪತ್ರಯವೊಂದಿಲ್ಲದಿದ್ದರೆ ಈ ದೀರ್ಘ ಬಂಧನ ನನಗೆ ಬಹಳ ಪ್ರಿಯವಾದುದೇ ಆಗಿತ್ತು. ಆದರೆ ? ದ್ರುತ ಗತಿಯಲ್ಲಿ ಬಾರಿಸುತ್ತಿದ್ದ ಹೊಟ್ಟೆಗೇನು ಗತಿ ಕಾಣಿಸುವುದು ಇದು ನನ್ನ ತಕ್ಷಣದ ಚಿಂತೆ. ಇನ್ನು ನಾನು ಮನೆಗೆ ಹೋಗದಿದ್ದರೆ ನನ್ನ ಬಂಧುಗಳು ನನ್ನನ್ನು ಹುಡುಕಲು ಏನು ಮಾಡುವರು ? ಅವರು ಗಾಬರಿಯಾಗಿ ಹೊಂಗೇನಹಳ್ಳಿಯಲ್ಲಿರುವ ನನ್ನ ತಂದೆಗೆ ತಿಳಿಸಿದರೆ ! ಏನೆನೆಲ್ಲಾ ಪರಿಣಾಮಗಳಾಗಬಹುದು? ಊಹಿಸಿಕೊಳ್ಳಲು ಆಗದು. ಮುಖ್ಯವಾಗಿ ನನ್ನ ಬೆಂಗಳೂರಿನ ವಾಸಕ್ಕೆ , ಈಗ ಪರರ ಮನೆಯ ವಾಸದ ಅನೇಕ ಕೋಟಲೆಗಳ ನಡುವೆಯೂ ಅನುಭವಿಸುತ್ತಿರುವ ಓದು ಸ್ವಾತಂತ್ರ್ಯಕ್ಕೆ ಕೊನೆ ಹಾಡಿದಂತೆಯೇ . ನ್ಯಾಷನಲ್ ಹೈಸ್ಕೂಲಿನ ಶಿಕ್ಷಣಕ್ಕೂ . ನನಗೆ ಆಗ ನನ್ನ ಹಸಿವನ್ನೂ ಮೀರಿದ ಭಯ ಕಾಡತೊಡಗಿತು.
“ ಕಳ್ಳ ಕಳ್ಳ ಹಿಡಿಯಿರಿ “
ಸರಿ. ಈ ಬಂಧನ ನನ್ನ ಸ್ವಾತಂತ್ರ್ಯಕ್ಕೆ ತರುವ ವಿಪತ್ತಿನಿಂದ ಪಾರಾಗಲೇ ಬೇಕು. ದಾರಿ ಹುಡುಕ ತೊಡಗಿದೆ . ಆಗ ಕಂಡ ಒಂದೇ ದಾರಿ ಮೊದಲನೇ ಮಹಡಿಯಾದ್ದರಿಂದ ಸರಳುಗಳಿಲ್ಲದ ಕಿಟಕಿ . ಇಣುಕಿ ಕೆಳಗೆ ನೋಡಿದೆ. ಕಿಟಕಿಯಿಂದ ಇಳಿದು ನೆಲ ಮಹಡಿಯ ಸಜ್ಜಾದ ಮೇಲಿಳಿದು ಕೆಳಗೆ ಧುಮುಕಬೇಕು. ಪ್ರಯತ್ನ ಆರಂಭಿಸಿದೆ. ಕಷ್ಟಪಟ್ಟು ಸಜ್ಜಾಧ ಮೇಲೆ ಇಳಿದೆ. ಕೆಳಗೆ ಧುಮುಕಿದರೆ ನನ್ನ ಮೂಳೆಗಳ ಗತಿ ಏನಾಗಬಹುದು ಎಂದು ಅಳುಕಿನಿಂದ ಹಿಂದೆ ಮುಂದೆ ನೋಡುತ್ತಿರುವಾಗಲೇ “ ಕಳ್ಳ , ಕಳ್ಳ ಹಿಡಿಯಿರಿ “ ಎಂಬ ಕೂಗು ಕೇಳಿ ಬಂತು. ಇದು ಬೇರೆ ಯಾರ ಬಗೆಗೋ ಎಂದು ಭಾವಿಸಿ ನನ್ನ ಪ್ರಯತ್ನ ಮುಂದುವರೆಸಿದಾಗ ನನ್ನ ಮುಂದೆಯೇ ಆ ಕಟ್ಟಡದ ಕಾವಲುಗಾರ ಪ್ರತ್ಯಕ್ಷನಾದ ಮತ್ತು ಕೆಳಗಿನಿಂದ ಗದರಿಸತೊಡಗಿದ. ಇಲ್ಲಿಯವರೆಗೆ ಹೊರಹೋಗುವುದು ಹೇಗೆ ಎಂಬುದು ಮಾತ್ರ ಎಲ್ಲಾ ಯೋಚನೆ ಮತ್ತು ಕ್ರಿಯೆಯ ಏಕಮಾತ್ರ ಗುರಿಯಾಗಿದ್ದ ನನಗೆ ಈ ಕಳ್ಳನೆಂದು ಪರಿಗಣಿಸಲ್ಪಡುವ ಸಂಭವ ಹೊಳೆದೇ ಇರಲಿಲ್ಲ. ಈ ಹೊಸ ಆತಂಕ ಮತ್ತಷ್ಟು ಭಯಾವಹವಾಯಿತು. ನಾನು ಲೈಬ್ರರಿಯಲ್ಲಿ ಓದಲು ಬಂದಿರುವ ವಿದ್ಯಾರ್ಥಿ ಎಂಬ ವಿವರಣೆಯನ್ನು ನಂಬಲು ಅವನು ತಯಾರಿರಲಿಲ್ಲ. ನನ್ನ ಬಗಲಿನಲ್ಲಿದ್ದ ಶಾಲಾ ಚೀಲ ಅದರಲ್ಲಿ ಇದ್ದ ಕೇವಲ ಪಠ್ಯ ಪುಸ್ತಕಗಳನ್ನು ತೆರೆದು ತೋರಿಸಿದರೂ ನಂಬಲಿಲ್ಲ. ಅವನ ವರ್ಷನ್ ಪ್ರಕಾರ ’ ನಾನು ಪಳಗಿದ ಕಳ್ಳ . ಶಾಲೆಯ ವಿದ್ಯಾರ್ಥಿ ಎಂದು ಬಿಂಬಿಸಿಕೊಳ್ಳಲು ಎಲ್ಲಾ ತಯಾರಿ ಮಾಡಿಕೊಂಡು ಬಂದಿದ್ದೇನೆ ಮತ್ತು ನಾನು ಮೇಲಿನಿಂದ ಕೆಳಕ್ಕೆ ಇಳಿಯುತ್ತಿರುವುದಲ್ಲ ಈಗ ತಾನೆ ಕಳ್ಳತನ ಮಾಡಲು ಬಂದಿದ್ದೇನೆ . ಕೆಳಗಿನಿಂದ ಮೇಲಕ್ಕೆ ಹತ್ತುತ್ತಿದ್ದೇನೆ ‘ ಎಂದು.
ನನಗೆ ದಿಕ್ಕೇ ತೋಚದಂತಾಯಿತು. ಈಗ ನನ್ನ ಮುಗ್ಧತೆಯನ್ನು ಹೇಗೆ ಪ್ರೂವ್ ಮಾಡುವುದು ? ಇಷ್ಟೂ ನಡೆದಿರುವಾಗ ನಾನು ತ್ರಿಶಂಕುವಾಗಿ ಸಜ್ಜಾದ ಮೇಲೆ ನಿಂತಿದ್ದೇನೆ. ಕೊನೆಗೆ ನಾನು ಮೊದಲು ನನ್ನನ್ನು ಕೆಳಗೆ ಇಳಿಸಿಕೊಳ್ಳಿ . ತಿನ್ನಲು ಏನಾದರೂ ಕೊಡಿ .ನಂತರ ನಾನು ಕಳ್ಳನೆಂದೇ ನಿಮಗೆ ಖಾತರಿಯಾದರೆ ಏನು ಬೇಕಾದರೂ ಮಾಡಿ ಎಂದು ಗೋಗರೆದೆ. ಏರಿದವನಿಗೆ ಇಳಿಯಲಾಗುವುದಿಲ್ಲವೇ ಏರಿದ ದಾರಿಯಲ್ಲಿಯೇ ಇಳಿ ಎಂದು ಅವನ ಗದರುವಿಕೆ. ನಾನು ಇಳಿಯಲು ಪ್ರಯತ್ನಿಸಿದೆ ನನಗೆ ಅಂತಹ ಅನುಭವ ಇಲ್ಲದ್ದರಿಂದ ದಾರಿ ಕಾಣಲಿಲ್ಲ. ಸಜ್ಜಾದ ಮೇಲಿಂದ ಧುಮುಕಲು ಉದ್ಯುಕ್ತನಾದೆ. ಆಗ ಆ ಕಾವಲುಗಾರನಿಗೆ ಭಯವಾಯಿತು.- ಇವ ಎಲ್ಲಿ ಕಾಲು ಮುರಿದುಕೊಂಡು ತನ್ನ ತಲೆಗೇ ತರುವನೋ ಎಂದು ಕೊನೆಗೆ ಅವನೇ ಏಣಿಯೊಂದನ್ನು ತಂದು ನನ್ನನ್ನು ಇಳಿಸಿಕೊಂಡ. ಆ ಲೈಬ್ರರಿಯಲ್ಲಿ ನಾನು ಪ್ರವೇಶ ಮಾಡಿದಾಗ ದಾಖಲು ಮಾಡಿದ್ದ ಸಹಿಯ ವಹಿ ತೆಗೆದು ನೋಡಲು ಹೇಳಿದೆ. ಅದು ನನ್ನನ್ನು ರಕ್ಷಿಸಿತು. ತನ್ನ ಮನೆಗೆ ಕರೆದುಕೊಂಡು ಹೋದ ಮತ್ತು ಮನೆಯಲ್ಲಿ ಉಳಿದಿದ್ದ ಅನ್ನವನ್ನು ಬಡಿಸಿಕೊಟ್ಟ . ಅಂದಿನಿಂದ ನಾನು ಅವನೂ ಮಿತ್ರರಾದೆವು. ನನಗೆ ಲೈಬ್ರರಿಗೆ ಪ್ರವೇಶ ಖುಲ್ಲಂಖುಲ್ಲಾ . ಅಂದರೆ ಲೈಬ್ರರಿಯ ವೇಳೆ ಮೀರಿಯೂ ನನಗೆ ಯಾವಾಗಲೂ ಪ್ರವೇಶ . ಪಾರ್ಕ್ ನಲ್ಲಿ ಕದ್ದು ಸಲ್ಲಾಪದಲ್ಲಿ ತೊಡಗಿದ್ದ ಪ್ರೇಮಿಗಳಿಗೆ ಪಾರ್ಕ್ ಕಾವಲುಗಾರನೇ ಕಾವಲು ನಿಂತಂತಾಯಿತು. ನನ್ನ ಪುಸ್ತಕ ಪ್ರಣಯ ಅಭಾದಿತವಾಗಿ ಸಾಗಿತು. ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞನಿಗೂ ಇಂತಹ ಪ್ರಣಯದ ಸವಿ ದೊರಕಿತ್ತೆ ?
(ಮುಂದುವರಿಯುವುದು…)

‍ಲೇಖಕರು G

11 September, 2014

3 Comments

  1. Bharavi

    ನಿಮ್ಮ ಪುಸ್ತಕ ಪ್ರೇಮದ ಆವಾಂತರ ಚೆನ್ನಾಗಿದೆ. ಓದಿ ಮನಸಾರೆ ನಕ್ಕುಬಿಟ್ಟೆ. ಸೋ ನೈಸ್ ಸರ್….

  2. Anil Talikoti

    ಮಸ್ತಕಕ್ಕೆ ಮೊದ್ದುಗೆರೆಯುವ ಪುಸ್ತಕವೆಂಬ ಬೆಡಗಿ ನಿಮ್ಮನ್ನು ಕಳ್ಳ, ಸುಳ್ಳನಾಗಿಸದೆ ಬಚಾಯಿಸಿದ್ದು ವಹಿಯಲ್ಲಿಯ ಸಹಿಯಂತೆ ಎಷ್ಟು ಸಿಹಿಯಾಗಿದೆ.
    ~ಅನೀಲ

  3. Anonymous

    na gabariyagidde elli avamanisuvaro endu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading