ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದುಗರನ್ನೂ ಮಗುವಾಗಿಸಿದ ಮಿ.ರೆಡ್ ಕೈಟ್..

‘ಅವಧಿ’ಯಲ್ಲಿ ಗುಂಡುರಾವ್ ದೇಸಾಯಿ ಅವರ ಮಕ್ಕಳ ಕೃತಿ ದೈನಿಕ ಧಾರಾವಾಹಿಯಾಗಿ ‘ಮಿ. ರೆಡ್ ಕೈಟ್’ ಪ್ರಕಟವಾಗಿತ್ತು.

ಈ ದೈನಿಕ ಧಾರಾವಾಹಿಯನ್ನುಓದಿದ ‘ಅವಧಿ’ಯ ಇಬ್ಬರು ಪ್ರಮುಖ ಓದುಗರು ಬರೆದ ಅಭಿಪ್ರಾಯ ಇಲ್ಲಿದೆ.

-ಡಾ ಶ್ರೀದೇವಿ ಕರ್ಜಗಿ

ಮಿಸ್ಟರ್ ರೆಡ್ ಕೈಟ್ :
ಚಿತ್ತಾಕರ್ಷವಾದ ಕಲ್ಪನಾಲಹರಿಯ ಮಕ್ಕಳ ಕಾದಂಬರಿ, ಮಕ್ಕಳ ಸಾಹಿತಿ ಗುಂಡುರಾವ್ ದೇಸಾಯಿರವರ ಮಿಸ್ಟರ್ ರೆಡ್ ಕೈಟ್ 11 ಅಧ್ಯಾಯಗಳನ್ನು ಅವಧಿಯಲ್ಲಿ ನಿತ್ಯವೂ ಓದಿದೆ.  ಓದಿದ‌ನಂತರ ನನಗೆ ಅನಿಸಿದ್ದು ಕಾದಂಬರಿಯ ವಸ್ತು ವಿನ್ಯಾಸ ನಿರೂಪಣ ತಂತ್ರಗಳು ಮಕ್ಕಳ ಮನೋಲಹರಿಯ ಓಘಕ್ಕೆ ತಕ್ಕಂತೆ ನಿರೂಪಿಸಲಾಗಿದೆ. ಬಾಲ್ಯದ ಹುಸಿಮುನಿಸು, ತುಂಟಾಟ, ಗೆಳೆಯರ ಕೂಟ, ಆಟದೊಂದಿಗೆ ವಿಜ್ಞಾನದ ವಿಸ್ಮಯಗಳನ್ನು ಪರಿಚಯಿಸುತ್ತಾರೆ. ಹಾಗೆಂದು ಕಲ್ಪನೆಗೆ ಕೊಕ್ಕೆ ಹಾಕಿದ್ದಾರೆ ಎಂದರ್ಥವಲ್ಲ. ವಾಸ್ತವ ಬದುಕಿನಲ್ಲಿ ಹಾಸು ಹೊಕ್ಕಗಿರುವ ವಿಜ್ಞಾನದ ಜೊತೆ ಜೊತೆಗೆ ಕಲ್ಪನಾ ಕೌಶಲ್ಯವೂ ಕಥೆಯ ತುಂಬಾ ವ್ಯಾಪಿಸಿದೆ. ಮರದ ಕೊಕ್ಕೆಯಿಂದ ಬಿಡಿಸಿದ್ದಕ್ಕಾಗಿ ರೆಡ್ ಕೈಟ್ ದಿನಕರನಿಗೆ ಮಾಡುವ ಸಹಾಯ ಅಷ್ಟಿಷ್ಟಲ್ಲ. ಅದರಲ್ಲೂ ಮಾತನಾಡುವ ಕೈಟ್ ಎಂದರೆ ಯಾವ ಮಕ್ಕಳಿಗೆ ಇಷ್ಟ ಇಲ್ಲ ಹೇಳಿ?  ಅದರಲ್ಲೂ ನಮ್ಮೆಲ್ಲ ಆಸೆಗಳನ್ನು ಈಡೇರಿಸುವ ಕೈಟ್ ಸಿಗುವುದಾದರೆ ಎಷ್ಟು ಸಂತಸ ಅಷ್ಟೇ ಸಂತಸದಿಂದ ಮಕ್ಕಳನ್ನು ಕಾದಂಬರಿ ಓದಲು ತೊಡಗಿಸಿಕೊಳ್ಳುತ್ತದೆ.

ಕಾದಂಬರಿ ಉದ್ದಕ್ಕೂ  ಫನ್ ಫನ್ ಫನ್, ಜೊತೆಗೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ವಿಜ್ಞಾನದ ಜೊತೆ ಜೊತೆಗೆ  ನೀತಿಯನ್ನು ಕೂಡ ಕಾದಂಬರಿ ಬಿತ್ತರಿಸುತ್ತದೆ. ಹದಿಹರೆಯದವರು ದಾರಿ ತಪ್ಪಿದಂತೆ ಎಚ್ಚರಿಕೆಯನ್ನು ಕೈಟ್ ಉಪದೇಶಿಸುತ್ತದೆ. ಆ ಮಾತನ್ನು ದಿನಕರ ಕೇಳದಿದ್ದಾಗ ಜೀವ ಇರುವ ಪ್ರಾಣಿಗಳಂತೆ ಮುನಿಸಿಕೊಳ್ಳುವ, ಕನಸಿನ ಮೂಲಕ ಮುಂದೊದಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಸುವ ಕೆಲಸ ಮಾಡುತ್ತದೆ. ಅಲ್ಲಾಹುದ್ದಿ ನನ ಜಾದು ದೀಪದಂತೆ ದಿನಕರನ ಎಲ್ಲಾ ಆಸೆಗಳನ್ನು ನೆರವೇರಿಸಿ ದಿನಕರನನ್ನು ಶಾಲೆ ಮನೆ ಹಾಗೂ ಗೆಳೆಯರ ಸಮೂಹದಲ್ಲಿ ಹೀರೋ ಆಗಿ ರೂಪಿಸುತ್ತದೆ. ಇಂತಹ ಕೈಟ್  ನನಗೂ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ನಾನು ಫ್ರೀ ವರ್ಲ್ಡ್ ಟೂರ್ ಮಾಡುತ್ತಿದ್ದೆ ಎಂದೆನಿಸಿತು.

ಕಾದಂಬರಿಯ ಆರಂಭದಿಂದ ಹಿಡಿದು ಕೊನೆಯವರೆಗೂ ಕುತೂಹಲ ಕಾಯ್ದುಕೊಂಡೆ ಸಾಗುತ್ತದೆ. ಹಲವು ಕೌತುಕಗಳು ಹುಬ್ಬೇರಿಸುವಂತೆ ಮಾಡುತ್ತದೆ. ಇನ್ನು ಭಾಷಾ ಶೈಲಿ ಸಹಜ ಸುಲಲಿತವಾಗಿದ್ದು ಸಂಭಾಷಣೆ  ಪೂರಕವಾಗಿ ಮೂಡಿಬಂದಿದೆ. ಇಲ್ಲಿಯ ಸಂಭಾಷಣೆಗಳನ್ನು ಅಳವಡಿಸಿಕೊಂಡು ನಾಟಕವನ್ನಾಗಿ ಪರಿವರ್ತಿಸಬಹುದಾದಂತಹ ಕಾದಂಬರಿ. ಮಕ್ಕಳಿಗೆ ಮಾತ್ರವಲ್ಲದೆ ಮಗು ಮನಸ್ಸಿನವರಿಗೂ ಅಚ್ಚುಮೆಚ್ಚಿಗೆ ಆಗುವ ಕಾದಂಬರಿ. ಓದುಗರನ್ನು ಬಾಲ್ಯ ಕಾಲಕ್ಕೆ ವಿಹರಿಸುವಂತೆ ಮಾಡುವ, ಬಾಲ್ಯದ ಸವಿ ಕ್ಷಣಗಳನ್ನು ನೆನಪಿಸುವ ಟೈಮ್ ಮಷೀನ್ನಂತೆ ಭಾಸವಾಯಿತು. ಒಂದು ಒಳ್ಳೆಯ ಮಕ್ಕಳ ಕಾದಂಬರಿ ರಚಿಸಿದ್ದೀರಿ ಸರ್. ಪುಸ್ತಕ ರೂಪದಲ್ಲಿ ಬೇಗ ಓದುಗರಿಗೆ ಲಭ್ಯವಾಗುವಂತಾಗಲಿ ಸರ್.

ಶುಭವಾಗಲಿ.

——————————————————-

-ಆದಪ್ಪ ಹೆಂಬಾ

ಮಿ.ರೆಡ್ ಕೈಟ್ ಎಂಬ ಅದ್ಭುತ ಗಾಳಿಪಟವನ್ನು ಸೃಷ್ಟಿಸಿರುವ ಗೆಳಯ ಗುಂಡೂರಾವ್ ದೇಸಾಯಿ “ಮಿ.ರೆಡ್ ಕೈಟ್” ಎನ್ನುವ ಮಕ್ಕಳ ಕಾದಂಬರಿಯನ್ನು ಅವಧಿಯಲ್ಲಿ ನಿತ್ಯವೂ ಓದಿದೆ. ಮೊದಲು ಸಣ್ಣ ಕತೆಗಳು, ಕವಿತೆ, ಲಲಿತಪ್ರಬಂಧಗಳು, ಹಾಸ್ಯ ಬರಹಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಪ್ರವೇಶ ಕೊಟ್ಟವರವರು. ಆದರೆ  ಅದ್ಯಾವ ಅಮೃತ ಘಳಿಗೆಯಲ್ಲಿ ಮಕ್ಕಳ ಸಾಹಿತ್ಯ ಲೋಕಕ್ಕೆ ಕಾಲಿಟ್ಟರೋ ಅವರಿಂದ ಅದ್ಭುತ ಕಥಾನಕಗಳೇ ಸೃಷ್ಟಿಯಾಗಿವೆ. “ಫ್ರಾಗಿ ಮದುವೆ”, ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು” ನಂಥ ಸರಣಿಗೆ ಈಗ ಮತ್ತೊಂದು ಸುಂದರ, ನಮ್ಮನ್ನು ಮಗುವಾಗಿಸಿಬಿಡುವ ಮತ್ತು ನಮ್ಮ ಬಾಲ್ಯವನ್ನೆಲ್ಲಾ ನೆನಪಿಸುವ ಕಥಾನಕ “ಮಿ.ರೆಡ್ ಕೈಟ್” ಸೇರ್ಪಡೆಯಾಗುತ್ತದೆ.

ಸಾಹಿತ್ಯದ ಹಲವು ಪ್ರಕಾರಗಳಲ್ಲಿ ವಿಭಿನ್ನ ಮತ್ತು ವಿಶೇಷ ತಾಕತ್ತು ಬೇಡುವ ಪ್ರಕಾರವೆಂದರೆ ಈ ಮಕ್ಕಳ ಸಾಹಿತ್ಯ. ಇಂಥ ಮಕ್ಕಳ ಸಾಹಿತ್ಯ ಪ್ರಕಾರ ಗುಂಡೂರಾಯರಿಗೆ ಸಿದ್ಧಿಸಿದೆ. ಯಾಕೆಂದರೆ ಐವತ್ತರ ಹತ್ತಿರ ಬಂದರೂ ಅವರಿಗೆ ಮಗುವಾಗುವ ಶಕ್ತಿಯಿದೆ. ಓದುಗರನ್ನೂ ಮಗುವಾಗಿಸುವ ತಾಕತ್ತಿದೆ. ಅದರ ಪ್ರತಿರೂಪವಾಗಿ ಜನ್ಮ ತಳೆದಿರುವುದೇ “ಮಿ.ರೆಡ್ ಕೈಡ್”  ಎನ್ನುವ ಅವರ ಕಾದಂಬರಿ‌ ಎನಿಸುತ್ತದೆ.

ಮಾತನಾಡುವ ಸೋಜಿಗದ ಗಾಳಿಪಟವೊಂದು ಹದಿಹರೆಯದ ಪ್ರೌಢ ಶಾಲಾ ಹಂತದ ಬಾಲಕ ದಿನಕರನ ಬದುಕಿಗೆ ಎಂಟ್ರಿ ಕೊಡುತ್ತದೆ. ಅದಕ್ಕಿರುವ ವಿಶಿಷ್ಟ ಶಕ್ತಿಯಿಂದ ದಿನಕರನನ್ನು ತನ್ನ ಬಾಲದಿಂದ ಹೊತ್ತುಕೊಂಡು ಇಡೀ ಬ್ರಹ್ಮಾಂಡವನ್ನೇ ತೋರಿಸುತ್ತದೆ. ಈ ಕಾಲ್ಪನಿಕ ಪ್ರವಾಸದಲ್ಲಿ ವಿಜ್ಞಾನದ ವಿಸ್ಮಯಗಳನ್ನೂ ಹೇಳುವ ರಾಯರು ಪಕ್ಕಾ ವಿಜ್ಞಾನ ಶಿಕ್ಷಕರಾಗಿ ಕಾಣುತ್ತಾರೆ.

ಮುಂದೆ ಮಿ.ಆರ್ಕೆ (ರೆಡ್ ಕೈಡ್) ದಿನಕರನ ಗೆಳೆಯನಾಗಿ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ತಾನೇ ಹಾರಿ ಅವನಿಗೆ ಪ್ರಥಮ ಸ್ಥಾನ ಸಿಗುವಂತೆ ಮಾಡುತ್ತದೆ. ದಿನಕರ ಅದನ್ನು ನೆನೆದರೂ ಸಾಕು  ಕ್ರಿಕೆಟ್ ಆಟದಲ್ಲೂ ಅವನಿಗೆ ಯಶಸ್ಸನ್ನು ದೊರಕಿಸಿಕೊಡುವ ಶಕ್ತಿಯಾಗಿ ಇಡೀ ಶಾಲೆಯಲ್ಲಿ ಅವನನ್ನು ಹೀರೋನನ್ನಾಗಿ ಮಾಡುತ್ತದೆ.

ಮುಂದೆ ಹದಿಹರೆಯದ ಮಕ್ಕಳಲ್ಲಿ ಆಗುವ ವಯೋಸಹಜ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಗುಂಡೂರಾವ್ ಅವರು ಅತ್ಯಂತ ಸಹಜ ಎಂಬಂತೆ ಸೂಕ್ಷ್ಮವಾಗಿ ಚಿತ್ರಿಸುತ್ತಾರೆ. ಅದರ ಭಾಗವಾಗಿ ಹದಿಹರೆಯದ ಮನಸ್ಸಿನ ದಿನಕರ ರೀಟಾಳನ್ನು ಮೋಹಿಸುವುದು… ಅವನದೇ ತರಗತಿಯ ಮೀರಾ ಎನ್ನುವ ಹುಡುಗಿ ಇವನನ್ನು ಪ್ರೀತಿಸುವು ಒಂಥರಾ ರೋಮ್ಯಾಂಟಿಕ್ ಸಿನಿಮಾ ನೋಡುತ್ತಿರುವ ಅನುಭವ ನೀಡುತ್ತದೆ. ಆದರೆ ಹದಿಹರೆಯದ ಆ ಪ್ರೀತಿ ಅದು ಬರಿ ಆಕರ್ಷಣೆಯಿಂದ ಉಂಟಾಗುವ ಮನಸ್ಸಿನ ತಲ್ಲಣವಷ್ಟೇ ಎಂಬ ಜೀವನ ಸತ್ಯವನ್ನು ಮಿ.ಆರ್ಕೆ ಗುರುವಾಗಿ ಅವನಿಗೆ ತಿದ್ದಿ ಬುದ್ಧಿ ಹೇಳುತ್ತಿದೆ.

ಕಥೆ ಬೆಳವಣಿಗೆಯಾದಂತೆ ಮಕ್ಕಳು, ಅವರಾಟಗಳು, ಅವರ ದ್ವೇಷಗಳು, ಈ ದ್ವೇಷದಿಂದ ದಿನಕರನ ಎದುರಾಳಿಗಳು ಇವನಿಗೆ ದೈಹಿಕವಾಗಿ ಹೊಡೆದೂ ಬಡಿದು ಇವನ ಹೀರೋಯಿಸಂಗೆ ಕಾರಣವಾಗಿರುವ ಆ ಮಾಯಾ ಗಾಳಿಪಟವನ್ನು ನಾಶಮಾಡುತ್ತಾರೆ. ಆದರೆ ಒಳ್ಳೆಯ ದಕ್ಕೆ ಸಾವಿಲ್ಲ ಎಂಬಂತೆ ಮತ್ತೆ ಆ ಗಾಳಿಪಟ ಜೀವ ತಳೆದು ಇವನಿಂದ ಬೀಳ್ಕೊಡುತ್ತದೆ. ಇವೆಲ್ಲವೂ ನಮ್ಮ ಕಣ್ಮುಂದೆ ನಡೆಯುತ್ತಿವೆಯೇನೋ ಎನ್ನುವಷ್ಟು ಸಹಜವಾಗಿ  ಚಿತ್ರಿಸಿದ್ದಾರೆ. ಕಾದಂಬರಿಯಲ್ಲಿ ವಿಜ್ಞಾನ ದ ಕೌತುಕಗಳ ಜೊತೆ “ಕ್ಷಮಿಸಿದಷ್ಟು ಪ್ರೀತಿ ಬೆಳಯುತ್ತದೆ” ಎಂಬ ತೂಕದ ಮಾತುಗಳೂ ಹೇರಳವಾಗಿವೆ. ಈ ಕಾದಂಬರಿ ನಮ್ಮನ್ನು ಒಂದು ಹೊಸ ಲೋಕದಲ್ಲಿ ಸುತ್ತಾಡಿಸಿಕೊಂಡು ಮತ್ತೆ ನಮ್ಮ ಗೂಡು ಸೇರಿಸುವ ಕೃತಿಯಂತೂ ಹೌದು.

ಗುಂಡೂರಾಯರಿಗೆ ಶುಭ ಕೋರುತ್ತಾ. ಮತ್ತಷ್ಟು ಕೃತಿಗಳು ಅವರಿಂದ ಹೊರಬರಲಿ ಎಂದು ಆಶಿಸುತ್ತಾ. ಎಲ್ಲರಿಗೂ ಎಟುಕದ ಈ ಮಕ್ಕಳ ಸಾಹಿತ್ಯದಿಂದ ಅವರು ಹೊರಬರದಿಲಿ ಎಂದು ವಿಂತಿಸುವೆ, ನಿತ್ಯ ದೈನಿಕವಾಗಿ ಓದುಗರಿಗೆ ಉಣಬಡಿಸಿದ ಅವಧಿ ಪತ್ರಿಕೆಯ ಸಂಪಾದಕರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವೆ.

‍ಲೇಖಕರು Admin

31 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading