ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಲೇಬೇಕಾದ ‘ವಿಜಯ’ದ ಕಥೆ…

ಸಂಯುಕ್ತಾ ಪುಲಿಗಲ್ ಅವರ ಪುಸ್ತಕ ‘ನಾನಿಲ್ಲೇ ಇರುವೆ’

‘ಸಾವಣ್ಣ’ ಪ್ರಕಾಶನ ಪ್ರಕಟಿಸಿದ ಈ ಪುಸ್ತಕದ ಬಗ್ಗೆ ಲೇಖಕಿಯ ಮಾತು ಇಲ್ಲಿದೆ

Cancer may touch the body, but not the spirit that chooses to shine through it – ಇದು ವಿಜಯಾ ಅವರ ಬಗ್ಗೆ ನನ್ನ ಅನಿಸಿಕೆ.

ವಿಜಯಾ ಅವರು ನನ್ನ ಪತಿ ಗುರುದತ್ ಅವರ ಚಿಕ್ಕಮ್ಮ. ಮದುವೆಯ ನಂತರ ನನಗೂ ದೊರೆತ ಚಿಕ್ಕಮ್ಮ. ನಿಜ ಹೇಳಬೇಕೆಂದರೆ ನನ್ನ ಮತ್ತು ಅವರ ನಡುವಿನ ಒಡನಾಟ ಬಹಳ ಕಡಿಮೆ. ಹಲಕೆಲವು ಬಾರಿ ಜೊತೆಯಾಗಿ ಸೇರಿ ಮಾತುಕತೆಯಾಡಿದ್ದು ಬಿಟ್ಟರೆ ಅವರೊಟ್ಟಿಗೆ ಹೆಚ್ಚು ಬೆರೆತದ್ದು ಇಲ್ಲ. ಆದರೂ ಅವರ ಪ್ರತಿ ಒಡನಾಟದಲ್ಲೂ ಅವರು ಬೀರುತ್ತಿದ್ದ ಆತ್ಮೀಯ ನಗೆ, ತಾವೆಷ್ಟೋ ವರ್ಷಗಳಿಂದ ಆತ್ಮೀಯರು ಎಂಬಂತೆ ಆಪ್ಯಾಯಮಾನವಾಗಿ ಮಾತಿಗೆ ತೊಡಗಿಸಿಕೊಳ್ಳುತ್ತಿದ್ದ ಬಗೆ, ತಮ್ಮ ಸುತ್ತಮುತ್ತಲಿನ ಎಲ್ಲರ ಬಗ್ಗೆ ಅವರು ತೋರುತ್ತಿದ್ದ ಕಾಳಜಿ, ಅವರ ಲವಲವಿಕೆಯ ವ್ಯಕ್ತಿತ್ವ ಎಲ್ಲವೂ ಎದ್ದು ಕಾಣುತ್ತಿತ್ತು. ಆ ನೆನಪುಗಳು ನನ್ನಲ್ಲಿ ಇಂದೂ ಅಚ್ಚಳಿಯದಂತಿವೆ. ಚಿಕ್ಕಮ್ಮ ಈಗ ನಮ್ಮ ನಡುವೆ ಇಲ್ಲ. ಆದರೆ ಅವರು ತೊರೆದು ಹೋದ ಎಂದಿಗೂ ಮಾಸದ ನಗು, ಎಲ್ಲರನ್ನೂ ತಮ್ಮವರನ್ನಾಗಿ ಮಾಡಿಕೊಳ್ಳುವ ಆತ್ಮೀಯತೆ ಇನ್ನೂ ಜೀವಂತವಾಗಿದೆ.

ಅಂಡಾಶಯದ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಗತಿಸಿದ ವಿಜಯಾ ಚಿಕ್ಕಮ್ಮನವರ ಮೊದಲ ಪುಣ್ಯ ತಿಥಿಯ ದಿನದಂದು, ಅವರ ಪತಿ ಸುಬ್ಬಕೃಷ್ಣ ಚಿಕ್ಕಪ್ಪನವರು ನನ್ನನ್ನು ಬದಿಗೆ ಕರೆದು “ನಿನ್ನಲ್ಲಿ ಒಂದು ವಿಚಾರ ಮಾತನಾಡಬೇಕು. ಅದು ಯಾರಿಗೂ ಗೊತ್ತಿಲ್ಲ. ನಿನಗೇ ಮೊದಲು ತಿಳಿಸಬೇಕು” ಎಂದಿದ್ದರು. ನಂತರದ ದಿನಗಳಲ್ಲಿ ಭೇಟಿಯಾದಾಗ ತಿಳಿದುಬಂದ ಅವರ ಇಂಗಿತವೇನೆಂದರೆ, ಚಿಕ್ಕಮ್ಮನ ಬದುಕಿನಲ್ಲಿ ನಡೆದುಹೋದ ದುರಂತದ ಅನುಭವ ಕಥನವನ್ನು ಒಂದು ಕಾಲ್ಪನಿಕ ಕಥೆಯಾಗಿಸಬೇಕು ಎಂಬುದಾಗಿತ್ತು. ಈ ಮೂಲಕ ಮರೆಯಲ್ಲೇ ಮಸುಕಾಗಿ ನಿಂತು ಎಲ್ಲರನ್ನೂ ಬೆದರಿಸುವ ಕ್ಯಾನ್ಸರ್ ಬಗ್ಗೆ ಸಮಾಜಕ್ಕೆ ಒಂದಷ್ಟು ಅರಿವನ್ನು ಕೊಡಬಹುದು ಎಂಬುದು ಅವರ ಉದ್ದೇಶವಾಗಿತ್ತು. ಕನ್ನಡದಲ್ಲಿ ಕ್ಯಾನ್ಸರ್ ಬಗ್ಗೆ ಸಾಕಷ್ಟು ಪುಸ್ತಕಗಳು ಬಂದಿವೆ. ನಾವೇಕೆ ಇನ್ನೊಂದನ್ನು ಹೊರತರಬೇಕು ಎನ್ನುವ ಪ್ರಶ್ನೆಗೆ ಕಂಡುಬಂದ ಉತ್ತರ, ಈ ಪುಸ್ತಕವು ಮೂರು ಕಾರಣಗಳಿಗೆ ಬಹಳ ಮುಖ್ಯವಾಗಬಹುದು ಎಂದು. ಆ ಮೂರು ಕಾರಣಗಳು ಇಂತಿವೆ:

1. ಚಿಕ್ಕಮ್ಮನವರ ವ್ಯಕ್ತಿತ್ವ – ಕ್ಯಾನ್ಸರಿನ ಅಪ್ಪನಂಥವರು ಬಂದರೂ ಎದ್ದು ನಿಲ್ಲುತ್ತಾ ತಲೆಯೆತ್ತಿ ನೇರ ನಡೆದವರು, ಕ್ಯಾನ್ಸರ್ ಪತ್ತೆಯಾದ ಆರಂಭದ ದಿನಗಳಿಂದ ಅಂತ್ಯದ ಸಮಯದವರೆಗೂ ಕಳೆದುಹೋಗದ ಧನಾತ್ಮಕತೆ, ಜೀವನಾಸಕ್ತಿ, ತಾಳ್ಮೆ, ಶಿಸ್ತು, ಸಂಯಮವನ್ನು ಹೊತ್ತವರು. ಜೊತೆಗೇ ಆ ಖಾಯಿಲೆಯನ್ನು ಸದೆಬಡಿಯುವ ಶಕ್ತಿಯನ್ನೂ, ಮನಸ್ಥಿತಿಯನ್ನೂ ಬಹುಬೇಗ ಬೆಳೆಸಿಕೊಂಡವರು. ಒಬ್ಬ ಮಾರಣಾಂತಿಕ ಖಾಯಿಲೆಯ ರೋಗಿಗೆ (ಹೇಳಬೇಕೆಂದರೆ ಎಲ್ಲರಿಗೂ) ಈ ಗುಣಗಳು ಬಹಳ ಮುಖ್ಯವಾದದ್ದು ಎನಿಸಿತ್ತು.

2. ಕ್ಯಾನ್ಸರ್ ಕಥೆಗಳಲ್ಲಿ ಆರಂಭದ ಹಂತದಿಂದ ಅಂತ್ಯದವರೆಗೂ ಏನಾಗುತ್ತದೆ ಎಂಬ ಕಥನಾತ್ಮಕ ಹೆಣಿಗೆಯೊಂದಿಗಿನ ತಾಂತ್ರಿಕ ವಿವರಗಳು ಹಾಗೂ ಅದೇ ಪುಸ್ತಕದಲ್ಲಿ ಸೇರಬಹುದಾದ, ವೈದ್ಯರ ಮಾತುಗಳು, ಮನೆಯವರ ಮಾತುಗಳು, ವಿವಿಧ ರೀತಿಯ ಸಹಾಯ ಸಂಸ್ಥೆಗಳು ಸೇರಿದಂತೆ ಅಗತ್ಯ ಸಂಪನ್ಮೂಲಗಳನ್ನು ಈ ಪುಸ್ತಕದ ಮೂಲಕ ಒಂದು ಕಡೆ ಒಟ್ಟುಗೂಡಿಸಬಹುದು ಎನಿಸಿತ್ತು.

3. ಬೆಂಗಳೂರು ಒಂದರಲ್ಲೇ ಪ್ರತಿ ವರ್ಷ ನೂರಾರು ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ ಹಾಗೂ ರೋಗಿ ಮತ್ತು ರೋಗಿಯ ಮನೆಯವರು ಗಾಬರಿಯಿಂದ ಖಿನ್ನತೆಗೆ ಒಳಗಾಗಿ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಅವರೆಲ್ಲರಿಗೂ ಈ ಪುಸ್ತಕದಲ್ಲಿ ಹೇಳುವ ಕಥೆ ಮತ್ತು ಸಂಪನ್ಮೂಲಗಳ ಮೂಲಕ ಯಾವುದಾದರೂ ರೀತಿಯಲ್ಲಿ ಸಹಾಯವಾಗಬಹುದು ಎನಿಸಿತ್ತು.

ಈ ಎಲ್ಲಾ ಆಲೋಚನೆಗಳು ಆಕರವಾಗಿ ಈ ಪುಸ್ತಕ ಮೂಡಿ ಬಂದಿದೆ. ಪುಸ್ತಕವನ್ನು ಇಬ್ಭಾಗವಾಗಿಸಿ, ಮೊದಲ ಭಾಗದಲ್ಲಿ ಕಥಾನಕವನ್ನೂ, ಎರಡನೆಯ ಭಾಗದಲ್ಲಿ ಮಾಹಿತಿಯುಕ್ತ ಸಂಪನ್ಮೂಲಗಳನ್ನೂ ಸೇರಿಸಲು ಪ್ರಯತ್ನಿಸಿದ್ದೇನೆ. ’ನಾನಿಲ್ಲೇ ಇರುವೆ’ ಪುಸ್ತಕದ ಮೊದಲ ಭಾಗ ಮಾತ್ರ ನನ್ನ ಮಿತಿಯಲ್ಲಿ ಇದ್ದು, ನನ್ನ ಗ್ರಹಿಕೆಗೆ ನಿಲುಕಿದ ನಕ್ಷತ್ರದ ಕಥೆಯನ್ನು ಹೇಳಲು ಹೊರಟಿದ್ದೇನೆ. ಎರಡನೆಯ ಭಾಗಕ್ಕೆ ಅನೇಕ ಕೈಗಳ ಸಹಕಾರ ಕೂಡಿದೆ.   

ಚಿಕ್ಕಮ್ಮನ ಬದುಕು-ಬವಣೆಗಳನ್ನು, ಅವನ್ನೆಲ್ಲಾ ಅವರು ಸದೆಬಡಿದಂತಹ ಸಂದೇಶವನ್ನು ಆಕರವಾಗಿಟ್ಟುಕೊಂಡು ಕಥೆಯನ್ನು ಬರೆಯಬೇಕೆಂದು ನಿರ್ಧಾರವಾದ ಮೇಲೆ, ನಾನು ಅನೇಕರೊಂದಿಗೆ ಭೇಟಿ ಮಾಡಿ, ಮಾತನಾಡಿ ಚಿಕ್ಕಮ್ಮನ ವ್ಯಕ್ತಿತ್ವವನ್ನು, ಅವರ ನೋವು-ನಲಿವುಗಳನ್ನು, ಅವರ ಬದುಕನ್ನು ಇಣುಕಿ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟೆ. ಕೊನೆಯ ದಿನಗಳವರೆಗೂ ಅವರಿಗೆ ಕ್ಯಾನ್ಸರ್ ಇರುವ ವಿಷಯವನ್ನೇ ತಿಳಿಯದಂತೆ, ಅವರ ವ್ಯಕ್ತಿತ್ವದಲ್ಲೂ ಯಾವ ವ್ಯತ್ಯಾಸವೂ ಆಗದಂತೆ ಬದುಕಿದ ಅವರ ಧೀಮಂತಿಕೆಯ ವಿವರಗಳು ಹಲವಾರು ಉದಾಹರಣೆಗಳಾಗಿ ಅನೇಕರಿಂದ ನನಗೆ ದೊರೆಯಿತು. ನನಗೆ ಪರಿಚಯವಿದ್ದ ನಗುಮುಖದ ಚಿಕ್ಕಮ್ಮನ ಹಿಂದೆ ದೊಡ್ಡದೊಂದು ದುರಂತ ಕಾಂಡವೇ ಇದೆ ಎಂಬುದನ್ನು ಅರಿತು ನಾನು ದಂಗಾದೆ. ಎಲ್ಲರ ಮಾತುಗಳನ್ನೂ ಅಕ್ಷರ ರೂಪಕ್ಕೆ ಇಳಿಸುವಾಗ ಒಮ್ಮೆ ಕಣ್ಣೀರ್ಗರೆದಿದ್ದೆ.

ಒಂದು ಕಡೆ ತೀವ್ರವಾದ ಬದುಕಿನ ಪ್ರೀತಿ, ಇನ್ನೊಂದು ಕಡೆ ಹಿಂಡಿ ಹಿಪ್ಪೆ ಮಾಡುತ್ತಿರುವ ಹಲವಾರು ಖಾಯಿಲೆಗಳು, ಮತ್ತೊಂದು ಕಡೆ ಮನಸ್ಸನ್ನು ಸ್ಥಿಮಿತಗೊಳಿಸಿ, ಕ್ಷಮತೆ, ತಾಳ್ಮೆಗಳನ್ನು ಬೆಳೆಸುತ್ತಿದ್ದ ಅವರ ಆಧ್ಯಾತ್ಮ ಸಾಧನೆ… ಎಲ್ಲವನ್ನೂ ಒಟ್ಟೊಟ್ಟಿಗೇ ನಿಭಾಯಿಸಿಕೊಂಡು ಕಡೆಯ ಉಸಿರಿನವರೆಗೂ ಬದುಕನ್ನು ತಮ್ಮದೇ ರೀತಿಯಲ್ಲಿ ಆಚರಿಸಿದ್ದರು. ಆಚರಣೆ ಎಂಬ ಪದವನ್ನು ಇಲ್ಲಿ ಸೂಕ್ತವಾಗಿಯೇ ಬಳಸಿದ್ದೇನೆ.

ಇವರ ಬದುಕಿನ ಸುಳಿಗಳನ್ನು ಬಿಡಿಸುತ್ತಾ ಹೋದಂತೆ, ಚಿಕ್ಕಪುಟ್ಟ ತೊಂದರೆಗಳಿಗೆ, ಬಿಕ್ಕಟ್ಟುಗಳಿಗೆ ಆಕಾಶವೇ ಕಳಚಿಬಿದ್ದಂತೆ ಆಡುವ ನನ್ನ ಅಥವಾ ನನ್ನಂಥವರ ಬಗ್ಗೆ ನಾಚಿಕೆ ಎನಿಸಿತ್ತು. ಚಿಕ್ಕಮ್ಮನ ಬದುಕಿನ ವಿವಿಧ ಆಯಾಮಗಳು ಹಲವರಿಗೆ ಪಾಠವಾಗಬಹುದು ಎನಿಸಿತ್ತು.

ಅನೇಕರಿಂದ ಅವರ ವ್ಯಕ್ತಿತ್ವವನ್ನು ಪರಿಕಲ್ಪಿಸಿಕೊಂಡ ನಾನು, ಎಲ್ಲರ ಮಾತುಗಳನ್ನೂ ವಿವರವಾಗಿ ಕೇಳಿ, ನನ್ನ ಕಾಲ್ಪನಿಕ ಲೋಕದ ವಿಜಯಾರಿಗೆ ಜೀವತುಂಬಿ ನನ್ನದೇ ಕಾಲ್ಪನಿಕ ಕಥೆಯಾಗಿ ಈ ಕಥೆಯನ್ನು ಬರೆದಿದ್ದೇನೆ. ಕಥಾನಾಯಕಿಯಾದ ವಿಜಯಾ ಅವರ ಅನಾರೋಗ್ಯದ ವಿವರಗಳು, ಅವನ್ನು ಆಕೆ ಮನಸ್ಥೈರ್ಯದಿಂದ ಎದುರಿಸಿದ ವಿವರಗಳು, ವಿಜಯಾ ಚಿಕ್ಕಮ್ಮನವರ ಬದುಕಿನ ಉದಾಹರಣೆಗಳೇ ಆಗಿದ್ದು, ಅದರ ಸುತ್ತಲಿನ ಕಥೆಗೆ ಬಣ್ಣ ಹಚ್ಚುವ, ಅದನ್ನು ನನ್ನ ಕಲ್ಪನಾ ಜಗತ್ತಿಗೆ ಹರಿಬಿಡುವ ಸ್ವಾತಂತ್ರ್ಯವನ್ನು ನಾನು ತೆಗೆದುಕೊಂಡಿದ್ದೇನೆ. ಈ ಪುಸ್ತಕದಲ್ಲಿ ಬಂದಿರುವ ಕಥಾನಕವು ಕೇವಲ ಕಥೆಯಲ್ಲ. ಇದರಲ್ಲಿ ಕ್ಯಾನ್ಸರ್ ಬಗೆಗಿನ ನೈಜ ಅನುಭವಗಳು, ವೈದ್ಯಕೀಯ ವಿವರಗಳು ಮತ್ತು ಮಾಹಿತಿಗಳು ಎಲ್ಲವೂ ಹೆಣೆದುಕೊಂಡು ಮೂಡಿಬಂದಿದೆ. ಹಾಗಾಗಿ ಓದಿನ ಓಘಕ್ಕೆ ಧಕ್ಕೆಯಾಗಬಲ್ಲ ವಿವರಗಳು, ಕಥೆಯ ಸ್ವಾದವನ್ನು ಮೊಟಕುಗೊಳಿಸಬಹುದಾದ ಅತಿಯಾದ ಏಕಮುಖ ಸಂಭಾಷಣೆಗಳು ಕಂಡುಬಂದಲ್ಲಿ ಕ್ಷಮೆ ಇರಲಿ. ಪುಸ್ತಕದ ಉದ್ದೇಶಕ್ಕೆ ಪೂರಕವಾಗಿ ಕಥಾಹೆಣಿಗೆಯ ಸ್ವಾತಂತ್ರ್ಯವನ್ನೂ ತೆಗೆದುಕೊಂಡಿದ್ದೇನೆ.

ಈ ಪುಸ್ತಕವು ಇಂದು ಭೌತಿಕ ರೂಪ ತಾಳಿದೆ ಎಂದರೆ ಇದಕ್ಕೆ ಹಲವಾರು ಜನರು ನನ್ನೊಂದಿಗೆ ಕೈಜೋಡಿಸಿದ್ದಾರೆ, ಸಹಕರಿಸಿದ್ದಾರೆ:

ಮೊಟ್ಟಮೊದಲನೆಯದಾಗಿ, ಈ ಪುಸ್ತಕವು ಮೂಡಿ ಬರಬೇಕೆಂದು ಆಶಿಸಿದ, ಅದರ ಉದ್ದೇಶವನ್ನೂ ಸ್ಪಷ್ಟಪಡಿಸಿದ, ಪುಸ್ತಕದ ರೂವಾರಿಯಾದ ಕೆ.ಆರ್.ಸುಬ್ಬಕೃಷ್ಣ ಚಿಕ್ಕಪ್ಪನವರಿಗೆ, ಅವರ ಇಂಗಿತವನ್ನು ಅಂತೆಯೇ ಗ್ರಹಿಸಿ, ಅವರ ಉದ್ದೇಶ ಪೂರೈಸಲು ಎಲ್ಲ ರೀತಿಗಳಲ್ಲೂ ಸಹಕರಿಸಿದ ಅವರ ಮಕ್ಕಳಾದ ಕಿರಣ ಮತ್ತು ಕವಿತಾ ಅವರಿಗೆ, ಚಿಕ್ಕಮ್ಮನವರ ಕುರಿತಾಗಿ ತಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡ ಕುಟುಂಬದವರಾದ ಕುಮಾರ್ ಗೋಖರೆ, ಶ್ವೇತಾ ನಟರಾಜ್, ಅನಘಾ ಗೋಖರೆ, ಇಂದಿರಾ ಮಂಜುನಾಥ್, ಉಮಾ ಕೃಷ್ಣಮೂರ್ತಿ, ಸುಮಾ ಗೋಪಾಲಕೃಷ್ಣ, ಕೆ.ಜಿ.ರಾಮಪ್ರಸಾದ್, ಕೆ.ಜಿ.ಮಂಜುನಾಥ್, ಜಯಾ ಸುಬ್ಬರಾವ್, ಎಂ.ಸುಬ್ಬರಾವ್, ಗಿರಿ ಸುಬ್ಬರಾವ್, ಜಿ.ವಿ. ಪದ್ಮಾ, ಮಂಜುಳಾ ಸೋಗಾಲ್, ಶ್ರೀನಿವಾಸ ಸೋಗಾಲ್, ಸುದರ್ಶನ ಸೋಗಾಲ್ ಅವರಿಗೆ, ವಿಜಯಾ ಅವರ ಆಪ್ತರಾಗಿದ್ದ ನೆರೆಹೊರೆಯವರಾದ ಲೀಲಾ ಪ್ರಸಾದ್, ಮೀರಾ ರಾಘವೇಂದ್ರ, ಸಿ. ಜಿ.ರಾಘವೇಂದ್ರ, ನಿರ್ಮಲಾ ಶ್ರೀನಿಧಿ, ಶ್ರೀನಿಧಿ ಕೌಲಗಿ, ರಮಾ ಸುಬ್ರಮಣ್ಯ, ಶಾಂತಲಾ ಶೆಣೈ, ಮೋಹನದಾಸ್ ಶೆಣೈ ಅವರಿಗೆ, ಶಹಜಹಾನ್‌ಪುರದ ಶ್ರೀ ರಾಮ ಚಂದ್ರ ಮಿಷನ್ ಸಂಸ್ಥೆಯ ಸಹಜ ಮಾರ್ಗದ ಅಭ್ಯಾಸಿಗಳಾದ ರಾಧಾ ರಾಜನ್, ಕೆ.ಎಸ್.ಶ್ರೀನಿವಾಸ ಶಾಸ್ತ್ರಿ ಅವರಿಗೆ ಧನ್ಯವಾದಗಳು.

ಬಹು ಮುಖ್ಯವಾಗಿ ವಿಜಯಾ ಚಿಕ್ಕಮ್ಮನವರಿಗೆ ಹಾಗೂ ಅವರ ಕುಟುಂಬದವರಿಗೆ ಯಾವ ಅಡಚಣೆಗಳೂ ಇರದಂತೆ, ಮನಸ್ಸಿಗೆ ನೆಮ್ಮದಿ ಸಮಾಧಾನವಾಗುವಂತೆ ಪ್ರತಿ ಹಂತದಲ್ಲೂ, ಹಿರಿಯ ಶಸ್ತ್ರಚಿಕಿತ್ಸಕರಿಂದ ಹಿಡಿದು ಸಹಾಯಕ ಸಿಬ್ಬಂದಿ ವರ್ಗದವರೆಲ್ಲರೂ, ಎಲ್ಲ ರೀತಿಯಲ್ಲೂ ಸಹಕರಿಸಿದ ಶಂಕರಾ ಕ್ಯಾನ್ಸರ್ (Sri Shankara Cancer Hospital & Research Centre (SSCHRC)) ಆಸ್ಪತ್ರೆಗೆ, ಮತ್ತು ನಾನು ಪುಸ್ತಕದ ವಿಚಾರವಾಗಿ ಅನೇಕ ಬಾರಿ ಭೇಟಿ ಮಾಡಿ ಮಾತನಾಡಿದಾಗಲೂ, ತಮ್ಮ ಅತ್ಯಂತ ಕಾರ್ಯನಿರತ ದಿನಚರಿಯ ನಡುವೆಯೂ ಬಹಳ ಸೌಮ್ಯವಾಗಿ, ನಗುಮುಖದಿಂದ, ತಾಳ್ಮೆಯಿಂದ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟು, ಪುಸ್ತಕದ ಸಂದರ್ಶನಕ್ಕೆ ಒಪ್ಪಿಗೆ ಕೊಟ್ಟು ಸಹಕರಿಸಿದ ಡಾ. ಶ್ರೀನಾಥ್ ಬಿ.ಎಸ್, ಡಾ. ಶ್ರೀವಲ್ಲಿ ಅನಂತರಾಮು ಮತ್ತು ಡಾ. ಪ್ರಶಾಂತ್ ಪುತ್ರನ್ ಅವರಿಗೆ ವಂದನೆಗಳು.

ಕ್ಯಾನ್ಸರ್ ಖಾಯಿಲೆಗೆ ಸಂಬಂಧಿಸಿದಂತೆ ಕರ್ನಾಟಕದಾದ್ಯಂತ (ಮತ್ತು ನೆರೆರಾಜ್ಯಗಳನ್ನೂ ಸೇರಿದಂತೆ) ಸರ್ಕಾರೀ, ಸಾರ್ಕಾರೇತರ ವೈದ್ಯಕೀಯ ಸಹಾಯ ಮತ್ತು ಸಂಪನ್ಮೂಲಗಳ ಕುರಿತಾದ ವಿವರಗಳನ್ನು ಕೇಳಿದಾಗ, ತಕ್ಷಣ ಒಪ್ಪಿಕೊಂಡು ಮಾಹಿತಿಯನ್ನು ಹಂಚಿಕೊಂಡ ಡಾ. ರವಿಶಂಕರ್, ಡಾ. ಪ್ರಸಾದ್ ಎನ್.ಎ, ಡಾ. ಕುಸುಮಾ ಜಯರಾಂ, ಡಾ. ವೈ. ಆರ್. ಜಯರಾಂ, ಡಾ. ಅಪರ್ಣಾ ಶ್ರೀವತ್ಸ, ಮತ್ತು ಡಾ. ಪೂರ್ಣಿಮಾ ಶ್ರೀಕಾಂತ್ ಅವರಿಗೆ ವಂದನೆಗಳು.  

ನಾನು ಈ ಬರಹವನ್ನು ಬರೆಯಬೇಕೆಂದಾಗ ಮೊದಲು ನನ್ನ ಮನಸ್ಸಿಗೆ ಬಂದದ್ದು ನಾನು ಅಕ್ಕಾ ಎಂದು ಕರೆಯುವ, ಅಕ್ಕನಂತೆಯೇ ಇರುವ ಸ್ನೇಹಿತೆ ಭಾರತಿ ಬಿ.ವಿ. ಅವರು. ನನ್ನ ಬರವಣಿಗೆ ಸಂಪೂರ್ಣವಾಗಿ ಮುಗಿಯುವವರೆಗೂ ಇದರ ಬಗ್ಗೆ ಅವರಿಗೆ ತಿಳಿಸಲಿಲ್ಲವಾದರೂ, ಬರವಣಿಗೆ ಆರಂಭಿಸುವ ಮುನ್ನ ಮೊದಲು ಓದಿದ್ದು (ಎರಡನೆಯ ಬಾರಿಗೆ) ಭಾಅಕ್ಕನ ಪುಸ್ತಕ ’ಸಾಸಿವೆ ತಂದವಳು’. ಆ ಪುಸ್ತಕವನ್ನು ಓದಿ ನಾನು ಕಣ್ಣೀರಾದದ್ದೂ ಇದೆ, ನಕ್ಕದ್ದೂ ಇದೆ, ಧೈರ್ಯ ತಂದುಕೊಂಡದ್ದೂ ಇದೆ. ಅವರ ಬರವಣಿಗೆಯ, ವ್ಯಕ್ತಿತ್ವದ ಶಕ್ತಿ ಅಂಥದ್ದು. ಅವರ ಬಳಿ ಮುನ್ನುಡಿ ಬರೆಸಬೇಕೆಂದು ಅವರನ್ನು ಕೇಳದೆಯೇ ನಿರ್ಧರಿಸಿದ್ದೆ ಎಂದು ತಪ್ಪೊಪ್ಪಿಗೆಯನ್ನು ಕೇಳುತ್ತಾ, ಬರೆದುಕೊಟ್ಟದ್ದಕ್ಕೆ ಅವರಿಗೆ ಪ್ರೀತಿಯ ವಂದನೆಗಳನ್ನು ತಿಳಿಸುತ್ತೇನೆ. ನನ್ನ ಬರವಣಿಗೆಗೆ ಸದಾ ಪ್ರೋತ್ಸಾಹಿಸುವ, ಬರೆಯಲು ಆರಂಭಿಸು ಎಂದು ಬುದ್ಧಿಮಾತು ಹೇಳುವ, ನಾನು ತಿಂಗಳುಗಟ್ಟಲೆ ನನ್ನ ಲೋಕದಲ್ಲಿದ್ದರೂ, ಸಿಕ್ಕಾಗ ಆಪ್ಯಾಯವಾಗಿ ಅಪ್ಪುವ, ಕೇವಲ ಕೊಡುವವರೇ ಆಗಿರುವ ಸಂಧ್ಯಕ್ಕ, ಸಂಧ್ಯಾರಾಣಿ.ಎನ್ ಅವರಿಗೆ, ನಾನು ಸುಮ್ಮನಿದ್ದರೂ ನನ್ನ ಮೇಲೆ ಇನ್ನಿಲ್ಲದಂತೆ ಪ್ರೀತಿಯ ಮಳೆಗರೆವ, ಆತ್ಮೀಯತೆಯ ಮಡುವೇ ಆಗಿರುವ, ಅಕ್ಕನಂತಿರುವ ಸಿಂಧು ರಾವ್.ಟಿ, ಇಬ್ಬರೂ ಈ ಪುಸ್ತಕದ ನನ್ನ ಮೊದಲ ಓದುಗರಾಗಿದ್ದಾರೆ, ಓದಿ ತಮ್ಮ ಸಲಹೆಗಳೊಂದಿಗೆ ಬೆನ್ನುಡಿಯನ್ನೂ ಬರೆದುಕೊಟ್ಟಿದ್ದಾರೆ. ಅವರಿಗೂ ಆತ್ಮೀಯ ವಂದನೆಗಳು.  

ಹೀಗೆ, ಇಂತಹ ಪುಸ್ತಕ ಮಾಡಬೇಕು ಎಂದಿದ್ದೇನೆ ಜಮೀಲ್ ಸರ್, ಎಂದ ಕೂಡಲೇ, ಒಂದು ಕ್ಷಣವೂ ಆಲೋಚಿಸದೆ, “ನೀವು ಹೇಳಿದ ಮೇಲೆ ಮುಗೀತು. ಖಂಡಿತ ಮಾಡೋಣ ಮೇಡಂ” ಎಂದ ಸಾವಣ್ಣಾ ಪ್ರಕಾಶನದ ಜಮೀಲ್ ಸರ್ ಅವರು ತಮ್ಮ ಸಮ್ಮತಿ ಹಾಗೂ ಆಪ್ಯಾಯ ಮಾತುಗಳಿಂದಲೇ, ಬಹಳ ದಿನಗಳಿಂದ ಕುಂಟುತ್ತಾ ಸಾಗುತ್ತಿದ್ದ ನನ್ನ ಬರವಣಿಗೆಯ ಕೆಲಸಕ್ಕೆ ಅಶ್ವವೇಗವನ್ನು ತಂದುಕೊಟ್ಟು, ಪುಸ್ತಕಕ್ಕೆ ಒಂದು ಸುಂದರ ಸ್ವರೂಪ ಕೊಟ್ಟು, ಇಂದು ನಿಮ್ಮ ಮುಂದಿರಿಸಿದ್ದಾರೆ. ಅವರಿಗೆ ಅನಂತ ವಂದನೆಗಳು.

ಕಡೆಯದಾಗಿ, ನನ್ನ ಎಲ್ಲಾ ಕೆಲಸಗಳ ನಡುವೆ, ಈ ಪುಸ್ತಕದ ಕೆಲಸವನ್ನು ಸೇರಿಸಿಕೊಂಡು ನನ್ನನ್ನು ನಾನು ಸಂಪೂರ್ಣವಾಗಿ ತೊಡಗಿಸಿಕೊಂಡಾಗಲೂ ನನಗೆ ಬೇಕಾದ ಎಲ್ಲ ರೀತಿಯ ಸಹಾಯಕ್ಕೆ ಎಂದಿನಂತೆ ಸದಾ ಸಿದ್ಧವಾಗಿದ್ದ ನನ್ನ ಕುಟುಂಬವನ್ನು ನಾನಿಲ್ಲಿ ನೆನಪಿಸಿಕೊಳ್ಳಲೇಬೇಕು. ಹೀಗೊಂದು ಬರವಣಿಗೆಯ ಆಲೋಚನೆ ಇದೆ ಎಂದಾಕ್ಷಣ ಅದಕ್ಕೆ ಬೇಕಾದ ಪುಸ್ತಕಗಳನ್ನು ಹುಡುಕಿ ತಂದುಕೊಂಡುವುದು, ನಾನೇನಾದರೂ ಬರೆದರೆ ಅದನ್ನು ಕೇಳಿ ಅನಿಸಿಕೆಯನ್ನು, ಸೂಚನೆಗಳನ್ನು ಕೊಡುವುದು ಇತ್ಯಾದಿ ಎಲ್ಲಾ ಸಹಾಯವನ್ನೂ ಮಾಡುವ ನನ್ನ ಪತಿ ಗುರುದತ್ತ ಕೆ.ಎನ್ ಗೆ, ಮನೆಯ ಎಲ್ಲಾ ಕೆಲಸಗಳನ್ನೂ ಮೌನವಾಗಿ ಮುಗಿಸಿ, ನನ್ನ ಕೆಲಸಗಳಿಗೂ ಅಗತ್ಯವಾಗಿ, ನಾನು ಕೇಳದೆಯೇ ನೆರವಾಗುವ ನನ್ನ ಅತ್ತೆ ಜಿ.ವಿ. ಪದ್ಮಾ ಅವರಿಗೆ, ನನ್ನ ಎಲ್ಲಾ ಬರವಣಿಗೆಯನ್ನೂ ಮೊದಲು ಓದಿ ಕರಡು ತಿದ್ದಿ, ಅಭಿಪ್ರಾಯಗಳನ್ನು ಸೂಚಿಸುವ, ನನ್ನೆಲ್ಲಾ ಮಾತು-ಮಥನಗಳಿಗೆ ಸದಾ ಕಿವಿಯಾಗುವ, ಹೆಗಲಾಗುವ ನನ್ನ ಅಪ್ಪ ಪಿ.ಎಸ್.ಲಕ್ಷ್ಮೀನಾರಾಯಣ ರಾವ್ ಅವರಿಗೆ, ನನ್ನ ಬದುಕಿನ ದೊಡ್ಡ ಆಧಾರವಾಗಿರುವ, ನನ್ನ ಮೌನವನ್ನು ದುರ್ಬೀನು ಹಚ್ಚಿ ಓದುವ, ಎಲ್ಲಕ್ಕೂ ಸಹಕಾರಿಯಾಗಿರುವ ನನ್ನ ಅಮ್ಮ ಎ.ಶೈಲಕುಮಾರಿ ಅವರಿಗೆ, ನನ್ನ ಎಲ್ಲಾ ಬರವಣಿಗೆಯನ್ನೂ ಸೂಕ್ಷ್ಮವಾಗಿ ಓದಿ, ಪ್ರಾಮಾಣಿಕ ಅನಿಸಿಕೆ ತಿಳಿಸುವ, ನನ್ನ ಆಲೋಚನೆಗಳನ್ನು ನಾನು ಹೇಳದೆಯೇ ಗ್ರಹಿಸುವ, ಅದಕ್ಕಿಂತಲೂ ಮಿಗಿಲಾಗಿ ನನ್ನ ಬಲಗೈಯಾಗಿ ಎಲ್ಲಾ ರೀತಿಯ ಕೆಲಸಗಳಿಗೆ ಸಹಕರಿಸುವ ನನ್ನ ತಂಗಿ ಮಾನವಿ ಪುಲಿಗಲ್ ಗೆ, ಹಾಗೂ ನನ್ನ ಕಾರ್ಯನಿರತ ಬದುಕನ್ನು ಗ್ರಹಿಸಿಕೊಂಡು, ನನ್ನ ಪಕ್ಕದಲ್ಲೇ ಇದ್ದು, ನನ್ನನ್ನು ಕೆಲಸಕ್ಕೆ ಬಿಟ್ಟೂ ಬಿಡದೆ, ಒಪ್ಪಿಕೊಳ್ಳುವ ನನ್ನ ಪುಟಾಣಿ ಮಗಳು ಸುರಗಿ ಸಮುದ್ಯತಾಳಿಗೂ ವಂದನೆಗಳು.

ಈ ಪುಸ್ತಕವು ಕ್ಯಾನ್ಸರ್ ಎಂಬ ಮಾರಣಾಂತಿಕ ಖಾಯಿಲೆಯ ಬಗೆಗಿನ ಹಲವು ಬಗೆಯ ವಿವರಗಳು, ವಿಚಾರಗಳನ್ನು ಜನರಿಗೆ ತಲುಪಿಸುವ ಒಂದು ಆಶಯವನ್ನು ಹೊತ್ತಿದೆ. ಅದರಂತೆ ಕ್ಯಾನ್ಸರ್ ರೋಗಿಗಳಿಗೆ, ಅವರ ಕುಟುಂಬಗಳಿಗೆ, ಸಾಮಾನ್ಯ ಜನರಿಗೆ, ಎಲ್ಲರಿಗೂ ದೊಡ್ಡ ದಾರಿದೀಪವಾಗದಿದ್ದರೂ ಸಣ್ಣ ಬೆಳಕಿನ ಕಿಂಡಿಯಾದರೆ ನಮ್ಮೆಲ್ಲರ ಉದ್ದೇಶ ಫಲಿಸಿದಂತೆ. ಇನ್ನು ಈ ಪುಸ್ತಕ ನಿಮ್ಮೆಲ್ಲರಿಗಾಗಿ…  

‍ಲೇಖಕರು Admin

15 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading