ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಒಳಚರಂಡಿ ಪುರಾಣ’ ನಾಟಕದ ಒಂದು ನೋಟ

-ಹೆಚ್ ಎಂ ಮಯಬ್ರಹ್ಮಚಾರ್

ನಾಟಕ ಬೆಂಗ್ಳೂರ್ -18ರ ರಂಗ ಸಂಭ್ರಮದ ಹನ್ನೆರಡನೇ ನಾಟಕ “ಒಳಚರಂಡಿ ಪುರಾಣ”, ಬೆಂಗಳೂರಿನ ಕಲಾಗ್ರಾಮ ಮಲ್ಲತಹಳ್ಳಿ ಸಮುಚ್ಚಯ ಕಲಾಭವನದಲ್ಲಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ರವರ ಮೂಲ ರೂಪವನ್ನು ಪಠ್ಯ/ ರಂಗರೂಪವನ್ನಾಗಿ ಡಾ. ಗೌರೀಶ ಜೋಶಿ ಅವರು ಅಳವಡಿಸಿ ಅಂಕಲ್ ಶ್ಯಾಮ್ ಸಂಚಾಲಕರಾಗಿದ್ದ ‘ಅಂತರಂಗ’ ತಂಡಕ್ಕೆ ಅರ್ಚನಾ ಶ್ಯಾಮ್ ರವರು ನಿರ್ದೇಶಿಸಿ ದಿನಾಂಕ 16/12 /2025 ರಂದು ಪ್ರದರ್ಶಿಸಿದರು.

ನಾಲ್ಕೂವರೆ ದಶಕಗಳಿಂದ ‘ಅಂತರಂಗ’ ರಂಗತಂಡವನ್ನು ನಡೆಸಿಕೊಂಡು ಬಂದಿರುವ ಅಂಕಲ್ ಶಾಮ್ ರವರ ಪುತ್ರಿ ಅರ್ಚನಾ ಶಾಮ್ ರವರು ಹವ್ಯಾಸಿ ಯುವ ಮಹಿಳಾ ನಿರ್ದೇಶಕಿಯಾಗಿ ಈ ನಾಟಕದಲ್ಲಿ ನಗರ, ಪಟ್ಟಣಗಳಲ್ಲಿನ ಸೌಲಭ್ಯಗಳ ಕೊರತೆಯನ್ನು, ನೀರು, ರಸ್ತೆ, ಒಳಚರಂಡಿಗಳ ಅವ್ಯವಸ್ಥೆಯನ್ನು ಪ್ರಧಾನವಾಗಿಟ್ಟುಕೊಂಡು “ಒಳಚರಂಡಿ ಪುರಾಣ” ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಹವ್ಯಾಸಿ ರಂಗಭೂಮಿಯಲ್ಲಿ ಡಾ. ಸುಷ್ಮಾ ಎಸ್ ವಿ, ಚಂಪಾಶೆಟ್ಟಿ , ಛಾಯಾ ಭಾರ್ಗವಿ ನಯನ ಸೂಡ,ದಾಕ್ಷಾಯಿಣಿ ಭಟ್… ಹೀಗೆ ಹಲವು ನಿರ್ದೇಶಕಿಯರು ತಮ್ಮನ್ನು ತೊಡಗಿಸಿಕೊಂಡಿರುವುದು ನಿಜಕ್ಕೂ ಪ್ರಶಂಸನೀಯ.

ಇಟಲಿಯ ಟೈಬರ್ ನದಿ ದಡಗಳ ಪಾಲಟೈನ್ ಬೆಟ್ಟದ ಮೇಲೆ ರೋಮ್ ನಗರ ನಿರ್ಮಿಸಿ ಆಳಿದ ರೋಮುಲಸ್ ಮತ್ತು ರೀಮಸ್ ಸಹೋದರರ ಆಳ್ವಿಕೆಯಲ್ಲಿ ಕಾಂಕ್ರೀಟ್ ರಸ್ತೆಗಳು,ನೀರು ಸರಬರಾಜು ವ್ಯವಸ್ಥೆಗಳು,ವಿಸ್ತಾರ ಒಳಚರಂಡಿಗಳ ಅಭಿವೃದ್ಧಿ ಕಾರ್ಯಗಳನ್ನು, ಆಧುನಿಕ ಪ್ರಪಂಚದ ಮೇಲೆ ಶಾಶ್ವತ ಪ್ರಭಾವ ಬೀರಿರುವುದನ್ನು ‘ಒಳಚರಂಡಿ ಪುರಾಣ’ ನಾಟಕದ ಒಂದು ಭಾಗವಾಗಿ ಆ ದೃಶ್ಯಗಳನ್ನು ಅಳವಡಿಸಿಕೊಂಡು ರಂಗದ ಮೇಲೆ ಪಾತ್ರಗಳಾಗಿ ಅಭಿನಯಿಸಿದ್ದಾರೆ.

ಕುಟುಂಬದ ಸಾಮಾನ್ಯ ನಾಗರೀಕನಾಗಿ ಎಚ್ ವಿ ನಟರಾಜ್,ಲೋಕಪ್ಪ ಪಾತ್ರದಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುತ್ತ ಅರ್ಜಿಗಳನ್ನು ಗುಜರಾಯಿಸುತ್ತಾ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲನಾಗುತ್ತಾನೆ. ಹೆಂಡತಿ ನಿರ್ಮಲಳಾಗಿ ಪುಷ್ಪ ಮೂರ್ತಿ, ಮಗನಾಗಿ ಅಕ್ಷಯ್, ಮಂತ್ರಿಯಾಗಿ ಅರವಿಂದ್,ಸಾಹೇಬನಾಗಿ ತೇಜಸ್,ಚಾಂದಿನಿಯಾಗಿ ನಂದಿನಿ,ಮುನಿಯಪ್ಪನಾಗಿ ಶಾಮ್ ಸುಂದರ್ ನಾಟಕದಲ್ಲಿ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.ಅಲ್ಲಲ್ಲಿ ಪ್ರಾಸಬದ್ಧ ಸಂಭಾಷಣೆಗಳು ನಗೆಯುಕ್ಕಿಸುತ್ತವೆ. ನಡೆಯುತ್ತಿದ್ದರೆ ರಸ್ತೆ ಮೇಲೆ ಕಾಣುವಷ್ಟು ಗುಂಡಿ, ಓಡಿಸಲು ಬಲು ಕಷ್ಟ ಬಂಡಿ, ಬಿದ್ರೆ ಮುರಿಯುತ್ತೆ ಮಂಡಿ. ಗುಂಡಿ ತೋಡಿದವರ ಗುಂಡಿಗೆ ತೆಗೆದುಬಿಡುತ್ತೇನೆ. ಮನೆ ಕಡೆ ಗಮನಹರಿಸಿ ಎಂದರೆ ಇಡೀ ರೋಡಿನಲ್ಲಿ ಎಲ್ಲರ ಮನೆಗಳ ಮೇಲೆ ಗಮನ ಹರಿಸಿದೀನಿ. ಮತಿ ಇಲ್ಲದ ಮನುಷ್ಯನಿಗೆ ನನ್ನ ಶ್ರೀಮತಿ ಮಾಡಿ ನನ್ನ ಅಧೋಗತಿ ಮಾಡಿಟ್ಟಿದ್ದಾರೆ. ಹೀಗೆ ನಾಟಕ ಸಾಗುತ್ತದೆ.

ಒಳಚರಂಡಿಗಳ ಗಬ್ಬುನಾಥ, ಸಮಾಜದ ದುಷ್ಕೃತ್ಯಗಳನ್ನು, ಕೊಲೆ ಮಾಡಿ ಹೆಣ್ಣಿನ ಮಾನಭಂಗ ಮಾಡಿ,ಗಠಾರಗಳಲ್ಲಿ ತುರಿಕಿ ಮುಚ್ಚಿ ಬಿಡುವ ಕಟು ಸತ್ಯವನ್ನು ವಿವರಿಸಿದ್ದಾರೆ. ರಾಮಕೃಷ್ಣ ಕನ್ನರಪಾಡಿ ಪಾತ್ರಗಳಿಗೆ ಪ್ರಸಾಧನ ಮಾಡಿ ಕಾಲಮಾನದ ನೈಜತೆ ತಂದಿದ್ದಾರೆ.ಪ್ರಜ್ವಲ್ ಮತ್ತು ಬಾಲಕೃಷ್ಣ ಭಟ್ ಸಂಗೀತ ನಿರ್ವಹಣೆಯಲ್ಲಿ ಅಬ್ಬರವನ್ನು ಸ್ವಲ್ಪ ಕಡಿಮೆ ಗೊಳಿಸಿಕೊಳ್ಳಬೇಕಾಗಿತ್ತು. ಆಗ ನಟರ ಮಾತುಗಳು ಸ್ಪಷ್ಟವಾಗಿ ಪ್ರೇಕ್ಷಕರಿಗೆ ಕೇಳಿಸುತ್ತಿತ್ತು. ರಂಗಸಜ್ಜಿಕೆ ಯಲ್ಲಿ ಭೀಮ ರವರು ಚರಂಡಿಗಳ ನೀರೆಲ್ಲಾ ಒಂದೆಡೆ ಬಂದು ಸೇರುವ ಸ್ಥಳವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನೃತ್ಯ ಸಂಯೋಜನೆಯಲ್ಲಿ ಶ್ವೇತ ಶ್ರೀನಿವಾಸ್ ದೃಶ್ಯಗಳನ್ನು ಕಂಗೊಳಿಸಿದ್ದಾರೆ. ರಂಗ ಪರಿಕರಗಳು ನಾಟಕದ ವೇಗಕ್ಕೆ ಬಳಕೆಯಾಗುವಂತೆ ಆದರ್ಶ್ ತಳವಾರ್,ಶ್ರುತಿ ಸುದರ್ಶನ್ ಚೆನ್ನಾಗಿ ರೂಪಿಸಿದ್ದಾರೆ. ರಂಜನ್ ಅವರು ಬೆಳಕು ನಿರ್ವಹಣೆಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ನಾಟಕದ ಅವಧಿಯನ್ನು ಸ್ವಲ್ಪ ಕಡಿಮೆಗೊಳಿಸಬೇಕು. ನಿರ್ದೇಶಕಿ ಅರ್ಚನಾ ಶ್ಯಾಮ್ ಅವರ ಪರಿಶ್ರಮ ಮೆಚ್ಚುವಂಥದ್ದು.

ನಾಟಕ ಬೆಂಗ್ಳೂರ್ ಪರವಾಗಿ ಆಚಾರ್ ಎಲ್ಲರನ್ನೂ ಸ್ವಾಗತಿಸಿದರು. ನಿರ್ದೇಶಕರಿಗೆ ನೆನಪಿನ ಕಾಣಿಕೆಯನ್ನು ಹವೀಶ್ ನೀಡಿದರು ಸಹಯೋಗ ಮತ್ತು ಸಹಕಾರ ನೀಡಿದ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಬಹುರೂಪಿ ಪ್ರಕಾಶನಕ್ಕೆ ಹಾಗೂ ಪ್ರೇಕ್ಷಕರಿಗೆ ಆಚಾರ್ ವಂದನೆ ಸಲ್ಲಿಸಿದರು.

‍ಲೇಖಕರು Admin

28 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading