ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಬ್ಬ ಮಹಾತಾಯಿಯ ನೆನೆದು..

ಸಾವಿತ್ರಿಬಾಯಿ ಪುಲೆ ಎಂಬ ಮಹಾತಾಯಿಯ ನೆನೆದು

ಎನ್.ರವಿಕುಮಾರ್ ಟೆಲೆಕ್ಸ್ 

ಕೀವುಗಟ್ಟಿದಂತಹ ಗಾಯದ ಕಲೆಯಾಗಿದ್ದ ಜಾತಿಯನ್ನು
ಕಡೆಗೂ ನನ್ನ ಬದುಕಿನಿಂದ ಅಳಿಸಿಹಾಕಿದ್ದೇನೆ
ನೆನಪಿರಲಿ ಬಲಿರಾಜನ ರಾಜ್ಯಭಾರದಲ್ಲಿ ನಮ್ಮ ದಿವ್ಯವಾದ ಧ್ವಜಸ್ತಂಭವು ಸುರಳಿ
ಬಿಚ್ಚಿಕೊಂಡು ಪ್ರಜ್ವಲವಾಗಿ ಬೆಳಗುತ್ತಿದೆ..
…………..
ಜೊತೆಯಾಗಿ ಸೇರೋಣ ನಿಷ್ಕಪಟವಾದ, ಋಜುಮಾರ್ಗದ, ಮಾನವೀಯವಾದ
ಧಾರ್ಮಿಕ ತತ್ವವನ್ನು ಕಲಿಯೋಣ
ನಿದ್ದೆಯನ್ನು ಮಾಡಬೇಡಿ , ಕಹಳೆಯನ್ನು ಬಾರಿಸಿ
ಓ ..ಬ್ರಾಹ್ಮಣನೇ , ಮುನ್ನುಗ್ಗಬೇಡ, ಉರುಳಿ ಬೀಳುತ್ತೀಯ..

ಸಾವಿತ್ರಿಬಾಯಿ ಪುಲೆ ಅವರ ಕವನದ ಸಾಲುಗಳಿವು. ಈ ಕವನದ ಸಾಲುಗಳೇ ಇಡೀ ಭಾರತದ ಸಾಮಾಜಿಕ ವ್ಯವಸ್ಥೆ ಮತ್ತು ಅದರ ವಿರುದ್ದ ಹೋರಾಡಬಹುದಾದ ಮಾರ್ಗಗಳ ಸಂಕೇತಗಳನ್ನು ತೋರಿಸುತ್ತದೆ. ಭಾರತದ ದಲಿತರ ವಿಮೋಚನೆ ಅಕ್ಷರದಿಂದ ಮಾತ್ರ ಎಂಬ ಮಹಾನ್ ಸಂಕಲ್ಪದಿಂದ ಕಾರ್ಯಸಾಧು ಮಾಡಿ ತೋರಿಸಿದ ಜ್ಯೋತಿಬಾಯಿಪುಲೆ ಈ ದೇಶ ಚರಿತ್ರೆಯಲ್ಲಿ ಎಂದಿಗೂ ಅಜರಾಮರ,

ಸಾವಿತ್ರಿಬಾಯಿ ಪುಲೆ ಈ ದೇಶ ಕಂಡ ಮಹಾನ್ ಶಿಕ್ಷಕಿ, ದಮನಿತರ,ಶೋಷಿತ , ಅಸ್ಪೃಶ್ಯರ ಪಾಲಿನ ತಾಯಿ, ನಿರ್ಗತಿಕ ಮಹಿಳೆಯ ಮಹಾಮಡಿಲು, ಸಾವಿತ್ರಿಬಾಯಿ ೧೯ ನೇ ಶತಮಾನದಲ್ಲಿ ಶಿಕ್ಷಣದಲ್ಲಿ ಕ್ರಾಂತಿ ತಂದ ಆಧುನಿಕ ಶಿಕ್ಷಣದ ಮಹಾತಾಯಿ ಎಂದೇ ಕರೆಯಲಾಗುತ್ತದೆ. ೧೮೩೧ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂವ್ ನಲ್ಲಿ ಹುಟ್ಟಿದ ಸಾವಿತ್ರಿ ಬಾಯಿ ಪುಲೆ ಒಂಬತ್ತನೇ ವಯಸ್ಸಿಗೆ ಜ್ಯೋತಿ ಬಾ ಪುಲೆ ಅವರನ್ನು ಮದುವೆಯಾಗುತ್ತಾರೆ. ಸಂಸಾರ, ಮಕ್ಕಳು, ಎಂಬ ವ್ಯಕ್ತಿಗತ ಜಂಜಾಟಗಳಿಗೆ ಜೋತು ಬೀಳದೆ ಸಾವಿತ್ರಿಬಾಯಿ ಜಾತಿವ್ಯವಸ್ಥೆಯಿಂದ ನಲುಗಿ ಅಕ್ಷರಗಳಿಂದ ವಂಚಿತರಾದ ದಮನಿತ ಜಾತಿಗಳ ಮಕ್ಕಳಿಗೆ ಶಾಲೆಗಳನ್ನು ತೆರೆಯುತ್ತಾರೆ. ಇವರಿಗೆ ಬೆನ್ನೆಲುಬಾಗಿ ಗೆಳೆತಿ ಫಾತಿಮಾ ಶೇಖ್, ಪತಿ ಜ್ಯೋತಿಬಾ ಪುಲೆ ನಿಲ್ಲುತ್ತಾರೆ. ೧೮೯ ವರ್ಷಗಳ ಹಿಂದೆಯೇ ಭಾರತದ ಅಸ್ಪೃಶ್ಯರಿಗೆ ಆಧುನಿಕ ಶಿಕ್ಷಣ ನೀಡಿದ ತಾಯಿ ಸಾವಿತ್ರಿ ಬಾಯಿ ಪುಲೆ. ಅಕ್ಷರವೆಂಬುದು ಪ್ರೇಶ್ವೆಗಳ, ಬ್ರಾಹ್ಮಣ ಹಕ್ಕು-ಆಸ್ತಿಎಂಬಂತಿದ್ದ ಮತ್ತು ಅದನ್ನು ಶೂದ್ರರು, ದಮನಿತರು ಕಲಿಯುವುದು ಮಹಾಪರಾಧವೆಂಬ ಕಾಲ ಘಟ್ಟದಲ್ಲಿ ಸಾವಿತ್ರಿ ಬಾಯಿ ಪುಲೆ ಈ ನಿಮ್ನ ವರ್ಗಗಳಿಗಾಗಿ ಶಾಲೆಗಳನ್ನು ತೆರೆದದ್ದು ಅವರ ದಿಟ್ಟತನದ ಧ್ಯೋತಕ.

ರಸ್ತೆಗಳಲ್ಲಿ ನಡೆದು ಹೋಗುವಾಗ ಪುಲೆ ದಂಪತಿಗಳ ಮೇಲೆ ಸಗಣಿ ನೀರೆರಚಿ, ಕಲ್ಲುಗಳ ತೂರಿ ಅವಮಾನಿಸಿದ ಮೇಲ್ವರ್ಗಗಳ ಅಸೂಯೆ. ಅಸಮಾನತೆಯ ಕೇಡಕುದಿಯನ್ನು ಸ್ಥಿತಪ್ರಜ್ಞೆಯಿಂದಲೇ ಸಹಿಸಿಕೊಳ್ಳುತ್ತ ಸಮಾನತೆಯ ಸೂತ್ರಕ್ಕಾಗಿ ಪರಿಶ್ರಮಿಸಿದವರು ಪುಲೆ ದಂಪತಿಗಳು.

ಸಾವಿತ್ರಿಬಾಯಿ ಪುಲೆ ಅವರು ೧೮೪೮ ರಲ್ಲಿ ಪುಣೆಯ ನಾರಾಯಣಪೇಟೆ ಬಿಂದೇವಾಡದಲ್ಲಿ ಮೊದಲ ಬಾರಿಗೆ ಬಾಲಕಿಯರ ಶಾಲೆಯನ್ನು ಆರಂಭಿಸುತ್ತಾರೆ. ಮೂರು ವರ್ಷದೊಳಗೆ ಶಾಲೆಗಳ ಸಂಖ್ಯೆ ಮೂರಕ್ಕೇರುತ್ತದೆ. ವಿದ್ಯಾರ್ಥಿನಿಯರ ಸಂಖ್ಯೆ ಐನೂರರ ಗಡಿ ದಾಟುತ್ತದೆ. ಕೇವಲ ೧೭ನೇ ವಯಸ್ಸಿನಲ್ಲಿ ಸಾವಿತ್ರಿಬಾಯಿ ಪುಲೆ ಸಮಾಜದ ಸುಧಾರಣೆಗೆ ಆ ಹೊತ್ತಿನ ಕಾಲಕ್ಕೆ ಜಾತಿ ವ್ಯವಸ್ಥೆ, ಸ್ತ್ರೀ ಶೋಷಣೆಯ ವಿರುದ್ದ ವೈಚಾರಿಕ ಹೋರಾಟವನ್ನು ಕೈಗೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪದ್ದತಿಯನ್ನು ಅಂದೇ ಜಾರಿಗೆ ತಂದಿದ್ದರು. ನಿರ್ಗತಿಕ ಹೆಣ್ಣುಮಕ್ಕಳಿಗೆ,ಧರ್ಮದ ಹೆಸರಿಲ್ಲಿ ನಿರಾಕರಿಸಲ್ಪಡುವ ವಿಧವೆಯರಿಗೆ, ವಿವಾಹಪೂರ್ವ ಗರ್ಭೀಣಿಯಾದ , ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳಿಗಾಗಿ ಪುನರ್ ವಸತಿ ಕೇಂದ್ರಗಳ ಬಾಗಿಲು ತೆರದವು. ಅಸ್ಪೃಶ್ಯರ ಸಮುದಾಯಗಳ ಶಿಕ್ಷಣಕ್ಕಾಗಿ ಸಮಾಜ ಎಂಬ ವೇದಿಕೆಯನ್ನು ಪುಲೆ ದಂಪತಿಗಳು ಸ್ಥಾಪಿಸುತ್ತಾರೆ. ವಿಕ್ಟೋರಿಯ ಬಾಲಾಶ್ರಮ, ಸತ್ಯಶೋಧಕ ಸಮಿತಿ, ಕೂಲಿ ಕಾರ್ಮಿಕರಿಗಾಗಿ ರಾತ್ರಿಪಾಳೆಯದಲ್ಲಿ ಶಾಲೆ ಸ್ಥಾಪನೆ ಮಾಡುವ ಮೂಲಕ ಜೀವನದ ಪ್ರತಿಕ್ಷಣವನ್ನು ಸಾವಿತ್ರಿ ಬಾಯಿ ಪುಲೆ ಅವರು ತಮ್ಮ ಪತಿ ಜ್ಯೋತಿ ಬಾ ಪುಲೆ ಅವರೊಂದಿಗೆ ಸೇರಿ ಈ ಸಮಾಜಕ್ಕಾಗಿಮುಡುಪಿಟ್ಟರು.

ಎಲ್ಲಾ ಜಾತಿಯ ಹೆಣ್ಣಿನ ಮೇಲಿನ ಶೋಷಣೆಯ ವಿರುದ್ದ ಹೋರಾಡುವ ಮೂಲಕ ಸಾವಿತ್ರಿ ಬಾಯಿ ಈ ದೇಶದ ಮೊದಲ ಸ್ತ್ರೀ ವಾದಿ ಚಿಂತಕಿ, ಹೋರಾಟಗಾರ್ತಿಯಾಗಿ ನಮಗೆ ಕಾಣಸಿಗುತ್ತಾರೆ. ವಿಧವೆಯರ ಕೇಶಮುಂಡವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಾರೆ. ದಲಿತರಿಗಾಗಿ ತಮ್ಮ ಮನೆಯ ನೀರಿನ ಟ್ಯಾಂಕ್ ನ್ನೆ ಮೀಸಲಿರಿಸಿ ಮಾನವತೆಯನ್ನು ಸಾರುತ್ತಾರೆ. ಸಾಮಾಜಿಕ ಬದಲಾವಣೆ ಎಂಬುದು ಕೇವಲ ಜಾತಿ ವ್ಯವಸ್ಥೆಯಲ್ಲಿನ ರೋಗಗಳ ಬಗ್ಗೆ ಮಾತಾಡದೆ ಅದಕ್ಕೆ ಮದ್ದು ಹುಡುಕುವುದೇ ಏಕೈಕ ಮಾರ್ಗ ಎಂದು ಅರಿತ ಸಾವಿತ್ರಿ ಬಾಯಿ ಬದ್ಧತೆಯಿಂದ ದುಡಿದ ಮಹಾನ್ ತ್ಯಾಗಿ, ತುಳಿತಕ್ಕೊಳಗಾದವರಲ್ಲಿ ಬೌದ್ಧಿಕ ಶಕ್ತಿಯನ್ನು ತುಂಬಿದ ದಿನ ಪ್ರಶ್ನಿಸುವ , ಹಕ್ಕಿಗಾಗಿ ಹೋರಾಡುವ ಛಲ, ಜ್ಞಾನ ದಕ್ಕುತ್ತದೆ. ಈ ಕೆಲಸವನ್ನು ಆದ್ಯತೆ ಮೇಲೆ ಮಾಡಿದಾಗ ಮಾತ್ರ ಕ್ರಾಂತಿಯೊಂದು ನಡೆಯಲು ಸಾಧ್ಯ ಎಂದು ಅರಿತ ಸಾವಿತ್ರಿಬಾಯಿ ನಿಮ್ನ ಸಮುದಾಯಗಳಲ್ಲಿ ಅಕ್ಷರದ ಜ್ಞಾನವನ್ನು ತುಂಬುವ ಕೆಲಸ ಮಾಡುತ್ತಾ ಬಂದರು. ಸಮಸಮಾಜದ ನೆಲೆಗಾಗಿ ಹಗಲಿರುಳು ತಮ್ಮ ವ್ಯಕ್ತಿಗತ ಸುಖ-ಭೋಗಗಳನ್ನು ತ್ಯಾಗ ಮಾಡಿ ದುಡಿದ ಸಾವಿತ್ರಿ ಬಾಯಿ ಪುಲೆ ಅವರು ೧೮೯೭ ರಲ್ಲಿ ಪುಣೆಯಲ್ಲಿ ಪ್ಲೇಗ್ ಪೀಡಿತ ಜನರ ಸೇವೆ ಮಾಡುತ್ತಲೆ ಪ್ಲೇಗ್ ಗೆ ತುತ್ತಾಗಿ ಕೊನೆಯುಸಿರೆಳೆದರು. ಕೊನೆಯವರೆಗೂ ಈ ದೇಶದ ಜಾತಿ ವ್ಯವಸ್ಥೆ, ಸಾಂಪ್ರದಾಯಿಕ ಸೋಂಕುಗಳ ವಿರುದ್ದ ಜೀವ ತೇಯ್ದ ಸಾವಿತ್ರಿ ಬಾಯಿ ಪುಲೆ ಅವರನ್ನು ನೆನೆಸುವುದು ಎಂದರೆ ಅವರ ವಿಚಾರಧಾರೆಗಳನ್ನು ಮಾದರಿಯನ್ನಾಗಿಸಿಕೊಂಡು ಚಿರಸ್ಥಾಯಿಯಾಗಿಸುವುದೇ ಆಗಿದೆ.

ಈ ದೇಶದ ಮೊಟ್ಟಮೊದಲ ಮತ್ತು ಶ್ರೇಷ್ಟ ಶಿಕ್ಷಕಿ ಎಂದರೆ ಅದು ಸಾವಿತ್ರಿ ಬಾಯಿ ಪುಲೆ ಮಾತ್ರವೆ ಹೊರತು ಬ್ರಾಹ್ಮಣೀಕರಣ ದ ಪೊಳ್ಳು ಚರಿತ್ರೆಗಳಿಂದ ಆರಾಧಿಸುವ ಯಾವ ವ್ಯಕ್ತಿಯೂ ಆಗಿರಲಾರರು. ಇಂತಹ ಪೊಳ್ಳುತನಗಳು ಎಲ್ಲಾ ಕಾಲಕ್ಕೂ ನಡೆದುಕೊಂಡು ಬಂದಿರುವ ಚರಿತ್ರಾದ್ರೋಹ ಕೃತ್ಯ. ಈ ದೇಶದಲ್ಲಿ ಮನುಕುಲದ ಏಳಿಗೆಗಾಗಿ, ದಮನಿತರ ಹಕ್ಕುಗಳಿಗಾಗಿ ದುಡಿದವರ ಅಸ್ಮಿತೆಯನ್ನು ಪ್ರಜ್ಞಾಪೂರ್ವಕವಾಗಿಯೂ ಅಳಿಸಿ ಹಾಕುವ ಅಥವಾ ಇಂತಹ ಸಂತರು, ಸಾಧಕರನ್ನು ನೆನೆಯುವ ಹೊತ್ತಿನಲ್ಲಿ ಮತ್ತೊಂದು ಕೃತ್ರಿಮ ಆರಾಧನೆಯನ್ನು ವಿಜೃಂಭಿಸುವ ಜಾತಿ ರೋಗಸ್ಥರ ಕೆಲಸ ನಡೆಯುತ್ತಲೆ ಇದೆ. ಎಷ್ಟರ ಮಟ್ಟಿಗೆ ಎಂದರೆ ಮನುಷ್ಯಕುಲ ನಾಶದ ಅಣ್ವಸ್ತ್ರ ಪರೀಕ್ಷೆಗೆ ಬುದ್ದ ನಕ್ಕ ಎಂದು ಹೆಸರಿಡುವುದರೊಂದಿಗೆ ಆರಂಭಗೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದೆ ಸೌಹಾರ್ದತೆಯ ನುಚ್ಚು ನೂರು ಮಾಡುವ ಬಾಬ್ರಿ ಮಸೀದಿಯನ್ನು ಕೆಡವಿ ಅದೊಂದು ವಿಜಯೋತ್ಸವೆಂದು ಕೇಕೆ ಹಾಕುತ್ತಾ ನಿಜ ನಾಯಕರ ಆಶಯ, ಅಸ್ಮಿತೆಗಳನ್ನು ಮರೆಗೆ ಸರಿಸುವ ಕೆಲಸಗಳು ಮುಂದುವರೆದಿವೆ.
ಇಂತಹ ಸಂದರ್ಭದಲ್ಲಿ ಮತ್ತೆ ಮತ್ತೆ ಚರಿತ್ರೆಯ ಉತ್ಕನನೋಪಾದಿಯಲ್ಲಿ ಸತ್ಯವನ್ನು ಎತ್ತಿ ಹಿಡಿಯುವ ಮೂಲಕ ಪೊಳ್ಳು ದೇಶಭಕ್ತಿ

ಸುಳ್ಳು ಚರಿತ್ರೆಗಳಿಗೆ ಕನ್ನಡಿ ಹಿಡಿಯಬೇಕಾಗಿದೆ. ಇವತ್ತಿನ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣಗೊಂಡಿದ್ದು, ಸಾಮಾಜಿಕ, ಮಾನವೀಯ ಮೌಲ್ಯಗಳ ಬಿತ್ತಬೇಕಾದ ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ,ಮತಧರ್ಮಗಳ ಸೋಂಕನ್ನು ಬಿತ್ತುವ ಕೆಲಸ ನಡೆದಿದೆ. ಇದು ಅಪಾಯಕಾರಿ. ಅವರ ಜನ್ಮದಿನದ ಇಂದು ತನ್ನತ್ತ ತೂರಿ ಬಂದ ಜಾತಿಕೋರರ ಕಲ್ಲುಗಳನ್ನೆ ಹೂವುಗಳೆಂದು ಸ್ವೀಕರಿಸಿ ಈ ದೇಶದ ದಮನಿತ, ಶೋಷಿತ ಜನಸಮುದಾಯ, ಸ್ತ್ರೀಕುಲವನ್ನು ಮಡಿಲಲ್ಲಿಟ್ಟುಕೊಂಡು ಪೊರೆದ ಮಹಾ ತಾಯಿ ಸಾವಿತ್ರಿ ಬಾಯಿ ಪುಲೆ ಅವರನ್ನು ಎದೆಗಿಳಿಸಿಕೊಳ್ಳಬೇಕು . ಅದುವೆ ನಾವು ಅವರಿಗೆ ಸಲ್ಲಿಸಬಹುದಾದ ನಿಜ ಗೌರವ.

‍ಲೇಖಕರು avadhi

3 January, 2020

1 Comment

  1. T S SHRAVANA KUMARI

    ಉತ್ತಮ ಪರಿಚಯಾತ್ಮಕ ಲೇಖನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading