ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಡೆದು ಕಾಣುವ ಸಕಾಲಿಕ ಜಿಜ್ಞಾಸೆ 

ಡಾ ಸಣ್ಣವೀರ ದೊಡ್ಡಮನಿ ಅವರ ಕೃತಿ ‘ಅರಿವು ಆಚಾರ ಅನುಭಾವ’

ಗಂಗಬಸವ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ.

-ಜಿ ಎನ್ ಉಪಾಧ್ಯ

‘ಅರಿವು ಆಚಾರ ಅನುಭಾವ’ ಇದು ಡಾ. ಸಣ್ಣವೀರ ದೊಡ್ಡಮನಿ ಅವರ ಇತ್ತೀಚಿನ ಕೃತಿ. ಇದರಲ್ಲಿ ಮೂರು ಒಳ ತೆನೆಗಳಿದ್ದು ಹದಿನೆಂಟು ಭಿನ್ನ ವಿಭಿನ್ನ ನೆಲೆಯ ಚಿಂತನೀಯ ಲೇಖನಗಳಿವೆ. ವಿಚಾರ ಸಾಹಿತ್ಯ ಎಂದರೇನು,ವಿಚಾರ ಸಾಹಿತ್ಯದ ಸ್ವರೂಪ,ಪರಂಪರೆ, ಅದು ವಚನ ಸಾಹಿತ್ಯದಲ್ಲಿ ಪಡಿಮೂಡಿದ ಬಗೆ,ಅನುಭಾವ ಸಾಹಿತ್ಯದ  ಆಳ ಅಗಲ ವೈಭವ,ಅದರ ಪ್ರಸ್ತುತತೆ,ಅದನ್ನು ಮೈಗೂಡಿಸಿಕೊಂಡು ನಾಡಿಗೆ ಮಾದರಿಯಾದ ಗುರು ಪರಂಪರೆಯ ಸ್ಮರಣೆ ಸಹ ಇಲ್ಲಿದೆ.ಒಟ್ಟಾಗಿ ಈ ಕೃತಿಯಲ್ಲಿ ಎದ್ದು ಕಾಣುವುದು ಹಾಳತ ವೈಚಾರಿಕ ವಿಶ್ಲೇಷಣೆ.

ಮಾನವನ ಪ್ರಗತಿಗೆ ಮಾರಕವಾಗಿರುವ ತೊಡಕುಗಳಿಂದ ಹೊರಬರಲು ಮನುಷ್ಯಪರ ಚಿಂತನೆ ಕಾರಣವಾಯಿತು. ಪ್ರಶ್ನಿಸುವ ಮನೋಧರ್ಮ ಬೆಳೆದಂತೆ ಹೊಸ ಹೊಸ ವಿಚಾರಗಳು ಆವಿರ್ಭವಿಸಿದವು. ಹೀಗೆ ಪರಂಪರಾಗತ ಭಾವನೆಗಳನ್ನು ಬದಿಗೊತ್ತಿ ಎಲ್ಲವನ್ನು ವಿಚಾರಿಸಿ ತಿಳಿದುಕೊಳ್ಳವ ಕ್ರಮವೇ ವೈಚಾರಿಕತೆ. ವಿಚಾರವಂತಿಕೆಯೇ ಮಾನವನನ್ನು ಇತರ ಪ್ರಾಣಿವರ್ಗದಿಂದ ಬೇರ್ಪಡಿಸಿದೆ. ಬದುಕಿನಲ್ಲಿ ನಮ್ಮನ್ನು ನಾವು ಕಳೆದುಕೊಳ್ಳದೆ ಹೇಗೆ ಕಾಯ್ದುಕೊಂಡು ಬದುಕಬೇಕೆಂಬುದನ್ನು ತಿಳಿ ಹೇಳುವ ಗುಣವೇ ವಿಚಾರಶಕ್ತಿ. ಮನುಷ್ಯ ಮನುಷ್ಯನಾಗಿ ಉಳಿಯುದು, ಅವನು ತನ್ನ ಕಿಟಕಿಯ ಮೂಲಕವೇ ಜಗತ್ತನ್ನು ನೋಡಲು ಸಾಧ್ಯವಾಗುವುದು ಈ ವಿವೇಕ, ವಿವೇಚನಶಕ್ತಿಯಿಂದ. ಮನುಷ್ಯನ ಎಲ್ಲ ಬಗೆಯ ಪ್ರಗತಿಗೆ ಸುಖ ಸಾಧನಗಳಿಗೆ ವಿಚಾರವೇ ಆಧಾರ ಸ್ತಂಭವಾಗಿದೆ. ವಿಚಾರ ಇಲ್ಲದೇ ಇರುವಲ್ಲಿ ಅಜ್ಞಾನ ಮನೆಮಾಡಿಕೊಂಡಿರುತ್ತದೆ. ಲೋಕದಲ್ಲಿ ಸಂಭವಿಸುವ ಎಲ್ಲ ಘನ ಕಾರ್ಯಗಳು, ಘಟನೆಗಳು ವಿಚಾರವಾದದ ಫಲವೇ ಆಗಿವೆ. ಮನುಷ್ಯ ಬರೇ ಜೀವಿಸಿದ್ದರೆ ಸಾಲದು; ಅವನು ಚೆನ್ನಾಗಿ ಬದುಕಬೇಕು ಎಂಬ ಆಶಯ ವಿಚಾರ ಸಾಹಿತ್ಯದ್ದಾಗಿದೆ.ವಿಚಾರ ಕ್ರಿಯೆ ಮೊಳಗಿದರೆ ವ್ಯಕ್ತಿಯ ಜ್ಞಾನಾರ್ಜನೆ ಹೆಚ್ಚಾಗಿ ಸ್ವತಂತ್ರ ಬದುಕಿಗೆ ಮಾದರಿಯಾಗುವುದು. ಇದು ಸೌಹಾರ್ದ ಬದುಕು ನೆಲೆ ಗೊಳ್ಳಲು ಪೂರಕ ಎಂಬ ಮನೀಷೆ ಇಲ್ಲಿನ ಅರಿವು ವೈಚಾರಿಕತೆ ಭಾಗದಲ್ಲಿ ವ್ಯಕ್ತವಾಗಿದೆ.

ಕನ್ನಡದಲ್ಲಿ ವಿಚಾರ ಸಾಹಿತ್ಯ ಸಾಗಿ ಬಂದ ಹಾದಿಯ ಸೂಕ್ಷ್ಮ ಅವಲೋಕನವೂ ಇಲ್ಲಿದೆ.ಯಾವುದೇ ಒಂದು ಸಂಸ್ಕೃತಿ ನಿರ್ಮಾಣವಾಗಲು ಮುಖ್ಯವಾಗಿ ಎರಡು ಅಂಶಗಳು ಅವಶ್ಯಕ; ಒಂದು ಭಾಷೆ ಮತ್ತೊಂದು ವಿಚಾರಶಕ್ತಿ. ಸ್ವತಂತ್ರವಾಗಿ ವಿಚಾರ ಮಾಡುವುದು ಮನುಷ್ಯನ ಮುಖ್ಯ ಲಕ್ಷಣ. ಸುತ್ತಲಿನ ಬದುಕನ್ನು ವಿಶ್ವವನ್ನು ವಿಚಾರಗಳ ಮೂಲಕ ಅರಿಯುವ ಸಾಮರ್ಥ್ಯ ಮನುಷ್ಯನ ಬುದ್ದಿಗಿದೆ ಎಂಬುದನ್ನು ಮಾನವ ಶಾಸ್ತ್ರಜ್ಞರು, ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಪ್ರಶ್ನೆ ಕೇಳಿ ಉತ್ತರ ಪಡೆಯುವ ಆ ಮೂಲಕ ವಿಚಾರಗಳನ್ನು ಸೃಷ್ಟಿಸುವ ಪರಂಪರೆಗೆ ಬಹು ಸುದೀರ್ಘವಾದ ಹಿನ್ನೆಲೆ ಇದೆ. ಹೀಗಿದ್ದೂ ಜಗತ್ತಿನ ಎಲ್ಲ ಕಡೆ ವೈಚಾರಿಕತೆ, ವಿಚಾರವಾದ ಬೆಳೆದದ್ದು ಆಧುನಿಕ ಸಂದರ್ಭದಲ್ಲೇ ಎಂಬ ಮಾತು ನಿಜವೇ ಆಗಿದೆ. ವಿಚಾರವಾದ ವಿಜ್ಞಾನಯುಗದ ಕೊಡುಗೆ ಎಂದರೂ ತಪ್ಪಿಲ್ಲ.ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವೈಚಾರಿಕತೆ ಢಾಳಾಗಿ ಕಾಣಿಸಿಕೊಂಡರೂ ಪ್ರತ್ಯೇಕ ‘ವಿಚಾರ ಸಾಹಿತ್ಯ’ ರೂಪುಗೊಂಡುದು ಇಪ್ಪತ್ತನೆಯ ಶತಮಾನದ ಐವತ್ತು,ಅರವತ್ತು ಎಪ್ಪತ್ತರ ದಶಕದ ಬೆಳವಣಿಗೆಯೇ ಆಗಿದೆ. ಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನ, ಶಿವರಾಮ ಕಾರಂತರ ಬಾಳ್ವೆಯೇ ಬೆಳಕು, ವಿಚಾರ ಸಾಹಿತ್ಯ ನಿರ್ಮಾಣ, ಗೌರೀಶ ಕಾಯ್ಕಿಣಿಯವರ ವಿಚಾರ ಸಾಹಿತ್ಯ, ವಿಚಾರವಾದ, ಸ್ವಾತಂತ್ರ್ಯೋತರ  ವಿಚಾರ ಸಾಹಿತ್ಯ ಮೊದಲಾದ ಕೃತಿಗಳು ಈ ಕ್ಷೇತ್ರದ ಮೈಲಿ ಗಲ್ಲುಗಳಾಗಿವೆ. ಪಂಡಿತ ತಾರಾನಾಥ, ಎಚ್. ನರಸಿಂಹಯ್ಯ, ಶಿವರಾಮ ಕಾರಂತ,ಶಂಬಾ ಜೋಶಿ, ಅವರಿಂದ ತೊಡಗಿ ದೇವನೂರು ವರೆಗೆ ಅನೇಕ ಚಿಂತಕರು ಕನ್ನಡ ವಿಚಾರ ಸಾಹಿತ್ಯ ನಿರ್ಮಾಣಕ್ಕೆ ಶ್ರಮಿಸಿರುವುದರ ವಿಚಾರ ವಿಮರ್ಶೆ ಇಲ್ಲಿದೆ. ಇದಕ್ಕೆ ಪ್ರೇರಣೆಯಾದ ಬುದ್ಧ, ಬಸವ,ಡಾ.ಅಂಬೇಡ್ಕರ್ ಅವರ ಚಿಂತನೆಗಳನ್ನು ಸಹ ಮುನ್ನೆಲೆಗೆ ತಂದು ಚರ್ಚಿಸಿರುವುದು ಅವಲೋಕನೀಯವಾಗಿದೆ.

ಕೊಕ್ಕರಗುಂದಿಯ ತೊಗಲು ಗೊಂಬೆ ಕಲಾ ಕುಟುಂಬದ ಹಿನ್ನೆಲೆಯಿಂದ ಬಂದ ಲೇಖಕರು ಅಲೆಮಾರಿ ಶಿಳ್ಳೇಕ್ಯಾತರ ಕುರಿತು ವಿಶೇಷ ಅಧ್ಯಯನ ಮಾಡಿದವರು. ದಿಕ್ಕಿಲ್ಲದ ಗತಿಯಿಲ್ಲದ ಅಲೆಮಾರಿ ಸಮುದಾಯಗಳ ಪರವಾಗಿ ಬರೆದ ಲೇಖನ ಇಲ್ಲಿ ವಿಶೇಷವಾದ ಮಹತ್ವವನ್ನು ಪಡೆದುಕೊಂಡಿದೆ.ದಲಿತ ಚಳುವಳಿ ಈ ಅಲೆಮಾರಿ ಸಮುದಾಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಹೋದರೆ ಈ ಸಮುದಾಯಗಳಿಗೆ ಅನುಕೂಲವಾಗುತ್ತದೆ ಎಂಬ ಆಶಯ ಇಲ್ಲಿ ವ್ಯಕ್ತವಾಗಿದೆ.”ದಲಿತ ಅಲೆಮಾರಿಗಳು ಆರ್ಥಿಕ ಭದ್ರತೆ ಇಲ್ಲದೆ ನೋವು, ಹತಾಶೆ, ಅಕ್ಷರ ಜ್ಞಾನದ ಕೊರತೆಯಿಂದ ಬಳಲುತ್ತಿವೆ. ಎಷ್ಟೆಷ್ಟೋ ಸಮುದಾಯಗಳಿಗೆ ಒಂದು ಊರು ಸೂರು ಗತಿಯಿಲ್ಲದೆ, ನಗರಗಳ ಕೊಳಗೇರಿಯ ಕೊಳೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಗ್ರಾಮಗಳ ಪಾಳುಜಾಗೆಗಳ ಲ್ಲೊ ಬದುಕು ಪಡುತ್ತಿರುವ ಪಾಡು ಹೇಳತೀರದು. ನಗರದಲ್ಲಿ ಬದುಕಿದರೂ ನಾಗರಿಕರಾಗದೆ, ಗ್ರಾಮದಲ್ಲಿದ್ದೂ ಗ್ರಾಮಸ್ಥರಾಗದೆ, ರಾಜಕೀಯ ಮತ್ತು ಅಭಿವೃದ್ಧಿಯ ಮೋಸಕ್ಕೆ ಬಲಿಯಾಗಿ ವಿಲವಿಲ ಒದ್ದಾಡುತ್ತಿರುವ ಧಾರುಣ ಚಿತ್ರಣವನ್ನು ಅರ್ಥಮಾಡಿಕೊಳ್ಳಬೇಕಿದೆ. ನಮ್ಮ ದಲಿತ ಸಾಹಿತ್ಯ ಚಳುವಳಿ ಇದನ್ನು ಒಳಗೊಂಡಿದ್ದಾದರೆ, ಅದು ತನ್ನ ಮೆರಗನ್ನು ಹೆಚ್ಚಿಸಿಕೊಂಡಂತಾಗುತ್ತದೆ”ಇದು ಅವರ ಆಗ್ರಹ ಹಾಗೂ ಕಂಡುಕೊಂಡ ವಾಸ್ತವ ಸತ್ಯ.

ಕರ್ನಾಟಕ ಸಂಸ್ಕೃತಿಯನ್ನು ರೂಪಿಸುವಲ್ಲಿ ಶಿವಶರಣರ ಯೋಗದಾನ ಘನಿಷ್ಠವಾದುದು.ಎರಡನೆಯ ಭಾಗದಲ್ಲಿ ವಚನ – ವೈಚಾರಿಕತೆ ವರ್ತಮಾನದ ವಿವೇಕಕ್ಕೆ ದಾರಿ ತೋರಿದ ಬಗೆಯನ್ನು ಎತ್ತಿ ಹಿಡಿಯಲಾಗಿದೆ.ಸಾಮಾಜಿಕ ಮೌಲ್ಯಗಳನ್ನು ವಚನಕಾರರು ಧಾರ್ಮಿಕ ಮೌಲ್ಯವಾಗಿ ಪರಿವರ್ತನೆ ಮಾಡಿ ಸಹಬಾಳ್ವೆಗೆ ಹೊಸ ಆಯಾಮ ನೀಡಿದ ವಿವೇಚನೆಯೂ ನಮ್ಮ ಗಮನ ಸೆಳೆಯುತ್ತದೆ.

ಬಸವಣ್ಣ ಸಾರಿದ ಭ್ರಷ್ಟಾಚಾರ ವಿರೋಧಿ ನಿಲುವು ಲೇಖನ ಸಾಂಪ್ರತ ಮನುಷ್ಯನ ಸ್ವಾರ್ಥ, ಸಣ್ಣತನ,ಸಂಗ್ರಹ ಪ್ರವೃತ್ತಿಯ ಕುರಿತು ಗಂಭೀರವಾದ ಚಿಂತನೆಯಿಂದ ಕೂಡಿದೆ. ರಾಶಿ ರಾಶಿಯಾಗಿ ಸಂಗ್ರಹಿಸುವ ವಿಕಾರ ಮನಸ್ಸು ಮಾನವನಿಗೆ ಏಕೆ ಹೇಗೆ ಹೊಕ್ಕಿತೋ ಗೊತ್ತಿಲ್ಲ.ವರ್ತಮಾನ ಹೇಗಿದೆ ಎಂದರೆ ದಾಲಾಲರ ಕಾಲವಾಗಿದೆ. ದೀರ್ಘ ಆಯುಷ್ಯವಿಟ್ಟುಕೊಂಡೇ ಹುಟ್ಟಿದ್ದಾರೆ ಎನ್ನುವ ಹಾಗೆ ಮಾನವರು ಗಳಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡದ್ದಕ್ಕೆ ಅವರು ಖೇದವ್ಯಕ್ತಪಡಿಸಿದ್ದಾರೆ.ಕಾಯಕಜೀವಿಗಳಾದ ಶಿವಶರಣರು ವೃತ್ತಿ ಗೌರವ, ಶ್ರಮ ಸಂಸ್ಕೃತಿಯ ಕುರಿತು ಆಡಿರುವ ಮಾತುಗಳು ಕಾಲದ ಹಂಗು ಮೀರಿ ಇಂದಿಗೂ ಪ್ರಸ್ತುತವಾದುದರ ವಿವೇಚನೆಯೂ ಇಲ್ಲಿದೆ.ವಚನಕಾರರ ಪ್ರಗತಿಪರ ವಿಚಾರಗಳು ಹೇಗೆ ಲೋಕೋತ್ತರವೆನಿಸಿವೆ ಎಂಬುದನ್ನು ಸಹ ಇಲ್ಲಿ ವಿವಿಧ ಶರಣರ ವಿಚಾರಧಾರೆಯ ಹಿನ್ನೆಲೆಯಲ್ಲಿ ವಿಶ್ಲೇಷಣೆಗೆ  ಗುರಿ ಪಡಿಸಲಾಗಿದೆ.

ಭಾಗ ಮೂರರಲ್ಲಿ ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಗಳ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ ಅನುಭಾವದ ತೊರೆಯಲ್ಲಿ ಮಿಂದೆದ್ದು ಸೈ ಎನಿಸಿಕೊಂಡ ಡಾ.ಎಂ.ಎಂ. ಕಲಬುರ್ಗಿ, ಡಾ. ವೀರಣ್ಣ ರಾಜೂರ, ಡಾ.ಬಿ. ವಿ. ಶಿರೂರ, ಡಾ.ಗುರುಲಿಂಗ ಕಾಪಸೆ ಅವರ ಸಾಂಸ್ಕೃತಿಕ ಪರಿಚಾರಿಕೆಯನ್ನು ಆಪ್ತ ನೆಲೆಯಲ್ಲಿ ಕಂಡರಿಸಲಾಗಿದೆ. ಕರ್ನಾಟಕ ಸಂಸ್ಕೃತಿ, ಪರಂಪರೆಗಳ ಅನುಸಂಧಾನ, ಹೊಸ ತಲೆಮಾರಿಗೆ ಕನ್ನಡ ಅನುಭಾವ ಪರಂಪರೆಯನ್ನು ಪರಿಚಯಿಸುವ ತುಡಿತ,ವರ್ತಮಾನದ ತವಕ ತಲ್ಲಣಗಳು, ಸೃಜನಶೀಲತೆಯನ್ನು ಹತ್ತಿಕ್ಕುವ ಪ್ರಭುತ್ವ, ಕೃಷಿ ಸಂಸ್ಕೃತಿ, ಅಲ್ಲಿನ ಸಮಕಾಲೀನ ಸಂಗತಿಗಳನ್ನು  ನಾಡಿನ ನಿನ್ನ ಮೊನ್ನೆಯ ನೆನಪುಗಳ ಹಿನ್ನೆಲೆಯಲ್ಲಿ ಜಿಜ್ಞಾಸೆಗೊಳಪಡಿಸಿರುವುದು ಈ ಕೃತಿಯ ಅತಿಶಯತೆ.

‍ಲೇಖಕರು Admin

1 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading