
ರಾಜಾರಾಂ ತಲ್ಲೂರು
ಕರಾವಳಿಯಲ್ಲಿ ಒಂದು ಸಂಪ್ರದಾಯ ಇದೆ. ದಿನದ ಅಡುಗೆಗೆ ಅನ್ನ ಸಿದ್ಧಪಡಿಸುವ ಮೊದಲು, ಅಕ್ಕಿಯನ್ನು ಸಂಗ್ರಹಿಸಿಟ್ಟ ಚೀಲ/ಡಬ್ಬಿಯಿಂದ ‘ಪಾವು’ ಅಥವಾ ‘ಸೇರು’ (ಇವು ಅಳತೆಯ ಮಾಪಕಗಳು) ಬಳಸಿ ಅಳೆದು ಆ ದಿನಕ್ಕೆ ಅಗತ್ಯ ಇರುವಷ್ಟು ಅಕ್ಕಿಯನ್ನು ತೆಗೆದುಕೊಳ್ಳುತ್ತಾರೆ. ಹೀಗೆ ತೆಗೆದುಕೊಂಡ ಅಕ್ಕಿಯನ್ನು ನೀರು ಹಾಕಿ ತೊಳೆಯಲು ಹೊರಡುವ ಮೊದಲು, ದಿನದ ಬಳಕೆಗೆ ತೆಗೆದ ಅಕ್ಕಿಯ ಪಾತ್ರೆಯಿಂದ ಒಂದೋ ಎರಡೋ ಮುಷ್ಟಿ ಅಕ್ಕಿಯನ್ನು ಎತ್ತಿ ಅಡುಗೆ ಕೋಣೆಯ ಉಗ್ರಾಣದಲ್ಲಿರುವ “ಕೇಲು ಮಡಿಕೆ” ಎಂಬ ಮಡಿಕೆಗೆ ಹಾಕಿ ಹೋಗುತ್ತಾರೆ.
ಹೀಗೆ ಪ್ರತಿದಿನ ಸಂಗ್ರಹವಾಗುವ ಮುಷ್ಟಿ ಅಕ್ಕಿ, ಒಂದು ವರ್ಷ ಪೂರ್ಣವಾಗುವ ಹೊತ್ತಿಗೆ ಗಮನಾರ್ಹ ಪ್ರಮಾಣದ್ದಾಗಿರುತ್ತದೆ. ಅದನ್ನು ಕೃಷಿ ವರ್ಷದ ಕೊನೆಯ ಹೊತ್ತಿಗೆ ಮನೆಯಲ್ಲಿ ಅಕ್ಕಿ ಖಾಲಿ ಆಗುತ್ತಾ ಬಂದಾಗ ಬಳಸಲಾಗುತ್ತದೆ. ಮುಂದೆ ಕಾವೇರಿ ಸಂಕ್ರಮಣ (ಅಕ್ಟೋಬರ್) ಅಥವಾ ಹೊಸ ಬೆಳೆ ಮನೆಗೆ ಬರುವ ಸಂಭ್ರಮದ ಹೊಸ ಅಕ್ಕಿ ಊಟದ (ಹೊಸ್ತು) ದಿನ ಆ ಕೇಲು ಮಡಿಕೆಯನ್ನು ಪೂಜೆ ಮಾಡಿ, ಅಲ್ಲಿಂದ ಮುಂದೆ, ಅದರೊಳಗೆ ಹೊಸದಾಗಿ ಅಕ್ಕಿ ತುಂಬಿಸಲಾರಂಭಿಸಲಾಗುತ್ತದೆ.
ಇದು ಈ ದೇಶದ ಕೃಷಿ ಸಂಸ್ಕ್ರತಿ
ಇಲ್ಲಿ ತೆಗೆದು ಬದಿಗಿಡಲಾದ ಒಂದು ಮುಷ್ಟಿ ಅಕ್ಕಿ, ಆ ಮನೆಯ ಆ ದಿನದ ಆಹಾರದ ಆವಶ್ಯಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ವರ್ಷದ ಅಂತ್ಯಕ್ಕೆ ಹನಿ ಹನಿಕೂಡಿ ಹಳ್ಳ ಆಗಿರುತ್ತದೆ. ಕರಾವಳಿಯ ಬ್ಯಾಂಕಿಂಗ್, ಪಿಗ್ಮಿ, ಸ್ವಸಹಾಯ ಸಂಘಗಳ ಯಶಸ್ಸಿನಲ್ಲಿ ಇರುವುದು ಇಂತಹದೊಂದು ಉಳಿತಾಯದ ಮನೋಭಾವ. ಕರಾವಳಿಯ ಹೆಚ್ಚಿನ ಸಾಂಪ್ರದಾಯಿಕ ಕುಟುಂಬಗಳಲ್ಲಿ ಮನೆ ನಡೆಸುವ ನೊಗ ಹೊತ್ತಿರುವ ಮಹಿಳೆ ಇಂತಹದೊಂದು ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸುತ್ತಾಳೆ. ಕರಾವಳಿಯಲ್ಲಿ ಮಹಿಳೆ ಪ್ರಧಾನವಾಗಿರುವ ಅಳಿಯಕಟ್ಟಿನ ಕುಟುಂಬಗಳೂ ದೊಡ್ಡ ಪ್ರಮಾಣದಲ್ಲಿವೆ ಎಂಬುದನ್ನು ಗಮನಿಸಿ.
ಮನೆಯೊಡತಿಯ ಈ ಉಳಿತಾಯದ ಎಚ್ಚರ ಬರಿಯ ಅಕ್ಕಿಗೆ ಸೀಮಿತ ಅಲ್ಲ. ಹಾಲು-ತರಕಾರಿ-ಕಾಯಿ-ಮೀನು ಮಾರಿ ಬಂದ ಹಣ, ಮನೆ ಖರ್ಚಿಗೆಂದು ಕೈಗೆ ಬಂದ ಹಣ, ಪತಿಯ ಕಿಸೆಗೆ ಕೈಹಾಕಿ ತೆಗೆದ ಹಣ (ಹೆಚ್ಚಿನ ಮನೆಗಳಲ್ಲಿ ಗಂಡಸು ಗೊತ್ತಿದ್ದೂ ಅದಕ್ಕೆ ಅವಕಾಶ ಮಾಡಿಕೊಟ್ಟಿರುತ್ತಾನೆ)… ಹೀಗೆ ಸಿಕ್ಕಿದ ದುಡ್ಡನ್ನು ಕಪಾಟಿನ ಬಟ್ಟೆಗಳ ಮಡಿಕೆಯ ಅಡಿಯಲ್ಲಿ, ಸಾಸಿವೆ ಡಬ್ಬಿಯಲ್ಲಿ, ಯಾರಿಗೂ ಸಿಗದಂತೆ ಎಲ್ಲೋ ಮೂಲೆಯಲ್ಲಿ ಪೊಟ್ಟಣಕಟ್ಟಿ ಇರಿಸುವ ಹೆಂಗಸರು, ಮನೆಯಲ್ಲಿ ಆಪತ್ತು ಎದುರಾದಾಗ ಅವನ್ನು ಬಳಸುತ್ತಾರೆ. ತುರ್ತಾಗಿ ಆರೋಗ್ಯದ ಸಮಸ್ಯೆ, ಉಣ್ಣುವ ಅನ್ನಕ್ಕೆ ಸಮಸ್ಯೆಯಂತಹ ಮೂಲಭೂತ ಆವಶ್ಯಕತೆಗಳು ಬರದೆ ಈ ‘ವಿಪದ್ಧನ’ವನ್ನು ಅವರು ಯಾವುದೇ ಕಾರಣಕ್ಕೂ ಮುಟ್ಟಲು ಹೋಗುವುದಿಲ್ಲ. ಕೆಳ-ಮಧ್ಯಮ ವರ್ಗದ ಮನೆಗಳಲ್ಲಿ ಇಂತಹ ಸಂಗ್ರಹದ ಪ್ರಮಾಣ ಕೆಲವು ಸಾವಿರ ರೂಪಾಯಿಗಳಿಂದ ಐದಾರು ಲಕ್ಷ ರೂಪಾಯಿಗಳ ತನಕವೂ ಇರುತ್ತದೆ.
ಮೊನ್ನೆ ನರೇಂದ್ರ ಮೋದಿಯವರು ನವೆಂಬರ್ ಎಂಟರಂದು ‘ನೋಟು ರದ್ಧತಿ’ ಪ್ರಕಟಿಸಿದಾಗ ಅದು ಅತ್ಯಂತ ಹೆಚ್ಚು ದುಷ್ಪರಿಣಾಮ ಬೀರಿದ್ದು ಈ ಸಂಗ್ರಹದ ಮೇಲೆ. ಕಾನೂನು ಪುಸ್ತಕ ಇದನ್ನು ಲೆಕ್ಕ ಕೊಡದ ‘ಕಪ್ಪು ಹಣ’ ಎಂದೇ ಗ್ರಹಿಸುತ್ತದೆ.
ಕಪ್ಪುಹಣ ಎಂದರೇನು?
ನಮ್ಮಲ್ಲಿ ಕಪ್ಪು ಹಣ ಎಂದರೆ, ಸಿನಿಮಾದಲ್ಲಿ ವಿಲನ್ ಬಟನ್ ಒತ್ತಿದರೆ ಸರಿಯುವ ಗೋಡೆಯಾಚಿನ ತಿಜೋರಿಯಲ್ಲಿ ಅಟ್ಟಿಗಟ್ಟಲೆ ಇರಿಸಿ, ತನ್ನ ಗೂಂಡಾ ಪಡೆಯೊಂದಿಗೆ ಕಾಯುತ್ತಾ ಕುಳಿತಿರುವ ದೊಡ್ಡ ಭಂಡಾರ ಎಂಬ ತಪ್ಪು ಕಲ್ಪನೆ ಇದೆ. ಅಂತಹ ಕಪ್ಪು ಹಣದ ಧನಿಕರು ಇಲ್ಲವೇ ಇಲ್ಲ ಎಂದಿಲ್ಲ. ಅವರು ಊರಿಗೆ ಇಬ್ಬರು-ಮೂವರು ಇರುತ್ತಾರೆ, ಇಡಿಯ ಊರಿಗೆ ಅವರು ಯಾರೆಂದು ಗೊತ್ತಿರುತ್ತದೆ. ಇನ್ನು ಭ್ರಷ್ಟ ಅಧಿಕಾರಿಗಳೂ ಯಾರ್ಯಾರು ಎಂಬುದು ಬಹುತೇಕ ಹೆಚ್ಚಿನವರಿಗೆ ತಿಳಿದಿರುತ್ತದೆ. ಆ ಬಳಿಕ ಉಳಿಯುವವರು ಟ್ರೇಡರ್ ಗಳು, ಉದ್ಯಮಿಗಳು, ರಿಯಲ್ ಎಸ್ಟೇಟ್ ದಂಧೆಯವರು ಹಾಗೂ ಸ್ವತಃ ರಾಜಕಾರಣಿಗಳು. ಇವರೆಲ್ಲ ಪ್ರತೀ ಊರಿನಲ್ಲೂ ಯಾರ್ಯಾರೆಂದು ಎಲ್ಲರಿಗೂ ಗೊತ್ತಿರುತ್ತದೆ.
ಈ ಎಲ್ಲ ಕೆಟಗರಿಯವರಲ್ಲೂ ಕಪ್ಪು ಹಣ ಎಂದರೆ ಏನು?
ಸರ್ಕಾರ ವಿಧಿಸಿರುವ ಮಿತಿಗಿಂತ ಹೆಚ್ಚು ಪ್ರಮಾಣದಲ್ಲಿರುವ ಆದಾಯದಲ್ಲಿ ಸರ್ಕಾರದ ಪಾಲನ್ನು ಕೊಡದೇ ಉಳಿಸಿಕೊಂಡಿರುವುದನ್ನು ಸರ್ಕಾರ “ಕಪ್ಪು ಹಣ” ಎಂದು ಗುರುತಿಸುತ್ತದೆ.
ಈ ಕಾನೂನು ‘ಅಂಧಾ ಕಾನೂನ್’ ಆದದ್ದರಿಂದ, ಮನೆಯಲ್ಲಿ ಮನೆಯೊಡತಿ ಸಂಗ್ರಹಿಸಿಟ್ಟ ‘ಆಪದ್ಧನ’ ಕೂಡ ‘ಕಾಲಾಧನ್’ ಆಗಿಬಿಟ್ಟಿದೆ.
ಕಾಮನ್ ಸೆನ್ಸ್ ಉಪಯೋಗಿಸಿ ಕಾರ್ಯಾಚರಿಸಿದ್ದರೆ, ಬಹಳ ಸುಲಭವಾಗಿ ಸರ್ಕಾರ ತನಗೆ ಬರಬೇಕಿದ್ದ ತೆರಿಗೆಯನ್ನು ಯಾರಿಂದ ವಸೂಲಿ ಮಾಡಬೇಕಿತ್ತೋ, ಅವರಿಗೇ ಖೆಡ್ಡಾ ತೆರೆದು ವಸೂಲಿ ಮಾಡಿಕೊಳ್ಳಬಹುದಿತ್ತು. ಆದರೆ ಸರಕಾರದ ಉದ್ದೇಶ ಬೇರೆಯೇ ಇತ್ತು. ಅವರ ಗುರಿ “ತೆರಿಗೆ ಬಲೆಯನ್ನು ಹಿಗ್ಗಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಜನ ತೆರಿಗೆ ತೆರುವಂತೆ ಮಾಡುವುದು” ಈ ಅಂತಾರಾಷ್ಟ್ರೀಯ ಒತ್ತಡಕ್ಕೆ ಸಿಲುಕಿದ್ದರಿಂದಾಗಿ ಸರ್ಕಾರ ತಪ್ಪು ಮಾಡಿದವರನ್ನು ಆಯ್ದು ಶಿಕ್ಷೆ ಕೊಡುವ ಬದಲು ಇಡಿಯ ದೇಶಕ್ಕೇ ಶಿಕ್ಷೆ ಕೊಡಲು ಹೊರಟಿತು.
ಕೇಲು ಮಡಿಕೆಯ ಒಳಗೆ, ಸಾಸಿವೆ ಡಬ್ಬಿಯಲ್ಲಿ ಕೂಡಿಟ್ಟ “ಆಪದ್ಧನ”ದ ದುಡ್ಡೂ “ಕಪ್ಪುಹಣ” ಎಂಬ ದುಬಾರಿ ಪಾಠ ಈ ದೇಶದ ಗ್ರಾಮೀಣ ಮಹಿಳೆಯರಿಗೆ ಸಿಕ್ಕಿತು. ಮಹಿಳೆಯ ಆತ್ಮಗೌರವವನ್ನು ಪೌರುಷದ ತೀರ್ಮಾನವೊಂದು ಕಸಿದುಕೊಂಡ ಘಟನೆಯಿದು ಎಂದೇ ಈ ದೇಶದ ಇತಿಹಾಸ ಈ ಘಟನೆಯನ್ನು ದಾಖಲಿಸಿಕೊಳ್ಳಬೇಕಾಗುತ್ತದೆ.





ಪ್ರಿಯ ಶ್ರೀರಂಗ ಎಂ ಎ, ತಮ್ಮ ಸುದೀರ್ಘ ಪ್ರತಿಕ್ರಿಯೆ ಮತ್ತು ಕಳಕಳಿಗಾಗಿ ಧನ್ಯವಾದಗಳು. ತಾವು ದಯಮಾಡಿ ಒಮ್ಮೆ ನಿಮ್ಮೂರಿನ ಚಿನ್ನದಂಗಡಿಯಲ್ಲಿ ನಗದು ವ್ಯವಹಾರ ಎಷ್ಟು ಮತ್ತು ಕಾರ್ಡ್-ಚೆಕ್ ವ್ಯವಹಾರ ಎಷ್ಟು ಎಂಬುದನ್ನು ಸಾಧ್ಯವಾದರೆ ಕೇಳಿನೋಡಿ. ಹಾಗೇ ಅಲ್ಲಿ ಚಿನ್ನ ಖರೀದಿಸಲು ಬರುವವರು ಯಾರೆಂಬುದನ್ನೂ. ನಾನು ಗಮನಿಸಿದಂತೆ, ಮನೆಯಲ್ಲಿ ಕೂಡಿಟ್ಟ ‘ಆಪದ್ಧನ’ ಒಂದು ಹಂತ ತಲುಪಿದ ಬಳಿಕ ಚಿನ್ನ ಆಗಿ ಪರಿವರ್ತನೆ ಆಗುತ್ತದೆ. ಮೊನ್ನೆ ನವೆಂಬರ್ 8 ರ ಹೊತ್ತಿಗೆ ಚಿನ್ನದ ದರ ಹೆಚ್ಚಿದ್ದದ್ದರಿಂದ, ಹೆಚ್ಚಿನವರು ಖರೀದಿಯ ಮನಸ್ಸು ಮಾಡಿರಲಿಲ್ಲ (ಈ ಬಗ್ಗೆ ಈ ಬಾರಿಯ ಅಕ್ಷಯ ತ್ರತೀಯಾ ದಿನದ ವ್ಯವಹಾರದ ಅಂಕಿಅಂಶಗಳನ್ನು ಗಮನಿಸಿ). ಹಾಗಾಗಿ ಹೆಚ್ಚಿನವರಲ್ಲಿ ದೊಡ್ಡ ಮೊತ್ತದ ನಗದು ಇತ್ತು. ಹಳ್ಳಿಗಳಲ್ಲಿ ಹೆಣ್ಣು ಹೆತ್ತ ತಾಯಂದಿರ ಬಳಿ ನಿಮ್ಮ ಮಗಳಿಗೆ ಮದುವೆಗೆ ಎಷ್ಟು ಚಿನ್ನ ಮಾಡಿಸಿದಿರಿ? ಹೇಗೆ ಮಾಡಿಸಿದಿರಿ ಎಂದು ಕೇಳಿನೋಡಿ. ನಿಮ್ಮ ಪ್ರಶ್ನೆಗಳಿಗೆ ನಿಮಗೇ ಉತ್ತರ ದೊರಕುತ್ತದೆ. Rajaram Tallur
ಶ್ರೀ ರಾಜಾರಾಂ ತಲ್ಲೂರ್ ಅವರಿಗೆ– ತಾವು ಹೇಳಿದ ಚಿನ್ನದ ವ್ಯವಹಾರ ಆ ರೀತಿ ಹಿಂದೆ ನಡೆಯುತ್ತಿದ್ದಿರಬಹುದು. ಇಲ್ಲವೆಂದು ನಾನು ಹಠ ಹಿಡಿದು ವಾದಿಸುವ ಜಾಯಮಾನದವನಲ್ಲ. ಈಗ ಒಬ್ಬರು (ಹೆಂಗಸರಾಗಲಿ ಅಥವಾ ಗಂಡಸರಾಗಲಿ) ಇನ್ನು ಮುಂದೆ ಎಷ್ಟು ಚಿನ್ನವನ್ನು ಕಾನೂನು ಬದ್ಧವಾಗಿ ಹೊಂದಿರಬಹುದು ಎಂಬ ಬಗ್ಗೆ ಸರ್ಕಾರದ ಆಜ್ಞೆ ಆಗಿದೆ. ಬೇನಾಮಿ/ಕಪ್ಪು ಹಣದಿಂದ ಕಟ್ಟಲ್ಪಟ್ಟ ಮನೆಗಳ ಖರೀದಿ ಬಗ್ಗೆ ಐ ಟಿ ಇಲಾಖೆಯ ಕಣ್ಣು ಈಗಾಗಲೇ ಬೀಳುವ ಹಂತದಲ್ಲಿದೆ. ಐವತ್ತು ಸಾವಿರ ರೂಗಳು ಮೀರಿದ ಚಿನ್ನವಾಗಲಿ ಅಥವಾ ಇನ್ನ್ಯಾವುದೇ ಖರೀದಿಗೆ pan card ಕಡ್ಡಾಯವಾಗುತ್ತದೆ. ಜತೆಗೆ ಚಿನ್ನಾಭರಣ ಖರೀದಿ ಮಾಡಿದಾಗ ಖಾತರಿಗೆಂದು ರಸೀತಿ ಪಡೆಯದೇ ಇರುವವರು ಎಷ್ಟು ಜನ ಇರಬಹುದು? ಇಷ್ಟಾಗಿಯೂ ಸರ್ಕಾರದ ಆಜ್ಞೆಗಳ ಕೆಳಗೆ ನುಸುಳುವ ಕಾನೂನು ಭಂಜಕ ಆಸಾಮಿಗಳು ನಮ್ಮಲ್ಲಿದ್ದಾರೆ. ಇಲ್ಲವೆಂದಲ್ಲ. ಇದಕ್ಕೆ ಸಾಕ್ಷಿಯಾಗಿ ಈಗ ಸಿಕ್ಕಿಬಿದ್ದಿರುವ ನಮ್ಮ ರಾಜ್ಯ ಸರ್ಕಾರದ ಆಯಕಟ್ಟಿನ ಜಾಗಗಳಲ್ಲಿದ್ದ ಅಧಿಕಾರಿಗಳು,ಅವರಿಗೆ ಸಹಾಯ ಮಾಡಿದ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕಿನ ಮ್ಯಾನೇಜರ್ ಗಳೇ ಸಾಕ್ಷಿ. ಮುಖ್ಯವಾದ ಮಾತೆಂದರೆ past is past. ಹಿಂದೆ ಹೀಗೆಲ್ಲಾ ಆಗಿತ್ತು; ಈಗಲೂ ಹಾಗೆ ಆಗುತ್ತದೆ ಎಂದು ನಿತ್ಯ/ವಾರ/ಮಾಸಿಕ/ವರ್ಷ ಭವಿಷ್ಯ ನುಡಿಯುವುದು ಸರಿಯೇ ಎಂಬುದಷ್ಟೇ ನನ್ನ ಅಭಿಪ್ರಾಯ.