ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಗೆಯೋ ಕಂತೇನಾ, ಗುಂಡಾ ಹೊಡಿಯೋ ಗಂಟೇನಾ..

ಕಾಣದ ಕಡಲಿಗೆ ಹಂಬಲಿಸಿದೆ ಮನ…

ಹೆಜ್ಜೆ 07

ಪ್ರಯಾಣದ ಹಿನ್ನಲೆ

avadhi-column-rahul bw-edited2

ಇಷ್ಟೆಲ್ಲಾ ವ್ಯಥೆಪಟ್ಟು ಕೈಗೊಂಡ ಈ ಪ್ರವಾಸದ ಅವಶ್ಯಕತೆಯಾದರೂ ಏನಿತ್ತು ಎಂಬ ಪ್ರಶ್ನೆ ಮೂಡದೆ ಇರದು. ಹಾಗಾಗಿ ನನ್ನ ಹಿನ್ನಲೆ ಮತ್ತು ಈ ಪ್ರವಾಸ ಕೈಗೊಳ್ಳಲು ಕಾರಣಗಳೇನು ಎಂಬುದನ್ನು ವಿವರಿಸಿಬಿಡುತ್ತೇನೆ.

ನನ್ನ ಹೆಸರು ರಾಹುಲ್, ಮೈಸೂರಿನ ಹುಡುಗ. ದಯಾಳು ಮತ್ತು ರಾಜೇಶ್ವರಿ ದಂಪತಿಯ ಮೊದಲನೇ ಕುಡಿ. ನಮ್ಮ ವಂಶವು ಒಬ್ಬರ ಹಿಂದೊಬ್ಬರಂತೆ ಇಂಜಿನಿಯರ್‍ಗಳನ್ನು, ಇತರೆ ಪದವೀಧರರನ್ನು ತಯಾರಿಸಿದ ಕಾರ್ಖಾನೆ. ಆ ಹಿಂಡಿನಲ್ಲಿ ನಾನೂ ಒಬ್ಬ. ನಾನು ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಪದವಿ ಪಡೆದು, ನಂತರ ಹಲವು ಸಂಸ್ಥೆಗಳಲ್ಲಿ ಒಂಬತ್ತು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಪಡೆದಿದ್ದಾಗಿತ್ತು.

avadhi- column- rahul- low res- editedಪಾಶ್ಚಾತ್ಯ ದೇಶಗಳ ವ್ಯಾಮೋಹಕ್ಕೆ ಸಿಲುಕಿದ್ದ ನನಗೆ, ಸ್ಕಾಟ್ಲ್ಯಾಂಡಿನಲ್ಲಿ ಆರು ತಿಂಗಳು ದೂಡುವಷ್ಟರಲ್ಲಿ  ಮಾತೃಭೂಮಿಯ ಸೆಳೆತ ನನ್ನನ್ನು ವಾಪಸ್ಸು ಭಾರತಕ್ಕೆ ಎಳೆದು ತಂದಿತು. ನನ್ನ ಜೊತೆ ಸಪ್ತಪದಿ ತುಳಿದು, ನನ್ನ ನಡಿಗೆಯ ಜೊತೆ ಅವಳ ಹೆಜ್ಜೆಗಳನ್ನು ಜೋಡಿಸಿಕೊಂಡ ನನ್ನ ಮನೆಯೊಡತಿ ಪೂಜಾ ಕೂಡ ಇಂಜಿನಿಯರ್ ಪದವೀಧರೆ. ಮೈಸೂರಿನಲ್ಲಿ ಇಬ್ಬರಿಗೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಸುವರ್ಣಾವಕಾಶ.

ನನಗಿಂತ ಮೂರು ವರ್ಷ ಚಿಕ್ಕವನಾದ ನನ್ನ ತಮ್ಮ ರೋಷನ್ ಕೆಲವು ಪದವಿಗಳನ್ನು ತನ್ನ ಹೆಸರಿನೊಂದಿಗೆ ಜೋಡಿಸಿಕೊಂಡರೂ ವ್ಯವಸಾಯದ ಕಡೆಗೆ ಒಲವು ತೋರಿ, ನಮ್ಮ ಹಳ್ಳಿ ನಂಜನಗೂಡು ತಾಲ್ಲೂಕಿನ ಹೊಸಕೋಟೆಯಲ್ಲಿದ್ದ ಐದು ಎಕರೆ ತೆಂಗಿನ ತೋಟದಲ್ಲಿ ಹಸು ಸಾಕಾಣಿಕೆ ಶುರುಮಾಡಿ ತನ್ನ ಜೀವನವನ್ನು ರೂಪಿಸುಕೊಳ್ಳುವ ತುಡಿತದಲ್ಲಿದ್ದಾನೆ. ತಕ್ಕ ಮಟ್ಟಿಗೆ ಯಶಸ್ಸನ್ನೂ ಕೂಡ ಕಂಡಿರುವ ಅವನ ಮೇಲೆ ನನ್ನ ಅಪ್ಪ ಸ್ಥಾಪಿಸಿದ ಅಕ್ಕಿ ಗಿರಣಿಯ ಜವಾಬ್ದಾರಿಯೂ ಹೊರಿಸಿದ್ದಾರೆ. ಒಟ್ಟಿನಲ್ಲಿ ನಮ್ಮ ಹೊಸಕೋಟೆಯ ಆಸ್ಥಾನಕ್ಕೆ ಅವನೇ ಪಾಳೇಗಾರ. ಮೈಸೂರಿನಲ್ಲಿ ಕಟ್ಟಿಸಿದ 20 ಚದುರದ ಸೂರಿನಡಿ ನಮ್ಮೆಲ್ಲರದ್ದೂ ಸಮೃದ್ಧ ಜೀವನ.

ಮುಟ್ಟಿದ್ದೆಲ್ಲಾ ಹೊನ್ನಾಗುತ್ತಿದ್ದ ಕಾಲದಲ್ಲೂ ನನ್ನೊಳಗೆ ಈ ಜೀವನದ ಬಗ್ಗೆ ಕೆಲವು ಪ್ರಶ್ನೆಗಳು ಮೂಡುವಂತೆ ಮಾಡಿದ್ದು ಇಪ್ಪತ್ತು ವರ್ಷದ ನನ್ನ ಚಿಕ್ಕಮ್ಮನ ಮಗ ಹರ್ಷನ ಅಕಾಲಿಕ ಸಾವು. ಆ ಘಟನೆ ನನ್ನನ್ನು ಜರ್ಜರಿತನಾಗಿಸಿಬಿಟ್ಟಿತು. ಅವನು ನಿಗೂಢ ಕಾರಣಗಳಿಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ನಾನು ನನ್ನ ಕೈಯಾರೆ ಎತ್ತಿ ಆಡಿಸಿದ ನನ್ನ ತಮ್ಮನ ಸಾವಿಗೆ ಕಾರಣಗಳೇ ತಿಳಿಯದೇ ಹಲವು ತಿಂಗಳುಗಳ ಕಾಲ ನಾನು ಮಾನಸಿಕ ಖಿನ್ನತೆಗೊಳಪಟ್ಟಿದ್ದೆ.

ಅದಕ್ಕಿಂತಲೂ ಮಿಗಿಲಾಗಿ ನನ್ನ ಚಿಂತನೆಗಳಿಗೂ ನನ್ನ ಕುಟುಂಬದ ಇತರೆ ಸದಸ್ಯರ ಚಿಂತನೆಗಳಿಗೂ ಹೋಲಿಕೆಯೇ ಆಗುತ್ತಿರಲಿಲ್ಲ. ನಾನು ಚಿಕ್ಕಂದಿನಿಂದಲೂ ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತನಾಗಿದ್ದೆ. ಬಸವಣ್ಣ, ಸರ್ವಜ್ಞ, ಶಿಶುನಾಳ ಶರೀಫರು, ಕುವೆಂಪು, ಹಾಗೆಯೇ ಅಬ್ರಹಾಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್ ಎಡಪಂಥೀಯನಾದ ಚೆ ಗೆವಾರ ಮೊದಲಾದವರ ಬಗ್ಗೆ ಅಲ್ಲಲ್ಲಿ ಅಲ್ಪಸ್ವಲ್ಪ ಓದಿಕೊಂಡು ಪ್ರಭಾವಕ್ಕೆ ಒಳಗಾದವನು. ಜಾತಿ ಪದ್ಧತಿಯನ್ನು ಎಂದೋ ತಿರಸ್ಕರಿಸಿ ಕುವೆಂಪುರವರ ಮನುಜಮತವನ್ನು ಸ್ವೀಕರಿಸಿ ವಿಶ್ವಪಥದಲ್ಲಿ ನನ್ನ ಪಯಣ ಸಾಗಿತ್ತು. ಸಮಾಜದ ಮುಖಪುಟದಲ್ಲಿ ರೂಢಿಯಲ್ಲಿರುವ ಮೌಢ್ಯಾಚರಣೆಗಳಿಂದ ನಾನು ಹೊರಬರಲು ಬಹಳ ವರ್ಷಗಳ ಪರಿಶ್ರಮವೇ ಬೇಕಾಯಿತು. ಜಿ.ಎಸ್. ಶಿವರುದ್ರಪ್ಪನವರು ಬರೆದಿರುವ ಕೆಳಗಿನ ಹಾಡು ನನಗೆ ಬಹಳ ಪರಿಣಾಮ ಬೀರಿತ್ತು.

ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲು ಮಣ್ಣುಗಳ ಗುಡಿಯೊಳಗೆ.

ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ||

ಆ ಒತ್ತಡದ ಮಧ್ಯೆಯೇ ಅತ್ಯಂತ ಸಂತೋಷದ ಸುದ್ದಿಯೊಂದು ಪೂಜಾಳ ಕಡೆಯಿಂದ ಬಂತು. ಅವಳು ಗರ್ಭಿಣಿಯಾಗಿದ್ದಳು. ನಾನು ತಂದೆಯಾಗುತ್ತಿದ್ದೇನೆ ಎಂಬುದನ್ನು ಕೇಳಿದಾಗ, ನನಗಾದ ಸಂತೋಷ ಅಷ್ಟಿಷ್ಟಲ್ಲ. ಕುಟುಂಬದವರೆಲ್ಲರೂ ಸಡಗರ ಪಟ್ಟರು. ಪೂಜಾಳಿಗೆ ಎಲ್ಲ ಕಡೆಗಳಿಂದಲೂ ಪ್ರೀತಿ ವಾತ್ಸಲ್ಯಗಳು ಹರಿದು ಬರುತ್ತಿದ್ದವು. ನನ್ನ ಆಸೆ ಇಷ್ಟೆ. ನಮ್ಮ ಮಗು ಹೊರಬಂದು ತನ್ನ ಪುಟ್ಟ ಕಣ್ಣುಗಳ ತೆರೆದು ನೋಡಿದಾಗ ಅದರ ಅಪ್ಪ ಬರೀ ಎಲ್ಲೋ ಒಂದು ಕಡೆ ಯಾಂತ್ರಿಕವಾಗಿ ಕೆಲಸಮಾಡುವ ಯಂತ್ರಮಾನವನಂತೂ ಆಗಿರಬಾರದು.

ಈ ಘಟನೆಯಾದ ಮೇಲೆ ನೋಡಿ ನನ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿ ಹೋದವು. ಒಂದು ಮಗುವಿಗೆ ತಂದೆಯಾಗುವುದೆಂದರೆ ಸಾಮಾನ್ಯದ ಮಾತೇ? ಈಗಿನ ಯಾಂತ್ರಿಕ, ಕ್ರೂರ, ನಿಷ್ಟುರ ಸಮಾಜದಲ್ಲಿ ನಮ್ಮ ಮಗುವನ್ನು ಸತ್ಪ್ರಜೆಯಾಗಿಸಬೇಕೆಂದರೆ, ನಮಗೆ ಹಾಗೆ ಮಗುವನ್ನು ಬೆಳೆಸುವ ಅರ್ಹತೆ ಬೇಡವೇ? ಎಲ್ಲರಂತೆಯೇ ನಾವೂ ಕೂಡ ನಗರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಕೊಡಿಸಿ ಮುಂದಿನ ಪೀಳಿಗೆಯ ಅಭಿಯಂತರರೋ, ವೈದ್ಯರೋ ಅಥವಾ ವಿಜ್ಞಾನಿಯನ್ನೋ ಮಾಡಿಬಿಟ್ಟರೆ ಸಾಕಾಯಿತೆ? ಈಗಿನ ವಿದ್ಯಾವಂತರೆನಿಸಿಕೊಂಡವರು ಹಣವೆಂಬ ಮರೀಚಿಕೆ ಹಿಂದೆ ಜೋತು ಬಿದ್ದಿದ್ದಾರೆ. ಹೀಗಾದರೆ ಸಮಾಜ ಸುಸ್ಥಿರವಾಗುವುದೆಂತು? ನಮ್ಮ ಮಕ್ಕಳೂ ಇತರರಂತೆ ಮುಂದಿನ ಪೀಳಿಗೆಯ ಯಾಂತ್ರಿಕ ಮಾನವರಾಗಿಬಿಡುವರೇ? ಪ್ರಕೃತಿ ಮಾತೆಯನ್ನು ಉಳಿಸಿ ಬೆಳಸಲು ಸಶಕ್ತರಾಗಿರುವರೇ? ಎಂಬ ಪ್ರಶ್ನೆಗಳು ನನ್ನಲ್ಲಿ ಸುಳಿದಾಡಿದವು.

ಮಧ್ಯಪ್ರಾಂತ್ಯದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧ, ಜಗತ್ತಿನಲ್ಲಿ ಜ್ವಾಲೆಯಂತೆ ಹತ್ತಿ ಉರಿಯುತ್ತಿರುವ ಕೋಮುವಾದಿತನ, ಪಶ್ಚಿಮ ದೇಶಗಳಲ್ಲಿನ ಅನಿಶ್ಚಿತತೆ, ನಮ್ಮ ದೇಶದಲ್ಲಿರುವ ಭ್ರಷ್ಟಾಚಾರ, ರೈತರ ಆತ್ಮಹತ್ಯೆಗಳು, ಎಲ್ಲರೂ ಸೇರಿ ಅಭಿವೃದ್ಧಿಯ ಹೆಸರಿನಲ್ಲಿ ಮಾಡುತ್ತಿರುವ ಭೂಮಿ ತಾಯಿಯ ಕಗ್ಗೊಲೆ, ಹೀಗೆ ಅನೇಕ ವಿಷಯಗಳು ನನ್ನನ್ನು ಅತಿಯಾಗಿ ಕಾಡತೊಡಗಿದವು. ಇದರ ಮಧ್ಯೆಯೇ ನನ್ನನ್ನು ಅತ್ಯಂತ ಜರ್ಜರಿತನಾಗಿ ಮಾಡಿದ್ದು, ಅನೇಕ ಅಗತ್ಯ ಕಾರಣಗಳನ್ನಿಟ್ಟುಕೊಂಡು ಕೆಲವು ಸಂಸ್ಥೆಗಳಿಂದ ಹಲವರು ಕೆಲಸ ಕಳೆದುಕೊಂಡಾಗ.

ಆ ಬಡಪಾಯಿಗಳಲ್ಲಿ ನನಗೆ ತಿಳಿದವರು ಹಲವರಿದ್ದರು. ಆಗಲೇ ಗೊತ್ತಾಗಿದ್ದು ನಾವು ಮಾನಸಿಕವಾಗಿ ಎಷ್ಟು ಅಶಕ್ತರಾಗಿಬಿಟ್ಟಿದ್ದೇವೆ ಎಂದು. ಕೆಲಸ ಹೋಗುವ ಒಂದು ಸಣ್ಣ ವಿಷಯಕ್ಕೇ ನಮ್ಮ ತಲೆ ಮೇಲೆ ಕೈ ಹೊತ್ತುಕೊಂಡು ಗೋಳಾಡುತ್ತೇವೆ. ನನಗೆ ಡಿ.ವಿ.ಜಿ ರವರ ಮಾತುಗಳು ನೆನಪಿಗೆ ಬರುತ್ತವೆ. ನೋವನ್ನೂ ನಗುವಾಗಿ ಪರಿವರ್ತಿಸುವ ಕಲೆಯನ್ನು ಮೈಗೂಡಿಸಿಕೊಂಡಿದ್ದ ಡಿ.ವಿ.ಜಿಯವರು ಬದುಕು ಒಡ್ಡಿದ ಕಷ್ಟಗಳಿಗೆ ಮಣಿದವರಲ್ಲ. ಬದುಕೆಷ್ಟೇ ಘೋರವಾದರೂ, ನಾವು ಈಸಬೇಕು ಇದ್ದು ಜೈಸಬೇಕು ಎಂಬುದನ್ನು ತಮ್ಮ ಆಶುಕವಿತೆಗಳಿಂದ ಬಹಳ ತಮಾಷೆಯಿಂದ ಲೋಕಕ್ಕೆ ಸಾರಿ ಹೇಳುವ ಕಲೆ ಅವರಲ್ಲಿತ್ತು ಎಂಬುದಕ್ಕೆ ಕೆಳಗಿನ ಸಾಲುಗಳೇ ಸಾಕ್ಷಿ.

ಆದದ್ದಾಯಿತು, ಹೋದದ್ದೋಯಿತು,

ಒಗೆಯೋ ಕಂತೇನಾ, ಗುಂಡಾ ಹೊಡಿಯೋ ಗಂಟೇನಾ.

  • ಡಿ.ವಿ.ಜಿ

umbrellaಕೆಲವು ವಾರಗಳು ಕೆಲಸದಿಂದ ರಜೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆದಿದ್ದಾಯಿತು. ಸಂಜೆಯ ಹೊತ್ತಿನಲ್ಲಿ ನನ್ನಲ್ಲಿ ಮೂಡುತ್ತಿದ್ದ ಆಲೋಚನೆ ಮತ್ತು ವಿಚಾರಗಳನ್ನು ಒಂದು ತರ್ಕಬದ್ಧವಾಗಿ ಉತ್ತರವನ್ನು ಹುಡುಕುತ್ತಾ ವಿಹಾರಕ್ಕೆ ಹೊರಡುತ್ತಿದ್ದೆ. ಇಂತಿಷ್ಟೇ ದೂರ ಅಥವಾ ಇಂತಹದೇ ಮಾರ್ಗವೆಂಬುದು ಇರಲಿಲ್ಲ. ನನ್ನ ಮನಸ್ಸು ತಿಳಿಯಾಗುವವರೆಗೂ ಅಥವಾ ನನಗೆ ಕಾಲು ನೋವು ಬರುವವರೆಗೂ ನಡೆಯುತ್ತಿದ್ದೆ. ಹೀಗೆಯೇ ಮೂರು ವಾರಗಳು ಕಳೆದವು. ನಾನು ಕೆಲವು ವಾರಗಳು ಯಾರ ಸಂಪರ್ಕಕಕ್ಕೂ ಸಿಗದೇ ಓಡಾಡಿಕೊಂಡು ಬರುವ ಇಂಗಿತವನ್ನು ಪೂಜಾಳಲ್ಲಿ ವ್ಯಕ್ತಪಡಿಸಿದೆ. ಆರು ತಿಂಗಳ ಗರ್ಭಿಣಿಯಾದ ಸಂದರ್ಭದಲ್ಲಿ ತನ್ನ ಪತಿಯನ್ನು ಯಾವ ಹೆಂಡತಿಯಾದರೂ ದೂರ ಕಳಿಸಲು ಒಪ್ಪುತ್ತಾಳೆಯೇ?

ಮುಂದಿನ ಜೀವನವನ್ನು ರೂಪಿಸಿಕೊಡುವ ಒಂದು ಪ್ರಯಾಣ ಮಾಡುವ ಹಂಬಲವಿತ್ತು. ಎಲ್ಲಿಗೆ ಹೋಗುವುದು? ಕುಟುಂಬ ವರ್ಗದವರನ್ನು ಹೇಗೆ ಒಪ್ಪಿಸುವುದು? ಹೋಗಿ ಮಾಡುವುದಾದರೂ ಏನು? ನಾನು ಹೋದ ನಂತರದ ಪರಿಣಾಮಗಳಾವುವು? ಹೀಗೆ ನಾನಾ ಪ್ರಶ್ನೆಗಳು ಮೂಡುತ್ತಾ ಹೋದವು. ಭಾನುವಾರ ಜುಲೈ-05ರ ಮುಂಜಾನೆಯಿಂದಲೇ ಕುಳಿತು ಒಂದು ಪತ್ರ ಸಿದ್ಧಪಡಿಸಲು ನಿರತನಾದೆ. ನಾ ಹೋದ ಮೇಲೆ ಪೂಜಾ ಏನೇನು ಮಾಡಬೇಕು ಎಂಬ ಕೆಲವು ಜವಾಬ್ದಾರಿಗಳು, ಬೇಜಾರಿನಲ್ಲಿ ಊಟ ತಿಂಡಿ ಬಿಟ್ಟು ಕಂಗೆಡದಂತೆ ಮನವಿ ಮಾಡಿ, ಮಗುವಿನ ಮತ್ತು ತನ್ನ ಆರೋಗ್ಯ ಕಾಪಾಡಿಕೊಳ್ಳುವಂತೆ ಕೋರಿಕೊಂಡೆ. ಕುಟುಂಬದವರಿಗೆಲ್ಲ ಧೈರ್ಯವಾಗಿರಲು ಹೇಳಿದೆ. ಹೀಗೆ ಲೇಖನವನ್ನು ಓದಿ ತಿದ್ದಿ ಒಂದು ಸ್ವರೂಪಕ್ಕೆ ತರುವಷ್ಟರಲ್ಲಿ ರಾತ್ರಿ ಹತ್ತು ಗಂಟೆಯಾಗಿತ್ತು.

ಅದಾಗಲೇ ನನ್ನ ತಮ್ಮನಿಗೆ ಹೇಳಿ ಒಂದು ವಾಟರ್ ಪ್ರೂಫ್ ಬ್ಯಾಗ್, ನಾಲ್ಕು ಜೊತೆ ಕಾಲು ಚೀಲ ತರಿಸಿದ್ದೆ. ನನ್ನ ತಮ್ಮನಿಗೆ ಕೊಂಚ ಅನುಮಾನ ಬಂದು ಎಲ್ಲಿಗೆ ಹೊರಡಲು ಸಿದ್ಧನಾಗಿರುವೆ ಎಂದು ಕೇಳತೊಡಗಿದ. ಅದನ್ನು ಕೇಳಿಸಿಕೊಂಡ ಪೂಜಾಳಿಗೂ ಅನುಮಾನ ಬಂದು ನನ್ನನ್ನು ನಿಜ ಹೇಳುವಂತೆ ಕಾಡಲು ಶುರುಮಾಡಿದಳು. ಸುಳ್ಳು ಹೇಳಿ ಕೆಲವು ತಮಾಷೆ ಮಾಡಿ ತೇಲಿಸಿಬಿಟ್ಟೆ. ಅತ್ಯಾವಶ್ಯಕತೆಗೆ ಇರಲಿ ಎಂದು ಸ್ವಲ್ಪ ಹಣವನ್ನು ತೆಗೆದಿಟ್ಟುಕೊಂಡೆ. ಪೂಜಾ ನನ್ನ ಅಮ್ಮನ ಜೊತೆ ಹೊರಗಡೆ ಹೋಗಿದ್ದ ಸಮಯ ನೋಡಿ ಬ್ಯಾಗ್ ನಲ್ಲಿ ಕೆಲವು ಬಟ್ಟೆ, ಪುಸ್ತಕ, ಬರವಣಿಗೆಗೆ ಒಂದು ಡೈರಿ, ಕ್ಯಾಮರ, ಒಂದು ಛತ್ರಿ, ಮಳೆಗಾಲವಾಗಿದ್ದರಿಂದ ಒಂದು ಜರ್ಕಿನ್ ಮತ್ತು ಇತರೆ ಸಾಮಾನುಗಳನ್ನು ತುಂಬಿಕೊಂಡು ಹೋಗಿ ನಮ್ಮ ಮನೆಯ ಎರಡನೇ ಅಂತಸ್ತಿನ  ಕೋಣೆಯಲ್ಲಿ ಬಚ್ಚಿಟ್ಟೆ.

ಪೂಜಾಳ ತಾಯಿ ನಮ್ಮ ಮನೆಯಲ್ಲೇ ಆ ರಾತ್ರಿ ಉಳಿದುಕೊಂಡಿದ್ದರಿಂದ, ಅವರೂ ಮತ್ತು ಪೂಜಾ ನಮ್ಮ ಕೋಣೆಯಲ್ಲಿ, ನಾನು ನನ್ನ ತಮ್ಮನ ಕೋಣೆಯಲ್ಲಿ ಮಲಗುವುದೆಂದು ನಿರ್ಧಾರವಾಯಿತು. ಆದರೂ ಕೊನೆಯ ದಿನ ಪೂಜಾಳೊಂದಿಗೂ ಆದಷ್ಟು ಕಾಲ ಕಳೆಯಬೇಕೆಂದು ನನ್ನ ಮನಸ್ಸು ತುಡಿಯುತ್ತಿತ್ತು. ಮಾರನೇ ದಿನ ಅಂದರೆ ಜುಲೈ-06ರ ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಹೊರಡುವುದೆಂದು ನಿಶ್ಚಯಿಸಿಕೊಂಡಿದ್ದೆ. ಹಾಗಾಗಿ ಪೂಜಾಳೊಂದಿಗೆ ರಾತ್ರಿ ಹನ್ನೆರಡರ ತನಕ ಮಾತನಾಡಿಕೊಂಡು ಕೆಲವು ವಿಚಾರಗಳನ್ನು ಅವಳಿಗೆ ಅನುಮಾನ ಬರದಂತೆ ಸೂಕ್ಷ್ಮವಾಗಿ ಹೇಳಿದೆ.

ನನಗೇ ತಿಳಿಯದಂತೆ ನನ್ನ ಮನಸ್ಸು ಭಾವನಾತ್ಮಕವಾಗಿ ನನ್ನ ಕಣ್ಣುಗಳ ಅಂಚಿನಲ್ಲಿ ನೀರಾಡುತ್ತಿತ್ತು. ಭಾವನಾತ್ಮಕವೋ ನನ್ನ ಮೂಢತನವೋ ಕಾಣೆ, ಅವಳ ಹೊಟ್ಟೆ ಮೇಲೆ ನನ್ನ ಹಸ್ತವನ್ನಿಟ್ಟು ಮಗುವಿನೊಂದಿಗೆ ಮನಸ್ಸಿನಲ್ಲಿಯೇ ಮಾತನಾಡಲು ಶುರುಮಾಡಿದ್ದೆ. ಕೆಲವು ನಿಮಿಷ ಹಾಗೇ ಮನಸ್ಸಿನ ಸಂಭಾಷಣೆ ನಡೆಸಿ, ಪೂಜಾಳಿಗೆ ತನ್ನ ತಾಯಿಯ ಜೊತೆ ಮಲಗಲು ಬೀಳ್ಕೊಟ್ಟೆ. ಅವಳು ಹೋಗುವ ಮುನ್ನ ಬಿಗಿಯಾದ ಅಪ್ಪುಗೆಯನ್ನೂ, ಸಿಹಿಯಾದ ಚುಂಬನವನ್ನೂ ಕೊಡಲು ಮರೆಯಲಿಲ್ಲ.

ಗರ್ಭದೊಳಗಿದ್ದ ಆ ನವಮಾಸದಲಿ,

ಅತ್ತ ಇತ್ತ ಹೊರಳಾಡಿ ಕಂಡ ಕನಸು.

ಕಲ್ಲುಮಣ್ಣುಗಳಲಿ ಬಿದ್ದು, ತೊಟ್ಟಿ ಕಂಬಗಳ ಸುತ್ತಿ,

ತಾತ ಅಜ್ಜಿಯರ ಮಮತೆಯಲಿ ಕಂಡ ಕನಸು.

ಅಪ್ಪನ ಹೊಟ್ಟೆಯ ಮೇಲೆ ತಲೆಯಿಟ್ಟು,

ನೀತಿ ಕಥೆಗಳ ಕೇಳಿ ಕಂಡ ಕನಸು.

ಶಾಲೆಯಲಿ ಅತ್ತು ಕರೆದು, ನಕ್ಕು ನಲಿದು,

ಪಠ್ಯ ಓದಿ ಕಂಡ ಕನಸು.

ಕಥೆ ಕವನವ, ಹಾಡು ಪದ್ಯವ ಗ್ರಹಿಸಿ,

ನಾ ಕವಿಯಾದನೆಂದು ಕಂಡ ಕನಸು.

ಗಾಂಧಿ-ಸುಭಾಷ-ವಿವೇಕಾನಂದರಂತೆ,

ನಾ ಚರಿತ್ರೆಯಲಿ ಸೇರಿದೆನೆಂದು ಕಂಡ ಕನಸು.

ಟಾಟಾ-ಬಿರ್ಲಾ-ಕಿರ್ಲೋಸ್ಕರರಂತೆ,

ಸಾಮ್ರಾಜ್ಯ ಕಟ್ಟಬೇಕೆಂದುಕೊಂಡ ಕನಸು.

ನೀರು ಹರಿಸಿ, ಬೆವರು ಸುರಿಸಿ, ಕೆಸರಿನಲಿ ಮಿಂದು, ಬಿಸಿಲಲಿ ಬೆಂದು,

ಜಗತ್ತಿನ ಹಸಿವು ನೀಗಿಸುವ ರೈತನಾಗಬೇಕೆಂಬ ಕನಸು.

ಊರು ಕೇರಿಯ ಸುತ್ತಿ, ನಗರ ಪಟ್ಟಣವ ಅಲೆದು,

ಲೋಕನೋಡುವ ಯಾತ್ರಿಕನಾಗಬೇಕೆಂಬ ಕನಸು.

ಸೃಷ್ಟಿಗೊಂದರಂತೆ ಚಿಗುರಿದವು ಕನಸುಗಳು,

ಇಂತಿರಲು ಬೆಳಕು ಹರಿದಲ್ಲೆಲ್ಲಾ ಕವಲುಗಳು.

ಕನಸು ಕಾಣಲು ಎನಗೆ ಬಿಟ್ಟು,

ನನ್ನ ಭವಿಷ್ಯ ನಿರ್ಧರಿಸುವ ಓ ಸಮಾಜವೇ, ಇದು ನ್ಯಾಯವೇ?

ಕನಸುಗಳ ಅಲೆಗಳ ಮೇಲೆ ತೇಲಾಡಿ,

ಕಲ್ಪನೆಯ ಮೋಡಗಳ ಮಧ್ಯೆ ಹಾರಾಡಿ ಬೆಳೆದ ಎನಗೆ,

ನನ್ನ ಜೀವನ ರೂಪಿಸಿಕೊಳ್ಳುವ ಹಕ್ಕು ಇಲ್ಲವೇ? ಓ ಪ್ರಕೃತಿ

‍ಲೇಖಕರು Admin

21 June, 2016

9 Comments

  1. Dr. Prabhakar M. Nimbargi

    Probably only a few bold ones with concrete ideas of life can venture into such searching activities. Everyone would have such a idea in mind, but can’t dare to do so because of familial responsibilities. Your narration keeps the mind waiting for the next installment.

  2. ಮಲ್ಲೇಶ್

    ಕಲಿಯಬೇಕೆಂಬ, ಜೀವಿಸಿ ಜಯಸಬೇಕೆಂಬ (ಅದು ತನ್ನ ರೀತಿಯಲ್ಲಿ) ತುಡಿತ ನೆತ್ತಿಯ ಮೇಲೇರಿ ಕಿವಿಯೊಳಗಿಂದ ತಲೆ ಹೊಕ್ಕಾಗ, ತನ್ನವರಿಗೆ ಮಹಾಕ್ರೂರಿ ಆದದ್ದೂ ತಿಳಿಯದಂತಾಗುತ್ತದೆ…

    • ರಾದ

      ಹೌದು ಮಲ್ಲೇಶ್. ತಾವು ಹೇಳಿದ್ದು ಸರಿ. ಕಲಿಯಬೇಕು, ಏನಾದರು ಸಾಧಿಸಬೇಕು, ಸುಸ್ಥಿರ ಜೀವನವನ್ನು ಕಂಡುಕೊಳ್ಳುವ ತುಡಿತವು ಮನೆಯವರ ಭಾವನೆಗಳನ್ನು ಮರೆಮಾಚುತ್ತದೆ. ಏಕಮುಖಿಯಾಗಿ ಸಾಗಿ, ಜಂಜಾಟಗಳಲ್ಲಿ ಮಿಂದು, ಸ್ವಾರ್ಥತೆಯಲ್ಲಿ ಬೆಂದು, ಮೌಢ್ಯತೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಜೀವ ಕಾಣದ ಕಡಲ ಕನಸು ಕಂಡಿದ್ದು ನನ್ನ ತಪ್ಪಲ್ಲ.

      ಕೆಲವು ವಾರಗಳು ಸುತ್ತಾಡಿಕೊಂಡು ಬಂದು, ಹೊಸ ಜೀವನವನ್ನು ರೂಪಿಸಿಕೊಂಡು ನನ್ನವರ ಜೊತೆಯಲ್ಲೇ ಸಂತೋಷದಿಂದ ಜೀವನ ನಡೆಸುತ್ತಿರುವ ನನಗೆ ನೀವು ‘ಮಹಾಕ್ರೂರಿ’ ಎಂಬ ಪಟ್ಟ ಕೊಡಬಹುದೇ ಮಲ್ಲೇಶ್?

      ಜೀವನದಲ್ಲಿ ಕೆಲವು ದಿಟ್ಟ ಪರಿವರ್ತನೆಗಳನ್ನು ತರುವಾಗ, ಕ್ಷಣಿಕ ನೋವು ನಷ್ಟಗಳು ಸಹಜವೆಂಬುದು ನನ್ನ ಭಾವನೆ.
      ಜೀವನದಲ್ಲಿ ಜಿಪುಪ್ಸೆಗೊಂಡು, ಯಾವ ದಾರಿಯೂ ಕಾಣದೆ, ಕಾಣದ ಕಡಲನ್ನೂ ತಲುಪದೆ, ಹೇಡಿಗಳಂತೆ ಸಾವಿನ ದಾರಿ ಹಿಡಿಯುವವರಿಗೆ ಏನನ್ನುತ್ತೀರಿ?

      ತಮ್ಮ ವಿಮರ್ಶಾತ್ಮಕ ಮಾತುಗಳು ನನಗೆ ಖುಷಿ ತಂದಿದೆ.

      ಹೆಜ್ಜೆ ಹೆಜ್ಜೆಗೂ ನಮ್ಮ ಜೊತೆಯಿದ್ದು ಸಹಕರಿಸಿ. ಹಿಂದಿನ ಮತ್ತು ಮುಂದೆ ಬರುವ ಅಧ್ಯಾಯಗಳನ್ನು ಓದಿ. ಇಷ್ಟಪಟ್ಟರೆ ನಿಮ್ಮ ಸ್ನೇಹಿತರಿಗೂ ತಿಳಿಸಿ.

      • ಮಲ್ಲೇಶ್

        ತನ್ನವರಿಗೆ ಮಹಾ ಕ್ರೂರಿ ಎಂದದ್ದು ನೋವಿಸಲೆಂದದ್ದಲ್ಲ… ಆ ಹಕ್ಕು ನಾನು ಪಡೆದಿಲ್ಲ…. ಹಲವರಿಗೆ ಇದು ಹಾಗೆಂದನಿಸುತ್ತದೆ…ಅದಕ್ಕೆ ಉತ್ತರವೇ ಈ ಅಧ್ಯಾಯ ಎಂಬುದಷ್ಟೇ ನಾನು ಹೇಳಲು ಹೊರಟದ್ದು…. ತಪ್ಪಿದ್ದಲ್ಲಿ ಕ್ಷಮೆ ಇರಲಿ ರಾದ’ರವರೇ…. ನೀವು ಏಕಮುಖಿ ಎಂದದ್ದು ಸಲ್ಲದು… ಒಂದು ಪಕ್ಷ ಆದದ್ದೇ ಆದರೇ ನಿಮ್ಮ ಕಾರ್ಯ ಕೈಗೂಡತ್ತಲಿರಲಿಲ್ಲವಷ್ಟೆ…

      • ಮಲ್ಲೇಶ್

        ಅಂದ ಹಾಗೆ ನಾನು ನಿಮ್ಮ ಮುಂದಿನ ಅಧ್ಯಾಯಕ್ಕಾಗಿ ಕಾಯುತ್ತಾ ಇದ್ದೇನೆ…. ಮಹಾಕ್ರೂರಿ ಎಂದಾಗ ನಾನು ಹೇಳ ಹೊರಟಿದ್ದು ಇದೇ “If i look back, i wonder how i dared to made such decisions at such a crucial time of our life. I wonder what force made me so confident that nothing could go wrong.”

        • ರಾದ

          ಹೌದು ಮಲ್ಲೇಶ್‍ರವರೇ, ತಾವು ಹೇಳಿದ್ದು ನಿಜ. ಹಲವರಿಗೆ ಹಾಗೇ ಅನಿಸುತ್ತದೆ. ನಾನೂ ಕೂಡ ಇದನ್ನು ನಿರೀಕ್ಷಿಸಿದ್ದೆ. ಹಲವರಿಗೆ ಅನಿಸಿದರೂ, ಯಾರೂ ಅದನ್ನು ಹೇಳುವ ಧೈರ್ಯ ತೋರಲಿಲ್ಲ. ಪೂಜಾಳನ್ನು ಅಂತಹ ಸ್ಥಿತಿಯಲ್ಲಿ ಬಿಟ್ಟು ನಾನು ಪ್ರಯಾಣ ಮಾಡಿದ್ದುದಕ್ಕೆ ನನಗೂ ನೋವಿದೆ.
          ಕ್ಷಮಿಸುವಂತಹ ತಪ್ಪು ಇಲ್ಲಿ ನಡೆದಿಲ್ಲ ಸಾರ್. ಅಂತಹ ದೊಡ್ಡ ವ್ಯಕ್ತಿಯು ನಾನಲ್ಲ. ಅನಿಸಿಕೆಯನ್ನು ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬ ಓದುಗನಿಗೂ ಇರುತ್ತದೆಂದು ನಾನು ಭಾವಿಸಿದ್ದೇನೆ. ಅವುಗಳನ್ನು ತೆರದ ಮನಸ್ಸಿನಿಂದ ಸ್ವೀಕರಿಸಲು ನಾನು ಮಾನಸಿಕವಾಗಿ ಸಿದ್ಧನಿದ್ದೇನೆ.
          ಬಹಶಹ ಅವತ್ತಿನ ನನ್ನ ಮಾನಸಿಕ ಸ್ಥಿತಿಯ ಬಗ್ಗೆ ಪುಸ್ತಕದಲ್ಲಿ ವಿವರಿಸಲು ಸೋತಿದ್ದೇನೆ. ಎಂತಹ ಖಿನ್ನತೆಗೊಳಗಾಗಿದ್ದೆ ಎಂದು ಹೇಳುವ ಸ್ಥಿತಿಯಲ್ಲೂ ಇಲ್ಲ. ಕತ್ತಲೆಯಲ್ಲಿ ಮುಳುಗಿದ್ದ ನನಗೆ ಪ್ರಯಾಣವೊಂದೇ ಭರವಸೆಯ ಆಶಾಕಿರಣದಂತೆ ಕಂಡದ್ದು.
          ಏಕಮುಖಿ ಎಂದದ್ದು ಒಂದೇ ರೀತಿಯಲ್ಲಿ ಯಾಂತ್ರಿಕ ಜೀವನ ನಡೆಸುತ್ತಿದ್ದರ ಬಗ್ಗೆ. ಅದು ನನಗೆ ಬೇಸರತಂದಿತ್ತು.
          ತಮ್ಮ ನೇರ ಮಾತುಗಳಿಗೆ ನಾನು ಚಿರಋಣಿ.
          ಹಿಂದಿನ ಮತ್ತು ಮುಂದೆ ಬರುವ ಅಧ್ಯಾಯಗಳನ್ನು ಓದಿ. ಇಷ್ಟಪಟ್ಟರೆ ನಿಮ್ಮ ಸ್ನೇಹಿತರಿಗೂ ತಿಳಿಸಿ.

  3. Anonymous

    Hi Rahul,
    How r u sir? Eega elliddira ?
    Nimma viswa manavatada prajne , shramikara bagegina nimma asakti,preeti,kalaji tilidu nimma melina abhimana noormadiyayitu.
    Nimmantaha bhavageevigale e bhoomige
    Valitannu bayasuva, samskrutikavaagi yochisuva mattu sustira samajavannu kattaballa manasugalembudu nanna anisikeyaagide.
    Mundina vaarada dariyalli nintu….
    .chi na halli kirana.

    • ರಾದ

      ನಿಮ್ಮ ಮಾತುಗಳೂ ನಿಮ್ಮ ಹೆಸರಿನಂತೆ ಆಶಾಕಿರಣಗಳಂತೆ ಭಾಸವಾಗುತ್ತಿವೆ. ನನ್ನ ಪ್ರಯಾಣದಿಂದ ಮತ್ತು ಬರವಣಿಗೆಯಿಂದ ತಾವು ಪ್ರಭಾವಿತರಾಗಿದ್ದರೆ ನನ್ನ ಕೆಲಸಕ್ಕೆ ನ್ಯಾಯ ಸಿಕ್ಕಂತಾಗುತ್ತದೆ. ಶ್ರಮ ಜೀವನದ ಜೊತೆಗೆ ಸುಸ್ಥಿರ ಸಮಾಜವನ್ನು ಕಟ್ಟಲು ನಾವೆಲ್ಲರೂ ಕೈ ಜೋಡಿಸೋಣ. ಲೇಖನದೊಂದಿಗೆ ತಾವೂ ಕೂಡ ಹೆಜ್ಜೆ ಹಾಕುತ್ತಿರುವುದಕ್ಕೆ ತಮಗೆ ಮತ್ತೆಮ್ಮೆ ಧನ್ಯವಾದಗಳು.
      ನಾನು ಈಗ ಮೈಸೂರಿನಲ್ಲಿದ್ದೇನೆ. ಹಿರಿಯರ ಮಾರ್ಗದರ್ಶನದಲ್ಲಿ ಸುಸ್ಥಿರ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಸಾಗುತ್ತಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading