ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದೊಂದು ಮಾತು ಬೆಲ್ಲ..

ದೀಕ್ಷಿತಾ ಆಚಾರ್ಯ

‘ಉಂತು, ನಿಕ್ಕ್ ಪೊಪ್ಪಡ ಪನ್ಪೇ (ನಿಲ್ಲು ನಿಂಗೆ ಅಪ್ಪನತ್ರ ಹೇಳ್ತೇನೆ)..’, 

ಇದೇನಿದು ಹೀಗಂತಿದ್ದೇನೆ ಅಂದ್ಕೊಂಡ್ರಾ ಪ್ರತೀ ಮಗುವಿಗೆ ಯಾವುದೇ ತೊಂದ್ರೆ ಆದಾಗ ಮೊದ್ಲು ಹೇಳುವ ಮಾತೇ ಇದು.. ಇದನ್ನು ತುಳುವಲ್ಲಿ ಕೇಳೋದೇ ಮಜಾ.. ಬಿದ್ದಾಗ ಅಮ್ಮ ಅಂತ ಕರೆದ್ರೆ, ತೊಂದ್ರೆ ಆದಾಗ ನೆನಪಾಗೋದು ಅಪ್ಪ.. ಹೌದು ಅಪ್ಪ ಅಂದ್ರೆ ಧೈರ್ಯ; ಅಪ್ಪ ಅಂದ್ರೆ ಸ್ಥೈರ್ಯ.. 

ಅಮ್ಮನ ಕತೆ ಕವನ ನಾವು ಸಾಕಷ್ಟು ನೋಡಿದ್ದೇವೆ.. ಅಪ್ಪನ ಬಗ್ಗೆ ಕತೆ ಕವನಗಳು ಅಮ್ಮನಿಗಿಂತ  ಕಮ್ಮಿಯೇ..ಕಾರಣ ಅಪ್ಪನ ಭಾವಗಳು ಕಾಣುವುದು ಕಮ್ಮಿಯೇ.. ಕೋಪವೇ ಜಾಸ್ತಿ ತೋರಿಸೋ ಅಪ್ಪನ ಖುಷಿಯೂ ದುಃಖವೂ ಎಲ್ಲಾ ತೆರೆಗಿಂತ  ಜಾಸ್ತಿ ಮರೆಯಲ್ಲಿಯೇ.. ಹೌದು ಅಪ್ಪ ಅಂದ್ರೆ ಭಯ; ಅಪ್ಪ ಅಂದ್ರೆ ದಯಾ .. 

ಪ್ರತಿ ಹೆಣ್ಣು ಮಗುವಿಗೂ ಅಪ್ಪ ಅಂದ್ರೆ ಅದೇನೋ ಅಕ್ಕರೆ.. ಅಪ್ಪಂದಿರಿಗೂ ಅಷ್ಟೇ.. ಮಗಳು ತೊದಲು ನುಡಿ… ಆಡ್ತಾ ಬೆಳೀತಾ ಇರೋ ಹಾಗೆ ಖುಷಿ ಪಡ್ತಾ ..ಅವಳ ಬೇಕು ಬೇಡಗಳನ್ನು ಗಮನಿಸಿ ಹತ್ತಿರ ಆಗ್ತಾ.. ಅವ್ಳು ಬೆಳಿತಾ ಹೋದಾಗೆ ಸ್ವಲ್ಪ ಸ್ವಲ್ಪ ದೂರಾಗ್ತಾ.. ಅವಳ ಭವಿಷ್ಯದ ಬಗ್ಗೆ, ಒಂದು ಒಳ್ಳೆ ಮನೆ ಸೇರೋ ವರೆಗೂ ಚಿಂತಿಸ್ತಾ, ಮಗಳನ್ನ ಧಾರೆ ಎರಿತಾ ಮರೆಯಲ್ಲೇ ದುಃಖವನ್ನು ಸಂತೋಷವನ್ನೂ ಪಡೋದು ಅಪ್ಪಂದಿರ ಅಭ್ಯಾಸವೋ ಏನೋ.. ಪ್ರತಿ ಗಂಡು ಮಕ್ಕಳಲ್ಲಿ ತನ್ನನು ತಾನು ಕಾಣ್ತಾ.. ಮಗನಿಗೊಂದು ಹೆಗಲು ಕೊಡ್ತಾ, ಆಡ್ತಾ..  ಬೆಳಿತಾ ಮಗ ಎಲ್ಲಿ ದಾರಿ ತಪ್ಪಿ ಬಿಡ್ತಾನೋ ಅಂತ ಚಿಂತಿಸ್ತಾ.. ಅವ್ನಿಗೆ ವಿದ್ಯೆ, ಕೆಲಸ ಎರಡು ಸರಿಯಾಗಿ ಆಗೋ ವರೆಗೂ ಅಪ್ಪ ಭಾವ -ಭಾವನೆ ಅನುಭವಿಸುವುದು ಮರೆಯಲ್ಲಿಯೇ… ಹೌದು ಅಪ್ಪ ಅಂದ್ರೆ ಜವಾಬ್ದಾರಿ; ಅಪ್ಪ ಅಂದ್ರೆ ಬದುಕಿನ ದಾರಿ.. 

ಹೆಚ್ಚಿನ ಮಕ್ಕಳಿಗೆ ಅಪ್ಪ ದೂರ್ವಾಸ ಮುನಿಯೇ.. ಗದರಿದರೆ ಸಾಕು,ಕಣ್ಣು  ತುಂಬಿಯೇ ಹೋಗೋದು.. ಅಪ್ಪ ನಗೋದು ಕಮ್ಮಿಯೇ.. ಆದ್ರೆ ಅಪ್ಪನ ಹೆಗಲೇರಿ ಅಮ್ಮನನ್ನು ಅಣಕಿಸೋ ಖುಷಿನೇ ಬೇರೆ.. ಅಮ್ಮ ಮುಖ ತಿರ್ಗಿಸಿದಾಗ ಅಪ್ಪನ ಮುಖ ನೋಡಿ  ಜೊತೆ ಸೇರಿ ನಗೋ ಆ ಕ್ಷಣ ಅದೊಂಥರಾ ವಿಶೇಷ.. ಒಳ್ಳೆ ಮಾರ್ಕ್ಸ್ ಬಂದಾಗ, ಒಳ್ಳೆ ಕೆಲಸ ನಮ್ಮಿಂದ ಆದಾಗ, ನಮ್ಮ ಹೆಸರಿಂದ ಅಪ್ಪನನ್ನ ಗುರುತಿಸಿದಾಗ ಹೀಗೆ ಅಪ್ಪನ ಮುಖದ ಆ ನಗುಗಳು ತುಂಬಾ ಚಂದ.. ಹೌದು ಅಪ್ಪ ಅಂದ್ರೆ ಸಂತೋಷ, ಅಪ್ಪ ಅಂದ್ರೆ ತುಂಬಾನೇ ವಿಶೇಷ..

ಇನ್ನು ಅಪ್ಪನ ಜೀವನ ಬಹುಪಾಲು ಮಕ್ಕಳ ಜೀವನವನ್ನೇ ರೂಪಿಸೋದ್ರಲ್ಲಿ ಕಳಿಯೋದು .. ತನಗಾಗಿ ತಾನು ದುಡಿಯೋದಕ್ಕಿಂತ ಮಕ್ಕಳಿಗಾಗಿ ಮಕ್ಕಳ ಖುಷಿಗೆ ದುಡಿಯೋದೇ ಹೆಚ್ಚು.. ಚಿಂತೆ ಮತ್ತು ಶ್ರಮದಲ್ಲಿಯೇಮನೆಯ ಹೀರೋ ಆಗಿ ಅದ್ರಲ್ಲೂ ಆನಂದ ಪಡೀತಾ ಅಲ್ಪ ಸ್ವಲ್ಪ ಗದರಿದ್ರು, ಒರಟನಾಗಿ ಕಂಡ್ರು ಅಪ್ಪನ ಮನಸ್ಸು ಮಾತ್ರ ತೀರಾ ಮೃದು.. ಹೌದು ಅಪ್ಪ ಅಂದ್ರೆ ಯಜಮಾನ , ಶುಭ ಹಾರೈಸೋಣ ಈ ದಿನ.. 

ಅಪ್ಪ ,ಉಪ್ಪ,ಬಾಪಾ,ಅಚ್ಚಾ ,ಆನು,ಪೊಪ್ಪ,ಅಣ್ಣ ಹೀಗೆ ನಾನಾ ಹೆಸ್ರಲ್ಲಿ ಕರಿಯೋ ಅಪ್ಪನ ಮುಗ್ಧ-ಮೃದು ಮನಸ್ಸಿಗೆ ಸೋಲ್ತಾ, ಕಮ್ಮಿ ಮಾತಾಡಿದ್ರು ಬದುಕಿಗೊಂದು ನೆಲೆ-ಸೆಲೆ ಕೊಟ್ಟಂತ ಎಲ್ಲಾ ಅಪ್ಪಂದಿರಿಗೂ ನಿನ್ನಂತ ಅಪ್ಪ ಇಲ್ಲ ಒಂದೊಂದು ಮಾತು ಬೆಲ್ಲ ಹಾಡ್ತಾ ಪ್ರೀತಿಯಿಂದ ಶುಭಾಶಯ ಕೋರುವ…

‍ಲೇಖಕರು Admin

22 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading