ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದೇ ದಿನದಲ್ಲಿ 50 ಸಾವಿರ ರೂ ಮೌಲ್ಯದ ಪುಸ್ತಕ ಮಾರಾಟ: 'ಇದೊಂಥರಾ..' ದಾಖಲೆ

‘ಬಹುರೂಪಿ’ ಪ್ರಕಾಶನ ಪ್ರಕಟಿಸಿದ ಹಿರಿಯ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ಅವರ ‘ಇದೊಂಥರಾ ಆತ್ಮಕಥೆ’ ಬಿಡುಗಡೆಯಾದ ಅಂಗಳದಲ್ಲಿಯೇ 50 ಸಾವಿರ ರೂ. ಮೌಲ್ಯದ ಪ್ರತಿಗಳು ಮಾರಾಟವಾಗಿ ದಾಖಲೆ ಬರೆದಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಶನಿವಾರ ವಿಠ್ಠಲಮೂರ್ತಿ ಅವರ ಪತ್ರಕರ್ತ ಬದುಕಿನ ಯಾನದ ಕಥೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಹಿರಿಯ ಚಿಂತಕರಾದ ಡಾ. ವಿಜಯಾ ಅವರು ಬಿಡುಗಡೆ ಮಾಡಿದ್ದರು.
250 ರೂ. ಮುಖಬೆಲೆಯ ಈ ಕೃತಿಯನ್ನು ‘ಬಹುರೂಪಿ’ ಸಮಾರಂಭದ ಅಂಗವಾಗಿ 200 ರೂ. ರಿಯಾಯಿತಿ ದರದಲ್ಲಿ ಮಾರಾಟ ಮಾಡಿತ್ತು.
ಸಮಾರಂಭದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿದ್ದಂತೆ ಕೃತಿಯನ್ನು ಮಾರಾಟಕ್ಕೆ ಮುಕ್ತವಾಗಿಸಲಾಯಿತು. ಕಾರ್ಯಕ್ರಮದ ಮಧ್ಯೆಯೇ ಸರತಿ ಸಾಲಲ್ಲಿ ನಿಂತು ಓದುಗರು ಕೃತಿಗಳನ್ನು ಕೊಂಡರು.

250 ಪ್ರತಿಗಳು ಸ್ಥಳದಲ್ಲೇ ಮಾರಾಟ ಆದದ್ದು ನನಗೆ ಅಚ್ಚರಿಯನ್ನುಂಟು ಮಾಡಿದೆ. ಕನ್ನಡದಲ್ಲಿ ಓದುಗರಿಲ್ಲ, ಕೊಳ್ಳುಗರಿಲ್ಲ ಎಂದೇ ಬಿಂಬಿಸುತ್ತಿರುವಾಗ ಈ ಮಾರಾಟ ಭಿನ್ನ ಕಥೆಯನ್ನು ಹೇಳುತ್ತಿದೆ. ಒಳ್ಳೆಯ ಪುಸ್ತಕಕ್ಕೆ ಎಂದಿಗೂ ಓದುಗರಿದ್ದಾರೆ ಎಂದು ‘ಬಹುರೂಪಿ’ಯ ಮುಖ್ಯಸ್ಥ ಜಿ.ಎನ್. ಮೋಹನ್ ತಿಳಿಸಿದರು.
ನಾಡಿನ ಎಲ್ಲೆಡೆಯಿಂದ ನನ್ನ ಪತ್ರಕರ್ತ ಮಿತ್ರರು ಆಗಮಿಸಿದ್ದರು. ಇವರ ಅಭಿಮಾನ ಬಹುಷಃ ಮಾರಾಟದ ಈ ದಾಖಲೆಗೆ ಕಾರಣವಿರಬೇಕು. ಒಂದಂತೂ ನಿಜ. ಇಷ್ಟು ದೊಡ್ಡ ಸಂಖ್ಯೆಯ ಮಾರಾಟ ನನಗೆ ಇನ್ನಷ್ಟು ಪುಸ್ತಕ ಬರೆಯಲು ಹುಮ್ಮಸ್ಸು ನೀಡಿದೆ ಎಂದು ಕೃತಿಯ ಲೇಖಕ ಆರ್.ಟಿ. ವಿಠ್ಠಲಮೂರ್ತಿ ತಿಳಿಸಿದರು.
ಈ ಮಾರಾಟ ದಾಖಲೆಯಿಂದ ಉತ್ತೇಜಿತವಾದ ‘ಬಹುರೂಪಿ’ ಸಂಸ್ಥೆ ಈ ಮೊತ್ತವನ್ನು ಪತ್ರಿಕೋದ್ಯಮ ಕುರಿತ ಇನ್ನಷ್ಟು ಪುಸ್ತಕಗಳನ್ನು ಪ್ರಕಟಿಸಲು ಮೀಸಲಿಡುವುದಾಗಿ ಘೋಷಿಸಿದೆ.
13 ಮುಖ್ಯಮಂತ್ರಿಗಳೂ ಸೇರಿದಂತೆ ನಾಡಿನ ಮಹತ್ವದ ರಾಜಕಾರಣಿಗಳ ಅಂತರಂಗವನ್ನು ಶೋಧಿಸುವ ಈ ಕೃತಿ ಆರ್.ಟಿ. ವಿಠ್ಠಲಮೂರ್ತಿ ಅವರ 30 ವರ್ಷಗಳ ಪತ್ರಿಕಾ ಜೀವನದ ಕಥೆಯೂ ಹೌದು.
ಈ ಕೃತಿ bahuroopi.in ನಲ್ಲಿ ಮಾರಾಟಕ್ಕಿದೆ. ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ-

‍ಲೇಖಕರು avadhi

30 October, 2019

1 Comment

  1. ಗೀತಾ ಎನ್ ಸ್ವಾಮಿ. ಪ್ರಾಂಶುಪಾಲರು. ಕೆ.ಪಿ.ಯು.ಸಿ.ತಿಪಟೂರು.

    ಬಹುರೂಪಿ ಹೊರತಂದ “ಇದೊಂಥರಾ ಆತ್ಮಕಥೆ” ಪುಸ್ತಕ ಅಷ್ಟು ಪ್ರತಿಗಳು ಮಾರಾಟವಾದ ವಿಚಾರ ನಿಜಕ್ಕೂ ಒಂಥರಾ ಸಡಗರ ಮೂಡಿಸಿದೆ… ಇತ್ತೀಚೆಗೆ ಪುಸ್ತಕಗಳ ಬಗೆಗೆ ಹೆಚ್ಚು ಪ್ರಚಾರ ಸಿಕ್ತಾ ಇದೆ. ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಜನ ಹುಡುಕಿ ಓದ್ತಾ ಇದಾರೆ ಕೂಡ. ಬಹುರೂಪಿ ಪ್ರಕಾಶನ ಹಾಗೂ ಲಡಾಯಿ ಪ್ರಕಾಶನ ಪುಸ್ತಕಗಳ ಕುರಿತು ಸುದ್ದಿ ಕೊಡ್ತಾ ಇರೋದಕ್ಕೆ ನಮ್ಮ ಕಡೆಯಿಂದ ಮೋಹನ್ ಸರ್ ಹಾಗೂ ಬಸು ಸರ್ ಗೆ ಧನ್ಯವಾದಗಳು.
    ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಮೋಹನ್ ಸರ್ ಅನುವಾದದ ಪುಸ್ತಕ ಓದಿದೆ ಇತ್ತೀಚೆಗೆ. ಪಿ.ಸಾಯಿನಾಥ್ ಹಾಗೂ ಅನುವಾದಕರಾದ ಜಿ.ಎನ್. ಮೋಹನ್ ಸರ್ ಗೆ ಅಭಿನಂದನೆಗಳು. ಅವಧಿ ಯ ಓದುಗರೆಲ್ಲ ಈ ಪುಸ್ತಕಗಳನ್ನು ಕೊಂಡು ಓದಲೇಬೇಕು. ತುಂಬಾ ಒಳ್ಳೆಯ ಪುಸ್ತಕಗಳು.
    ಒಳ್ಳೆಯ ಪುಸ್ತಕಗಳ ನಿರಂತರ ಓದು ಕೂಡ ವ್ಯವಸ್ಥೆಯ ಬದಲಾವಣೆಗೆ ಪ್ರಮುಖ ದಾರಿಯಾಗಬಲ್ಲದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading