ಲಂಕೇಶ್, ಅನಂತಮೂರ್ತಿ, ತೇಜಸ್ವಿ ಈ ಮೂವರನ್ನು ಈ ಸಭೆ ಒಟ್ಟಿಗೆ ಕೂರಿಸಿದೆ.ನಾನೀಗ ಇವರನ್ನು ಒಟ್ಟಿಗೆ ಸ್ವಾಗತಿಸಬೇಕಿದೆ.ಈ ಮೂವರನ್ನು ಒಂದು ಎಳೆ ಹಿಡಿದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಸಾಕಾಗಿ ನನ್ನ ಸೋಮಾರಿ ಮನಸ್ಸಿಗೆ ಕೊನೆಗೂ ಒಂದು ಎಳೆ ಸಿಕ್ಕಿತು.ಈ ಮೂವರು ಇಂದಿನ ವಿಷವಾಗಿರುವ ಜಾತಿ, ಧರ್ಮಗಳನ್ನು ಹೇಗೇಗೆ ಎದುರಿಸುತ್ತಾರೆ ಎಂಬುದನ್ನು ಹಿಡಿದು ಹೋಲಿಕೆ ಮಾಡತೊಡಗಿದೆ.
ಲಂಕೇಶರಿಗೆ ಹಿಂದೂ ಇರಲ್ಲ, ಮುಂದೂ ಇರಲ್ಲ. ತನ್ನ ಎದುರಿಗಿರುವುದು ಹೇಗಿದೆಯೋ ಹಾಗೆ ನಿಟ್ಟಿಸಿ ಎದುರಿಸುತ್ತಾರೆ, ಮತ್ತು ಒಂದು ತಾತ್ವಿಕ ಚಿಂತನೆಯಲ್ಲಿ ಆ ತತ್ವ ಏನು ಎತ್ತ ಅಂತ ನೋಡಲ್ಲ. ಅದರ ನಡಾವಳಿ ಏನು, ಅದರ ಸ್ವಭಾವ ಏನು ಇದನ್ನು ನೋಡ್ತಾರೆ.ಬುದ್ಧ ಇರಬಹುದು, ಬಸವಣ್ಣ ಇರಬಹುದು, ತನ್ನ ಸುತ್ತಲಿನವರೊಡನೆ ಯಾವ ರೀತಿ ನಡೆದುಕೊಳ್ತಾ ಇದ್ರು, ಒಬ್ಬ ಹುಷಾರಿಲ್ಲದೇ ಇದ್ರೆ ನೋಡದಿಕ್ಕೆ ಅವನ ಹತ್ರ ಹೋಗ್ತಿದ್ರಾ- ಇವನ್ನೆಲ್ಲ ಗಮನಿಸುತ್ತಾರೆ.ಇದು ಬಹುಶಃ ಧರ್ಮ ತನ್ನ ಹುಟ್ಟನ್ನು ಪಡೆದುಕೊಂಡು ಕೈಕಾಲು ಆಡಿಸುವಂತಹ ಸ್ಥಿತಿಯನ್ನು ಕಾಣುವ ಕಣ್ಣು.
ಅದೇ ಯು.ಆರ್. ಅನಂತಮೂರ್ತಿಯವರು ಜಾತಿ, ಧರ್ಮದ ಕೊಳಕನ್ನು ಅಕ್ಕಪಕ್ಕ ಸರಿಸಿ ಅದರಲ್ಲಿರೋ ತಿಳಿಜಲವನ್ನು ಉಳಿಸಿಕೊಳ್ಳಬೇಕು ಎನ್ನುವ ಮನಸ್ಸಿನಿಂದ ಪ್ರಯತ್ನಪಡ್ತಾರೆ. ಅದಕ್ಕೇ ಅವರು ಆರ್.ಎಸ್.ಎಸ್.ನ ಶಿವಾಜಿಯ ಹಿಂದೂ ಧರ್ಮವನ್ನು ಇಷ್ಟಪಡಲಿಲ್ಲ. ಋಷಿಗಳ ಕಾಲದಲ್ಲಿ ಯಾವುದಿತ್ತೋ ಅದರ ಕಡೆಗೆ ಅವರ ಕಣ್ಣು ಇರುತ್ತದೆ. ಅದೇ ತೇಜಸ್ವಿ ಇವುಗಳ ಸಹವಾಸವೇ ಬೇಡ ಅಂದುಬಿಟ್ಟು ನಿರಾಕರಿಸಿ ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ಅವರು ಮಾಡಿದಂತೆ ಪ್ರೀತಿ ಉಳಿಸೋದಕ್ಕಾಗಿ, ಎಲ್ಲವನ್ನು ಧ್ವಂಸ ಮಾಡೋದಕ್ಕೆ ಕೂಡ ತಯಾರಾಗುತ್ತಾರೆ.
ಹೀಗೆ ಅನ್ನಿಸಿದ ಮೇಲೆ ಯಾಕೋ ಇದು ನಮ್ಮ ಸೃಷ್ಟಿ, ಸ್ಥಿತಿ, ಲಯಕ್ಕೆ ಸೆಟ್ ಆಗ್ತಾ ಇದೆಯಲ್ಲ ಅಂತ ಕಾಣತೊಡಗಿತು!ನನ್ನ ಚೇಷ್ಟೆಯ ಮನಸ್ಸು ಈ ಮೂವರಿಗೂ ಸಂಬಂಧಪಟ್ಟ ದಿರಿಸು ಹಾಕಿಸಿ ನೋಡಿತು.ಯಾವುದೂ ಕೂಡ ಹೆಚ್ಚಿಗೆ ಕಷ್ಟಕೊಡಲಿಲ್ಲ. ಹತ್ತು ತಲೆ ಲಂಕೇಶರಿಗೆ ಆರು ತಲೆ ತೆಗೆದಿಟ್ಟರೆ ಅದೇನು ಕಷ್ಟ ಆಗಲಿಲ್ಲ. ಹತ್ತು ತಲೆ ಪರಿಣಾಮ ಮಾಡಿದವರು ಅವರು.ಆಮೇಲೆ ಅನಂತಮೂರ್ತಿಯವರಿಗೆ ಇರೋ ಡ್ರೆಸ್ಗೆ ಒಂದು ವಜ್ರದ ಹಾರ ಹಾಕಿದರೂ ಸಾಕಾಗುತ್ತೆ ಮತ್ತು ತೇಜಸ್ವಿಯವರಿಗೆ ಜೀನ್ಸ್ ಪ್ಯಾಂಟ್ ಕಿತ್ತಾಕಿ ಬದಲಾಗಿ ಚರ್ಮ ಸುತ್ತಿಬಿಟ್ಟರೂನೂ ಅಂಥಾ ಕೆಟ್ಟದಾಗೇನೂ ಕಾಣಲ್ಲ, ವ್ಯತ್ಯಾಸಾನೂ ಗೊತ್ತಾಗಲ್ಲ.
ನನ್ನ ಮೇಲೆ ಪರಿಣಾಮ ಮಾಡಿದ ಈ ನಮ್ಮ ಕಾಲಮಾನದ ಆದಿ, ಸ್ಥಿತಿ, ಅಂತ್ಯದಂತಿರುವ ಈ ಮೂವರನ್ನು ಎಲ್ಲರ ಪರವಾಗಿ ಸ್ವಾಗತಿಸುತ್ತೇನೆ.
What a thought! 🙂
ಅರ್ಧ ಹಾಳೆಯಲ್ಲಿ ಮೂವರು ವ್ಯಕ್ತಿಗಳ ನಿಲುವುಗಳನ್ನು ಈ ರೀತಿಯಾಗಿ ಹಿಡಿದಿಡಲು ಸಾಧ್ಯವೇ ಎನಿಸುತ್ತದೆ. ಆದರೆ ಆ ಅರ್ಧ ಹಾಳೆ ಬರೆಯಲು ಆ ವ್ಯಕ್ತಿಗಳನ್ನು ಅದೆಷ್ಟು ಅಧ್ಯಯನ ಮಾಡಿರಬಹುದು ಎಂಬುದನ್ನು ಯೋಚಿಸಿದರೆ ಆಶ್ಚರ್ಯವಾಗುತ್ತದೆ… 🙂
ಸಖತ್ತಾಗಿದೆ..!
ಮರುಳಾದೆ !!!
ನಗು ತಡೆಯಕ್ಕಾಗಲಿಲ್ಲ. ನಗುವಿನ ಮಧ್ಯೆ ಅಳು ಬಂತು. ಬ್ರಹ್ಮ ವಿಷ್ಣು ಮಹೇಶ್ವರ ಮೂವರೂ ಇಲ್ಲ. ಆಲ್ಟರ್ನೇಟಿವ್ ಮುಖಗಳೂ ಇಲ್ಲ. ಎಂಥಾ ಸ್ಥಿತಿ ಕನ್ನಡದ್ದು.