ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ವಿಳಾಸದ ಹಿಂದೆ..

ಸುನೀತ ಕುಶಾಲನಗರ

‘ಅಮ್ಮನೆಂಬ ಅನೂಹ್ಯ ಅಚ್ಚರಿಯನ್ನು ಬಿಚ್ಚಿಡುತ್ತಾ ಅಮ್ಮನ ಕಣ್ಣ ಬೆಳಕಿನಲ್ಲಿ ಅವಳ ಮಮತೆಯ ಕಿರುಬೆರಳು ಹಿಡಿದು ನಡೆಯಬೇಕೆನ್ನುವ ಆಸೆ’ ಎನ್ನುವ ಸ್ಮಿತಾ ಬಾಲ್ಯದಿಂದಲೇ ಈ ಲೋಕವನ್ನು ಬೆರಗುಗಣ್ಣಿನಿಂದ ನೋಡುತ್ತಾ ಕವಿತೆಯೊಳಗೆ ಹಿಡಿದಿಡುವ ಪ್ರಯತ್ನದ ಮೂಲಕ ಸಮರ್ಥ ಕವಯತ್ರಿಯಾಗಿ ಗುರುತಿಸಿಕೊಂಡು ಅಪರೂಪದ ಭಾವಲೋಕಕ್ಕೆ ಕೊಂಡೊಯ್ಯುತ್ತಾರೆ. ಮೊಗೆದ ಅನುಭವಗಳನ್ನು ಬಗೆದು ಕಲಾತ್ಮಕವಾಗಿಯೂ, ನವಿರಾಗಿಯೂ ನಿರೂಪಿಸುತ್ತಾ ಹೊಸ ಸಾಧ್ಯತೆಗಳತ್ತ ಹೊರಳಿಕೊಳ್ಳುತ್ತಾರೆಂಬುದಕ್ಕೆ ಅವರ ಲಲಿತ ಪ್ರಬಂಧಗಳೇ ಸಾಕ್ಷಿ. ಇವರು ತಮ್ಮ ಸೂಕ್ಷ್ಮದರ್ಶಿತ್ವದ ಮೂಲಕ ನಮಗೂ ಸತ್ಯದರ್ಶನ ಮಾಡಿಸುತ್ತಾರೆ.

ಸ್ಮಿತಾ ಬರೆಹಕ್ಕಾಗಿ ಎಲ್ಲಿಂದಲೋ ವಸ್ತುಗಳಿಗಾಗಿ ಹುಡುಕಾಟ ನಡೆಸಿದಂತೆ ಕಾಣುತ್ತಿಲ್ಲ. ಯಾಕೆಂದರೆ ಇವರ ಪ್ರಕಾರ ಮನೆಯೊಳಗಿನ ಇಲಿಗಳಿಂದ ಹಿಡಿದು ಪ್ರತಿಯೊಂದು ವಸ್ತುವಿಗೂ ಪ್ರಾಮುಖ್ಯತೆ ಇದೆ. ಅರೆಯುವ ಕಲ್ಲು, ಒಗ್ಗರಣೆ, ಅಡುಗೆಯಲ್ಲಾಗುವ ಎಡವಟ್ಟು, ಜ್ವರದ ನರಳುವಿಕೆಯನ್ನೂ ಪ್ರಬಂಧವಾಗಿಸುವುದರ ಮೂಲಕ ನಾವೇ ಅನುಭವಿಸಿದಂತೆ ಆಪ್ತವಾಗಿ ಬರೆಯುತ್ತಾರೆ.

ಅರೆಯುವ ಕಲ್ಲಿನ ಮುಂದೆ ಅರಳುವ ಕವಿತೆಯಲ್ಲಿ ರುಬ್ಬುವ ಕಲ್ಲು ತಿರಸ್ಕೃತಗೊಂಡು ಮೂಲೆಗುಂಪಾಗಿರುವುದರ ಜತೆಗೆ ಧಾವಂತದ ಬದುಕಿನಲ್ಲಿ ಸುಗ್ಗಿ, ಸೋಬಾನೆ ಪದಗಳು ಮರೆಯಾಗಿದ್ದು ನಮ್ಮ ಸಂಸ್ಕೃತಿ ಅಳಿದು ಹೋಗುತ್ತಿರುವ ನೋವು ಈ ಪ್ರಬಂಧದಲ್ಲಿ ಎದ್ದು ಕಾಣುತ್ತದೆ.

ನನ್ನ ಕವಿತೆಯೆಂಬ ಹಕ್ಕಿಗೆ ಎತ್ತರಕ್ಕೆ ಹಾರಲು ಮತ್ತಷ್ಟು ಬಲ ಬರಲೇ ಇಲ್ಲ ಎಂಬುದು ಇನ್ನೂ ನನಗೆ ಬೇಸರದ ಸಂಗತಿ ಎಂದು ತನ್ನನ್ನು ತಾನು ವಿನಯದಿಂದ ಒಪ್ಪಿಕೊಳ್ಳುವ ದೊಡ್ಡತನವನ್ನು ತೋರುತ್ತಾ, ಕವಿತೆಗೆ ಪೆಟ್ಟು ಕೊಟ್ಟರೆ ನೋವಾಗುವುದು ನನಗೆ ತಾನೇ? ಎಂದು ಕೇಳಿರುವುದು ಕವಿಗಳು ಸರ್ ಕವಿಗಳು ಪ್ರಬಂಧದಲ್ಲಿ ಹೃದ್ಯವೆನಿಸುವ ಸಾಲುಗಳಾಗಿವೆ. ಒಗ್ಗರಣೆಯ ರುಚಿ, ಹದ ಮತ್ತು ಕವಿತೆಗೂ, ಬದುಕಿಗೂ ಇರುವ ಅವಿನಾಭಾವ ಸಂಬಂಧಕ್ಕೆ ಒಗ್ಗರಣೆ ಹಾಕಿ ಬರೆದಿರುವುದು ಪ್ರಬಂಧದ ರುಚಿ ಹೆಚ್ಚಿಸಿದೆ.

ಇಡೀ ಲೋಕಕ್ಕೆ ಬೀಗ ಹಾಕುವ ಶಕ್ತಿಯನ್ನು ಹೊತ್ತು ಬಂದ ಕೊರೋನ ಕಾಲವನ್ನು ಅವಲೋಕಿಸುತ್ತಲೇ ಮನುಷ್ಯತ್ವ ಮರೆತು ಪ್ರಕೃತಿಯನ್ನು ಮಣಿಸ ಹೊರಟರೆ ಯಾರಿಗೂ ಉಳಿಗಾಲವಿಲ್ಲ ಅನ್ನೋ ಕಿವಿಮಾತನ್ನು ಹೇಳುತ್ತಾರೆ. ಬೆಳಕಿನ ಲಹರಿಯೆಂಬ ಸುಂದರ ಚಿತ್ತಾರವನ್ನು ನಮ್ಮೊಳಗೂ ತುಂಬುತ್ತಾ ಸಮವಸ್ತ್ರ ಧರಿಸಿದಂತೆ ಒಂದೇ ರಂಗಿನಲ್ಲಿ ಬಯಲ ತುಂಬಾ ಹಾರಾಡುವ ಕೆಂಪು ಉದ್ದ ಕಡ್ಡಿ ಆಕಾರದ ಕಪ್ಪು ರೆಕ್ಕೆಗಳಿರುವ ದುಂಬಿಗಳನ್ನು ಬೆನ್ನಟ್ಟುತ್ತಾ ಅವುಗಳ ಸುತ್ತ ಹೆಣೆದ ನೆನಪುಗಳೆಡೆ ತಿರುಗಿ ನೋಡುವಂತೆ ಮಾಡಿ ಬಾಲ್ಯದೆಡೆ ಹೊರಳಿಸುತ್ತಾರೆ.

ಇವರ ಪ್ರಬಂಧಗಳು ಕೆಲವೊಮ್ಮೆ ನಗು ಜಿನುಗಿಸಿ ಓದುವ ಹಠಕ್ಕೆ ಬೀಳುವಂತೆ ಮಾಡುತ್ತದೆ. ಅಡುಗೆ ಮನೆಯಲ್ಲಿ ಪುಟ್ಟ ಮಗುವಿನ ಉಚ್ಚೆ ಹಿಟ್ಟಿಗೆ ಸೇರಿ ಅದನ್ನು ಎಸೆಯಲಾಗದೆ ಆಗುವ ಎಡವಟ್ಟನ್ನು ಮೆತ್ತಗೆ ಸಮರ್ಥಿಸಿ ಒಪ್ಪಿಕೊಳ್ಳುವಂತೆ ಮಾಡುವುದು ಅನುಭವಕ್ಕೆ ಬರುವಂತದ್ದೆ. ಆದರೂ ಅದನ್ನು ನವಿರಾದ ಬರೆಹಕ್ಕೆ ಇಳಿಸಿರುವುದು ಆಪ್ತವೆನಿಸುತ್ತದೆ.

ಭಾವಚಿತ್ರಗಳ ಭಾವನಾಲೋಕದಲ್ಲಿ ಎಂಬ ಪ್ರಬಂಧವನ್ನು ಓದುವಾಗ ಇತ್ತೀಚಿಗೆ ಭಾವಚಿತ್ರಗಳು ನಮ್ಮ ಭಾವಕೋಶದಿಂದಾಚೆಗೆ ಜಿಗಿದು ಲೋಕ ಪರ್ಯಟನೆಗೆ ತೊಡಗಿವೆ. ಭಾವಚಿತ್ರದ ಬಂಧ ಪೀಳಿಗೆಯಿಂದ ಪೀಳಿಗೆಗೆ ಕೊಂಡಿಯಾಗಿ ಬೆಸೆದು ಉಳಿಸಿಕೊಂಡು ಹೋಗುವುದನ್ನು ಹೇಳಿರುವುದು ವಂಶವೃಕ್ಷವೆಂಬ ನೆರಳನ್ನು ಮರೆಯದಂತೆ ಎಚ್ಚರಿಸುತ್ತದೆ. ಇವರ ಹೆಚ್ಚಿನ ಪ್ರಬಂಧಗಳಲ್ಲಿ ಗೋಚರಿಸುವ ಪರಿಸರ ಪ್ರೀತಿ, ಪ್ರಕೃತಿ ಪ್ರೇಮ ಹಾಗೆ ಎಲ್ಲವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಾ ಸಂಶೋಧನೆಯಲ್ಲಿ ತೊಡಗಿ ಆ ಮೂಲಕ ಅವುಗಳನ್ನೆಲ್ಲಾ ಪ್ರೀತಿಯಿಂದ ಹಿಂಬಾಲಿಸಿ ಪ್ರಬಂಧಗಳೊಡನೆ ನೆಂಟಸ್ತಿಕೆ ಬೆಳಸಿ ಮನಮುಟ್ಟುವಂತೆ ಅಕ್ಷರಗಳೊಳಗೆ ತುಂಬಿಸಿ ಸಾರ್ಥಕ್ಯ ಅನುಭವಿಸುತ್ತಾರೆ.

ಕೊಡಗಿನ ಅನೂಹ್ಯ ಮಳೆಯ ಸೊಬಗನ್ನು ಸ್ವರ್ಗವೆಂದರೆ ಮಂಜಿನ ನಗರಿ ಎನ್ನುತ್ತಾ ಹೊಯ್ಯುತ್ತಿದೆ ಮಳೆ ಇಲ್ಲಿ ನಿಮಗೆಂದೇ ಎಂದು ಮಳೆಯ ಇಂಪಾದ ನಾದ ನಿನಾದಿಸಿ ನಮ್ಮವರೆಗೂ ತಲುಪಿಸುವಲ್ಲಿ ಯಶಸ್ವಿಯಾಗುತ್ತಾರೆ.

ಜೇಡನ ಅಂತ್ಯ ಅದೇ ಬಲೆಯೊಳಗೆ ಎನ್ನುತ್ತಾ ಮನುಷ್ಯನ ವರ್ತನೆಗೆ ಹೋಲಿಸಿದ ಪರಿ ‘ಜೇಡನ ಜೊತೆಗೂಡಿ ಒಂದು ಸುತ್ತು’ ಪ್ರಬಂಧ ನಾವು ಒಪ್ಪಿಕೊಳ್ಳುವಂತೆ ಮಾಡಿದರೆ ಇದು ಕಲಿಗಾಲವಲ್ಲ ಇಲಿಗಾಲ ಪ್ರಬಂಧದಲ್ಲಿ ಮನೆಯೊಡತಿ ಮನೆಮಂದಿಯ ರಕ್ಷಣೆಗಾಗಿ ಪತ್ತೆದಾರಿ ಕೆಲಸವನ್ನು ಎಷ್ಚು ನಿಗಾ ವಹಿಸಿ ಮಾಡುತ್ತಾರೆಂದರೆ ಬೆಕ್ಕಿನ ಸೋಮಾರಿತನವನ್ನು ಕೂಡಾ ಗಮನಿಸುವಷ್ಟು.ಇಲ್ಲಿ ಇವರು ಇಲಿಯ ಕಾಟವನ್ನು ಹೇಳುತ್ತಾ ನಾವು ನಿದ್ದೆ ಮಾಡಿದಾಗ ಇನ್ನೇನು ನನ್ನ ಕಿವಿಯ ತೂತನ್ನು ಮತ್ತಷ್ಟು ದೊಡ್ಡಕ್ಕೆ ಕೊರೆದು ಅದರೊಳಗೆ ವಾಸ್ತವ್ಯ ಹೂಡಿಬಿಡುತ್ತದೇನೋ ಅನ್ನೋ ಭಯ ಕಾಡಿದ್ದು ಸುಳ್ಳೇನಲ್ಲ ಎಂದಿರುವುದಕ್ಕೆ ಬಿದ್ದು ಬಿದ್ದು ನಕ್ಕಿದ್ದೇವೆ ಅಂದರೆ ನಿಜಕ್ಕೂ ಅದು ಇವರ ಬರೆಹದ ಶಕ್ತಿ.

ಹೀಗೆ ಇವರ ಬರೆಹಗಳಲ್ಲಿ ಕಾಣುವ ಡ್ರೆಸ್ ಸೆನ್ಸಿನ ಸವಾಲು, ಪಾದರಕ್ಷೆಯ ಮೇಲಿರುವ ಗೌರವ, ಚೌತಿ ಚಂದ್ರಮ, ನದಿಯ ಹರಿವಿನಲ್ಲಿ ತನ್ನದೇ ರೀತಿಯಲ್ಲಿ ತನ್ನೊಳಗೆ ಅರಗಿಸಿಕೊಳ್ಳುವ ಕಣ್ಣುಗಳು ಸೋಜಿಗವೆಂಬಂತಾಗಿ ಕವಿತೆಯೆಂದರೆ ಅಮ್ಮನ ಸೆರಗಿನಂತೆ ಮೃದುವಾದ ಸ್ಪರ್ಶ ಎಂಬ ಸಾಲು ಅತ್ಯಂತ ಹೃದಯಸ್ಪರ್ಶಿಯಾಗುತ್ತದೆ. ಪದ ಪದಗಳ ನಡುವೆ ಮೆಲ್ಲಗೆ ಪದಗಳಿಟ್ಟ ನಿಪುಣತೆ ಹಿತವಾಗಿ ಓದಿಸಿ ಎದೆಯಾಳಕ್ಕಿಳಿಸುತ್ತದೆ.

ಇತ್ತೀಚಿನ ಮನೆಗಳಿಗೆ ಜಗಲಿಕಟ್ಟೆಯಿಲ್ಲದ ನಿರಾಸೆಯ ಜತೆಗೆ ಕಾಲದ ಬದಲಾವಣೆಗೆ ಆಗುವ ದುಃಖ ಇವುಗಳೆಲ್ಲಾ ಸಂಸ್ಕೃತಿಯ ಮೇಲೆ ಇವರಿಗಿರುವ ಗೌರವ, ಜೀವಿಪ್ರೀತಿ ಹಲವಷ್ಟು ಪ್ರಬಂಧಗಳಲ್ಲಿ ಆಗಾಗ್ಗೆ ಇಣುಕುತ್ತಿರುತ್ತವೆ. ಈ ಹೊತ್ತಗೆಯ ಶೀರ್ಷಿಕೆಯೇ ಆದ ಒಂದು ವಿಳಾಸದ ಹಿಂದೆ ಅನೇಕ ಕತೆಗಳನ್ನು ನೆನಪು ಮಾಡುತ್ತಾ ಪತ್ರಗಳು ಸಂಬಂಧಗಳನ್ನು ಬೆಸೆವ ವಿಳಾಸ ಬೇಕಿರಲಿ, ಬೇಡವಿರಲಿ ವಿಳಾಸವೊಂದು ಎಲ್ಲಾ ರೀತಿಯಿಂದಲೂ ಭದ್ರತೆಗೆ ಆಧಾರವಾ? ಲೇಖಕಿಯ ಪ್ರಶ್ನೆ ನಮ್ಮ ಮನಸ್ಸನ್ನು ಕೂಡಾ ಪ್ರಶ್ನಿಸುವಂತೆ ಮಾಡುತ್ತದೆ.

ಇನ್ನು ಬೇರೆ ಬೇರೆ ವಿಶಿಷ್ಟ ಹಾಗೂ ವಿಭಿನ್ನ ವಿಷಯಗಳ ಸುತ್ತ ಹೆಣೆದ ಪ್ರಬಂಧಗಳನ್ನು ಒಳಗೊಂಡ ಈ ಕೃತಿಗೆ ಆಕರ್ಷಕ ಮುಖಪುಟದಿಂದ ಅದ್ಭುತ ಮುನ್ನುಡಿ ದಕ್ಕಿದ್ದು ಲೇಖಕಿಯ ನಿರ್ಲಿಪ್ತ ಕುತೂಹಲಗಳಿಗೆ ಹಿಡಿದ ಕನ್ನಡಿಯಂತಿದೆ. ಸುಮಾರು ನೂರಾ ಎಂಭತ್ತೆರಡು ಪುಟಗಳ ಈಕೃತಿಯ ಬೆಲೆ ಇನ್ನೂರು ರೂಪಾಯಿಗಳಾಗಿದ್ದು ಇದೊಂದು ಸಂಗ್ರಹಯೋಗ್ಯ ಕೃತಿಯಾಗಿದೆ.

ಬಾಲ್ಯದ ಅನುಭವಗಳ ಬರೆಹಗಳಲೆಲ್ಲಾ ತನ್ನ ಅಜ್ಜಿಯನ್ನು ನೆನೆದುಕೊಳ್ಳುವ ಸ್ಮಿತಾ ಈ ಕೃತಿಯನ್ನು ಅಜ್ಜಿಗೆ ಅರ್ಪಿಸಿ ಕೃತಾರ್ಥರಾಗಿದ್ದಾರೆ. ಕೊಡಗಿನ ಬರೆಹಗಾರ್ತಿಯಾಗಿ ಸಾಹಿತ್ಯಕ್ಷೇತ್ರದಲ್ಲಿ ಮುಂಚೂಣಿಯ ಸ್ಥಾನದಲ್ಲಿರುವ ಇವರಿಂದ ಇನ್ನೂ ಸಾಕಷ್ಟು ಕೃತಿಗಳನ್ನು ಓದುವ ನಿರೀಕ್ಷೆ ಓದುಗರದ್ದು. ಏಕೆಂದರೆ ಸ್ಮಿತಾ ಅಮೃತರಾಜ್ ಬರೆಹಗಳೇ ಹಾಗೆ ನವಿರು ನವಿರಾಗಿ ಹೃದಯವನ್ನು ಆವರಿಸಿ ನೇವರಿಸಿ ಸರಿಯದೆ ಪದೇ ಪದೇ ಕಾಡುವ ಹಿತವಾದ ತಂಗಾಳಿಯಂತೆ.

‍ಲೇಖಕರು Avadhi

29 April, 2021

2 Comments

  1. Smitha Amrithraj.

    Thank you ಅವಧಿ. thank you sunithakka

  2. Vasundhara k m

    ಒಂದು ಉತ್ತಮ ಪ್ರಬಂಧ ಕೃತಿಯನ್ನು ಬಹಳ ಸೊಗಸಾಗಿ ವಿಶ್ಲೇಷಿಸಲಾಗಿದೆ. ಅಭಿನಂದನೆಗಳು ಸ್ಮಿತಾ ಹಾಗೂ ಸುನೀತಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading