ಇಂದು ಮೇ ದಿನಾಚರಣೆ, ಕಾರ್ಮಿಕರ ಹಬ್ಬ. ಆ ಒಂದು ಕಾರ್ಮಿಕ ದಿನಾಚರಣೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಇಲ್ಲಿದೆ ಒಂದು ಉದಾಹರಣೆ.
‘ನನ್ನೊಳಗಿನ ಹಾಡು ಕ್ಯೂಬಾ’ ಪುಸ್ತಕದಿಂದ ಆಯ್ದ ‘ಒಂದು ರೂಪಾಯಿಯ ದೇಶ’ ಭಾಗ ಇಲ್ಲಿದೆ
-ಜಿ ಎನ್ ಮೋಹನ್
ಕೇವಲ ಒಂದು ರೂಪಾಯಿ-
ಈ ಪುಟ್ಟ ದೇಶ ನನ್ನ ಎದೆಯಾಳಕ್ಕಿಳಿಯಲು ನಾನು ಕೊಟ್ಟದ್ದು ಕೇವಲ ಒಂದು ರೂಪಾಯಿ ಮಾತ್ರ.
ನಿಗಿ ನಿಗಿ ಸುಡುವ ಸೂರ್ಯನ ಎಲ್ಲಾ ತಾಪವನ್ನೂ ಹೀರಿ ಚಿಮ್ಮುವುದೇ ಮೇ ಫ್ಲವರ್. ಇಂತಹ ಹೂವುಗಳ ಸಾವಿರ ಸಾವಿರವಾಗಿ ಅರಳುವ ಹೊತ್ತಲ್ಲಿ ನಡೆದ ಮೇ ಉತ್ಸವವೇ ನನಗೂ ಕ್ಯೂಬಾಗೂ ನಂಟನ್ನು ಬೆಸೆಯಿತು. ಜಗದುದ್ದ ಜಗದಗಲ ಹರಡಿಹೋದ ನೊಂದವರು ತಮ್ಮ ನೋವುಗಳನ್ನೆಲ್ಲಾ ಮರೆತು ಹಾಡಿ ಕುಣಿಯುವ ಹೊತ್ತು – ಮೇ ದಿನ. ಯೌವ್ವನಕ್ಕೆ ನಾನು ಕಾಲಿಡುತ್ತಿದ್ದ ದಿನಗಳಲ್ಲಿ ‘ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು – ಕಪ್ಪು ಮುಖ, ಬೆಳ್ಳಿ ಗಡ್ಡ, ಉರಿಯುತಿರುವ ಕಣ್ಣುಗಳು’ ಎಂಬಂತೆ ನೂರಾರು ಸಂಖ್ಯೆಯಲ್ಲಿ ಈ ದಿನಕ್ಕಾಗಿ ತೇಲಿಬರುವ ಜನರನ್ನು ಕಂಡು ಬೆರಗಾಗುತ್ತಿದ್ದೆ. ‘ಎಲ್ಲ ನೆಲದ ಕಾರ್ಮಿಕರೇ ಒಂದಾಗಿ, ನೀವು ಕಳಕೊಳ್ಳುವುದೇನಿಲ್ಲ ಸಂಕೋಲೆಗಳನ್ನು ಹೊರತು’- ಎಂದು ಕರೆ ನೀಡಿದಾತನ ಮೇಲೆ ಅಚಲ ನಂಬಿಕೆಯಿಟ್ಟು ಬಂದವರು ಅವರು. ತಮ್ಮ ನೋವುಗಳನ್ನು ಮರೆತು ತಮ್ಮಂತೆಯೇ ನೋವುಂಡವರ ಜೊತೆ ಬೆರೆತು, ಹಾಡು ಕುಣಿತಗಳ ಮಧ್ಯೆ ಮತ್ತೆ ಒಂದು ವರ್ಷ ಹೋರಾಟದ ಸಾಗರದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಛಲ ಹೊತ್ತು ತೆರಳುವವರು.
ಇಂತಹ ಮೇ ದಿನವನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಾ ಅದರಲ್ಲಿ ನಡೆಯುವ ಹಾಡು ಕುಣಿತದಲ್ಲಿ ಒಂದಾಗಿ ಮನೆಗೆ ಮರಳುವಾಗ ಸಂಗಾತಿಯೊಬ್ಬರು ನನಗೆ ನೀಡಿದ್ದು – ಆ ಒಂದು ರೂಪಾಯಿಯ ಕೂಪನ್. ಕ್ಯೂಬಾ ದೇಶದ ಬೆಂಬಲಾರ್ಥವಾಗಿ ಒಂದು ರೂ. ಮೇ ದಿನ ಹಾಡು ಕುಣಿತಗಳ ಜೊತೆಗೆ ಇಂತಹ ಹಲವು ನಂಟು ಬೆಸೆಯುವ ದಿನವೂ ಹೌದು. ಹೋರಾಟದ ಕಿಚ್ಚು ಹೊತ್ತಿಸುವ ಪುಸ್ತಕಗಳು, ತಮಗೆ ಆದರ್ಶವಾದವರ ಚಿತ್ರಗಳು, ಕಲಾಕೃತಿಗಳು, ಎಲ್ಲೆಲ್ಲೂ ಕರಪತ್ರಗಳು. ನೊಂದ ಸಂಘಟನೆಗಳಿಗಾಗಿ, ಮುಷ್ಕರ ಕುಳಿತವರ ನೆರವಿಗಾಗಿ ಹಣ ಸಂಗ್ರಹಿಸಲು ಕೂಪನ್ಗಳು.
ಆದರೆ ಈಗ ಇವರು ಕೇಳುತ್ತಿರುವುದು ಒಂದು ದೇಶಕ್ಕಾಗಿ. ಇದು ನನ್ನನ್ನು ಬೆರಗುಗೊಳಿಸಿದ ಸಂಗತಿ. ಎಲ್ಲಿಯ ಕ್ಯೂಬಾ, ಎಲ್ಲಿಯ ಭಾರತ, ಎಲ್ಲಿಯ ಬೆಂಗಳೂರು. ಆ ದೇಶಕ್ಕೇಕೆ ಒಂದು ರೂಪಾಯಿಯ ನೆರವು. ಈ ಪ್ರಶ್ನೆ ನನ್ನ ತಲೆಯಲ್ಲಿ ಮೊಳೆತಿದ್ದೇ ತಡ ಕ್ಯೂಬಾ ಹಾಗೂ ನನ್ನ ನಡುವಿನ ಗೋಡೆಗಳು ಇಲ್ಲವಾಗುತ್ತಾ ಹೋದವು. ಗೆಳೆಯನ ಮನೆಯ ದಾರಿ ದೂರವಲ್ಲ ಎಂಬಂತೆ ಹಾದಿ ಹತ್ತಿರವಾಗತೊಡಗಿತು. ಕ್ಯೂಬಾ ನನ್ನ ನೆರೆಮನೆಯಾಯಿತು. ನನ್ನೊಳಗಿಳಿಯಿತು. ನನ್ನೊಳಗಿನ ಹಾಡಾಯಿತು.
ಹೀಗೆ ಯೋಚಿಸುವಾಗಲೆಲ್ಲಾ ನನಗೆ ಸು.ರಂ.ಎಕ್ಕುಂಡಿ ನೆನಪಾಗುತ್ತಾರೆ. ಶೇಕ್ಸ್ ಪಿಯರ್ ನ ‘ಹ್ಯಾಮ್ಲೆಟ್’ ನಾಟಕವನ್ನು ನೋಡುತ್ತಾ ಒಬ್ಬ ಹಳ್ಳಿಯಾತ ಬಿಕ್ಕಿ ಬಿಕ್ಕಿ ಅಳುತ್ತಾನೆ. ಆಗ ಶೇಕ್ಸ್ಪಿಯರ್ ವಿಸ್ಮಿತರಾಗಿ ಕೇಳುತ್ತಾರೆ -Who is he to Hekuba and Hekuba to him?
ರೊಮೇನಿಯಾದ ಒಡಲಲ್ಲಿ ಅರಳಿ ಜಗತ್ತನ್ನೇ ಬೆರಗಾಗಿಸಿದ ಜಿಮ್ನಾಸ್ಟ್ ನದಿಯಾ ಕಮಾನ್ಸೆಯ ಬಗ್ಗೆ ನಾನು ಕವನ ಬರೆದಾಗ ಎಕ್ಕುಂಡಿ ಈ ಮಾತು ಹೇಳಿದ್ದರು. ಕಾಣದ ಇಂಥ ಸಂಬಂಧದ ತಂತುಗಳು ಈ ಜಗತ್ತಿನ ಮೂಲೆ ಮೂಲೆಯಲ್ಲಿ ಹರಡಿರುತ್ತದೆ ಎಂದಿದ್ದರು. ಈಗ ಕ್ಯೂಬಾ ಮತ್ತು ನಾನು.
ಒಂದು ರೂಪಾಯಿ ಕೊಟ್ಟಾಗಲೇ ಮೊದಲ ಬಾರಿಗೆ ಕ್ಯೂಬಾ ಹೆಸರು ಕೇಳಿದ ನಾನು ಮತ್ತೆ ಯಾರಾದರೂ ಕ್ಯೂಬಾ ಹೆಸರು ಎತ್ತಿದಾಗ, ಪತ್ರಿಕೆಗಳಲ್ಲಿ ಕ್ಯೂಬಾ ಹೆಸರು ಕಂಡರೆ ಅರೆ! ಇದು ನಾನು ಒಂದು ರೂಪಾಯಿ ಕೊಟ್ಟ ದೇಶ ಎನಿಸುತ್ತಿತ್ತು. ಆ ಒಂದು ರೂಪಾಯಿಯ ದೇಶ ಸುದ್ದಿಯಾಗಿ ಪತ್ರಿಕೆಯಲ್ಲಿ ಮುಖ ತೋರಿಸುತ್ತಿರುವುದಾದರೂ ಯಾತಕ್ಕೆ? ಎಂದು ಕುತೂಹಲಗೊಂಡು ಓದುತ್ತಾ, ಓದುತ್ತಾ ಹೋದಂತೆ, ಆ ಒಂದು ರೂಪಾಯಿಯ ದೇಶ ನನ್ನೊಳಗೆ ಒಂದು ಜಾಗವನ್ನು ಹುಡುಕಿಕೊಂಡಿತು.
ಆ ಒಂದು ರೂಪಾಯಿ ಕೇವಲ ಕ್ಯೂಬಾವನ್ನು ಮಾತ್ರವಲ್ಲ ಅದಮ್ಯ ಕನಸುಗಾರ ಚೆಗೆವಾರನ್ನು, ಹಸಿರು ಬಟ್ಟೆಯ ಹರಕು ಗಡ್ಡದ ಫಿಡೆಲ್ ನನ್ನು, ಗ್ರಾನ್ಮಾ ನೌಕೆಯನ್ನೂ, ನೆರೂದಾನ ಕಾವ್ಯವನ್ನು, ಸದಾ ಜೊತೆಗಾರನಾಗಿ ನಿಂತ ಮೆಕ್ಸಿಕೋವನ್ನು, ‘ಚೆ’ ಯ ಅರ್ಜೆಂಟೀನಾ ವನ್ನು, ಆತ ಇಲ್ಲವಾದ ಬೊಲಿವಿಯಾವನ್ನು, ಲ್ಯಾಟಿನ್ ಅಮೇರಿಕಾದ ಒಳಬೇಗುದಿಯನ್ನು, ಅಷ್ಟೇ ಅಲ್ಲ – ಅಮೇರಿಕಾ ಎಂಬ ದೊಡ್ಡಣ್ಣನನ್ನೂ ಪರಿಚಯ ಮಾಡಿಕೊಟ್ಟಿತು.
‘ಬೆಟ್ಟಗುಡ್ಡಗಳಲ್ಲಿ, ಕಾಡು ಕಣಿವೆಗಳಲ್ಲಿ, ಚೆಗೆವಾರನ ಕೈಯಲ್ಲಿ ಇದ್ದದ್ದು ಕೋವಿ ಮತ್ತು ಕಾವ್ಯ’ ಎಂದು ಬಣ್ಣಿಸಿದ್ದರು ಎಕ್ಕುಂಡಿ. ಆಗ ತಾನೇ ‘ಈ ರಾತ್ರಿ ಬರೆಯುತ್ತೇನೆ. ಅತ್ಯಂತ ನೋವಿನ ಸಾಲುಗಳನ್ನು…’ ಎಂಬ ನೆರೂದಾನ ಕವನದಲ್ಲಿ ಇಳಿಯುತ್ತಿದ್ದ ನಾನು ‘ಚೆ’ ಎಂಬ ಕನಸುಗಾರನೊಂದಿಗೆ ಕಳೆದುಹೋದೆ. ಪಡ್ಡೆ ‘ಚೆ’ ಜೊತೆಗೆ ತುಡುಗರ ದಂಡು. ಕನಸುಗಾರನ ಹಿಂದೆ ‘ಇರುವೆಯಂತೆ ಹರಿವ ಸಾಲು…’
ಕ್ಯೂಬಾ ಅಂದಿನಿಂದಲೂ ನನ್ನೊಂದಿಗಿದೆ. ಕನಸಾಗಿ, ಹಾಡಾಗಿ, ಬಂಡೇಳುವ ಹುಮ್ಮಸ್ಸಾಗಿ, ಕವಿತೆಯ ಸಾಲುಗಳಾಗಿ. ನನಗೆ ಫಿಡೆಲ್, ಚೆ, ಮಂಡೇಲ ಎಲ್ಲರೂ ಸೋನೆ ಹನಿಗಳಾಗಿ ಕಂಡಿದ್ದಾರೆ. ಈ ನೆಲಕ್ಕೆ ಹಸಿರು ಮುಕ್ಕಳಿಸುವ ತಾಕತ್ತು ಕೊಟ್ಟಿದ್ದರೆ ಅದು ಇಂತಹ ಅನೇಕಾನೇಕ ಸೋನೆ ಹನಿಗಳು ಎಂಬ ನಂಬಿಕೆ. ಸೋನೆ ಹನಿಗಳು ಉದುರಿ ಎದೆಗೂಡು ಸೇರಿ ಬೆಚ್ಚನೆಯ ಹಾಡಲ್ಲಿ ಹಾಡಾಯಿತು… ನನ್ನ ಸಂಕಲನದ ಸಾಲು ಇದು. ಇವರೆಲ್ಲರೂ ಎದೆಯಲ್ಲಿ ಕಾವ್ಯ, ಕೈಯಲ್ಲಿ ಖಡ್ಗ ಹಿಡಿದ ಪಂಪನ ಬಂಧುಗಳು. ಈ ಜಗತ್ತಿನಲ್ಲಿ ಪಂಪನದ್ದೇ ಒಂದು ಸೈನ್ಯವಿದೆ. ಎದೆಯಲ್ಲಿ ಕಾವ್ಯದ ಎಸಳುಗಳನ್ನಿಟ್ಟುಕೊಂಡು ಕೈಯಲ್ಲಿ ಖಡ್ಗ ಹಿಡಿದ ಎಷ್ಟೊಂದು ಜನ ಆ ಸೇನೆಯಲ್ಲಿದ್ದಾರೆ. ಆ ‘ಚೆ’ಯಿಂದ ಹಿಡಿದು ಬೆಂಜಮಿನ್ ಮೊಲಾಯಿಸ್ ನವರೆಗೆ. ಜಗತ್ತಿನ ಕನಸುಗಾರನ ನಡುವೆ ಗೆರೆಗಳಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಜಗತ್ತಿನ ತುಂಬಾ ಹಲವಾರು ಲೆಬನಾನ್ ಗಳು ಸೃಷ್ಟಿಯಾದಾಗ, ನೀನು ಕಪ್ಪು ಎನ್ನುವ ಮನಸ್ಸುಗಳು, ಸರ್ಕಾರಗಳು ಸೃಷ್ಟಿಯಾದಾಗ ‘ಒಂದೊಂದು ಮನೆಯಲ್ಲಿ ಒಬ್ಬೊಬ್ಬ ಚೆ….’ ಮೂಡುವ ಕನಸುಗಳೂ ಬೆಳೆದಿವೆ.
‘ಮಣಿ’ ಎನ್ನುವ ಅಮೇರಿಕಾ ‘ಮಣಿಯಲಾರೆ’ ಎನ್ನುವ ಕ್ಯೂಬಾ ಇಂದು ಜಗತ್ತಿನ ಆ ತುದಿಯ ಕಥೆಯಾಗಿ ಉಳಿದಿಲ್ಲ. ತನ್ನ ಕಾಲ ಮೇಲೆ ತಾನು ನಿಲ್ಲುವ ಬಯಕೆಗಳು ಮೂಡಿದ ಕಡೆಯೆಲ್ಲಾ ಈ ಕ್ಯೂಬಾ – ಅಮೇರಿಕಾ ಸೃಷ್ಟಿಯಾಗಿವೆ. ದೇಶಗಳ ನಡುವೆ, ದೇಶಗಳ ಒಳಗೆ, ಮನೆಯೊಳಗೆ, ಹಾಗೇ ಮನಸ್ಸಿನ ಒಳಗೂ….
ಆ ಒಂದು ರೂಪಾಯಿ ಏನೆಲ್ಲಾ ಮಾಡಿತು. ಕನಸುಗಳನ್ನು ಕೊಟ್ಟಿತು. ಅಂತೆಯೇ ಅದರತ್ತ ಹಾರುದ ರೆಕ್ಕೆಗಳನ್ನೂ ಕೊಟ್ಟಿತು. ಆ ರೆಕ್ಕೆಗಳೇ ನನ್ನನ್ನು ಕ್ಯೂಬಾದ ಒಳಗೆ ಇಳಿಸಿತು.








Very nice article Sir.
sir… cuba moolaka ondu adbhuta chalu valiyannee nenapisidiri. Hoorata sadaa
nammondigirabeekaada moulya. adara bisi
mattu Teevrateyannu naavu kaledukolla
baaradu allave ?
It is high time we in India needed a leader like CHE.The one rupee nation still not surrendered to the mighty America and we in India in spite of our huge population and strength surrendered all our self respect and become blind follower of Anerica to feed their greed and get our greed fulfilled by exploiting the common man instead of helping the poor
ಮನಸ್ಸಿಗೆ ತುಂಬಾ ಹಿಡಿಸಿದ ನಿರೂಪಣಾ ಶೈಲಿ. ಮತ್ತಷ್ಟು ಉಣಬಡಿಸಿ. ಚೆನ್ನಾಗಿದೆ ಕ್ಯೂಬಾ ಚಿತ್ರಣ. ಗಾಂಧಿಯ ಚಿತ್ರವಿರುವ ಒಂದು ರೂಪಾಯಿ ನಾಣ್ಯದಲ್ಲಿ ಬದುಕಿನ ವಿಳಾಸ ಹುಡುಕಿದ ಬಂಡಿ.
ತುಂಬ ದಿನಗಳ ನಂತರ ಮತ್ತೆ ಓದಿದೆ. ಇದನ್ನು ಮುಂದುವರಿಸಿ. ವಾರಕ್ಕೊಂದು ಅಧ್ಯಾಯ ಹಾಕಿ. ಕನ್ನಡ ಅತ್ಯುತ್ತಮ ಪ್ರವಾಸ ಕಥನಗಳಲ್ಲಿ ಇದೂ ಒಂದು.
ede muttuva baraha…. che nu mattomme chitrisiddakke dhanyavadagalu….
ಜೋಗಿ ಸರ್ ಮಾತಿಗೆ ಒಂದು ಲೈಕು
ಎಲ್ಲವನ್ನೂ -ನೋವು, ನರಳಿಕೆ ಅತೃಪ್ತಿಗಳನ್ನೂ ಸರಕನ್ನಾಗಿಸಿ ಮಾರುವ ಈಗಿನ ಜಾಗತಿಕ ರಾಜಕಾರಣದಲ್ಲಿ ದುಡಿಯುವ ಜನರ ದನಿಗೆ ಸ್ಥಳಾವಕಾಶ ದಿನೇ ದಿನೇ ಕಿರಿದಾಗುತ್ತಾ ಹೋಗುತ್ತಿದೆ.ನಿಮ್ಮ ಪುಸ್ತಕ ‘ನನ್ನೊಳಗಿನ ಕ್ಯೂಬಾ’ ಮತ್ತು ಮೇ ದಿನಾಚರಣೆಯ ಸಂದರ್ಭದ ಲೇಖನ ದುಡಿಯುವ ಜನರ ಬೆಂಬಲಕ್ಕೆ ನಿಲ್ಲುವವರಿಗೆ ಹೊಸ ಆಸೆ-ಭರವಸೆಗಳನ್ನು ಮೂಡಿಸುತ್ತವೆ.ದೇವನೂರರ ಸಂಪಾದಕತ್ವದಲ್ಲಿ ಪ್ರಜಾವಾಣಿ ಪ್ರಕಟವಾದಾಗ ಶಾಂತಕುಮಾರರನ್ನು ಅಭಿನಂದಿಸಿ ಮೇ ದಿನದ ಸಂದರ್ಭದಲ್ಲೂ ಪ್ರಜಾವಾಣಿ ಇಂಥದೊಂದು ಪ್ರಯತ್ನ ಮಾಡಲಿ ಎಂದು ಆಶಿಸಿದ್ದೆ. ಯಾಕೋ ನನ್ನ ಸಲಹೆಗೆ ಮಾನ್ಯತೆ ಸಿಗಲಿಲ್ಲ. ಪ್ರಜಾವಾಣಿಗೆ ಸಾಧ್ಯವಾಗದ ಕೆಲಸವನ್ನು ನಿಮ್ಮದೇ ಮಿತಿಗಳೊಳಗೆ ನೀವು ಮಾಡಿದ್ದೀರಿ.ಅಭಿನಂದನೆಗಳು.ಈ ಧೋರಣೆಯನ್ನು ವ್ಯಾಪಕವಾಗಿ ಮುಂದುವರೆಸಿ ಎಂದು ಕೋರುವ…
ವಿ.ಎನ್.ಲಕ್ಷ್ಮೀನಾರಾಯಣ
ಜೋಗಿ ಸರ್ ಹೇಳಿದ್ದು ನಿಜವಾಗಿಯೂ ಒಳ್ಳೆಯ ಮಾತು. ಈ ಪ್ರವಾಸ ಕಥನ ತುಂಬಾನೇ ಸುಂದರವಾಗಿದೆ. ಹಾಗೇನೆ ನಿಮ್ಮ ಬರೆಯುವ ಶೈಲಿ. ಅದಕ್ಕಾಗಿ ಇದನ್ನು ವಾರಕ್ಕೊಂದು ಅಧ್ಯಾಯದ ಹಾಗೆ ಮುಂದುವರಿಸಿ ಕೊಂಡು ಹೋಗಿ.
Matte odide. Matte ashte paravashalaade!
Thanks mohan
ಪ್ರತಿ ವರುಷ ಓದಿದರೂ ಮತ್ತೆ ಮತ್ತೆ ಓದಿಸಿಕೊಂಡು ಹೋಗುತ್ತದೆ.
ಈ ಮನ ಮತ್ತೆ ಮೇ ದಿನಾಚರಣೆಗೆ ಸಜ್ಜಾಗುತ್ತದೆ!
ಮೇ ೧ ಕಾರ್ಮಿಕರಿಗೆ ರಜೆಯೆಂದು ತಿಳಿದಿದ್ದೆ. ಆದರೆ ಇದರ ಹಿಂದೊಂದು ಕತೆ ಓದಿ ಖುಷಿಪಟ್ಟೆ. ವಂದನೆಗಳು.
Nimma Lekhana Thumba Istavayitu. Newyork Neladalli Bidda Rakthada Hanigalannu Oresalagide. Aa Raktha Rikthavagi Namma Hegaligidalagide. Cuba Americada Amaraagide,Bharat Americakke Badivaravagide. May 1 Illi Kevala Rajaadina. Kaayonave Cubharatgaagi?
ಜಿ ಎನ್ ಮೋಹನ್ ನಿಮ್ಮ ಬರಹದಲ್ಲಿ ಕ್ಯೂಬಾವನ್ನು ಕಡೆದು ಕಣ್ಣಮುಂದೆ ನಿಲ್ಲಿಸಿರುವಿರಿ,
ನಿಮ್ಮ ಪ್ರವಾಸ ಕಥನ ಕನ್ನಡದ ಅಪರೂಪದ ಪ್ರವಾಸ ಕಥನಗಳಲ್ಲೊಂದು ನಿಸ್ಸಂದೇಹವಾಗಿ,
ನಿಮ್ಮ ಬರಹ ಓದುತ್ತಿದ್ದಂತೆ ನೆರೆಯ ಹರಿಹರ ದಾವಣಗೆರೆಗಳಲ್ಲಿ ಮುಚ್ಚಿರುವ ಹತ್ತಾರು ಕಾರ್ಖಾನೆಗಳು
ಬೀದಿಪಾಲಾಗಿರುವ ಸಾವಿರಾರು ಕಾರ್ಮಿಕರು ನೆನಪಾದರು, ಅಭಿನಂದನೆಗಳು
ಕುಂವೀ
ಔದ್ಯಮಿಕ ಕ್ರಾಂತಿಯಲ್ಲಿ ಜನ್ಮತಾಳಿದ ಶೋಷಕವರ್ಗವಾದ ಬಂಡವಳಿಗರು ಮತ್ತು ಶೋಷಿತ ವರ್ಗವಾದ ಕಾರ್ಮಿಕರು ಇಂದಿಗೂ ನಿರಂತರ ಸಂಘರ್ಷದಲ್ಲಿ ತೊಡಗಿದ್ದಾರೆ.ದೈಹಿಕ ಶ್ರಮವೇ ಪ್ರಧಾನವಾಗಿದ್ದ ಕಾಲದಲ್ಲಿ ಯಂತ್ರಗಳ ಚಕ್ರದಡಿ ಸಿಕ್ಕು 12,14 ಗಂಟೆಗಳ ಕಾಲ ದುಡಿಯುತ್ತಿದ್ದ ಶ್ರಮಿಕರು 1886 ರ ಶಿಕಾಗೋದ ಹೇ ಮಾರ್ಕೆಟ್ಟಿನಲ್ಲಿ ಪ್ರಾಣತೆತ್ತು ಪಡೆದಿದ್ದ 8 ಗಂಟೆ ಅವಧಿಯ ದುಡಿಮೆಯಿಂದ ಭೌತಿಕ ಸಂಪತ್ತನ್ನು ಸೃಷ್ಟಿಸುತ್ತಿದ್ದರು.ಕಾಲಕ್ರಮದಲ್ಲಿ ಬಂಡವಳಿಗರು ಭೌತಿಕ ಸಂಪತ್ತಿನ ಒಡೆಯರಾಗಿ ಕೊನೆಯಿಲ್ಲದ ಲಾಭಲಾಲಸೆಗೆ ಬಲಿಯಾಗಿ ಬಂಡವಾಳವಾದವನ್ನು ಸಾಮ್ರಾಜ್ಯಶಾಹಿಯನ್ನಾಗಿ ವಿಸ್ತರಿಸಿಕೊಂಡರು. 21ನೇ ಶತಮಾನದ ಈ ಕಾಲಘಟ್ಟದಲ್ಲಿ ಜಾಗತಿಕ ಬಂಡವಳಿಗರು ಭೌತಿಕ ಸಂಪತ್ತನ್ನು ಕೊಳ್ಳೆಹೊಡೆಯುತ್ತಲೇ ಅದರಿಂದ ಅಭೌತಿಕ ಸಂಪತ್ತೆಂಬ ಕೃತಕ ಸರಕನ್ನು ಸೃಷ್ಟಿಮಾಡಿಕೊಂಡು ಬೌದ್ಧಿಕ ಆಸ್ತಿಯೆಂಬ ಅಭೌತಿಕ ಸಂಪತ್ತಿನ ಒಡೆಯರಾಗಿ, ಈಗಾಗಲೇ ಇರುವ ಮೆನೀಯಲ್, ಮಾನುಯಲ್, ಬ್ಲೂಕಾಲರ್, ವೈಟ್ ಕಾಲರ್ ಮತ್ತು ಬೌದ್ಧಿಕ ಕಾರ್ಮಿಕರೆಂಬ ಹಳಬರ ಜೊತೆಗೆ ಅಭೌತಿಕ ಶ್ರಮಿಕರಾಗಿರುವ ಐಟಿಬಿಟಿ ಕೂಲಿಗಳೆಂಬ ಹೊಸಬಗೆಯ ಕಾರ್ಮಿಕರ ಸೃಷ್ಟಿಗೆ ಕಾರಣರಾಗಿದ್ದಾರೆ.ನಿರಂತರ ನಯವಂಚನೆ, ಅದಕ್ಕೆ ಮಾನ್ಯತೆಯೊದಗಿಸುವ ಕಾನೂನುಗಳ ಬಲದಿಂದ 8 ಗಂಟೆ ಅವಧಿಯ ದುಡಿಮೆಯನ್ನು ಮತ್ತೆ 12,14,16 ಗಂಟೆಗಳಿಗೆ ವಿಸ್ತರಿಸಿ ಶ್ರಮಿಕರ ಕಷ್ಟವನ್ನು ಮತ್ತೆ 19ನೇ ಶತಮಾನದ ಮಟ್ಟಕ್ಕೆ ದೂಡಿದ್ದಾರೆ.ಗುತ್ತಿಗೆ ಕೆಲಸ, ಹೊರಗುತ್ತಿಗೆ ಕೆಲಸ, ಪ್ರಾಜೆಕ್ಟ್ ಆಧಾರಿತ ಕೆಲಸ ಎಂದೆಲ್ಲಾ ವಿಭಜಿಸಿ ಹೆಚ್ಚು ದುಡಿಮೆ, ಹೆಚ್ಚು ಅವಧಿ ಆದರೆ ಹಣದುಬ್ಬರ-ವಿದೇಶೀ ಸಾಲಕ್ಕೆ ಸಿಕ್ಕಿದ ಹೆಚ್ಚು ವೇತನ ಅಂದರೆ ಕಡಿಮೆ ಮೌಲ್ಯದ ಸಂಬಳ ಕೊಟ್ಟು ಶ್ರಮಿಕರ ಜೀವನವನ್ನು ಮತ್ತೆ ನರಕ ಸದೃಶ ಯಾತನೆಗೆ ತಳ್ಳಿದ್ದಾರೆ. ದಿನಕ್ಕೆ 200 ರೂ ಪಡೆಯುವ ಭೌತಿಕ ಶ್ರಮದ ದಿನಗೂಲಿ ಗುತ್ತಿಗೆ ಕಾರ್ಮಿಕ ಮತ್ತು ತಿಂಗಳಿಗೆ ಲಕ್ಷರೂ ವೇತನ ಪಡೆಯುವ ಅಭೌತಿಕ ಶ್ರಮದ ಐಟಿ ಬಿಟಿಯ ಉದ್ಯೋಗಿ ಇಬ್ಬರೂ ಕೆಲಸದ ಭದ್ರತೆಯ ವಿಷಯದಲ್ಲಿ ಸಮಾನ ದುಃಖಿಗಳು. ಮಾಲೀಕ ‘ನಾಳೆಯಿಂದ ಕೆಲಸಕ್ಕೆ ಬರಬೇಡ’ಎಂದರೆ ಯಾಕೆ? ಎಂದು ಕೇಳುವ ಹಕ್ಕನ್ನು ಇಬ್ಬರೂ ಕಳೆದುಕೊಂಡಿದ್ದಾರೆ. ಆದ್ದರಿಂದ ಮೊದಲಿನಂತೆ ಸಂಘಟಿತ ಕಾರ್ಮಿಕರು-ಅಸಂಘಟಿತ ಕಾರ್ಮಿಕರು ಎಂದು ಭಾಗ ಮಾಡಿಸಿಕೊಂಡು ಹೋರಾಟದ ಶಕ್ತಿಯನ್ನು ಕುಂದಿಸಿಕೊಳ್ಳದೆ, ಎಲ್ಲ ಬಗೆಯ ಕಾರ್ಮಿಕರನ್ನೂ, ಕಟ್ಟಡ ಕಾರ್ಮಿಕರು, ಕೃಷಿಕಾರ್ಮಿಕರನ್ನೂ ಒಳಗೊಂಡಂತೆ ಒಂದುಗೂಡಿಸಿ ದಿನಕ್ಕೆ 5 ಗಂಟೆಯ ಅವಧಿಯ ಕೆಲಸಕ್ಕೆ, 5 ದಿನ ಕೆಲಸದ ವಾರಕ್ಕಾಗಿ ಹೋರಾಡಬೇಕಾದ ಕಾಲ ಬಂದಿದೆ.ಕೆಲಸದ ಅವಧಿಯನ್ನು ಕಡಿಮೆ ಮಾಡುವುದರಿಂದ ಮಿಗತೆ ಮೌಲ್ಯದ ಅನಿಯಮಿತ ವೃದ್ಧಿಗೆ ಕಡಿವಾಣ ಬೀಳುವುದಲ್ಲದೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಬಂಡವಳಿಗರ ಐಕ್ಯತೆಯ, ಶ್ರಮಿಕರ ಛಿದ್ರತೆಯ ಈ ತಲೆಕೆಳಗಾದ ಕಾಲದಲ್ಲಿ ಮೇ ದಿನಾಚರಣೆಗೆ ಎಂದಿಗಿಂತ ಹೆಚ್ಚಿನ ಮಹತ್ವ ಬಂದಿದೆ.
ಬಹುಶಃ ನಾನು ನನ್ನೊಳಗಿನ ಹಾಡು ಕ್ಯೂಬಾ ಪುಸ್ತಕವನ್ನು ಐದು ಬಾರಿ ಖರೀದಿಸಿರಬಹುದು. ಅಸ್ಟೂ ಬಾರಿ ಕಳೆದು ಹೋಯಿತು. ಮತ್ತೊಂದನ್ನು ಖರೀದಿಸಿದ್ದೇನೆ. ಮತ್ತೇ ಓದಿದೆ. ಅಷ್ಟಕ್ಕೂ ಈ ಟೀವಿಗೆ ಸೇರುವ ಮುನ್ನ ಬರೆದ ಟೆಸ್ಟ್ನಲ್ಲಿ ಈ ಪುಸ್ತಕದ ಬಗ್ಗೆ ಬರೆದಿದ್ದೆ. ಅಗಷ್ಟೇ ತಾನೇ ಈ ಪುಸ್ತಕಕ್ಕೆ ಉತ್ತಮ ಪ್ರವಾಸ ಕಥನ ಪ್ರಶಸ್ತಿ ಬಂದಿತ್ತು.
ಆ ಒಂದು ರೂಪಾಯಿ ಏನೆಲ್ಲಾ ಮಾಡಿತು. ಕನಸುಗಳನ್ನು ಕೊಟ್ಟಿತು. ಅಂತೆಯೇ ಅದರತ್ತ ಹಾರುದ ರೆಕ್ಕೆಗಳನ್ನೂ ಕೊಟ್ಟಿತು. ಆ ರೆಕ್ಕೆಗಳೇ ನನ್ನನ್ನು ಕ್ಯೂಬಾದ ಒಳಗೆ ಇಳಿಸಿತು.
sir.. ondu rupee keval coin boxge simitavalla… super sir.. thank you..