ಗುಬ್ಬಚ್ಚಿ ಸತೀಶ್
ಅವಳ ಹೆಸರು ಪೃಥ್ವಿ. ಪೃಥ್ವಿ ಎಂದ ಮೇಲೆ ಕೇಳಬೇಕೆ? ಪೃಥ್ವಿಯಷ್ಟೇ ಸುಂದರವಾಗಿದ್ದಳು. ಗೆಳೆಯ ಮೋಹನ ನನಗೆ ಅವಳನ್ನು ಮೊದಲ ಬಾರಿಗೆ ತೋರಿಸಿದಾಗ, ಆ ಕ್ಷಣವೇ ನಾನವಳ ಸುತ್ತಾ ಒಂದು ರೌಂಡು ಹೊಡೆದಿದ್ದೆ.
ಮೋಹನ ನನ್ನ ಜೀವದ ಗೆಳೆಯ. ಗೆಳೆಯರೆಂದರೆ ಕಡಲತಡಿಯ ಮುತ್ತುಗಳೆಂದೇ ನನ್ನ ಭಾವನೆ. ಅಂತಹದರಲ್ಲಿ ಜೀವದ ಗೆಳೆಯನೆಂದ ಮೇಲೆ ಕೇಳಬೇಕೆ? ಅವನು ನನ್ನ ಜೀವನದ ಅಮೂಲ್ಯ ಮುತ್ತಾಗಿದ್ದ! ನಾನು ಪ್ರತಿ ಭಾನುವಾರ ತಿಂಡಿ ತಿಂದೊಡನೆಯೇ ಮೋಹನನ ಮನೆಗೆ ಹೋಗುತ್ತಿದ್ದೆ. ಆ ಸಮಯದಲ್ಲಿ ಅವರ ಮನೆಯಲ್ಲಿ ತಿಂಡಿ ರೆಡಿಯಾಗಿರುತ್ತಿತ್ತು. ಏನಾದರೂ ವಿಶೇಷವಾದರೆ ಅಲ್ಲಿಯೂ ಸ್ವಲ್ಪ ತಿಂಡಿ ತಿನ್ನುತ್ತಿದ್ದೆ. ಆ ಮನೆಯಲ್ಲಿದ್ದವರು ಮೋಹನ ಮತ್ತು ಆತನ ತಾಯಿ ಮಾತ್ರ. ಮೋಹನನ ತಂದೆ ಅವನು ಚಿಕ್ಕವನ್ನಿದ್ದಾಗಲೇ ತೀರಿಕೊಂಡಿದ್ದರು. ಅಂದು ನಾ ಅವರ ಮನೆಗೆ ಹೋದಾಗ ಅವನ ಮನೆಯಲ್ಲಿ ರಾಗಿ ರೊಟ್ಟಿ, ಕಾಯಿ ಚಟ್ನಿ ಮಾಡಿದ್ದರು. ಮನೆಯಲ್ಲಿ ಮೂರು ಅಕ್ಕಿ ರೊಟ್ಟಿ ತಿಂದಿದ್ದರೂ ಒಂದು ರಾಗಿ ರೊಟ್ಟಿಯನ್ನು ತಿಂದೆ.
ಮೋಹನನೂ ತಿಂಡಿ ತಿಂದ ಬಳಿಕ ನಾವಿಬ್ಬರೂ ಅವನ ಮನೆಯ ಮಹಡಿಗೆ ಹೋದೆವು. ಯಾವಾಗಲೂ ನಾವು ಇದೇ ಕೆಲಸವನ್ನು ಮಾಡುತ್ತಿದ್ದೆವು. ಎರಡನೇ ಪಿ.ಯು.ಸಿ.ಯಲ್ಲಿ ನಾನೊಂದು, ಅವನೆರಡು ವಿಷಯಗಳಲ್ಲಿ ಫೇಲಾದ ಮೇಲೆ ಇದು ನಮಗೆ ಹವ್ಯಾಸವಾಗಿತ್ತು. ಅಲ್ಲಿ ನನಗೆ ಮೋಹನನು ಸಂಗ್ರಹಿಸಿದ್ದ ಪುಸ್ತಕಗಳ ಮೇಲೆ ಕಣ್ಣು. ಆ ರೂಮಿನ ತುಂಬಾ ಹಲವು ಪುಸ್ತಕಗಳು, ಮ್ಯಾಗಜೀನ್ಗಳು, ಕ್ಯಾಸೆಟ್, ಸಿಡಿಗಳು ತುಂಬಿರುತ್ತಿದ್ದವು. ಅವನಿಗೆ ಪುಸ್ತಕಗಳ ಮೇಲಿದ್ದ ಪ್ರೀತಿ ಅವುಗಳ ಓದಿನ ಕಡೆಗಿರಲಿಲ್ಲ. ಆದರೆ ಸಂಗೀತದ ಮೇಲಿತ್ತು. ಹಳೆಯ ಹಿಂದಿ, ಕನ್ನಡ ಚಿತ್ರಗೀತೆಗಳನ್ನು ಅಕ್ಕರೆಯಿಂದ ಕೇಳಿಸುತ್ತಿದ್ದ. ಅವನು ತಂದ ಹೊಸತೇನಿದ್ದರೂ ನನಗೆ ತೋರಿಸುತ್ತಿದ್ದ. ಏನನ್ನೋ ಹುಡುಕುತ್ತಿದ್ದವನಂತೆ ಕಾಣುತ್ತಿದ್ದವನು, ನಿಧಾನವಾಗಿ ಕಿಟಕಿಯ ಬಳಿ ಹೋಗಿ ನಿಂತ. ಆ ವಾರದ ಇಂಡಿಯಾ ಟುಡೇ ತಿರುವಿ ಹಾಕುತ್ತಾ ಹೊಸದನ್ನೆನಾದರೂ ತೋರಿಸುತ್ತಾನೆಂಬ ಕುತೂಹಲದಿಂದ ನಾನು ಅವನನ್ನೇ ಗಮನಿಸುತ್ತಿದ್ದೆ. ಅಂದು ಹೊಸದೇನೂ ಇರಲಿಲ್ಲವೆಂದು ಕಾಣುತ್ತದೆ. ಅವನು ಕಿಟಕಿಯ ಬಳಿ ಹೋದಾಗ ಟುಡೇಯ ಪುಟವೊಂದರಲ್ಲಿ ನಾನು ಮಗ್ನನಾದೆ.

ರವಿ, ಏ ರವಿ! ಬಾಯಿಲ್ಲಿ ಮೋಹನ ತುಸು ಜೋರಾಗಿಯೇ ನನ್ನನ್ನು ಕರೆದ.
ಅವನ ಕರೆಗೆ ಗಾಬರಿಗೊಂಡ ನಾನು ಏನೋ? ಎಂದವನೇ ಟುಡೆಯನ್ನು ಎತ್ತಿಟ್ಟು ಅವನು ನಿಂತಿದ್ದ ಕಿಟಕಿಯ ಬಳಿ ಹೋದೆ.
ಅಲ್ನೋಡಲ್ಲಿ ಎಂದು ಕಿಟಕಿಯಿಂದಾಚೆ ಎರಡು ಮನೆಯ ಬಳಿಕ ಟೆರೇಸ್ ಮೇಲಿದ್ದ ಹುಡುಗಿಯನ್ನು ತೋರಿಸಿದ. ಅವಳು ಆಗಷ್ಟೇ ತಲೆ ಸ್ನಾನ ಮಾಡಿ ಬಂದಿದ್ದಳು ಎಂದೆನಿಸುತ್ತದೆ. ನೀಲಿ ಬಣ್ಣದ ಚೂಡಿ ತೊಟ್ಟಿದ್ದ ಅವಳು ತಲೆಯನ್ನು ಒರೆಸಿಕೊಳ್ಳುತ್ತಿದ್ದಳು. ಹಾಗೇ ಒರೆಸಿಕೊಳ್ಳುತ್ತಾ ನಮ್ಮ ಕಿಟಕಿಯ ಕಡೆ ಮುಖ ತಿರುಗಿಸಿದಾಗ ನಾನು ನಿಂತಲ್ಲೇ ಅವಳ ಸುತ್ತಾ ಗಿರಕಿ ಹೊಡೆದೆ.
ಅವಳ ಹೆಸರು ಪೃಥ್ವಿ! ಎಂದ ಮೋಹನ ಮೆಲ್ಲುಸಿರೆಳೆದ.
ನಾನು ಕಣ್ಣು ಮಿಟುಕಿಸದೆ ಅವಳನ್ನೇ ನೋಡುತ್ತಿದ್ದೆ. ಅಲ್ಲಿಂದ ಲಗುಬಗೆಯಲ್ಲಿ ತೆರಳಿದ ಮೋಹನ ಕ್ಷಣಾರ್ಧದಲ್ಲಿ ಅವನ ಬೈನಾಕ್ಯುಲರ್ ತಂದು ಅವಳನ್ನೇ ನೋಡಲಾರಂಭಿಸಿದ. ನನಗೂ ಬೈನಾಕ್ಯುಲರ್ ಕೊಡುತ್ತಾನೆಂದು ಕಾದರೆ ಕೊಡುವವನಂತೆ ಕಾಣಲಿಲ್ಲ. ಸರಿ ನಾನು ನನ್ನ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ ನೋಡಿದ್ದೆ ಬಂತು. ಸ್ವಲ್ಪ ಹೊತ್ತಿನ ನಂತರ ಅವಳು ಟೆರೇಸಿಗೆ ಬಂದ ಕೆಲಸ ಮುಗಿದವಳಂತೆ ಅಲ್ಲಿಂದ ಹೊರಟು ಹೋದಳು.
ಮೋಹನ ಬೇಸರದಿಂದ ಬೈನಾಕ್ಯುಲರನ್ನು ಕೆಳಗಿಳಿಸುತ್ತಾ ಹಿಂದೆ ಸರಿದು ಅಲ್ಲೇ ಇದ್ದ ದಿವಾನದ ಮೇಲೆ ಕುಳಿತ. ನಾನೂ ಅವನ ಪಕ್ಕವೇ ಬಂದು ಕುಳಿತೆ.
ಪೃಥ್ವಿ ಈಗ ಫಸ್ಟ್ ಪಿ.ಯು. ಕಣೋ. ಈ ನಡುವೆ, ಯಾಕೋ, ಏನೋ ಆವಾಗವಾಗ ನಮ್ಮನೆಗೆ ಬರ್ತಾಳೆ. ನಮ್ಮನೇ ಮುಂದಿರೋ ಹೂಗಳನ್ನು ಕಿತ್ಕೊಂಡು ಹೋಗ್ತಾಳೆ. ಮನೇಗ್ ಬಂದಾಗ ಅಮ್ಮನ ಜತೆ ನಗ್ತಾ ನಗ್ತಾ ಮಾತಾಡ್ತಾಳೆ. ಪೃಥ್ವಿ ಚೆನ್ನಾಗಿದ್ದಾಳಲ್ವೇನೋ? ಎಂದ.
ಎಲಾ ಮಗನೇ! ಮನೆ ಮುಂದಿರೋ ಹೂವಿನ ಗಿಡಗಳಲ್ಲಿ ಒಂದೀನಾನೂ ನಿಮ್ಮಮ್ಮನಿಗೇ ಒಂದು ಹೂ ಕಿತ್ಕೋಳಕ್ಕೆ ಬಿಟ್ಟೋನಲ್ಲ ನೀನು. ಅಂತಾದ್ರಲ್ಲಿ… ಎಂದು ಮನದಲ್ಲೇ ಅಂದುಕೊಳ್ಳುತ್ತಾ, ಚೆನ್ನಾಗಿದ್ದಾಳೆ ಸರಿ. ಅದಕ್ಕೇನಿಗ? ಎಂದು ನಗುತ್ತಾ ಕೇಳಿದೆ.
ಅವನಿಗ್ಯಾಕೋ ಪೃಥ್ವಿ ಚೆನ್ನಾಗಿದ್ದಾಳೆ ಎಂದು ನಾನು ಹೇಳಿದ್ದು ಅಷ್ಟು ಸರಿ ಕಾಣಲಿಲ್ಲವೆಂದು ಕಾಣುತ್ತದೆ. ಸರಿ ಬಾ, ಟಿ. ರಘು ಮನೆಗೆ ಹೋಗೋಣ ಎಂದು ದಡಬಡನೆ ಕೆಳಗಿಳಿದ.
ಟಿ. ರಘು ಎಂದರೆ ರಾಘವ. ಅದಾಗಲೇ ಅವನು ಸ್ವಲ್ಪ ತಿಕ್ಕಲು ಎಂದು ಹೆಸರುವಾಸಿಯಾದ್ದರಿಂದ ಟಿ ಎಂದರೆ ತಿಕ್ಕಲ ಎಂದು ಆತ್ಮೀಯ ಗೆಳೆಯರು ಕರೆಯುತ್ತಿದುದು ಟಿ. ರಘು ಎಂದೇ! ಅವನೂ ನಮ್ಮಂತೆ ಪಿ.ಯು.ಸಿ.ಯಲ್ಲಿ ಫೇಲಾಗಿದ್ದ. ಅವನ ಹುಚ್ಚಾಟಕ್ಕೆ ಉದಾಹರಣೆಯೆಂದರೆ, ಅವರ ಮನೆಗೆ ಯಾರಾದರೂ ಹೋದರೆ ಅವನಪ್ಪನೋ, ಅವನಮ್ಮನೋ ಅಥವಾ ಅವನ ಅಣ್ಣನೋ ಊಟ ಮಾಡಿ, ತಿಂಡಿ ತಿನ್ನಿ ಎಂದರೆ, ಬಂದವರು ಲೋಕಾರೂಢಿಯಂತೆ ಬೇಡವೆನ್ನುತ್ತಿದ್ದರು. ಆಗ ಇವನು ಬಂದವರು ಹೆಂಗಸೋ, ಗಂಡಸೋ ಸರಿಯಾಗಿ ನೋಡದೆ ಕೈ ಹಿಡಿದುಕೊಂಡು ದರದರನೆ ಊಟದ ಮನೆಗೆ ಎಳೆದೊಯ್ದು ಬಿಡುತ್ತಿದ್ದನು. ಬಂದವರು ಬೆಸ್ತು ಬೀಳುತ್ತಿದ್ದರು.
ದಡಬಡನೆ ಇಳಿದ ಮೋಹನನ ಹಿಂದೆಯೇ ನಾನೂ ಇಳಿದು, ನಾವಿಬ್ಬರೂ ರಘುವಿನ ಮನೆಗೆ ಹೋದೆವು. ಸಾಮಾನ್ಯವಾಗಿ ನಾವೆಲ್ಲರೂ ಸೇರಿ ಭಾನುವಾರದಂದು ಚೆಸ್ಸೋ, ಕೇರಮ್ಮೋ ಆಡುತ್ತಿದ್ದೆವು.
ಅಂದು ಅದಾಗಲೇ ರಘು ಕೇರಂ ಬೋರ್ಡ್ನೊಂದಿಗೆ ಅಣಿಯಾಗಿದ್ದ. ರಘು ಒಬ್ಬನೇ ಕುಳಿತಿದ್ದನ್ನು ಗಮನಿಸಿದ ನಾನು, ಏನೋ ರಘು, ನಾಗಣ್ಣ ಎಲ್ಲಿ?’ ಎಂದು ಕೇಳಿದ್ದಕ್ಕೆ, ಅಣ್ಣ ಊರಿಗೆ ಹೋಗವ್ನೆ ಕಣ್ರಿ, ಬನ್ನಿ ನಾವೇ ಆಡೋಣ’ ಎಂದು ಯಾಕೋ ಸಿಡುಕಿದವನಂತೆ ಕಂಡನು.
ಮೂರೇ ಜನ ಹೇಗೋ ಆಡೋದು? ಎಂದು ನಾನಂದ ಕ್ಷಣಕ್ಕೆ, ರಘು ಎಂಬ ಮಧುರ ದ್ವನಿಯೊಂದು ತೇಲಿಬಂತು.
ನಾವೆಲ್ಲರೂ ಹಿಂದಿರುಗಿ, ಬಂದ ಮಧುರ ದ್ವನಿಯತ್ತ ನೋಡಲು, ಪೃಥ್ವಿ ಅಂದವಾಗಿ ಡ್ರೆಸ್ ಮಾಡಿಕೊಂಡು ನಿಂತಿದ್ದಳು.
ನಾವೆಲ್ಲಾ ನೋಡುತ್ತಿದ್ದಂತೆಯೇ ಕೇರಂ ಬೋರ್ಡ್ ಬಳಿ ಬಂದವಳೇ, ನಾನು ರಘುವಿನ ಜೋಡಿಯೆಂದು ಅವನ ಎದುರಿಗೇ ಕುಳಿತುಬಿಟ್ಟಳು. ಅವಳ ಮಾತನ್ನು ಕೇಳಿ ಮೋಹನ ಕೈ ಹಿಸುಕಿಕೊಂಡನು. ಎಂದಿನಂತೆಯೇ ನಾನು ಮೋಹನನ ಜೊತೆಯಾಗಬೇಕಾಗಿ ಬಂತು.
ಆಟ ಶುರುವಾಯಿತು. ಮೋಹನ ನನ್ನ ಎದುರಿಗೆ, ರಘು ನನ್ನ ಬಲಕ್ಕೆ, ಪೃಥ್ವಿ ನನ್ನ ಎಡಕ್ಕೆ ಕುಳಿತರು. ರಘುವೇ ಒಂದು ವೈಟ್ ಪಾನ್, ಒಂದು ಬ್ಲಾಕ್ ಪಾನನ್ನು ತೆಗೆದುಕೊಂಡು, ತನ್ನೆರೆಡು ಕೈಗಳನ್ನು ಹಿಂದಕ್ಕೆ ಹಿಡಿದು ಎನೋ ಮ್ಯಾಜಿಕ್ ಮಾಡುವವನಂತೆ ಮಾಡಿ ಎರಡು ಕೈಗಳನ್ನೂ ಮುಚ್ಚಿ ನನ್ನೆದುರಿಗೆ ಹಿಡಿದನು. ಆ ಕ್ಷಣದಲ್ಲಿಯೇ ಟಾಸ್ ನಾವೇ ಗೆಲ್ಲಬೇಕೆಂದುಕೊಳ್ಳುತ್ತಾ ಮನದಲ್ಲಿ ಗಣಪತಿಯನ್ನು ಪ್ರಾರ್ಥಿಸುತ್ತಾ ಅವನ ಬಲಗೈಯನ್ನು ಮುಟ್ಟಿ, ವೈಟ್ ಎಂದೆ. ಅವನು ಕೈ ಬಿಡಿಸಿ ತೋರಿಸಲು ಅಲ್ಲಿ ವೈಟ್ ಪಾನೇ ಇತ್ತು. ನಾವು ಟಾಸ್ ಗೆದ್ದಿದ್ದೆವು.
ನಮ್ಮ ಜೋಡಿ ಟಾಸ್ ಗೆದ್ದರೆ ಮೊದಲ ಶಾಟ್ ಹೊಡಿಯುವುದು ನಾನೇ ಆಗಿದ್ದರಿಂದ ಪಟಪಟಾಂತ ಎಲ್ಲಾ ಪಾನ್ಗಳನ್ನು ಜೋಡಿಸಿ, ಸ್ಟ್ರೈಕರ್ ತೆಗೆದುಕೊಂಡು ಒಂದೇ ಶಾಟಿಗೆ ನಾಲ್ಕು ವೈಟ್ ಪಾನ್ಗಳು ಬೀಳುವಂತೆ ಹೊಡೆದೆ. ಸಾಮಾನ್ಯವಾಗಿ ಮೊದಲ ಶಾಟಿಗೆ ಮೂರೇ ಪಾನ್ಗಳನ್ನು ಬೀಳಿಸುತ್ತಿದ್ದ ನನಗೆ ಅದ್ಯಾವ ಶಕ್ತಿಯ ಪ್ರೇರಣೆಯಿಂದಲೋ ಅಂದು ನಾಲ್ಕು ಪಾನ್ಗಳು ಬಿದ್ದಿದ್ದವು! ನಂತರದ ಶಾಟ್ನಲ್ಲಿ ರೆಡ್ ಪಾನನ್ನು ಹಾಕಿದವನಿಗೆ, ಅದರ ಹಿಂದೆಯೆ ವೈಟ್ ಪಾನನ್ನು ಹಾಕಲಾಗಲಿಲ್ಲ. ಸ್ಟ್ರೈಕರನ್ನು ರಘುವಿಗೆ ಕೊಟ್ಟು ಸುಮ್ಮನೆ ಕುಳಿತೆ.
ಯಾಕೋ ರಘುವಿನ ಕೈ ನಡುಗುತ್ತಿರುವಂತೆ ಕಾಣುತ್ತಿತ್ತು. ಅವನು ಒಂದು ಪಾನನ್ನೂ ಹಾಕಲಿಲ್ಲ. ಮೋಹನನ ಕೈಗೆ ಸ್ಟ್ರೈಕರ್ ಹೋಯಿತು. ಅವನ ಕೈಯೂ ಯಾಕೋ ಸ್ವಲ್ಪ ನಡುಗಿದಂತೆಯೇ ಕಂಡುಬಂತು. ಅವನು ಅದ್ಯಾವ ರೀತಿಯಲ್ಲಿ ಹೊಡೆದನೋ ಬ್ಲಾಕ್ ಪಾನೊಂದು ಪೌಚಿಗೆ ಬಿದ್ದಿತು. ನಾ ಮನದಲ್ಲೇ ನಕ್ಕೆ. ಪೃಥ್ವಿ ಮೆಲ್ಲಗೆ ನಕ್ಕರೆ, ರಘು ಮುನಿಸಿಕೊಂಡವನಂತೆ ಕಂಡ. ಇದರಿಂದ ಮೋಹನನೇನೂ ಬೇಜಾರು ಮಾಡಿಕೊಂಡವನಂತೆ ಕಾಣಲಿಲ್ಲ. ಇದೀಗ ಸ್ಟ್ರೈಕರ್ ಪೃಥ್ವಿಯ ಕೈಯಲ್ಲಿ! ನಾವೆಲ್ಲರೂ ಪೃಥ್ವಿಯ ನುಣುಪಾದ ಬೆಳ್ಳನೆಯ ಬೆರಳುಗಳನ್ನೇ ನೋಡುತ್ತಿದ್ದರೆ, ಅವಳು ಅದ್ಯಾವುದನ್ನು ಗಮನಿಸದೆ ಎರಡು ಬ್ಲಾಕ್ ಪಾನ್ಗಳನ್ನು ಒಂದರ ಹಿಂದೆ ಒಂದರಂತೆ ಹೊಡೆದಳು. ಇದೇ ರೀತಿ ಆಟ ಮುಂದುವರಿದು ಗೆಳೆಯರಿಬ್ಬರೂ ಆಟ ಮರೆತವರಂತೆ ಆಡಿದರು. ಪೃಥ್ವಿಗಿಂತ ನನ್ನ ಕೈ ಮೇಲಾದ್ದರಿಂದ ಅಂದು ನಮ್ಮ ಜೋಡಿಯೇ ಗೆದ್ದಿತು.
ಯಾರು ಗೆದ್ದರೇನು, ಯಾರು ಸೋತರೇನು? ಅಲ್ಲಿ ಬೇರೆಯದೆ ಆಟ ನಡೆಯುತ್ತಿತ್ತು ಎಂದು ನನ್ನ ಗಮನಕ್ಕೆ ಬಂದಿತ್ತು. ನನ್ನ ಗೆಳೆಯರಿಬ್ಬರೂ ಪೃಥ್ವಿಯನ್ನು ಸೆಳೆಯಲು ಹಲವು ಪ್ರಯತ್ನಗಳನ್ನು ಮಾಡಿದ್ದರು. ಹೆಣ್ಣು ನವಿಲನ್ನು ಸೆಳೆಯಲು ಎರಡು ಗಂಡು ನವಿಲುಗಳ ನರ್ತನ! ಸರಿ, ಆಟ ಮುಗಿಯಿತು ಎಂದ ನಾನು ನನ್ನ ಜೊತೆ ಬರಲೊಪ್ಪದ ಮೋಹನನನ್ನು ಬಲವಂತದಿಂದ ಕರೆದುಕೊಂಡು ಹೊರಟೆ. ಯಾವಾಗಲೂ ಊಟಕ್ಕೆ ಒತ್ತಾಯ ಮಾಡುತ್ತಿದ್ದ ರಘು ಅಂದು ಮಾತಿಗೂ ಊಟ ಮಾಡಿ ಹೋಗಿವ್ರಂತೆ ಇರ್ರಿ ಎಂದು ತನ್ನ ಎಂದಿನ ಶೈಲಿಯಲ್ಲಿ ಕೈಹಿಡಿದು ಎಳೆಯಲೇ ಇಲ್ಲ್ಲ!
ದಿನಗಳು, ವಾರಗಳು ಮಿಂಚಿನಂತೆ ಮಾಯವಾಗುತ್ತಿದ್ದವು. ನಮ್ಮ ಕೇರಂ, ಚೆಸ್ ಆಟಗಳು ಆಗಾಗ ನಡೆಯುತ್ತಿದ್ದವು. ಆಡಾಡುತ್ತಲೇ ನಮಗೆಲ್ಲಾ ಪೂರಕ ಪರೀಕ್ಷೆ ಹತ್ತಿರ ಬರತೊಡಗಿತು. ಆದರೆ, ಮೋಹನ ಏಕೋ ಎನೋ ದಿನೇದಿನೇ ಮಂಕಾಗತೊಡಗಿದ. ಹಲವು ಸಲ ಅವನ ಬಳಿ ಈ ವಿಚಾರವಾಗಿ ಮಾತನಾಡಲು ಹೋದರೆ ಮೌನಿಯಾಗಿಬಿಡುತ್ತಿದ್ದ. ನಾನು ಈ ಸಲದ ಪರೀಕ್ಷೆಯಲ್ಲಿ ಫೇಲಾಗಿದ್ದ ಕೆಮಿಸ್ಟ್ರ್ರಿಯಲ್ಲಿ ಶತಾಯಗತಾಯ ಪಾಸಾಗಲೇಬೇಕೆಂದು ಓದಲು ಶುರುಮಾಡಿದ್ದೆ. ಆದರೆ, ಎರಡು ವಿಷಯಗಳಿದ್ದ ಮೋಹನ ಓದಿನ ಕಡೆ ಗಮನಹರಿಸಿದವನಂತೆ ಕಂಡುಬರಲಿಲ್ಲ. ನನಗಿದು ಚಿಂತೆಗೀಡುಮಾಡಿತು.
ಒಂದು ಸಂಜೆ, ಏನಾದರಾಗಲಿ ಇವನ ಚಿಂತೆಗೆ ಕಾರಣವೇನೆಂದು ತಿಳಿದುಕೊಳ್ಳಲೇಬೇಕೆಂದು ಅವನನ್ನು ಒತ್ತಾಯಪೂರ್ವಕವಾಗಿ ಆಟದ ಮೈದಾನದ ಬಳಿ ಕರೆತಂದೆ. ಅಲ್ಲೊಂದು ಮೂಲೆಯಲ್ಲಿ ಅವನನ್ನು ಕುಳ್ಳರಿಸಿಕೊಂಡು ಸಮಾಧಾನವಾಗಿ ಅವನನ್ನು ಈ ವಿಚಾರವಾಗಿ ಕೇಳಿದೆ. ಬಹಳ ಹೊತ್ತು ಮೌನಕ್ಕೆ ಜಾರಿದ. ಎಷ್ಟು ಕೇಳಿದರು ಬಾಯಿ ಬಿಡದ ಪುಣ್ಯಾತ್ಮ ಅಲ್ಲೇಲ್ಲೋ ದೂರದಲ್ಲಿ ಪ್ರೇಮಿಗಳಿಬ್ಬರೂ ಮಾತನಾಡುವುದನ್ನು ನೋಡುತ್ತಾ, ನಾನು ಪೃಥ್ವಿಯನ್ನು ಪ್ರೀತಿಸುತ್ತಿದ್ದೇನೆ! ಎಂದುಬಿಡುವುದೇ?
ಇವನ ನಡತೆಯನ್ನು ಗಮನಿಸಿದ್ದ ನನಗೆ ಅಷ್ಟೇನೂ ಆಶ್ಚರ್ಯವಾಗದಿದ್ದರೂ, ಏನೂ ಅರಿಯದವನಂತೆ, ಸರಿ, ಪ್ರೀತಿಸು. ಆದರೆ, ನೀನೇಕೆ ಯಾವಾಗಲೂ ಏನನ್ನೋ ಯೋಚಿಸುತ್ತಿರುವವನಂತೆ ಇರುತ್ತೀಯಾ? ಮೊದಲಷ್ಟು ನೀನು ಲವಲವಿಕೆಯಿಂದಿಲ್ಲ. ಏಕೆ? ಎಂದು ಕೇಳಿದೆ. ಏಕೆಂದರೆ? ಏನು ಹೇಳುವುದು. ಅವಳು ರಘುವನ್ನು ಪ್ರೀತಿಸುವವಳಂತೆ ಕಾಣುತ್ತ್ತಾಳೆ, ಅದಕ್ಕೆ ಎಂದ. ಓ!… ಹಾಗ ವಿಷಯ! ಎಂದು ಮುಂದುವರೆದ ನಾನು, ಹಾಗದ್ರ್ರೆ ಅವಳನ್ನು ಮರೆತುಬಿಡು. ಬಹುಷಃ ಅವಳು ಅವನನ್ನೇ ಪ್ರೀತಿಸುತ್ತಿರಬಹುದು ಎಂದೆ. ನನ್ನೆಡೆಗೊಮ್ಮೆ ದುರುಗುಟ್ಟಿ ನೋಡಿದ ಅವನು, ಇಲ್ಲಾ, ಎಂದು ಸಿಟ್ಟಿನಿಂದ ಮೆಲ್ಲಗೆ ಅರಿಚಿದ. ಇವನಿಗೆ ಏನೇಳ್ಬೇಕೆಂದು ಸರಿಯಾಗಿ ತೋಚದೆ, ಒಂದು ಕ್ಷಣ ತಡೆದು, ಮೋಹನ ಅರ್ಥಮಾಡ್ಕೋ. ಅವಳು ಅವನನ್ನು ಪ್ರೀತಿಸುತ್ತಿದ್ದರೆ, ನೀನೆಕೆ ಚಿಂತಿಸಿ ನಿನ್ನ ಜೀವನ ಹಾಳು ಮಾಡ್ಕೋತ್ತಿಯಾ? ನಿಂಗೇನಾದ್ರು ಆದ್ರೆ ನಿನ್ನ ತಾಯಿ ಏನಾಗ್ಬೇಕು ಎಂದೆ. ಇಲ್ಲಾ ಕಣೋ… ಎಂದು ಗೊಣಗಿದ ಅವನು ಈ ನನ್ನ ಮಾತಿಗೆಲ್ಲಾ ಜಗ್ಗುವವನಂತೆ ಕಾಣಲಿಲ್ಲ.
ಸರಿ, ಏನು ಮಾಡುವುದೆಂದು ನನಗೀಗ ಚಿಂತೆಗಿಟ್ಟುಕೊಂಡಿತು. ಒಂದೈದು ನಿಮಿಷದ ಬಳಿಕ, ಮೋಹನ… ನಿನಗೆ ಗೊತ್ತಿಲ್ಲ ಅನ್ಸುತ್ತೆ ಕಣೋ. ಅವಳಿಗೆ ರಘು ಗುಲಾಬಿ ಕೊಡೋದನ್ನ ನಾನೇ ನನ್ನ ಕಣ್ಣಾರೆ ಒಂದಿನ ನೋಡಿದ್ದೀನಿ ಎಂದೆ. ಆಗವನು ನನ್ನನ್ನೇ ದಿಟ್ಟಿಸತೊಡಗಿದ. ನಾನು ಮುಂದುವರೆಯುತ್ತಾ, ಅಷ್ಟೇ ಅಲ್ಲಾ ಕಣೋ, ಅವಳು ತುಂಬಾ ಸೋಷಿಯಲ್ ಹುಡುಗಿ. ಒಂದಿನ ಏನಾಯ್ತು ಗೊತ್ತಾ? ಆವತ್ತು ನೀನು ಎಲ್ಲೋ ಹೋಗಿದ್ದೆ. ನಾನು ರಘು ಮನೆಗಾದ್ರು ಹೋಗೋಣ ಅಂತಾ ಹೋದೆ. ಅವನೂ ಇರಲಿಲ್ಲ. ಆದ್ರೆ ಅಂಗಳದಲ್ಲಿ ಕೇರಂ ಬೋರ್ಡ್ ಇತ್ತು. ಯಾರಾದರು ಬರಬಹುದೆಂದು ನಾನು ಅಲ್ಲಿಯೇ ಕುಳಿತಿದ್ದೆ. ಸ್ವಲ್ಪ ಹೊತ್ತಿನ ಬಳಿಕ ಪೃಥ್ವಿ ಬಂದಳು. ಬಂದವಳೇ, ‘ನಾವಿಬ್ರೆ ಆಡೋಣ’ ಎಂದಳು. ನಾನು ಆಯ್ತು ಎಂದೆ. ಕೆಲಹೊತ್ತು ಹೀಗೆ ಮಾತನಾಡುತ್ತಾ ಆಟವಾಡುವಾಗ ಅವಳು, ‘ರವಿ, ನೀವು ಗಡ್ಡ ಬಿಟ್ರೆ ಚೆನ್ನಾಗ್ ಕಾಣ್ತೀರ ಕಣ್ರೀ. ನಿಮ್ಮ ಕೆನ್ನೆಗೊಂದು ಮುತ್ತು ಕೊಡ್ಬೇಕು ಅಂತ ಅನ್ನುಸ್ತಿದೆ’ ಎಂದವಳೇ ನಗುತ್ತಾ ಓಡಿ ಹೋದಳು. ನನಗಂತೂ ಫುಲ್ ಶಾಕ್! ಎಂದು ಒಂದೇ ಉಸಿರಿಗೆ ಹೇಳಿದೆ. ನಾನು ಹೇಳುತ್ತಿದ್ದದ್ದನ್ನು ಕುತೂಹಲದಿಂದಲೇ ಕೇಳುತ್ತಿದ್ದ ಮೋಹನ ಇದ್ದಕ್ಕಿದ್ದಂತೆ ಎದ್ದು, ನನ್ನ ಕಡೆೆಗೆ ಮತ್ತೊಮ್ಮೆ ದುರುಗುಟ್ಟಿ ನೋಡಿ, ಭರಭರನೆ ಮೈದಾನದಿಂದ ಹೊರನಡೆಯತೊಡಗಿದ.
ನಾನೂ ಮನೆಯ ಕಡೆ ಹೆಜ್ಜೆ ಹಾಕತೊಡಗಿದೆ. ಮುತ್ತಿನಂಥ ಗೆಳೆಯನಿಗಾಗಿ ಹೀಗೆ ಹೇಳಿದೆನಾದರೂ ಒಬ್ಬಳು ಹುಡುಗಿಯ ಬಗ್ಗೆ ಸುಮ್ಮಸುಮ್ಮನೆ ಸುಳ್ಳು ಹೇಳಿದೆನಲ್ಲಾ ಎಂದು ಮನಸ್ಸು ನೊಂದುಕೊಳ್ಳುತ್ತಲೇ ಇತ್ತು.
(ಉದಯವಾಣಿಯ ‘ಸಾಪ್ತಾಹಿಕ ಸಂಪದ’ದಲ್ಲಿ ಪ್ರಕಟಿತ)






0 Comments