ತಿರುಪತಿ ಭಂಗಿ
ಸೂರ್ಯಾ ಏಳುಕಿಂತ ಮೊದಲೆದ್ದು, ಕಣ್ಣ ತುಂಬ ತುಂಬಿಕೊಂಡ ಕಣ್ಣಪಿಚ್ಚ ತಕ್ಕೋತ, ಗಡಗ್ಯಾಗಿಂದ ಒಂದ ಚರಗಿ ನೀರ ತುಂಬಕೊಂಡ, ಕರಿಇದ್ದಲಿ ಪುಡಿ ಅಂಗೈಯಾಗ ಹಾಕಿ, ನಡುಬೆರಳಿಂದ ಇದ್ದಲಿಪುಡಿ ಹಚಗೊಂಡ ಕಟ್ಟಿಮ್ಯಾಲ ಕುಂತ ಗಸಾಗಸಾ ಹಲ್ಲ ತಿಕ್ಕಿ, ಸ್ವಚಾಂಗ ಬಾಯಿ, ಮೋತಿ, ತೋಳಕೊಂಡಾಗ ನಮ್ಮ ಅಜ್ಜಿ ಕುಡ್ಯಾಕ ಒಂದಗ್ಲಾಸ ಆಡಿನ ಹಾಲ ಕೊಡತಿದ್ದಳು. ‘ಸಕ್ರಿ’ ಹಾಕ ಸ್ವಲ್ಪ ಅಂತ ಹಟಾಮಾಡಿದಾಗ ಇಡೀ ಡಬ್ಬಿನ ತಂದ ತೋರಸ್ತಿದ್ದಳು. ಅದರಾಗ ಕೂನಕ್ಕೂ ಒಂದ ಹರಳ ಸಕ್ಕರಿ ಇರ್ತಿರಲಿಲ್ಲ. ಬೆಲ್ಲಾ ಅರಾ ಹಾಕ ಅಂತ ಅಳಕೊತ ಕುಂತಾಗ ನನ್ನ ಕಾಟಾ ತಡಿಲಾರ್ದ ಮಗ್ಗಲ ಮನಿ ಯಲ್ಲವನ ಮನಿಗೆ ಹೋಗಿ ‘ಯವ್ವಾ ಒಂದ ಹರಳ ಬೆಲ್ಲಾ ಕೊಡ ನನ್ನ ಮೊಮ್ಮಾಗ ಹಾಲ ಕುಡಿವಲ್ಲ’ ಅಂತ ಅಮ್ಮ ನನಗಾಗಿ ದೈನಾಸ ಬಿಡತಿದ್ದಳು. ‘ಸಲಗಿ ಕೊಟ್ಟ ನಾಯಿ ತೆಲಿಗೇರ್ತಿ’ ಅಂದಾಂಗ ನೀ ಅಂವಗ ಬಾಳ ಸಲಗಿ ಕೊಟ್ಟಿ ಅದಕ ಹಂಗ ಮಾಡ್ತಾನ ಅಂವ, ನಾಕ ಏಟಾ ಕುಂಡಿ ಮ್ಯಾಲ ಹಾಕ ಬಾಡ್ಯಾಗ, ಅಂತ ಬೆಲ್ಲಾ ಕೊಡದೇ ಮಗ್ಗಲಮನಿ ಯಲ್ಲವ್ವ ಉಪದೇಶ ಹೇಳಿ, ನಮ್ಮನ್ಯಾಗೂ ಬೆಲ್ಲ ಇಲ್ಲಂತ ಬುಟಾಳಮಾತಾಡಿ ಅಮ್ಮನ ಬರಿಗೈಲೆ ಕಳಸ್ತಿದ್ದಳು. ಇರ್ಲಿಕ ಬಿಡ್ಲಿ ಬಿಡವ್ವಾ ಅಂತ ನಮ್ಮ ಅಜ್ಜಿ ಮೋತಿ ವನಗಸ್ಕೊಂಡ ವಾಪಸ ಬಂದಾಗ ನನ್ನ ಗ್ಲಾಸನ್ಯಾಗೀನ ಹಾಲ ಹಂಗ ಮೆರಿತಿದ್ದು.
ಕುಡಿ ಯಪ್ಪಾ ಹಂಗೆಲ್ಲಾ ಹಟಾ ಮಾಡಬಾರ್ದು. ನಾಂವ ಬಡವರು. ಒಂದೊಂದ ಸಲ ರೊಟ್ಟಿ ಮ್ಯಾಲ ಸರಿಯಾಗಿ ಕಾರ ಇರುದಿಲ್ಲ. ನೀನರಾ ಹಿಂಗ ಹಟಾ ಮಾಡ್ತಿ ಮಕ್ಕಳು ಬಾಳ ಹಟಾ ಮಾಡಬಾರ್ದು, ಹಟಾ ಮಾಡಿದ್ರ ಶ್ಯಾನ್ಯಾರ ಆಗಾಂಗಿಲ್ಲ. ನಿನಗ ಗೌಡ್ರ ಹೋಲದಾಗ ಬಾರಿಹಣ್ಣ ತಂದ ಕೊಡತಿನಿ ಈಗ ಹಾಲ ಕುಡಿ ಅಂತ ಏನಾರಾ ನೆವಾ ಹೇಳಿ ನನ್ನ ಸನ್ಮಂತ ಮಾಡಿ ಹಾಲ ಕುಡಸ್ತಿದ್ದಳು.
ತಂತಿ ಗಾಲಿ ಉಳಸ್ಕೋತ ಊರ ಸುತ್ತ ಹಾಕೂದ ನಮ್ಮ ದಿನನಿತ್ಯದ ರುಡಿ. ನನ್ನ ಚಡ್ಡಿ ದೋಸ್ತರಾದ ದಾಸರ ಮೆಳ್ಳ, ಪಿಂಜಾರ ಲಾಲ್ಯಾ, ಪಾಟೀಲ ಕೆಂಪಣ್ಣ, ಕುರಬರ ಸಿದ್ಧಾ ಒಟ್ಟೂರು ಕೂಡಿ ನಾಮುಂದ ನೀಮುಂದ ಅನಕೋತ ಊರಾಗಿರೋ ಸಂಧಿಗೊಂದಿ ಯಾವುದೂ ಬಿಡದಂಗ ಅಶ್ವಮೇಧಯಾಗಾ ಮಾಡುಹಂಗ ಹುರಪಿಗೆದ್ದ ಓಡಾಡ್ತಿದ್ದಿವು. ಕೆಲವ್ರು ಮಂದಿ ನಮ್ಮ ಆಟಾ ನೋಡಿ ಖುಷಿ ಆಕ್ಕಿದ್ರು. ನಾವೂ ಸಣ್ಣಾರ ಇದ್ದಾಗ ಹಿಂಗ ಆಡ್ತಿದ್ದೀವಿ. ಚಿನಪಾಣಿ, ಕಣ್ಣಾಮುಚ್ಚಾಲೆ, ಸರಬಡಗಿ ಆಟ, ಗಿಡಮಂಗ್ಯಾನ ಆಟ, ತಮ್ಮ ಬಾಲ್ಯದಿನಗಳನ್ನ ನೆನಪ ಮಾಡಕೊಂಡ ಪೂಜಾರ ಶಿವಪ್ಪ ನೆನಸ್ಕೊಂಡ ನೆನಸ್ಕೋಂಡ ಬಾರಕೆರ ನಿಂಗಣ್ಣ ಮುಂದ ಹೇಳುವಾಗ ಅವರ ಸುತ್ತಮುತ್ತ ಇದ್ದ ಮಂದಿನೂ ‘ಹೌದ ಹೌದ’ ಅಂತ ಶಿವಪ್ಪನ ಮಾತಿಗಿ ಕಿಮ್ಮತ್ತ ಬರುವಂಗ ಹೂಂಗುಡತಿದ್ರು.
ಸೂರ್ಯಾ ನೆತ್ತಿ ಮ್ಯಾಲ ಬರೂವರೆಗೂ ನಮ್ಮ ಆಟ ಕೋನೆಗಾಣತಿರಲಿಲ್ಲ. ಪಾಟೀಲ ಕೆಂಪನ ಹುಡಕೊಂಡ ನಾರಾಯಣ ಮುತ್ಯಾ ಕೈಯಾನ ಬಡಗಿ ನೆಲದ ಮ್ಯಾಲ ಊರಕೋತ ಬರೂದ ನೋಡಿದವ್ರ ಪಡಗೂನಪಾಟ ಅಕ್ಕಿದ್ದಿವಿ. ಲೇ ಊರ ಉಡಾಳ್ರ ನಿಮ್ಗ ಮನಿ ಯಸನಾ ಕೂಳಿನ ಅರಿವಾ ಯಾವುದೂ ಇಲ್ಲನ, ನನ್ನ ಕೈಗಿ ಸಿಕ್ಕಿದ್ರ ಕುಂಡಿಮ್ಯಾಲಿನ ಚರ್ಮಾ ತಗಿತಿದ್ನಿ, ನಾಳೆ ಮಾಡತೀನ ನಡಿರಿ ನಿಮ್ಗ ಮುತ್ಯಾ ಹಿಂಗ ವಟಗೂಡಕೋತ ಮತ್ತ ಮನಿಕಡಿ ನಿದಾನ್ಕ ಬರ್ತಿದ್ದ. ಅಷ್ಟೊತ್ತಿಗಾಗ್ಲೆ ನಾಂವ ಮನಿ ಸೇರಿ ಬಾಯ್ ಮುಸರಿ ಮಾಡಕೊಂಡ ಹನಮಪ್ಪನ ಗುಡಿಕಡೆ ಮತ್ತ ಜಿಗತಾಕೊಡತಿದ್ದಿವ.
ಮಟಾ ಮಟಾ ಮದ್ಯಾನದಾಗ ಹನಮಪ್ಪನ ಗುಡಿಮುಂದ ಇದ್ದಕ್ಕಿದ್ದಂಗ ನಾವೆಲ್ಲಾ ಚಡ್ಡಿದೋಸ್ತರ ಜಮಾ ಅಕ್ಕಿದ್ದೀವ. ಹನಮಪ್ಪನ ಗುಡಿಮುಂದ ದೊಡ್ಡದೊಂದ ಬೇವಿನಮರ ಇತ್ತ. ಅದರ ಕೆಳಗ ಊರ ಗೌಡ ಹರಕಿ ಹೊತಗೊಂದ ಒಂದ ಕಟ್ಟಿ ಕಟ್ಟಿಸಿದ್ದ. ಆಸತ್ತ ಬ್ಯಾಸತ್ತ ಬಂದ ಮಂದಿ ಬಿಸಲಿನ ಹೊಡತಾ ತಾಳಲಾರದ ಗುಡಿ ಕಟ್ಟಿಮ್ಯಾಲ ‘ಉಫ್’ ಅಂತ ಉಸರ ತಗೊಂದ ಕಣ್ಮುಚಗೊತ್ತಿದ್ದರ. ಬೇವಿನ ಗಿಡದ ನೆಳ್ಳಿಗೆ ನಿದ್ದಿ ಪಸಂದ ಅಕ್ಕಿತ್ತ. ಗುಡಿಯಾಗಿದ್ದ ಹನಮಪ್ಪ ಬಿಸಲಿಗೆ ಅಂಜಿ ಅಂವೂ ಒಳಗಿರ್ತದ್ದ. ನಾಂವತೂ ಅವನ ಎದರಿಗೆ ಸುಡೂ ಬಿಸಲಾಗ ಗೆರಿ ಕೊರದ ಪುಂಡರೆಲ್ಲಾ ಸೇರಿ ಗೋಲಿ ಆಡತಿದ್ದಿವು. ನಮ್ಮ ಚೀರಾಟಕ್ಕ, ಕಿರಚಾಟಕ್ಕ ಕಟ್ಟಿ ಮ್ಯಾಲ ಮಲಗಿದ ಮಂದಿ ಎಚ್ಚರಾಗಿ ನಿದ್ದಿಗಣ್ಣಾಗ ಎದ್ದ ಬಂದ ನಮ್ಮನ್ನ ಬೇಶಂಗ ತಳಸ್ತಿದ್ರ. ಸತ್ನೋ-ಕೆಟ್ನೋ ಅಂತ ಯತ್ತ ಬೇಕತ್ತ ಓಡಿ ಹೊಕ್ಕಿದ್ದೀವು. ಸಂಜಿ ಹೊತ್ತಿಗೆ ಕೊರಕಂಚಿ ಪಕ್ಷಿ ಹಂಗ ಚಲೋ ಕಡ್ಡ್ಲಿ ಹೊಲಕ್ಕ ದಾಳಿ ಮಾಡಿ ಬಲ್ಲಂಗ ಸುಲಗಾಯ ಕಿತ್ತ ಗಾವ್ನಂಗ ತಿಂದ ನಿಗೂವಷ್ಟ ಹೊತಗೊಂಡ ಮನಿ ಕಡೆ ಹರಿಗಲ್ಲ ಬಿಳ್ತಿದ್ದೀವ. ನಮ್ಮ ಸಾಹಸ ನೋಡಿ ಹೊಲದ ಮಾಲಕ ಅಟ್ಟಸ್ಕೊಂದ ಬಂದ ಬಾರಸ್ತಿದ್ದ. ಆದ್ರ ಕೆಂಪಗ ಒಂದ ಏಟಾ ಬಡಿತಿರ್ಲಿಲ್ಲ. ಅಂವಾ ಗೌಡ್ರ ಮಗಾ ಅಂತ ಯಲ್ಲಾ ಕಡಿ ಮರ್ಜಿ ಕಾಯ್ತಿದ್ರ. ಆದ್ರ ನಮಗಂತೂ ಸರಿಯಾಗಿ ಮಂಗಳಾರ್ತಿ ಅಕ್ಕಿತ್ತ.
ಊರಾಗಿರೋ ಸಾಲಿಗೆ ಹೋಗಾಕೂ ಮುಜಗರ ಅಕ್ಕಿತ್ತ. ಮಾಸ್ತರ ಕಲಸೂದ ಒಂದು, ನಾಂವ ಮಾಡೂದ ಒಂದು, ಆದಾಗ ಮಾಸ್ತರ ತಲಿಕೆಟ್ಟಾಂಗ ಮಾಡ್ತಿದ್ದ. ಲೇ ಹೊಲಿ ಸೂ.. ಮಕ್ಕಳ ನಿಂವ ಈ ಜನ್ಮದಾಗ ಉದ್ದಾರಾಗಾಂಗಿಲ್ಲ, ಸರಕಾರ ನಿಮಗ ಎಷ್ಟೋಂದ ಸೌಲತ್ತ ಕೊಟ್ಟೈತಿ, ಪಾಟಿ, ಪುಸ್ತಾಕಾ, ಬಟ್ಟಿ- ಬರಿ ಯಲ್ಲಾ ಪುಕಟ ಕೊಟ್ಟರೂ ನಿಂವ ಕಲತ ಯಾವಾಗ ಮ್ಯಾಗ ಬರ್ತೀರಿ, ನಿಮ್ಮ ಬದುಕ ಅಂದವಾಗಿ ಕಟ್ಟಗೊಂಡ ನಿಮ್ಮ ಜನಗಳ್ನ ಯಾವ ಕಾಲಕ್ಕ ಸುಧಾರಣೆ ಮಾಡ್ತಿರಿ ಅಂತ ಬೆತ್ತದ ಬಡಗಿ ತಗೊಂಡ ನಾಕ ತಳಸಿದಾಗೂ ನಾಂವ್ಯಾರೂ ಬಡತಕ್ಕ ‘ಇಸ್’ ಅಂತಿರಲಿಲ್ಲ.
ನಮ್ಮ ಜೋಡಿ ಪಾಟೀಲ ಕೆಂಪ ಬಾಳ ಕೂಡಿ ಆಡೂದ ಊರಾಗಿರೋ ಮಂದಿ ಸಹಿಸಲಿಲ್ಲ.
ಗೌರವ್ವ ತನ್ನ ಮಮ್ಮಗಗ ಕೂಳ ಹಾಕಿ ದುರ್ಗವ್ವನ ಗೂಳಿ ಹಂಗ ಬಿಟ್ಟಾಳ. ಆಂವನ ಜೋಡಿ ಕೂಡಿ ನಮ್ಮ ಹುಡಗನೂ ಹಾಳಾಗಕತ್ತೈತಿ ಅಂತ ಪಿರ್ಯಾದಿ ನಾರಾಯನ ಮುತ್ಯಾ ತನ್ನ ಮಗಗ ಹೇಳಿದ. ಆಗ ಕಣ್ಣ ಕೆಂಪ ಮಾಡಕೊಂದ ಅಜಿತ ಗೌಡ ನಮ್ಮ ಗುಡಸಲ್ಕ ಒಬ್ಬ ಆಳ ಮನಿಶ್ಯಾನ ಕಳಿಸಿ ನಮ್ಮಜ್ಜಿನ ಕರಕೊಂದ ಹ್ವಾದ. ನಮ್ಮ ಅಜ್ಜಿ ಹಿಂದಿಂದ ನಾನೂ ಹೋಗಿದ್ದೆ.
ಗೌಡನ ಮನಿ ಇನ್ನ ಮೂರ್ನಾಕ ಮಾರಿತ್ತ, ನಮ್ಮಜ್ಜಿ ಕೈ ಮುಕ್ಕೊಂದ ಭಕ್ತರು ದೇವ್ರಿಗೆ ಅಡ್ಡ ಬಿದ್ದಂಗ, ಅಜಿತ ಗೌಡನ ಮುಂದ ಅಡ್ಡ ಬಿದ್ದ ‘ರಾಮರಾಮ ರೀ ಯಪ್ಪಾ’ ಅಂತ ಮತ್ತೊಮ್ಮೆ ಸಲಾಮ ಮಾಡಿದಳು. ಊರ ಗೌಡ ಸುಬ್ರಾನ ಬಿಳಿ ಬಟ್ಟಿ, ಕೊಳ್ಳಾಗ ಕಿರಿಬಳ್ಳ ಅಳತಿ ಬಂಗಾರ ಚೈನಾ, ಬಲಗೈಯಾಗ ನಾಕೂ ಬಳ್ಳಿಗೆ ಸುತ್ತುಂಗರ, ಘಮ ಘಮ ನಾರುವಂಗ ಎಣ್ಣಿ ಹಚಗೊಂದ ಶ್ರೀಗಂದದ ಕುರ್ಚಿ ಮ್ಯಾಲ ಕಾಲಮ್ಯಾಲ ಕಾಲ ಹಕ್ಕೊಂದ ಕುಂತ ಜೀತದ ಆಳಗೋಳಿಗೆ ಏನೋ ತರಾಟೆಗೆ ತುಗೊಂದಿದ್ದ. ಗೌಡನ ಮುಂದ ತಲಿ ತಗ್ಗಿಸಿ ಆಳ್ಮಕ್ಳು ನಿಂತಕೊಂದಿದ್ದರು. ಅವ್ರು ಗತೇನ ನಮ್ಮಜ್ಜಿನೂ ನಿಂತಿದ್ದಳ. ಗೌಡ ನಮ್ಮಜ್ಜಿ ಕಡೆ ತಿರುಗಿ ನೋಡಿದಾಂವ್ನ ‘ಏನ ಗೌರವ್ವಾ ನಿನ್ನ ಮಮ್ಮಾಗಗ ಬುದ್ದಿಗಿದ್ದಿ ಹೇಳ್ತಿಯೋ, ಏನ ನಾನ ನಾಕ ಒದ್ದ ಬುದ್ದಿ ಕಲಸ್ಲೊ.’ ಯಾರ ಎಲ್ಲಿರ್ಬೇಕೋ ಅಲ್ಲೆ ಇರ್ಬೇಕ. ಜಾತಿ, ಕುಲಾ ನೋಡಿ ಗೆಳತಾನ ಮಾಡೂದ ಕಲಸ. ಇಲ್ಲಂದ್ರ ನೆಟ್ಟಗ ಇರಾಕಿಲ್ಲ ಅಂತ 80 ವರ್ಷದ ನಮ್ಮಜ್ಜಿಗೆ ಗೌಡ ಸಿಡಿಲ ಹೊಡದಂಗ ತಾಕಿತ್ತ ಮಾಡಿದ. ಆಗ ನಾನೂ ನಮ್ಮಜ್ಜಿ ಸೆರಗ ಹಿಡಕೊಂದ ಹಿಂದ ನಿಂತಿದ್ಯಾ. ಗೌಡರ ಘರ್ಜನೆಗೆ ನನ್ನ ಚಡ್ಡಿ ಒದ್ದಿಯಾಗಿತ್ತು.
ದಿನಾ ಒಂದಲ್ಲ ಒಂದ ಕಿತಾಪತಿಯೊಳಗ ನನ್ನ ಹೆಸರು ಪಿಕ್ಷ್ ಇರ್ತಿತ್ತು. ಗೌಡ್ರನ ಮನಿಯಿಂದ ಹೊಳ್ಳಿ ಮನಿಗೆ ಬಂದ ನನಗ ಅಜ್ಜಿ ಬಾಳ ಏನೂ ಹೇಳಬೇಕಾಗಿರಲಿಲ್ಲ. ಅಲ್ಲಿ ನೆಡದ ಸಂಗತಿ ಪೂರಾ ಅರ್ಥ ಆಗದಿದ್ದರೂ ಅಜ್ಜಿಯ ನೆರಿವಡದ ಮಕಾ ಮತ್ತಷ್ಟ ಸಪ್ಪಾದಾಗ ಆಗ ನನಗೂ ಮನಸ್ಸಿಗೆಕೋ ತಪ್ಪಿನ ಅನುಭಾವ ಆವರಿಸಿ ನನ್ನ ಹುರುಪು, ಹುಮ್ಮಸ್ಸು, ಅಂದು ಯಾಕೋ ನನ್ನಿಂದ ಕಳೆದು ಹೋಗಿದ್ದವು. ಇಷ್ಟೆಲ್ಲ ನಡೆದಿದ್ದರೂ ನನ್ನ ಅಜ್ಜಿ ನನಗೆ ಒಂದು ಬುದ್ದಿ ಮಾತು, ಸಣ್ಣದೊಂದು ತಿಳುವಳಿಕೆ, ಹೇಳಲಿಲ್ಲ. ನನ್ನ ತುಂಟತನದಲ್ಲಿಯೇ ಅವಳೊಂದು ಸುಖ ಕಾಣುತಿದ್ದಳು. ಸತ್ತು ಹೋದ ನನ್ನ ಅಪ್ಪನನ್ನು ನನ್ನ ಸೆಡುವಿನಲ್ಲಿ, ಹಟಮಾರಿತನದಲ್ಲಿ ಹುಡುಕಿ ಆನಂದಿತಳಾಗುತಿದ್ದಳು.
ನಾನು ಎರಡು ವರ್ಷದ ಕುಸಿದ್ದಾಗ ತಾಯಿ ಕಣ್ಣಮುಚ್ಚಿದ್ದಳು. ಆಗ ನನ್ನ ಅಜ್ಜಿ ನನ್ನ ಸಾಕಿ ಸಲುವುವಾಗ ಹರಸಾಹಸ ಮಾಡಿದ್ದು ಅದೊಂದು ದೊಡ್ಡ ಕಥೆ.
ನಮ್ಮೂರ ಕೇರಿ ಮಂದಿಯಲ್ಲಾ ಈ ಮಗುನೂ ಉಳುದಿಲ್ಲ’. ಗೌರವ್ವನ ಹನಿಬರಾ ಬಾಳ ಕೆಟ್ಟ ಐತಿ. ಇದ್ದಮಗಾ ಸತ್ತ, ಸ್ವಸಿನೂ ಹಾಂ ಅನ್ನುದ್ರಾಗ ಸ್ವರ್ಗಾ ಸೇರಿದಳು. ಈಗ ನೋಡಿದ್ರ ಈ ಮಗು ಹಿಂಗ ಅಂತ ಅಲ್ಲಲ್ಲಿ ಗುಜುಗುಜು ಮಾತಾಡುವಾಗ ನನ್ನಜ್ಜಿ ದೇವರನ್ನು ಬೈದಿದ್ದಳು, ತನಗೆ ತಾನೇ ಶಾಪ ಹಾಕಿಕೊಂಡಿದ್ದಳು. ಇಗಲೋ ಆಗಲೋ ಸಾಯಿವ ನನ್ನ ಒಂದು ಮುಟಗಿಯಷ್ಟು ದೇಹ ಎತ್ತಿಕೊಂಡು ಹೋಗಿ ಊರ ಹೋರಗಿರೋ ಹನಮ್ಮಪ್ಪನ ಗುಡಿ ಮುಂದೆ ಒಂದು ಹಾಸು ಕಲ್ಲಿನ ಮ್ಯಾಲೆ ಹಾಕಿ, ನೀ ಸತ್ತುಳ್ಳ ದೇವ್ರಾದ್ರ ನನ್ನ ಮೊಮ್ಮಗನ ಪ್ರಾಣಾ ಉಳಸ ಇಲ್ಲಂದ್ರ ಕೂಸ ಕಣ್ಣ ಮುಚ್ಚುಮೊದಲ ನನ್ನ ಕಣ್ಣ ಮುಚ್ಚ ಅಂತ ಹನಮಪ್ಪಗ ಕಡಾಮುಡಿ ಮಾತಾಡಿದಳು. ಗುಡ್ಯಾಗ ಕುಂತ ಹನಮಪ್ಪ ನನ್ನ ಅಜ್ಜಿ ಮಾತಿಗೆ ಮಿಸಗ್ಯಾಡಲಿಲ್ಲ. ಇಡೀ ದಿನಾ ಗುಡಿಮುಂದಿರೋ ಹಾಸುಗಲ್ಲಿನ ಮ್ಯಾಲ ಹಾಕಿ ನನ್ನಜ್ಜಿ ಜೀವನಾ ಬ್ಯಾಸರಮಾಡಕೊಂದ ಎರಡ ಆಡಾ ಹೊಡಕೊಂಡ ಹೊಳಿ ದಂಡಿಕಡೆ ಮೇಸಾಕ ಹೋಗಿದ್ದಳು. ನನ್ನ ಅಜ್ಜಿ ಹುಚ್ಚಾಟ ನೋಡಿ ಇಡೀ ಊರ ಬೆರಗಾಗಿತ್ತು. ನನ್ನ ಅಜ್ಜಿ ಹಿಂಗ್ ಮಾಡಿದ್ದಕ್ಕೋ, ನನ್ನ ಹನಿಬರಾ ಗಟ್ಟಿದ್ದಕ್ಕೋ ಏನೋ ಹನಮಪ್ಪನೂ ಒಬ್ಬ ಭಕ್ತಳನ್ನ ಮಿಸ್ ಮಾಡಕೊಳ್ಳುದ ಬ್ಯಾಡ ಅನಿಸಿ ನನ್ನ ಅಜ್ಜಿಗೆ ಅನ್ಯಾಯ ಮಾಡಲಿಲ್ಲ. ಕೊನೆಗೂ ದೆವ್ರ ಸತ್ತುಳ್ಳಾಂವ ಅಂತ ಕಾತ್ರಿ ಮಾಡಕೊಂಡ ನನಗೂ ‘ಹನುಮಾ’ ಅಂತ ಹೆಸರಿಟ್ಟು, ವರ್ಷ ತುಂಬುದ್ರಾಗ ನಿನಗ ಒಂದ ಹೋತಮರಿ ಬ್ಯಾಟಿ ಮಾಡ್ತಿನಿ ಅಂತ ಹರಕೀ ಹೊತ್ತು ಹನಮಪ್ಪಗ ಆಸೆ ತೋರ್ಸಿದ್ದಳು.
ದಿನದಿಂದ ದಿನಕ್ಕೆ ನನ್ನ ಎಳೀ ದೇಹ ಚೇತರಿಸಿಕೊಳ್ಳುತ್ತಾ ಹೋದಾಗ. ಕೇರಿಮಂದಿನೂ ಹುಬ್ಬೇರಿಸಿ ನೋಡ್ತಿದ್ರು. ಕೆಲವು ಕೇರಿ ಹೆಂಗಸ್ರು ಸಂಕೋಚವಿಲ್ಲದೇ ತಮ್ಮ ಎದೆಹಾಲು ಉನಿಸಿ ನನ್ನ ಮುದ್ದಾಡುತಿದ್ದರು. ಥೇಟ ಅವ್ರ ಅಪ್ಪನ ರೂಪಾ ಹೊತ್ತಾಣ ನಿನ್ನ ಮೊಮ್ಮಾಗಾ ಅಂತ ಯಾರಾದ್ರೂ ನನ್ನ ರೂಪದ ವಿಶ್ಲೆಷಣೆ ನೆಡೆದ್ರೆ ಮುಗೀತು, ಆಗ ಅಜ್ಜಿ ಕಣ್ಣು ನೀರೊಡಿಯುತ್ತದ್ದವು. ಮತ್ತೆ ಹೆಂಗಸೆರೆಲ್ಲರೂ ಅಜ್ಜಿನಾ ರಮಿಸುತಿದ್ದರು.
ತಂದಿ ತಾಯಿ ಇಲ್ಲದ ಪರದೇಸಿ ಮಗಾ ಅನ್ನೂ ಕಾರಣಕ್ಕೋ, ನನಗ ಊರಾಗಿರೋ ಸತ್ತುಳ್ಳ ಹನಮಪ್ಪನ ‘ಹೆಸರು’ ಇಟ್ಟ ಭಯಕ್ಕೋ ನನ್ನೆಂದೂ ಬೈಲಿಲ್ಲ, ಗದರಿಸಲಿಲ್ಲ. ತುಂಬಾ ಸಲಗಿಯಿಂದ ಬೆಳಸಿದಳು. ಅದೇ ಸಲುಗೆ ನನ್ನ ಅಜ್ಜಿಗೆ ಒಂದೊಂದು ಸಲಾ ಸವಾಲಾಗುತಿತ್ತು.
ನಾನು ಕೆಂಪ ಮತ್ತೆ ಎಂದಿನಂತೆ ಕೂಡಿ ಆಟಾ ಆಡೂದು, ಜೊತೆಗೂಡಿ ಸಾಲಿಗೆ ಹೋಗೂದು, ತಂತಿ ಗಾಲಿ ಉಳಸೋದು ಎಲ್ಲುವೂ ಕರಾರುವಕ್ಕಾಗಿ ಮಾಡುತಿದ್ದೆವು. ಮಂಗ್ಯಾನ ಬಾಲದಂತೆ ಲಾಲ್ಯಾ, ಸಿದ್ಧಾ, ಮೆಳ್ಳ ನಮ್ಮ ಜೊತೆ ಇರ್ತಿದ್ದರು. ನಮ್ಮ ಆ ವಯಸ್ಸಿಗೆ ಜ್ಯಾತಿ, ಧರ್ಮ, ಕುಲದ ಪರಿಜ್ಞಾನವೂ ನಮಗಿರಲಿಲ್ಲ. ಆ ದಿನ ಆಟವಾಡಿ ಹೊಟ್ಟೆ ಹಸಿದು ನನ್ನೊಂದಿಗೆ ಕೆಂಪನೂ ನಮ್ಮ ಗುಡಿಸಲಿಗೆ ಬಂದಿದ್ದ. ನನ್ನ ಅಜ್ಜಿ ನಮ್ಮ ಪುಟ್ಟ ಗುಡಿಸಲಲ್ಲಿ ಒಲೆ ಮುಂದೆ ಕುಂತು ಒಲೆ ಊದುತಿದ್ದಳು, ಹುಗಿ ಇಡೀ ಗುಡಿಸಲನ್ನೇ ಆವರಿಸಿತ್ತು. ಕೆಂಪಾ ‘ಕೊಸಾ ಕೊಸಾ’ ಎರಡ ಸಾರಿ ಕೆಮ್ಮಿದಾಗ ‘ಯಾರವರೂ’ ಅನ್ನು ದನಿ ಆ ಹುಗಿ ಹಿಡಿದ ಗುಡಿಸಲಲ್ಲಿ ತೇಲಿಬಂದಾಗ ‘ಅಜ್ಜಿ ಅಂವಾ ನನ್ನ ದೋಸ್ತಾ ಕೆಂಪಾ’ ಅಂವ್ರನ್ಯಾಕ ನಮ್ಮ ಗುಡಸ್ಲಿಗೆ ಕರೆತಂದಿ, ಯಾರಾರಾ ನೋಡಿದ್ರ ಏನ ಗತಿ? ಮದಲ ಚಿಕ್ಕ ಗೌಡ್ರನ ಕಳಸೋ ಅಂತ ಅಜ್ಜಿ ಭಯಬಿದ್ದಳು.
ಯಾಕಜ್ಜಿ ನಾ ನಿಮ್ಮನಿಗೆ ಬಂದ್ರೇನ ತೆಪ್ಪು? ಅದ ಹಂಗಲ್ಲ ಚಿಕ್ಕ ಗೌಡ್ರ ನಿಮ್ಮ ಮಂದಿ ನೊಡಿದ್ರ ನಮ್ಮ ಕತಿ ಮುಗದಂಗ. ನೀವು ಆಕಾಶ, ನಾವೂ ಪಾತಾಳಾ. ಎರಡೂ ಒಟ್ಟೊಟ್ಟಿಗೆ ಕುಡಾಂಗಿಲ್ಲಾ. ಮನ್ನೆಮನ್ನೆನೆ ತಾಕೀತ ಮಾಡಿ ಕಳಿಸ್ಯಾರ ದೊಡ್ಡ ಗೌಡ್ರ. ಅಜ್ಜಿ ನಿದಾನ್ಕ ಮ್ಯಾಲೆದ್ದ. ಚಿಕ್ಕ ಗೌಡ್ರಗೆ ಕೈ ಮುಗದ ನೀಂವ ಇಲ್ಲಿಂದ ಮೊದಲ ಹೋಗ್ರೀ ಅಂತ ವಿನಂತಿ ಮಾಡಕೊಂಳು. ಅಜ್ಜಿ ನನಗ ನಿ ಒಂದ ಮುಟಗಿ ಮಾಡಿ ಕೊಡು ತಿನಕೋತ ಹೊಕ್ಕಿನಿ. ನಿ ಮುಟಗಿ ಬಾಳ ಚಲೋ ಮಾಡ್ತಿಯಂತ ಊರತುಂಬ ಮಾತಾಡ್ತಾರ ಅಂತ ಕೆಂಪಾ ಬಾಯಿಬಿಟ್ಟ ಕೇಳಿದಾಗ ಅಜ್ಜಿಗೆ ಏನ ಮಾತಾಡ್ಬೇಕು ಅನ್ನುದ ತಿಳಿಲಿಲ್ಲ. ಅಜ್ಜಿ ಬಾಳಷ್ಟ ಹಿಟ್ಟ ತಗೊಂದ ದಮ್ಮನ ಕೈ ರೊಟ್ಟಿ ಮಾಡಿ ಅದರಾ ಪುಡಿಕಾ, ಒಂದ ಬಳ್ಳೊಳ್ಳಿ, ಒಂಚೂರ ಗಾಂದೆಣ್ಣಿ ಹಾಕಿ ಚಲೋತಂಗ ಮಾಡಿ ಕೊಟ್ಟಳು. ಕೆಂಪಾ ಕೈ ರೊಟ್ಟಿ ಮುಟಿಗೆ ತಿಂದು ಬಬಾಯ ವರಸ್ಕೊಂಡ ಹೋದ ಸುದ್ದಿ ನಮ್ಮ ಕೇರಿಯ ಜನಾ ಇಡೀ ಊರತುಂಬೆಲ್ಲಾ ಸಾರಿ ಹೇಳಿದ್ದರು. ಕುಚಲನ ಮನಿಗೆ ಕೃಷ್ಣ ಬಂದು ಹೋದ ಭಾವ ನನ್ನ ಕೇರಿ ಮಂದಿದೂ, ಅವರ ಉದ್ದೇಶ ಕೆಟ್ಟದಾಗಿರಲಿಲ್ಲ ವಿಷಯ ಗೊತ್ತಾದ ಗೌಡರ ಉದ್ದೇಶ ತುಂಬಾ ಕೆಟ್ಟದಾಗಿತ್ತು
ಗೌಡರ ಬಾರ್ಕೊಲ ಏಟಕ್ಕೆ ನನ್ನ ಪುಟ್ಟ ದೇಹಾ ಬಲಿಯಾದಾಗ ದೂರದಲ್ಲಿದ್ದ ನನ್ನ ಅಜ್ಜಿ ಉಸಿರು ನಿಂತಿತ್ತು. ನನ್ನ ಮೈಮ್ಯಾಲೆ ಎದ್ದ ಬಾಸುಂಡೆ ಕಡೆ ಗಮನ ಹರಿಸದ ನನ್ನ ಕೇರಿ ಮಂದಿ ನನ್ನ ಅಜ್ಜಿಯ ಸುತ್ತ ಮುತ್ತ ನಿಂತ್ಕೊಂಡು ಬೊರ್ಯಾಡಿ ಅಳತಿದ್ರು. ಕೆಂಪಾ ನನ್ನ ಅಜ್ಜಿ ಕಾಲು ಹತ್ತಿರ ಕುಳಿತು ಅಳುವ ಪರಿ ಇಡೀ ಊರಿಗೊಂದು ಹೊಸಾ ಅಧ್ಯಾಯವಾಯಿತು.






ಒಳ್ಳೇ ಕಥೆ ಚನ್ನಗಿದೆ