ರಾಜೇಶ್ವರಿ ಲಕ್ಕಣ್ಣವರ
ಅವಳು ಹಾಸಿಗೆಯ ಮೇಲೆ ಬೋರಲಾಗಿ ಮಲಗಿದಾಗಿನಿಂದ ಬೆನ್ನು ನೋವು, ಕಿಬ್ಬೊಟ್ಟೆಯ ನೋವು ಬೇಡ-ಬೇಡವೆಂದರೂ ಅವಳನ್ನು ಹಿಂಸಿಸುತ್ತಿತ್ತು. ನಡುರಾತ್ರಿಯಲ್ಲೊ ನಾಭಿಯಾಳದಿಂದ ತೊಟ್ಟಿಕ್ಕುತ್ತಿತ್ತ ನೆತ್ತರು, ಅವಳ ಋತುಸ್ರಾವಕ್ಕೆ ಮುನ್ನುಡಿ ಬರೆದಿತ್ತು. ಹಾಸಿಗೆಯಿಂದ ಎದ್ದವಳ ಮುಖದ ತುಂಬ ಆಯಾಸ ಮನೆ ಮಾಡಿತ್ತು. ಬಾತರೂಮ್ ಗೆ ಹೋಗಿ ಬಂದು ಮಲಗಿದವಳ ಕಣ್ಣಲ್ಲಿ ಸಣ್ಣ ನೆಮ್ಮದಿ.
ತನ್ನ ತೋಳುಗಳಲ್ಲಿ ಸಿಕ್ಕು, ತನ್ನೆದೆಗೆ ತಲೆಯಾನಿಸಿ ಮಗುವಂತೆ ಮಲಗಿದವಳನ್ನು ಕಂಡು ಅವನಿಗೆ, ಅವಳ ಮೇಲೆ ಮತ್ತಷ್ಟು ಮುದ್ದು ಹೆಚ್ಚಾಗಿತ್ತು. ರಾತ್ರಿಯಿಂದಲೇ ಅವಳ ಕ್ರಿಯೆಯನ್ನೆಲ್ಲ ಕಿರುಗಣ್ಣಿನಿಂದ ಗಮನಿಸಿದ್ದ ಅವನು, ತನ್ನ ಮೊಬೈಲ್ ನಲ್ಲಿ ಮೊದಲ ಬಾರಿ ಬೇಗ ಏಳುವದಕ್ಕೆಂದು ಅಲಾರ್ಮ್ ಸೆಟ್ ಮಾಡಿ, ಅವಳನ್ನು ಅವುಚಿಕೊಂಡು ಮಲಗಿದ್ದ.
ನೇಸರನ ಕಿರಣಗಳು ಭುವಿಯ ತಾಕಿದರೂ ಎಚ್ಚರವಾಗದ ಅವಳಿಗೆ, ಅವಳ ಪಕ್ಕದಲ್ಲಿಟ್ಟಿದ್ದ ಅವಳ ನೆಚ್ಚಿನ ಕಾಫಿಯ ಘಮಕ್ಕೆ ಹಾಸಿಗೆಯಿಂದ ಪಟ್ಟನೆ ಎದ್ದು ಕುಳಿತಿದ್ದಳು. ಜೊತೆಗೊಂದು ಚೀಟಿ “ಬೇಗನೆ ನಿನ್ನ ನೆಚ್ಚಿನ ಕಾಫಿ ಕುಡಿ, ಆರಾಮಾಗಿ ರೆಸ್ಟ್ ಮಾಡು, ತಿಂಡಿ ರೆಡಿ ಇದೆ.” ಅವಳ ಮೊಗದ ತುಂಬ ಹಿಡಿಯಲಾಗದಷ್ಟು ಖುಷಿ. ಪ್ರೀತಿಯನ್ನು ಹೇಳುವುದಕ್ಕೆ ‘ಐ ಲವ್ ಯೂ’ ಎಂದೇ ಹೇಳಬೇಕಿಲ್ಲವಲ್ಲ.

ಅವನು – ಅವಳು
ಅವಳು ಒಂಥರಾ ಹರಿಯುವ ನದಿಯಂತೆ, ನನ್ನನ್ನೂ ತನ್ನೊಲವಿನ ಸೆಳವಿಗೆ ಎಳೆದುಕೊಂಡು ಹರಿಯುವ ಜೀವನದಿ..ಹೀಗೆ ಅವನ ವಿಚಾರ ಲಹರಿ ತಣ್ಣಗೆ ಕುಳಿತಲ್ಲಿಯೇ ಸಾಗುತ್ತಿತ್ತು. ಊರಿಗೆ ಹೋಗಿ ಒಂದು ವಾರವಾಯಿತು, ತವರೆಂದರೆ ಸಾಕು ಎಲ್ಲ ಹೆಣ್ಣುಮಕ್ಕಳು ಎಲ್ಲವನ್ನೂ ಮರೆತು ಬಿಡ್ತಾರೆ ಎಂಬ ಹುಸಿಕೋಪ ಅವನ ಮುಖದಲ್ಲಿ ಮೂಡುತ್ತಿರುವಾಗ, ಫೋನ್ ಕರೆಯೊಂದು ಅವನನ್ನು ಇಹಲೋಕದತ್ತ ಎಳೆದು ತಂದಿತು.
ಮುಖದಲ್ಲಿ ಮಿನುಗುತ್ತಿದ್ದ ಮುಗುಳುನಗೆ “ಅವಳದೇ ಕರೆ” ಎಂಬುದಕ್ಕೆ ಸಾಕ್ಷಿಯಾಗಿತ್ತು. ನೆನಪೇ ಆಗೋಲ್ಲವಲ್ಲ ನಾನು, ಇಲ್ಲಿದ್ದಾಗ ಬಿಟ್ಟು ಇರೋದಕ್ಕೆ ಆಗೋಲ್ಲ, ಹಾಗೇ ಹೀಗೆ ಮಾತು, ಊರಿಗೆ ಹೋದ್ರೆ ಜ್ಞಾಪಕ ಇರೊಲ್ಲ” ಎನ್ನುತ್ತಿದ್ದರೆ, ಅತ್ತ ಕಡೆಯಿಂದ ಜೊಂಪೆ ಜೊಂಪೆಯಾಗಿ ನಗುವಿನ ಬುಗ್ಗೆ ಹರಿಯುತ್ತಿತ್ತು.
“ಮೊದಲು ಬಾಗಿಲು ತಗಿ, ಆಗ್ಲಿಂದ ಬೆಲ್ ಒತ್ತಿ ಒತ್ತಿ ಸಾಕಾಯ್ತು, ಏನ ಮಾಡ್ತಿದ್ದೆ, ಹುಸಿಮುನಿಸಿನೊಂದಿಗೆ ಪ್ರೀತಿಯ ಆಜ್ಞೆ, ಅದಕ್ಕಾಗಿ ಕಾದಿದ್ದವನಂತೆ ಓಡಿ ಹೋಗಿ ಬಾಗಿಲು ತಗೆದರೆ, ಇವನ ಪರಿಸ್ಥಿತಿ ನೋಡಿ ನಗುತ್ತಾ ನಿಂತಿದ್ದಳವಳು. ಇವನ ಕಂಡೊಡನೆ ತೆಕ್ಕೆಗೆ ಬಿದ್ದಳು. ಅಪ್ಪುಗೆ ಬಿಗಿಯಾಯಿತು. ಅವನು ಅವಳನ್ನಪ್ಪಿ ನೆತ್ತಿಯನ್ನು ಸೋಕಿದ.
'ಐ ಲವ್ ಯೂ' ಎಂದೇ ಹೇಳಬೇಕಿಲ್ಲವಲ್ಲ..
ನಿಮಗೆ ಇವೂ ಇಷ್ಟವಾಗಬಹುದು…





ಗಂಡು ಮತ್ತು ಹೆಣ್ಣಿನ ನಡುವೆ ಇರಲೇಬೇಕಾದ ಅನುರಾಗ, ಅನ್ಯೋನ್ಯತೆ, ಮಮಕಾರ ಮತ್ತು ಕಾಳಜಿ ಮೌಲ್ಯಗಳನ್ನು ಹಾಗೂ ಸಮಯೋಚಿತ ಹಾಸ್ಯಪ್ರಜ್ಞೆಯನ್ನು ತುಂಬಾ ಸೂಕ್ಷ್ಮವಾಗಿ ನಿರೂಪಿಸಿದ್ದೀರಾ ರಾಜೇಶ್ವರಿ. ಬರವಣಿಗೆ ಶೈಲಿ ಇಷ್ಟವಾಯಿತು. ಹೀಗೆ ಬರೀತಾ ಇರಿ. ಒಳ್ಳೆಯದಾಗಲಿ!