ಪೊಲೀಸರಲ್ಲಿ ಮಾತ್ರ ಅಲ್ಲ; ಇಲ್ಲೂ ಊಳಿಗದ ಆರ್ಡರ್ಲೀ ಗಳಿದ್ದಾರೆ…

ರಾಜಾರಾಂ ತಲ್ಲೂರು
ದುಡ್ಡಿರುವಲ್ಲಿ ಒಂದು ಕಾನೂನು ; ದುಡ್ಡಿಲ್ಲದಲ್ಲಿ ಒಂದು ಕಾನೂನು – ಇದು ಆಧುನಿಕ ಆಡಳಿತದ ಹೆಗ್ಗುರುತು.
ತಳಮಟ್ಟದ ಪೊಲೀಸ್ ಸಿಬ್ಬಂದಿಗಳಿಗೆ ದುಡಿದದ್ದಕ್ಕೆ ತಕ್ಕ ಸಂಬಳವೂ ಇಲ್ಲ; ದುಡಿಯುವುದಕ್ಕೆ ಮಿತಿಯೂ ಇಲ್ಲ. ಹಾಗಾಗಿ ಅವರ ಮುಷ್ಕರ ಈಗ ಎಲ್ಲ ಮಧ್ಯಮ ವರ್ಗದ ಮನೆಗಳಲ್ಲಿ ಸುದ್ದಿ ಮಾಡುತ್ತಿದೆ. ಸರಿ.
ಇದೇ “ಸದಾ ಸಂತಾಪ ಸೂಚಕ” ಮಧ್ಯಮ ವರ್ಗದ ಪ್ರತಿಯೊಂದು ಕುಟುಂಬಗಳಲ್ಲೂ ಒಬ್ಬರೋ ಇಬ್ಬರೋ ಈವತ್ತು ಸಾಫ್ಟ್ ವೇರ್ ಇಂಜಿನಿಯರ್ ಗಳು ಅನ್ನಿಸಿಕೊಂಡು, ಮನೆಗೆ “ಕೈತುಂಬಾ” ತರುತ್ತಿದ್ದಾರೆ. ಯಾವತ್ತಾದರೂ ಈ ಕುಟುಂಬಗಳವರು ತಮ್ಮ ಮನೆಯ ದುಡಿಯುವ ಕೈಗಳು ಯಾವ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಯೋಚಿಸಿದ್ದಾರೆಯೆ?
ಐಟಿ ಕಂಪನಿಗಳಲ್ಲಿ ಎಲ್ಲಾದರೂ ಕಾರ್ಮಿಕ ಸಂಘಟನೆಗಳು, ಕೆಲಸದ ಅವಧಿ, ಕೆಲಸದ ಹೊರೆ ನಿಗದಿ ವಿಚಾರಗಳು ಚರ್ಚೆ ಆಗಿರುವುದನ್ನು ನೀವು ಕಂಡಿದ್ದೀರಾ? ಈ ಕಂಪನಿಗಳಿಗೆ ಯಾವುದೇ ಕಾರ್ಮಿಕ ಕಾನೂನು ಬಹಳ ಸರಳವಾದ ಒಂದೇ ಕಾರಣಕ್ಕೆ ಅಪ್ಲೈ ಆಗುವುದಿಲ್ಲ! ಅದೆಂದರೆ, ಕನಿಷ್ಟ ವೇತನ. ಕಾರ್ಮಿಕ ಕಾನೂನಿನನ್ವಯ ಏಳೂವರೆ ಸಾವಿರದಿಂದ ಮೇಲಿನ ಆಸುಪಾಸಿನಲ್ಲಿ ಹೆಚ್ಚಿನ ಎಲ್ಲ ಹುದ್ದೆಗಳ ಕನಿಷ್ಟ ವೇತನ ಬಂದಿರುತ್ತವೆ; ಎಲ್ಲರದೂ ಅಲ್ಪಾವಧಿ ಗುತ್ತಿಗೆ ಆಗಿರುವ ಕಾರಣ, ಪಿ ಎಫ್ ಇತ್ಯಾದಿಗಳೆಲ್ಲ ಅನ್ವಯವೇ ಆಗುವುದಿಲ್ಲ. ಹಾಗಾಗಿ ಕಾರ್ಮಿಕ ಅಧಿಕಾರಿಗಳಿಗೆ ಐಟಿ ಕಂಪನಿಗಳೆಂದರೆ ಬಹಳ ದೂರ.
ಐಟಿ ಕಂಪನಿಗಳಲ್ಲಿ ಕೆಲಸದ ಹೊರೆ ಹೇಗೆ ನಿಗದಿ ಆಗುತ್ತದೆ? ಕೆಲಸದ ಅವಧಿ ಎಷ್ಟು? ಆರೋಗ್ಯ-ವಿಮೆಯಂತಹ ಭದ್ರತೆಗಳ ಸ್ಥಿತಿ ಏನು? ಕೆಲಸದ ಭದ್ರತೆ ಎಷ್ಟು ಸಕಾರಣವಾಗಿರುತ್ತದೆ? ಈ ಪ್ರಶ್ನೆಗಳನ್ನು ಯಾರೂ ಕೇಳುವುದೂ ಇಲ್ಲ; ಅದನ್ನು ಉತ್ತರಿಸುವುದೂ ಇಲ್ಲ. ಅಂದರೆ, ಕಿಸೆಗೊಂದಿಷ್ಟು ದುಡ್ಡು ಬಂದುಬಿಟ್ಟರೆ, ಅದೆಂತಹ ಕೆಲಸವಾದರೂ ಸರಿ ಎಂಬ ಮನೋಭಾವ. ಆದರೆ, ಇದೇ ಐಟಿ ಕಂಪನಿಗಳಿಗೆ ಕೆಲಸ ಔಟ್ ಸೋರ್ಸ್ ಮಾಡುತ್ತಿರುವ ಯುರೋಪಿನ (ಇದೇ ಮಾತನ್ನು ಅಮೆರಿಕಕ್ಕೆ ನಾನು ಹೇಳಲಾರೆ. ಯಾಕೆಂದರೆ, ಅಲ್ಲಿ ಕಳೆದ 15 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಅದೂ ನಮ್ಮಿಂದಲೇ!) ಕಂಪನಿಗಳಲ್ಲಿ ಕೆಲಸದ ಕಾನೂನುಗಳೆಲ್ಲವೂ ಅನ್ವಯವಾಗುತ್ತವೆ. ಇಂತಿಷ್ಟು ಗಂಟೆ, ವಾರದ ರಜೆ, ವಾರ್ಷಿಕ ರಜೆ, ಸಂಬಳ- ಬೇರೆ ಸವಲತ್ತುಗಳು… ಹೀಗೆ. ಫ್ರೆಂಚರಿಗಂತೂ ಜೋಕೇ ಇದೆ. ಶುಕ್ರವಾರ ಮಧ್ಯಾಹ್ನ ಮೇಲೆ ವೀಕೆಂಡ್ ತಯಾರಿ, ಎರಡು ದಿನಗಳ ವೀಕೆಂಡ್ ಬಳಿಕ ಸೋಮವಾರ ಬೆಳಗ್ಗೆ ವೀಕೆಂಡ್ ಹ್ಯಾಂಗೋವರ್ ನಿಂದ ಸುಧಾರಿಸಿಕೊಳ್ಳುವ ಅವಧಿ. ಹಾಗಾಗಿ, ಅವರು ಕೆಲಸ ಮಾಡುವುದು ವಾರಕ್ಕೆ ನಾಲ್ಕೇ ದಿನ; ದಿನದಲ್ಲಿ ಎಂಟೇ ಗಂಟೆ! ಬ್ರಿಟನ್ನಿನಲ್ಲಿ ಕೆಲಸದ ಅವಧಿ ಮುಗಿದ ಬಳಿಕ ಆಫೀಸಿನಿಂದ ಕೆಲಸದ ಸಂಬಂಧ ಫೋನ್ ಬರುವುದು ಕಾರ್ಮಿಕ ಅಪರಾಧ!
ದುಡ್ಡೊಂದು ಬಗೆ ಸಿಕ್ಕಿದರೆ, ಎಂತಹ ಕೆಲಸದ ಪರಿಸ್ಥಿತಿಯೂ ಸೈಯೇ ಎಂದುಕೊಂಡಿರುವ ಈ ಎಲ್ಲ ಭಾರತೀಯ ಮಧ್ಯಮ ವರ್ಗದ ಮನೆಗಳಲ್ಲಿ ಈಗೀಗ 45-50ರ ಮುದುಕರು ನಿವ್ರತ್ತಿ ಜೀವನ ನಡೆಸುತ್ತಿರುವುದು ಕಾಣಿಸತೊಡಗಿದೆ. ಇನ್ನೈದು ವರ್ಷಗಳಲ್ಲಿ ಇವರಿಂದಲೇ ತುಂಬಿದ ಭಾರತ “ವಿಶ್ರಾಂತರ ನಾಡು” ಆಗಲಿದೆ.
ಕಾರ್ಮಿಕರ ಸಂಘಟನೆಯೇ ಈ ಸಮಸ್ಯೆಗೆ ಉತ್ತರ ಅಲ್ಲ. ಯಾಕೆಂದು ಬ್ಯಾಂಕರ್ ಗಳಲ್ಲಿ ಕೇಳಿ. ಅವರು ಹೇಳ್ತಾರೆ. ದುಡಿಯುವ – ದುಡಿಸಿಕೊಳ್ಳುವ ಮನಸ್ಸುಗಳು ಸ್ವಸ್ಥವಾಗಿರುವುದು; ಪ್ರಾಮಾಣಿಕವಾಗಿರುವುದು (ಅಂದರೆ ಕೆಲಸದ ಹೊರೆ ಹಚ್ಚುವಲ್ಲಿ – ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡುವಲ್ಲಿ) ಸಾಧ್ಯವಾಗುವ ತನಕ ಯಾವುದೇ ನಿಯಮಗಳು ನಮ್ಮಲ್ಲಿ ಏನೂ ಮಾಡಲಾರವು.
ಅಂದಹಾಗೆ ಪೊಲೀಸರು ಕೂಡ, ಇಷ್ಟು ವಿಳಂಬವಾಗಿ ಎಚ್ಚೆತ್ತುಕೊಂಡು ಹೋರಾಟದ ಹಾದಿ ಹಿಡಿದಿರುವುದಕ್ಕೆ ಈ ದುಡ್ದೇ ಕಾರಣವೇ…
ಐ ಟಿ ಕಂಪನಿ 'ಆರ್ಡರ್ಲೀ'ಗಳು
ನಿಮಗೆ ಇವೂ ಇಷ್ಟವಾಗಬಹುದು…




ನಿಜ. ಈ ನವವೃದ್ಧರನ್ನು ನೋಡುವಾಗೆಲ್ಲ ಕಬ್ಬಿನಸಿಪ್ಪೆ ನೆನಪಾಗುತ್ತೆ
ಹೌದು. ಮನೋವೈದ್ಯರಲ್ಲಿಗೆ ಹೋಗುವ, ದೇವಸ್ಥಾನ-ಬಾಬಾಗಳ ಬಳಿ ಹೋಗುವ ಈ ಅಕಾಲಿಕ ಮುದುಕರು, ನ್ಯಾಯಾಲಯಗಳಲ್ಲಿ ರಾಶಿಬಿದ್ದಿರುವ ಡೈವೋರ್ಸ್ ಪ್ರಕರಣಗಳು, ಆತ್ಮಹತ್ಯೆ-ಲೈಂಗಿಕ ಅಪರಾಧಗಳು, ಬದುಕು ಒಡ್ಡುವ ಸವಾಲುಗಳನ್ನು ಎದುರಿಸಲು ಸಜ್ಜಾಗಿರದ ಖಿನ್ನರು – ಇವೆಲ್ಲ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ಚಿಂತಾಜನಕ ಸ್ಥಿತಿ ತಲುಪಿವೆ.