ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏಳು ಸಾಗರದಾಚೆ ರಾಕ್ಷಸನ ಜೀವ – ಶಾಂತಾ ನಾಗರಾಜ್

ರಾಕ್ಷಸನ ಜೀವ

ಶಾಂತಾ ನಾಗರಾಜ್

ಈಗ್ಗೆ ಐವತ್ತು, ಅವರವತ್ತು ವರ್ಷದ ಕೆಳಗೆ ನಮ್ಮ ಬಾಲ್ಯ ಒಂದು ರೀತಿಯಲ್ಲಿ ತುಂಬ ಸುಂದರವಿತ್ತು. ಶಾಲೆ ಎನ್ನುವುದೊಂದು ಸುಮ್ಮನೇ ಹೋಗಿಬರುವ ತಾಣವಾಗಿತ್ತು. ಬೆನ್ನ ಮೇಲೆ ಹೊರೆಹೊರೆ ಪುಸ್ತಕಗಳಿಲ್ಲ, ” ಗಣಿತದ ಪುಸ್ತಕ ತರಲಿಲ್ಲ ಸಾ” ಎಂದು ರಾಗ ಹಾಡಿದರೆ ಸಾಕು, “ತರಲಿಲ್ಲವೇನಮ್ಮ? ಹೋಗಲಿ ಪಕ್ಕದವಳ ಹತ್ತಿರ ನೋಡ್ಕೊಂದು ಬರಿ” ಎನ್ನುವ ಉದಾರಿ ಮೇಷ್ಟ್ರು, ಮೇಡಂಗಳು. ಹೋಮ್ ವರ್ಕ್ ಎನ್ನುವ ಉಸಾಬರಿಯೇ ಇಲ್ಲ. ಸ್ಕೂಲಿನಿಂದ ಬಂದು ಆ ಚೀಲವನ್ನು ಒಂದು ಕಡೆ ಎಸೆದು ಬಿಟ್ಟರೆ, ಮತ್ತೆ ಚೀಲ ಹುಡುಕುವುದು ಮರುದಿನ ಶಾಲೆಗೆ ಹೋಗುವಾಗಲೇ. ನಾಲ್ಕನೇ ಕ್ಲಾಸಿನವರೆಗೂ ಸ್ಲೇಟಿನ ಮೇಲೇ ಬರವಣಿಗೆ ಎಲ್ಲ. ಪೆನ್ನು ಕಾಗದಗಳ ಹಂಗೇ ಇಲ್ಲ. ನಾವು ಬರೆದದ್ದೇನೋ ಬಿಟ್ಟಿದ್ದೇನೋ ದಾಖಲೆಗಳೂ ಇಲ್ಲ. ಪರೀಕ್ಷೆಯಲ್ಲೂ ಬಾಯಿಗೆ ಬಂದಷ್ಟನ್ನು ಪದ್ಯ, ಗದ್ಯ ಎಲ್ಲವನ್ನೂ ಒಂದೇ ರಾಗದಲ್ಲಿ ಉಸಿರಿಬಿಟ್ಟರೆ ಮುಗಿಯಿತು. ಪಾಸು!! ಫೇಲು ಎನ್ನುವ ಸುದ್ದಿಯೇ ಇಲ್ಲ. ರ್ಯಾಂಕ್ ಗಳ ಕಾಟವೂ ಇಲ್ಲ. ಐದನೇ ಕ್ಲಾಸಿನ ನಂತರ ಬರವಣಿಗೆ. ಅದೂ ಏನು? ಚಿಕ್ಕ ಪರೀಕ್ಷೆ, ದೊಡ್ಡ ಪರೀಕ್ಷೆ ಎರಡೇ ಹರ್ಡಲ್ಗಳು. ವೀಕ್ಲೀ ಟೆಸ್ಟ್, ಮಂತ್ಲೀಟೆಸ್ಟ್ ಇವೆಲ್ಲಾ ನಮ್ಮ ಹತ್ತಿರವೂ ಸುಳಿಯುತ್ತಿರಲಿಲ್ಲ. (ನಮ್ಮ ಮೇಷ್ಟ್ರ ತಲೆಯಲ್ಲೂ ಸುಳಿದಿರಲಿಲ್ಲ, ಇನ್ನು ನಮ್ಮ ಹತ್ತಿರ ಹೇಗೆ ಬಂದಾವು?) ಹಾಗಾಗಿ ಬೆಳಿಗ್ಗೆ ಎದ್ದು ಸ್ಕೂಲಿಗೆ ಹೋಗುವವರೆಗೆ, ಸ್ಕೂಲಿಂದ ಬಂದು ರಾತ್ರಿ ಮಲಗುವವರೆಗೆ ನಮ್ಮದೇ ಸಮಯ!! ಅದಕ್ಕೆ ನಾವೇ ಪರಮಾಧಿಕಾರಿಗಳು. ಯಾರೂ ನಿಯಂತ್ರಿಸುವವರಿಲ್ಲ. ಹೆಣ್ಣುಗಂಡು ಆದಿಯಾಗಿ ಮರ ಹತ್ತುವುದೇನು? ಮರಕೋತಿ ಆಡುವುದೇನು? ಚಿನ್ನಿಕೋಲು, ಬುಗುರಿ, ಗೋಲಿಯಾಟದಲ್ಲಿ ಎಲ್ಲರೂ ಪ್ರವೀಣರೇ.

ಈ ನಮ್ಮ ಸುಖಮಯ ಸನ್ನಿವೇಶದಲ್ಲಿ ಆಗಾಗ್ಗೆ ಮುದಕೊಡುತ್ತಿದ್ದುದು ಕಥೆಹೇಳುವ ಕಾಯಕ! ಒಬ್ಬರಿಗೊಬ್ಬರು ಗೊತ್ತಿರುವ, ಅಜ್ಜಿ, ಅಮ್ಮ, ಮೇಷ್ಟ್ರು, ಅಥವಾ ಯಾರಾದರೂ ಹೇಳಿದ ಕಥೆಗೆ ನಮ್ಮ ಚುಟುಕಗಳನ್ನೂ ಸೇರಿಸಿ ಕಥೆ ಹೇಳುವ ಕೆಲಸವೆಂದರೆ ನಮಗೆಲ್ಲರಿಗೂ ಆಸೆಯೇ. ಆದರೆ ಅವಕಾಶ ಸಿಗುತ್ತಿದುದು ಚೆನ್ನಾಗಿ ಹೇಳುವವರಿಗೆ ಮಾತ್ರ. ಅದರಲ್ಲಿ ನನ್ನ ಗೆಳತಿ ಹೇಳುತ್ತಿದ್ದ ರಾಕ್ಷಸನ ಜೀವದ ಕಥೆ ನಮಗೆಲ್ಲರಿಗೂ ಬೆಲ್ಲ ಸವಿದಷ್ಟು ಇಷ್ಟ. ಆ ಕಥೆಯ ರಾಜಕುಮಾರ ಎದುರಿಗಿರುವ ರಾಕ್ಷಸನ ತಲೆಯನ್ನು ಎಷ್ಟು ಬಾರಿ ಕತ್ತರಿಸಿದರೂ ಮತ್ತೆ ಸೇರಿಕೊಂಡು ನಗುವ ಅವನ ದೇಹದಲ್ಲಿ ಅವನ ಜೀವವೇ ಇಲ್ಲ. ಅದು ಅಲ್ಲಿಂದ ಏಳು ಸಮುದ್ರ, ಏಳು ಪರ್ವತ, ಏಳು ನದಿ, ಏಳು ಬೆಟ್ಟ, ಏಳು ಕಾಡು ದಾಟಿ ಅಲ್ಲಿರುವ ಏಳನೇ ಮರದ ಏಳನೇ ಕೊಂಬೆಯಲ್ಲಿ ತೂಗಾಡುತ್ತಿರುವ ಪಂಜರದಲ್ಲಿರುವ ಗಿಳಿಯಲ್ಲಿದೆ. ಎಂಥಾ ರೋಚಕ ವಿಷಯವಿದು. ಈ ಕಥೆ ನನಗೆ ಈಗಲೂ ನೆನಪಿಗೆ ಬರುವುದು, ನಮ್ಮ ಜೀವನದೊಳಗೇ ಇಂಥ ರಾಕ್ಷಸ ಜೀವಗಳು ಕಾಡುವುದರಿಂದ. ಇದು ಬದುಕಿಗೆ ಎಷ್ಟು ಹತ್ತಿರವಾಗಿದೆ ನೋಡಿ.

ಇದೇನಿದು ರಾಕ್ಷಸ ಜೀವ ಮತ್ತು ನಮ್ಮ ಬದುಕು ಹೇಗೆ ಹತ್ತಿರ? ಎಂದು ಹುಬ್ಬಿನ ಮೇಲೆ ಗಂಟು ಕೂಡಿಸಿಕೊಳ್ಳುವುದು ಬೇಡ ಆಯಿತೇ? ನಾನು ಕೊಡುವ ಉದಾಹರಣೆಗಳನ್ನು ಓದಿ. ಆ ನಂತರ ನಿಮ್ಮ ಬದುಕಿನ ರಾಕ್ಷಸಜೀವಗಳನ್ನು ಹುಡುಕಿಕೊಳ್ಳಿ. ರಾಕ್ಷಸ ತನ್ನ ಜೀವ ಜೋಪಾನವಾಗಿರಲಿ ಎಂದು ತಾನೆ ಅಷ್ಟೊಂದು ದೂರದಲ್ಲಿಟ್ಟಿದ್ದ? ನಾವೂ ಹಾಗೇ ಅಲ್ಲವೇ ಕೆಲವು ವಸ್ತುಗಳನ್ನು ಜೋಪಾನವಾಗಿರಲಿ ಎಂದು ಎತ್ತಿಟ್ಟುಬಿಡುತ್ತೇವೆ. ಆಮೇಲೆ ಸಮಯ ಬಂದು ತೀರಾ ಅರ್ಜೆಂಟಾಗಿ ಅದು ಬೇಕಾದರೆ, ಇಟ್ಟ ಜಾಗ ಮರೆತು ಹೋದರೆ ಮನೆಯಲ್ಲೇ ಏಳು ಸಮುದ್ರ, ಏಳು ಪರ್ವತ ಎಲ್ಲವೂ ಉದ್ಭವವಾಗುತ್ತದೆ. ಉದಾಹರಣೆಗೆ ನನ್ನ ಮಗನ ಡ್ರೈವಿಂಗ್ ಲೈಸೆನ್ಸ್!!. ಹುಡುಗ ಕೆಲಸಕ್ಕೆ ಸೇರಿದ ತಕ್ಷಣ ಹೊಚ್ಚಹೊಸಾ ಸ್ಕೂಟರ್ ಕೊಂಡ. ಪರ್ಮನೆಂಟ್ ಲೈಸೆನ್ಸ್ ಸಹ ಮಾಡಿಸಿದ. ಹಲವು ತಿಂಗಳಷ್ಟೇ ರಸ್ತೆಯ ಮೇಲೆ ಗಾಡಿ ಓಡಿಸಿದ ಸುಖ ಕಂಡಿದ್ದು. ‘ದಾನೆ ದಾನೆಪೆ ಲಿಖಾ ಹೈ ಖಾನೆವಾಲೆಕಾ ನಾಮ್’ (ಧಾನ್ಯ ಧಾನ್ಯದ ಮೇಲೂ ತಿನ್ನುವವರ ಹೆಸರು ಬರೆದಿರುತ್ತದೆ) ಎನ್ನುವುದು ನಿಜವೇ ಆದಂತೆ, ಅವನ ಹೆಸರು ಸಿಂಗಪುರದ ಅಕ್ಕಿಕಾಳುಗಳ ಮೇಲೆ ಬರೆದಿತ್ತಲ್ಲ? (ಅವನೇನು? ಅವನ ಇಡೀ ಸಂಸಾರದ್ದೂ, ಆಗಾಗ್ಗೆ ಕೆಲವು ಕೆ.ಜಿ ಕಾಳುಗಳ ಮೇಲೆ ನಮ್ಮದೂ) ಸಿಂಗಪುರದಲ್ಲಿ ಕೆಲಸ ಸಿಕ್ಕು ಹೊರಟೇ ಹೋದ. ಹೋಗುವಾಗ “ಅಮ್ಮ ಇದು ನನ್ನ ಡ್ರೈವಿಂಗ್ ಲೈಸೆನ್ಸ್ ಜೋಪಾನವಾಗಿ ಎತ್ತಿಡು” ಎಂದು ಕೊಟ್ಟ. ನಾನೂ ಜೋಪಾನವಾಗೇ ಎತ್ತಿಟ್ಟೆ.

ಎರಡು ವರ್ಷದ ನಂತರ ಬಂದ. “ಅಮ್ಮ ನಮ್ಮ ದೇಶದ ಏರ್ ಕಂಡೀಶನ್ ಬಸ್ಸು,ರೈಲು, ಟ್ಯಾಕ್ಸಿಗಳ ಕಾಟ ಸಾಕಾಗಿ ಹೋಗಿದೆ, ಸ್ಕೂಟರ್ ಓಡಿಸುವ ಮಜವೇ ಬೇರೆ. ಎಲ್ಲಿ ನನ್ನ ಡ್ರೈವಿಂಗ್ ಲೈಸೆನ್ಸ್” ಎಂದ. ಎಲ್ಲಿದೆ? ಅದು ರಾಕ್ಷಸನ ಜೀವ ಆಗಿದೆ. ಮನೆ ಮೂರುಸುತ್ತು ಹುಡುಕಿದ್ದಾಯಿತು. ಉಹೂಂ ಸಿಗಲೇ ಇಲ್ಲ. ಪಾಪ ಹುಡುಗನ ಸ್ಕೂಟರ್ ಓಡಿಸುವ ಆಸೆ ಪಂಜರದ ಗಿಣಿಯನ್ನೇ ಸೇರಿತು. ಮೂರು ವಾರಗಳು ಹುಡುಕಾಟಕ್ಕೇ ಮೀಸಲಾಯಿತು. ಅವನೂ ಜೋಲು ಮೋರೆ ಹಾಕಿಕೊಂಡು ಅಪ್ಪನ ಹಿಂದೆ ಕುಳಿತೇ ಬೆಂಗಳೂರಿನ ದಿಕ್ಕುದಿಕ್ಕಿಗೆ ತಿರುಗಿದ್ದೂ ಆಯಿತು. ನಾಲ್ಕನೇ ವಾರ ಅವನು ಏರೋಪ್ಲೇನ್ ಏರಿದ. ಬಿಕೋ ಎನ್ನುತ್ತಿದ್ದ ಮನೆಯ ಮೂಲೆಯ ಬೀರುವಿನಲ್ಲಿ ಲೈಸೆನ್ಸ್ ಮುಸಿಮುಸಿ ನಗುತ್ತಿತ್ತು.

ಇದೇನೋ ಕಣ್ಣಿಗೆ ಕಾಣದ ಹಾಗೆ ಎತ್ತಿಟ್ಟಿದ್ದರಿಂದ ಹೀಗಾಯಿತು ಎನ್ನಬಹುದು. ಕೆಲವೊಮ್ಮೆ ಕಣ್ಣೆದುರಿರುವ ವಸ್ತುಗಳೇ ರಾಕ್ಷಸಜೀವವಾಗಿ ಬಿಡುತ್ತವೆ ಗೊತ್ತಾ? ಈಗಿನ ಕಾಲದ ವಿದ್ಯಾವಂತರಾದ ನಾವು ಗೃಹಿಣಿಯರು ಯಾವಯಾವುದಕ್ಕೋ ತಲೆಕೆಡಿಸಿಕೊಳ್ಳುತ್ತಿರುತ್ತೇವೆ. ಅದರಲ್ಲೂ ಅಡಲ್ಟ್ರೇಶನ್ ಎನ್ನುವ ಪದ ಕಿವಿಗೆ ಬಿದ್ದರೆ ಸಾಕು ಹೌಹಾರುತ್ತೇವೆ. ಒಮ್ಮೆ ಒಬ್ಬ ಗೆಳತಿ ಹೇಳಿದಳು ” ನಾವು ಬಳಸುವ ಇಂಗಿನಲ್ಲಿ ಮೈದಾಹಿಟ್ಟಲ್ಲದೇ ಇನ್ನೂ ಏನೇನೋ ಇರುತ್ತದಂತೆ, ಅದು ಆರೋಗ್ಯಕ್ಕೆ ಹಾನಿಯಂತೆ, ಅದಕ್ಕೇ ಹಾಲುಇಂಗು ಬಳಸಬೇಕಂತೆ”!! ಸರಿ ನನ್ನ ಸವಾರಿ ಮರುದಿನವೇ ಗ್ರಂಥಿಗೆ ಅಂಗಡಿಯ ಕಡೆಗೆ ಚಿತ್ತೈಸಿತು.

” ಶಟ್ರೆ ಹಾಲಿಂಗು ಕೊಡಿ” ಎಂದೆ. ನನ್ನನ್ನು ವಿಚಿತ್ರವಾಗಿ ನೋಡಿದ ಶಟ್ಟರು ” ಯಾಕಮ್ಮ? ಸುಲಭವಾಗಿ ಬಳಸಬಹುದಾದ ಪುಡಿ ಇಂಗುಗಳಿವೆಯಲ್ಲ”? ಎಂದರು. ಓಹೋ ಇವರು ನನಗೆ ಅಶುದ್ಧ ಕಲಬೆರಕೆ ವಸ್ತುವನ್ನು ತಗಲುಹಾಕಲು ನೋಡುತ್ತಿದ್ದಾರೆ ಎಂದೇ ನನ್ನ ಗುಮಾನಿ. ” ಇಲ್ಲ ಹಾಲಿಂಗೇ ಬೇಕು ” ಎಂದೆ ದೃಢವಾಗಿ. ” ಸರಿ ತಗೊಳ್ಳಿ. ಆದರೆ ಅದರ ವಾಸನೆ ತುಂಬಾ ಕಟು. ನಿಮ್ಮ ಬ್ಯಾಗಿನಲ್ಲಿ ಬೇರೆ ವಸ್ತುಗಳಿದ್ದರೆ ಅದರ ಜೊತೆ ಇಡಬೇಡಿ. ಸಕ್ಕರೆ, ಬೆಲ್ಲ, ಇಂಥವಿದ್ದರೆ, ಅದಕ್ಕೆ ಇಂಗಿನ ವಾಸನೆ ತಗುಲಿಬಿಟ್ಟರೆ, ಅದರಿಂದ ಮಾಡಿದ ಸಿಹಿ ತಿಂಡಿಯೆಲ್ಲಾ ಇಂಗಿನ ಮಯವಾಗಿ ಬಿಡುತ್ತದೆ. ಅದಕ್ಕೇ ಬೇರೆಯಾಗೇ ಇಟ್ಟುಕೊಳ್ಳಿ” ಎಂದು ಒಂದು ಸೀಲ್ ಆದ ಪುಟ್ಟ ಪ್ಲಾಸ್ಟಿಕ್ ಕವರ್ನಲ್ಲಿ ನಸು ಬಿಳಿ,ನಸು ಮರದ ಬಣ್ಣದ ಇಡ್ಲಿಹಿಟ್ಟಿನಂಥಾ ಮೆತ್ತಗಿನ ವಸ್ತುವನ್ನು, ಮತ್ತೆರಡು ಕವರ್ಗಳಲ್ಲಿ ಇಟ್ಟು, ಅದನ್ನೊಂದು ಪೇಪರ್ ಬ್ಯಾಗಿಗೂ ಹಾಕಿ, ಮತ್ತೊಂದು ಕ್ಯಾರಿ ಬ್ಯಾಗ್ನಲ್ಲಿಟ್ಟುಕೊಟ್ಟರು. ಐದು ಕವಚಗಳೊಳಗೆ ಇಂಗು ಬಂಧಿಯಾಗಿತ್ತು. ಆದರೂ ಮೂಗಿನ ಸೆಲೆ ಒಡೆದುಹೋಗುವಂತೆ ಸುವಾಸನೆ ಬೀರುತ್ತಿತ್ತು. ನಾನೇನೂ ಸಕ್ಕರೆ ಬೆಲ್ಲ ಕೊಂಡಿರಲಿಲ್ಲ. ಮರುದಿನ ದೇವರ ಪೂಜೆಗೆ ಎಂದು ಶಾವಂತಿಗೆ ಹೂವನ್ನು ಕೊಂಡಿದ್ದೆ. ಹೂವು ತಾನೆ ಎಂದು ಅದೇ ಬ್ಯಾಗಿಗೆ ಹಾಕಿದೆ. ಮನೆಗೆ ಬಂದು ನೋಡುತ್ತೇನೆ ಶಾವಂತಿಗೆ ಹೂವೆಲ್ಲಾ ಇಂಗಿನ ಪರಿಮಳದಲ್ಲಿ ಮುಳುಗಿ ಹೋಗಿತ್ತು. ಪಾಪ ನಮ್ಮ ದೇವರು ಮರುದಿನವಿಡೀ ಆ ಹೂವನ್ನೇ ಧರಿಸಿ ಇಂಗಿನ ವಾಸನೆ ಕುಡಿಯಬೇಕಾಯಿತು.

ಮನೆಗೆ ಬಂದವಳೇ ಇಂಗಿನ ಬ್ಯಾಗನ್ನು ಒಂದು ಚಿಕ್ಕ ಪ್ಲಾಸ್ಟಿಕ್ ಏರ್ಟೈಟ್ ಡಬ್ಬಿಗೆ ಹಾಕಿ, ಅದನ್ನು ಸ್ಟೀಲ್ ಡಬ್ಬದಲ್ಲಿ ಒಲೆಯ ಹತ್ತಿರವೇ ಕಣ್ಣಿಗೆ ಕಾಣುವಂತೆಯೇ ಇಟ್ಟುಕೊಂಡೆ. ಆದರೇನು ಅದೂ ರಾಕ್ಷಸಜೀವವೇ ಆಯಿತು. ಹೇಗೆ ಅನ್ನುತ್ತೀರೋ? ಅಡಿಗೆ ಮಾಡುವವರಿಗೆ ಇಂಗಿನ ನೆನಪು ಬರುವುದು ಯಾವಾಗ? ಒಗ್ಗರಣೆಗೆ ಸೌಟನ್ನು ಒಲೆಯ ಮೇಲಿಟ್ಟು, ಎಣ್ಣೆಹಾಕಿ, ಅದು ಕಾದಾಗ ಸಾಸಿವೆ ಹಾಕುವಾಗ ತಾನೆ? ನಾನು ತಂದ ಇಂಗೋ ಒಂದು ಸ್ಟೀಲ್ ಡಬ್ಬಿ, ಒಂದು ಪ್ಲಾಸ್ಟಿಕ್ ಡಬ್ಬಿ, ಮತ್ತೆ ಐದು ಕವರ್ಗಳಲ್ಲಿ ಬಂಧಿ!! ಇಲ್ಲಿ ಎಣ್ಣೆಕಾಯುತ್ತಿರುವಾಗ ನಾನು ಸ್ಟೀಲು,ಪ್ಲಾಸ್ಟಿಕ್, ಎಲ್ಲ ಏಳು ಸಮುದ್ರಗಳನ್ನು ದಾಟಿ ಹೆಸರುಕಾಳಿನಷ್ಟು ಇಂಗನ್ನು ತೆಗೆದು, ಮತ್ತೆ ಎಲ್ಲವನ್ನೂ ಯಥಾಸ್ಥಿತಿಯಲ್ಲಿರಿಸ ಬೇಕು. ಏಕೆಂದರೆ ಅಂಗಡಿಯ ಶಟ್ಟರು ವಾರನ್ ಬೇರೆ ಮಾಡಿದ್ದರಲ್ಲ? ಆ ಇಂಗನ್ನು ಗಾಳಿಗೆ ಸೋಕಿಸಲೇ ಬಾರದಂತೆ ಹಾಗೆ ಮಾಡಿದರೆ ಅದು ಕಲ್ಲಿನಂತೆ ಗಟ್ಟಿಯಾಗಿ ನಿರುಪಯೋಗಿಯಾಗಿ ಬಿಡುತ್ತದೆ. 60 ರೂಪಾಯಿ ಗೋತಾ!! ಇಷ್ಟೆಲ್ಲಾ ಮಾಡುವ ಹೊತ್ತಿಗೆ ನನ್ನ ಒಗ್ಗರಣೆ ಶ್ರೀಮದ್ ರಮಾರಮಣ ಗೋವಿಂದಾ ಗೋವಿಂದ!!. ಹೊರಗಿರುವ ಅಗ್ನಿದೇವರು ಸೌಟಿನ ಒಳಗೂ ರಾರಾಜಿಸುತ್ತಿರುತ್ತಾರೆ. ಅದಕ್ಕೇ ನಾನು ಅದರ ತಂಟೆಗೇ ಹೋಗಿಲ್ಲ. ಮೂರು ತಿಂಗಳಿನಿಂದ ಆ ಇಂಗು ಏಳು ಸಮುದ್ರ, ಏಳು ಕಾಡುಗಳಾಚೆ ಭದ್ರವಾಗಿದೆ. ಎಜಮಾನರು ಆಗೀಗ ‘ಯಾಕೋ ಸಾರು ಮೊದಲಿನಂತಿಲ್ಲ’ ಎಂದು ಗೊಣಗುತ್ತಿರುತ್ತಾರೆ. ‘ಹಾಗೇನಿಲ್ಲವಲ್ಲ’ ಎಂದು ನಾನು ಸಮರ್ಥಿಸಿಕೊಂಡರೆ ಆಯಿತು.  ‘ಎಲ್ಲೋ ನನ್ನ ನಾಲಿಗೆಯೇ ಕೆಟ್ಟಿರಬೇಕು’ ಎಂದುಕೊಂಡು ಸುಮ್ಮನಾಗುತ್ತಾರೆ ಪಾಪ!! ಬಹಳ ವರ್ಷಗಳಿಂದ ಅಡುಗೆ ಮಾಡಿದ ಅನುಭವವಿರುವವರಿಗೆ ಈ ಥರದ ಭಂಡತನಗಳು ಕರಗತ ಬಿಡಿ.

ಇದುವರೆವಿಗೂ ಹೇಳಿದ್ದೆಲ್ಲಾ ಹೊರಗಿನ ರಾಕ್ಷಸಜೀವದ್ದು. ನಮ್ಮ ತಲೆಯ ಒಳಗೇ ಈ ರಾಕ್ಷಸಜೀವ ಕಾಡುತ್ತದೆ ಎಂದರೆ ಒಪ್ಪುತ್ತೀರಾ ನೀವು? ಉದಾಹರಣೆಗೆ, ತುಂಬಾ ಹತ್ತಿರದವರ ಅಂದರೆ ಅಣ್ಣನೋ, ತಮ್ಮನೋ, ಹೆಂಡತಿಯ ತಾಯಿ ಮನೆಯದೋ, ಬಾಸ್ನ ಮನೆಯದೋ, ಫೋನ್ ನಂಬರನ್ನು ನೆನಪಿನಲ್ಲಿಟ್ಟು ಕೊಂಡಿರುತ್ತೀರಿ. ಎಲ್ಲೂ ಬರೆದುಕೊಳ್ಳುವುದಿಲ್ಲ ಸಹ. ಏಕೆಂದರೆ ‘ದಿನಕ್ಕೆ ಹತ್ತುಸಲ ಮಾಡುತ್ತೇನೆ ಅದನ್ನೂ ಬರೆದುಕೊಳ್ಳ ಬೇಕೆ’ ಎನ್ನುವ ಉಡಾಫೆ. ಆ ಹತ್ತಿರದ ಬೇಕಾದವರೇ ಒಂದು ವಾರವೋ ತಿಂಗಳೋ ಊರಿಗೆ ಹೋಗಿ, ನೀವು ಫೋನ್ ಮಾಡಲು ಸಾಧ್ಯವಾಗಿಲ್ಲ. ಈಗ ಆ ನಂಬರ್ ನಿಮ್ಮ ತಲೆಯೊಳಗೇ ರಾಕ್ಷಸನ ಜೀವ!! ಅವರು ಊರಿಗೆ ಬಂದಿದ್ದಾರೋ ಇಲ್ಲವೋ ತಿಳಿದುಕೊಳ್ಳಬೇಕು, ಫೋನ್ ನಂಬರ್ ಮಂಗಮಾಯ! ಎಲ್ಲೂ ಒಂದು ತುಂಡು ಕಾಗದದ ಮೇಲೂ ಬರೆದುಕೊಂಡಿಲ್ಲ. ತಲೆಯಲ್ಲಿನ ಏಳು ಸಮುದ್ರ, ಏಳು ಕಾಡು ಎಲ್ಲ ತಡಕಿದರೂ ಪಂಜರ ಕಾಣುತ್ತಿಲ್ಲ, ಗಿಣಿ ಸಿಕ್ಕುತ್ತಿಲ್ಲ!! ಆಗ ಪಡುವ ಚಡಪಡಿಕೆ ಇದೆಯಲ್ಲ ಅದು ಕೊಲ್ಲುವ ಶತ್ರುವಿಗೂ ಬೇಡ!!

ಇದೆಲ್ಲಾ ಬಿಡಿ. ಇದು ಬರೀ ನೆನಪು, ಮರೆವುಗಳ ಹಾವಳಿಯಾಯಿತು. ಈಗ ಅತಿ ಆಸೆಯ ಅಪ್ಪಅಮ್ಮಂದಿರೂ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯೂ ಸೇರಿಕೊಂಡು ಮಾಡುತ್ತಿರುವುದೇನು? ಪುಟ್ಟ ಮಕ್ಕಳಿಗೆ ಬಾಲ್ಯದ ಸುಖವನ್ನೇ ‘ರಾಕ್ಷಸಜೀವ’ ಮಾಡಿಬಿಟ್ಟಿದ್ದಾರಲ್ಲ?. ಕೂಸು ಹುಟ್ಟುತ್ತಲೇ ಕಣ್ಣಿಗೆ ಕಂಪ್ಯೂಟರ್ ಸಿಕ್ಕಿಸಿ, ಐ.ಟಿ, ಬಿ.ಟಿಗಳ ಕನಸುಕಾಣುವ ಪೋಷಕರು, ಶಾಲೆಗೆ ಪದಾರ್ಪಣ ಮಾಡುತ್ತಲೇ, ತಮ್ಮಕೈಗೊಂದು ಸಿ.ಪಿ.ಯು ಸಿಕ್ಕಿತೆಂದು ಎಲ್ಲ ಮೆಮೊರಿಚಿಪ್ಗಳನ್ನೂ ತಲೆಗೆ ತುಂಬಿಸಿ ಬಿಡುವ ಉಪಾಧ್ಯಾಯ ವೃಂದ! ಬೆನ್ನಹೊರೆಯ ಭಾರದಲ್ಲಿ, ಯಾಂಕಿನ ಮಹಾಪೂರದಲ್ಲಿ ಸಹಜವಾಗಿ ಅರಳಬೇಕಾಗಿದ್ದ ಬಾಲ್ಯದ ಸುಖವೇ ನಮ್ಮ ಮಕ್ಕಳ ಪಾಲಿಗೆ ಏಳು ಸಮುದ್ರದಾಚೆ!! ಈಗಿನ ಮಕ್ಕಳಿಗೆ ಕಥೆ ಕೇಳುವ ಸುಖ ಗೊತ್ತಿಲ್ಲ. ಮರದ ಮೇಲೇರುವ ಕೊಂಬೆಯಿಂದ ಕೊಂಬೆಗೆ ಹಾರುವ ಹಕ್ಕಿಯ ಭಾವ ಗೊತ್ತಿಲ್ಲ. ಪುಟ್ಟ ನಾಯಿಮರಿಯನ್ನು ಅಟ್ಟಿಸಿಕೊಂಡು ಓಡಿಗೊತ್ತಿಲ್ಲ. ಕಾಡಿಬೇಡಿ ಬೆಲ್ಲ, ಅವಲಕ್ಕಿ ಇಸಕೊಂಡು ‘ಅಮ್ಮಆಟ’ ಆಡಿಗೊತ್ತಿಲ್ಲ. ಗಿಡದ ಎಲೆಯನ್ನು ವಿಳೆದೆಲೆ ಮಾಡಿ, ಪುಟ್ಟ ಕಲ್ಲುಗಳನ್ನೇ ಅಡಿಕೆ ಮಾಡಿ, ಪುಟ್ಟ ಕಡ್ಡಿಗೇ ಟವಲ್ಲು ಸುತ್ತಿ ಮಗುಮಾಡಿ….. ಉಹೂಂ ಈ ಯಾವ ಕಲ್ಪನೆಯೂ ಈ ಮಕ್ಕಳ ಪಾಲಿಗೆ ದಕ್ಕುವುದೇ ಇಲ್ಲ. ಇನ್ನು ಹಳ್ಳಿಹಳ್ಳಿಗೂ ಇಂಗ್ಲೀಷಿನ ಗುಮ್ಮ ಹೊರೆಟಿದ್ದಾನೆ!! ಆ ಮಕ್ಕಳು ಕೆರೆಯೆ ದಂಡೆಯ ಮೇಲಿನ ಆಟವನ್ನು ಮರೆತು ಹೋಂವರ್ಕ್ ಹೊತ್ತುಕೊಳ್ಳುತ್ತವೆ.

ಹುಟ್ಟಿದ ಐದುವರ್ಷಗಳು ಜಗತ್ತನ್ನು ಬೆರಗುಗಣ್ಣಿಂದ ನೋಡಿ ಅರಗಿಸಿಕೊಳ್ಳುವುದಕ್ಕೇ ಬೇಕಾಗುತ್ತದೆ. ಆ ನಂತರ ಏಳು ವರ್ಷಗಳಷ್ಟೇ ಬಾಲ್ಯದ ಸುಖ ದಕ್ಕುವುದು. ಹದಿಮೂರಕ್ಕೆ ಹದಿಹರೆಯದ ಪುಳಕಗಳು ಪ್ರಾರಂಭ! ನಲವತ್ತರ ವರೆಗೂ ಯೌವನದ ಸಂಭ್ರಮವೇ ಸಂಭ್ರಮ! ನಲವತ್ತರ ನಂತರ ಜಗತ್ತನ್ನೇ ಗೆದ್ದ ಪ್ರೌಢಾವಸ್ಥೆಯ ಹೆಮ್ಮೆ. ಅರವತ್ತಾದ ಮೇಲೆ ಹಿಂತಿರುಗಿ ನೋಡುವ ಚಪಲ!! ಎಲ್ಲ ಅವಸ್ಥೆಗೂ ದಶಕಗಳ ಅವಧಿಯಿದೆ. ಬಾಲ್ಯಕ್ಕೆ ಏಳೇ ವರ್ಷ!! ಇಂದಿನ ಮಕ್ಕಳಿಗೆ ಅದೂ ಕೈ ತಪ್ಪಿ ಹೋಗುತ್ತಿದೆಯಲ್ಲ?  ಯಯಾತಿ ನಾಟಕದಲ್ಲಿ ಯಯಾತಿ ಮಹಾರಾಜನ ವೃದ್ಧಾಪ್ಯವನ್ನು ತೆಗೆದುಕೊಂಡು ತನ್ನ ಯೌವನವನ್ನು ಕೊಟ್ಟ ಅವನ ಮಗ ಪುರು ಹೇಳುತ್ತಾನೆ ” ಅಪ್ಪ ನೀನು ಮಗನ ಯೌವನ ತೆಗೆದುಕೊಳ್ಳಲು ನಾಚ ಬೇಡ. ನಾನು ಹುಟ್ಟಿದಾಗಲೇ ಮುದುಕನಾಗಿದ್ದೆ. ಕೆಲವರಿಗೆ ಹಾಗೇ ಹುಟ್ಟಿದ ಕೂಡಲೇ ಮುಪ್ಪು ಬಂದು ಬಿಡುತ್ತದೆ” ನಾವೀಗ ಮಾಡಹೊರೆಟಿರುವುದೂ ಅದೇ. ನಮ್ಮ ಮುಂದಿನ ಪೀಳಿಗೆಗೆ ಬಾಲ್ಯಾವಸ್ಥೆಯಲ್ಲೇ ಪ್ರೌಡತ್ವದ ಬಟ್ಟಲುಗಳನ್ನು ದಕ್ಕಿಸಿಕೊಡುತ್ತಿದ್ದೇವೆ. ಅವರ ಬಾಲ್ಯದ ‘ಸುಖ’ ಏಳು ಸಮುದ್ರದಾಚೆ, ಏಳು ಪರ್ವತಗಳಾಚೆ, ಏಳನೇ ಕಾಡಿನ ಏಳನೇ ಮರದ ಏಳನೇ ಕೊಂಬೆಯ ಮೇಲಿದೆ!!!

‍ಲೇಖಕರು avadhi

20 May, 2013

1 Comment

  1. ಉದಯಕುಮಾರ್ ಹಬ್ಬು

    ಹೌದು! ಇಂತಹ ರಾಕ್ಷರುಗಳಿಂದಲೇ ಬದುಕು ಸಹನೀಯ ಎನಿಸುವುದು.ಬದುಕಲು ಉದ್ದೇಶ ದೊರೆಯುವುದು. ಇನ್ನೂ ಹಲವಾರು ಉದಾಹರಣೆಗಳನ್ನು ಲೇಖರು ಬಿಟ್ಟಿದ್ದಾರೆ. ಹೊಸ ಬಗೆಯ ಹೊಸ ವಿಚಾರಗಳುಳ್ಳ ಪ್ರಬಂಧ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading