4
ಏಕ್ ಥೀ ಮೀನಾಕುಮಾರಿ

ಲಕ್ಷ್ಮೀಕಾಂತ ಇಟ್ನಾಳ
ಮೀನಾಕುಮಾರಿಯ ನೆನಪಿನ ಸ್ವಗತ ಇನ್ನೂ ಮುಂದುವರೆದೇ ಇತ್ತು, ” ಹಾಂ, ನಿಮಗೆ ಹೇಳಲೇಬೇಕು, ‘ಕಮಾಲ್ ತನ್ನ ಅನೇಕ ಇಂಟರ್ವ್ಯೂಗಳಲ್ಲಿ ಮತ್ತೆ ಮತ್ತೆ ಅದೇನು ಹೇಳುತ್ತಿದ್ದ, ಹಾಂ, ‘ತುಮ್ ಜೋ ದರ್ವಾಜೇ ಖುಲೇ ಛೋಡಗಯೀ ಹೋ , ವೋ ಆಜ್ ಭೀ ಖುಲೇ ಹೈಂ’ ಎಷ್ಟೊಂದು ಖುಷಿಯಾಗುತ್ತಿತ್ತು ಇದನ್ನು ಮತ್ತೆ
ಮತ್ತೆ ಕೇಳುತ್ತ, ಓದುತ್ತ ಮನಸ್ಸು ಎಷ್ಟು ಮುದಗೊಳ್ಳುತ್ತಿತ್ತಲ್ಲವೇ. ಆದರೆ ಅವನು ಬಂದು ಕೈಹಿಡಿದು ಕರೆಯಲೇ ಇಲ್ಲ, ನಾನೂ ಕೂಡ ಅದು ಹೇಗೆ ಹೋಗಲಿ ಈ ಮುಖ ಹೊತ್ತು! ಅದೊಮ್ಮೆ ಮದುವೆ ಆದ ಹೊಸತರಲ್ಲಿ ಅಮ್ರೋಹಿ, ಕೈಯಲ್ಲಿರುವ ಚಿತ್ರಗಳನ್ನು ಮಾತ್ರ ಪೂರ್ಣಮಾಡು. ಮುಂದೆ ಹೊಸದಕ್ಕೆ ಸಹಿ ಮಾಡಕೂಡದು ಎಂದಿದ್ದ. ಏನೇನೋ ಮಾತಾಡುತ್ತಿದ್ದ, ನಾನು ಸುಮ್ಮನಿದ್ದೆ. ಆದರೆ ಕೊನೆಗೊಮ್ಮೆ ಹೇಳಿದ್ದೆ. ”ನಾನು ನಾಲ್ಕು ವರ್ಷದವಳಿದ್ದಾಗಿನಿಂದಲೇ ಅಭಿನಯಿಸುತ್ತಿರುವೆ. ಈ ‘ರೋಶನೀ’ (‘ಲೈಟ್ಸ್’) ಇಲ್ಲದೇ ನಾನಿಲ್ಲ. ಅದು ನನ್ನುಸಿರು. ಅದಿಲ್ಲದೇ ನಾನಿನ್ನ ಜೊತೆಗಿರಲಾರೆ. ನಿನಗಿಷ್ಟವಿಲ್ಲದಿದ್ದರೆ, ಬೇಕಿದ್ದರೆ ನನಗೆ ತಲಾಖ್ ಕೊಟ್ಟುಬಿಡು.” ದಿಗ್ಭ್ರಾಂತನಾಗಿದ್ದ ಅಮ್ರೋಹಿ. ಆಗ ನಾನು ಮಾತಾಡುತ್ತಿದ್ದೆ, ಅವನು ಸುಮ್ಮನಿದ್ದ.”
ಅಂತೂ ಹಾಗೊಮ್ಮೆ ಹೀಗೊಮ್ಮೆ ತೇಲುತ್ತಲಿದ್ದ ಅವರ ಬದುಕಿನ ದೋಣಿಯ ಬಿರುಕು ಮುಚ್ಚಲಾರದಷ್ಟು ವಿಶಾಲ, ಆಳವಾಗಿ, ಪರಸ್ಪರ ‘ಈಗೋ’ (ಅಹಂ’) ಒಳಹೊಕ್ಕುಬಿಟ್ಟಿತ್ತು. ಪ್ರೀತಿ ಆರತೊಡಗಿತ್ತು. ಆಪ್ತತೆಯ ಮಾತುಗಳಿಗೆ ಗರಬಡಿಯತೊಡಗಿತ್ತು. ಚಂದನದಂತಹ ಮಂಜು, ಮಂಜುವಿನಂತಹ ಚಂದನ್ ರಲ್ಲಿ ಅಪಸ್ವರ ಜಿನುಗತೊಡಗಿತ್ತು ಒಳಹೊರಗೂ. ಬಾಡಿದ ಹೂ ಸುಗಂಧ ದುರ್ಗಂಧವೆನಿಸತೊಡಗಿತ್ತು. ಅಸಹನೀಯವೆನಿಸಿತ್ತು. ದೋಣಿ ಮುಳುಗತೊಡಗಿತ್ತು.
ಮೇರೆ ಸಾಮನೆ ಭೀ ಅಗರ್ ಅಬ್ ವೊ ಆಯೆ,
ನ ದೇಖೇಂಗಿ ಉನ್ಕೋ ಯೆ ಬೇಬಸ್ ನಿಗಾಹೇಂ,
ವೊ ಜಿನ್ ಕೆ ಲಿಯೆ ಹಮ್ ಫನಾ ಹೋ ಗಯೆ
ವಫಾ ಜಿನ್ ಸೆ ಕೀ, ಬೇವಫಾ ಹೋಗಯೆ
ವೊ ವಾದೇ ಮೊಹಬ್ಬತ್ ಕೆ ಕ್ಯಾ ಹೋಗಯೆ?
ನನ್ನಿದಿರಲೂ ಸಹ ಅವನೀಗ ಬಂದರೂ
ಕಣ್ಣೆತ್ತಿಯವಗೆ ನೋಡದು ಉನ್ಮತ್ತ ನಜರು
ಯಾರಿಗಾಗಿ ನಾನು ಸರ್ವನಾಶವಾದರು
ದ್ರೋಹಿಯಾದರವರು ನಾ ನಂಬಿದವರು
ಆ ಭಾಷೆ, ಆ ಒಲುಮೆ ಹೋಯಿತೆಲ್ಲಿ ಕಾಣಿರೊ!
ಅದೊಮ್ಮೆ ಪ್ರೊಡ್ಯೂಸರರೊಬ್ಬರು ಮುಂಬಯಿ ಗವರ್ನರ್ರೊಂದಿಗೆ ಅಮ್ರೋಹಿಯನ್ನು ‘ಮೀನಾಕುಮಾರಿಯ ಗಂಡ ಎಂದು ಪರಿಚಯಿಸಿದ್ದುದಕ್ಕೆ, ಸಿಡಿದು ಬಿದ್ದಿದ್ದ ಅಮ್ರೋಹಿ. ಇಲ್ಲ, ”ನಾನು ಕಮಲ್ ಅಮ್ರೋಹಿ, ಇವಳು ನನ್ನ ಹೆಂಡತಿ ಮೀನಾಕುಮಾರಿ”ಎಂದು ಹೇಳಿ ಅಲ್ಲಿಂದ ಹೊರಬಂದಿದ್ದ. ಮತ್ತೊಮ್ಮೆ ಸಮಾರಂಭವೊಂದರಲ್ಲಿ ಮೀನಾಕುಮಾರಿ ಮರೆತ ಚಿನ್ನದ ಪಸರ್್ನ್ನು ನೋಡಿಯೂ ಅದನ್ನೆತ್ತಿಕೊಳ್ಳದೇ ಬಂದಿದ್ದ, ನಂತರ ಸಂಘಟಿಕರು ನೋಡಿ ಅದನ್ನು ಮೀನಾಗೆ ಕೊಟ್ಟಿದ್ದರು. ಮೀನಾಗೆ ಅಮ್ರೋಹಿ ಅದನ್ನು ನೋಡಿದ್ದರೂ ಎತ್ತಿಕೊಳ್ಳದಿದ್ದುದು ತಿಳಿದು ಕೇಳಿದ್ದಳು ಆಕ್ಷೇಪದಿಂದ ಅವನಿಗೆ, ‘ಕಮಾಲ್ ನಿನಗೆ ಗೊತ್ತೇ ಈ ಪಸರ್್ ಎಷ್ಟು (ಮೆಹಂಗಾ) ಕಿಮ್ಮತ್ತಿನದು’ ಎಂದಾಗ ‘ನನ್ನ ‘ಇಜ್ಜತ್'(ಗೌರವ) ಕ್ಕಿಂತ ದೊಡ್ಡದಲ್ಲ’ ಎಂದಿದ್ದ. ತಾನು ಪರಿತ್ಯಕ್ತೆ ಎಂದೆನಿಸಿತ್ತು ಈಗ ಅವಳಿಗೆ, ‘ಮೈಂ ಉನ್ ಅಪನೋ ಮೇಂ ಸೆ ಹೂಂ, ಜೋ ಆಜ್ಸೆ ಬೇಗಾನೆ ಹೈಂ’ ಅವಳ ಕೀತರ್ಿ ಅವನನ್ನು ಇನ್ನಿಲ್ಲದಂತೆ ಅವನಿಂದ ದೂರಸರಿಸತೊಡಗಿತ್ತು. ನುಂಗಲಾರದ ತುತ್ತಾಗುತ್ತಿದ್ದಳು ಮೀನಾ ಈಗ.
ಅದು 1967-68 ರ ದಿನಗಳೆಂದು ಕಾಣುತ್ತದೆ, ಹೇಳುತ್ತಾಳೆ ಮೀನಾ ಜಿ, ” ಅತ್ತಲಿಂದ ಹಲೋ ಎಂದು ಫೋನು ಮಾಡಿತ್ತು ಒಂದು ದನಿ. ‘ನಾನು ನೌನಿಹಾಲ್(1967) ಚಿತ್ರದ ನಿದರ್ೇಶಕ. ಅದಕ್ಕೆ ಅವಾರ್ಡ್ ಬಂದಿದೆ. ‘ಗೋಮ್ತೀ ಕೆ ಕಿನಾರೆ’ ಚಿತ್ರವೊಂದರ ಸ್ಕ್ರಿಪ್ಟ್ ಬರೆದಿರುವೆ. ಅದರಲ್ಲಿ ನೀವೇ ಹಿರೋಯಿನ್ ಆಗಬೇಕೆಂಬಾಸೆ’ ಎಂದಿದ್ದ. ಮನೆಗೆ ಬರಲು ತಿಳಿಸಿದೆ. ಬಂದು ತನ್ನ ಕತೆಯನ್ನು, ವಿವರಿಸಹತ್ತಿದ್ದ, ಬೆರಗಾಗಿ ಅವನನ್ನೇ ನೋಡುತ್ತ ಕುಳಿತುಬಿಟ್ಟಿದ್ದೆ. ಅವನೊಬ್ಬ ಇಪ್ಪತ್ತರ ಹದಿಹರೆಯದ ಹುಡುಗ. ಅವನನ್ನು ಪ್ರೋತ್ಸಾಹಿಸಬೇಕೆಂದು ‘ನೀನೇ ಚಿತ್ರ ನಿರ್ದೇಶಿಸುವುದಾದರೆ ನಾನು ಅಭಿನಯಿಸುವೆ ‘ ಎಂದೆ. ಖುಷಿಯಾದ. ಮುಂದೆ ಚಿತ್ರ ಸೆಟ್ಟೇರಿತು. ಪ್ರಾಮಾಣಿಕ ನಡೆನುಡಿಯಲ್ಲಿ ಅನಿಸಿತ್ತು. ಚಿತ್ರ ಅರ್ಧವಾದಾಗ ನನಗೆ ತುಂಬ ಅನಾರೋಗ್ಯ ಕಾಡತೊಡಗಿತು. 68 ರಲ್ಲಿ ಪ್ರಾರಂಭಿಸಿದ ಚಿತ್ರ 72 ರವರೆಗೂ ಎಳೆಯಿತು. ಹೀಗೆಯೇ ಮಾತಿಗೆ ಬಂದಾಗ, ‘ನಾನು ಬರಿದಾಗಿಬಿಟ್ಟೆ’ ಎಂದೊಮ್ಮೆ ಹೇಳಿದ್ದ. ಎಂಟು ದಿನ ಬಿಟ್ಟು ಒಂದೂವರೆ ಲಕ್ಷಗಳನ್ನು ಅವನ ಕೈಗಿತ್ತಿದ್ದೆ”.
ತನಗಾಗಿ ಅಸಲು ಬಾಂದ್ರಾದಲ್ಲಿರುವ ತನ್ನ ಬಂಗಲೆಯನ್ನೇ ಮುಮತಾಜ್ಗೆ ಮಾರಿದ್ದಳೆಂದು ಗೊತ್ತಾಗಿ ಅತ್ತುಬಿಟ್ಟಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ ಸಾವನ್ಕುಮಾರ. ಒಮ್ಮೊಮ್ಮೆ ಮನೆಯಲ್ಲಿ ರಾತ್ರಿ ಎಲ್ಲರೂ ಮಲಗಿದ್ದಾಗ ರಕ್ತವಾಂತಿಯನ್ನು ಮಾಡಿಕೊಳ್ಳುತ್ತಿದ್ದಳು. ಅದನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಳ್ಳುತ್ತಿದ್ದ. ಅವಳ ಮುಖ, ಹಾಸಿಗೆಯನ್ನು ಸ್ವಚ್ಛಗೊಳಿಸಿ, ತನ್ನ ಬಾಹುಗಳಲ್ಲಿ ಸಾಂತ್ವನಿಸಿ ಹಗೂರಾಗಿ ಮಲಗಿಸುತ್ತಿದ್ದ, ಪ್ರೀತಿಯಿಂದ ಚಾದರೊಂದನ್ನು ಹೊಚ್ಚಿ ಅವಳ ಹತ್ತಿರವೇ ಅವಳಿಗೆ ನಿದ್ದೆ ಬರುವವರೆಗೆ ಕಾಯುತ್ತಿದ್ದ. ಎಂದೂ ಬೇಸರಿಸಿಕೊಳ್ಳುತ್ತಿರಲಿಲ್ಲ. ತನ್ನ ಯಕ್ಷಿ ಮಲಗಿದ್ದಾಳೆಂದು ಖಾತ್ರಿಯಾದ ಮೇಲೆ ತಾನು ಅಡ್ಡಾಗುತ್ತಿದ್ದ. ಅವನ ಆರೈಕೆಯ ರೀತಿಯೇ ರೂಹಾನಿ (ದೈವೀಕ) ರೀತಿ. ಅವಳು ಅವನ ಇಷ್ಟದೇವತೆ. ತನ್ನ ಸ್ವಂತ ಸಹೋದರಿಯರು ಕೂಡ ಇಷ್ಟೊಂದು ಪ್ರೀತಿಯಿಂದ ಆರೈಕೆ ಮಾಡಿರಲಿಲ್ಲ. ಇಂತಹ ಪ್ರೀತಿಯನ್ನು ಪಡೆದ ತಾನೇ ಪುಣ್ಯಮಾಡಿರುವೆ ಎಂದುಕೊಳ್ಳುತ್ತಿದ್ದಳು. ಸಾವನ್ಗೆ ಅವಳ ಮೇಲೆ ಲವ್ ಸೆಕ್ಷ್ಗಳನ್ನು ಮೀರಿದ ‘ರೂಹಾನಿ ಇಶ್ಕ್’ (ದೈವಿಕ ಪ್ರೀತಿ) ತುಂಬಿಬಿಟ್ಟಿತ್ತು . ತನ್ನನ್ನು ದೇವತೆಯಂತೆ ಆರಾಧಿಸುತ್ತಿದ್ದ ಅವನಿಗೆ ಹೇಳಿದ್ದಳೊಮ್ಮೆ,” ನನ್ನ ಜೀವನದಲ್ಲಿ ಮೊತ್ತ ಮೊದಲೊಮ್ಮೆ ನಿಜಕ್ಕೂ ಸಿಕ್ಕಿತ್ತು ಪ್ರೀತಿ. ಈಗ ಕೊನೆಗಾಲದಲ್ಲೊಮ್ಮೆ ಸಿಕ್ಕಿದೆ. ನಿನ್ನಂತಹವನನ್ನು ಈ ಬದುಕಿನಲ್ಲಿಯೇ ಇದೇ ಪ್ರಥಮವಾಗಿ ನೋಡುತ್ತಿರುವೆ. ನಿನ್ನನ್ನು ತುಂಬ ಮೆಚ್ಚಿಕೊಂಡಿದ್ದೇನೆ. ಎಲ್ಲರಂತೆ ನನ್ನನ್ನು ಬಿಟ್ಟು ಹೋಗದಿರು ಸಾವನ್ ” ಬಿಕ್ಕಿದ್ದಳು ಅವನ ಅಂಗೈಗಳಲ್ಲಿ ಮುಖವಿರಿಸಿ ಕರ್ಪೂರದಂತೆ ಕರಗಿ ಕಣ್ಣೀರಾಗಿದ್ದಳು. .. ವಯದ ಪರಿವೆಯೇ ಅವರ ನಡುವೆ ಇರಲಿಲ್ಲ. ಅವನು ಇಪ್ಪತ್ತರಲ್ಲಿ ಇವಳು ಮೂವತ್ತೊಂಭತ್ತರಲ್ಲಿ. ಒಂದೊಮ್ಮೆ ಅವಳ ಸಂಬಂಧಗಳ ಬಗ್ಗೆ ಕೇಳುತ್ತಿದ್ದ ಯುವ ಸಾವನ್. ” ಏನು ಕೇಳುತ್ತೀ. …ಅವೆಲ್ಲ ನನ್ನ ಬದುಕಿನ ಲೈಬ್ರರಿಯಲ್ಲಿರುವ ಪುಸ್ತಕಗಳಂತಿವೆ. ಯಾವುದು ನನಗೆ ಆಸಕ್ತಿ ತರುತ್ತಿತ್ತೊ ಅದನ್ನು ಮತ್ತೆ ಮತ್ತೆ ಓದುತ್ತಿದ್ದೆ. ಯಾವುದು ರುಚಿಸಲಿಲ್ಲವೋ, ಅದನ್ನು ಎತ್ತಿಟ್ಟುಬಿಟ್ಟೆ. ನೀನೇ ಈಗ ನಾನು ಓದುತ್ತಿರುವ ಹೊಸ ಪುಸ್ತಕ”ಎಂದು ನಕ್ಕಿದ್ದಳು. ಅವಳ ‘ಇಲಾಜ್’ಗಾಗಿ ತನ್ನ ಸ್ಟಾಂಡರ್ಡ್ ಕಾರನ್ನು 15000 ರೂಪಾಯಿಗಳಿಗೆ ಮಾರಿ ಬಿಲ್ ತೀರಿಸಿದ್ದ ಯುವಕ ಸಾವನ್, ಅವಳು ಸಾಯುವ ಕೆಲವೇ ವಾರಗಳ ಮೊದಲು.
ಈ ನಡುವೆ ಅದಾವ ಗಳಿಗೆಯಲ್ಲೋ, ಇಬ್ಬರೂ ತುಂಬ ಸನಿಹದ ಒಡನಾಟದಲ್ಲಿ ಬಂದುಬಿಟ್ಟಿದ್ದರು. ಅವನಿಗೆ ತನ್ನ ಬೆಡ್ರೂಮಿಗೆ ಮಲಗಲು ಕರೆದೊಯ್ಯುತ್ತಿದ್ದಳು. ಗುಲಾಬಿ ಹೂವಿನ ಪಕಳೆಗಳನ್ನು ‘ಇಕೆಬಾನಾ’ದಂತೆ ಬೆಡ್ನ ತುಂಬ ಹರಡಿ ಮಲಗುವುದೆಂದರೆ ಬಹು ಇಷ್ಟ. ಹೀಗಾಗಿ ಸಾವನ್ಕುಮಾರ ಪ್ರತಿದಿನ ಮೂರು ನೂರು ರೂಪಾಯಿಗಳ ಗುಲಾಬಿಗಳನ್ನು ಅವಳ ರೂಮಿಗೆ ಕಳುಹಿಸುತ್ತಿದ್ದ, ಸೆಟ್ಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಅವಳ ದಾರಿಗುಂಟ ಹೂವುಗಳನ್ನು ಹಾಸುತ್ತಿದ್ದ. ಅನಾರೋಗ್ಯದ ನಡುವೆಯೇ ಚಿತ್ರೀಕರಣ ಕೈಗೊಳ್ಳಬೇಕಾದ ಅನಿವಾರ್ಯತೆ, ಅನೇಕ ಸಂದರ್ಭಗಳಲ್ಲಿ ಮೀನಾಗೆ ಎದ್ದು ನಿಲ್ಲಲಾಗುತ್ತಿರಲಿಲ್ಲ, ಅವಳನ್ನು ‘ಲಿಟರಲೀ’ ಹಿಡಿದು ನಿಲ್ಲಿಸಿ, ಟೇಕ್ಗಾಗಿ ಲೈಟ್ಸ್ ಆನ್ ಆಗುತ್ತಲೇ, ಕ್ಯಾಮರಾ ಲೆವಲ್ಗಿಂತ ಕೆಳಗೆ ಅಡಗಿ ಕುಳಿತಿರುತ್ತಿದ್ದ ಸಾವನ್. ಮುಗಿದ ದಿನ ಎಲ್ಲರೂ ಅವಳ ಮೇಲೆ ಹೂವುಗಳ ಸುರಿಮಳೆಗರೆಯುವಂತೆ ಪ್ರೀತಿಯ ಉತ್ಕಟತೆಯಲ್ಲಿ ವ್ಯವಸ್ಥೆ ಮಾಡಿದ್ದ.
ಮೀನಾಕುಮಾರಿ ಶಾಯರಿ, ಶೇರ್ಗಳನ್ನು , ಕಥೆಗಳನ್ನೂ ಕೂಡ ಬರೆಯುವ ಕವಿಯಿತ್ರಿ ಕೂಡ ಆಗಿದ್ದಳಲ್ಲವೇ. ‘ನಾಜ್’ ಎಂಬ ಕಾವ್ಯನಾಮ ಅವಳದು. ಮುಶಾಯಿರಾಗಳಲ್ಲಿ ತನ್ನ ಆಳ ಮಾದಕ ಕಂಠದಲ್ಲಿ ಅವುಗಳನ್ನು ಓದುತ್ತಿದ್ದರೆ, ಅವುಗಳ ಅರ್ಥವಂತಿಕೆಯೇ ಬೇರೆಯಾಗಿಬಿಡುತ್ತಿತ್ತು. ಅಕ್ಷರಗಳಿಗೆ ಜೀವ ತುಂಬಿ ಅರಳಿ ಮಾತನಾಡುತ್ತಿದ್ದವು. ಅಷ್ಟೊಂದು ಗಾಢ, ಭಾವಪೂರ್ಣ ಮಾದಕ ಓದು ಅವಳದು. ತನ್ನ ಹತ್ತಿರ ಇಟ್ಟುಕೊಂಡಿರುತ್ತಿದ್ದ ಡೈರಿಯಲ್ಲಿ ತನಗನಿಸಿದ ಸಂಗತಿಗಳನ್ನು, ಹೊಳೆದ ಕಾವ್ಯದ ಸಾಲುಗಳನ್ನು ತಕ್ಷಣ ದಾಖಲಿಸುವುದು ಅವಳ ‘ಹಾಬಿ’. ಅವಳ ಇಹಲೋಕ ಯಾತ್ರೆಯ ಅಂತ್ಯ ಸಮೀಪವಾಗಿರುವಾಗಲೇ ಈ ಡೈರಿ ಪಡೆಯಲು ಅನೇಕರು ಅದಕ್ಕಾಗಿ ಹುಡುಕಾಟ ನಡೆಸಿದ್ದರು. ಅಸಲಿನಲ್ಲಿ ಒಬ್ಬ ಕವಿಮಿತ್ರ ಹಾಗೂ ಅವಳ ಹೃದಯಕ್ಕೆ ಅತ್ಯಂತ ಸಮೀಪ ಹಾಗು ಪ್ರೀತಿ ಪಾತ್ರರಾದ ಗುಲ್ಜಾರರಿಗೆ ಮೀನಾಕುಮಾರಿ ತನ್ನ ಡೈರಿಯನ್ನು ನೀಡಿ ಅದರ ಸಂಪೂರ್ಣ ಮಾಲೀಕತ್ವವನ್ನು ಸಮರ್ಪಿಸಿದ್ದು ಅವರಿಬ್ಬರ ಅಪ್ಪಟ ಪ್ರೀತಿಯ, ಪರಸ್ಪರ ಇಟ್ಟುಕೊಂಡಿದ್ದ ಗೌರವ, ನಂಬಿಗೆಯ ದ್ಯೋತಕ. ಗುಲ್ಜಾರರ ಮೇಲಿನ ಅವಳ ನಂಬುಗೆ ಹುಸಿ ಹೋಗಲಿಲ್ಲ. ಗುಲ್ಜಾರ ಸಾಹೇಬ್ ಅವುಗಳನ್ನು ಜೋಡಿಸಿ, ಆಯ್ದು, ಹೆಣೆದು, 26 ಗಜಲ್, ಶಾಯರಿಗಳನ್ನಾಗಿ ಸಂಕಲಿಸಿ, ಪ್ರಕಟಿಸಿ ಮೀನಾಳ ಆಸೆಯನ್ನು ಈಡೇರಿಸಿದ್ದು, ಅವರ ನಿಲ್ಕಷ್ಮಷ ಗೆಳೆತನಕ್ಕೆ ಸಾಕ್ಷಿ. ಅವುಗಳನ್ನು ಪ್ರಕಟಿಸಲು ಕೋರಿದ್ದು, ತನಗೆ ನೀಡಿದ ಅತ್ಯುನ್ನತ ಗೌರವವೆಂದೇ ಭಾವಿಸುತ್ತಾರೆ ಗುಲ್ಜಾರರು. ಮೀನಾ ಹೇಳುತ್ತಾಳೆ. ‘ಇವು ಇನ್ನು ನಿಮ್ಮ ಸೊತ್ತು.’ ಅದಕ್ಕೆ ಗುಲ್ಜಾರರು, ‘ಆದರೆ ಮೀನಾ ಜಿ , ಒಮ್ಮೆ ಇವುಗಳನ್ನು ಓದಿದ ಮೇಲೆ ಇವು ಸಾರ್ವಜನಿಕ ಸೊತ್ತು, ನನ್ನವು ನಿನ್ನವು ಹೇಗಾದಾವು?’ ಎಂದು ಕೇಳುತ್ತಾರೆ. ಅದಕ್ಕೆ ಅವುಗಳನ್ನು ಸಾರ್ವಜನಿಕರ ಮುಂದಿಡುತ್ತಿದ್ದೇನೆ. ಹೂವುಗಳಂತೆ, ಎಂದು ಮನದ ಭಾವಗಳನ್ನು ಹೇಳಿಕೊಳ್ಳುತ್ತಾರೆ ಗುಲ್ಜಾರ್. ಅದುವೇ, ‘ಮೀನಾಕುಮಾರಿ ಕಿ ಶಾಯರೀ’ ಎಂಬ ಗಜಲ್, ಶಾಯರಿಗಳ ಸಂಗ್ರಹ ಕಾವ್ಯ.
ಇದೇ ಗಜಲ್ ಹಾಗೂ ಶಾಯರಿಗಳನ್ನು ಹೊತ್ತು ಖಯಾಮ್ ಪತ್ನಿ ಹಾಗೂ ಆಳ ಉದಾಸದನಿಯ ಗಾಯಕಿ, ಜಗಜಿತ್ ಕೌರ್ ಕಂಠದಲ್ಲಿ ಹಾಡಿಸುವ ಆಸೆಯಿಂದ ಮೀನಾ ಅವಳಲ್ಲಿಗೆ ಹೋಗಿದ್ದಳಲ್ಲವೇ!, ಆದರೆ ಅಸಲು ಅವು ಮೀನಾಳಿಗೆ ಅತ್ಯಂತ ಪ್ರಿಯವಾಗಿದ್ದು, ಅವುಗಳಲ್ಲಿ ತನ್ಮಯವಾಗಿ ಹಾಡುವ ಭಾವಕ್ಕೆ ಮರುಳಾಗಿ, ಮೀನಾಳಿಂದಲೇ ಹಾಡಿಸಲು ಜಗಜಿತ್ಕೌರ್ ಸಲಹೆ ನೀಡಿದಾಗ, ಖಯಾಮ್ಗೂ ಸರಿಯೆನಿಸಿ, ಅವಳ ದನಿಯಲ್ಲಿಯೇ’ ಐ ರೈಟ್, ಐ ರಿಸೈಟ್’ ಆಲ್ಬಂನ್ನು ತಯಾರಿಸುತ್ತಾರೆ. ಆಲ್ಬಂ ಬಿಡುಗಡೆಗೊಂಡ ನಂತರ ಅದೊಂದು ಇತಿಹಾಸವೇ ಆಯಿತೆಂದು ಖಯಾಮ್ ನೆನೆಯುತ್ತಾರೆ. ಇದಕ್ಕಾಗಿ ತನ್ನ ಬೆಂಬಿಡದ ಅನಾರೋಗ್ಯದಲ್ಲಿಯೂ ಕಠಿಣವಾಗಿ ರಿಯಾಜ್ಮಾಡಿ ಅದನ್ನು ಅಂತಿಮಗೊಳಿಸಿದ ನಂತರವೇ ಟೇಕ್ಗೆ ರೆಡಿಯಾಗುತ್ತಿದ್ದಳು, ಗುಲ್ಜಾರರು ಕೂಡ ಮೀನಾಕುಮಾರಿಗೆ ತಮ್ಮ ಗೆಳೆತನದ ಕುರುಹಾಗಿ ತಮಗೆ ಸಿಕ್ಕ ಮೊದಲ ಚಿತ್ರ ‘ಮೇರೆ ಅಪ್ನೇ’ ಯಲ್ಲಿ ಮೀನಾಕುಮಾರಿಗಾಗಿಯೇ ಪಾತ್ರವೊಂದನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸಿ ಪರಿಚಯಿಸುತ್ತಾರೆ. ಬಾಲಿವುಡ್ನಲ್ಲಿ ನಿಜವಾದ ಗೆಳೆಯರೂ ಇದ್ದಾರೆ ಎನ್ನುವುದಕ್ಕೆ ಇವು ಸಣ್ಣ ಉದಾಹರಣೆ ಮಾತ್ರ.
ಅವಳ ನಟನೆಯ ಹದದ ಬಗ್ಗೆ ಹೇಳುವಾಗ, ಕಮಾಲ್ ನೆನಸಿಕೊಳ್ಳುತ್ತಿದ್ದ,’ ಅವಳಿದ್ದ ಯಾವುದೋ ಕೋಣೆಗೆ ನುಗ್ಗಿ, ತುಂಬ ಆವೇಶದಲ್ಲಿ ಜೋರಾಗಿ ಕೂಗಿದರೂ, ಅವಳು ಅದೇ ಹಿರೋಯಿನ್ ಗತ್ತಿನಲ್ಲಿ, ಹಾಗೊಮ್ಮೆ ಸಾವಕಾಶವಾಗಿ ಮುಖ ತಿರುಗಿಸುತ್ತಾಳಷ್ಟೆ ಒಂದು ಆಂಗಲ್ ವರೆಗೆ ಮಾತ್ರ. ಅಷ್ಟೊಂದು ಹಿಡಿತ ಅವಳಿಗೆ ತನ್ನ ಬಾಡಿಲ್ಯಾಂಗ್ವೇಜ್ ಮೇಲೆ. ಅವಳ ದನಿಯಲ್ಲಿನ ಏರಿಳಿವು, ಆಪ್ತತೆ, ಆಳ ಅದೆಷ್ಟಿತ್ತೆಂದರೆ ‘ರೇಲ್ವೆ ವೇಳಾಪಟ್ಟಿ’ಯನ್ನು ಕೂಡ ಅವಳ ದನಿಯಲ್ಲಿ ಹೇಳಿದರೂ ಉಮರ್ಖಯ್ಯಾಮನ ‘ರುಬಾಯತ್’ ಹಾಗೆ ಕೇಳುತ್ತಿತ್ತಂತೆ. ಇದನ್ನೇ ಶಾರುಖ್ಖಾನ್ ಸರಿಯಾಗಿ ಗುರುತಿಸಿದ್ದ, ‘ಅವಳು ಪ್ರತಿಯೊಂದು ಪಾತ್ರಕ್ಕೂ ತಕ್ಕಂತೆ ದನಿಯನ್ನೇ ಬದಲಿಸುತ್ತಿದ್ದಳು, ಅವಳೊಬ್ಬ ಪರಫೆಕ್ಟ್ ತಂಗಿಯಾದರೆ, ಮಗಳೊಬ್ಬಳರಿಗೆ, ತಾಯಿಯೊಮ್ಮೆಯಾದರೆ, ಪ್ರಿಯತಮೆ ಇನ್ನೊಬ್ಬರಿಗೆ, ಎಲ್ಲರಿಗೂ ಬೇರೆ ಬೇರೆ ದನಿಗಳಿಂದಲೇ ಪಾತ್ರಗಳಿಗೆ ಜೀವ ತುಂಬುತ್ತಿದ್ದಳು
.
ಇರಲಿ, ಮತ್ತೆ ಈಗ ಮೀನಾಳ ಆಸ್ಪತ್ರೆಯತ್ತ ನೋಟ ಹರಿಸೋಣ. ಸೇಂಟ್ ಎಲಿಜಾಬೆಥ್ ಆಸ್ಪತ್ರೆಯ ಎರಡನೆಯ ಅಂತಸ್ಥಿನ 26 ನೆಯ ನಂಬರಿನ ಕೋಣೆಯ ಹೊರಗೆ ಅತ್ತ ಸಾಯಿರಾಬಾನು, ಇತ್ತ ಮಧು ಅವಳಿಗಾಗಿ ಕಾಯುತ್ತಿದ್ದರು, ಅಮ್ರೋಹಿ ಕೂಡ ಒಳಹೊರ ಅಡ್ಡಾಡುತ್ತಲೇ ಇದ್ದರು. ನಾನು ಬಂದಿದ್ದೇನೆ, ‘ಮಂಜು’, ನಿನಗೇನೂ ಆಗುವುದಿಲ್ಲ ಎಂದು ಗೋಗರೆಯುತ್ತಿದ್ದ ಅವಳ ಹತ್ತಿರ ಕುಳಿತು. …..ಅದೊಮ್ಮೆ ಅದೇ ತಾನೇ ಆಸ್ಪತ್ರೆಗೆ ದಾಖಲಿಸಿದಾಗಲೇ ಓಡಿ ಬಂದಿದ್ದ ಅಮ್ರೋಹಿ. ಮೀನಾಳ ಕಣ್ಣುಗಳು ಮಿಂಚಿದ್ದವು. ಇಬ್ಬರ ಕಣ್ಣುಗಳೂ ಈಗ ಸಂಧಿಸಿದ್ದವು. ಅವಳ ಪಕ್ಕ ಕುಳಿತ ಅಮ್ರೋಹಿಯ ತೊಡೆಯ ಮೇಲೆ ತಲೆ ಇಟ್ಟು ಹೇಳಿದ್ದಳು. ಇಷ್ಟೇ ಸಾಕಾಗಿತ್ತು ನನಗೆ ಈ ಜನುಮದಲ್ಲಿ ಈ ಹೊತ್ತು. ಇನ್ನು ನನಗೆ ಬದುಕುವ ಆಸೆ ಇಲ್ಲ. ಬಹಳಷ್ಟು ನೋಡಿದೆ, ಅನುಭವಿಸಿದೆ ಜೀವನವನ್ನು, ಇನ್ನು ಇದು ಸಾಕು, ಬಳಲಿದ್ದೇನೆ. ನನ್ನನ್ನು ಬದುಕಿಸುವ ವಿಚಾರ ಮಾಡಬೇಡ ‘ಚಂದನ್’. ನನಗೆ ದೂರ ದೂರ, ಬಹುದೂರ ತೆರಳಬೇಕಿದೆ. ಎಂದು ಅವನ ಕೈಯನ್ನು ಹಿಡಿದು ಅವನಿಗೇ ಸಾಂತ್ವನಿಸಿ ಅವನನ್ನೂ ಮೀರಿ ಹರಿಯುತ್ತಿರುವ ಕಂಬನಿಯನ್ನು ಕೈಯ್ಯಾರೆ ಒರೆಸಿ, ಅರೆ ಪ್ರಜ್ಞಾವಸ್ಥೆಯತ್ತ ಜಾರುತ್ತಾಳೆ ಆರ್ಧ್ರ ಹೃದಯಿ ಮೀನಾ,
ಹೋ ಕೆ ತನ್ಹಾ ಔರ್ ಮಜಬೂರ್ ಚಲೀ ಜಾವೂಂಗಿ,
ತುಮ್ಹಾರಿ ದುನಿಯಾ ಸೆ ಮೈಂ ದೂರ್, ಕಹೀಂ ಬಹೊತ್ ದೂರ್ ಚಲೀ ಜಾವೂಂಗಿ
ತುಮ್ಹಾರೆ ನಮ್ಸಿ ಜಾದೂಗರಿ ಸೆ ದೂರ್ ಕಹೀಂ,…….
ಅವಳದೇ ‘ನಜ್ಮ್’ನ ಸಾಲಗಳು ಅವಳಿಗಾಗಿ ಹಾಡುತ್ತಿದ್ದವು.
ಅರೆ ಪ್ರಜ್ಞಾವಸ್ಥಯಲ್ಲಿ ಅವಳ ನರಳುವಿಕೆಯ ಮಧ್ಯೆ ಅವಳ ದನಿಯನ್ನು ಆಲಿಸುತ್ತಿರುವವರಿಗೆ ಆ ಕ್ಷೀಣ ದನಿ ಸೂಕ್ಷ್ಮವಾಗಿ ಕೇಳುತ್ತಿತ್ತು, ‘ಮೈಂ ಮರನಾ ನಹೀಂ ಚಾಹತೀ’ ಎಂದು ಬಡಬಡಿಸುತ್ತ ನರಳುತ್ತಿದ್ದಳು. ಸುನೀಲ ದತ್ತ, ನಗರ್ೀಸ್, ಖಯ್ಯಾಮ್, ಜಗಜಿತ್ಕೌರ, ಗುಲ್ಜಾರ್, ಮೆಹಮ್ಮೂದ್ ಆದಿಯಾಗಿ ಎಲ್ಲ ನೆರೆದಿದ್ದರು. ದೊಡ್ಡ ದೊಡ್ಡ ಡಾಕ್ಟರುಗಳು ಬಂದು ಚಿಕಿತ್ಸೆ ಮಾಡಿದರು. ಮೀನಾಳನ್ನು ಲಂಡನ್ನಲ್ಲಿ ಚಿಕಿತ್ಸೆ ನೀಡಿದ ಅದೇ ಡಾಕ್ಟರ್ರನ್ನು ಒಮ್ಮೆ ಕರೆಸಿದರೆ ಹೇಗೆ ಎಂದು ಯೋಚಿಸಿ ಪರಾಮಶರ್ಿಸಿ, ಆಸ್ಪತ್ರೆಯ ಡಾಕ್ಟರುಗಳು ಅವರನ್ನೇ ಬರುವಂತೆ ಕೂಡಲೇ ಆಹ್ಹಾನಿಸಿದರು. ಮುಂಬಯಿಗೆ ಬರುವ ಮುನ್ನ ಆ ಡಾಕ್ಟರ್ ‘ಅರೆ, ಅವಳಿನ್ನೂ ಇದ್ದಾಳೆಯೇ’ ಎಂದಿದ್ದರಂತೆ. ಏನಿದ್ದರೂ ಮನುಷ್ಯ ಪ್ರಯತ್ನ.. ಯುರೋಪಿನಲ್ಲಿ ಸಿಗುವ ಇಂಜೆಕ್ಷನ್ ತರಿಸುವುದು ಹೇಗೆ ಎಂದು ವಿಚಾರಿಸುತ್ತಿರುವಾಗಲೇ, ಅಲ್ಲಿಯೇ ಕುಳಿತ ಓ. ಪಿ. ರಲ್ಹನ್ಗೆ ವಿಷಯ ತಿಳಿದು, ಕೂಡಲೇ ಯುರೋಪಿನಿಂದ ಬರುವ ಗೆಳೆಯರೊಬ್ಬರಿಂದ ಔಷಧಿ, ಇಂಜೆಕ್ಷೆನ್ನ್ನು ರಿಟರ್ನ ಫ್ಲೈಟ್ನಲ್ಲಿ ತರಿಸಿ ನೀಡಿದ್ದಾಯಿತು, ದೇಹದಿಂದ ಮೂರು ಬಾಟಲಿನಷ್ಟು ದ್ರವವನ್ನು ಹೊರತೆಗೆದಾಗ ನಿರಾಳವಾದಂತಾಗಿದ್ದಳು ಮೀನಾ. ಆದರೆ ಎಲ್ಲ ಕೆಲ ಗಳಿಗೆಗಳಿಗೆ ಮಾತ್ರ. ವಿಧಿಯು ಇನ್ನೇನೋ ಹೊಂಚು ಹಾಕಿ ಕುಳಿತಿತ್ತು.
ಅದೊಂದು ದಿನ ಮಧು ಮತ್ತೆ ಖುಷರ್ಿದ್ರನ್ನು ಕರೆದು ಹೇಳಿದ್ದಳು. ನಾನು ಇನ್ನು ಹೆಚ್ಚು ದಿನ ಬದುಕಿರಲಾರೆ. ನಾನು ಮಾಡಬೇಕಾಗಿರುವುದನ್ನೆಲ್ಲಾ ಮಾಡಿರುವೆ. ಇನ್ನು ಬದುಕುವ ಆಸೆಯೂ ಇಲ್ಲ. ಆದರೆ ನಾನು ನನ್ನ ಬದುಕನ್ನು ಒಡೆದ, ನನ್ನ ಮನೆಯೆಂಬ ಮನೆಯನ್ನು , ಸಂಸಾರವನ್ನು, ನನ್ನ ‘ಚಂದನ್’ನನ್ನು ನನ್ನಿಂದ ದೂರಮಾಡಿದ ಯಾರನ್ನೂ ಕ್ಷಮಿಸುವುದಿಲ್ಲ. ಅವರ ಮನೆಯು, ಸಂಸಾರವೂ ಹೀಗೆಯೇ ಒಡೆದು ಹೋಗಲಿ. ‘ಯೆ ಬದ್ ದುವಾ ಹೈ ಮೇರಾ”, ತೀರಾ ನೋವಿನಿಂದ ಹೇಳಿಕೊಂಡಿದ್ದಳು. ಮತ್ತೊಮ್ಮೆ ಖಯಾಮ್ ಸಾಹೇಬರ ಮುಂದೆಯೂ ಇದನ್ನೇ.
ಪಾಕೀಜಾದ ಮಶಹೂರ್ ಡಯಲಾಗ್ ಡಬ್ಬಿಂಗ್ ಮಾಡುವಾಗ ಅವಳಿಗೆ ಮಾತಾಡುವಷ್ಟು ಉಸಿರು ಸಾಲುತ್ತಿರಲಿಲ್ಲ, ಆದರೂ ಒಂದೇ ಟೇಕ್ನಲ್ಲಿ ಹೇಳಿದ್ದಳು, ‘ಹರ್ ತವಾಯಿಫ್ ಏಕ್ ಲಾಶ್ ಹೈ, ತೂ ಭೀ ಏಕ್ ಲಾಶ್ ಹೈ, ಮೈ ಭೀ ಏಕ್ ಲಾಶ್ ಹೂಂ’ ಹೇಳುವಾಗ ನಿಜವಾಗಿಯೂ ಕಷ್ಟವಾಗುತ್ತಿತ್ತು. ಸಾವನ್ನು ಗೆದ್ದು ಚಿತ್ರವನ್ನು ಮುಗಿಸಿದ್ದಳು, ಚಿತ್ರದ ಪ್ರೀಮಿಯರ್ ನೋಡಿ, ಆನಂದತುಂದಿಲಳಾಗಿ ಹೇಳಿದ್ದಳು ಕಮಾಲ್ಗೆ , ‘ಚಂದನ್, ‘ಶಹಕಾರ ಬನ್ಗಯೆ’ (ಅಪೂರ್ವ ಸೃಷ್ಟಿಕರ್ತನಾದೆ). ”ಅನೇಕ ತಾರೆಯರು ಆಗಿಹೋಗಿದ್ದಾರೆ, ಅನೇಕರು ನಮ್ಮ ನಡುವೆ ಇದ್ದಾರೆ, ಕಂಬನಿ ತುಂಬಿದ ಮುಖದಲ್ಲೂ ಅಷ್ಟೊಂದು ಸುಂದರವಾಗಿ ಕಾಣುವ ಇನ್ನೊಬ್ಬ ನಟಿಯನ್ನು ನೋಡಿದ್ದೀರಾ? ”ಕೇಳುತ್ತಾರೆ ದಿನೇಶ ರಹೇಜಾ , ಪತ್ರಕರ್ತರು. ಹೌದು ಅವಳು ‘ಟ್ರೆಜೆಡಿ ಕ್ವೀನ್’ ಅದಕ್ಕೆ ಹಾಗೆ ಕಾಣುತ್ತಾಳೆ ದಿನೇಶ್ ಜಿ. …
ಆ ರಾತ್ರಿ ಮೀನಾ 31 ಮಾರ್ಚ 72 ರಂದು ಕೋಮಾದಲ್ಲಿ ಮಲಗಿದ್ದಳು, ಅಲ್ಲಿ ಸನಿಹದಲ್ಲಿಯೇ ನಾದಿರಾ ಕುಳಿತಿದ್ದಳು ತನ್ನ ಗೆಳತಿಯ ಹತ್ತಿರ. ಮೀನಾಳ ಮುಖ, ಮೂಗು, ಮೈ, ಕೈ, ಲಂಗ್ಸ್ ಗಳಿಗೆಲ್ಲ ಉದ್ದುದ್ದ ಪೈಪುಗಳು, ಟ್ಯೂಬುಗಳನ್ನು ಜೋಡಿಸಲಾಗಿತ್ತು. ನಿಶ್ಯಬ್ದಗಳಲ್ಲಿ ಅವಳ ಏರಿಳಿಯುವ ಉಸಿರನ್ನಷ್ಟೆ ಗಮನಿಸುತ್ತಿದ್ದಳು, ಅದರಿಂದಲಷ್ಟೆ ಅವಳು ಬದುಕಿದ್ದಾಳೆೆ ಎನ್ನುವ ವಿಳಾಸ ಸಿಗುತ್ತಿತ್ತು. ನೋಡ ನೋಡುತ್ತಿದ್ದಂತೆಯೇ, ಒಮ್ಮೆಲೆ ದಿಗ್ಗನೆದ್ದು, ತನ್ನ ಬಾಯಿ, ಕೈ ಮೈಗಳಿಗೆ ಜೋಡಿಸಿದ ಎಲ್ಲ ಟ್ಯೂಬ್ಗಳನ್ನು ಪೈಪುಗಳನ್ನು ಕಿತ್ತೆಸೆದು ಹಾಗೆಯೇ ಮಲಗಿಬಿಟ್ಟಳು, ನಿರಾಳವಾಗಿ, ನಿರ್ವಿಕಾರವಾಗಿ, ಶಾಂತ ಮುಖಮುದ್ರೆಯಲ್ಲಿ. ಗಾಭರಿಯಲ್ಲಿ ನಾದಿರಾಳ ಬಾಯಿಂದ ಶಬ್ದಗಳೇ ಹೊರಡಲಿಲ್ಲ. ಚೀರಿ, ಕಣ್ಣಿಗೆ ಕತ್ತಲಾವರಿಸಿ, ಅಲ್ಲಿಯೇ ಪ್ರಜ್ಞಾಹೀನಳಾದಳು. ಅವಳು ಕಣ್ಣುಬಿಟ್ಟಾಗ ಡಾಕ್ಟರರೆಲ್ಲ ನೆರೆದಿದ್ದರು. ಮೀನಾ ಆಗಲೇ ಕೊನೆಯುಸಿರೆಳೆದಿದ್ದಳು. ಎಂದೂ ತಾನು ಹೊರಜಗತ್ತಿಗೆ ಮೇಕಪ್ ಇಲ್ಲದೇ ಮುಖತೋರಿಸದ ಮೀನಾ ಸಾಯುವ ಸಂದರ್ಭದಲ್ಲಿಯೂ ತನ್ನ ಮೈಮೇಲಿನ ಎಲ್ಲ ಪೈಪುಗಳನ್ನು ಕಿತ್ತೆಸೆದು ಹೊಸ ಮೇಕಪ್ಗೆ ರೆಡಿಯಾಗಿದ್ದಳೇ ಅಥವಾ ಬದುಕಿನ ಎಲ್ಲ ನಂಟುಗಳನ್ನು ಹೀಗೆ ಕಳಚಿ ಕಿತ್ತೆಸೆದಿದ್ದಳೇ? ಅವಳನ್ನೇ ಕೇಳಬೇಕಿತ್ತು!
ಇನ್ನೂ ಯೌವ್ವನವೆಂದು ಕರೆಯುವ ನಲವತ್ತು ವಯಸ್ಸನ್ನೂ ಮುಟ್ಟದೇ ಇಹಲೋಕ ತ್ಯಜಿಸಿತ್ತು, ಮೀನಾಕುಮಾರಿ ಎಂಬ ದುರದೃಷ್ಟದ ದು:ಖದ ರಾಣಿ. ಅಸಲು ನಂಜನ್ನೇ ಇಡಿ ಇಡಿಯಾಗಿ ನುಂಗಿದ ನೀಲಕಂಠೆ. ಅಪೂರ್ವವಾದ ಚಿತ್ರಗಳನ್ನು ನಮಗೆ ನೀಡುತ್ತ ದಂತ ಕಥೆಯಾಗಿ ನಮ್ಮನ್ನಗಲಿ ನಡೆದೇ ಬಿಟ್ಟಳು. ದೇಶಕ್ಕೆ ದೇಶವೇ ತಲ್ಲಣಗೊಂಡಿತು. ‘ದಿಲ್ ಅಪನಾ ಔರ್ ಪ್ರೀತ ಪರಾಯಿ, ಕಿಸನೇ ಹೈ ಯೆ ರೀತ ಬನಾಯೀ, ಆಂಧೀ ಮೇಂ ಇಕ್ ದೀಪ ಜಲಾಯಾ, ಔರ್ ಪಾನೀ ಮೇ ಆಗ ಲಗಾಯಿ’…..ಹಾಡುತ್ತಲೇ ನಡೆದಳು ನೀರಲ್ಲಿಯೂ ಬೆಂಕಿಯನ್ನೇ ಕಂಡು, ಹೊತ್ತಿ ಉರಿದ ಬದುಕಿನೊಂದಿಗೆ ಮಣ್ಣಾದಳು, ಹಿಂದೀ ಚಿತ್ರರಂಗ ಕಂಡ ಎಲ್ಲ ಕಾಲದ ಅತ್ಯುನ್ನತ ಹಾಗೂ ಅತ್ಯುತ್ತಮ ನಟಿ, ‘ಟ್ರ್ಯೆಜೆಟಿ ಕ್ಷೀನ್’ ಮೀನಾಕುಮಾರಿ. ಎಂಬ ದೈತ್ಯ ಪ್ರತಿಭೆ ಅಸ್ತಂಗತವಾಗಿದ್ದು ಹೀಗೆ. ಬಾಲಿವುಡ್ನಲ್ಲಿ ಮೀನಾಳ ಸಮೀಪಕ್ಕೂ ಬರಲು ಇಂದಿಗೂ ಯಾರಿಗೂ ಸಾಧ್ಯವಾಗಿಲ್ಲದಿರುವುದು ಅವಳ ಅಸಾಧಾರಣ ಎತ್ತರಕ್ಕೆ ಸಾಕ್ಷಿ. ಮುಂಬಯಿಯ ಮಜಗಾಂವ್ನಲ್ಲಿರುವ ರೆಹಮತಾಬಾದ್ ಖಬರಸ್ತಾನ್ದಲ್ಲಿ ಚಿರನಿದ್ದೆಯಲ್ಲಿ ಮಲಗಿದ್ದಾಳೆ ಇಂದಿಗೂ ಮೀನಾಕುಮಾರಿ ಎಂಬ ಬಾಲಿವುಡ್ ಜಗತ್ತು ಕಂಡ ಅದ್ಭುತ ಕಲಾವಿದೆ. ಬಹುಶ: ಮಲಗಿದಲ್ಲಿಯೂ ಈಗಲೂ ಜಗತ್ತಿಗೆ ಕಾಣದಂತೆ ತನ್ನ ಆ ಅಪಘಾತವಾದ ಮುರಿದ ಕೈಯಲ್ಲಿಯ ಪುಣೆಯ ಸಸೂನ್ ಆಸ್ಪತ್ರೆಯ ಹೊಲಿಗೆಗಳ ಗುರುತುಗಳು ಕಾಣದಂತೆ ಸೆರಗಿನಲ್ಲಿಯೇ ಮರೆಯಾಗಿಸಿಕೊಂಡಿರುವಳೋ ಏನೋ! ನಿನ್ನ ಸೌಂದರ್ಯ ಪ್ರಜ್ಞೆಗೆ ನಮೋ ನಮ: ಮೀನಾ,…..
ಅವಳ ಮೃತ್ಯವಿನ ತಲ್ಲಣದ ನಂತರ ಬಂತು ನೋಡಿ ಜನಸಾಗರ. ದೇಶಕ್ಕೆ ದೇಶವೇ ‘ಪಾಕೀಜಾ’ದತ್ತ ಮುಗಿಬಿದ್ದಿತು. ಇಡೀ ಅಭಿಮಾನೀ ಜಗತ್ತು ಮೀನಾಳಿಗೆ ಕೊಡುವ ಶೃದ್ಧಾಂಜಲಿಯಂತೆ ಥೇಟರುಗಳಲ್ಲಿ ಸಂದಣಿ ಮಡುಗಟ್ಟತೊಡಗಿತು. ಅನೇಕ ಚಿತ್ರಮಂದಿರಗಳಲ್ಲಿ ಸಿಲ್ವರ್ ಜುಬಿಲಿಗಳನ್ನು ಆಚರಿಸಿಕೊಂಡ ಚಿತ್ರವಿದು. ಮೀನಾಳ ಅದ್ಭುತ ಅಭಿನಯ ಇಂದಿಗೂ ಕಣ್ಣುಗಳಿಗೆ ಕಟ್ಟಿದಂತಿದೆ. ಆ ವರ್ಷದ ಫಿಲ್ಮಫೇರ್ ಅವಾರ್ಡ ಕೂಡ ಮೀನಾ ಸತ್ತಮೇಲೂ ಅವಳನ್ನು ಅಲಂಕರಿಸಿತು. ಪಾಕೀಜಾದಂತಹ ಇನ್ನೊಂದು ಚಿತ್ರ ಹಿಂದೆಯೂ ಬಂದಿದ್ದಿಲ್ಲ, ಮುಂದೆಯೂ ಬರದು ಎಂಬ ಅಭಿಪ್ರಾಯ ಎಲ್ಲೆಡೆ ಆಗ. ಅದು ಸತ್ಯವೂ ಆಗಿತ್ತು.
ಸಾವಿನ ಸಮಯದಲ್ಲಿಯೂ ಅವಳಿಗೆ ತಾನು ತಾಯಿಯಾಗದ ನೋವು ಅದೆಷ್ಟಿದ್ದಿತೆಂದರೆ, ತನ್ನ ಹೊಟ್ಟೆಯ ಮೇಲೆ ಕೈ ಸವರಿ ಹೇಳುತ್ತಿದ್ದಳು, ಖುಷರ್ಿದ್ಗೆ,’ ಆಪಾ, ಶರಾಬ್ ಕೀ ಸುರಾಹೀ ಬನ್ನೆ ಕೆ ಬಜಾಯ್, ಯೆ ಪೇಟ್ ಕಿಸೀ ಬಚ್ಚೇ ಕೆ ಜನ್ಮ ಕಾ ಜರಿಯಾ ಭೀ ತೊ ಹೋ ಸಕ್ತಾ ಥಾ’ ಎಂದು ಕಣ್ಣೀರಾಗಿದ್ದಳಂತೆ….
…..ತನ್ನ ‘ಛೋಟಿ ಅಮ್ಮಿ’ ಬಗ್ಗೆ ಮಲಮಗ ತಾಜದಾರ ಅಮ್ರೋಹಿಯ ವಾದವೇ ಬೇರೆ, ”ನಮ್ಮ ತಂದೆ ಕಮಾಲ್ ಅಮ್ರೋಹಿ ಇನ್ನೂ ತಲಾಖ್ ಕೊಟ್ಟಿರಲಿಲ್ಲ ಎಂಬುದಕ್ಕೆ ಸುನ್ನಿ ಸಂಪ್ರದಾಯದ ‘ಛೋಟಿ ಅಮ್ಮಿ’ ಗೆ ಶಿಯಾ ಸಂಪ್ರದಾಯದ ಈ ಖಬರಸ್ಥಾನದಲ್ಲಿ ನಮ್ಮ ಪೂರ್ವಜರೊಂದಿಗೆ ಸ್ಥಾನ ಕಲ್ಪಿಸಿದ್ದು ಸಾಕ್ಷಿ” ಎನ್ನುತ್ತಾನೆ ಮತ್ತು ನಲವತ್ತು ದಿನಗಳ ನಂತರ ಸಿಕ್ಕ ಅವಳ ಮೃತ್ಯುಪತ್ರದಲ್ಲಿಯೂ ತನ್ನ ವಸ್ತುಗಳನ್ನು ಶಿಯಾ ಅನಾಥಾಲಯಕ್ಕೆ, ಮಸೀದಿಗೆ, ಹಾಗೂ ವಿಧವೆಯರಿಗೆ ನೀಡುವಂತೆ ಬರೆದಿದ್ದಳು” ಎನ್ನುತ್ತಾನೆ. ಹಾಗೆಯೇ, ನಿಜ ಹೇಳಬೇಕೆಂದರೆ ಅಮ್ಮಿಗೆ ಮಕ್ಕಳನ್ನು ಪಡೆಯಲು ಹಿಂಜರಿಕೆ ಇತ್ತು, ಇದರಿಂದ ತನ್ನ ಇಮೇಜ್ ‘ಖರಾಬ್’ ಆಗುತ್ತದೆಂದು, ತಾನು ಬಾಲಿವುಡ್ನ ಅನಭಿಷಿಕ್ತ ದೊರೆಸಾಣಿಯಾಗಿಯೇ ಇರಬೇಕೆನ್ನುವ ಅದಮ್ಯ ಬಯಕೆಯೇ ಇದಕ್ಕೆ ಕಾರಣವೆನ್ನುತ್ತಾನೆ. ಕಾರಣಗಳೇನೆ ಇರಲಿ, ಬಾಲಿವುಡ್ನ ಮಹಾನ್ ನಟಿಸಾಮ್ರಾಜ್ಞಿ , ಬದುಕಿನುದ್ದಕ್ಕೂ ನಂಜನ್ನೇ ಉಂಡ ನಂಜುಂಡಿ ಈಗ ‘ಟ್ರೆಜೆಡಿ ಕ್ವೀನ್’ ಮಾತ್ರವಾಗಿ ನೆನಪು , ಅವಳ ಅಸಂಖ್ಯ ಅಭಿಮಾನಿಗಳಲ್ಲಿ ಹಾಗೂ ಚರಿತ್ರೆಯ ಪುಟಗಳಲ್ಲಿ. ….
ಈ ನಡುವೆ ‘ಕಾಜಲ್’ ಚಿತ್ರದ ಮೂಲಕ ಮೀನಾಕುಮಾರಿಯೊಂದಿಗೆ ನಟಿಸಿದ ಧರ್ಮೇಂದ್ರನ ಜೊತೆ ಎಷ್ಟೊಂದು ‘ಕ್ರಶ್’ಆಗಿತ್ತೆಂದರೆ, ಆ ಚಿತ್ರದ ಪಾಟರ್ಿಯೊಂದರಲ್ಲಿ ಧಮೇಂದ್ರ ಹೆಚ್ಚು ಕುಡಿದಾನೆಂದು ಕಾಳಜಿಯಿಂದ ಹೊರಹೋದವಳು ಅವನಿಗಾಗಿ ಮರಳಿ ಬಂದಿದ್ದಳಂತೆ! 1962-63 ರಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ರಾಧಾಕೃಷ್ಣನ್ರು ಮೀನಾಳೊಂದಿಗೆ ಮುಲಾಕಾತ್ವೊಂದರಲ್ಲಿ ‘ ನಿನ್ನ ಪ್ರಿಯತಮ ಧಮೇಂದ್ರ ಹೇಗಿದ್ದಾನೆ ಎಂದು ಕೇಳಿದ್ದರಂತೆ! ಅಷ್ಟೊಂದು ದೂರ ಹೋಗಿತ್ತು ಅವರಿಬ್ಬರ ಗಾಸಿಪ್…..ಆದರೆ ಅಸಲು ಸ್ಟಾರ್ ವ್ಯಾಲ್ಯೂ ಬಂದೊಡನೆ ಧಮೇಂದ್ರನೇ ಮೀನಾಳಿಂದ ದೂರವಾಗಿದ್ದು ಕೂಡ ಮೀನಾಳಿಗೆ ಬಹುದೊಡ್ಡ ಮಾನಸಿಕ ಹೊಡತಗಳಲ್ಲೊಂದಾಗಿತ್ತು. ಅಮ್ರೋಹಿಯನ್ನು ಮರೆಯಲು ಏನೆಲ್ಲ ಮಾಡಿದರೂ, ಮತ್ತೆ ಮತ್ತೆ ವಿಧಿಯಿಂದ ಹೊಡೆತ ತಿನ್ನುತ್ತಿದ್ದಳು. ಎಂದಿನಂತೆ ಈಗ ಮತ್ತೆ ಅವಳನ್ನು ಕೈಹಿಡಿದದ್ದೇ ‘ಶರಾಬು’ ಎಂಬ ಸಾಂತ್ವನ. ಯಾರಿಗೆ ಗೊತ್ತು ಬೈಜು ಬಾವರಾ ಸಮಯದಲ್ಲಿಯೇ ಮೀನಾ ಧಿಕ್ಕರಿಸಿದ ಭರತ ಭೂಷಣ ಕೋರಿದ ಪ್ರೇಮವನ್ನು ಸ್ವೀಕರಿಸಿದ್ದಲ್ಲಿ ಇಂದಿಗೂ ತನ್ನದೇ ಆದ ಸುಖ ಸಂಸಾರದೊಂದಿಗೆ ಇರುತ್ತಿದ್ದಳೇನೋ.
ರಾಜಕುಮಾರ ಕೂಡ ಮೀನಾಳನ್ನು ಅದೆಷ್ಟು ಪ್ರೀತಿಸುತ್ತಿದ್ದನೆಂದರೆ ಸೆಟ್ನಲ್ಲಿ ತನ್ನ ಡೈಲಾಗ್ಗಳನ್ನು ಮರೆಯವುಷ್ಟು ಹಚ್ಚಿಕೊಂಡಿದ್ದ…1959 ರಲ್ಲಿ ಅಧರ್ಾಂಗಿನಿ ಚಿತ್ರದಲ್ಲಿಯೇ ಅವಳಲ್ಲಿಯ ಅಭಿನಯ ಕಲೆಗೆ ಸಮ್ಮೋಹಿತನಾಗಿದ್ದ ರಾಜಕುಮಾರ. ಪಾಕೀಜಾದಲ್ಲಿ ಮೀನಾಕುಮಾರಿ, ಚಲಿಸುವ ರೈಲಿನಲ್ಲಿ ಕಂಪಾಟರ್ೊಂದರಲ್ಲಿ ಮಲಗಿ ನಿದ್ರಿಸುತ್ತಿರುವಾಗ, ಅದೇ ಕಂಪಾರ್ಟಮೆಂಟ್ಗೆ ಅಚಾನಕ್ಆಗಿ ಬಂದು ಅವಳ ಸುಂದರ ಪಾದಗಳನ್ನು ನೋಡಿ ಹೇಳುವ ಮಾತು, ‘ಆಪಕೆ ಪಾಂವ್ ದೇಂಖೇಂ. ಬಹುತ್ ಹಸೀನ್ ಹೈ, ಇನ್ಹೇ ಜಮೀನ್ ಪರ್ ಮತ್ ಉತಾರಿಯೇಗಾ, ಮೈಲೆ ಹೋಜಾಯೆಂಗೆ’ ಎಂದಿದ್ದ ಚಿತ್ರದಲ್ಲಿ, ಆದರೆ ಅವನು ತನ್ನ ಮನಸಿನ ಭಾವವನ್ನೇ ಹೇಳಿದ್ದ… ಈ ಗಂಧರ್ವಕನ್ಯೆ, ಅಂತಿಮವಾಗಿ ಕಾಲೂರಿದಲ್ಲಿ …..ಕೊಳೆಯಾದವು. ನಂತರ ಕಾಜಲ್ನ ಸಂದರ್ಭಗಳಲ್ಲಿ ಕೂಡ ಅವಳಲ್ಲಿ ಅನುರಕ್ತನಾಗಿದ್ದ.
ಒಬ್ಬ ಪರಿಪೂರ್ಣ, ಅಂತ:ಕರಣವುಳ್ಳ ಸಾಹಿತ್ಯದ ಆರಾಧಕಿ, ಸ್ವತ: ಕವಿಯಿತ್ರಿ, ಕಥೆಗಾತರ್ಿಯಾಗಿದ್ದ, ಅವಳ ನಡೆ ನುಡಿಯನ್ನು ನೋಡಿದ ಯಾರೂ ಅವಳಲ್ಲಿ ಕರಗಿಬಿಡುವಂತಹ ವ್ಯಕ್ತಿತ್ವ ಅವಳದು. ಕೇವಲ ನಟಿಯಾಗಿ ಅಷ್ಟೇ ಅಲ್ಲ, ಅವಳ ಮಾತು ಕತೆಗಳು, ಸೆಟ್ನಲ್ಲಿ ಅವಳ ಗಂಭೀರ ನಡುವಳಿಕೆ, ಪ್ರಸಿದ್ಧ ಕವಿಗಳ ಪುಸ್ತಕಗಳನ್ನು ಓದಿ, ಚಚರ್ಿಸುವುದು ಅವಳ ಹವ್ಯಾಸ, ಮಾದಕತೆಯ ಪ್ರೇಮಲೋಕದಲ್ಲಿಯೇ, ಕಲ್ಪನಾಲೋಕದಲ್ಲಿಯೇ ವಿಹರಿಸುವ, ಶಾಯರಿಗಳ ಅಕ್ಷರಗಳಲ್ಲಿ ಮೀಯುತ್ತ, ವಿರಳಾತಿವಿರಳ ಅಭಿರುಚಿಯ ಅವಳ ಪ್ರಬುದ್ಧತೆಗೆ ಮಾರುಹೋಗದವರೇ ವಿರಳ ಅನ್ನುವಷ್ಟರ ಮಟ್ಟಿಗೆ ಅವಳ ವ್ಯಕ್ತಿತ್ವವಿತ್ತು. ಸೆಲ್ಯೂಲಾಯ್ಡ್ ಎಂಬ ಜಗತ್ತಿನ ದಟ್ಟ ನೆರಳಿನಲ್ಲಿಯೇ, ಮರೀಚಿಕೆಯಂತಹ ಓಯಾಸಿಸ್ನಲ್ಲಿಯೇ ಬಾಯಾರಿ ಅರಸುತ್ತ ಅರಸುತ್ತ ಅಂಡಲೆಯುತ್ತಿದ್ದ ಬದುಕಿನ ಮಧ್ಯದಲ್ಲಿಯೇ ಮೀನಾ ಎದ್ದು ಕಾಣುವ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದಳು.
ಕೊನೆಯವರೆಗೂ ಬಾಲಿವುಡ್ನ ಅನಭಿಷಿಕ್ತ ರಾಣಿಯಾಗಿಯೇ ಮೆರೆದು, ಕೋಟಿ ಕೋಟಿ ಅಭಿಮಾನಿಗಳನ್ನು ಅಗಲಿ, ‘ಪಾಕೀಜಾ’ದಂತಹ ಶುಭ್ರ ಸ್ಫಟಿಕಹೃದಯದ ಈ ಚಕೋರಿ, ತನ್ನದಲ್ಲದ ಲೋಕದಿಂದ ಎದ್ದು, ನಡೆದೇ ಬಿಟ್ಟಳು ಚಂದ್ರಲೋಕವನ್ನೂ ಮೀರಿ, ಅಗೋಚರ ವಿಶ್ವದೆಡೆಗೆ….ಅದೇ ಆಸೆಗಣ್ಣುಗಳಲ್ಲಿ ಅದೇ ಚುಂಬಕಶಕ್ತಿಯಲ್ಲಿ ತನ್ನ ಕಲ್ಪನೆಯ ಇನಿಯನೊಂದಿಗೆ, ಕೊಳೆಯಾದ ದೇಹವನ್ನು ಇಲ್ಲಿಯೇ ಬಿಟ್ಟು, ‘ಆವೋ ಖೋ ಜಾಯೆ ಸಿತಾರೋಂ ಮೆಂ ಕಹೀಂ, ಛೋಡ್ದೇ ಆಜ್ ಯೆಹ್ ದುನಿಯಾ ಯೆ ಜಮೀಂ, ಚಲೋ ದಿಲ್ದಾರ ಚಲೋ, ಚಾಂದ್ ಕೆ ಪಾರ ಚಲೋ’ ಎನ್ನುತ್ತ ಅಸಂಖ್ಯ ಅಭಿಮಾನಿಗಳನ್ನು, ಬಾಲಿವುಡ್ನ್ನು ಅನಾಥವಾಗಿಸಿ ಅಸಂಖ್ಯ ಗುಟ್ಟುಗಳನ್ನು ತನ್ನ ಉಡಿಯಲ್ಲಿ ಉಟ್ಟು, ನಮ್ಮನ್ನೆಲ್ಲಾ ಹಿಂದೆಬಿಟ್ಟು, ಮೀನಾ ನಡೆದೇ ಬಿಟ್ಟಳು,…ವಿಸ್ಮಯ ಲೋಕಕ್ಕೆ. ಒಂಟಿಯಾಗಿ, ದಿಲ್ದಾರನಿಲ್ಲದೇ. ಜೊತೆಗಾರನಿಲ್ಲದೇ, ಜೊತೆಗಾರೂ…. ಇಲ್ಲದೇ!
ಮುಗಿಯಿತು
ಇದನ್ನು ಪ್ರಕಟಣೆಗಾಗಿ ಅವಧಿಗೆ ಕೊಟ್ಟ ಲಕ್ಷ್ಮೀಕಾಂತ ಇಟ್ನಾಳ್ ಅವರಿಗೆ ವಂದನೆಗಳು





ವಂದನೆಗಳು ಇಟ್ನಾಳ ಸರ್,
ಬಾಯಿ ಮೇಲೆ ಬೆರಳಿಟ್ಟು ನಿಮ್ಮ ಮೀನಾಕುಮಾರಿ ಕಥೆ ಓದಿದೆ, ದುರಂತ ಸಂಗತಿಗಳು ಮನ ಕಲಕಿಬಿಡುತ್ತವೆ.ಬದುಕು ಏನೆಲ್ಲಾ ಕಲಿಸುತ್ತದೆ.ಕಲಿತವನು ಜಾಣ.ಕಲಿದೇ ಹೋದರೆ……………
ಮತ್ತೊಮ್ಮೆ ನಿಮಗೂ ಅವಧಿಗೂ ವಂದನೆಗಳು.
ಶ್ರೀನಿವಾಸ ಹುದ್ದಾರ ರವರೇ, ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯ, ನನ್ನ ವತಿಯಿಂದ ಅವಧಿಯಿಂದ ಕೂಡ ತಮಗೂ ಕೂಡ ವಂದನೆಗಳು