ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನಪ್ಪ ನಂಜೇಗೌಡನೂ ನೆನಪಾದ…

ಜಗದೀಶ್ ಕೊಪ್ಪ

ಇದು ಮಂಡ್ಯ ಜಿಲ್ಲೆಯ ಕೊಪ್ಪ ಗ್ರಾಮದಲ್ಲಿ ನಾನು ಹುಟ್ಟಿ ಬೆಳೆದ ಮನೆ. ನನ್ನಪ್ಪ ತೀರಿ ಹೋದ ಏಳು ವರ್ಷಗಳ ಬಳಿಕ ಕಳೆದ ವಾರ ನನ್ನ ಮನೆಗೆ ಬೇಟಿ ನೀಡಿದ್ದೆ. ನನ್ನ ಮನೆಯ ಜಗುಲಿ ಮೇಲೆ ಇರುವ ಮಂಚದ ಮೇಲೆ ನನ್ನಪ್ಪ ಯಾವಾಗಲೂ ಕೂರುತ್ತಿದ್ದ. ನಾನು ಮೆಟ್ಟಲು ಬಳಿ ಇರುವ ಕಂಬಕ್ಕೆ ಒರಗಿ ಕೂರುತ್ತಿದ್ದೆ. ಇಬ್ಬರೂ ಗಂಟೆಗಟ್ಟಲೆ ಮಾತನಾಡುತ್ತಿದ್ದೆವು. ತನ್ನ ಕಡೆಯ ದಿನಗಳಲ್ಲಿ ನನ್ನಪ್ಪ ನನ್ನನ್ನು ಬಹುವಚನ ಬಳಸಿ ಮಾತನಾಡುತ್ತಿದ್ದ. ಮನಸ್ಸಿಗೆ ತುಂಬಾ ಹಿಂಸೆಯಾಗುತ್ತಿತ್ತು.
ಜಗುಲಿಯ ಮೇಲಿರುವ ಕೊಠಡಿಯಲ್ಲಿ ನಾನು ಮಲಗುತ್ತಿದ್ದೆ. ಮಧ್ಯರಾತ್ರಿ ಮುಂದಿನ ಗುಡಿಸಲಿನ ಕೊಟ್ಟಿಗೆಯಲ್ಲಿ ದನಗಳ ಎದುಸಿರು ಕೇಳಿಬಂದರೆ ಸಾಕು, ಅಪ್ಪ ನನ್ನ ತಮ್ಮನನ್ನು ಕೂಗಿಕೊಳ್ಳುತ್ತಿದ್ದ.” ಮಗಾ ದನದ ಕಾಲಿಗೆ ಹಗ್ಗ ನುಲಿದುಕೊಂಡಿದೆ ಬಾ ” ಎಂದು ಮನೆಯೊಳಗೆ ಮಲಗಿದ್ದ ತಮ್ಮನನ್ನು ಕೂಗಿ ಕರೆಯುತ್ತಿದ್ದ. ಅಪ್ಪನಿಗೆ ಮೂಕ ಪ್ರಾಣಿಗಳ ಮೂಕ ವೇದನೆ ಹೇಗೆ ಅರ್ಥವಾಗುತ್ತೆ? ಎಂದು ನಾನು ವಿಸ್ಮಯಗೊಳ್ಳುತ್ತಿದ್ದೆ.
ಜಗುಲಿಯ ಮಾಡಿನಲ್ಲಿ ಮತ್ತು ಅಂಗಳದಲ್ಲಿ ಯಾವಾಗಲೂ ಗುಬ್ಬಚ್ಚಿಗಳು ಇರುತ್ತಿದ್ದವು. ಈಗ ಅಪ್ಪನೂ ಇಲ್ಲ, ಗುಬ್ಬಚ್ಚಿಗಳು ಇಲ್ಲ. ಮೊನ್ನೆ ತಮ್ಮನ ಹೆಂಡತಿ ಮಾಡಿಕೊಟ್ಟ ಚಹಾ ಕುಡಿಯುತ್ತಾ . ಅದೇ ಮೆಟ್ಟಲಿನ ಕಂಬಕ್ಕೆ ಒರಗಿ ಗುಬ್ಬಚ್ಚಿಗಳ ಬಗ್ಗೆ ಯೋಚಿಸುತ್ತಾ ಇದ್ದೆ. ಏಕೋ ಕಾಣೆ ಗುಬ್ಬಚ್ಚಿಗಳ ನೆಪದಲ್ಲಿ ನನ್ನಪ್ಪ ನಂಜೇಗೌಡನೂ ನೆನಪಾದ.
 

‍ಲೇಖಕರು avadhi

10 August, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading