ಪ್ರಸಾದ್.ಡಿ.ವಿ.
ನಾನೀಗ ಹೇಳ ಹೊರಟಿರುವುದು ಏಕಾಂಬರನೆಂಬ ಬ್ಯಾಂಕ್ ಮ್ಯಾನೇಜರ್ರೂ, ಅವಶೇಷದಂಚನ್ನು ತಲುಪಿರುವ ಕಳೇಬರದಂತಹ ಅವನುಡುಪುಗಳೂ, ಅವುಗಳ ಪ್ರೇರಣೆಯಿಂದ ಕಥೆ ಬರೆದು ಜಗದ್ವಿಖ್ಯಾತನಾದ ಮೂಲಿಮನಿಯೂ, ಆ ಕಥೆಯ ಭಾಗವಾಗಿ, ದೊಡ್ಡದೂ ಅಲ್ಲದ ಪುಟ್ಟದೂ ಅಲ್ಲದ ಪಟ್ಟಣವಾದ ಗುಣಸಾಗರದಲ್ಲಿ ಸಮಾವೇಶಗೊಳ್ಳಲಿರುವ ‘ಸನಾತನ ಉಡುಪುಗಳ ಸಮಾವೇಶ’ವೂ, ಆ ಗುಣಸಾಗರದ ಶಾಸಕನಾದಂತಹ ರೇವಣ್ಣನೂ, ಮುಖ್ಯಮಂತ್ರಿಗಳಾಗಿದ್ದು ಮಾಜಿಗಳಾದಂತಹ ಮಾನ್ಯ ಮೂಗಪ್ಪನವರೂ, ದೇಶ ವಿದೇಶಗಳ ಗಣ್ಯಾತಿಗಣ್ಯರೂ, ಇವರೆಲ್ಲರನ್ನೂ ತನ್ನ ವಾರೆಗಣ್ಣಿನಲ್ಲಿ ಕುಣಿಸುವ ಭುವನೈಕ ಸುಂದರಿ ಈಶಾನ್ಯ ಜೈನಳೂ, ಅವಳನ್ನು ಎರಡನೇ ಪತ್ನಿಯಾಗಿ ಪಡೆದ ಗಾಯಕ್ವಾಡನೂ, ಅವನ ಕನಸಿನ ಕೂಸಾದ ಸಣಾಪುರ ಜಿಲ್ಲೆಯ ಗ್ರಾನೈಟ್ ಗಣಿಯ ಪರವಾನಿಗೆಯೂ, ಒಬೆರಾಯ್ ಗ್ರೂಪ್ ಆಫ್ ಹೋಟೆಲ್ಸ್ ನ ಮಾಲಕನಾದ ಪ್ರದ್ಯುಮ್ನ ರಾಯೂ, ಇವರೆಲ್ಲರ ಅವಾಂತರಗಳನ್ನು ಸಹಿಸುವ ನಿರುಪದ್ರವಿ ಗುಣಸಾಗರದ ಜನತೆಯೂ, ನಾವುಗಳಾದ ನಾವೂ, ಅವರುಗಳಾದ ಅವರೂ ಬಂದು ಹೋಗುವ ಸಕಾಲಿಕ, ಸಾರ್ವತ್ರಿಕ ಕಾದಂಬರಿ ‘ಏಕಾಂಬರ’ದ ಬಗ್ಗೆ.

ಕುಂವೀಯವರ ಕೆಲವು ಸಣ್ಣ ಕಥೆಗಳನ್ನು ಹೊರತುಪಡಿಸಿ ಕಾದಂಬರಿಯಿಂದ ನಾನು ಅವರನ್ನು ಓದಲು ಪ್ರಾರಂಭಿಸಿದ್ದು ಈ ಏಕಾಂಬರನ ಮೂಲಕವೇ. ಇಲ್ಲಿ ನನ್ನನ್ನು ಬಹುವಾಗಿ ಹಿಡಿದಿಟ್ಟಿದ್ದು ಅವರ ಬರವಣಿಗೆಯ ಶೈಲಿ. ಅವರು ರೂಪಕಗಳ ಮೂಲಕ ವಾಸ್ತವಗಳನ್ನು ಸಮೀಕರಿಸುವ ರೀತಿ ನೋಡಿ ಬೆಕ್ಕಸ ಬೆರಗಾದೆ. ಅವರ ಭಾಷೆ ನಮ್ಮ ದಕ್ಷಿಣ ಕರ್ನಾಟಕದ ಕನ್ನಡಕ್ಕಿಂತ ಭಿನ್ನವಾಗಿದ್ದುದು ಮೊದಮೊದಲು ಓದಿಕೊಳ್ಳಲು ಕಷ್ಟವೆನಿಸಿದರೂ, ನಂತರದಲ್ಲಿ ಅದೇ ಇಷ್ಟವಾಗಿ ಓದಿಕೊಂಡೆ. ತನ್ಮೂಲಕ ಭಾಷೆ ಮತ್ತು ಶೈಲಿ ಒಬ್ಬ ಬರಹಗಾರನ ತಾಕತ್ತು ಎಂಬುದನ್ನು ಅರ್ಥೈಸಿಕೊಂಡೆ. ಈ ಕಾದಂಬರಿ ನನ್ನ ಶಬ್ಧಕೋಶವನ್ನೂ ಹಿಗ್ಗಿಸಿದ್ದು ಸುಳ್ಳಲ್ಲ. ಒಬ್ಬ ಸಶಕ್ತ ಬರಹಗಾರ ತನ್ನ ಮುಂದಿನ ಪೀಳಿಗೆಯ ಯುವ ಬರಹಗಾರರಿಗೆ ಪರೋಕ್ಷವಾಗಿ ಮಾರ್ಗದರ್ಶನ ನೀಡುವುದೆಂದರೆ ಹೀಗೇ, ಅವರ ಯೋಚನಾಧಾಟಿಯ ಹರಿವನ್ನು ನೇರ್ಪಡಿಸುತ್ತಾ, ಅವರಲ್ಲಿನ ಕ್ರಿಯಾಶೀಲತೆಗೆ ಕಿಡಿಯಾಗುತ್ತಾ, ಒಂದು ವಸ್ತುವಿನ ಒಳಹೊಳವುಗಳನ್ನು ದಕ್ಕಿಸಿಕೊಳ್ಳುವುದು ಹೇಗೆಂದು ತನ್ನ ಬರವಣಿಗೆಯ ಮೂಲಕ ಬಿಚ್ಚಿಡುತ್ತಾ ಸಾಗುವುದು. ಆ ವಿಷಯದ ಮಟ್ಟಿಗೆ ಏಕಾಂಬರ ಒಂದು ಕ್ರಾಂತಿಯೇ ಹೌದು. ಲೇಖಕರು ವಿವರಿಸುವ ಪ್ರತಿಯೊಂದು ದೃಷ್ಟಿಕೋನಗಳು ಭಿನ್ನವೇ ಆಗಿದ್ದು, ಆ ಸಂದರ್ಭಕ್ಕೆ ನಾವೇ ಪ್ರತ್ಯಕ್ಷದರ್ಶಿಗಳಾಗಿದ್ದರೂ ಲೇಖಕರು ಸೆರೆಹಿಡಿದಂತಹ ದೃಷ್ಟಿಕೋನಗಳನ್ನು ಸಿಕ್ಕಿಸಿಕೊಳ್ಳಲು ಸಾಧ್ಯವಿತ್ತೇ ಎಂಬ ಬಗ್ಗೆ ನನಗೆ ಅನುಮಾನವಿದೆ! ಓದುಗನಿಗಂತೂ ಭರಪೂರ ಮನೋರಂಜನೆಯಿದೆ.
ಏಕಾಂಬರದ ವಸ್ತುವಿನ ಬಗ್ಗೆ ಅವಲೋಕಿಸುವುದಾದರೆ, ಲೇಖಕರೇ ಹೇಳಿಕೊಳ್ಳುವಂತೆ ಓದುಗನಿಗೆ ಒಂದೇ ಓದಿಗೆ ಗ್ರಾಹ್ಯವಾಗಬಲ್ಲ ಸಮಕಾಲೀನ ವಸ್ತುವನ್ನು ಒಳಗೊಂಡಿದೆ. ಸನಾತನ ದೇಶೀಯ ಉಡುಪುಗಳು, ಬಟ್ಟೆ ಉದ್ಯಮಗಳು ಭಾರತದಂತಹ ನಾಡಲ್ಲಿ ಬೆಳೆದು ನಿಲ್ಲಲು ಪಟ್ಟ ಪರಿಪಾಟಲುಗಳೂ, ಕಾರ್ಮಿಕರು ಮತ್ತು ರೈತರ ಕಷ್ಟ ಕಾರ್ಪಣ್ಯಗಳೂ, ಕಾರ್ಲ್ ಮಾರ್ಕ್ಸ್ ಮತ್ತು ಚೆಗುವೆರಾರಂತಹ ಎಡ ಪಂಥೀಯ ನಾಯಕರ ಚಿಂತನೆಗಳೂ, ರಾಜಕೀಯ ಮೇಲಾಟಗಳೂ, ಅವರ ಆಷಾಡಭೂತಿ ನಡಾವಳಿಗಳೂ, ಈ ರಾಜಕೀಯ ಮೇಲಾಟಗಳಿಗೆ ಪರೋಕ್ಷಕವಾಗಿ ಕಾರಣವಾಗಿದ್ದುಕೊಂಡು ಅದನ್ನು ಸಹಿಸುತ್ತಲೂ ಇರುವ ಜನತೆ, ಜಾಗತೀಕರಣ, ಹೀಗೆ ಸಾಕಷ್ಟು ಒಳನೋಟಗಳನ್ನು ಹಾಸ್ಯಮಯವಾಗಿ ಶಾಂತ ಸಾಗರದಂಥ ಓದುಗನ ಮನದಾಳಕ್ಕೆ ಕಲ್ಲು ತೂರುವಂತೆ ತೂರಿದ್ದಾರೆ. ಹಾಗೆ ತೂರಿದ ಕಲ್ಲುಗಳು ಒಂದರ ಮೇಲೊಂದರಂತೆ ಆಂತರಿಕ ಜಿಜ್ಞಾಸು ತರಂಗಗಳನ್ನೆಬ್ಬಿಸುತ್ತಾ ಯೋಚನೆಗೆ ಹಚ್ಚುತ್ತವೆ. ಇಲ್ಲಿ ಹಾಸ್ಯ ಪ್ರಧಾನವಾದ ಕೆಲಸ ಮಾಡಿದ್ದು, ಕಾದಂಬರಿಯನ್ನೋದಿಸುತ್ತಾ ತನಗೆ ಕೊಟ್ಟ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿದೆ. ಗಂಭೀರ ವಿಷಯಗಳನ್ನೂ ಮನದಾಳದ ಕೊಕ್ಕೆಗೆ ಸಲೀಸಾಗಿ ಸಿಕ್ಕಿಸುತ್ತಾ ತಮ್ಮ ಬರವಣಿಗೆಯ ಪಾರಮ್ಯ ಮೆರೆಯುತ್ತಾರೆ ಲೇಖಕರು.
ನನ್ನ ಮಟ್ಟಿಗೆ ಹೇಳುವುದಾದರೆ ಒಂದು ಒಳ್ಳೆಯ ಓದಿನೊಂದಿಗೆ ಸಾಕಷ್ಟು ವಿಷಯಗಳ ಬಗ್ಗೆ ಸ್ವ-ಅಧ್ಯಯನವನ್ನು ಉತ್ತೇಜಿಸಿದ ಕಾದಂಬರಿ ಇದು. ವಿಜ್ಞಾನವನ್ನು ವಿಷಯವಾಗಿ ಓದಿರುವ ನನಗೆ ಈ ಎಡಪಂಥೀಯ ಒಳನೋಟಗಳ ಬಗ್ಗೆ ಅರಿವು ಮೂಡಿಸಿ ಆ ಬಗ್ಗೆ ಒಂದಷ್ಟು ಅಧ್ಯಯನ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದು ಏಕಾಂಬರ. ಭಗತ್, ಶುಭಾಶ್, ಆಜಾದ್ ಮುಂತಾದವರನ್ನು ಹೀರೋಗಳಾಗಿ ಕಂಡ ಕಣ್ಣುಗಳಿಗೆ ಕಾರ್ಲ್ ಮಾರ್ಕ್ಸ್, ಚೆಗುವೆರಾರನ್ನೂ ದಕ್ಕಿಸಿದ್ದು ಏಕಾಂಬರದ ಹೆಗ್ಗಳಿಕೆ. ಒಂದು ಓದಿನ ಪ್ಯಾಕೇಜ್ ಆಗಿ ನೋಡುವುದಾದರೆ ಏಕಾಂಬರ ಮನೋರಂಜನೆಯನ್ನೂ, ಸಾಕಾಲಿಕ ರಾಜಕೀಯ ಸ್ಥಿತ್ಯಂತರಗಳನ್ನೂ, ಜಾಗತೀಕರಣದ ಮೇಲಾಟಗಳನ್ನೂ, ಸಮಾಜದ ವಿವಿಧ ಸ್ಥರಗಳಲ್ಲಿರುವ ಮಾನವನ ವಿವಿಧ ಮುಖವಾಡಗಳ ಅವಲೋಕನವನ್ನೂ ಒದಗಿಸುತ್ತದೆ. ಪ್ರತ್ಯೇಕವಾಗಿ ನಿಂತು ನೋಡುವಾಗ ಹಾಸ್ಯಾಸ್ಪದವಾಗಿ ಕಾಣುವ ಸನ್ನಿವೇಷಗಳು ಇಲ್ಲಿ ಸ್ವಾಭಾವಿಕವಾಗಿಯೂ ಅತೀ ರಂಜನೀಯವೆನಿಸದೆ ಸಹಜವಾಗಿಯೂ, ಪ್ರತಿಯೊಂದು ಸಂದರ್ಭಗಳೂ ಒಂದಕ್ಕೊಂದು ತಾರ್ಕಿಕವಾಗಿ ಅಂಟಿಕೊಂಡಂತೆಯೂ ಕಾಣುತ್ತವೆ. ಒಮ್ಮೊಮ್ಮೆ ಕಾದಂಬರಿಯ ಅಂತ್ಯ ಆವೇಗದಲ್ಲಿ ಹೊರಟ ಕಾರಿನ ಬ್ರೇಕುಗಳನ್ನು ತಕ್ಷಣಕ್ಕೆ ಅದುಮಿದಂತೆನಿಸಬಹುದು, ಇದ್ದಕ್ಕಿದ್ದಂತೆಯೇ ಎಲ್ಲವೂ ಉಪಾಂತ್ಯ ಕಂಡುವು ಎನಿಸಲೂಬಹುದು. ಆದರೆ ಯಾವುದೇ ಕಥೆಗೂ ವಾಸ್ತವದಲ್ಲಿ ಅಂತ್ಯವೆಂಬುದಿರುವುದಿಲ್ಲ ಎಂಬ ತಾರ್ಕಿಕ ಉಪಾಂತ್ಯವನ್ನು ನಾವಿಲ್ಲಿ ಕಾಣಬಹುದು. ಇದರ ಅಂತ್ಯವನ್ನು ನೋಡುವಾಗ ನನಗೆ ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳಲ್ಲಿನ, ’ಇಲ್ಲಿಗೆ ಕಥೆ ಮುಗಿಯಿತೆಂದು ತಿಳಿಯಬೇಡಿ. ಕಥೆಯೆಂದರೆ ನಿರಂತರವಾಗಿ ಹರಿಯುವ ಜೀವನಕ್ಕೆ ಒಂದು ಚೌಕಟ್ಟನ್ನು ಹಾಕುತ್ತದೆಯಷ್ಟೆ.’ ಎಂಬ ಸಾಲುಗಳು ನೆನಪಾದವು.
ಈಗ್ಗೇ ಸ್ವಲ್ಪ ದಿನಗಳಂತರದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರಗಳನ್ನು, ಭ್ರಷ್ಟಾಚಾರಗಳನ್ನೂ ಕಂಡ ನಮ್ಮ ಜನತೆಯ ಮನಸ್ಥಿತಿಯನ್ನು ಕಾದಂಬರಿಯಲ್ಲಿ ಬರುವ ಗುಣಸಾಗರದ ಜನರ ಮನಸ್ಥಿತಿಗೆ ಹೋಲಿಸಿ ಬರೆದಿರುವ ತುಣುಕು ನನ್ನನ್ನು ಬಹಳವಾಗಿ ಸೆಳೆಯಿತು. ಆದ್ದರಿಂದ ಅದನ್ನಿಲ್ಲಿ ನಮೂದಿಸುತ್ತಿದ್ದೇನೆ:
“ಕಳೆದೊಂದು ತಿಂಗಳಲ್ಲಿ ನೊಣ ಕ್ರಿಮಿಕೀಟಗಳ ಉಪಟಳಗಳಿಂದ ಗುಣಸಾಗರದ ಜನತೆ ರೋಸಿ ಹೋಗಿತ್ತಷ್ಟೆ, ಎಷ್ಟು ರೋಸಿತ್ತೆಂದರೆ ಅವೆಲ್ಲ ತಮ್ಮ ಬದುಕಿನ ಅವಿಭಾಜ್ಯ ಅಂಗವೆಂದೋ, ತಮ್ಮ ಪೂರ್ವಜನ್ಮದ ಕರ್ಮವೆಂದೋ ಭಾವಿಸಿ ಕ್ರಮೇಣ ಅವುಗಳಿಗೆ ತಾವೋ, ತಮಗೆ ಅವೋ ಹೊಂದಿಕೊಂಡು ಸಹಜೀವನವನ್ನು ಆರಂಭಿಸಿದ್ದರು. ತಾವು ತಿನ್ನುವ ಆಹಾರದಲ್ಲಿ, ತಾವು ಕುಡಿಯುವ ನೀರಿನಲ್ಲಿ, ತಾವು ಸೇವಿಸುವ ಗಾಳಿಯಲ್ಲಿ ಅಂಥ ಕ್ರಿಮಿಕೀಟಗಳ ಅವಶೇಷಗಳಿರುವುದು ಅನಿವಾರ್ಯವೆಂದೇ ಭಾವಿಸಿದ್ದರು.”
ಈ ಮೂಲಕ ಒಂದೊಳ್ಳೆಯ ಕಾದಂಬರಿಯನ್ನು ಕೊಟ್ಟ ಕುಂವೀಯವರ ಈ ವರ್ಷದ ಮಹಾತ್ವಾಕಾಂಕ್ಷೆಯ ಕೂಸಾದ ’ಒಳಚರಂಡಿಗಳು’ ಕಾದಂಬರಿಗೆ ಶುಭಾಶಯಗಳನ್ನು ಕೋರುತ್ತೇನೆ.







ಧನ್ಯವಾದಗಳು ಪ್ರಸಾದ್ ಕುಂವೀ ರ ಈ ಕಾದಂಬರಿಯ ಬಗ್ಗೆ ಪರಿಚಯಿದ್ದಕ್ಕೆ. ನಾನೂ ಕೊಂಡು ಓದುವೆ!!
ಪ್ರಸಾದರವರೆ, ಏಕಾಂಬರ ಕಾದಂಬರಿ ಹಿಡಿದಾಗಿನಿಂದ ನಾನು ಸಹ ಕಾರ್ಲ್ ಮಾರ್ಕ್ಸ್, ಚೆಗುವೆರಾರನ್ನು ತಿಳಿದುಕೊಳ್ಳಲು ಹವಣಿಸುವಂತೆ ಮಾಡಿದೆ, ಹಾಗೆ ಮೊದಲು ರಾಮ ಮನೋಹರ ಲೋಹಿಯಾ ಅವರ “ಸ್ವಾತಂತ್ರದ ಅಂತರ್ಜಲ” ಸಂಕಲನ ಪುಸ್ತಕವೊಂದನ್ನು ಹಿಡಿದು ಕೂತಿದ್ದೇನೆ… ಎಡಪಂಕ್ತೀಯ ಧೋರಣೆಗಳನ್ನ ಅರ್ಥೈಸಿಕೊಳ್ಳಲು ದಾರಿ ಮಾಡಿಕೊಟ್ಟ ಕಾದಂಬರಿ ಎಂದರೆ ಅತಿಷಯೋಕ್ತಿಯಾಗಲಾರದು…
prasad nimage anantha dhanyavadagalu kanri,
ekambara odi istella barediruva nimma abhipraya odi adara lekhakanada nanage tumba khushiyaagide
mattomme dhanyavadagalu prasad, oduviraadare nanna kelavu kaadambarigalannu preetiyinda kalisuve.
nimma
kumvee
ನನ್ನ ಅಭಿಪ್ರಾಯಗಳ ಟಿಪ್ಪಣಿ ‘ಏಕಾಂಬರ’ದ ಲೇಖಕರಾದ ನಿಮ್ಮ ಗಮನಕ್ಕೆ ಬಂದದ್ದು ನನಗೆ ಅತ್ಯಾನಂದವನ್ನು ನೀಡಿದೆ ಕುಂವೀ ಸರ್ 🙂 ಅಂತಹ ಒಂದು ಅವಕಾಶ ಕಲ್ಪಿಸಿಕೊಟ್ಟ ‘ಅವಧಿ’ಗೆ ನನ್ನ ಪ್ರಣಾಮಗಳು. ಖಂಡಿತವಾಗಿಯೂ ನಿಮ್ಮ ಇನ್ನಷ್ಟು ಕಾದಂಬರಿಗಳನ್ನು ಓದಲು ಉತ್ಸುಕನಾಗಿದ್ದೇನೆ, ನಿಮ್ಮ ಮುಂದಿನ ಕಾದಂಬರಿ, “ಒಳಚರಂಡಿಗಳು”ಗಾಗಿಯೂ ಕಾತುರನಾಗಿದ್ದೇನೆ.
– ಪ್ರಸಾದ್.ಡಿ.ವಿ.
ನಿಮ್ಮ ಸುಂದರ ಪರಿಚಯ ಪುಸ್ತಕವನ್ನು ಓದಲೇಬೇಕೆಂಬ ತವಕಕ್ಕೆ ಒತ್ತಾಸೆಯಾಯಿತು.ನಮ್ಮ ನಾಡಿನ ಅಪೂರ್ವ ಮತ್ತು ಹೆಮ್ಮೆಯ ಸಾಹಿತ್ಯ ಕುವರ ಕುಂವೀಯವರ ಸಾರ್ವತ್ರಿಕ ಕಾದಂಬರಿ ‘ಏಕಾಂಬರ’ ವನ್ನು ಖಂಡಿತಾ ಕೊಂಡು ಓದುತ್ತೇನೆ.ಚನ್ನಾಗಿ,ಹದವಾಗಿ ಪರಿಚಯಿಸಿದ್ದೀರಿ ಪ್ರಸಾದು,ಈ ಕಾರ್ಯವನ್ನು ಮುಂದುವರೆಸಿ ನಮ್ಮ ಬ್ಲಾಗಿನ ಪ್ರತಿಭಾವಂತ ಕವಿ,ಬರಹಗಾರರ ಅಭಿವ್ಯಕ್ತತೆಯನ್ನೂ ಸಹ ಪರಿಚಯಿಸಿ ಸಾಹಿತ್ಯ ಸೇವೆ ಗೈಯಬೇಕೆಂದು ಭಿನ್ನವಿಸಿಕೊಳ್ಳುತ್ತೇನೆ