ಎಸ್ ಜಿ ಶಿವಶಂಕರ್
ರಚ್ಚೆ ಹಿಡಿದ ಮಗುವಿನಂತೆ ಒಂದೇ ಸಮನೆ ಜಿಟಿಜಿಟಿ ಸೋನೇ ಮಳೆ! ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿತ್ತು. ಮೈಕೊರೆಯುವ ಚಳಿಗಾಳಿ ಮಳೆಗೆ ಸಾಥ್ ನೀಡಿತ್ತು.
ನಡು ರಾತ್ರಿ ಮೀರಿದರೂ ಅವಿನಾಶ ಬಹಳ ಹೊತ್ತು ಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಿದ್ದ. ಅವನಿಗೆ ಬೇಕಾದ ಮಾಹಿತಿ ಸಿಗದೆ ಎಂದಿನಂತೆ ಸಿಕ್ಕಸಿಕ್ಕ ಆಸಕ್ತಿ ಕೆರಳಿಸುವ ವಿಷಯಗಳ ಹಿಂದೆ ಹೋಗಿ ಸಮಯ ಕಳೆದಿದ್ದ. ಸಾಕಷ್ಟು ಆಯಾಸವೂ ಅಗಿತ್ತು. ಇನ್ನು ಮಲಗೋಣ ಎನ್ನಿಸಿತು. ಕೊನೆಯ ಸಲ ಹುಡುಕೋಣ ಎಂದು ಸರ್ಚ್ ಎಂಜಿನ್ನಿಗೆ ವಿಷಯ ಹಾಕಿದ. ಪರಿಣಾಮ ಸೊನ್ನೆ. ಕೆಲವು ಸೂಕ್ಷ್ಮ ಸೈಟುಗಳನ್ನು ಕದ್ದು ನೋಡುವ ಹ್ಯಾಕಿಂಗ್ ತಂತ್ರವನ್ನೂ ಪ್ರಯೋಗಿಸಿದ.
ಅಂದ ಹಾಗೆ ಅವನು ಹುಡುಕುತ್ತಿದ್ದುದು ದರ್ಮಾಂಧ ಭಯೋತ್ಪಾದಕರ ಯೋಜನೆಗಳನ್ನು ಮತ್ತವರ ಅಡಗುತಾಣಗಳ ಬಗೆಗೆ ಮಾಹಿತಿ. ಅವನ ಈ ಹುಡುಕಾಟಕ್ಕೆ ಒಂದು ಕಾರಣವೂ ಇತ್ತು. ಕಳೆದೆರಡು ದಿನಗಳಿಂದಲೂ ಅವನ ಸೂಕ್ಷ್ಮ ಪ್ರಜ್ಞೆಗೆ ಭೂಮಿಗೆ ಭಯೋತ್ಪಾದಕರಿಂದ ಕಂಟಕವಿದೆ ಎನಿಸುತ್ತಿತ್ತು. ಅವಿನಾಶ ಇತ್ತ್ತಿಚೆಗೆ ಕಂಪ್ಯೂಟರಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಇನ್ನು ಎರಡು ದಿನಗಳಲ್ಲಿ ವಿಶ್ವದ ಪ್ರತಿಷ್ಟಿತ ಕಂಪೆನಿಯ ಕೆಲಸಕ್ಕೆ ಹಾಜರಾಗುವವನಿದ್ದ. ತನ್ನ ಸೂಕ್ಷ್ಮ ಪ್ರಜ್ಞೆಗೆ ಮಾನ್ಯತೆ ಕೊಟ್ಟು ಇಡಿಯ ಅಂತಜರ್ಾಲವನ್ನು ಜಾಲಾಡಿದ್ದ ಅವಿನಾಶ. ಕಳೆದೆರಡು ದಿನಗಳಿಂದಲೂ ಪ್ರಯತ್ನ ಸಫಲವಾಗದೆ ದಣಿದಿದ್ದ.
ಕೊನೆಯ ಪ್ರಯತ್ನವೂ ಸಫಲವಾಗದಿದ್ದಾಗೆ ಕಂಪ್ಯೂಟರನ್ನು ಷಟ್ಡೌನ್ ಮಾಡಲು ಕೀಲಿ ಒತ್ತುವ ಮುಂಚೆ ಕಂಪ್ಯೂಟರಿನ ಪರದೆಯ ಮೇಲೆ ಹಲವಾರು ಬಣ್ಣಗಳು ಒಂದರಮೇಲೊಂದರೆಂತೆ ಮೂಡಿದವು. ಬಹುಶಃ ಕಂಪ್ಯೂಟರಿನ ಮಾನಿಟರ್ ಕೆಟ್ಟಿತು ಎಂದುಕೊಂಡ ಅವಿನಾಶ. ಆಗಲೇ ಒಂದು ಚಮತ್ಕಾರ ನಡೆಯಿತು. ಪರದೆಯ ಮೇಲೊಂದು ವಿಚಿತ್ರವಾದ ಜೀವಿಯ ಆಕೃತಿ ಮೂಡಿತು!
ಮನುಷ್ಯರ ತಲೆಗೆ ಹೋಲಿಸಿದರೆ ತುಸು ದೊಡ್ಡದೆನಿಸುವ ಕೂದಲಿಲ್ಲದ ತಲೆ, ದೊಡ್ಡವಾದ ಆದರೆ ಹುಬ್ಬಿಲ್ಲದ ಕಣ್ಣುಗಳು, ಚೂಪಾದ ಕಿವಿಗಳು, ಸೀಳು ತುಟಿಗಳು, ಹಸಿರು ಬಣ್ಣದ ಚರ್ಮ ಮತ್ತು ಅಂತರಿಕ್ಷ ಯಾತ್ರೆಯ ಗ್ರಾವಿಟಿ ಉಡುಪು! ನೋಡಿದ ತಕ್ಷಣವೇ ಅದೊಂದು ಅನ್ಯಗ್ರಹ ಜೀವಿಯೆಂದು ಹೇಳಿಬಿಡಲು ಸಾಧ್ಯವಿತ್ತು!
“ನಿನಗೆ ಬೇಕಾದ ಮಾಹಿತಿ ನನ್ನ ಬಳಿ ಇದೆ” ಆ ಅಕೃತಿ ನುಡಿಯಿತು!
ಅವಿನಾಶನಿಗೆ ಪರಮಾಶ್ಚರ್ಯವಾಗಿತ್ತು! ಹೀಗೆ ಅನ್ಯಗ್ರಹ ಜೀವಿಯೊಂದರ ಸಂಪರ್ಕ ಆತ ಎಂದೆಂದೂ ಊಹಿಸದಿದ್ದ ಘಟನೆ! ತಾನು ನೋಡುತ್ತಿರುವುದು ನಿಜವೇ ಇಲ್ಲಾ ಕನಸೆ? ಅವಿನಾಶ್ ತನ್ನ ಕೈಯನ್ನು ಚಿವುಟಿಕೊಂಡ. ನೋವಾಯಿತು! ಅಂದರೆ ಇದು ಕನಸಲ್ಲ!
“ಯಾರು ನೀನು?” ಪ್ರಶ್ನಿಸಿದ.
“ಕ್ವೀಟೋ ಎಂದು ನನ್ನನ್ನು ಕರೆಯುತ್ತಾರೆ. ಬೇರೆ ಸೂರ್ಯಮಂಡಲದ ಜೀವಿ ನಾನು. ನೋಡು, ಅದೆಲ್ಲಾ ಈಗ ಮುಖ್ಯವಲ್ಲ.. ಈಗ ಮುಖ್ಯವಾಗಿರುವುದು ಈ ಭೂಮಿಯ ಜೀವಸಂಕುಲವನ್ನು ಉಳಿಸುವುದು. ಇನ್ನು ಮೂರು ಗಂಟೆಗಳಲ್ಲಿ ಧಮರ್ಾಂಧ ಬಯೋತ್ಪಾದಕರು ಅಣು ಸ್ಫೋಟ ಮಾಡಲಿದ್ದಾರೆ. ಅದು ಅನೇಕ ದೇಶಗಳಿಂದ ಏಕಕಾಲದಲ್ಲಿ ನಡೆಯುವುದರಿಂದ ಇಡೀ ಭೂಮಿಯಲ್ಲಿನ ಜೀವಸಂಕುಲ ಸಂಪೂರ್ಣವಾಗಿ ನಾಶವಾಗಲಿದೆ.”

ಅನ್ಯಗ್ರಹ ಜೀವಿ ಕ್ವೀಟೋ ನುಡಿಯಿತು.
“ಓ..ಮೈ ಗಾಡ್! ಹಾಗಾದರೆ ನನಗೆ ಅನಿಸುತ್ತಿದ್ದುದು ನಿಜವೇ ಆಗಲಿದೆ”
“ಔದು…ಆ ಸಮಯ ಹತ್ತಿರದಲ್ಲೇ ಇದೆ. ಅದಕ್ಕೇ ನಿನ್ನನ್ನು ಉಳಿಸುವ ಸಲುವಾಗಿ ನಿನ್ನನ್ನು ಸಂಪರ್ಕ ಮಾಡಿದ್ದೇನೆ..”
“ಬರೀ ನನ್ನನ್ನು..? ಭೂಮಿಯ ಜೀವಜಾಲ, ಸಸ್ಯಜಾಲದ ಗತಿಯೇನು?”
“ಭೂಮಿಯಲ್ಲಿರುವುದೆಲ್ಲನ್ನೂ ಕಾಪಾಡುವುದು ಸಾಧ್ಯವಿಲ್ಲ…ಆ ಪ್ರಮಾಣದಲ್ಲಿ ರಕ್ಷಣೆ ಮಾಡುವುದು ಬೇರೆ ಗ್ರಹದಿಂದ ಬಂದ ನಮಗೆ ಸಾಧ್ಯವಾಗುವುದಿಲ್ಲ. ಬದಲಿಗೆ ಎಲ್ಲ ಜೀವಿಗಳ, ಸಸ್ಯಗಳ ಒಂದೊಂದು ಮಾದರಿಯನ್ನಷ್ಟೆ ಆಯ್ದುಕೊಂಡಿದ್ದೇವೆ. ಭೂಮಿಯ ಒಂದು ಪ್ರದೇಶವನ್ನು ಎಲ್ಲ ವಿಧ್ವಂಸಕ ಪರಿಣಾಮಗಳಿಂದ ರಕ್ಷಿಸುವಂತ ಒಂದು ಬೇಲಿ ಹಾಕಿದ್ದೇವೆ. ಅಲ್ಲಿಗೆ ಯಾವ ಅಣುವಿಕಿರಣವೂ ತಾಗದು. ನೂರಾರು ವರ್ಷಗಳ ಕಾಲ ಆ ಪ್ರದೇಶ ಸುರಕ್ಷಿತವಾಗಿರುತ್ತದೆ. ಅಣುವಿಕಿರಣಗಳ ಪ್ರಭಾವ ತಗ್ಗಿದ ನಂತರ ಅಲ್ಲಿ ಬೆಳೆಯುವ ಸಸ್ಯ ಮತ್ತು ಜೀವಸಂಕುಲ ಇಡೀ ಭೂಮಿಗೆ ವಿಸ್ತರಿಸಬಹುದು”
ಕ್ವೀಟೋನ ಈ ವಿವರಣೆಯಿಂದ ಅವಿನಾಶನಿಗೆ ವಿಸ್ಮಯವಾಯಿತು!
“ಇದರಿಂದ ನಿಮಗೇನು ಲಾಭ…?” ಅನುಮಾನದಿಂದ ಕೇಳಿದ.
“ಇಡೀ ವಿಶ್ವ ಒಂದು ಸಮತೋಲನದಲ್ಲಿದೆ. ಎಲ್ಲವೂ ಎಲ್ಲದಕ್ಕೂ ಸಂಬಂಧಗಳಿವೆ. ಭೂಮಿಯ ನಾಶ ನಮ್ಮನ್ನೂ ತಟ್ಟದಿರದು. ಅದ್ದರಿಂದ ಭೂಮಿಯ ರಕ್ಷಿಸುವ ಈ ಪ್ರಯತ್ನದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಸ್ವಾರ್ಥವೂ ಇದೆ”
“ಇಡೀ ಭೂಮಿಯನ್ನು ಯಥಾವತ್ತಾಗಿ ರಕ್ಷಿಸಲು ಸಾಧ್ಯವಿಲ್ಲವೆ..?” ಅವಿನಾಶ ಕಳಕಳಿಯಿಂದ ಕೇಳಿದ.
“ಸಾಧ್ಯವಿಲ್ಲ..ಇದು ಮನುಷ್ಯ ತನ್ನ ಸ್ವ್ವಾರ್ಥ, ದುರಾಸೆ, ಧಮರ್ಾಂಧತೆ, ದೇಶಗಳ ನಡುವಿನ ಭಿನ್ನತೆಯಿಂದ ತಾನೆ ತಂದುಕೊಂದಿರುವ ವಿನಾಶ. ನೀನೀಗ ತಕ್ಷಣವೇ ನಾವು ರಕ್ಷಿಸಿರುವ ಪ್ರದೇಶಕ್ಕೆ ಬರಬೇಕು..”
“ಅದೆಲ್ಲಿದೆ..? ಅದನ್ನು ನಾನು ಮೂರು ಗಂಟೆಗಳಲ್ಲಿ ಮುಟ್ಟಬಹುದೆ..?”
“ಹೆಚ್ಚು ಮಾತಿಗೆ ಸಮಯವಿಲ್ಲ. ಇದೋ ಆ ವಿವರ..” ಕ್ವೀಟೋ ತನ್ನ ಬೆರಳನ್ನು ಮುಂದೆ ಚಾಚಿತು. ಅದರಿಂದ ಬಂದ ಒಂದು ಬೆಳಕಿನ ಕಿರಣ ಅವಿನಾಶನ ಮಿದುಳನ್ನು ಪ್ರವೇಶಿಸಿತು. ಎಲ್ಲಿಗೆ ಹೋಗಬೇಕೆಂಬುದು ಅವನಿಗೆ ತಿಳಿದುಹೋಗಿತ್ತು!
“ಕನಿಷ್ಟ ನನ್ನ ಮನೆಯವರನ್ನಾದರೂ ಕರೆದುಕೊಂಡು ಹೋಗಬಹುದೆ..?”
“ಸಾಧ್ಯವಿಲ್ಲ..? ನೋಡು ಅವಿನಾಶ್ ಸಮಯ ಮೀರುತ್ತಿದೆ..ಕಾಲಹರಣ ಮಾಡಿದರೆ ಎಲ್ಲ ಯೋಜನೆಯೂ ತಲೆಕೆಳಗಾಗುವುದು!”
“ಮತ್ತೆ…ನನ್ನ ಪ್ರೇಯಸಿ..ಚಿನ್ಮಯಿ..? ಅವಳಿಲ್ಲದೆ ನನಗೆ ಬದುಕೇ ಬೇಡ..!” ಅವಿನಾಶನ ನಿಧರ್ಾರ ಗಟ್ಟಿಯಾಗಿತ್ತು!
“ಆಕೆಯಾಗಲೇ ಸುರಕ್ಷಿತ ಪ್ರದೇಶದ ಹಾದಿಯಲ್ಲಿದ್ದಾಳೆ. ನೀನು ಮತ್ತು ಚಿನ್ಯಯಿ ಭವಿಷ್ಯದ ಭೂಮಿಯ ಮನುಕುಲದ ಪ್ರಥಮ ಪುರುಷ ಮತ್ತು ಸ್ತ್ರೀ! ನಿಮ್ಮಿಂದ ಮುಂದಿನ ಜನಾಂಗ…ಇನ್ನೊಂದು ನಿಮಿಷ ತಡಮಾಡಿದರೂ ದುರಂತ…ನೀನೂ ಉಳಿಯಲಾರೆ..ಬೈ ಮುಂದೆ ಯಾವಾಗಲಾದರೂ ಸಂಪಕರ್ಿಸುವೆ..”
ಕಂಪ್ಯೂಟರ್ ಪರದೆ ಖಾಲಿಯಾಯಿತು.
ಅವಿನಾಶ ಧಿಗ್ಗನೆದ್ದು, ಕೈಗೆ ಸಿಕ್ಕಿದ ನಾಲ್ಕಾರು ಬಟ್ಟೆಗಳನ್ನು ಕಿಟ್ ಒಂದರಲ್ಲಿ ತುರುಕಿಕೊಂದು ಮನೆಯಿಂದಾಚೆ ಬಂದ.
‘ನೀನು ಮಾಡುತ್ತಿರುವುದು ಸರಿಯೇ ಅವಿನಾಶ..? ಹೆತ್ತವರ ಬಗೆಗೆ ನಿನ್ನ ಕರ್ತವ್ಯ ಇಷ್ಟೇನೇ..?’ ಅಂತರಾತ್ಮ ಚುಚ್ಚಿತು! ಕ್ವೀಟೋ ಎಚ್ಚರಿಸಿತ್ತು! ಯಾವುದಕ್ಕೂ ಈಗ ಸಮಯವಿಲ್ಲ! ತನ್ನ ಜೊತೆ ಉಳಿಯುವ ಇರುವ ಮತ್ತೊಂದು ಮಾನವ ಜೀವಿಯೆಂದರೆ ಚಿನ್ಮಯಿ! ಅದೊಂದು ಸಮಾಧಾನ! ಅವಳೂ ಇಲ್ಲದಿದ್ದರೆ ಈ ಬದುಕೇಕೆ..?
ಮನೆಯ ಮುಂದಿನ ಬಾಗಿಲು ತೆಗೆಯುವಾಗ ತಾಯಿ ‘ಯಾರು?’ ಎಂದು ಕೂಗಿ ಕೇಳಿದ್ದಳು. ‘ನಾನು’ ಎಂದು ಚುಟುಕು ಉತ್ತರ ಹೇಳಿ ಬಾಗಿಲು ಹಾಕಿಕೊಂಡು ತನ್ನ ಬೈಕ್ ಹತ್ತಿದ ಅವಿನಾಶ.
“ಸಮಯ ಮೀರುತ್ತಿದೆ. ವೇಗವಾಗಿ ಬೈಕ್ ಓಡಿಸು..” ಕ್ವೀಟೋ ಕಿವಿಯಲ್ಲಿ ಹೇಳಿದಂತಾಯಿತು. ಅಲ್ಲೆಲ್ಲಿಯೂ ಕ್ವೀಟೋ ಕಾಣಲಿಲ್ಲ!
ಅವಿನಾಶ ವೇಗವಾಗಿ ಬೈಕ್ ಓಡಿಸುತ್ತಿದ್ದ. ಮಳೆಯ ನೀರಿಗೆ ಕೈ ಒದ್ದೆಯಾಗಿ ಹ್ಯಾಂಡಲ್ ಜಾರುತ್ತಿತ್ತು! ಬ್ರೇಕ್ ಸರಿಯಾಗಿ ಹಿಡಿಯುತ್ತಿರಲಿಲ್ಲ. ಆದರೂ ಜೀವದ ಹಂಗು ತೊರೆದು ಅವಿನಾಶ ಬೈಕ್ ಓಡಿಸುತ್ತಿದ್ದ.
ಮಳೆಯ ಆರ್ಭಟ ಹೆಚ್ಚಾಯಿತು! ಮಳೆಯ ಹನಿಗಳು ಸಣ್ಣ ಲೋಹದ ಗುಂದುಗಳಂತೆ ರಾಚುತ್ತಿದ್ದವು. ಗುಡುಗು, ಮಿಂಚು ಅಟ್ಟಹಾಸ ಮಾಡಿದುವು!
ಅವಿನಾಶ ಬೈಕಿನ ಆಕ್ಸಿಲಿರೇಟರನ್ನು ಪೂರಾ ತಿರುಗಿಸಿದ. ವೇಗ ಅದೆಷ್ಟಿತ್ತೋ ನೋಡುವ ಗೋಜಿಗೂ ಹೋಗಲಿಲ್ಲ!
ತಂದೆ, ತಾಯಿ, ಮನೆ, ಊರು, ಕಾಲೇಜು, ಪದವಿ, ಚಿನ್ಮಯಿ, ಅವಳೊಂದಿಗೆ ಪ್ರೇಮ, ಪ್ರಣಯ ಎಲ್ಲವೂ ವೇಗವಾಗಿ ನೆನಪಿನಲ್ಲಿ ಹಾದುಹೋಗುತ್ತಿದ್ದವು!
“ಈ ವೇಗ ಸಾಲದು…ನೀನು ಗುರಿ ಮುಟ್ಟೊಲ್ಲ..ವೇಗ…ಇನ್ನೂ ವೇಗ…” ಕ್ವೀಟೋ ದನಿ ಕಿವಿಯಲ್ಲಿ ಎಚ್ಚರಿಸಿತು! ತಾನಿನ್ನೇನು ಮಾಡಲು ಸಾಧ್ಯ..? ಅವಿನಾಶ ಹತಾಶನಾದ.
ಬದುಕಿನಲ್ಲಿ ಇಂತದೊಂದು ಬದಲಾವಣೆ ಬರಲು ಸಾಧ್ಯವೆ..? ಭೂಮಿಯ ಪಾಲಿಗೆ ಎಂತ ದುರದುಷ್ಟಕರವಾದ ಸ್ಥಿತಿ! ಆದರೆ ತನ್ನ ಪಾಲಿಗೆ ಅದ್ಭುತ! ತಾನಲ್ಲಿಗೆ ತಲುಪಲು ಸಾಧ್ಯವಾದರೆ..?! ಮುಂದಿನ ಇಡೀ ಮಾನವ ಜನಾಂಗದ ಸೃಷ್ಟಿ ತನ್ನ ಮತ್ತು ಚಿನ್ಮಯಿಯಿಂದ! ಭೂಮಿಯ ಆಡಂ ಮತ್ತು ಈವ್ ತಾವು! ರೋಮಾಂಚನಗೊಂಡ ಅವಿನಾಶ! ಅಂತ ಮಳೆ, ಚಳಿಯಲ್ಲೂ ಮಧುರವಾದ ಕಂಪನವುಂಟಾಯಿತು!
ಇದ್ದಕ್ಕಿಂದ್ದಂತೆ ಆವನ ಬೈಕ್ ಗೊರಗೊರ ಸದ್ದು ಮಾಡುತ್ತಾ ವೇಗ ಕಮ್ಮಿಯಾಗುತ್ತಾ ಒಂದೆಡೆ ನಿಂತೇಬಿಟ್ಟಿತು! ತಾನು ಭೂಮಿಯ ಆಡಂ ಅಗುವ ಅವಕಾಶ ತಪ್ಪಿಹೋಯಿತೆಂದು ಅವಿನಾಶ ಹತಾಶನಾದ!
ಮರುಕ್ಷಣವೇ ಇನ್ನೊಂದು ಅದ್ಭುತ ನಡೆಯಿತು! ಅವನು ಆಕಾಶದಲ್ಲಿ ಹಾರುತ್ತಿದ! ಆ ವೇಗವನ್ನು ವಣರ್ಿಸುವುದೇ ಅಸಾಧ್ಯ! ಅವನಿಗೆ ಏನೊಂದೂ ಕಾಣುತ್ತಿರಲಿಲ್ಲ! ಗಾಳಿಯ ಮೊರತಕ್ಕೆ ಕಿವಿ ಕಿವುಡಾಯಿತು! ಒಮ್ಮೆಲೇ ಏರಿದ ಎತ್ತರಕ್ಕೆ ಅವನಲ್ಲಿ ಭಯವಾಯಿತು. ಆದರೂ ವಿಶ್ವಾಸವಿತ್ತು, ಕ್ವೀಟೋ ತನ್ನನ್ನು ಆ ಸುರಕ್ಷಿತ ಪ್ರದೇಶಕ್ಕೆ ತಲುಪಿಸುವುದು ಎಂದು! ಅದೆಷ್ಟೋ ಹೊತ್ತು ಹಾಗೆ ಗಾಳಿಯಲ್ಲಿ ತೇಲಿದೆ ಎಂಬುದರ ಕಲ್ಪನೆ ಅವನಿಗಾಗಲಿಲ್ಲ.
ಒಮ್ಮೆಲೇ ತನ್ನನ್ನು ಗಾಳಿಯಲ್ಲಿ ಹಾರಿಸುತ್ತಿದ್ದ ಶಕ್ತಿ ಕೈಬಿಟ್ಟಂತಾಯಿತು! ರೊಂಯ್ಯನೆ ಅವನು ನೆಲದತ್ತ ಬೀಳತೊಡಗಿದ. ಅದೆಷ್ಟು ಎತ್ತರ ಏರಿದ್ದೆನೆಂದು ಅವನಿಗರಿವಿರಲಿಲ್ಲ. ಎಷ್ಟು ಆಳಕ್ಕೆ ಬೀಳುವೆನೆಂಬ ಕಲ್ಪನೆಯೂ ಇರಲಿಲ್ಲ. ಈ ವಿಪರೀತ ಸ್ಥಿತಿಗೆ ಹೊಂದಿಕ್ಕೊಳ್ಳಲಾರದೆ, ಅವನ ಪ್ರಜ್ಞೆಗೆ ಮಂಕು ಕವಿಯಿತು! ಕನಸಿಗೆ ಜಾರುತ್ತಿರುವ ಕಲ್ಪನೆ. ಮರುಕ್ಷಣವೇ ಅವನು ಪ್ರಜ್ಞಾಹೀನನಾಗಿದ್ದ.
ಎಚ್ಚರವಾದಾಗ ಅವನು ಹಾಸಿಗೆಯ ಮೇಲೆ ಮಲಗಿದ್ದ. ಸುತ್ತ ಗಾಢವಾದ ಕತ್ತಲು. ಎಲ್ಲೋ ದೂರದಲ್ಲಿ ಒಂದು ಸಣ್ಣ ಮೊಂಬತ್ತಿ ಉರಿಯುತ್ತಿತ್ತು. ಅಲ್ಲೊಂದು ಆರಾಮ ಕುಚರ್ಿಯಲ್ಲಿ ಒಬ್ಬಳು ಯುವತಿ ಕುಳಿತಲ್ಲಿಯೇ ಮಲಗಿದ್ದಳು. ಆ ಯುವತಿ ಯಾರು? ಅದು ಯಾರ ಮನೆ, ಅದು ಯಾವ ಊರು ಎಂಬ ಯಾವ ನೆನಪೂ ಅವಿನಾಶನಿಗಾಗಲಿಲ್ಲ. ಒಮ್ಮೆಲೇ ಜೋರಾಗಿ ಬೀಸಿದ ಗಾಳಿಗೆ ಆ ಜಾಗವನ್ನು ಶಕ್ತಿ ಮೀರಿ ಬೆಳಗುತ್ತಿದ್ದ ಮೊಂಬತ್ತಿ ಕೂಡ ಆರಿಹೋಯಿತು!
ಕ್ವೀಟೋ ಹೇಳಿದ ಮಾತುಗಳು ನೆನಪಾದವು! ಭೂಮಿಯ ವಿನಾಶವಾಗಿಹೋಯಿತೆ? ತಾನು ಕ್ವೀಟೋ ಹೇಳಿದ ಸುರಕ್ಷಿತ ಪ್ರದೇಶದಲ್ಲಿರುವೆನೇ..? ಕುಚರ್ಿಯಲ್ಲಿ ಮಲಗಿರುವ ಯುವತಿ ತನ್ನ ಚಿನ್ಮಯಿಯೇ..? ತಾವು ಭುವಿಯ ಮೇಲೆ ರೂಪುಗೊಳ್ಳಬೇಕಾಗಿರುವ ಮನುಕುಲದ ಆಡಂ ಮತ್ತು ಈವ್..ಇರಬಹುದೆ…?
ಅವಿನಾಶ ಏಳಲು ಪ್ರಯತ್ನಿಸಿದ. ಶಕ್ತಿಯೆಲ್ಲಾ ಉಡುಗಿತ್ತು! ಏಳಲಾರದೆ ಮತ್ತೆ ಹಾಸಿಗೆಯ ಮೇಲೆ ಕುಸಿದ.






ನಡೆಯ ಬಹುದಾದ ಅದ್ಭುತ ಕಲ್ಪನೆ
adbhuth kalpane uttam kathe