ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು..

ಮೂಲ: ಡೊರಿಸ್ ಕರೆವಾ
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

ಎಸ್ ಜಯಶ್ರೀನಿವಾಸ ರಾವ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ, ಪದ್ಯಗಳನ್ನು ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ವಿರಚಿತ ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ.ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ,’ ‘ಮ್ಯೂಜ಼್ ಇಂಡಿಯ,’ ಹಾಗೂ ‘ಮೈದಾನಂ’ನಲ್ಲಿ ಪ್ರಕಟವಾಗಿವೆ.

ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದ ಮಾಡಿದ ಖ್ಯಾತ ವಿದೇಶಿ ಕವಿಗಳ ಕವನಗಳು ಕನ್ನಡ ಸಾಹಿತ್ಯ ಪತ್ರಿಕೆಗಳಾದ ಕೆಂಡಸಂಪಿಗೆ, ಅವಧಿ’, ಭಾಷಾ ಭಾರತಿ, ಹಾಗೂ ಋತುಮಾನದಲ್ಲಿ ಪ್ರಕಟವಾಗಿವೆ. ಇವರು ಕನ್ನಡಕ್ಕೆ ಅನುವಾದಿಸಿದ ಪೋಲಿಷ್ ಭಾಷಾ ಕವನಗಳನ್ನು ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ʻಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳುʼ ಎಂಬ ಸಂಕಲನದ ಹೆಸರಿನಲ್ಲಿ ಏಪ್ರಿಲ್ 2022ರಲ್ಲಿ ಪ್ರಕಟಿಸಿತು.

‘ದ ಹಿಂದು’ ದಿನಪತ್ರಿಕೆಯು ಇವರು ಇಂಗ್ಲಿಷಿನಲ್ಲಿ ಬರೆದ ಕನ್ನಡ ಅರುಣೋದಯ ಸಾಹಿತ್ಯದ ಮೇಲಿನ 15 ಲೇಖನಗಳ ಸರಣಿಯನ್ನು ಜನವರಿ – ಡಿಸೆಂಬರ್ 2020ರ ಅವಧಿಯಲ್ಲಿ ಪ್ರಕಟಿಸಿತ್ತು. ಜಯ ಶ್ರೀನಿವಾಸ ರಾವ್ ಅವರು ಕನ್ನಡ ಅರುಣೋದಯ ಸಾಹಿತ್ಯ ಹಾಗೂ ಅನುವಾದ ವಿಷಯಗಳ ಬಗ್ಗೆ ಬರೆದ ಪ್ರಬಂಧಗಳು ದೇಶದ ಹೆಸರಾಂತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFL-ನಲ್ಲಿ (ಈಗ The EFL University), ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ Ph.D ಪದವಿ ಪಡೆದ ಇವರು ಪ್ರಸ್ತುತ ಹೈದರಾಬಾದಿನ ‘ಅರೋರಾಸ ಟೆಕ್ನೊಲಾಜಿಕಲ್ ಅಂಡ್ ರಿಸರ್ಚ್ ಇನ್ಸ್‌ಟಿಟ್ಯೂಟ್’ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ.

ಎಸ್ಟೋನಿಯಾ ದೇಶದ ಕವಿ ಡೊರಿಸ್ ಕರೆವಾ
ʻಎಸ್ಟೋನಿಯನ್ ಮಹಿಳಾ ಕಾವ್ಯದ ಸಶಕ್ತ ಸಂಪ್ರದಾಯದಲ್ಲಿ ಡೊರಿಸ್ ಕರೆವಾ ಅವರು ಹೊಳೆಯುವ ಮುತ್ತಿನಂತೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆʼ ಎಂದು ಡೊರಿಸ್ ಕರೆವಾ ಅವರ ಬಗ್ಗೆ ಹೇಳುವುದು ಸುಲಭ. ಹೀಗೆ ಹೇಳಿದರೆ, ಡೊರಿಸ್ ಕರೆವಾ ಅವು ಒಬ್ಬ ಉತ್ತಮ ಕವಿ ಎಂದು ಸಾಧಾರಣವಾಗಿ ಹೇಳಿದಂತಾಗುತ್ತದೆ. ಡೊರಿಸ್ ಕರೆವಾ ಅವರು ಪದಗಳೊಂದಿಗೆ ಹೇಗೆ ವ್ಯವಹರಿಸಬೇಕೆಂದು ತಿಳಿದಿರುವ ಪ್ರವೀಣೆ ಹಾಗೂ ಎಸ್ಟೋನಿಯಾದ ಪ್ರೀತಿಯ ಕವಯತ್ರಿಯರಲ್ಲಿ ಒಬ್ಬರು, ಎಂದು ಹೇಳಿದರೆ ಅದು ಸತ್ಯಕ್ಕೆ ಹತ್ತಿರವಾದ ಮಾತು.

ಡೊರಿಸ್ ಕರೆವಾ ಅವರು 1958ರಲ್ಲಿ ಜನಿಸಿದರು. 1983ರಲ್ಲಿ ಅವರು ಟಾರ್ಟು ವಿಶ್ವವಿದ್ಯಾಲಯದಿಂದ ರೋಮನ್ – ಜರ್ಮಾನಿಕ್ ಭಾಷಾಶಾಸ್ತ್ರದಲ್ಲಿ ಪದವಿ ಪಡೆದರು. 1978-1993 ಮತ್ತು 1997-2002ರವರೆಗೆ ಅವರು ಸಾಂಸ್ಕೃತಿಕ ಸಾಪ್ತಾಹಿಕ ‘ಸಿರ್ಪ್‌’ ಗಾಗಿ (Sirp) ಕೆಲಸ ಮಾಡಿದರು. ಸಾಹಿತ್ಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಅವರು ಹದಿನಾರು ವರ್ಷಗಳ ಕಾಲ (1992-2008) UNESCOಗಾಗಿ ಎಸ್ಟೋನಿಯನ್ ರಾಷ್ಟ್ರೀಯ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಕರೆವಾ ಅವರ ಕಾವ್ಯದ ಗಮನಾರ್ಹ ಲಕ್ಷಣವೆಂದರೆ ರೂಪಕ್ಕೆ ಕಟ್ಟುನಿಟ್ಟಾದ ಅನುಸರಣೆ. ಆದಷ್ಟು ಕಡಿಮೆ ಪದಗಳನ್ನು ಬಳಸುವುದು ಕರೆವಾ ಅವರ ವಿಧಾನವಾಗಿದೆ. ಹೀಗಿದ್ದೂ, ಆಶ್ಚರ್ಯವೆಂಬಂತೆ ಅವರು ಹೇಳಬಯಸುವ ಸಂದೇಶ ಸ್ಪಷ್ಟವಾಗಿ ಹಾಗೂ ಬಹುಅರ್ಥಗಳೊಂದಿಗೆ ಮೂಡಿಬರುತ್ತದೆ. ಇನ್ನೊಂದು ದೃಷ್ಟಿಯಿಂದ ನೋಡಿದರೆ, ಇಷ್ಟೊಂದು ಅರ್ಥಗಳು ಬರುವಾಗ ಸ್ವಲ್ಪಮಟ್ಟಿನ ಅಸ್ಪಷ್ಟತೆ ಉಂಟಾಗಬಹುದು: ಈ ಅಸ್ಪಷ್ಟತೆಯಿಂದ ಮೂಡಿಬರುವ ಅರ್ಥದ ಸುಳಿವು ಅತ್ಯಂತ ಪ್ರಕಾಶಮಾನವಾಗಿ ಕಂಡುಬರುತ್ತದೆ, ಪ್ರವಾದಿಯ ವಾಣಿಯಂತೆ.

ಆದರೆ ಕರೆವಾ ಅವರ ಕಾವ್ಯವು ಶೈಲಿಯ ಮಟ್ಟದಲ್ಲಿ ಮಾತ್ರ ಅಭಿವ್ಯಕ್ತಿಯನ್ನು ಕಂಡುಕೊಳ್ಳುವುದಿಲ್ಲ. ಪದಗಳ ಬಳಕೆ ಕಡಿಮೆಯಾದರೂ ಅವು ಸಾರುವ ಸಂದೇಶ ಗಹನವಾಗಿರುತ್ತದೆ. ಸೌಂದರ್ಯದ ಬಲಿಪೀಠದ ಮೇಲೆ ಆಗಾಗ್ಗೆ ಕಾವ್ಯದ ಸಂದೇಶವನ್ನು ತ್ಯಾಗ ಮಾಡುತ್ತಾರೆಂದು ಕರೆವಾ ಅವರ ಮೇಲೆ ಟೀಕೆಯಿದೆ. ಅದೇನೇ ಇದ್ದರೂ, ಕರೇವಾ ಅವರ ಕಾವ್ಯದ ಸಂದೇಶವನ್ನು ಭೌತಿಕವಾಗಿ ಗ್ರಹಿಸಿದಷ್ಟು ಈಗ ಬರೆಯುತ್ತಿರುವ ಬೇರಾವ ಎಷ್ಟೋನಿಯನ್ ಕವಿಯ ಕಾವ್ಯದ ಸಂದೇಶವನ್ನು ಗ್ರಹಿಸಲಸಾಧ್ಯ. ಕರೇವಾ ಅವರ ಕಾವ್ಯಸಂದೇಶಕ್ಕೆ ಆ ನೈತಿಕ ಶಕ್ತಿಯಿದೆ. ಅವರು ಈವರೆಗೆ ಹದಿನಾರು ಕವನಸಂಕಲನಗಳನ್ನು ಮತ್ತು ಒಂದು ಪ್ರಬಂಧ ಸಂಕಲನವನ್ನು ಪ್ರಕಟಿಸಿದ್ದಾರೆ. ಅವರ ಕಾವ್ಯಪಯಣದ ಮೊದಲಾರ್ಧದಲ್ಲಿ, ಚೊಚ್ಚಲ ಸಂಗ್ರಹವಾದ ʻಪೇವಾಪಿಲ್ಡಿಡ್ʼ Päevapildid  (ಛಾಯಾಚಿತ್ರಗಳು, 1978)ರಿಂದ ʻವರಿ ಜ ವಿವ್ʼ Vari ja viiv  (ನೆರಳು ಮತ್ತು ತತ್‌ಕ್ಷಣ, 1986) ಸಂಗ್ರಹದವರೆಗೆ ಒಂಬತ್ತು ವರ್ಷಗಳ ಅವಧಿಯಲ್ಲಿ ಐದು ಕವನಸಂಗ್ರಹಗಳನ್ನು ಒಳಗೊಂಡಿದೆ. ಅವರ ಹೊಸ ಕವಿತೆಗಳನ್ನ ಒಳಗೊಂಡಿದೆ, ಆಯ್ದ ಕವಿತೆಗಳ ಸಂಗ್ರಹ ʻಆರ್ಮುಯೇಗ್ʼ Armuaeg (ಟೈಮ್ ಆಫ್ ಗ್ರೇಸ್, 1991), ಮತ್ತು ʻಮಾಂಡ್ರಗೋರಾʼ Mandragora (ಮ್ಯಾಂಡ್ರೇಕ್, 2002) ಸಂಗ್ರಹದ ನಡುವೆ ಹನ್ನೆರಡು ವರ್ಷಗಳ ಅವಧಿಯಲ್ಲಿ ನಾಲ್ಕು ಸಂಗ್ರಹಗಳು ಕಾಣಿಸಿಕೊಂಡವು. ʻಮಾಂಡ್ರಗೋರಾʼ ಮತ್ತು ಅದರ ಹಿಂದಿನ ʻಹಿಂಗ್ರಿಂಗ್ʼ Hingring (ಸೋಲ್ ಸರ್ಕಲ್, 1997) ನಡುವೆ ಐದು ವರ್ಷಗಳ ಅಂತರವಿದೆ. 2008ರಲ್ಲಿ ʻಡೆಕಾʼ Deka ಪ್ರಕಟವಾಯಿತು. ಇದು 1975-2007ರ ಅವಧಿಯ ಹೊಸ ಮತ್ತು ಈಗಾಗಲೇ ಪ್ರಕಟವಾದ ಕವಿತೆಗಳ ಸಂಗ್ರಹ.

ಕರೆವಾ ಅವರು ಅನುವಾದ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದು ಅನಾ ಅಖ್ಮತೋವಾ, ಎಮಿಲಿ ಡಿಕಿನ್ಸನ್, ಜೋಸೆಫ್ ಬ್ರಾಡ್ಸ್ಕಿ, ಕಹ್ಲಿಲ್ ಜಿಬ್ರಾನ್, ಕಬೀರ್, W..H.. ಆಡೆನ್, ಸ್ಯಾಮ್ಯುಯೆಲ್ ಬೆಕೆಟ್, ಶೇಕ್ಸ್ಪಿಯರ್ ಮತ್ತು ಐರಿಶ್ ಸಮಕಾಲೀನ ಕವನಗಳನ್ನು ಎಸ್ಟೋನಿಯನ್ ಭಾಷೆಗೆ ಅನುವಾದಿಸಿದ್ದಾರೆ. ಕರೆವಾ ಅವರ ಕವನಗಳನ್ನು 20 ಭಾಷೆಗಳಿಗೆ ಅನುವಾದಿಸಲಾಗಿದೆ ಹಾಗೂ ಅವರ ಕವನಗಳು ಎಸ್ಟೋನಿಯಾ ಮತ್ತು ವಿದೇಶಗಳಲ್ಲಿ ಸಂಗೀತಗಾರರನ್ನು, ಸಂಯೋಜಕರನ್ನು, ಮತ್ತು ನಿರ್ದೇಶಕರನ್ನು ಪ್ರೇರೇಪಿಸಿದೆ. ಕರೆವಾ ಅವರನ್ನು ಎರಡು ರಾಷ್ಟ್ರೀಯ ಸಾಂಸ್ಕೃತಿಕ ಪ್ರಶಸ್ತಿಗಳು ಮತ್ತು ನಾಲ್ಕು ಸಾಹಿತ್ಯ ಪ್ರಶಸ್ತಿಗಳೊಂದಿಗೆ ಗೌರವಿಸಲಾಗಿದೆ; 2001ರಲ್ಲಿ ಆಕೆಗೆ ʻಎಸ್ಟೋನಿಯನ್ ಆರ್ಡರ್ ಆಫ್ ದಿ ವೈಟ್ ಸ್ಟಾರ್ʼ ʻEstonian Order of the White Starʼ ನೀಡಲಾಯಿತು.

ಇಲ್ಲಿ ಅನುವಾದಿಸಿರುವ ಆರು ಕವನಗಳಲ್ಲಿ ಮೊದಲ ಕವನವನ್ನು ಟೀನಾ ಅಲೆಮನ್ ಅವರು (Tiina Aleman), ಹಾಗೂ ಉಳಿದ ಐದು ಕವನಗಳನ್ನು ಮಿರಿಯಮ್ ಮ್ಯಾಕ್‌ಇಲ್ಫಾಟ್ರಿಕ್ – ಕ್ಸೆನೊಫೊಂಟೊವ್ ಅವರು (Miriam McIlfatrick-Ksenofontov) ಎಸ್ಟೋನಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

1. ಕಡಲತೀರದ ಮನೆ
ಮೂಲ: A Seaside House

ಕಡಲತೀರದ ಮನೆಗೆ
ತಾನು ಈಗಷ್ಟೇ ದಡಸೇರಿದ
ಹಡಗೆಂದು ಅನಿಸುತದೆ.

ಪ್ರತಿರಾತ್ರಿ ಅದು ಹೊರಡುತ್ತೆ
ಅನಂತ ಸಾಗರಗಳ, ಯುಗಗಳ,
ವಿಸ್ತಾರಗಳ ಸುತ್ತಾಡಲು.

ಅದರ ಸುತ್ತಲೂ ತಾರೆಗಳು
ಅಡ್ಡಾಡುತ್ತವೆ,
ಯಾರೂ ಬೆಳಗಿಸದ ಅದರ
ಹೃದಯದಾಳದಲ್ಲಿದ್ದ
ಬೆಂಕಿಗೂಡು ಅಳುತ್ತದೆ.

ಮಾಲೀಕನಿಗಾಗಿ
ಹಾತೊರೆವ ನಾಯಿಯಂತೆ,
ಕಡಲತೀರದ ಮನೆ
ತನ್ನ ಕಪ್ತಾನನಿಗಾಗಿ ಕಾಯುತ್ತಿರುತ್ತೆ.

2. ಮಾಯ್ಡಸ್
ಮೂಲ: Midas

ಅವನು ಮುಟ್ಟಿದ್ದೆಲ್ಲಾ ಕಾವ್ಯವಾಗುತ್ತಿತ್ತು.
ದುಃಖದಿಂದ ಕೊರಳು ಬಿಗಿಯುತ್ತಿತ್ತು.
ಒಂದು ಮಗುವಿನ ನೋವು, ಕೋಪ,
ಒಂಟಿತನ, ನಷ್ಟದ ಅನುಭವ,
ಅನಿರೀಕ್ಷಿತ ಮುಖಾಮುಖಿಗಳು, ಗುರಿಯಿಲ್ಲದ ಅಲೆದಾಟ,
ಈ ನಗರ, ಆ ನಗರ,
ಕೊನೆಯಿಲ್ಲದ ಕಮಾನುದಾರಿಗಳು, ಅಂಗಣಗಳು,
ಗೋಡೆಗೂಡುಗಳು, ಮದ್ಯಸಾರ,
ಏನು ಮಾಡುವುದಕ್ಕೂ, ಇರುವಿಕೆಗೂ ಕೂಡ
ಹುರುಪಿಲ್ಲದ ಹತಾಶ ಅಸಡ್ಡೆ.
ಕಲ್ಲಿನಲ್ಲಿ ಗೀರಿದ ಪದವೊಂದರ ಮೇಲೆ
ಬೋರಲಾಗಿ ಬೀಳುತ್ತಾನೆ,
ಅವನ ತೋಳುಗಳು ನಡುಗುತ್ತವೆ,
ಅಳುತ್ತಿದ್ದಾನಂದೆನಿಸುತ್ತದೆ.

ಆದರೆ ಅವನ ಕಣ್ಣುಗಳು ದೊಡ್ಡದಾಗಿ ತೆರೆದಿವೆ;
ಅವನಿಗೆ ಕಂಡದ್ದು ಮಿಕ್ಕವರಿಗೆ ಕಾಣಿಸುವುದಿಲ್ಲ.
ಕಸದತೊಟ್ಟಿಯ ಹಿಂದಿನಿಂದ ಒಂದು ಬೆಕ್ಕು ಹೊರಬರುತ್ತೆ.
ನಿಲ್ಲುತ್ತೆ.
ಮಿಯಾಂವ್ ಅನ್ನುತ್ತೆ.
ಅವನು ತಿರುಗಿ ನೋಡುತ್ತಾನೆ.
ಮೆಲ್ಲನೆ ಬಾಗುತ್ತಾನೆ.
ಕೈಚಾಚಿ ಅದನ್ನು ತಡವುತ್ತಾನೆ.
ಆಗ ಇದ್ದಕ್ಕಿದ್ದಂತೆ ಅ ಬೆಕ್ಕು ಒಂದು ಕವನವಾಗುತ್ತೆ.
ಮಿಯಾಂವ್.

3. ಹಿಮವೊಂದು ಖಾಲಿ ಹಾಳೆ
ಮೂಲ: Snow is a blank sheet

ಹಿಮವೊಂದು ಖಾಲಿ ಹಾಳೆ.
ಅದರಡಿಯಲ್ಲಿ
ಗೂಢಲಿಪಿಗಳು ಗುಪ್ತವಾಗಿ ಹೊಳೆಯುತ್ತಿವೆ –
ವಸಂತಕಾಲದ ಒಂಟಿ ನಾದ ಸ್ವರದ ಹಾಗೆ,
ಗ್ರೀಷ್ಮಕಾಲದ ಕೇಸರಿ ಛಾಯೆಯ ಹಾಗೆ.

ಹಿಮವೊಂದು ಖಾಲಿ ಹಾಳೆ.
ಅದರ ಮೇಲೆ ಬರೆಯಬೇಡ
ಒಂದೇ ಒಂದು ಹೆಸರು ಕೂಡ;
ಅದರ ಮೇಲೆ ಹಿಮಸುಮಗಳು ಸ್ಫಟಿಕಗಳಾಗಿ
ಅಗಣಿತ ತಾರೆಗಳ ಪ್ರತಿಫಲಿಸಲಿ.

ಪ್ರತಿ ಹಿಮಸುಮವು ಒಂದು ನಕ್ಷತ್ರವಿದ್ದಂತೆ,
ಅದರ ಅಲ್ಪತೆಯಲ್ಲೇ ಅದರ ಅನನ್ಯತೆ –
ಎಲ್ಲವೂ ಕರಗುವುದು.

ಹಿಮವೊಂದು ಖಾಲಿ ಹಾಳೆ
ಅದು ಸಾಂತ್ವನ ಕೂಡ –
ಭಾಷೆಯ ಮೌನ,
ಅರ್ಥಗಳಿಂದ ಕಂಪಿಸುತ್ತಿದೆ.

4. ಪುಸ್ತಕಪ್ರೇಮಿಯೊಬ್ಬ
ಮೂಲ: You open me up like a tome

ಪುಸ್ತಕಪ್ರೇಮಿಯೊಬ್ಬ ಅತ್ಯಮೂಲ್ಯ ಗ್ರಂಥವೊಂದನ್ನು
ತೆರೆಯುವಂತೆ ನನ್ನನ್ನು ತೆರೆಯುವೆ ನೀನು,
ಓದುವೆ ನೀನು, ಪುಟಗಳ ಬಿರ್ರನೆ ತಿರುಗಿಸುತ್ತಾ
ಓದುವೆ ನೀನು,
ನನಗೆಷ್ಟು ಆನಂದ, ಹೆಮ್ಮೆ.

ನನ್ನನ್ನು ಬಾಯಿಪಾಠ ಮಾಡಿರುವೆ ನೀನು –
ಎಂದೇ ಸುಮ್ಮನೆ ಆಸ್ವಾದಿಸುವೆ,
ಆಹಾ, ಮೆಲ್ಲಮೆಲ್ಲನೆ, ಒಂದೊಂದಾಗಿ,
ನನ್ನ ಅತಿಕೋಮಲ ಪದಗಳನ್ನ.

ಇದು ಕಾವ್ಯವಲ್ಲವೆಂದರೆ,
ಕಾವ್ಯವೇನೆಂದು ನಾನರಿಯೆ.

5. ಮಳೆಯೇ, ಸುರಿಯದೇ ಇದ್ದರೂ
ಮೂಲ: Rain, are you still rain

ಮಳೆಯೇ, ಸುರಿಯದೇ ಇದ್ದರೂ
ನೀನು ಮಳೆಯೇನಾ?
ಕನಸೇ, ಯಾರೂ ನೋಡದೇ ಇದ್ದರೂ
ನೀನು ಕನಸೇನಾ?

ಯಾರ ಹೆಜ್ಜೆಗಳಿವು
ಮಂಜಿನಲಿ ಹುಗಿದಿರುವ
ಈ ಬರಡಾದ ಮೂಕ ಮಲೆಯ ಮೇಲೆ?
ಎಂದು ಶ್ರಾವಕ ಯೋಚಿಸುತ್ತಾನೆ.

ವಿಹಾರಿಯ ಮನಸ್ಸು ಅಲೆದಾಡುತ್ತೆ.
ಶ್ರಾವಕನ ಕನಸಿನ ಮೂಲಕ ಒಸರುತ್ತೆ
ಹೆಜ್ಜೆಗಳ ಸಿಂಚನ
ʻಇಗ್‌ಡ್ರಾಸಿಲ್ʼಎಲೆಗಳ ಹಾಗೆ.

6. ನಾನು ಬರೆಯುವಾಗ
ಮೂಲ: When I write

ನಾನು ಬರೆಯುವಾಗ,
ಒಲ್ಲದ ಪದಗಳನ್ನು ಅಟ್ಟಿಕೊಂಡು
ನಿಶ್ಶಬ್ಧ ಕಣಿವೆಯ ಅಸಾಧ್ಯ ಚಡಾವಿನ
ಮೇಲೆ ನಡೆಸುವೆ.

ನಾನು ಬರೆಯುವಾಗ,
ಶಿಥಿಲ ಮಣಿಕಟ್ಟು, ತಣ್ಣನೆಯ ಖಡ್ಗದೊಂದಿಗೆ
ಅಂತಿಮ ಕತ್ತಲ ಅಂಚಿನಲಿ
ನೆರಳುಗಳ ಗೆಲ್ಲಲು ತಾಲೀಮು ನಡೆಸುವೆ.

ನಾನು ಬರೆಯುವಾಗ,
ಅತ್ಯಂತ ಅಪಕರ್ಷಕ ಭಾಷೆಯಲ್ಲಿ ಬರೆಯುವೆ:
ಉಪವಾಸವೇ ನನ್ನ ಪರಮ ಭೋಜನ,
ಅಗೆದು ಸ್ವರ್ಗವನ್ನೇ ಹೊರತೋರಿಸುವ ಕಾರ್ಯ.

‍ಲೇಖಕರು avadhi

May 19, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Doris Kareva

    Thank you for the translations and beautiful illustrations. Kannada language looks absolutely magic to my eye!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: