ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ಎಲ್ ಭೈರಪ್ಪ: ಮುಂದುವರಿದ ಚರ್ಚೆ

ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಇತ್ತೀಚಿಗೆ ಧಾರವಾಡದಲ್ಲಿ ಮಾತನಾಡುತ್ತ ಸರ್ದಾರ್ ವಲ್ಲಬಾಯ್ ಪಟೇಲ್ ಹಾಗೂ ಗಾಂಧಿಯನ್ನು ಪ್ರಸ್ತಾಪಿಸಿದ್ದರು.

ಅದು ಚರ್ಚೆಗೆ ದಾರಿಮಾಡಿಕೊಟ್ಟಿತ್ತು.

ಸಾಹಿತಿ, ಪತ್ರಕರ್ತ ಜಗದೀಶ ಕೊಪ್ಪ ಅವರು ಈ ಭಾಷಣಕ್ಕೆ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದರು.

ಅದು ಇಲ್ಲಿದೆ.

ಇಂಗ್ಲೆಂಡ್ ನಿಂದ ‘ಅವಧಿ’ಯ ಬರಹಗಾರರಾದ ಡಾ ಬಿ ಪ್ರೇಮಲತಾ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ

ಇದು ‘ಜುಗಾರಿ ಕ್ರಾಸ್’ – ಚರ್ಚೆಗೆ ಮುಕ್ತವಾದ ವೇದಿಕೆ

ನಿಮ್ಮ ಅಭಿಪ್ರಾಯವನ್ನು avadhimag@gmail.com ಗೆ ಮೇಲ್ ಮಾಡಿ.

ಮೂಲ ಸಮಸ್ಯೆ ಬೇರೆಯದು..

ಡಾ. ಪ್ರೇಮಲತ ಬಿ / ಇಂಗ್ಲೆಂಡ್ 

98 ವಯಸ್ಸಿನ ಡ್ಯೂಕ್ ಆಫ್ ಎಡಿನ್ಬರೋ ಪ್ರಿನ್ಸ್ ಫಿಲಿಪ್ಸ್ ಇಂದಿನ ೯೩ ವಯಸ್ಸಿನ ಇಂಗ್ಲೆಂಡಿನ ರಾಣಿ ಎಲಿಜ಼ಬೆಥ್ ಳ ಗಂಡ. ೧೯೩೯ ರಿಂದಲೂ ಬ್ರಿಟಿಷ್ ಜಲಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಈತ ಎಲಿಜಬೆಥ್ ೧೩ ವರ್ಷದವಳಿದ್ದಾಗಿನಿಂದ ಅವಳಿಗೆ ಪತ್ರ ಬರೆಯುತ್ತಿದ್ದ ಗೆಳೆಯ. ಜೂನ್ ೧೯೪೭ ರಲ್ಲಿ ಅವರಿಬ್ಬರ ವಿವಾಹ ನಿಷ್ಕರ್ಷೆಯಾಯ್ತು. ನವೆಂಬರಿನಲ್ಲಿ ಅದ್ದೂರಿ ಮದುವೆ. ಈ ನಡುವೆ ಆತ ಆಗತಾನೇ ಸ್ವತಂತ್ರ ಸಂಗ್ರಾಮದಲ್ಲಿ ವಿಜಯ ಪಡೆದಿದ್ದ ಆವರೆಗೆ ಕಾಮನ್ ವೆಲ್ತ್ ದೇಶವಾಗಿದ್ದ ಭಾರತಕ್ಕೆ ಭೇಟಿಗಾಗಿ ಬಂದ. ಮಹಾತ್ಮ ಗಾಂಧಿಯನ್ನು ಭೇಟಿ ಮಾಡಿದ. ಅವನ ವಿವಾಹ ಇಂಗ್ಲೆಂಡಿನ ರಾಜಕುಮಾರಿಯ ಜೊತೆ ನಿಗದಿ ಪಡಿಸಿದ್ದನ್ನು ಕೇಳಿ ಗಾಂಧಿ ಸಂತೋಷಪಟ್ಟರು.

ಆತ ಗಾಂಧಿಯನ್ನು ಅಪಾರವಾಗಿ ಮೆಚ್ಚಿದ. ಗಾಂಧಿಯ ಭೇಟಿಯ ಸಂದರ್ಭದಲ್ಲಿ ಆತನಿಗೆ ಕೊಡಲು ಗಾಂಧಿಯ ಬಳಿ ಏನೂ ಇರಲಿಲ್ಲ. ನಿಮ್ಮ  ಚರಕದಲ್ಲಿ ನೂಲಿದ ವಸ್ತ್ರವನ್ನೇ ಬಳುವಳಿಯಾಗಿ ಕೊಡಬಹುದಲ್ಲ? ಎಂಬ ಸಲಹೆ ಬಂತು. ಗಾಂಧಿ ಅಂತದೇ ಒಂದು ಬಿಳಿ ವಸ್ತ್ರವನ್ನು ನೇಯಿಸಿ ನೀಡಿದರು. ಆದರೆ ಆತನೊಡನೆ ಬಂದಿದ್ದ ಅವನ ಸಂಬಂಧಿ ಮಹಿಳೆಯೊಬ್ಬಳು ಅದನ್ನು ಗಾಂಧಿಯಂತದೇ ಬಟ್ಟೆ ಎಂದರೆ ಲಂಗೋಟಿಯಿರಬೇಕು ಎಂದು ತಿಳಿದು ಜರಿದಳು. ಫಿಲಿಪ್ಪನು ಅದರಿಂದ ಬಹಳ ನೊಂದು ಆಕೆಯ ಪರವಾಗಿ ಕ್ಷಮೆ ಕೇಳಿದ. ಇಂಗ್ಲೆಂಡಿನಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಮಹಾತ್ಮ ಗಾಂಧಿಯವರ ಬಗ್ಗೆ ಇವನ ಬಾಯಲ್ಲಿ ಹೊಗಳಿಕೆಯೇ ತುಂಬಿತ್ತು. ಇದರಿಂದ ಫಿಲಿಪ್ಪನು ಅಪಾಯಕಾರಿ ವೈಚಾರಿಕತೆಯಿಂದ ತುಂಬಿದವ ಎಂದೇ ಬ್ರಿಟಿಷ್ ರಾಜಮನೆತನ ಇವನನ್ನು ಗುಮಾನಿಯಿಂದ ನೋಡಿತು.

ಈತ ಹುಟ್ಟಿದ್ದು ಗ್ರೀಸ್ ಮತ್ತು ಡೇನಿಶ್ ದೇಶದ ವಂಶಜರಿಗೆ. ಬೆಳೆದದ್ದು ಗ್ರೀಸ್, ಫ್ರಾನ್ಸ್ ಮತ್ತು ಬ್ರಿಟನ್ನಿನಲ್ಲಿ. ಎಲ್ಲಕ್ಕಿನ್ನ ಹೆಚ್ಚಾಗಿ ಈತನ ಚಿಕ್ಕಪ್ಪ ಭಾರತದ ಕೊನೆಯ ವೈಸ್ರಾಯ್ ಲೂಯಿಸ್ ಮೌಂಟ್ ಬ್ಯಾಟನ್. ಬ್ಯಾಟನ್ನಿಗೆ ರಾಜ ಸಿಂಹಾಸನದ ಮೇಲೆ ಕಣ್ಣಿತ್ತು ಎಂದು ರಾಯಲ್ ಕುಟುಂಬಕ್ಕೆ ಗುಮಾನಿ. ಹಾಗಾಗಿ  ಮದುವೆಯಾದ ನಂತರ  ಯುವರಾಣಿ ಎಲಿಜ಼ಬೆತ್  ಗಂಡ ಫಿಲಿಪ್ಪನ ವಂಶಜರ ಹೆಸರಾದ ಮೌಂಟ್ ಬ್ಯಾಟನ್ ಎನ್ನುವುದನ್ನು (ಅದನ್ನು ಕೂಡ ಆತ ರಾಜ ಮನೆತನಕ್ಕೆ ಸೇರುವ ಆಶಯದಿಂದ ಬದಲಾಯಿಸಿಕೊಂಡಿದ್ದ) ಇಟ್ಟುಕೊಳ್ಳಲು ಬಿಡಲಿಲ್ಲ. ಆಕೆ ಎಲಿಝಬೆತ್ ವಿಂಡ್ಸರ್ ಆಗಿಯೇ ಉಳಿದಳು. ಇದರ ಜೊತೆ ಭಾರತವನ್ನು ಒಪ್ಪಿಸಿಬಂದಿದ್ದ ಮೌಂಟ್ ಬ್ಯಾಟನ್ ನ ಬಗ್ಗೆ ಅಂದಿನ ಪ್ರಧಾನಿ ಚರ್ಚಿಲ್ ಗೆ ಎಲ್ಲಿಲ್ಲದ ಅಸಮಾಧಾನವಿತ್ತು.  ಭಾರತವನ್ನು ಭಾರತಕ್ಕೊಪ್ಪಿಸಿ ತನ್ನ ಕಪಾಳಕ್ಕೆ ಹೊಡೆದನೆಂದು ಮೌಂಟ್ ಬ್ಯಾಟನ್ನಿನ್ನ ಮೇಲೆ ಆತ ಕೆಂಡ ಕಾರಿದ. ಆತನ ಸಂಬಂಧಿಯಾದ ಫಿಲಿಪ್ಪನನ್ನೂ ಅವನು ಹತ್ತಿರ ಸೇರಿಸದೆ ಇಟ್ಟಿದ್ದೆಲ್ಲ ಈಗ ಇತಿಹಾಸ.

ವೈರಿಯೆಂದು ದ್ವೇಷಿಸದೆ ಬಳಿ ಬಂದದವರನ್ನೆಲ್ಲ ಗಾಂಧಿ ಮೋಡಿ ಮಾಡಿದ್ದುದು ಹಾಗೆ. ಗಾಂಧಿಯ ಕಾರಣ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಕೂಡ ಅದಕ್ಕಾಗಿ ತಮ್ಮ ತಾಯ್ನೆಲದಲ್ಲಿ ದೇಶ ದ್ರೋಹಿಗಳಾದವರೂ ಗಾಂಧಿಯನ್ನು ಮೆಚ್ಚದೆ ಇರಲಾಗಲಿಲ್ಲ. ಇಂಗ್ಲೆಂಡಿನಲ್ಲಿ ನಾಲ್ಕು ಕಡೆ ಗಾಂಧಿಯ ಪ್ರತಿಮೆಗಳಿವೆ. ಇಂತಹ ಮಹಾತ್ಮರನ್ನು ಹೀಗೆಳೆಯುವ ಅಖಂಡ ಮೂರ್ಖತನ ನಮ್ಮದೇ ದೇಶದ  ಕೆಲ ಜನರಿಗೆ ಇತ್ತೀಚೆಗೆ ಬಂದಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ.

ಗಾಂಧಿಯನ್ನು ತೆಗಳುವ ಉದ್ದೇಶವನ್ನು ಹೊತ್ತು ಸರ್ದಾರ್ ಪಟೇಲ್ ರಿಗೆ ಅನ್ಯಾಯವಾಯ್ತು ಎಂದು ಹೊಸ ನ್ಯಾಯ ಕೇಳುತ್ತಿರುವ ಜನರಿಗೆ ತಮ್ಮ ತಾಯ್ನೆಲದವರದೇ ಶಡ್ಯಂತ್ರಗಳಿಗೆ ಬಲಿಯಾಗದಿರುವಷ್ಟರ ಮಟ್ಟಿಗೆ ಮಂಕು ಕವಿದಿದೆಯೇ? ಒಂದು ವರ್ಷದ ಕೆಳಗೆ ಪಟೇಲರ ಬಗ್ಗೆ ಹೊಸ ಅರಿವು ಮೂಡಲು ವಾರ ಪತ್ರಿಕೆಯೊಂದು ಮುಖಪುಟ ಲೇಖನವನ್ನು ಪ್ರಕಟಿಸಿತ್ತು. ಬಹಳ ಸುಂದರವಾದ ಲೇಖನವದು. ಆಗಾಗಲೇ ವಕೀಲರಾಗಿದ್ದ ಪಟೇಲರಿಗೆ  ಗಾಂಧಿ ಯಾವ ಮಹಾ ಎಂಬ ಧೋರಣೆಯೂ ಜೊತೆಗೆ ಕುತೂಹಲವೂ ಇರುತ್ತದೆ. ಆಗ ಸಂಗ್ರಾಮದ ಕಾಲ. ಗಾಂಧಿ ಪಟೇಲರ ಊರಿನ ಸಮೀಪವೇ ಭಾಷಣಕ್ಕೆ ಬಂದಿರುತ್ತಾರೆ. ಯುವ ಪಟೇಲರ ಕುಟುಂಬ ವಿದ್ಯಾವಂತ ಕುಟುಂಬ. ಗಾಂಧಿಯ ಭಾಷಣಕ್ಕೆ ಬಂದ ಪಟೇಲರು ಮಹಾತ್ಮರ ಒಂದೇ ಭಾಷಣದಿಂದ ಗಾಂಧಿಗೆ ಮನಸೋಲುತ್ತಾರೆ. ಜೀವನ ಪರ್ಯಂತ ಗೆಳೆಯರೂ ಅನುಯಾಯಿಗಳೂ ಆಗುತ್ತಾರೆ.

ಈ ಲೇಖನದಲ್ಲಿ ಪಟೇಲರಿಗೇ ಅಧಿಕಾರ ಕೊಡುವ ಎಲ್ಲ ಆಶೆಗಳಿದ್ದರೂ ಆ ಸಂಕೀರ್ಣ ಮತ್ತು ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಗಾಂಧಿ ತೆಗೆದುಕೊಳ್ಳುವ ನಿರ್ಧಾರಗಳ ಹಿಂದಿದ್ದ ಪ್ರಬುದ್ದತೆಯ ಚಿತ್ರವಿದೆ. ಆ ಸಂದರ್ಭಗಳ ಅತಿ ಸೂಕ್ಷ್ಮಗಳನ್ನು, ಎದೆ ನೋವನ್ನು ಗಾಂಧಿ ತಮ್ಮ ಹೃದಯಹಿಂಡಿಕೊಂಡು ಬದುಕಿದ್ದು ಒಂದು ಘನ ಉದ್ದೇಶದ ಸಾಧನೆಗಾಗಿ. ಪಟೇಲರನ್ನು ಹೊಗಳಿ ಬರೆದ ಲೇಖನವೇ ಆದರೂ ಗಾಂಧಿಯ ತೀಕ್ಷ್ಣ ಬುದ್ಧಿಯ ಅಖಂಡತೆಯೇ ಮನವನ್ನು ಸೆಳೆದದ್ದು. ಗಾಂಧಿಯವರನ್ನು ಪಟೇಲರು ಅನುಸರಿಸಿದ್ದು ಸುಮ್ಮ ಸುಮ್ಮನಲ್ಲ. ಮೆಚ್ಚಿ ಜೀವನ ಪರ್ಯಂತ ಜೀವದ ಗೆಳೆಯರಾಗಿ ಉಳಿದದ್ದು ಪಟೇಲರಿಗೆ ಬುದ್ಧಿ ಕಡಿಮೆಯಿತ್ತು ಎಂತಲೂ ಅಲ್ಲ

ಬರಿಯ ಅಧಿಕಾರಕ್ಕೆ ಆಸೆ ಬಿದ್ದು ದುಡಿದವರಲ್ಲ ಪಟೇಲರು. ಸರ್ವವನ್ನೂ ತ್ಯಾಗ ಮಾಡಿದ ಗಾಂಧಿಯ ನಿಜ ಅನುಯಾಯಿಗಳು. ಯಾರೂ ಅವರನ್ನು ಮತ್ತು ಭಾರತಕ್ಕೆ ಸಂದಿರುವ ಅವರ ಸೇವೆಯನ್ನು ಮರೆತಿಲ್ಲ. ಅವರೇ ಮೊದಲ ಪ್ರಧಾನಿಯಾಗಿದ್ದಿದ್ದರೆ ಮಾತ್ರ ಅವರು ಹಿರಿಯರಾಗಿಬಿಡುತ್ತಿದ್ದರೆಂದು ಮಾತಾಡುವುದು ಅಂತಹ ಕೀಳು ಉದ್ದೇಶಗಳನ್ನು ಮಾತ್ರ ಗ್ರಹಿಸಬಲ್ಲ ಇಂದಿನ ರಾಜಕಾರಣ ಮಾತ್ರ.

ನಾನು ಭೈರಪ್ಪನವರ ಕಾದಂಬರಿಗಳಲ್ಲಿ ಇರುತ್ತಿದ್ದ  ಸಾಮಾಜಿಕ ವೈಚಾರಿಕತೆಯನ್ನು ಅಪಾರವಾಗಿ ಮೆಚ್ಚಿಕೊಂಡವಳು. ಅವರು ಇತ್ತೀಚೆಗೆ ತಮ್ಮದೇ ಕೆಲವು ವಯಕ್ತಿಕ ಹೇಳಿಕೆಗಳನ್ನು ಕೊಡುತ್ತಿರುವ ಕಾರಣ ಸಮಾಜದಲ್ಲಿ ಏನೂ ಬದಲಾಗುವುದಿಲ್ಲ ವೈದ್ಯಕೀಯದಲ್ಲಿ ಡಿಮೆನ್ಷಿಯಾ ಪದವನ್ನೇ ಕನ್ನಡದಲ್ಲಿ ಅರುಳು -ಮರುಳು ಎಂದು ಅನ್ನುತ್ತಾರಂತೆ. ಗಾಂಧಿಯವರ ತತ್ವಗಳನ್ನೇ ಸ್ವಲ್ಪ ಬಳಸಿ, ಭೈರಪ್ಪನವರ ಇತರೆ ಕಾರ್ಯಗಳನ್ನು ನೆನೆದು ಮರೆಯಬಹುದು. ಬುದ್ದಿವಂತರಾದರೆ, ಈ ವಿಚಾರಗಳಿಗಾಗಿ ಇಂತವರಿಗೆ ಪ್ರಚಾರವನ್ನು ಕೊಡುವುದನ್ನು ಕೂಡ ಮಾಧ್ಯಮಗಳು ಕಡಿಮೆ ಮಾಡಬೇಕು.

ಒಂದು ತಪ್ಪು ಅರಿವಿಲ್ಲದೆ ನಡೆದು ಹೋಗಿದೆ.

ಅದೆಂದರೆ ಮಾದ್ಯಮಗಳು ಗಾಂಧಿ, ನೆಹರು, ಪಟೇಲರ ಬಗ್ಗೆ ಯಾರಿಗೆ ತಿಳಿದಿಲ್ಲ ಎಂದು ದಶಕಗಳ ಕಾಲ ಅವರನ್ನು ಬದಿಯಲ್ಲಿ ಕೂರಿಸಿದ್ದು.  ಬರೀ ಸ್ವಾತಂತ್ರ್ಯ ದಿನಾಚರಣೆಯಂದು ಮತ್ತು ಅವರ ಜಯಂತಿಗಳಂದು ಅವರನ್ನು ಕ್ಷಣಕಾಲ ನೆನೆಸಿ ತಮಗೆ ತಿಳಿದದ್ದೆಲ್ಲ ಶ್ರಮವಿಲ್ಲದೆ ಮುಂದಿನ ತಲೆಮಾರಿನವರಿಗೆ ತಿಳಿದುಬಿಡುತ್ತದೆ ಎಂದು ಮೈ ಮರೆತದ್ದು. ಇದು ಜನರ ಮನದಲ್ಲಿ ಜನನಾಯಕರ ಬಗ್ಗೆ ಅರೆ-ಬರೆ ಮರೆವನ್ನು ಮೂಡಿಸಿದರೆ ನಂತರ ಬಂದ ಪೀಳಿಗೆಗಳಲ್ಲಿ ಖಾಲಿತನವನ್ನೇ ಉಳಿಸಿದ್ದು. ಈ ಖಾಲಿ ಖಾಲಿ ಮನಸ್ಸುಗಳ ಮೇಲೆ ಸಾಮಾಜಿಕ ಜಾಲತಾಣ, ವಾಟ್ಸಾಪ್ ಇನ್ನಿತರ ಸಂವಹನ ಟೆಕ್ನಾಲಜಿಯನ್ನು ಬಳಸಿ ಏನನ್ನೂ ಬೇಕಾದರೂ ಬರೆಯುವ  ವಿಕಟ ಕೆಲಸ ಶುರುಮಾಡಿರುವುದು ಇಂದಿನ ವಿಕೃತ ರಾಜಕಾರಣಿಗಳು.

ಇಂತಹದ್ದೊಂದು ದುಷ್ಟ ಕಾರ್ಯ ನಡೆಯಬಲ್ಲುದೇ ಎಂದುಕೊಳ್ಳುವಷ್ಟರಲ್ಲಿ ಇದು ಸಾಮೂಹಿಕ ಮಟ್ಟಕ್ಕಿಳಿದಿರುವುದು. ಈ ತಲೆಮಾರಿನ ಹುಡುಗರು ಭೈರಪ್ಪನ ಬಗ್ಗೆ ಏನೂ ತಿಳಿಯದವರು. ಇವರ ಮೇಲೆ ಭೈರಪ್ಪನ ಪ್ರಭಾವ ಅತಿಕಡಿಮೆ.  ಆದ್ದರಿಂದ ಮೂಲ ಸಮಸ್ಯೆಯನ್ನು ಸರಿಪಡಿಸಲು ಶ್ರಮಿಸುವುದು ಒಳಿತು. ಭೈರಪ್ಪನವರನ್ನು ಈ ವಯಸ್ಸಿನಲ್ಲಿ ಬದಲು ಮಾಡುವುದು ಕೂಡ ಅಸಾಧ್ಯವೇ. ನಮ್ಮ ಹುತಾತ್ಮರನ್ನು ನಾವೇ ಆಹುತಿ ತೆಗೆದುಕೊಳ್ಳದಿರಲು ಎಚ್ಚರಿಕೆ ವಹಿಸಲೇ ಬೇಕು, ಹೊಸ ವಿಧಾನಗಳನ್ನು ಬಳಸಬೇಕು. ಅದಕ್ಕೆ ಈಗ ಸಕಾಲ.

ಪಾಶ್ಚಾತ್ಯ ದೇಶಗಳಲ್ಲಿ ಇದನ್ನೇ ಮಾಡುತ್ತಾರೆ. ಹೇಳಿದ ಕಥೆಯನ್ನೇ ಪ್ರತಿ ಐದು -ಹತ್ತು ವರ್ಷಗಳ ನಂತರ ಮತ್ತೆ ಹೇಳುತ್ತಾರೆ ಆದರೆ ಹೊಸ ಟೆಕ್ನಾಲಜಿಯನ್ನು ಬಳಸುತ್ತಾರೆ. ಕಥೆ ಉಳಿಯುತ್ತದೆ. ಅರಿವು ಬೆಳೆಯುತ್ತದೆ.

ಜಗದೀಶ ಕೊಪ್ಪದಂತವರು, ಓದಿಕೊಂಡಂತವರು , ಟೆಕ್ನಾಲಜಿಯಲ್ಲಿ ನುರಿತವರು ಗಾಂಧಿ ಮಾಡಿದ ಮಹತ್ತರ ಕಾರ್ಯಗಳನ್ನು ಮರೆಯದಂತೆ ಪದೇ ಪದೇ ಬರೆದು, ಜನರ ಮನಸ್ಸಿಗಿಳಿಸಬೇಕು. ಅವರ ತತ್ವಗಳನ್ನೇ ಆಕರ್ಷಕವಾಗಿ ಕಾಣುವಂತೆ ಮಾಡಿ ಹೊಸ ವಿಧಾನದಲ್ಲಿ ಹೇಳಬೇಕು.

ತೀರಾ ಇತ್ತೀಚೆಗೆ ಯಾವುದೋ ಸಾಮಾಜಿಕ ಜಾಲತಾಣದಲ್ಲಿ “ಗಾಂಧಿಯೇನು ಮಹಾ ಉಪವಾಸ ಮಾಡಿದ್ದು.. ಸತ್ವವುಳ್ಳ ಮೇಕೆ ಹಾಲು ಕುಡಿದು, ಡ್ರೈ ಫ್ರೂಟ್ಸ್ ತಿನ್ನುತ್ತಿರಲಿಲ್ಲವಾ ?” ಅಂತ  ಒಬ್ಬ ಒಂದು ವಾದ ಹಾಕಿದ್ದ. ಅದಕ್ಕೆ ಉತ್ತರವಾಗಿ “ಹೌದಪ್ಪಾ..ಎಂತಹ ಉತ್ಕೃಷ್ಟ ಊಟ ಹೊಡೆಯುತ್ತಿದ್ದರೆಂದರೆ, ಬ್ರಿಟಿಷರು ಅದನ್ನು ನೋಡಿ ಕಾಲು ಕಿತ್ತರು!” ಎಂದು ಬರೆದು ನೀರಿಳಿಸಿದ್ದಾಯಿತು. ಮನಸ್ಸಿನಲ್ಲೇ ಇವರೆಲ್ಲ ಯಾವ ಮಟ್ಟಿಗಿನ ಕಂದಕದಲ್ಲಿದ್ದಾರೆ ಎನಿಸಿತು.ಅವರಿಗೆ ಬೆಳಕು ಕೊಡಬೇಕು. ಅಕ್ಟೋಬರ್ ಬರುತ್ತಿದೆ. ಗಾಂಧಿಯ ಬಗ್ಗೆ ಅವ್ಯಾಹತವಾಗಿ ಅರಿವು ಮೂಡಿಸುವ ಕಾರ್ಯಕ್ಕೆ ಪಣತೊಡಬೇಕು.

ಅರ್ಧದಷ್ಟು ಮಾಧ್ಯಮಗಳು ಕೂಡ ರಾಜಕೀಯದ ಬೆಂಬಲವಿಲ್ಲದೆ ನಡೆಯುವುದಿಲ್ಲ. ಅಂತಹದ್ದರಲ್ಲಿ ಜಗದೀಶ ಕೊಪ್ಪರಂತೆ ಗಾಂಧಿಯ ಬಗ್ಗೆ ಓದಿಕೊಂಡವರು ಅವಿರತವಾಗಿ ಸರಳವಾಗಿ, ಮನಮುಟ್ಟುವಂತೆ ಗಾಂಧಿಯನ್ನು ದೈವೀಕರಿಸದೆ, ಸೂಪರ್ ಮ್ಯಾನ್ ಇಮೇಜಿನಲ್ಲಿ ಹೊಸ ತಲೆಮಾರಿನವರ ಮೆದುಳಿಗಿಳಿಸದಿದ್ದರೆ ಇತ್ತೀಚೆಗಿನ ರಾಜಕಾರಣಿಗಳು ತಮ್ಮನ್ನೇ ಮಾಧ್ಯಮಗಳ ಮೂಲಕ ದೈವೀಕರಿಸಿಕೊಂಡುಬಿಡುತ್ತಾರೆ. ವಾನರ ಸೇನೆಯ ಕಾಟ ತಡೆಯದಂತಾಗುತ್ತದೆ. ಗಾಂಧಿ ಬದುಕಿದ್ದಿದ್ದರೆ ಈ ಯಾವ ಪಟ್ಟವನ್ನೂ ಬಯಸದೆ  ಇಂತಹ ಮೂರ್ಖರನ್ನೂ, ಇನ್ನಿತರ ಬುದ್ದಿವಂತ ಮೂರ್ಖರನ್ನೂ ಮತ್ತು ಅವರನ್ನು ಕಲುಷಿತಗೊಳಿಸಿರುವ ಕರಾಳ ಮನಸ್ಸುಗಳ ಹಿಂದಿನ ಉದ್ದೇಶಗಳನ್ನೂ ನೋಡಿ ಒಂದು ಮಂದಹಾಸ ಬೀರಿ ಕ್ಷಮಿಸಿಬಿಡುತ್ತಿದ್ದರೇನೋ . ಗಾಂಧಿಯ ಹಿರಿಮೆ ಅಂತಾದ್ದು.

 

‍ಲೇಖಕರು avadhi

27 August, 2019

3 Comments

  1. T S SHRAVANA KUMARI

    ಒಳ್ಳೆಯ ಲೇಖನ

  2. ರಾಶಿ

    ಶ್ರೀಯುತ ಭೈರಪ್ಪನವರು ತಮ್ಮ ಇತ್ತೀಚಿನ ಕಾದಂಬರಿ ‘ಉತ್ತರಕಾಂಡ’ದಲ್ಲಿ ಬರೆದ/ಸೃಷ್ಟಿಸಿದ ರಾಮನ ಬಗ್ಗೆಯೂ ಚರ್ಚೆಯಾಗಬೇಕಿದೆ. ಅದರ ಬಗ್ಗೆ ಜನ ಜಾಣ ಮೌನ ವಹಿಸಿರುವುದೇಕೆ?

  3. ಮಾದೇವ

    ಚನ್ನಾಗಿದೆ…

Trackbacks/Pingbacks

  1. ಮುಂದುವರಿದ ಭೈರಪ್ಪ ಚರ್ಚೆ: ಅವರ ಹೇಳಿಕೆ ಸಮ್ಮತವಲ್ಲ – . - […] ಇದಕ್ಕೆ ಇಂಗ್ಲೆಂಡ್ ನಿಂದ ‘ಅವಧಿ’ಯ ಬರಹಗಾರರಾದ ಡಾ ಬಿ ಪ್ರೇಮಲತಾ ಅದಕ್ಕೆ ಪ್ರತಿಕ್ರಿಯಿಸಿದರು. ಅದು ಇಲ್ಲಿದೆ. […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading