
ಎಸ್ ಸಾಯಿಲಕ್ಷ್ಮಿ
ವೇದಿಕೆಯ ಮೇಲೆ ಸ್ನೇಹಗಾನ
ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ ಕೈಸೇರಿ ಮೆಚ್ಚುಗೆ ಗಳಿಸಿದೆ.
ಬಾನುಲಿ ಮಾಧ್ಯಮದಲ್ಲಿ ಅನೇಕ ಬಗೆಯ ನುಡಿ ಪ್ರಯೋಗ, ಮಕ್ಕಳ ಅತ್ಯದ್ಬುತ ರಂಗಪ್ರಯೋಗಕ್ಕೆ ಮುನ್ನುಡಿ ಬರೆದಿರುವ ಸಾಯಿಲಕ್ಷ್ಮಿ. ಎಸ್ ಇವರು ತಮ್ಮ ರಚನೆ ಮತ್ತು ಪ್ರಸ್ತುತಿಯ ಮಕ್ಕಳ ಗೀತರೂಪಕ “ಸರ್ಕಸ್ ಆನೆನಲ್ಲಿ” ಇದಕ್ಕಾಗಿ ಆಕಾಶವಾಣಿ ಕೊಡಮಾಡುವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬಾನುಲಿಯ ತಮ್ಮ ಆಸಕ್ತಿದಾಯಕ ವೃತ್ತಿಕಾಯಕದಲ್ಲಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪೂರೈಸಿರುವ ಸಾಯಿಲಕ್ಷ್ಮಿ ಇವರಿಗೆ ಸಂಗೀತ, ಸಾಹಿತ್ಯ ಹಾಗೂ ತೋಟಗಾರಿಕೆ ಪ್ರಿಯ ಕ್ಷೇತ್ರಗಳು. ಅಪಾರ ಮನ್ನಣೆ ಪಡೆದ “ಹೂಬತ್ತಿ” ಇವರ ಮೊದಲ ಕಾದಂಬರಿ.
| ಕಳೆದ ಸಂಚಿಕೆಯಿಂದ |
ನೃತ್ಯ ಗುರು ಜಯಾ ಅವರ ನೃತ್ಯ ಸಂಯೋಜನೆಯಲ್ಲಿ ಮಕ್ಕಳ ಗುಂಪು ರಿಹರ್ಸಲ್ ಆರಂಭಿಸಿ ಎರಡು ದಿನವೂ ಕಳೆದಿಲ್ಲ. ರಿತೀಷಾ ಅಮ್ಮನೊಡನೆ ಶಾಲೆಯಿಂದ ನನ್ನನ್ನು ಕಾಣಲು ಬಂದಳು. ಸುಧಾ “ಮೇಡಂ ನಿಮ್ಮ ಹತ್ರ ಒಂದು ರಿಕ್ವೆಸ್ಟ್. ರಿತೀಷಾ ಸ್ಟೇಜ್ ಮೇಲೆ ಚಿನ್ನಿಮರಿ ರೋಲ್ ತಾನೇ ಮಾಡಬೇಕೂ ಅಂತ ಆಸೆ ಪಡ್ತಿದಾಳೆ” ಎಂದರು. ಅದೇ ಸಮಯಕ್ಕೆ ನೃತ್ಯ ತಯಾರಿಯ ಬಗ್ಗೆ ಮಾತನಾಡಲು ಜಯಾ ಸಹ ಬಂದರು. ಇಬ್ಬರಿಗೂ ಪರಿಚಯ ಮಾಡಿಸಿದೆ.
ಸ್ನೇಹಗಾನದ ಚಿನ್ನಿಮರಿಯ ಭಾವಪೂರ್ಣ ಮುದ್ದುದನಿ ಕೇಳಿದ್ದ ಜಯಾ ಸಹ ಬೆರಗಾಗಿದ್ದರು. ಸಾಕ್ಷಾತ್ ರಿತೀಷಾಳೇ ಎದುರಿಗಿದ್ದಾಳೆ. ಜಯಾ ಹಿಗ್ಗಿ ಹೋದರು. ನಾನು ಮಗುವಿನ ಬೇಡಿಕೆ ಜಯಾಗೆ ತಿಳಿಸಿದೆ. ಜಯಾ ಇನ್ನೊಮ್ಮೆ ಅವಳನ್ನು ನೋಡಿ “ಮಗೂಗೆ ಡ್ಯಾನ್ಸ್ ಏನಾದರೂ ಬರತ್ತಾ?” ಎಂದಾಗ ರಿತೀಷಾ ಮುದ್ದು ಮುದ್ದಾಗಿ “ಕಲತಕೊಂಡು ಮಾಡ್ತೀನಿ” ಎಂದಳು.
ಜಯಾ ಚಿನ್ನಿಮರಿಗೆ ಸಿದ್ಧಪಡಿಸಿದ್ದ ಒಂದೆರಡು ನೃತ್ಯದ ತುಣುಕು ಮಾಡಿ ತೋರಿ ರಿತೀಷಾಗೆ ಅನುಕರಿಸುವಂತೆ ಹೇಳಿದರು. ಅವಳು ಚಾಚು ತಪ್ಪದೆ ಮಾಡಿ ತೋರಿಸಿ ಅವರ ಮೆಚ್ಚುಗೆ ಗಳಿಸಿ ಪಾತ್ರಕ್ಕೆ ಆಯ್ಕೆಯಾಗಿಬಿಟ್ಟಳು. ಪ್ರತಿದಿನ ಶಾಲೆ ಮುಗಿದ ಮೇಲೆ ಜಯಾ ಮನೆಯಲ್ಲೇ ರಿಹರ್ಸಲ್. ಸುಧಾ ಕರೆದುಕೊಂಡು ಹೋಗಲು ಒಪ್ಪಿದರು. ನಾವು ನಿರ್ಮಿಸಿದ ಸ್ನೇಹಗಾನಕ್ಕೆ ಜಯಾಗೆ ಕೆಲವು ಕಡೆ ಇಪ್ಪತ್ತು ಮೂವತ್ತು ಸೆಕೆಂಡ್ ಮೂವ್ಮೆಂಟ್ ಮ್ಯೂಸಿಕ್ ಮಕ್ಕಳ ಚಲನವಲನಕ್ಕೆ ಅಗತ್ಯವಿತ್ತು.
ರಾಮನ್ ಜೊತೆ ಚರ್ಚಿಸಿದೆ. ಅವರು ಕೊಳಲಲ್ಲೇ ಅದನ್ನು ತುಂಬಿ ಸೇರಿಸೋಣ. ಕೆಲವೆಡೆ ರಿದಂ ದೃಷ್ಟಿಯಿಂದ ತಬಲಾ ಬಳಸೋಣ ಎಂದರು. ಅಂತಿಮ ನಿರ್ಮಾಣ ಜಯಾ ಅಪೇಕ್ಷೆಗನುಸಾರ ಮಾಡಿಕೊಟ್ಟೆವು. ಆಕಾಶವಾಣಿ ಮಾಡುವ ವೇದಿಕೆ ಕಾರ್ಯಕ್ರಮಗಳೆಲ್ಲ ವ್ಯವಸ್ಥಿತವಾಗಿಯೇ ನಡೆಯುತ್ತದೆ. ಅದರಲ್ಲಿ ಮಕ್ಕಳ ಸ್ಟೇಜ್ ಕಾರ್ಯಕ್ರಮದ ತೂಕ ಒಂದು ಕೈ ಹೆಚ್ಚು. ಅಲ್ಲಿ ಒಂದು, ಸಂಭ್ರಮ, ಉಲ್ಲಾಸ, ಕ್ರಿಯಾಶೀಲತೆ ಅಧಿಕವಾಗಿದ್ದು ಆಕರ್ಷಣೆ ಹೆಚ್ಚು.
ಕಡೇಪಕ್ಷ ನೂರರಿಂದ ನೂರೈವತ್ತು ಮಕ್ಕಳವರೆಗೂ ಪಾಲ್ಗೊಳ್ಳುತ್ತಾರೆ. ಹಿಂದಿನ ದಿನದ ರಿಹರ್ಸಲ್ ನಂದು ಕಾಸ್ಟ್ಯೂಮ್, ಲೈಟಿಂಗ್, ಪೋಟೋಗ್ರಾಫರ್, ನಮ್ಮ ಕಲಾವಿದರು ಎಲ್ಲರೂ ಸಭಾಭವನದಲ್ಲಿ ಇರುತ್ತಾರೆ. ಜೊತೆಗೆ ನಿರೂಪಣೆಯ ಮಕ್ಕಳು. ಈ ಎಲ್ಲದರೊಂದಿಗೆ ನಮ್ಮ ಅಭ್ಯಾಸ. Exit entry ಮಕ್ಕಳಿಗೆ ಪಕ್ಕಾ ಆಗಬೇಕು.

ನಮ್ಮೊಬ್ಬ ಅನೌನ್ಸರ್ ಡ್ಯೂಟಿ ಮೇಲೆ ಹಾಕಿಸಿ ಅವರು ಏನು ಹೇಳಬೇಕು ಎಷ್ಟು ಹೇಳಬೇಕು ಯಾರ ಯಾರಿಗೆ ಕ್ರೆಡಿಟ್ ಕೊಡಬೇಕು ಎಲ್ಲವೂ ಮೊದಲೇ ನಿಷ್ಕರ್ಷೆಯಾಗಿ ಬರಹ ರೂಪ ಪಡೆದಿರುತ್ತದೆ. ಹಾಗೆ ಕೀಬೋರ್ಡ್ ಕೆಲವು ಕಡೆ ಲೈವ್ ನುಡಿಸಲು ಮೈಸೂರು ಮೋಹನ ಇದ್ದೇ ಇರುವರು. ಈ ಎಲ್ಲದರ ಉಸ್ತುವಾರಿ ಮಕ್ಕಳ ಕಾರ್ಯಕ್ರಮ ವಿಭಾಗದ ನಿರ್ವಾಹಕರದಾಗಿರುವುದು.
ಸುಮಾರು ವರುಷ ಅದು ನನ್ನ ಜವಾಬ್ದಾರಿಯಾಗಿತ್ತು. ಅದೊಂದು ಖುಷಿ. ಬೇರೆ ಕೆಲಸದಿಂದ ಉಂಟಾದ ಒತ್ತಡ ದಣಿವೆಲ್ಲ ಇಲ್ಲಿ ಮಂಗಮಾಯ. ವೇದಿಕೆ ಕಾರ್ಯಕ್ರಮದ ದಿನ. ತುಂಬಿದ ಸಭಾಂಗಣದಲ್ಲಿ ಸರಿಯಾಗಿ ಆರು ಗಂಟೆಗೆ ಕಾರ್ಯಕ್ರಮದ ಆರಂಭ. ಪುಟಾಣಿ ನಿರೂಪಕರು ಸಭಿಕರಿಗೆ ವಂದಿಸಿ ಸ್ವಾಗತ ಕೋರಿ ತಮ್ಮ ಪರಿಚಯ ಮಾಡಿಕೊಂಡು ಮತ್ತೊಂದು ಪುಡಾಣಿಯ ಪ್ರಾರ್ಥನೆಯಿಂದ “ಕಲರವ” ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ.
ಬೇರೆ ಬೇರೆ ತಂಡಗಳಿಂದ ಒಂದೆರಡು ಕಾರ್ಯಕ್ರಮವಾದ ಮೇಲೆ ಸ್ನೇಹಗಾನ. ಅರಣ್ಯ ಇಲಾಖೆಯವರು ಟ್ಯಾಂಕರ್ ನಲ್ಲಿ ಬನ್ನೇರುಘಟ್ಟ ಕಾಡಿನಿಂದ ಆಲದ ಮರವನ್ನು ತಂದು ವೇದಿಕೆಯ ಮೇಲೆ ನಿಲ್ಲಿಸಿದ್ದಾರೆ. ಅದರ ಕೊಂಬೆ ರೆಂಬೆಗಳ ಮೇಲೆಲ್ಲ ತದ್ರೂಪು ಹಕ್ಕಿಗಳನ್ನು ಮೈಸೂರು ಮೃಗಾಲಯದಿಂದ ತರಿಸಿದ್ದು ಕೂರಿಸಲಾಗಿದೆ. ನಮ್ಮ ತಾಂತ್ರಿಕ ಸಿಬ್ಬಂದಿ ಮಧು ಸ್ನೇಹಗಾನದ ರೆಕಾರ್ಡೆಡ್ ಟೇಪ್ ಪ್ಲೇ ಮಾಡಲು ಸಜ್ಜಾಗಿದ್ದಾರೆ.
ಮಕ್ಕಳು ಬಂದು ಸ್ನೇಹಗಾನದ ಕತೆಗೆ ಪ್ರವೇಶ ನೀಡಿ ನೇಪಥ್ಯಕ್ಕೆ ಸರಿಯುತ್ತಾರೆ. ಟೇಪ್ ಪ್ಲೇ ಆಗುತ್ತದೆ. ರಾಮನ್ ಕೊಳಲಿನ ಆಲಾಪದೊಂದಿಗೆ ಲೈಟಿಂಗ್ ವಿಶಾಲ ಆಲದ ಮರದ ಮೇಲೆ ಫೋಕಸ್ ಆಗಿ ಅಲ್ಲಿಯ ಹಕ್ಕಿಯ ಹಸಿರಿನ ಪ್ರಪಂಚದ ಮನೋಹರ ನೋಟ ಪ್ರೇಕ್ಷಕರನ್ನು ಪರವಶಗೊಳಿಸುವುದು. ಎಲ್ಲರೂ ಮಂತ್ರ ಮುಗ್ಧರು.
ಮಾಲತಿ ಶರ್ಮಾ ದನಿಯಲ್ಲಿ ಕತೆ ಹೀಗೆ ತೆರೆದುಕೊಳ್ಳುವುದು. ಸಾವಿರ ಕೊಂಬೆ ತೋಳಂತೆ ಆಲದ ಮರವದು ನಿಂತಿತ್ತು. ರಸ್ತೆಗೆ ಹರಡಿತ್ತು ನೆರಳಾ ಬದುಕಿತ್ತ ದರಡಿ ಸರಳ ಕುಳಿತಿತ್ತಲ್ಲಿ ಗುಂಪು ಖಗಕುಲ ಸದಾಲು ಕೇಳುವ ಚಿಲಿಪಿಲಿ ಮೇಳ ಹೆಣೆದಿತ್ತಲ್ಲಿ ಮಮತೆಯ ಜಾಲ. ಅಲ್ಲೊಂದು ಗೂಡು. ಅದರಲ್ಲಿ ಒಂದು ಪಾರಿವಾಳದ ಪುಟ್ಟ ಸಂಸಾರ. ಅಮ್ಮನಿಗೊಂದು ಮರಿಹಕ್ಕಿ ಅದೇ ಚಿನ್ನಿಮರಿ.
ದಿನಾಲೂ ಮನೆ ಅಂದರೆ ಗೂಡಿಂದ ಆಚೆ ಹೋಗಿ ಆ ತಾಯಿ ತನ್ನ ಮಗುವಿಗೆ ಆಹಾರ ತಂದು ಉಣಿಸ್ತಾ ಇತ್ತು. ಅಕಸ್ಮಾತ್ ಅಮ್ಮ ಬೇಗ ಬಂದು ಬಿಟ್ಟರೆ ಈ ಚಿನ್ನಿಮರಿ ಖುಷಿಯಾಗಿ ಎಳೇರೆಕ್ಕೆ ಬಡೀತಾ ಹಾಡತಿತ್ತು. ಬಾರೆ ಅಮ್ಮ ಹತ್ತಿರ ಬಾರೆ ಮುತ್ತನು ಕೊಡುವೆ ಸರಸರ ಬಾರೆ. ನಾನು ನೀನು ಜೊತೆಯಾಗಿರೆ ಬೆಲ್ಲ ಕೊಬ್ಬರಿ ಸವಿಯುವ ಬಾರೆ ಮುದ್ದು ಚಿನ್ನಿ ಅಮ್ಮ ಪಾರಿವಾಳ, ಮಯೂರಿ, ಶಾಲೆಯ ಸಮವಸ್ತ್ರ ಧರಿಸಿದ ಅವಳ ಸ್ನೇಹಿತರ ಗುಂಪು ಆ ಆಲದ ಮರದ ಆಹ್ಲಾದಕರ ವಾತಾವರಣ ಅದರಲ್ಲಿ ಚಿಲಿಪಿಲಿ ಗುಟ್ಡುವ ಹಕ್ಕಿಗಳು ಎಲ್ಲವೂ ಸೊಗಸಾದ ಸಂಗೀತ ನೃತ್ಯ ಪರಿಕಲ್ಪನೆಯಲ್ಲಿ ಒಂದು ಸುಂದರ ಭ್ರಮಾಲೋಕವನ್ನೇ ಸೃಷ್ಟಿಮಾಡಿ ಇಡೀ ಸಭಿಕ ವರ್ಗ ಈ ಶ್ರವ್ಯದೃಶ್ಯ ಭವ್ಯಕಾವ್ಯದಲ್ಲಿ ತಲ್ಲೀನವಾಗಿ ಹೋಗಿತ್ತು.

ಕಡೆಗೆ ಮಗು ಮಯೂರಿ ಪಾರ್ಕ್ ನಲ್ಲಿ ಚಿನ್ನಿಮರಿಯ ಭೇಟಿಗಾಗಿ ಬಂದು ಅದು ಪೊದೆಯಲ್ಲಡಗಿ ಸತಾಯಿಸುವ ಸೀನ್. ಇದ್ದಕ್ಕಿದ್ದಂತೆ ಆಗಸದಲ್ಲಿ ಕರಿಮೋಡ ಸಾಂದ್ರವಾಗಿ ದಡದಡ ಮಳೆ ಬೀಳೋಕ್ಕೆ ಶುರುವಾಗತ್ತೆ. ಅದ್ದು ಮುದ್ದೆಯಾಗಿ ಮಯೂರಿ “ಸದ್ಯ ಈ ಮಳೇಲಿ ಚಿನ್ನಿಮರಿ ಬರದೇ ಇದ್ರೆ ಸಾಕು” ಎಂದುಕೊಳ್ಳುತ್ತಾ ಮನೆ ಕಡೆ ಹೊರಡತಾಳೆ. ಸ್ಟೇಜ್ ಮೇಲೆ ಲೈಟಿಂಗ್ ಮೂಲಕ ಮಿಂಚು ಗುಡುಗು ಮೂಡಿಸಿ ಮಳೆಯನ್ನು ಬೀಳಿಸುವಂತೆ ತಂತ್ರಗಾರಿಕೆ ಬಳಸಿಕೊಳ್ಳಲಾಗಿತ್ತು. ಇನ್ನು ಮಯೂರಿಯ ಮನಸ್ಸಿನ ಕೂಗು ಹೀಗಿರತ್ತೆ.
ಕರಿಮೋಡವೇ ನೀ ಮರೆಯಾಗು ಆಕಾಶವೇ ನೀ ನಗೆಚೆಲ್ಲು ನನ್ನ ಇಂದಿನ ನೋವು ಪಾಡು ಮುಟ್ಟಿಸು ಚಿನ್ನಿಗೆ ನನ್ನೀ ಗೋಳು ಮಳೇಲಿ ಮಯೂರಿ ಅಷ್ಟೇ ಚಿನ್ನೀನೂ ನೆನೀತು. ಮಯೂರಿ ಮನೆಗೆ ಓಡತಾ ಹೋದಳಲ್ಲ ಆಗ ಚಿನ್ನಿ ಪೊದೆಯಿಂದ ಕೂಗಿತು ಓ ಓ ಮಯೂರಿ ಕಾಯುತ್ತಿರುವೆ ಎನ್ನ ದಾರಿ ನಾನು ಬರುವೆ ಹಾರಿ ನೋಡಿಲ್ಲಿ ಒಂದು ಸಾರಿ ಏನೇ ಅದರೂ ಇಬ್ಬರು ಭೇಟಿಯಾಗಲಿಲ್ಲ. ಆ ಕಡೆ ಮಯೂರಿಗೆ ಜ್ವರ ಬಂದು ಮಲಗಿಬಿಟ್ಟಿದಾಳೆ. ಈ ಕಡೆ ಚಿನ್ನಿ ಮುಖ ಸಪ್ಪೆ. ಊಟ ತಿಂಡಿ ನಿದ್ದೆ ಎಲ್ಲ ಬಿಟ್ಟಿದೆ.
ಅಮ್ಮ ಪಾರಿವಾಳ ಚಿನ್ನಿ ಬಾಯಿಂದ ನಿಜ ಹೊರಕ್ಕೆ ಹಾಕಿಸಿ ಚೆನ್ನಾಗಿ ಬೈಯತ್ತೆ. “ಪ್ರೀತಿ, ಸ್ನೇಹಾನ ಯಾರಾದ್ರೂ ಪರೀಕ್ಷೆ ಮಾಡ್ತಾರಾ? ಅಷ್ಟು ನಂಬಿಕೆ ಇಲ್ಲದೆ ಇದ್ದರೆ ಅದರ ಗೊಡವೆಗೆ ಹೋಗಬಾರದು.”ಚಿನ್ನಿಹಕ್ಕಿ ಅಮ್ಮನ್ನ ಬೇಡತ್ತೆ ಹೇಗಾದರೂ ಮಯೂರಿ ಜೊತೆ ಒಂದು ಮಾಡೂ ಅಂತ. ಅಮ್ಮ ಹಕ್ಕಿ ಕಡೆಗೂ ಮಯೂರಿ ಮನೆ ಪತ್ತೆಮಾಡಿ ಚಿನ್ನಿಮರಿ ಪರವಾಗಿ ಕ್ಷಮೆ ಕೇಳತ್ತೆ ಮಯೂರಿ ತನ್ನ ಒಂಟಿತನ ನೀಗಿ ಸ್ನೇಹದ ಗಣಿ ತೋರಿದ ಅಮ್ಮ ಪಾರಿವಾಳವನ್ನ ಕೃತಜ್ಞತೆಯಿಂದ ಅಪ್ಪಿಕೊಂಡು “ನೀನು ಚಿನ್ನಿ ಇಲ್ಲೇ ಬಂದುಬಿಡಿ” ಅಂತಾ ಕರೀತಾಳೆ.
ಮಯೂರಿ ಅಪ್ಪ ಅಮ್ಮಂಗೂ ಮಗಳ ಒಂಟಿತನ, ಸ್ನೇಹದ ಬಾಯಾರಿಕೆ ಅರ್ಥವಾಗತ್ತೆ. ಇಲ್ಲ ಮಯೂರಿ ಮನೇಲಿ ಇನ್ನೊಂದು ಮಗು ಜೊತೆ ಬೆಳೀಬೇಕು ಇಲ್ಲ ಹಸಿರು, ಗಿಡ, ಮರ, ಪಕ್ಷಿ ಸಾಂಗತ್ಯದಲ್ಲಿ ಅರಳಬೇಕು ಅಂತ ಯೋಚಿಸಿ ಒಂದು ನಿರ್ಧಾರಕ್ಕೆ ಬರತಾರೆ.
ಮನಗಂಡರು ಮಗಳ ಪರಿಪಾಡು ಕಟ್ಟಿದರವರು ಒಂದು ಗೂಡು ಹಕ್ಕಿಗಳ ಬರಮಾಡಿಕೊಂಡರು ಶಾಲೆ ಮುಗಿಸಿ ಮಯೂರಿ ಹಾಜರು ವಿಹರಿಸುವರಿವರು ತಮ್ಮಯ ಲೋಕದಿ ಹರ್ಷವ ಕಾಣ್ವರು ತನ್ಮಯ ಭಾವದಿ ಈ ಸ್ನೇಹ ತಂದ ಮುದ್ದು ಅನುಬಂಧ ಇದರ ಮುಂದೆ ಯಾವ ಮಹದಾನಂದ. ಹೀಗೆ ಒಂದು ಸಾಮಾಜಿಕ ಸಂದೇಶದೊಂದಿಗೆ ನೃತ್ಯರೂಪಕ ಮುಕ್ತಾಯ ಕಾಣುತ್ತದೆ.
ಭಾವನಾತ್ಮಕ ಜಗತ್ತಲ್ಲಿ ಮುಳುಗಿ ಹೋಗಿದ್ದ ಪ್ರೇಕ್ಷಕರ ಕಣ್ಣಂಚಲ್ಲಿ ಆನಂದ ಭಾಷ್ಪ. ಭರ್ಜರಿ ಚಪ್ಪಾಳೆ. ಅದೇ ಅಂದಿನ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ಎರಡೂವರೆ ತಾಸಿನ ವೈವಿಧ್ಯಮಯ ಮಕ್ಕಳ ಕಾರ್ಯಕ್ರಮ ಉತ್ಸವದಂತೆ ನಡೆಯಿತು. ನಮ್ಮ ಅಧಿಕಾರಿ ವರ್ಗ, ಪೋಷಕರು, ಹಿಂಡು ಹಿಂಡು ಮಕ್ಕಳ ದಂಡು, ನೋಡುಗರು ಎಲ್ಲರಿಂದ ಅಭಿನಂದನೆಯ ಸುರಿಮಳೆ. ಎಂತಹ ಧನ್ಯತೆ. ತಂದಿಟ್ಟಿದ್ದ ಆ ಆಲದ ಮರವನ್ನು ಪುನಃ ಬನ್ನೇರುಘಟ್ಟ ಅರಣ್ಯಕ್ಕೆ ಕಳಿಸಿ ಅವರು ಅದನ್ನು ಮಾರನೆಯ ದಿನ ಅಲ್ಲೆ ಮತ್ತೆ ನೆಟ್ಟರು.
ಮೈಸೂರು ಮೃಗಾಲಯಕ್ಕೆ ತದ್ರೂಪಿ ಹಕ್ಕಿಗಳನ್ನು ಪ್ಯಾಕ್ ಮಾಡಿ ಕಳಿಸಲಾಯಿತು. ಮರುದಿನ ಬೆಳಗಿನ ಪ್ರಮುಖ ದಿನಪತ್ರಿಕೆಯ ಮುಖಪುಟದಲ್ಲಿ ಸ್ನೇಹಗಾನದ ಬಗ್ಗೆ ಮೆಚ್ಚುಗೆಯ ವರದಿ ಚಿತ್ರ ಸಹಿತ ಪ್ರಕಟವಾಗಿತ್ತು. ಬಹುಶಃ ನನಗೆ ತಿಳಿದಂತೆ ಆಕಾಶವಾಣಿಯ ಇತಿಹಾಸದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಹಿಂದೆಂದೂ ಅಂತಹ ಅಭೂತಪೂರ್ವ ಮನ್ನಣೆ ದೊರೆತಿರಲಿಲ್ಲ.
ಮೂರನೆಯ ಪುಟದಲ್ಲಿ ಒಂದು ಪುಟ್ಟ ವರದಿ ಬಂದರೆ ಅದೇ ಮಹಾಭಾಗ್ಯ. ನಮ್ಮ ದಿನದ ಪ್ರೋಗ್ರಾಂ ಮೀಟಿಂಗ್ ನಲ್ಲೂ ನಮ್ಮ ನಿರ್ದೇಶಕರಾಗಿದ್ದ ಎಚ್ ಆರ್ ಕೃಷ್ಣಮೂರ್ತಿಯವರು ಸುಮಾರು ಇಪ್ಪತ್ತು ನಿಮಿಷ ಕಾಲ ಕಲರವದ ಬಗ್ಗೆ ಕಲರವವೇ ಎಬ್ಬಿಸಿದರು. ಎಲ್ಲರಿಂದ ಚಪ್ಪಾಳೆ. ನಾನೋ ನಾಚಿಕೆಯಿಂದ ಕುಗ್ಗಿ ಹೋಗಿದ್ದೆ. ಅಂದಿನ ದಿನಪತ್ರಿಕೆಗಳೆಲ್ಲ ಡೈರೆಕ್ಟರ್ ಅವರ ಮೇಜಿನ ಮೇಲೆ ಅವರ ಬಲ ಬದಿಗೆ ಇಡಲಾಗಿತ್ತು. ಅದನ್ನು ತೆರೆದು ಚಿತ್ರ ತೋರಿ ವರದಿ ಓದಿ ಸಂಭ್ರಮಿಸಿದ್ದು ನನಗೆ ಚೆನ್ನಾಗಿ ನೆನಪಿದೆ.
ಈ ದಿನಗಳಲ್ಲಿ ಸಾಮಾನ್ಯವಾಗಿ ಶಾಲೆಯ ದಿನಕ್ಕೆ ಸಿನಿಮಾ ಹಾಡಿಗೆ ಮಕ್ಕಳು ನೃತ್ಯ ಮಾಡುವುದನ್ನು ಅದನ್ನು ಅನಂದದಿಂದ ಪೋಷಕರು ಇತರರು ಬೆಂಬಲಿಸಿ ನೋಡುವುದನ್ನು ಕಂಡಾಗ ನಮ್ಮಆಕಾಶವಾಣಿಯ ಚಿಣ್ಣರ ವೇದಿಕೆ ಕಾರ್ಯಕ್ರಮ ಸ್ಮರಣೆಗೆ ಬರುತ್ತದೆ. ಆ ಚಿಕ್ಕ ವಯಸ್ಸಲ್ಲಿ ಮಕ್ಕಳಿಗೆ ಪ್ರಕೃತಿಯ ಪ್ರಾಣಿ ಪಕ್ಷಿ ಗಿಡ ಮರಗಳ ಬಗ್ಗೆ ಅತೀವ ಪ್ರೀತಿ ಅಸಕ್ತಿ ಕುತೂಹಲ ಸಹಜವಾಗಿ ಇರುತ್ತದೆ. ಆಗ ನಾವು ಅವರ ಸಂವೇದನಾಶೀಲತೆಯನ್ನು ತೀವ್ರಗೊಳಿಸುವ ಕಾರ್ಯಕ್ರಮಗಳನ್ನು ರೂಪಿಸಿದರೆ ಅವರು ಬೆಳೆಯುತ್ತಿರುವಂತೆ ಆ ಹಸಿರು ಪ್ರಜ್ಞೆಗೆ ಅವರ ವ್ಯಕ್ತಿತ್ವವನ್ನು ರೂಪಿಸಿ ಅವರನ್ನು ಉತ್ತಮ ನಾಗರಿಕರಾಗಿ ಮಾಡುವ ಎಲ್ಲ ಸಾಧ್ಯತೆಗಳು ಖಂಡಿತ ಇದೆ.
ಈ ದಿಕ್ಕಲ್ಲಿ ಕಾರ್ಯೋನ್ಮುಖರಾಗುವುದು ನಮ್ಮ ಸಾಮಾಜಿಕ ಹೊಣೆಗಾರಿಕೆ. ನಮ್ಮಮಕ್ಕಳನ್ನು ಮುಕ್ಕಾಗದಂತೆ ಕೆತ್ತುವ ಶಿಲ್ಪಿಗಳು ನಾವೇ ಅಲ್ಲವೇ? ಮಗಿಸುವ ಮುನ್ನ.. ನನ್ನ ವೃತ್ತಿಯ ನಿವೃತ್ತಿಗೆ ಕೆಲವು ವರುಷಗಳ ಮುಂಚೆ ನನಗೆ ಮಹಿಳಾ ಕಾರ್ಯಕ್ರಮ ನಂತರ ಸಂಗೀತ ವಿಭಾಗದ ನೇತೃತ್ವದ ಜವಾಬ್ದಾರಿ ವಹಿಸಲಾಯಿತು. ಇದಕ್ಕೆಲ್ಲ ಮುಕುಟಮಣಿಯಂತೆ ಸಹಾಯಕ ನಿರ್ದೇಶಕಿಯಾಗಿ ಪದೋನ್ನತಿಯ ಭಾಗ್ಯವೂ ಲಭಿಸಿತು.
ಮಕ್ಕಳ ಪ್ರೀತಿ ಬಹಳ ದೊಡ್ಡದು. ಅಲ್ಲಿ ಅವರನ್ನು ಗೆಲ್ಲಲು ಅರ್ಪಣೆಯಾಗುವ ಕಾರ್ಯಕ್ರಮಗಳಿಗೆ ರಂಗು ಮೂಡಿಸಲು ತಾಳ್ಮೆ, ಮಮತೆಯೇ ಬಂಡವಾಳ. ಮಕ್ಕಳ ಒಡನಾಟದಲ್ಲಿ ನಮ್ಮ ಗುಣಗಳು ವಿಶೇಷ ಸಂಸ್ಕಾರ ಹೊಳಪು ಪಡೆಯವುದೆಂದು ನನ್ನ ನಂಬಿಕೆ. ಅಂತೆಯೇ ಮಕ್ಕಳಿಗಾಗಿ ಮನಪೂರ್ವಕವಾಗಿ ಕೆಲಸ ಮಾಡಿದವರನ್ನು ಕಾಣದ ಕೈ ಸಲಹುತ್ತದೆ ಹಾಗೆಯೇ ಮಡಿಲು ತುಂಬಿಸುವುದು ಖಾತ್ರಿ. ಮಕ್ಕಳು ನಮಗೆ ನಾನಾಬಗೆಯಲ್ಲಿ ನಮ್ಮನ್ನು ಸಮೃದ್ಧಗೊಳಿಸಿ ಸಂಪ್ರೀತಗೊಳಿಸುತ್ತಾರೆ.
ನಮ್ಮ ಬದುಕಿನುದ್ದಕ್ಕೂ ಪ್ರೀತಿಪಾತ್ರರಾಗುತ್ತಾರೆ. ನಾನು ಮಹಿಳಾ ವಿಭಾಗಕ್ಕೆ ಬರುವ ಮುನ್ನ ಮಕ್ಕಳ ವಿಭಾಗದ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಕಾಶವಾಣಿಯ ರಾಷ್ಟ್ರೀಯ ಮಟ್ಟದ ಮಕ್ಕಳ ವಾರ್ಷಿಕ ಗುಂಪುಗಾಯನ ಸ್ಪರ್ಧೆಯಲ್ಲಿ ಐದು ಬಾರಿ ನಮ್ಮ ಬೆಂಗಳೂರು ಆಕಾಶವಾಣಿಗೆ ಒಟ್ಟು ರಾಷ್ಟ್ರಮಟ್ಟದಲ್ಲಿ ಕೊಡಮಾಡುವ ನಾಲ್ಕು ಬಹುಮಾನದಲ್ಲಿ ಎರಡು ಬಹುಮಾನ ನಮ್ಮ ಕೇಂದ್ರಕ್ಕೆ ಸಂದಿದೆ. ಅದು ನಿಲಯಕ್ಕೆ ಹಾಗೂ ಆಯ್ಕೆಯಾದ ಶಾಲೆಯೆ ಮಕ್ಕಳ ಗುಂಪಿಗೆ ಸಲ್ಲುವ ಪುರಸ್ಕಾರ.
ನಾವೆಷ್ಟೇ ಪರಿಶ್ರಮ ಹಾಕಿದ್ದರೂ ಅದು ವೈಯುಕ್ತಿಕ ಮಟ್ಟ ಮೀರಿದ್ದು. ಕೆಲಸ ಮಾಡಿದ ಹರ್ಷ ನೆಮ್ಮದಿ ನಮ್ಮದಾಗಿರುವುದು. Confidential report ಇದರಲ್ಲಿ ನಾವು ಸಾದನೆಯೆಂದು ಬರೆದುಕೊಳ್ಳಬಹುದು ಅಕಾಶವಾಣಿಯು ಹಲವಾರು ವರ್ಷಗಲಿಂದ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳಿಗೆ ಪ್ರಶಸ್ತಿ ಗೌರವ ಈ ಹಿಂದೆ ಆರು ವಿಭಾಗಗಳಲ್ಲಿ ನೀಡುತ್ತಾ ಬಂದಿದ್ದು ನಂತರದ ದಿನಗಳಲ್ಲಿ ಅದರಡಿಯಲ್ಲಿ ಮಹಿಳಾ ವಿಭಾಗವು ಸ್ಪರ್ಧೆಗೆ ಸೇರ್ಪಡೆಯಾಯಿತು.
2013ನೇ ಸಾಲಿಂದ ಮಕ್ಕಳ ವಿಭಾಗವನ್ನು ಈ ಸ್ಪರ್ಧೆಗೆ ಪರಿಗಣಿಸಲಾಯಿತು. ನಾನು ಅದಾಗಲೇ “ಸರ್ಕಸ್ ಆನೆ ನಲ್ಲಿ” ಎಂಬ ಗೀತರೂಪಕ ರಚಿಸಿದ್ದು ಪ್ರಜಾವಾಣಿಯ ಭಾನುವಾರದ ಪುರವಣಿಯ ಮಕ್ಕಳು ಮನೋರಂಜನೆಯ ಪುಟದಲ್ಲಿ ಆಕರ್ಷಕ ಚಿತ್ರದೊಂದಿಗೆ ಪ್ರಕಟವಾಗಿತ್ತು. ಗಾಯಕಿ ಸಂಯೋಜಕಿ ಇಂದು ವಿಶ್ವನಾಥಗೆ ಅದನ್ನು ಕಳಿಸಿ “ಒಂದು ಒಳ್ಳೆಯ ಸಂಗೀತ ರೂಪಕ ಮಾಡೋಣವೇ?” ಎಂದೆ. ಅದರಲ್ಲಿ ಇನ್ನಷ್ಟು ಗದ್ಯಭಾಗ ಪದ್ಯ ಮಾಡಿದರೆ ಚೆನ್ನ ಎಂದರು.

ನಾನು ಪುನಃ ಕೂತು ಬರೆದೆ. ಬಸವೇಶ್ವರ ನಗರದ ವಾಣಿ ವಿದ್ಯಾ ಕೇಂದ್ರದ ಮಕ್ಕಳ ಮುದ್ದು ದನಿ ಬಳಸಿ ರೂಪಕ ಸಿದ್ಧಗೊಳಿಸಿದೆವು. ಸರ್ಕಸ್ ಆನೆ ನಲ್ಲಿ ಪಟ್ಟಣದ ಮಕ್ಕಳ ಪ್ರೀತಿ ಸ್ನೇಹ ಗೆದ್ದು ಆತ್ಮೀಯವಾಗಿರುತ್ತದೆ. ಅದಕ್ಕೆ ಕಾಡಿಗೆ ಹೋಗುವ ಮನಸ್ಸಾಗಿ ಕಾಡಿಗೆ ಹೊರಟು ಬಿಡುವುದು. ಅಲ್ಲಿ ಬೇರೆ ಬೇರೆ ಪ್ರಾಣಿಗಳ ಬಣ್ಣ, ದನಿ ಪಾದ ರೂಪ ಇವಕ್ಕೆಲ್ಲ ಮರುಳಾಗಿ ತನಗೆ ಅವ್ಯಾವುದು ಇಲ್ಲವೆಂದು ಖಿನ್ನತೆಗೆ ಒಳಗಾಗುವುದು.
ಕಾಡಿನ ಪ್ರಾಣಿಗಳು ತಮ್ಮ ಅತ್ಯತ್ತಮವಾದ ಜನ್ಮಜಾತ ಅಂಶಗಳನ್ನು ನಲ್ಲಿಗೆ ಕೊಡುತ್ತವೆ. ನಲ್ಲಿ ಈ ಎಲ್ಲವನ್ನು ತನ್ನದಾಗಿಸಿಕೊಂಡು ಕಾಡಲ್ಲಿ ಅನಂದದಿಂದ ನರ್ತಿಸುವುದು. ನಲ್ಲಿಯನ್ನು ಭೇಟಿಯಾಗಲು ಕಾಡಿಗೆ ಬಂದ ಮಕ್ಕಳ ಗುಂಪಿಗೆ ಅದರ ಗುರುತೇ ಸಿಗುವುದಿಲ್ಲ. ನಲ್ಲಿಗೆ ತನ್ನ ತಪ್ಪಿನ ಅರಿವಾಗಿ ಎರವಲು ಪಡೆದ ಗುಣಗಳನ್ನು ಕಳಚಿ ಬಿಸಾಡಿ ಹಾಡುತ್ತದೆ.
ನಾನು ನಾನೇ ಅಗಿಬಿಟ್ಟೆ ಅದುವೇ ನನಗೆ ಸಾಲದೇನು ಕುಳ್ಳಗಿರಲೇನು ದಪ್ಪಗಿರಲೇನು ನಾನು ನಾನೇ ಅಲ್ಲವೇನು ಅದುವೆ ನನಗೆ ಸಾಲದೇನು ಮಕ್ಕಳು ಸಂತೋಷದಿಂದ ಅನೆಯೊಡನೆ ಹಾಡುತ್ತ ಹೆಜ್ಜೆ ಹಾಕುತ್ತಾರೆ. ಈ ಕಾರ್ಯಕ್ರಮದ ಸಂದೇಶ ಎಲ್ಲರೂ ತಮ್ಮನ್ನು ತಾವು ಪ್ರೀತಿಸುವುದನ್ನು ಕಲಿಯಬೇಕು. ಬೇರೆಯವರ ವಿಶೇಷತೆಗಳು ತಮಗಿಲ್ಲವೆಂದು ಕೊರಗುವುದು ಸರಿಯಿಲ್ಲ.
ಸಹೋದ್ಯೋಗಿ ಮಿತ್ರರಾದ ಡಾ ಎನ್ ರಘು ಅವರ ಸಲಹೆಯ ಮೇರೆಗೆ ಪುನಃ ರೆಕಾರ್ಡ್ ಮಾಡಿ ಅವರು ತಮ್ಮ ಕಂಪ್ಯುಟರ್ ಕೈ ಚಳಕದ ಪರಿಣತಿಯನ್ನು ಧಾರೆಯೆರದು ಮೊದಲೇ ಚಂದವಿದ್ದ ರೂಪಕಕ್ಕೆ ಮತ್ತಷ್ಟು ಅಂದ, ಸೊಗಸು ತುಂಬಿದರು. ಇಂದು ವಿಶ್ವನಾಥ ಅವರ ಸಂಗೀತ ಪರಿಕಲ್ಪನೆಯು ಮಕ್ಕಳ ಮನೋಲೋಕವನ್ನು ಸೆರೆಹಿಡಿಯುವಲ್ಲಿ ಅದ್ಬುತವಾಗಿತ್ತು. ಒಂದು ಕಾಲದ ಕಾರ್ಯಕ್ರಮ ಸಹಾಯಕಿ ಗಂಗರತ್ನ ಆನೆ ಕೂಗುವ ದನಿಯನ್ನು ರೆಕಾರ್ಡ್ ಮಾಡಿ ತಂದು ಅದು ಅತ್ಯಾಕರ್ಷಕ ಅಲಂಕಾರವಾಯಿತು.
ರಘು “ಮೇಡಂ ಸ್ಕ್ರಿಪ್ಟ್ ನಿಮ್ಮದು. ಮಕ್ಕಳನ್ನ ಕಾರ್ಯಕ್ರಮಕ್ಕೆ ಆಗ್ಲೆ ಹೋಗಿ ಆರಿಸಿದವರು ನೀವು. ದಿನವಿಡೀ ಸ್ಟುಡಿಯೋದಲ್ಲಿ ಕೂತು ರೆಕಾರ್ಡ್ ಮಾಡಿದೀರಿ. ನಂದೇನು ಬರಿಯ ಎಡಿಟಿಂಗ್” ಎಂದು ಒಪ್ಪದಿದ್ದರೂ ಅವರನ್ನು ಕಾರ್ಯಕ್ರಮದ ಸಹನಿರ್ಮಾಪಕರೆಂದು ದೆಹಲಿಗೆ ಅವಾರ್ಡ್ ಗೆ ಕಳಿಸಿಯಾಯಿತು. ಒಂದು ವೇಳೆ ಅವಾರ್ಡ್ ಬಂದರೆ ನಾನು ಸಣ್ಣವಳಾಗಿ ಬಿಡುತ್ತೇನೆ ಎಂಬುದೇ ನನ್ನ ಕಾಳಜಿಯಾಗಿತ್ತು.
ಒಂದು ಮಧ್ಯಾಹ್ನ ಸ್ಟುಡಿಯೊದಲ್ಲಿ ಮಹಿಳಾ ಕಾರ್ಯಕ್ರಮದ ಸಂದರ್ಶನದಲ್ಲಿ ಅತಿಥಿಗಳೊಡನೆ ಬಿಸಿಯಾಗಿದ್ದಾಗ ಪೋನ್ ಕರೆಬಂತು. ನಿರ್ದೇಶಕರಾದ ಡಾ ಬಸವರಾಜ ಸಾದರ ನನಗೆ ಅಭಿನಂದಿಸುತ್ತಿದ್ದಾರೆ. ಪ್ರಮೋಷನ್ ನಿರೀಕ್ಷೆಯ ದಿನಗಳವು. ಅದೇ ಇರಬೇಕು ಎಂದುಕೊಳ್ಳುತ್ತಿರುವಾಗ ಅವರು “ಸಾಯಿಲಕ್ಷ್ಮಿ, ನಿಮ್ಮ ಸರ್ಕಸ್ ಅನೆ ನಲ್ಲಿ ರೂಪಕಕ್ಕೆ ಆಕಾಶವಾಣಿ ಆ್ಯನುಯಲ್ ಅವಾರ್ಡ್ ಅನೌಂನ್ಸ್ ಆಗಿದೆ” ಎಂದಾಗ ನನಗೆ ಆ ಸಿಹಿಸುದ್ದಿ ನಂಬಲು ಸವಿಯಲು ಜೀರ್ಣಿಸಿಕೊಳ್ಳಲು ಬಹಳ ಸಮಯ ಹಿಡಿಯಿತು.
ಮುಂದೆ ದೆಹಲಿಯ ಜನರಲ್ ಮಾಣಿಕ್ ಷಾ ಸಭಾಂಗಣದ ವೈಭವೋಪೇತ ವೇದಿಕೆಯಲ್ಲಿ ಅಂದಿನ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾಗಿದ್ದ ಸನ್ಮಾನ್ಯ ಶ್ರಿ ಎಂ ವೆಂಕಯ್ಯ ನಾಯ್ಡು ಅವರಿಂದ ಪ್ರಶಸ್ತಿ ಪ್ರದಾನವಾದ ಅಮೃತ ಗಳಿಗೆ. ರಾಷ್ಟ್ರದಾದ್ಯಂತ ದೂರದರ್ಶನದ ನ್ಯಾಷನಲ್ ವಾಹಿನಿಯಿಂದ ಅದರ ಲೈವ್ ಕವರೇಜ್. ಯಾವುದೋ ದೇವಲೋಕದಲ್ಲಿದ್ದ ರಸಾನುಭೂತಿ ನನ್ನದಾಗಿತ್ತು. ಸಹಸ್ರಾರು ಮಕ್ಕಳು ನೆನಪಾದರು. ಇದು ಅವರು ಕೊಟ್ಟ ಪ್ರಶಸ್ತಿ ಎಂದು ಪುಳಕಿತಳಾದೆ ಪುನೀತಳಾದೆ ಆ ಹೊತ್ತು.

ಸ್ನೇಹಗಾನ ನನ್ನ ಮಕ್ಕಳ ಕಥನಕವನ ಸಂಕಲನ “ಹೋಗುವೆ ನಾನು ಶಾಲೆಗೆ” ಈ ಶೀರ್ಷಿಕೆಯಲ್ಲಿ ಪ್ರಕಟವಾಯಿತು. ಇದಕ್ಕೆ ನಾಡಿನ ಪ್ರಸಿದ್ದ ಕವಿ ಡಾ ಜಿ ಎಸ್ ಶಿವರುದ್ರಪ್ಪನವರು ಮುನ್ನುಡಿ ಬರೆದು ಹರಸಿದರು. ಇದು ನನಗೆ ಮಕ್ಕಳ ಕಾಣಿಕೆಯೇ. ಈಗಲೂ ನನ್ನ ಬದುಕಿನುದ್ದಕ್ಕೂ ಮಕ್ಕಳು ಸದಾ ಭಾವನಾತ್ಮಕವಾಗಿ ಸಂಚರಿಸುತ್ತಿರುತ್ತಾರೆ.
ನಮ್ಮ ಸಹೋದ್ಯೋಗಿಗಳಾಗಿ ನನ್ನ ಕಲ್ಪನೆಯ ಹುಚ್ಚಿಗೆ ತಾವು ಮರುಳಾಗಿ ಅಹರ್ನಿಶಿ ಅಂತಃಕರಣ ಪೂರ್ವಕವಾಗಿ ಸಹಕರಿಸಿದ ಎಚ್ ಆರ್ ಇಂದ್ರಾಣಿ ಹಾಗು ಬಿ ವಿ ಮೋಹನ ಈ ಆತ್ಮೀಯರನ್ನು ನಾ ಹೇಗೆ ಮರೆಯಲಿ? ಇವರಿಬ್ಬರು ಆಕಾಶವಾಣಿಯ ಜನಪ್ರಿಯ ಉದ್ಘೋಷಕರಾಗಿದ್ದವರು.
ಇಂದ್ರಾಣಿ ಇಂದು ನಮ್ಮೊಂದಿಗಿಲ್ಲವಾದರೂ ಆಕೆಯ ಸಂಭ್ರಮ, ಗೆಲುವಿನ ಓಡಾಟ, ಪ್ರತಿಭಾ ಸಾಮರ್ಥ್ಯ ನನ್ನ ಕಣ್ಣುಂದೆ ಬೆಳಕಂತೆ ನಿಚ್ಚಳವಾಗಿದೆ. ಆಕೆಗೆ ಈ ಸಂಗತಿ ತಲುಪುವ ಹಾಗಿದ್ದರೆ ಅಲ್ಲೇ ಖುಷಿಪಟ್ಟಾರು ಎಂಬುದು ನನ್ನ ನಂಬಿಕೆ. ಆ ದಿನಗಳಲ್ಲಿ ನಮ್ಮ ಅಪೂರ್ವ ಸ್ನೇಹದ ಒಡನಾಟ, ಕಳಕಳಿ ಕಾರ್ಯಕ್ರಮದ ರಸಾಸ್ವಾದವನ್ನು ವಿಸ್ತರಿಸಿತು.
ಬಾನುಲಿಯಲ್ಲಿ ಮಕ್ಕಳ ಕಾರ್ಯಕ್ರಮದ ನಿರ್ಮಾಪಕಿಯಾಗಿ ನಾ ಸವಿದ ಹೋಳಿಗೆ ಹೂರಣವನ್ನು ನನ್ನ ಜೋಳಿಗೆಯಿಂದ ಹಂಚಿರುವೆ. ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟು ಈ ಲೇಖನಮಾಲೆಯನ್ನು ಚಂದಗಾಣಿಸಿದ ಅವಧಿಯ ಮುಖ್ಯ ಸಂಪಾದಕರಾದ ಜಿ ಎನ್ ಮೋಹನ ಅವರಿಗೆ ಮತ್ತು ಅವರ ಬಳಗಕ್ಕೆ ನಾನು ಕೃತಜ್ಞೆ.









ಸಂತಸದ ವಿಚಾರ. ಅಮೋಘ ಸಾಧನೆ. ಸವಿಯಾದ ಬರಹ