
ಎಸ್ ಸಾಯಿಲಕ್ಷ್ಮಿ
ದೃಶ್ಯಕಾವ್ಯಕೃತಿಯಾಗಿ ಸ್ನೇಹಗಾನ
ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ ಕೈಸೇರಿ ಮೆಚ್ಚುಗೆ ಗಳಿಸಿದೆ.
ಬಾನುಲಿ ಮಾಧ್ಯಮದಲ್ಲಿ ಅನೇಕ ಬಗೆಯ ನುಡಿ ಪ್ರಯೋಗ, ಮಕ್ಕಳ ಅತ್ಯದ್ಬುತ ರಂಗಪ್ರಯೋಗಕ್ಕೆ ಮುನ್ನುಡಿ ಬರೆದಿರುವ ಸಾಯಿಲಕ್ಷ್ಮಿ. ಎಸ್ ಇವರು ತಮ್ಮ ರಚನೆ ಮತ್ತು ಪ್ರಸ್ತುತಿಯ ಮಕ್ಕಳ ಗೀತರೂಪಕ “ಸರ್ಕಸ್ ಆನೆನಲ್ಲಿ” ಇದಕ್ಕಾಗಿ ಆಕಾಶವಾಣಿ ಕೊಡಮಾಡುವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬಾನುಲಿಯ ತಮ್ಮ ಆಸಕ್ತಿದಾಯಕ ವೃತ್ತಿಕಾಯಕದಲ್ಲಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪೂರೈಸಿರುವ ಸಾಯಿಲಕ್ಷ್ಮಿ ಇವರಿಗೆ ಸಂಗೀತ, ಸಾಹಿತ್ಯ ಹಾಗೂ ತೋಟಗಾರಿಕೆ ಪ್ರಿಯ ಕ್ಷೇತ್ರಗಳು. ಅಪಾರ ಮನ್ನಣೆ ಪಡೆದ “ಹೂಬತ್ತಿ” ಇವರ ಮೊದಲ ಕಾದಂಬರಿ.
| ಕಳೆದ ಸಂಚಿಕೆಯಿಂದ |
ಹಿಂದಿನ ದಿನಪೂರ್ತಿ ಆಕಾಶವಾಣಿಯ ಮ್ಯೂಸಿಕ್-2 ಸ್ಟುಡಿಯೋದಲ್ಲಿ ಸರಸ್ವತಿ ದೇವಿಯ ಪ್ರತಿಮೆಯೆದುರು ಹಾಡು ಮಾತಿನಿಂದ ಸಿಂಗಾರಗೊಂಡ ಸ್ನೇಹಗಾನ ಗೀತರೂಪಕ ಮಾರನೆಯ ದಿನವಿಡೀ ಸಂಕಲನದ ಬೆಡಗಿನಿಂದ ಅಲಂಕಾರಗೊಂಡು ಸುಮಾರು ಇಪ್ಪತೈದು ನಿಮಿಷದ ರೂಪಕವಾಗಿ ಪರಿವರ್ತನೆ ಕಂಡಿತು. ರಾಮನ್ ರಾಗ ಸಂಯೋಜನೆ ಅದೆಷ್ಟು ಸೊಗಸಾಗಿತ್ತೆಂದರೆ ನಮಗೆ ಅರಿವಿಲ್ಲದೆಯೇ ನಮ್ಮ ಕಾಲುಗಳು ತಾಳ ಹಾಕುತ್ತಿದ್ದವು.
ಮಕ್ಕಳ ಇನಿದನಿಯ ಗಾಯನಕ್ಕೆ ಮನ ಸಂಭ್ರಮದಿಂದ ನರ್ತಿಸುತ್ತಿತ್ತು. ನಾನು ಎಡಿಟಿಂಗ್ ನಲ್ಲಿದ್ದರೆ ರಾಮನ್ ಆಗಾಗ ಬಂದು “ಎಲ್ಲಿಯವರೆಗೆ ಬಂತು ಮೇಡಂ?” ಎಂದು ವಿಚಾರಿಸುವರು. “ಈಗ ಮಗು ಮಯೂರಿ ಸ್ಕೂಲ್ ದೃಶ್ಯ. ಅಮ್ಮ ಹಕ್ಕಿ ಆಹಾರ ಹುಡಕತಾ ಹಾರತಿದೆ ರಾಮನ್. ಮಗು ಹಕ್ಕೀನ ಎಷ್ಟು ಪ್ರೀತಿಯಿಂದ ಕರೀತಿದೆ ನೋಡಿ” ಎಂದರೆ ತಲೆಯೆತ್ತಿ ಮೇಲೆ ನೋಡುತ್ತಿರುವಂತೆ ನಟಿಸಿದ ಅವರ ಕೀಟಲೆ ಹೀಗೆ “ಏನೂ ಕಾಣ್ತಿಲ್ಲ. ಬರೀ ಸ್ಟುಡಿಯೋ ಸೀಲಿಂಗ್. ನೋಡು ಅಂದರೆ.. ನಿಮಗೆ ಹಕ್ಕಿ ಮಗು ಎಲ್ಲ ಕಾಣ್ತಿದೆ. ಕೇಳಸಿ ಮೇಡಂ”. ಸರಿ ಅಲ್ಲಿಯವರೆಗೂ ಜೋಡಿಸಿದ ಮಾತು ಹಾಡು ಪ್ಲೇ ಮಾಡುವುದು. ಅವರ ಮೊಗದಲ್ಲೂ ಆನಂದ.

ಮಾಲತಿ ಶರ್ಮಾ ಅವರಿಗೆ ವಿವಿದ ಭಾರತಿಯಲ್ಲಿ ಅನೌನ್ಸ್ ಮೆಂಟ್ ಡ್ಯೂಟಿ. ಅವರು ಅಲ್ಲಿ ಒಂದು ಹಾಡು ಪ್ಲೇ ಮಾಡಿ ಇಲ್ಲಿ ಕೇಳಲು ಕದ್ದುಮುಚ್ಚಿ ಬರುವರು. ಕಡೆಗೆ “ಇಲ್ಲ ಮೇಡಂ ಹನ್ನೆರಡು ಗಂಟೆಗೆ ಬಾಂಬೆ ವಿವಿಧ ಭಾರತಿ ರಿಲೇ ಶುರುವಾಗತ್ತೆ. ಅಗ ಹೇಳಿಬಿಟ್ಟು ಬಂದು ಬಿಡತೀನಿ. ನಿರಾಳವಾಗಿ ನಿಮ್ಮ ಜೊತೆ ಮುಗಿಯೋವರೆಗೂ ಇರಬಹುದು”. ವೈದ್ಯರು ಒಂದು ಆಪರೇಷನ್ ಪೂರೈಸಿ ಮತ್ತೊಂದು ಆಪರೇಷನ್ ಥೀಯೆಟರ್ ಹೊಕ್ಕಂತೆ ಅಥವಾ ನಡುನಡುವೆ ಮತ್ತೊಂದು ರೋಗಿಯ ಕ್ಷೇಮ ನೋಡಿ ಬಂದಂತೆ ನಮ್ಮ ಕೆಲಸವಿತ್ತು ಅಂದು.
ಕಾರ್ಯಕ್ರಮದ ಉದ್ದಕ್ಕೂ ರಾಮನ್ ಕೊಳಲಿನ ಮೂಲಕವೂ ಇಂಪು ತುಂಬಿದ್ದರು. ಬೇಸರ ಆಯಾಸ ಕಾಣದೇ ಕಾಣದು. ಅಂತಹ ಖುಷಿ ವಾತಾವರಣ. ಊಟ ತಿಂಡಿ ಮಾಡಿದೆವೋ ಇಲ್ಲವೋ ಗೊತ್ತಿಲ್ಲ. ಮಧ್ಯೆಮಧ್ಯೆ ಕಾಫಿ ಟೀ ಸಮರ್ಪಯಾಮಿ ನಡೆಯುತ್ತಿತ್ತು. ಕಡೆಗೂ ಸ್ನೇಹಗಾನ ರೆಕ್ಕೆ ಪುಕ್ಕ ತೊಟ್ಟು ಬಾನುಲಿಯ ಪ್ರಸಾರದ ಬಾನಿಗೆ ಹಾರಲು ಸಿದ್ಧವಾಯಿತು. ಒಮ್ಮೆ ಪೂರ್ತಿ ಕೇಳಿ ಕುಣಿದಾಡಿಬಿಟ್ಟೆವು. ಮಾಲತಿಯೇ ನಿರೂಪಕಿ. ಜೇನುದನಿ ಆಕೆಯದು.
ಮಕ್ಕಳ ಮೋಹಕ ಮುದ್ದು ಮುಗ್ಧಲೋಕ ಆಕೆಯ ಪ್ರಸ್ತುತಿಯಲ್ಲಿ ಅದ್ಭುತವಾಗಿ ಅರಳಿತ್ತು. ಒಂದು ಇಡೀ ದಿನ ಹಿಡಿಯಿತು. ಮಾರನೆಯ ದಿನ ನಮ್ಮ ಅಂದಿನ ಡೈರೆಕ್ಟರ್ ಆಗಿದ್ದ ಎಚ್ ಆರ್ ಕೃಷ್ಣಮೂರ್ತಿ ಅವರಿಗೆ ಕೇಳಿಸುವ ಅವರು ಏನಾದರೂ ಸುಧಾರಣೆ ಬಯಸಿದರೆ ಮಾಡಬೇಕಾದ ಜವಾಬ್ದಾರಿ ನನ್ನದಾಗಿತ್ತು. ಅವರು ಮೊದಲೇ ಮಧ್ಯಾಹ್ನ ಕೇಳಲು ಬರುವುದಾಗಿ ಸಮಯ ಕೊಟ್ಟಿದ್ದರು. ನಾನು ಡ್ರಾಮಾ ಸ್ಟುಡಿಯೋದಲ್ಲಿ ಜಾಗ ಹಿಡಿದಿದ್ದೆ. ಅವರಿಗೆ ನನ್ನದೇ ಸ್ಕ್ರಿಪ್ಟ್ ಎಂದು ಹೇಳಿರಲಿಲ್ಲ.
ಸ್ಟೇಜ್ ಕಾರ್ಯಕ್ರಮಕ್ಕೆ ಭರದಿಂದ ಸಿದ್ಧತೆ ನಡೆದಿದೆಯೆಂದು ಮಾತ್ರ ಗೊತ್ತಿತ್ತು. ನಮ್ಮ ಕಾರ್ಯಕ್ಷೇತ್ರದಲ್ಲಿ ಪ್ರತಿದಿನ ಬೆಳಿಗ್ಗೆ ಮೀಟಿಂಗ್ ನಲ್ಲಿ ಮಾತ್ರ ಕಾರ್ಯಕ್ರಮ ಅಧಿಕಾರಿಗಳ ಭೇಟಿ ನಿರ್ದೇಶಕರೊಂದಿಗೆ. ಅನಂತರ ನಮ್ಮ ಲೋಕ ಬೇರೆ. ನಮ್ಮ ನಿರ್ದೇಶಕರಾದ ಎಚ್ ಆರ್ ಕೆ ಸ್ವಭಾವತಃ ಪ್ರಕೃತಿ ಪ್ರಿಯರು, ಮೇರು ಪ್ರತಿಭಾವಂತರು. ಸಂಪನ್ನರು. ಅವರು ಹೇಳಿದ ಸಮಯಕ್ಕೆ ಸರಿಯಾಗಿ ಸ್ಟುಡಿಯೋಗೆ ಅವರ ಸಹಚರರಾದ ಶ್ರೋತೃ ಸಂಶೋಧನಾಧಿಕಾರಿ ಎ ಎಸ್ ಚಂದ್ರಮೌಳಿ ಹಾಗು ನಮ್ಮ ಡೆಪ್ಯೂಟಿ ಡೈರೆಕ್ಟರ್ ಗುಣಶೇಖರ ಅವರೊಡಗೂಡಿ ಕೇಳಲು ಬಂದರು.
ಕೊಳಲಿನ ಮಧುರ ಆಲಾಪದಿಂದ ಆರಂಭವಾಗುವ ಸ್ನೇಹಗಾನ ಮಾಲತಿಯ ನಿರೂಪಣೆಗೆ ಹಿನ್ನೆಲೆಯಾಗಿ ಹರಿದು ಮುಂದಿನ ಗೀತೆಗೆ ಫೇಡ್ ಔಟ್ ಆಗಿ ಮತ್ತೆ ಮಕ್ಕಳ ಸುಮಧುರ ಉಲ್ಲಾಸದ ದನಿಗೆ ಲೀಡ್ ಅಗುತ್ತದೆ. ಇದೆಲ್ಲ ನಿರ್ಮಾಣದ ತಂತ್ರಗಾರಿಕೆ. ಜೊತೆಜೊತೆಗೆ ಹಕ್ಕಿಗಳ ಕಲರವದ ಮಕ್ಕಳ ಗಲಾಟೆಯ ಸೌಂಡ್ ಎಫೆಕ್ಟ್ಸ್ ಪರಿಣಾಮಕಾರಿಯಾಗಿ ಕತೆಯ ಸಹಜತೆಯನ್ನು ಸೃಷ್ಟಿಸುವಲ್ಲಿ ಸಹಕಾರಿಯಾಗಿದ್ದವು.

ನಾವು ಸಾಮಾನ್ಯವಾಗಿ ಪ್ರೊಡಕ್ಷನ್ ಗೆ ಒಂದು ಸ್ಕ್ರಿಪ್ಟ್ ಪ್ರತ್ಯೇಕವಾಗಿ ತೆಗೆದಿಟ್ಟು ಅದರಲ್ಲಿ ಬೇಕಾದ ಎಫೆಕ್ಟ್ಸ್ ನಮೂದಿಸಿ ಎಡಿಟಿಂಗ್ ಸಮಯದಲ್ಲಿ ಅವನ್ನೆಲ್ಲ ಹುಡುಕಿ ಕೇಳಿ ಮಾರ್ಕ್ ಮಾಡಿ ಇಟ್ಟುಕೊಂಡಿರುತ್ತೇವೆ. ಇದರಿಂದ ನಮಗೆ ಎಡಿಟಿಂಗ್ ಸಮಯದಲ್ಲಿ ಎಫೆಕ್ಟ್ಸ್ ಹುಡುಕುವ ಕೆಲಸ ತಪ್ಪಿ ಸಮಯದ ಉಳಿತಾಯವಾಗುವುದಲ್ಲದೆ ಕಿರಿಕಿರಿಯೂ ತಪ್ಪುವುದು.
ಸ್ಟುಡಿಯೋದಲ್ಲಿ ಕುಳಿತು ಕಿವಿಗೊಟ್ಟ ನಮ್ಮ ಮೂವರು ಅಧಿಕಾರಿಗಳು ತಾಳ ಹಾಕುತ್ತ ತಲೆದೂಗುತ್ತ ಸ್ನೇಹಗಾನವನ್ನು ಧ್ಯಾನಸ್ಥಿತಿಯಲ್ಲಿ ಅನುಭವಿಸುತ್ತಿದ್ದರು. ಮೊದಲ ಹೆಜ್ಜೆಯಲ್ಲೇ ಹಿಟ್ ಆಗಿದ್ದು ನನಗೆ ಗೊತ್ತಾಯಿತು. ಕಾರ್ಯಕ್ರಮ ಪೂರ ಆಲಿಸಿದ ಎಚ್ ಆರ್ ಕೆ “ಏನ್ರೀ ಸಾಯಿಲಕ್ಷ್ಮಿ ಮಗು ಮಯೂರಿ ಹಕ್ಕಿ ಮರಿಗೆ ಬರೀ ಇಕೋ ಫ್ರೆಂಡ್ಲಿ ತಿಂಡಿಗಳನ್ನೇ ಮನೆಯಿಂದ ತಂದುಕೊಡತ್ತೆ.
ದೋಸೆ, ಚಪಾತಿ ಕೊಬ್ಬರಿಮಿಠಾಯಿ ಎಲ್ಲ ಬಂದಾಯ್ತಲ್ಲ. ತುಂಬಾ ಚೆನ್ನಾಗಿದೆ. ಒಳ್ಳೆ ಮೆಸೇಜ್ ಇದೆ. ಮ್ಯುಸಿಕ್ ಸಂಯೋಜನೆ ಮಕ್ಕಳ ದನಿ ಎಲ್ಲ ಒಂದಕ್ಕಿಂತ ಒಂದು ಸ್ಪರ್ಧೆಗೆ ನಿಂತ ಹಾಗಿದೆ. ನಮ್ಮ ಆರ್ಟಿಸ್ಟ್ ಗಳ ನುಡಿಸಾಣಿಕೆ ಕೇಳಬೇಕಾ. ಸ್ಟೇಜ್ ಗೆ ಹೇಳಿ ಬರೆಸಿದ ಹಾಗಿದೆ” ಎಂದು ಅಭಿಮಾನದ ಮಾತುಗಳನ್ನಾಡಿದರು. ಇನ್ನು ಚಂದ್ರಮೌಳಿಯವರು “ಏನ್ರೀ ಎಚ್ ಎಸ್ ವೆಂಕಟೇಶಮೂರ್ತಿಯವರ ಕಡೆ ಬರೆಸಿದಿರಾ ಸ್ಕ್ರಿಪ್ಟ್?” ಇಲ್ಲವೆಂದು ತಲೆಯಾಡಿಸಿದೆ.
ನನಗೆ ನಾನೇ ಬರೆದಿದ್ದು ಎಂದು ಹೇಳಲು ಸಂಕೋಚ. ಗುಣಶೇಖರ ಬಾಯಿ ಬಿಡಿಸಿದರು. “ರೇಡಿಯೋಗೆ ಸ್ಟೇಜ್ ಗೆ ಎರಡಕ್ಕೂ ಒಪ್ಪೋ ಸ್ಕ್ರಿಪ್ಟ್. ಯಾರನ್ನ ಹುಡುಕಿ ಬರೆಸಿದಿರಿ? ಕಾನ್ ಸೆಪ್ಟ್ ಕೊಟ್ಟರೂ ಹೀಗೆ ಬರೆಯೋದು ಸುಲಭಾನಾ? ಹೇಳಿ ಯಾರು ಬರೆದಿರೋದು” ನಾನು ವಿಧಿಯಿಲ್ಲದೆ ಬಾಯಿಬಿಟ್ಟೆ. ಆ ಮೂವರು ಮೇಲಾಧಿಕಾರಿಗಳಿಗೂ ಆಶ್ಚರ್ಯ, ಆನಂದ ಒಂದೇ ಕಾಲಕ್ಕೆ.
ಆ ಹೊಗಳಿಕೆಗೆ ತಲೆತಗ್ಗಿಸಿದ ನಾನು ತಲೆಯೆತ್ತಿ ಕೇಳಿದೆ. “ಈ ಕಾರ್ಯಕ್ರಮ ಸ್ಟೇಜ್ ಗೆ ಆಗಬಹುದಾ?”. ಎಲ್ಲರ ಪರವಾಗಿ ಎಚ್ ಆರ್ ಕೆ ” Excellent Program. Concept and visualisation extraordinary. Well done Please go ahead. All the best” ಎಂದು ಹುರಿದುಂಬಿಸಿ ತಮ್ಮ ಚೆಂಬರ್ ಗೆ ಹೆಜ್ಜೆ ಹಾಕಿದ ನೆನಪು ಇನ್ನು ಹಸಿರಾಗಿದೆ.

ಮುಂದಿನ ಹಂತ ಸ್ನೇಹಗಾನಕ್ಕೆ ನೃತ್ಯದ ವೇಷ ತೊಡಿಸಬೇಕು. ಜಯಾ ಎಂಬ ನಾಟ್ಯ ಗುರು ಸ್ನೇಹಗಾನದ ರೆಕಾರ್ಡಿಂಗ್ ಕೇಳಿ ಸ್ಕ್ರಿಪ್ಟ್ ಪಡೆದುಕೊಂಡರು. ಅವರ ಬಳಿ ನೃತ್ಯ ಕಲಿಯಲು ಅನೇಕ ಮಕ್ಕಳು ಬರುತ್ತಿದ್ದರಿಂದ ಅವರು ಕಲಿಸಲು ಅನುಕೂಲವಿತ್ತು. ಜಯಾ ಬಹಳ ಸಂತೋಷದಿಂದ ಒಪ್ಪಿಕೊಂಡರು. ಕೂಡಲೇ ಕೊರಿಯೋಗ್ರಫಿ ಪರಿಕಲ್ಪನೆ ಅಣಿ ಮಾಡಿ ಮಕ್ಕಳಿಗೆ ಅಭ್ಯಾಸವನ್ನು ಪ್ರಾರಂಭಿಸಿದರು. ಇನ್ನು ಅಮ್ಮನ ಪಾತ್ರ ವೇದಿಕೆಯ ಮೇಲೆ ತಾವೇ ನಿರ್ವಹಿಸುವುದಾಗಿ ಮಾಲತಿ ಶರ್ಮಾ ತಿಳಿಸಿದರು.
ಹಕ್ಕಿಮರಿ ಪಾರ್ಕ್ ನಲ್ಲಿ ಭೇಟಿಯಾಗುವೆನೆಂದು ನಿರಾಸೆಗೊಳಿಸಿದ ಮಗು ಮಯೂರಿ ಮಳೆಯಲ್ಲಿ ನೆನೆದು ಅದ್ದು ಮುದ್ದೆಯಾಗಿ ಮನೆಗೆ ಬಂದವಳಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಆ ಸನ್ನಿವೇಶದಲ್ಲಿ ಅಮ್ಮನಾಗಿ ಬಂದು ಔಷದಿ ಹಾಕಿ ಸಂತೈಸುವ ತಾಯಿಯ ಪಾತ್ರದಲ್ಲಿ ಮಾಲತಿ ಶರ್ಮಾ ಕಾಣಿಸಿಕೊಳ್ಳಬೇಕು. ಚಿಕ್ಕ ಆದರೆ ಪ್ರಭಾವಶಾಲಿ ರೋಲ್. ನಾನು ನೆಮ್ಮದಿಯಾಗಿ ನನ್ನ ಮಲ್ಟಿ ಟಾಸ್ಕಿಂಗ್ ಕಡೆ ದೃಷ್ಡಿ ಹರಿಸಿದೆ.
ಸ್ನೇಹಗಾನದ ನೃತ್ಯ ಸಂಯೋಜನೆಯ ರಿಹರ್ಸಲ್ ನೋಡುವುದಿತ್ತು. ಆಗಷ್ಟೇ ಜಯಾ ತರಬೇತಿ ಶುರು ಮಾಡಿದ್ದರಿಂದ ಧಾವಂತವಿರಲಿಲ್ಲ. ಟೇಬಲ್ ಕೆಲಸದ ಕರೆಸ್ಪಾಂಡೆನ್ಸ್ ಗಮನಿಸಬೇಕಿತ್ತು. ಇನ್ ವಿಟೇಷನ್ ಕೈಸೇರಿದೊಡನೆ ವಿಳಾಸದ ಪಟ್ಟಿ ನಮ್ಮ ಡಿಸ್ ಪ್ಯಾಚ್ ಸೆಕ್ಷನ್ ಗೆ ನೀಡಿ ಅವರನ್ನು ಕೆಲಸಕ್ಕೆ ಹಚ್ಚಬೇಕಿತ್ತು. ಒಂದು ಮಧ್ಯಾಹ್ನ ಏನೋ ಕರ್ತವ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ನೇಹಗಾನ ಕಣ್ಣಮುಂದೆ ತೆರೆದುಕೊಂಡಿತು.
ಗೀತರೂಪಕ ಅದ್ಭುತವಾಗಿ ಸಿದ್ದವಿದೆ ಜಯಾ ನೃತ್ಯ ಸಂಯೋಜನೆಯೂ ಮಾತನಾಡುವಂತಿಲ್ಲ. ಆದರೆ ವೇದಿಕೆಯ ಮೇಲೆ ಆ ಸುಂದರ ಪ್ರಾಕೃತಿಕ ವಾತಾವರಣ ಮೂಡಿಸಬೇಕು. ಒಂದು ಕಡೆ ಶಾಲೆ ಬದಿಯಲ್ಲೇ ಮಯೂರಿ ಮತ್ತು ಮಕ್ಕಳು ಆಟವಾಡುವ ಸ್ಥಳ. ತುಸು ಓರೆಗೆ ಹಕ್ಕಿಮರಿಯ ಮನೆ ಅದೇ ಮರ ಅದರ ಮೇಲೆ ಗೂಡು. ಕಡೆಯ ದೃಶ್ಯದಲ್ಲಿ ಮಯೂರಿ ಜ್ವರ ಪೀಡಿತಳಾಗಿ ಮಲಗಿರುವ ಅವಳ ಮನೆ ಇಷ್ಟನ್ನು ವೇದಿಕೆಯ ಮೇಲೆ ಬಿಂಬಿಸಬೇಕು.
ಮಾಲತಿ ಶರ್ಮಾ ಪತಿ ಸುಧಿಂದ್ರ ಶರ್ಮಾ ಬೆಂಗಳೂರು ವಿಶ್ವವಿದ್ಯಾಲಯದ ಡ್ರಾಮಾ ವಿಭಾಗದ ಪ್ರಮುಖರು ಸ್ವತಃ ರಂಗಭೂಮಿ ಹಿನ್ನೆಲೆಯವರು. ಹೀಗಾಗಿ ಮಾಲತಿಯೊಡನೆ ಸ್ಟೇಜ್ನ್ನು ಹಸಿರಿನಿಂದ ಸಿಂಗರಿಸುವ ಬಗ್ಗೆ ಚರ್ಚಿಸಿದೆ. ಅವರು ಪತಿಯೊಡನೆ ಈ ವಿಷಯ ಮಾತನಾಡಿ ಅವರಿತ್ತ ಸಲಹೆ ಹಂಚಿಕೊಂಡರು “ಶರ್ಮಾ ಹೇಳತಾರೆ ಎಲ್ಲವೂ ಸಾಂಕೇತಿಕವಾಗಿ ತೋರಿಸಿದರೆ ಸಾಕು ಪ್ರೇಕ್ಷಕರಿಗೆ ಅರ್ಥವಾಗತ್ತೆ. ಒಂದು ಐದಾರು ಚಿಗುರು ಎಲೆ ಇರೂ ಕೊಂಬೆಗಳನ್ನ ತಂದಿಟ್ಟರೆ ಅದು ಮರ ಅಷ್ಟೇ ಅಂದರು ಮೇಡಂ” ನಮ್ಮ ಮಕ್ಕಳಿಗೆ ಅದನ್ನೇ ಮರ ಎಂದು ಒಪ್ಪಿಸಲು ಸಾಧ್ಯವೇ? ಅವರದು ಬೆರಗಿನ ಲೋಕ ಅಲ್ಲಿ ಕನಸುಗಳು ಜೀವಂತವಾಗಿ ನಾಟ್ಯವಾಡಬೇಕು.

ಮರದ ಸುತ್ತಲಿನ ಕತೆ ಹೇಳಿ ಕೊಂಬೆ ತೋರುವುದು ಸರಿಯೇ. ಅವರಿಗೆ ಭ್ರಮನಿರಸನವಾಗುವುದಿಲ್ಲವೇ? ಈ ಆಲೋಚನಾ ತರಂಗಗಳಲ್ಲಿ ಹೊಳೆದ ವಿಚಾರ “ಅರೆ ಲೈವ್ ಮರಾನೆ ಯಾಕೆ ತರಿಸಿಡಬಾರದು? ಆಲದ ಮರವೆ ಅಲ್ಲಿ ಪ್ರಸ್ತಾಪವಾಗಿರುವುದು” ಈ ಯೋಚನೆ ಹುಟ್ಟಿದ್ದೇ ತಡ ಅರಣ್ಯ ಭವನದ ಮುಖ್ಯಸ್ಥರೊಡನೆ ಸಂಪರ್ಕ ಸಾಧಿಸಿದೆ. ಸ್ನೇಹಗಾನದ ಸನ್ನಿವೇಶ ವಿವರಿಸಿ ಬೇಡಿಕೆ ಮುಂದಿಟ್ಟೆ. ಮಕ್ಕಳ ಮೋಹಕ ವೇದಿಕೆ.
ಕಾರ್ಯಕ್ರಮ ಆಯೋಜಿಸುತ್ತಿರುವುದು ಆಕಾಶವಾಣಿಯಂತಹ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ. ನನ್ನ ಬೇಡಿಕೆಗೆ ಅವರು ಸಂತೋಷದಿಂದ ಸ್ಪಂದಿಸಿದರು. “ಮೇಡಂ ನಮಗೊಂದು official letter ಕಳಿಸಿ. ಇನ್ನು ಏನಾದರೂ ಬೇಕಿದ್ದರೂ ಸೇರಿಸಿ. ವ್ಯವಸ್ಥೆ ಮಾಡಸತೀನಿ” ಎಂದರು ಆ ಕ್ರಿಯಾಶೀಲ ಅಧಿಕಾರಿ.
ಅಂದಿನಿಂದ ನನ್ನ ಕಲ್ಪನೆಯ ತುಂಬಾ ವೇದಿಕೆಯೇ ಅದರ ಮೇಲೆ ಆ ಆಲದ ವೃಕ್ಷ. ಕೊಂಬೆ ಕೊಂಬೆಗಳಲ್ಲಿ ಹಕ್ಕಿಗಳ ಸಾಮ್ರಾಜ್ಯ. ಅಲ್ಲಿಂದ ಚಿಲಿಪಿಲಿ ಗಾನದ ಕಲರವ. ಕಣ್ತುಂಬ ಸ್ನೇಹಗಾನದ ದೃಶ್ಯರೂಪ ಕಲ್ಪನೆಯಲ್ಲಿ. ಕಿವಿಯ ತುಂಬಾ ಅದರ ನಾದಾನಂದ. ನಾನು ನಾನಾಗಿರಲಿಲ್ಲ. ಗಾಳಿಯಲ್ಲಿ ತೇಲಾಡುತ್ತಿದ್ದೆ.
|ಮುಂದಿನ ಸಂಚಿಕೆಯಲ್ಲಿ|






ಓದುವುದಕ್ಕೇ ಆನಂದ. ತಣಿದವರಿಗೆ ಇನ್ನೂ ಎಷ್ಷೆಷ್ಟಿತ್ತೊ