ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್‌ ಸಾಯಿಲಕ್ಷ್ಮಿ ಸರಣಿ 4: ʼಬಾನುಲಿಯ ಮಕ್ಕಳ ಮೋಹಕ ಲೋಕʼ

ಎಸ್ ಸಾಯಿಲಕ್ಷ್ಮಿ

ಸ್ನೇಹಗಾನದ‌ ನಿರ್ಮಾಣದ ಹಂತ

ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ ಕೈಸೇರಿ ಮೆಚ್ಚುಗೆ ಗಳಿಸಿದೆ‌.

ಬಾನುಲಿ ಮಾಧ್ಯಮದಲ್ಲಿ ಅನೇಕ ಬಗೆಯ ನುಡಿ ಪ್ರಯೋಗ, ಮಕ್ಕಳ ಅತ್ಯದ್ಬುತ ರಂಗಪ್ರಯೋಗಕ್ಕೆ ಮುನ್ನುಡಿ ಬರೆದಿರುವ ಸಾಯಿಲಕ್ಷ್ಮಿ. ಎಸ್ ಇವರು ತಮ್ಮ ರಚನೆ ಮತ್ತು‌ ಪ್ರಸ್ತುತಿಯ ಮಕ್ಕಳ ಗೀತರೂಪಕ “ಸರ್ಕಸ್ ಆನೆನಲ್ಲಿ” ಇದಕ್ಕಾಗಿ ಆಕಾಶವಾಣಿ ಕೊಡಮಾಡುವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಬಾನುಲಿಯ ತಮ್ಮ ಆಸಕ್ತಿದಾಯಕ ವೃತ್ತಿಕಾಯಕದಲ್ಲಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪೂರೈಸಿರುವ ಸಾಯಿಲಕ್ಷ್ಮಿ ಇವರಿಗೆ ಸಂಗೀತ, ಸಾಹಿತ್ಯ ಹಾಗೂ ತೋಟಗಾರಿಕೆ ಪ್ರಿಯ ಕ್ಷೇತ್ರಗಳು. ಅಪಾರ ಮನ್ನಣೆ ಪಡೆದ “ಹೂಬತ್ತಿ” ಇವರ ಮೊದಲ‌ ಕಾದಂಬರಿ.

|ಕಳೆದ ಸಂಚಿಕೆಯಿಂದ |

ಸ್ನೇಹಗಾನ ಮಾಲತಿ ಶರ್ಮಾ ಹೇಳಿರುವಂತೆ ವೇದಿಕೆಗೆ ‌ಉತ್ತಮ ಸಂದೇಶವುಳ್ಳ ಸೊಗಸಾಗಿ‌ ಒಪ್ಪುವ ಗೀತರೂಪಕ. ಇದರಲ್ಲಿ ಸ್ಟೇಜ್ ಅನೇಕ ಮಕ್ಕಳ ಆಗಮನ ನಿರ್ಗಮನದಿಂದ ತುಂಬಿದಂತೆ ಕಾಣುತ್ತದೆ. ಮಕ್ಕಳಿಗೆ ಪ್ರಕೃತಿಯಲ್ಲಿನ‌ ಮರಗಿಡಗಳು ಪ್ರಾಣಿಪಕ್ಷಿಗಳೆಂದರೆ ವಿಶೇಷ ಸೆಳೆತ. ಈ ರೀತಿ ನನ್ನ ಕಲ್ಪನೆಯ ಸ್ನೇಹಗಾನದ ವಾತಾವರಣವನ್ನು ಸೃಷ್ಟಿಸಲು ಸಾಧ್ಯ. ಮೊದಲು ರೆಕಾರ್ಡ್‌ ಆಗಲಿ ಆಮೇಲೆ‌ ಉಳಿದದ್ದನ್ನು ಯೋಜಿಸಿದರಾಯಿತು ಎನಿಸಿತು.

ಸ್ನೇಹಗಾನದಲ್ಲಿ ಪುಟ್ಟ ಪುಟ್ಟ ಪದ್ಯಗಳು ಮತ್ತು‌ ಮಾತು ಎರಡೂ ಕತೆಯನ್ನು ಹೇಳುತ್ತದೆ ಹೆಣೆಯುತ್ತದೆ. ನಿರೂಪಣೆ ಹಾಗು‌ ನಿರೂಪಣೆಯಲ್ಲಿ‌ ಕಾಣಿಸಿಕೊಳ್ಳುವ ಗೀತೆಗಳಿಗೆ ಮಧುರ ಪರಿಣಾಮಕಾರಿ ಧ್ವನಿಯಾಗಲು ಹೇಗೋ ಗೆಳತಿ ಮಾಲತಿ ಇರುವರು ಇನ್ನು ಸಂಗೀತ ಸಂಯೋಜನೆಗೆ ನಿಲಯದ ಕೊಳಲು‌ಮಾಂತ್ರಿಕ ಹಾಗು ಸಂಯೋಜಕ ವಿ ಕೆ ರಾಮನ್‌ ಪ್ರತಿಭೆ‌ ಬಳಸಿಕೊಳ್ಳುವುದು ಎಂದು ಪ್ಲಾನ್ ಮಾಡಿದೆ.

ಈ ಇಬ್ಬರಿಗೂ ಸಿದ್ದವಾಗಲು ಸ್ಕ್ರಿಪ್ಟ್ ಪ್ರತಿ ಕೊಟ್ಟೆ. ಆನಂದಭರಿತರಾಗಿ ಒಪ್ಪಿಕೊಂಡರು ರಾಮನ್ ಹಾರ್ಮೋನಿಯಂ ಹಿಡಿದು‌ ಸ್ಡುಡಿಯೋ ಒಂದರಲ್ಲಿ ಕೂತುಬಿಡುವರು. ಒಂದೊಂದು‌ ಪದ್ಯದ ಸನ್ನಿವೇಶ‌ ಭಾವಕ್ಕೆ ತಕ್ಕಂತೆ ರಾಗದ ಅಲಂಕಾರ ತೊಡಿಸಿ ಹಾಡಿ ತೋರುವರು ಹಾಗೆ‌ ಕೊಳಲಲ್ಲೂ ನುಡಿಸಿ ತೋರುವರು. ಮಧ್ಯಮಗತಿಯ ಲಯ‌ ಖುಷಿ ಕೊಡುವ ರಾಗಗಳು ಇವೆಲ್ಲ ಮಕ್ಕಳ‌ ಮನಗೆಲ್ಲುವಂತೆ‌ ಸಮರ್ಪಕವಾಗಿ ಬಳಸಲಾಗಿತ್ತು.

ನಾನು ನಿತ್ಯದ ಕೆಲಸ ಸ್ಟುಡಿಯೋದಲ್ಲಿ ನಿರ್ವಹಿಸುತ್ತ‌ ಅಲ್ಲಿಂದ ರಾಮನ್‌ ಕುಳಿತು ರಾಗದ‌ ಮೂಲಕ ಜೀವ ತುಂಬುತ್ತಿದ್ದ ಸ್ನೇಹಗಾನ ಕೇಳಲು ನಡುವೆ ಹಾಜರಾಗುತ್ತಿದ್ದೆ.  ಒಂದು ಘಟ್ಟದಲ್ಲಿ ರಾಮನ್ ಕಂಗಾಲಾಗಿ ಕುಳಿತಿದ್ದರು. “ಮೇಡಂ ಈ ಸಾಲು‌ ನೋಡಿ‌ ಪೂರ್ತಿ‌ ಪ್ಯಾತೋ ಇದಕ್ಕೆ ಯಾವ ರಾಗ ಹಾಕಬೇಕೋ ಹೊಳೀತಾನೇ ಇಲ್ಲ” ಅವರಿಗೂ ತರತರದ ರಾಗ ಕಲ್ಪಿಸಿ ಸಾಕಾಗಿತ್ತು. ನಾನು ಕೂಡಲೇ “ರಾಮನ್ ಇದಕ್ಕೆ ಹಿಂದುಸ್ಥಾನಿ‌ ಪದ್ಧತಿಯ ಗುಜರಿ ತೋಡಿ ಅದೇ‌‌ ಲಲತ್ ಅಂತಾರಲ್ಲ ಅದನ್ನ ಬಳಸಿ ನಮ್ಮ‌ ಕರ್ನಾಟಕ ಸಂಗೀತ‌ ಪದ್ಧತಿಯ ಶುಭ‌ ಪಂತುವರಾಳಿ” ರಾಮನ್ ಅಷ್ಟು ದೊಡ್ಡ‌ ಕಲಾವಿದ ಖುಷಿಯಿಂದ ಆ ಭಾಗಕ್ಕೆ ಆ ರಾಗವನ್ನೇ‌ ಉಪಯೋಗಿಸಿ ಸಂಯೋಜನೆ ಮಾಡಿದರು. 

ನೋವು ಮಿಡಿಯುವ ಪುಟ್ಟ ಮಗು ಮಯೂರಿಯ ಹೃದಯದ ಸಂಕಟದ ಹಾಡು. ಸಾಹಿತ್ಯ ಹೀಗಿತ್ತು  ಕರಿಮೋಡವೆ ನೀ ಮರೆಯಾಗು ಆಕಾಶವೆ ನೀ ನಗೆಚೆಲ್ಲು ನನ್ನ ಇಂದಿನ ನೋವು ಪಾಡು ಮುಟ್ಟಿಸು ಚಿನ್ನಿಗೆ ನನ್ನೀ ಗೋಳು. ಉಲ್ಲಾಸದ ಚಿಲುಮೆ ಮಯೂರಿ ಪ್ರಕೃತಿಯ ಬದಲಾವಣೆಗಳನ್ನೇ ತನ್ನ ಹಾಗು ಚಿನ್ನಿ ಮರಿಯ ಸ್ನೇಹದ ಸಂದೇಶ ವಾಹಕವಾಗುವಂತೆ ಮೊರೆ ಹೋಗುತ್ತಿದ್ದಾಳೆ. 

ಅಮ್ಮ‌ ಪಾರಿವಾಳದ ದನಿಯಾಗಿ‌ ಹಾಡಲು‌ ಮಾತಾಡಲು ಶೃತಿ ಎನ್ನುವ ಹನ್ನೆರಡು ವಯಸ್ಸಿನ ಬಾಲೆ ಸಿಕ್ಕಳು. ಆ ಮಗುವಿನ ಪ್ರಸ್ತುತಿಯಲ್ಲಿ‌ ನಮಗೆ ತಾಯಿ ಹಕ್ಕಿಗಿರಬೇಕಾದ ಒಂದು ಪ್ರಬುದ್ಧತೆ ಗೋಚರಿಸಿತು. ಕತೆಯ ಸೂತ್ರಧಾರಿಯಾಗಿ ಮಾಲತಿ ಶರ್ಮಾ ಇದ್ದಾರೆ. ಇನ್ನು ಬೇಕಾದದ್ದು ಚಿನ್ನಿಮರಿ ಹಕ್ಕಿಯ ಪಾತ್ರಕ್ಕೆ ಒಂದು ಮುದ್ದು‌ ಜೇನಸವಿ ಜಿನುಗುವ ದನಿಯುಳ್ಳ ಮಗು. 

ನಮ್ಮ ಸಂಕಲ್ಪ ಶುದ್ಧವಾಗಿದ್ದರೆ‌ ಕಾರ್ಯಸಿದ್ಧಿ ಶತಸಿದ್ಧ. ಇದು ನನ್ನ ಜೀವನದ ಅನುಭವ ಜನ್ಯ ಸಿದ್ಧಾಂತ. ಕೆಲವೊಮ್ಮೆ ನಾವು ಬಯಸಿದ್ದನ್ನು ಭಗವಂತ‌ ನಮ್ಮ‌‌ ಬಳಿಗೇ ಕಳಿಸುತ್ತಾನೆ ಎನ್ನುವುದಕ್ಕೆ ನಾನು ಮುಂದೆ ದಾಖಲಿಸುವ ಪ್ರಸಂಗವೇ ದೃಷ್ಟಾಂತ. ಸ್ಟೇಜ್‌ ಕಾರ್ಯಕ್ರಮಕ್ಕೆ ಒಂದು ತಿಂಗಳ ಸಮಯವಿತ್ತು. ಸಂಬಂಧಪಟ್ಟ ಶಾಲಾ ಮಕ್ಕಳು ಚಿಣ್ಣರ ಬಳಗದ ಸದಸ್ಯರು‌ ಎಲ್ಲ‌ ಒಳ್ಳೆಯ ರಿಹರ್ಸಲ್ ನಡೆಸುತ್ತಿದ್ದರು. ಅವರ ಸ್ಕ್ರಿಪ್ಟ್, ‌ಐಟಂ ಎಲ್ಲ‌ ನಾನು‌‌ ನೋಡಿ ಸಲಹೆ‌ ನೀಡಿದ್ದೆ. 

ಆಕಾಶವಾಣಿಯ ಸ್ನೇಹಗಾನ ನಿರ್ಮಾಣದ ಹಂತದಲ್ಲಿತ್ತು. ಅದು ಗೀತ ನೃತ್ಯ ನಾಟಕವಾಗಬೇಕಿತ್ತು. ಒಂದು‌ ಮಧ್ಯಾಹ್ನ ಅಮ್ಮ ನಾಲ್ಕು ವರುಷದ ಮಗುವಿನೊಂದಿಗೆ ನನ್ನನ್ನು‌‌ ಕಾಣಲು ಬಂದರು. ಆಕೆ‌ ಬ್ಯಾಂಕ್‌ ಉದ್ಯೋಗಿ. ತಾವು ಸುಧಾ‌ ಪದ್ಮನಾಭ ಎಂದು ತಮ್ಮ‌ ಮಗಳು ರಿತೀಷಾ‌ ಪದ್ಮನಾಭ ಎಂದು ಪರಿಚಯಿಸಿಕೊಂಡರು. ಮಗುವನ್ನು ನೇರ ಶಾಲೆಯಿಂದಲೇ‌ ಕರೆತಂದಿದ್ದರು. ಅದರ‌‌ ಮೊಗದಲ್ಲೊಂದು ದಿವ್ಯ ತೇಜಸ್ಸು. ಮುದ್ದು ಸುರಿಯುತ್ತಿತ್ತು. ಕೈಚಾಚುತ್ತಿದ್ದಂತೆ‌ ನನ್ನ ತೋಳುಗಳಲ್ಲಿ ಬಂಧಿಯಾಗಿತ್ತು ದೇವಲೋಕದ ದಿವ್ಯ ತೊರೆಯಮರಿಯಂತಿದ್ದ‌ಳು ರಿತೀಷಾ..

ಯಾರಿಗಾದರೂ‌ ಉತ್ಕಟ ಪ್ರೀತಿ ಉಕ್ಕಬೇಕು ಹಾಗಿತ್ತು ಆ ಪುಟ್ಟಬಾಲೆ. “ಮೇಡಂ‌ ನೀವು ಒಂದು ಗೀತರೂಪಕಕ್ಕೆ ಪುಟ್ಟ ಮಗೂನ ಹುಡಕತಿದೀರಿ ಅಂತಾ ತಿಳೀತು. ರಿತೀಷಾ ಮಾಲತಿ ಶರ್ಮಾ ಅವರ ಹತ್ತಿರ ಸಂಗೀತ‌ ಕಲೀತಿದಾಳೆ. ಆಗಬಹುದೇನೋ ಅನ್ನಿಸಿತು ಕರಕೊಂಡು‌ ಬಂದೆ. ನೀವೊಮ್ಮೆ‌ ಅವಳು ಹಾಡೋದು‌ ಕೇಳಬಹುದಾ” ಎಂದರು ತಾಯಿ ಸುಧಾ. “ಓ ಅದಕ್ಕೇನು ಹಾಡು ಮರಿ,” ಎಂದೊಡನೆ ರಿತೀಶಾ ಗಿಣಿಯಂತೆ ಬಾಯಿ ತೆರೆದಳು ಕುವೆಂಪು ಅವರ‌ ಕವಿತೆ ಎಂದು ಜ್ಞಾಪಕ. 

“ದೇವರ ಪೆಪ್ಪರ್ ‌ಮೆಂಟೇನಮ್ಮಾ‌ ಗಗನದೊಳು ಅಲೆಯುವ ಚಂದಿರನು”. ಆ ಇನಿದನಿಯ ಭಾವಪೂರ್ಣ ಗಾಯನಕ್ಕೆ ಎಂತಹವರು ತಲೆದೂಗಬೇಕು ಹಾಗೆ ತಲೆಬಾಗಬೇಕು ಸಹ. ಮಗುವಿಗೆ ಕೋಗಿಲೆಯ ಕಂಠ. ನಾನಂತೂ‌ ಒಂದು ಬೇರೆ‌ ಲೋಕದಲ್ಲೇ ಇದ್ದೆ. ಒಂದೇ ಸಮಸ್ಯೆ ರಿತೀಷಾಳನ್ನು ಚಿನ್ನಿಮರಿಯಾಗಿ ಬಳಸಿಕೊಳ್ಳಲು. ಮಗುವಿಗೆ ಕನ್ನಡ ಓದಲು ಬರೆಯಲು ಬಾರದು. ನನ್ನ ಸ್ನೇಹಗಾನದ ಸ್ಕ್ರಿಪ್ಟ್ ನಲ್ಲಿ ಚಿನ್ನಿಮರಿಯ ಪಾತ್ರ ದೊಡ್ಡದಿದ್ದು ಹಲವು ಗೀತೆಗಳು‌ ಮಾತು ರಿತೀಷಾಳ ದನಿಯಲ್ಲೇ‌ ಮೂಡಿಬರಬೇಕಿತ್ತು.

ಈ ಸಮಸ್ಯೆ ಸುಧಾಗೆ ಮನವರಿಕೆ ಮಾಡಿದೆ. “ಮಗು ದನಿ‌ ಕೇಳಿದರೆ ಕರಗಿ ಹೋಗಬೇಕು ಹಾಗಿದೆ. ಆದರೆ ಕನ್ನಡ ಪಾಪ ಅದಿನ್ನು ಪುಟ್ಟದು ಓದೋಕೆ ಬರೆಯೋಕೆ ಬರದೇ ಇರೋದ್ರಿಂದ ಹೇಗೆ ಮಾಡೋದು ತಿಳೀತಿಲ್ಲ”. ಅವರಿಗೂ ಸರಿ ಎನಿಸಿತು. ಹೇಳಿ ಹೊರಟರು. ಅವರು ರಿತೀಷಾಳೊಡನೆ ಸ್ಟುಡಿಯೋ ಬಾಗಿಲು ದಾಟಿ ಐದು‌ ನಿಮಿಷವಾಗಿಲ್ಲ.

ವಾಪಸ್ ಬಂದವರೇ “ಮೇಡಂ ರಿತೀಷಾಗೆ ಈ ಅವಕಾಶ ಬಿಡೋಕ್ಕೆ ಇಷ್ಟ ಇಲ್ಲ. ಹೇಗಾದರೂ ಮಾಡ್ತೀನಿ ಅಂತಿದಾಳೆ. ನೀವು ಯಾವತ್ತು ರೆಕಾರ್ಡಿಂಗ್ ಇಟ್ಟುಕೊಂಡಿದೀರಿ?” ಎಂದರು ಮಗುವೂ “ಆಂಟೀ‌ ಪ್ಲೀಸ್ ನನಗೆ ಚಿನ್ನಿಮರಿ ರೋಲ್ ಕೊಡಿ. ನಾ ಟ್ರೈ ಮಾಡ್ತೀನಿ” ರಿತೀಷಾಳ ಮೊಗದ ತುಂಬಾ ಆಸೆಯ ಮಿಂಚು.

ನನಗೇಕೋ ಆ‌ ಮಗುವಿನ‌ ಮೇಲೆ ಪೂರ್ತಿ ನಂಬಿಕೆ ಹುಟ್ಟಿತು. ಮತ್ತೊಂದು ಮಾತಾಡದೆ ಸ್ನೇಹಗಾನದ ಸ್ಕ್ರಿಪ್ಟ್ ಪ್ರತಿ‌ ಸುಧಾ ಕೈಗಿತ್ತು ರಾಮನ್ ರಾಗ ಹಾಕಿ ರೆಕಾರ್ಡ್ ಮಾಡಿದ‌ ಕ್ಯಾಸೆಟ್ ಜೊತೆಯಲ್ಲಿ ಕೊಟ್ಟು ವಿವರಿಸಿದೆ. “ಸುಧಾ ನಾಡದ್ದು ಶುಕ್ರವಾರವೇ ರೆಕಾರ್ಡಿಂಗ್‌ ಇರತ್ತೆ. ಒಂದು ಇಡೀ ದಿನ ನೀವು. ಮಗು‌ ಇಲ್ಲೇ ಇರಬೇಕಾಗತ್ತೆ. ಅದರಾಚಗೆ ಸಮಯವೇ ಇಲ್ಲ. ಸ್ಟೇಜ್ ಪ್ರೋಗ್ರಾಂ ಗೆ ಇನ್ನು ಇಪ್ಪತ್ತೇ ದಿನ‌ ಇರೋದು. ಅಷ್ಟರಲ್ಲಿ ಸ್ನೇಹಗಾನ ರೆಕಾರ್ಡ್ ಆಗಿ ಎಡಿಟ್ ಆಗಬೇಕು ಆಮೇಲೆ ಡ್ಯಾನ್ಸ್ ಗೆ‌ ಕೊರಿಯೊಗ್ರಪಿ ಆಗಬೇಕು. ಬಹಳ ಕೆಲಸ ಹಿಡಿಯುತ್ತೆ” ಸುಧಾ ಅಷ್ಟೆ‌ ವಿನಮ್ರವಾಗಿ ವಂದಿಸಿ ಆಗಬಹುದೆಂದು ತಲೆಯಾಡಿಸಿ ಮಗುವಿನ‌ ಕೈಹಿಡಿದು ಹೊರಗಡಿಯಿಟ್ಟರು. 

ಸುಧಾ ಅವರೊಡನೆ ನನ್ನ ಮಾತುಕತೆ‌ ಮಗುವಿನ ಸುಸ್ವರದ ಗಾಯನ ಉದ್ದಕ್ಕೂ ಕೇಳುತ್ತಿದ್ದ‌ ರಾಮನ್ “ಮೇಡಂ ಯಾವ ಧೈರ್ಯದ‌ ಮೇಲೆ ಅವರಿಗೆ ಸ್ಕ್ರಿಪ್ಟ್, ‌ಕ್ಯಾಸೆಟ್ ಕೊಟ್ರಿ. ಆ ಮಗೂಗೆ ಕನ್ನಡವೇ ಬರೋಲ್ಲ. ಅಪರೂಪದ‌ ಬಾಲ ಪ್ರತಿಭೆ ನಿಜ. ಅದರ ಪಾತ್ರ ದೊಡ್ಡದಿದೆ. ನಾಡಿದ್ದು‌ ಮಗು‌ ಕಲಿತು ಬರಲಿಲ್ಲ ಅಂದರೆ ಏನು‌ ಮಾಡ್ತೀರಿ. ಕೀಬೋರ್ಡ್ ರಿದಂ ಪ್ಯಾಡ್ ಗೆ ಹೊರಗಡೆಯವರನ್ನ  ಬುಕ್‌ ಮಾಡಿದೀನಿ. ಹಾಗೆ ನಮ್ಮ ಎಲ್ಲ ಮ್ಯೂಸಿಕ್ ಆರ್ಟಿಸ್ಟ್ ಗೆ‌ ಡ್ಯೂಟಿ ಹಾಕಸತಿದೀವಿ. ಇಷ್ಟೆಲ್ಲ ವಿಷಯ ಇರೋವಾಗ ಏನು‌ ಹುಡುಗಾಟಾನಾ ಮೇಡಂ?” ಹೀಗೆಂದು ನನ್ನ‌ ಜವಾಬ್ದಾರಿಯನ್ನು ನೆನಪು‌‌ ಮಾಡಿದರು ರಾಮನ್. 

“ರಾಮನ್ ನೀವು ಹೇಳಿದ್ದೆಲ್ಲ‌ ಒಪ್ಪಿದೆ. ಆದರೆ ನನಗ್ಯಾಕೋ ಚಿನ್ನಿಮರಿ ಅಂದರೆ ರಿತೀಷಾನೆ‌ ಅನ್ನೋ ಅಷ್ಟು ಮನಸ್ಸು ಸ್ವೀಕರಿಸಬಿಟ್ಟಿದೆ. ದೇವರಿದಾನೆ ಮಗು‌ ಮಾತು ನಂಬೋಣ” ಎಂದೆ. ರಾಮನ್ ಹೇಳಿದ ಹಾಗೆ ಮಕ್ಕಳ ಕಾರ್ಯಕ್ರಮಕ್ಕೆ ಕೀಬೋರ್ಡ್ ರಿದಂ ಪ್ಯಾಡ್ ಈ ವಾದ್ಯಗಳ ಬಳಕೆ ಸೊಗಸು  ಹೆಚ್ಚಿಸುತ್ತದೆ.

ಒಮ್ಮೆ ಬಂದು ಹೋಗಲು ಆ ಕಾಲಕ್ಕೆ ಅವರಿಗೆ ಸಾವಿರ ರೂಪಾಯಿ. ಮತ್ತೊಮ್ಮೆ ನಾವು ಅದೇ ಕಾರ್ಯಕ್ರಮಕ್ಕಾಗಿ ಹಣ ಕೊಟ್ಟು ಕರೆಸುವಂತಿಲ್ಲ. ಇದು ಸರ್ಕಾರದ ನಿಯಮ. ಮುರಿಯುವಂತಿಲ್ಲ. ಪೇಮೆಂಟ್ ಜಸ್ಟಿಪಿಕೇಷನ ಆಗಲೇಬೇಕು. ಪೈಸೆ ಪೈಸೆಗೂ ಲೆಕ್ಕ ನಿರ್ದೇಶಕರ ಒಪ್ಪಿಗೆ ಫೈಲ್ ಮೇಲಿರಲೇಬೇಕು. ಯಾವ ಸಮಜಾಯಶಿಗು ಜಾಗವಿಲ್ಲ.  ಹೌದಲ್ಲ ರಿತೀಷಾಳ ಬಗ್ಗೆ ನಾನೆಂತಹ ದೊಡ್ಡ ರಿಸ್ಕ್ ತೆಗೆದುಕೊಂಡಿರುವೆ.

ಯಾವ ಬೆಲೆ ತೆರಬೇಕಾದೀತೋ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಶೀರ್ಷಿಕೆ “ಕಲರವ” ಅದರಲ್ಲಿ ಆಕಾಶವಾಣಿಯ ಪ್ರಸ್ತುತಿಯಾಗಿ ಸ್ನೇಹಗಾನ ಗೀತ ರೂಪಕ ಅದರ ಪಕ್ಕಕ್ಕೆ ಲೇಖಕಿಯಾಗಿ ನನ್ನ ಹೆಸರು ಹಾಗು ಸಂಯೋಜಕರಾಗಿ ರಾಮನ್ ಹೆಸರು ರಾರಾಜಿಸುತ್ತಿದೆ. ಎಲ್ಲೂ ಯಾವುದರಿಂದಲೂ ನಾನು ತಪ್ಪಿಸಿಕೊಳ್ಳುವಂತಿಲ್ಲ. ಅಂತಿಮ ಹೊಣೆಗಾರಿಕೆ ನನ್ನದೇ. ದಿಕ್ಕು ತೋಚದಂತಹ ಸ್ಥಿತಿ. ಎರಡು ರಾತ್ರಿ ಕಣ್ತುಂಬ ನಿದ್ರೆಯಿಲ್ಲದಿದ್ದರೂ ಕೈತುಂಬ‌ ಕೆಲಸ. ಬಿಡುವು ಸಿಕ್ಕರೆ ದೇವರಲ್ಲಿ ಪ್ರಾರ್ಥನೆ. “ಹೇಗಾದರೂ ಈ ಪ್ರಸಂಗವನ್ನು ಗೆಲ್ಲಿಸು” ನಂಬಿದ ದೈವ ಕೈಹಿಡಿಯಿತು. ಶುಕ್ರವಾರ ಬೆಳಕು‌ ಮೂಡಿತು.

| ಮುಂದಿನ ಸಂಚಿಕೆಯಲ್ಲಿ |

‍ಲೇಖಕರು Avadhi

29 November, 2020

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading