
ಎಸ್. ಸಾಯಿಲಕ್ಷ್ಮಿ
ಆಕಾಶವಾಣಿಯ ಮಕ್ಕಳ ಆಮಂತ್ರಿತ ಶ್ರೋತೃಗಳ ಕಾರ್ಯಕ್ರಮದ ಬದ್ಧತೆ- ಸಿದ್ಧತೆ
ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ ಕೈಸೇರಿ ಮೆಚ್ಚುಗೆ ಗಳಿಸಿದೆ.
ಬಾನುಲಿ ಮಾಧ್ಯಮದಲ್ಲಿ ಅನೇಕ ಬಗೆಯ ನುಡಿ ಪ್ರಯೋಗ, ಮಕ್ಕಳ ಅತ್ಯದ್ಬುತ ರಂಗಪ್ರಯೋಗಕ್ಕೆ ಮುನ್ನುಡಿ ಬರೆದಿರುವ ಸಾಯಿಲಕ್ಷ್ಮಿ. ಎಸ್ ಇವರು ತಮ್ಮ ರಚನೆ ಮತ್ತು ಪ್ರಸ್ತುತಿಯ ಮಕ್ಕಳ ಗೀತರೂಪಕ “ಸರ್ಕಸ್ ಆನೆನಲ್ಲಿ” ಇದಕ್ಕಾಗಿ ಆಕಾಶವಾಣಿ ಕೊಡಮಾಡುವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬಾನುಲಿಯ ತಮ್ಮ ಆಸಕ್ತಿದಾಯಕ ವೃತ್ತಿಕಾಯಕದಲ್ಲಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪೂರೈಸಿರುವ ಸಾಯಿಲಕ್ಷ್ಮಿ ಇವರಿಗೆ ಸಂಗೀತ, ಸಾಹಿತ್ಯ ಹಾಗೂ ತೋಟಗಾರಿಕೆ ಪ್ರಿಯ ಕ್ಷೇತ್ರಗಳು. ಅಪಾರ ಮನ್ನಣೆ ಪಡೆದ “ಹೂಬತ್ತಿ” ಇವರ ಮೊದಲ ಕಾದಂಬರಿ.
|ಕಳೆದ ಸಂಚಿಕೆಯಿಂದ|
ಮಗು ಮಯೂರಿ ಹಾಗು ಪಾರಿವಾಳದ ಸಂಸಾರದ ನಡುವಿನ ಮೈತ್ರಿಯ ಸ್ನೇಹಗಾನದ ಸ್ಕ್ರಿಪ್ಟ್ ಸಿದ್ಧವಾಯಿತು. ನನ್ನ ಸಹೋದ್ಯೋಗಿ ಮಾಲತಿ ಶರ್ಮಾ ಅವರೊಡನೆ ಈ ಕಥಾವಸ್ತುವಿನ ಬಗ್ಗೆ ಚರ್ಚೆ ಮಾಡುತ್ತಿರುವಾಗ ಆಕೆಯಿಂದ ಬಂದ ಪ್ರತಿಕ್ರಿಯೆ ಇದು.
“ಮೇಡಂ ಮಕ್ಕಳಲ್ಲಿ ಒಂಟಿತನ ಹಾಗೆ ಖಿನ್ನತೆ ಎಲ್ಲೆಲ್ಲೂ ಕಾಡತಾ ಇರೋ ಜ್ವಲಂತ ಸಮಸ್ಯೆ. ಹೇಗಿದ್ದರೂ ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಟೇಜ್ ಪ್ರೋಗ್ರಾಂ ಮಾಡತಿದೀರಿ. ಈ ಗೀತ ರೂಪಕದಲ್ಲಿ visual elements ತುಂಬಿದೆ. ಇದನ್ನೇ ಸ್ಟೇಜ್ ಮಾಡಿಬಿಡಿ. ತುಂಬಾ ಚೆನ್ನಾಗಿರತ್ತೆ. ಮಕ್ಕಳು, ಪೋಷಕರು ಎಲ್ಲರ ಹೃದಯಕ್ಕೆ ತಲುಪುವ ಥೀಮ್.”
ನನಗೂ ಇದು ಒಳ್ಳೆಯ ವಿಚಾರದ ಹೊಳಹು ಯಾಕಾಗಬಾರದು? ಎನಿಸಿತು.
ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಆಕಾಶವಾಣಿಯು ಸ್ಟೇಜ್ ಕಾರ್ಯಕ್ರಮ ಪ್ರಸ್ತುತಪಡಿಸಿ ಆ ಧ್ವನಿಮುದ್ರಣದ ಅವತರಣಿಕೆಗಳನ್ನು ಮಕ್ಕಳ ದಿನಾಚರಣೆಯಂದು ಒಂದು ಗಂಟೆ ಅವಧಿಯ ರಾಜ್ಯವ್ಯಾಪಿ ಪ್ರಸಾರಕ್ಕೆ ಅಣಿಮಾಡುವುದು ಕಾಲಾನುಕಾಲದಿಂದ ನಡೆದು ಬಂದಿರುವ ಭವ್ಯಪರಂಪರೆ. ನಾನು ಮಕ್ಕಳ ಕಾರ್ಯಕ್ರಮ ನಿರ್ಮಾಪಕಿಯಾಗಿ ಸುಮಾರು ಹತ್ತು ಸ್ಟೇಜ್ ಕಾರ್ಯಕ್ರಮ ಅರ್ಪಿಸಿರುವ ಅನುಭವ. ನನಗೋ ನೆಲದ ಮೇಲೆ ಕಾಲು ನಿಲ್ಲದು. ಸದಾ ಅಂತಹ ಉಲ್ಲಾಸ ಮಕ್ಕಳ ಸಹವಾಸ.
ಸ್ಟೇಜ್ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಕನಸು. ಮೂರು ಗಂಟೆಕಾಲ ವಿವಿಧ ಶಾಲೆ, ಕೇಳುಗ ಬಳಗದ ಮಕ್ಕಳು ಮತ್ತು ಅದ್ಭುತ ಬಾಲ ಪ್ರತಿಭೆಗಳು ಜೊತೆಯಲ್ಲಿ ಆಕಾಶವಾಣಿಯ ಒಂದು ವಿಶೇಷ production ಈ ಎಲ್ಲದರ ಸಂಗಮವೇ ಮಕ್ಕಳ ವೇದಿಕೆ ಕಾರ್ಯಕ್ರಮ.

ನನಗೋ ಅಂತಿಂತಹ ಸ್ಟೇಜ್ ಆಗದು. ರವೀಂದ್ರ ಕಲಾಕ್ಷೇತ್ರವೇ ಆಗಬೇಕು. ಅಲ್ಲಿಯ ಸೌಂಡ್ ಸಿಸ್ಟಮ್ ಲೈಟಿಂಗ್, ಸ್ಟೇಜ್ ಉದ್ದ ಅಗಲ ಮಕ್ಕಳ ಓಡಾಟಕ್ಕೆ ಈ ಎಲ್ಲವೂ ಹೇಳಿಮಾಡಿಸಿದಂತಿದೆ. ಅಲ್ಲಿ ಮಕ್ಕಳಿಗೆ ಹೊರಗಡೆ ಕುಣಿದಾಡಲು ಬೇಕಾದಷ್ಡು ಜಾಗವಿದೆ. ಪಾರ್ಕಿಂಗ್ ಗೂ ಅನುಕೂಲ.
ಬೆಂಗಳೂರಿನ ಹೃದಯ ಭಾಗದಲ್ಲಿರುವುದರಿಂದ ಪಾಲುಗೊಳ್ಳುವರಿಗೆ ನೋಡಲು ಬರುವವರಿಗೆ ಎಲ್ಲರಿಗೂ ಹಿತ. ಕಾರ್ಯಕ್ರಮದ ನಂತರ ಮನೆಮುಟ್ಟಲು ಅಂತಹ ಸಮಸ್ಯೆಯಿಲ್ಲ. ಹಾಗಾಗಿ ನನಗೆ ಕಲಾಕ್ಷೇತ್ರದ ಮೇಲೆ ಕಣ್ಣು, ಮನಸ್ಸು.
ಆಕಾಶವಾಣಿಯ ಪರವಾಗಿ ಅರ್ಪಿಸುವ ಗೀತರೂಪಕದ ವಿಷಯವೇ ಇನ್ ವಿಟೇಶನ್ ಮುಖಚಿತ್ರವಾಗುವುದು. ಶಶಿಧರ್ ಎಂಬ ಕಲಾವಿದರು ನಮ್ಮ ಅಗತ್ಯಕ್ಜೆ ಕಲಾತ್ಮಕವಾಗಿ ಚಿತ್ರಿಸಿ ಕೊಡುತ್ತಿದ್ದರು. ಆ ಚಿತ್ರವೇ ಬರಹಗಾರ್ತಿಯಾದ ನನ್ನ ಕಲ್ಪನೆಯಲ್ಲಿ ಮಿಂದೆದ್ದು ಸ್ಟೇಜ್ ಆಗುವುದು. ನಮ್ಮ ಡೈರೆಕ್ಟರ್ ಅಪ್ಪಣೆಯಂತೆ ಯಾವ ಯಾವ ವಿಷಯಗಳು ಶೀರ್ಷಿಕೆಗಳು, ವಿವಿಧ ಶಾಲೆ, ಮಕ್ಕಳ ಬಳಗದ ಹೆಸರು ಹಾಗು ಕಾರಣರಾದ ಆಕಾಶವಾಣಿಯ ಲೇಖಕರ ಸಂಗೀತ ಸಂಯೊಕಜಕರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ನಮೂದಾಗಲೇಬೇಕು.
ನಾಲ್ಕಾರು ಜನ ಪ್ರೂಪ್ ತಿದ್ದಿ ಇನ್ವಿಟೇಶನ್ ರೂಪತಾಳುವುದು. ಆನಂತರ ಅದನ್ನು ಅಂಚೆಯಲ್ಲಿ ನೋಡುಗರಿಗೆ ಮುಟ್ಟಿಸುವ ವ್ಯವಸ್ತೆ. ಒಂದು ಅನೌಂಸಮೆಂಟ್ ಮೂಲಕ ನಿಲಯದ ರಿಸಪ್ಶನ್ ಕೌಂಟರ್ನಿಂದಲೂ ಆಸಕ್ತ ಸಾರ್ವಜನಿಕರಿಗೆ ಆಮಂತ್ರಣ ಪತ್ರಿಕೆ ಪಡೆದುಕೊಳ್ಳುವ ಅವಕಾಶವಿರುವುದು. ಕಲಾಕ್ಷೇತ್ರವಂತೂ ಕಾಯ್ದಿರಿಸಲು ಮೂರು ತಿಂಗಳ ಮುಂಚೆಯೇ ಅರ್ಜೆ ಸಲ್ಲಿಸಬೇಕು.
ಒಂದೂವರೆ ದಿನಕ್ಕೆ ಗೊತ್ತುಮಾಡಲಾಗುತ್ತಿತ್ತು. ಹಿಂದಿನ ದಿನ ರಿಹರ್ಸಲ್ ಆ ದಿನ ಲೈಟಿಂಗ್ನವರು ಹಾಗು ಪೋಟೋಗ್ರಾಫರ್ ಮಕ್ಕಳೊಡನೆ ಇದ್ದಾಗಲೇಬೇಕು. ಮಾರನೆಯ ದಿನ ಮಧ್ಯಾಹ್ನದವರೆಗೂ ನಮ್ಮ ಪರಿಕಲ್ಪನೆಗೆ ತಕ್ಕಂತೆ ಸ್ಟೇಜ್ ಅಲಂಕರಿಸಿ ಸಿದ್ಧಗೊಳಿಸುವುದು ನಡುವೆ ಮನೆಗೆ ಬಂದು ನಾವು ಸಿಂಗರಿಸಿಕೊಂಡು ಹೋಗುವ ಕಾರ್ಯಕ್ರಮವು ಸೇರಿರುವುದು ಸಂಜೆಗೆ ಸ್ಟೇಜ್ ಎಂದೆನಲ್ಲ. ಆರು ಗಂಟೆಗೆ ಆರಂಭ.

ರೇಡಿಯೋದವರಾಗಿ ಸಮಯ ಪರಿಪಾಲನೆಗೆ ಮತ್ತೊಂದು ಹೆಸರು ನಾವು. ಒಂದು ನಿಮಿಷ ಹೆಚ್ಚಿಲ್ಲ ಒಂದು ನಿಮಿಷ ಕಡಿಮೆ ಇಲ್ಲ. ಠಾಕೋಠೀಕಾಗಿ ಶುರು. ನಮಗೆ ಯಾರು ಮಖ್ಯ ಅತಿಥಿ ಇಲ್ಲ. ಪ್ರಾರ್ಥನೆಯು ಇಲ್ಲ. ಎರಡು ಮಕ್ಕಳು ಮುದ್ದಾಗಿ ವೇದಿಕೆಗೆ ಬಂದು ಎಲ್ಲರನ್ನು ಸ್ವಾಗತಿಸಿ ಆತ್ಮೀಯವಾಗಿ ಮಾತನಾಡುತ್ತ ಕಾರ್ಯಕ್ರಮದ ಮೊದಲ ಐಟಂಗೆ ಚಾಲನೆ ನೀಡುತ್ತಾರೆ. ಅವರಿಗೆ ಗಡಿಬಿಡಿಯಿಲ್ಲ ತಡವರಿಸುವುದಿಲ್ಲ. ರಿಹರ್ಸಲ್ ಅಷ್ಡು ಪಕ್ಕಾ ನಡುನಡುವೆ ಅವರ ಪ್ರತಿಭೆ ತೋರಲು ಅವಕಾಶವಿರುತ್ತದೆ.
ಪ್ರತಿಯೊಂದು ಪ್ರಪೋಸಲ್ ಗೂ ನಮ್ಮ ನಿರ್ದೇಶಕರ ಒಪ್ಪಿಗೆಯ ಅಂಕಿತ ಪೈಲ್ ಮೇಲೆ ಬೀಳಲೇಬೇಕು. ಅವರು ಸರ್ಕಾರದ ಒಪ್ಪಿತ ಮಿತಿಯಲ್ಲಿ ಖರ್ಚುಮಾಡಲು ಹಣ ಮಂಜೂರು ಮಾಡುತ್ತಿದ್ದರು. ಆ ದಿನಗಳಲ್ಲಿ ಅಂದರೆ ಇಪ್ಪತೈದು ವರುಷಗಳ ಹಿಂದೆಯೇ ಒಂದು ಲಕ್ಷ ರೂಪಾಯಿ ವಿನಿಯೋಗವಾಗುತ್ತಿತ್ತು. ಎಲ್ಲಕ್ಕೂ ಲೆಕ್ಕ. ಆಡಿಟ್ ಅಬಜೆಕ್ಸನ್ ಬರಬಾರದಲ್ಲ.
ಪೋಲೀಸಿನವರಿಗೆ ಸುರಕ್ಷತೆ ಕಾಪಾಡಲು ಒಂದು ಮನವಿ ಕೆಇಬಿಗೆ ಕಾರ್ಯಕ್ರಮಕ್ಕೆ ಕರೆಂಟ್ ಕಡಿತದ ಅಡಚಣೆಯೂ ಆಗದಂತೆ ನೋಡಿಕೊಳ್ಳಬೇಕೆಂದು ಕೋರಿಕೆಯ ಪತ್ರ. ಪ್ರೆಸ್ ನವರಿಗೆ ದೂರದರ್ಶನದವರಿಗೆ ಕವರೇಜ್ ಗಾಗಿ ಪತ್ರ ಹೀಗೆ ಒಂದು ಮದುವೆಯ ಸಮಾರಂಭ ಎರ್ಪಡಿಸಿದಂತೆ ಎಲ್ಲೂ ಲೋಪವಾಗುವಂತಿಲ್ಲ.
ನನಗೆ ಯಾವಾಗಲೂ ನನ್ನ ಚೈತನ್ಯ ನೋಡಿ ಮೇಲಾಧಿಕಾರಿಗಳು ಬೆಟ್ಟದಷ್ಟು ಹೊರೆಯನ್ನೇ ಹೊರಿಸುತ್ತಿದ್ದರು. ಮಾಮುಲಿ ಕೆಲಸವೇ ಅಷ್ಟು ಇನ್ನು ಸ್ಟೇಜ್ ಜವಾಬ್ದಾರಿ ಎಂದರೆ… ಕಾಲಿಗೆ ಗೆಜ್ಜೆ ಕಟ್ಟಿಕೊಂಡೇ ಹೆಜ್ಜೆ ಹಾಕಬೇಕು.
ಈ ಕಾರ್ಯಕ್ರಮದಲ್ಲಿ ಭಾಗವಿಹಿಸುವ ಎಲ್ಲರಿಗೂ ಒಂದು ಗೌರವ ಧನ ಸರ್ಕಾರ ಗೊತ್ತುಮಾಡಿದೆ. ಅದು ಸ್ಟೇಜ್ ಆದರೆ ಡಬಲ್. ಅದಕ್ಕೊಂದು ಒಪ್ಪಂದ ಪತ್ರವಿರುತ್ತದೆ. ಅಲ್ಲಿ ಅವರ ಸಹಿ ವಿಳಾಸ ದೂರವಾಣಿ ಸಂಖ್ಯೆ ಎಲ್ಲವನ್ನು ಅವರು ಬರೆಯಬೇಕು. ಆನಂತರ ನಮ್ಮ ಆಫೀಸಿನಿಂದ ಅವರ ಹೆಸರಿಗೆ ಚೆಕ್ ತಯಾರಿಸಲಾಗುತ್ತದೆ. ಮಕ್ಕಳಾದರೆ ಪೋಷಕರ ಹೆಸರಿಗೆ ಶಾಲೆಯವರಾದರೆ ಮುಖ್ಯಸ್ಥರ ಹೆಸರಿಗೆ ಅದರಲ್ಲಿ ಅವರ ಸಹಿ ಜೊತೆ ಸೀಲು ಹಾಕಬೇಕು ಇಲ್ಲವಾದಲ್ಲಿ ಮಾನ್ಯವಾಗುವುದಿಲ್ಲ.

ಈ ಎಲ್ಲವನ್ನು ಒಬ್ಬ ಪ್ರೋಗ್ರಾಂ ಎಕ್ಸಿಕ್ಯುಟೀವ್ ಮೈಯೆಲ್ಲ ಕಣ್ಣಾಗಿ ಗಮನಿಸಿದರಷ್ಟೆ ವೇದಿಕೆ ಕಾರ್ಯಕ್ರಮದ ದಿನ ಅವರ ಕೈಗಳಿಗೆ ಚೆಕ್ ಕೊಡಲು ಸಾಧ್ಯ. ಇಲ್ಲವಾದರೆ ಅನಗತ್ಯ ವಿಳಂಬ ರಿಜಿಸ್ಟರ್ ಪೋಸ್ಟಿನಲ್ಲಿ ಚೆಕ್ ಕಳಿಸಬೇಕು. ಸರ್ಕಾರದ ಖಜಾನೆಗೆ ಒಂದು ಪೋಸ್ಟ್ ಗೆ ಮೂವತ್ತು ರೂಪಾಯಿಯಷ್ಟು ಅನಗತ್ಯವಾದ ಹೊರೆ. ಇದನ್ನು ಉಳಿಸಲು ನಾನು ಒದ್ದಾಡುತ್ತಿದ್ದೆ. ಅದು ಅಲ್ಲದೆ ಮೊತ್ತ ಸಣ್ಣದಿರಲಿ ದೊಡ್ಡದಿರಲಿ ಚೆಕ್ ಪಡೆಯುವಾಗಿನ ಅವರ ಸಂತೋಷ ಅವರ ಕಂಗಳ ಹೊಳಪೇ ಹೇಳುವುದು. ಅದು ನಮಗೂ ಸಾರ್ಥಕತೆ, ಸಂತೋಷ ನೀಡುವ ಸಂಗತಿ.
ಮಕ್ಕಳ ಒಂದು ವೇದಿಕೆ ಕಾರ್ಯಕ್ರಮದ ತಯಾರಿ ನಾನು ಆರು ತಿಂಗಳ ಮುಂಚಿನಿಂದಲೇ ಅರ್ಥಾತ್ ನವೆಂಬರ್ ಎರಡನೆಯ ವಾರ ವೇದಿಕೆಯೇರಲಿರುವ ಮಕ್ಕಳ ಕಾರ್ಯಕ್ರಮಕ್ಕೆ ನನ್ನ ತಯಾರಿ ಆ ಸಾಲಿನ ಜೂನ್ ನಿಂದಲೇ ಪ್ರಾರಂಭ.
ನವೆಂಬರ್ ಗೆ ಕಿಕ್ಕಿರಿದ ಸಭಾಂಗಣದಲ್ಲಿ ಕರತಾಡನದ ಸುರಿಮಳೆಯಲ್ಲಿ ನಾಡಿನ ಪ್ರಮುಖ ಕನ್ನಡ ಇಂಗ್ಲೀಷ್ ಪತ್ರಿಕೆಗಳು ಕಲರ್ ಪೋಟೋ ಸಮೇತ ಕವರೇಜ್ ನೀಡಿ ದೂರದರ್ಶನದ ನ್ಯೂಸ್ ನಲ್ಲಿ ಕಾರ್ಯಕ್ರಮದ ಕ್ಲಿಪ್ಪಿಂಗ್ಸ್ ಬಳಕೆಯಾಗಿ ಅದೊಂದು ಅದ್ಭುತ ಪ್ರಯೋಗವಾಗಿದ್ದರೆ ಅದರ ಹಿಂದಿರುವ ಪೂರ್ವ ತಯಾರಿಯೇ ಕಾರಣ.
ಒಂದು ವಿಷಯವನ್ನು ಇಲ್ಲಿ ಉಲ್ಲೇಖ ಮಾಡಲೇಬೇಕು. ಹೆಚ್ಚುಕಡಿಮೆ ಈ ಎಲ್ಲ ಸಂಭ್ರಮದಲ್ಲಿ ನಾನು ನನ್ನೆಲ್ಲ ಸ್ಟುಡಿಯೋ ಒಳಗಿನ ಟೇಬಲ್ ನ ಆಡಳಿತಾತ್ಮಕ ಹಾಗು ಹೊರಗಿನ ಸುತ್ತಾಟದ ಜವಾಬ್ದಾರಿ ನಿರ್ವಹಿಸಿ ದಣಿದು ಮನೆಮುಟ್ಟುವಾಗ ರಾತ್ರಿ ಎಂಟು ಗಂಟೆ. ಐದಾರು ವರ್ಷದ ಹಿರಿಯ ಪುತ್ರಿ ಮಹನ್ಯ ಮೂರು ವರುಷದ ಕಿರಿಯ ಪುತ್ರಿ ಮೇಧಾ ರಸ್ತೆಯ ಬೀದಿ ದೀಪದಡಿಯೋ ಎದುರು ಮನೆಯ ಅಂಗಳದಲ್ಲೂ ಆಟವಾಡಿಕೊಂಡಿರುವರು. ಮಕ್ಕಳು ಬರಿದೇ ಯುನಿಫಾರ್ಮ್ ಬದಲಾಯಿಸಿ ಮನೆಯಲ್ಲಿ ಏನು ಲಭ್ಯವಿತ್ತೋ ಅದನ್ನು ತಿಂದು ಅಮ್ಮನ ಬರುವಿಗಾಗಿ ಕಾದಿರುತ್ತಿದ್ದರು. ಅವರಪ್ಪ ಹಿಂತಿರುಗುತ್ತಿದ್ದದ್ದು ನಾನು ಬಂದ ಮೇಲೆ.
ಆ ದಿನಗಳಲ್ಲಿ ನನಗೆ ಆಫೀಸ್ ಟೈಂ ಎಂಬುದೇ ಇರಲಿಲ್ಲ. ಮಕ್ಕಳನ್ನು ಕಾಣುತ್ತಿರುವಂತೆ ನನ್ನ ದಣಿವೆಲ್ಲ ಮರೆವೆಯಾಗಿ ಪುನಃ ಉತ್ಸಾಹಭರಿತಳಾಗಿ ಅವರ ಊಟೋಪಚಾರದ ಕಡೆ ಗಮನಹರಿಸುತ್ತಿದ್ದೆ. ಮಕ್ಕಳು ನನಗಾಗಿ ಕಾಯುತ್ತಿದ್ದ ಪರಿ ನನ್ನ ಕಣ್ಮುಂದೆ ಕಟ್ಟಿದಂತಿದೆ. ನನ್ನ ಒಂದು ಆಕಾಶವಾಣಿಯ ಕಾರ್ಯಕ್ರಮ ರೂಪಿಸುವ ನಿರ್ವಹಿಸುವ ಗೀಳಿಗೆ ಶ್ರದ್ಧೆಗೆ ನನ್ನ ಪತಿ ಮತ್ತು ಮಕ್ಕಳು ಸೊಲ್ಲೆತ್ತದೆ ಸಹಕಾರ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.
ಅಕಾಶವಾಣಿಯ ಉದ್ಯೋಗವೇ ನನ್ನ ಹಲವು ಕ್ರಿಯಾತ್ಮಕ ಕನಸು ನನಸಾಗಿಸಿದ್ದರ ಕೃತಜ್ಞತೆ ಧನ್ಯತೆ ನನ್ನ ಮೈಯಲ್ಲಿ ತುಂಬಿದ್ದರ ಫಲವೇ ನನ್ನೀ ಹೊಸ ಬಗೆಬಗೆಯ ಯೋಜನಾಬದ್ಧ ಕ್ರಿಯಾತ್ಮಕ ಕಾರ್ಯವೈಖರಿಗೆ ಪ್ರೇರಣೆಯಾಯಿತೇನೋ ಇದರ ಪ್ರಭಾವದಿಂದಾಗಿ ನನ್ನ ಮಕ್ಕಳಂತೂ ಜನರೊಡನೆ ಬೆರೆಯುವುದು, ಸ್ವತಂತ್ರವಾಗಿ ಅನುಸರಿಸಿಕೊಂಡು ಬದುಕುವುದನ್ನು ಕಲಿತರು. ಇದರಲ್ಲಿ ನನ್ನ ಉದ್ಯೋಗದ ಟ್ರಾನ್ಸ್ ಫರ್ ನೀತಿಗೂ ಸಿಂಹಪಾಲಿದೆ.
ಎಲ್ಲ ಕೆಲಸ ಮಾಡುವ ಮಾತೆಯರು ಅನುಭವಿಸುವಂತೆ ನನ್ನದು ಸಹ. ಆದರೆ ಅದರೊಡನೆ ತೂರಿ ಹಾರಿ ಬಂದು ಸೇರಿಕೊಂಡ ಅಮೃತ ಗಳಿಗೆಗಳು ಅವೆಷ್ಟು. ಅವೆಲ್ಲ ಒಟ್ಟಾಗಿ ಆಕಾಶವಾಣಿಯ ವೃತ್ತಿ ಬದುಕಿನ ಘನತೆಯನ್ನು ಸಾರ್ಥಕತೆಯನ್ನು ಹೆಚ್ಚಿಸಿ ನನ್ನನ್ನು ವ್ಯಕ್ತಿಯಾಗಿ ಶೋಭಿಸುವಂತೆ ಮಾಡಿದ್ದಕ್ಕೆ ನಾ ಆಭಾರಿ.
|ಮುಂದಿನ ಸಂಚಿಕೆಯಲ್ಲಿ|






ಸಾಯಿಲಕ್ಷ್ಮಿ ಮೇಡಮ್, ನೆನಪಿನಂಗಳದ ಬುತ್ತಿ ಬಲು ರುಚಿಕಟ್ಟಾಗಿದೆ. ಆಕಾಶವಾಣಿ ನಂಟಿನ ನನ್ನ ನೆನಪುಗಳೂ ತಕಪಕ ಅಂದು ಮನಸ್ಸು ಮುದವಾಗುತ್ತಿದೆ. ❤