ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸೆದು ಬಂದೆ ಅಮರಫಲವನ್ನು..

ಮೂಲ – ಶ್ರೀ ಬದ್ರಿ ನಾರಾಯಣ್

ಖ್ಯಾತ ಹಿಂದಿ ಕವಿ ಮತ್ತು ಬರಹಗಾರ ಬದ್ರಿ ನಾರಾಯಣ್ ಅವರು ಅಕ್ಟೋಬರ್ 5, 1965 ರಂದು ಬಿಹಾರದ ಭೋಜ್‌ಪುರದಲ್ಲಿ ಜನಿಸಿದರು. ಅಲಹಾಬಾದ್ ವಿಶ್ವವಿದ್ಯಾಲಯದಿಂದ ಆಧುನಿಕ ಇತಿಹಾಸದಲ್ಲಿ ಎಂ. ಎ. ಮತ್ತು ಪಿಎಚ್‌. ಡಿ. ಪದವಿಗಳನ್ನು ಪಡೆದು, ನಂತರ ವಿಶ್ವವಿದ್ಯಾಲಯದ ಗೋವಿಂದ್ ಬಲ್ಲಭ್ ಪಂತ್ ಸಮಾಜ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಬದ್ರಿ ನಾರಾಯಣ್ ಅವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ‘ಸೆಂಟರ್ ಫರ್ ದ ಸ್ಟಡಿ ಆಫ್ ಡಿಸ್ಕ್ರಿಮಿನೇಶನ್ ಎಂಡ್ ಎಕ್ಸಕ್ಳೂಶನ್’ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ನೆದರ್‌ಲ್ಯಾಂಡ್ಸ್‌-ನ ಲೈಡೆನ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಏಷ್ಯನ್ ಅಧ್ಯಯನ ಸಂಸ್ಥೆಯಲ್ಲಿ ಸಂದರ್ಶಕ ಸಹೋದ್ಯೋಗಿಯಾಗಿ, ಪ್ಯಾರಿಸ್‌-ನ Maisons des sciences de l’homme-ನಲ್ಲಿ (Institute for the Human Sciences) ಮತ್ತು ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಐಸಿಸಿಆರ್ ಚೇರ್ ಪ್ರಾಧ್ಯಾಪಕರಾಗಿಯೂ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರಯಾಗರಾಜ್‌-ನಲ್ಲಿರುವ ಜಿ.ಬಿ. ಪಂತ್ ಸಮಾಜ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ, ಬದ್ರಿ ನಾರಾಯಣ್ ಅವರು ಕುಂಭ ಅಧ್ಯಯನ ಕೇಂದ್ರ ಮತ್ತು ಜನಾಂಗೀಯ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದರು. ಜುಲೈ 2025-ರಲ್ಲಿ, ಪ್ರೊ. ಬದ್ರಿ ನಾರಾಯಣ್ ಅವರನ್ನು ಟಾಟಾ ಸಮಾಜ ವಿಜ್ಞಾನ ಸಂಸ್ಥೆಯ (ಟಿಐಎಸ್‌ಎಸ್) ಉಪಕುಲಪತಿಯಾಗಿ ನೇಮಿಸಲಾಯಿತು.

1990-ರ ದಶಕದ ಪ್ರಸಿದ್ಧ ಹಿಂದಿ ಕವಿಗಳಲ್ಲಿ ಒಬ್ಬರಾದ ಬದ್ರಿ ನಾರಾಯಣ್ ಅವರು ಸಾಮಾಜಿಕ ಇತಿಹಾಸ ಮತ್ತು ಸಾಂಸ್ಕೃತಿಕ ಮಾನವಶಾಸ್ತ್ರದಲ್ಲಿಯೂ ಪರಿಣಿತರು. ಪ್ರಸಿದ್ಧ ಹಿಂದಿ ಕವಿಗಳಲ್ಲದೆ, ಅವರು ಉತ್ತರ ಭಾರತದ ಮೂಲಭೂತ ರಾಜಕೀಯ ತಿಳುವಳಿಕೆಗಳು ಮತ್ತು ರಚನೆಗಳನ್ನು ಗುರುತಿಸಿದ ಸಮಾಜಶಾಸ್ತ್ರಜ್ಞ ಎಂದು ಅವರನ್ನು ಗುರುತಿಸಲಾಗಿದೆ. ಖುದಾಯಿ ಮೆ ಹಿಂಸಾ, ಶಬ್ದಪದೀಯಮ್, ಸಚ್ ಸುನೆ ಕಯೀ ದಿನ್ ಹುವೆ, ತುಮ್ಡಿ ಕೆ ಶಬ್ದ್ ಬದ್ರಿ ನಾರಾಯಣ್ ಅವರ ಪ್ರಕಟಿತ ಕವನ ಸಂಕಲನಗಳು. ಅವರ ಬಹು-ಮೆಚ್ಚುಗೆ ಪಡೆದ ಕವಿತೆ “ಪ್ರೇಮ್ ಪತ್ರ್”-ಕ್ಕಾಗಿ ಭಾರತ್ ಭೂಷಣ್ ಅಗರ್ವಾಲ್ ಪ್ರಶಸ್ತಿಯನ್ನು ಮತ್ತು ಅವರ ಕವನ ಸಂಕಲನ ತುಮ್ಡಿ ಕೆ ಶಬ್ದ್-ಗಾಗಿ 2022-ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಬದ್ರಿ ನಾರಾಯಣ್ ಅವರ ಕವಿತೆಗಳನ್ನು ಇಂಗ್ಲಿಷ್, ಬಂಗಾಳಿ, ಒಡಿಯಾ, ಮಲಯಾಳಂ, ಉರ್ದು ಮತ್ತು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ. ಅವರ ರಾಜಕೀಯ ವಿಶ್ಲೇಷಣಾ ಅಂಕಣಗಳು ಪ್ರಮುಖ ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಅವರ ಇತ್ತೀಚಿನ ಪುಸ್ತಕ “ರಿಪಬ್ಲಿಕ್ ಆಫ್ ಹಿಂದುತ್ವ: ಹೌ ದ ಸಂಘ್ ಇಸ್ ರೀಶೇಪಿಂಗ್ ಇಂಡಿಯನ್ ಡೆಮಾಕ್ರಸಿ,” ಭಾರತೀಯ ಪ್ರಜಾಪ್ರಭುತ್ವದ ರಚನೆಯೊಳಗಿನ ಆರ್‌ಎಸ್‌ಎಸ್‌-ನ ವಿಧಾನ, ಸಂಘಟನೆ, ಸಿದ್ಧಾಂತ ಮತ್ತು ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಅವರು ಕಾಂಶಿ ರಾಮ್ ಅವರ ಜೀವನ ಚರಿತ್ರೆಯನ್ನು ಸಹ ಬರೆದಿದ್ದಾರೆ.

ಖ್ಯಾತ ಹಿಂದಿ ಕವಿ ರಾಜೇಶ್ ಜೋಷಿಯವರು ಬದ್ರಿ ನಾರಾಯಣ್ ಹಾಗೂ ಅವರ ಕಾವ್ಯದ ಕುರಿತು ಹೀಗನ್ನುತ್ತಾರೆ: “ಸಣ್ಣ ಪಟ್ಟಣಗಳ ಬರಹಗಾರರು ದೊಡ್ಡ ಕೇಂದ್ರಗಳಿಗೆ ವಲಸೆ ಹೋಗುವ ಮತ್ತು ಅವರ ಮನಸ್ಸಿನಲ್ಲಿ ಕೇಂದ್ರದ ಹರಡುವಿಕೆ ಮತ್ತು ಪ್ರಾಬಲ್ಯವನ್ನು ಹೊಂದಿರುವ ಈ ತುಂಬಿದ ಯುಗದಲ್ಲಿ, ಬದ್ರಿ ನಾರಾಯಣ್ ಅವರ ಕಾವ್ಯವು ಗುಲಾಬಿಗೆ ವ್ಯತಿರಿಕ್ತವಾಗಿ ಅಣಬೆಯ ಚಿತ್ರಣವನ್ನು ಸೃಷ್ಟಿಸುವ ಕಾವ್ಯ ಸಂಪ್ರದಾಯದ ವಿಸ್ತರಣೆಯಾಗಿದೆ. ಕೇಂದ್ರವು ತನ್ನದೇ ಆದ ಅಭಿಪ್ರಾಯಗಳನ್ನು ಉತ್ಪಾದಿಸುವುದಲ್ಲದೆ ಅವುಗಳನ್ನು ಹರಡುತ್ತಿರುವ ಸಮಯ ಇದು. ಸ್ವಲ್ಪ ಮಟ್ಟಿಗೆ, ಅದು ತನ್ನದೇ ಆದದ್ದಕ್ಕಿಂತ ಭಿನ್ನವಾಗಿರುವ ಪರಿಕಲ್ಪನೆಗಳು ಮತ್ತು ಕಾವ್ಯಾತ್ಮಕ ಭಂಗಿಗಳನ್ನು ಸಹ ಆವರಿಸಿಕೊಳ್ಳಲು ಉತ್ಸುಕವಾಗಿದೆ. ಆದ್ದರಿಂದ, ಬೇರೆ ಯಾವುದೇ ಕಾವ್ಯಾತ್ಮಕ ಭಂಗಿಯು ಅದಕ್ಕೆ ಅಸಹನೀಯವಾಗಿದೆ. ತರ್ಕ ಅಥವಾ ತಪ್ಪು ಕಲ್ಪನೆಯ ಮೂಲಕ ಅದನ್ನು ತಿರಸ್ಕರಿಸಲು ಅದು ನಿರ್ಧರಿಸಿದೆ. ಕಾವ್ಯಾತ್ಮಕ ಭೂದೃಶ್ಯದ ಆಂತರಿಕ ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ಇದು ಕಠಿಣ ಹೋರಾಟದ ಸಮಯ. ಬದ್ರಿಯವರ ಕಾವ್ಯವು ವಾಸ್ತವವಾಗಿ, ಪ್ರಜಾಪ್ರಭುತ್ವದ ಕಾಲದಲ್ಲಿ ಸಂವಹನಶೀಲ ನಾಗರಿಕನಾಗುವ ಬಯಕೆಯ ಬಗ್ಗೆ ಒಂದು ಕವಿತೆಯಾಗಿದೆ.”

“ಅವರ ಕಾವ್ಯವು ಭಾರತೀಯ ಸಮಾಜದ ಕೆಳವರ್ಗದವರ ಪುರಾಣಗಳು, ನಿರೂಪಣೆಗಳು ಮತ್ತು ಗಮನಿಸದ ಐತಿಹಾಸಿಕ ಸಂದರ್ಭಗಳನ್ನು ತಲುಪುತ್ತದೆ, ಅವುಗಳು ಅವರ ಕಾಣದ ಸಂಕಟ, ಖಿನ್ನತೆ ಮತ್ತು ಹೋರಾಟದ ಕಥೆಗಳು ಅಡಗಿವೆ. ಬದ್ರಿಯವರ ಕಾವ್ಯವು ಪ್ರಬಲ ಶಕ್ತಿಗಳಿಂದ ಸ್ವೀಕಾರವನ್ನು ಪಡೆದ ಜನಪ್ರಿಯ ಪುರಾಣಗಳಿಂದ ಬಹುತೇಕ ದೂರವಿದೆ. ಬಳಕೆಯಲ್ಲಿಲ್ಲದ ಪೌರಾಣಿಕ ನಿರೂಪಣೆಗಳನ್ನು ಮತ್ತೆ ಓದುವ ಪ್ರಯತ್ನವೂ ಇಲ್ಲಿ ಇಲ್ಲ. ಈ ಕವಿತೆಗಳು ಬದಲಾಗಿ ಜಾತಿಗಳು ಮತ್ತು ಮಾನವ ಗುಂಪುಗಳ ನಿರೂಪಣೆಗಳು ಮತ್ತು ಜಾನಪದ ಇತಿಹಾಸಗಳ ಪಾತ್ರಗಳು ಮತ್ತು ಕಥೆಗಳನ್ನು ಒಳಗೊಂಡಿವೆ, ಅವರು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೂ ಸಹ, ಸಮಾಜದ ಪರಿಧಿಯಲ್ಲಿ ನರಕದ ಜೀವನವನ್ನು ನಡೆಸಲು ಅವರನ್ನು ದೂಡಲಾಗಿದೆ. ಬದ್ರಿಯವರ ಕಾವ್ಯವು ಈ ಹಲವಾರು ಮಾನವ ಗುಂಪುಗಳ ಕನಸುಗಳು, ಆಕಾಂಕ್ಷೆಗಳು, ದೌರ್ಬಲ್ಯಗಳು ಮತ್ತು ಸಾಮರ್ಥ್ಯಗಳ ಬಗ್ಗೆ ವ್ಯಾಖ್ಯಾನವನ್ನು ಒದಗಿಸುತ್ತದೆ. ವಾಸ್ತವವಾಗಿ, ಕವಿಯ ಕಾವ್ಯಾತ್ಮಕ ಅಭ್ಯಾಸವು ಈ ಕಾವ್ಯದ ರಾಜಕೀಯಕ್ಕೆ ಸಾಕ್ಷಿಯಾಗಿದೆ.”

ಕನ್ನಡಕ್ಕೆ : ಎಸ್. ಜಯಶ್ರೀನಿವಾಸ ರಾವ್

ಎಸ್. ಜಯಶ್ರೀನಿವಾಸ ರಾವ್ ಅವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ ಪದ್ಯಗಳನ್ನು ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ವಿರಚಿತ ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು ಹಾಗೂ ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನಕ್ಕಾಗಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. 

ಕೇರೂರ ವಾಸುದೇವಾಚಾರ್ಯರ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಸ್ವರಚಿತ ಶರ್ಲಾಕ್ ಹೋಮ್ಸ್ ಕತೆಯನ್ನು ಹಾಗೂ ದೀಪಾ ಹಿರೇಗುತ್ತಿಯವರ ತಪ್ತ  ಎಂಬ ಕತೆಯನ್ನು ಸಹ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಕನ್ನಡದ ಮೇರು ಕವಿ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ,’ ‘ಮ್ಯೂಜ಼್ ಇಂಡಿಯ,’ ಹಾಗೂ ‘ಮೈದಾನಂ’-ನಲ್ಲಿ ಪ್ರಕಟವಾಗಿವೆ. 

ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದ ಮಾಡಿದ ಖ್ಯಾತ ವಿದೇಶಿ ಕವಿಗಳ ಕವನಗಳು ಕನ್ನಡ ಸಾಹಿತ್ಯ ಪತ್ರಿಕೆಗಳಾದ ಭಾಷಾ ಭಾರತಿಅವಧಿ, ಕೆಂಡಸಂಪಿಗೆಋತುಮಾನ, ಅಕ್ಷರ ಸಂಗಾತ, ಹಾಗೂ ಮಿಂಚುಳ್ಳಿ-ಯಲ್ಲಿ ಪ್ರಕಟವಾಗಿವೆ.  

ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದಿಸಿದ ಪೋಲಂಡ್ ದೇಶದ ಕವನಗಳ ಸಂಕಲನ, “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು’,” ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ಏಪ್ರಿಲ್ 2022-ರಲ್ಲಿ ಪ್ರಕಟಿಸಿತು. “ಬಾಲ್ಟಿಕ್ ಕಡಲ ಗಾಳಿ” ಎಂಬ ಹೆಸರಿನಲ್ಲಿ ಇವರು ಕನ್ನಡಕ್ಕೆ ಅನುವಾದ ಮಾಡಿದ ಎಸ್ಟೋನಿಯಾ, ಲ್ಯಾಟ್ವಿಯಾ, ಹಾಗೂ ಲಿಥುವೇನಿಯಾ ದೇಶದ ಕವನಗಳ ಸಂಕಲನವನ್ನು ಮಸ್ಕಿಯ ಬಂಡಾರ ಪ್ರಕಾಶನವು ಡಿಸೆಂಬರ್ 2024-ರಲ್ಲಿ ಪ್ರಕಟಿಸಿತು. 

ದ ಹಿಂದು’ ದಿನಪತ್ರಿಕೆಯು ಇವರು ಇಂಗ್ಲಿಷಿನಲ್ಲಿ ಬರೆದ ಕನ್ನಡ ಅರುಣೋದಯ ಸಾಹಿತ್ಯದ ಮೇಲಿನ 15 ಲೇಖನಗಳ ಸರಣಿಯನ್ನು ಜನವರಿ-ಡಿಸೆಂಬರ್ 2020-ರ ಅವಧಿಯಲ್ಲಿ ಪ್ರಕಟಿಸಿತ್ತು.  ಜಯಶ್ರೀನಿವಾಸ ರಾವ್ ಅವರು ಕನ್ನಡ ಅರುಣೋದಯ ಸಾಹಿತ್ಯ ಹಾಗೂ ಅನುವಾದ ವಿಷಯಗಳ ಬಗ್ಗೆ ಬರೆದ ಪ್ರಬಂಧಗಳು ದೇಶದ ಹೆಸರಾಂತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.        

ಹೈದರಾಬಾದಿನ CIEFL-ನಲ್ಲಿ (ಈಗ The EFL University) PGDES ಹಾಗೂ M.Phil. ಪದವಿಗಳನ್ನು ಪಡೆದು, ಅದೇ ವಿಶ್ವವಿದ್ಯಾಲಯದಲ್ಲಿ ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003-ರಲ್ಲಿ PhD ಪದವಿ ಪಡೆದರು.

೧. ಸಣ್ಣ-ಸಣ್ಣ ಜನರ ಸಣ್ಣ-ಸಣ್ಣ ಕವಿತೆಗಳು

ಸಣ್ಣ-ಸಣ್ಣ ಜನರ ಸಣ್ಣ-ಸಣ್ಣ ಕವಿತೆಗಳು
ಸಣ್ಣ-ಸಣ್ಣ ತಾಣಗಳಲ್ಲಿ ಜೀವಿಸುತ್ತವೆ
ಸಿಂಕಿನ ರಂಧ್ರಗಳಲ್ಲಿ, ಇರುವೆಗಳ ಬಿಲಗಳಲ್ಲಿ
ನೀರಿನ ಹಳ್ಳಗಳಲ್ಲಿ, ಕಣಜಗಳಲ್ಲಿಯೂ ಸಹ
ಲಯವಾಗಿ ಹರಿಯುತ್ತಿರುತ್ತವೆ

ಯಾರಿಗೂ ಗೊತ್ತಾಗದೇನೆ
ಮಹಾಜನರ ಮಹಾಆಖ್ಯಾನಗಳ
ಪಕ್ಕದಲ್ಲೇ
ಮುರಿದ-ಒಡೆದ ಶಬ್ದಗಳಿಂದ
ತಯಾರಾಗುತ್ತಿರುತ್ತವೆ
ಛಂದ, ಮಾತ್ರ, ಅಲಂಕಾರಗಳಿಲ್ಲದೆ
ಜೀವಿಸುತ್ತವೆ ಲಯಗಳಲ್ಲಿ ಸರಸರಿಸುತ್ತಾ
ಸಣ್ಣ-ಸಣ್ಣ ಜನರ ಸಣ್ಣ-ಸಣ್ಣ ಕವಿತೆಗಳು
ಜಾಡಮಾಲಿಗಳ, ಅಚ್ಚುಗಾರರ, ಬಣ್ಣಗಾರರ ಕವಿತೆಗಳು
ಪ್ರಜೆಗಳ, ಬಡವರ, ಹಸಿದವರ, ದುಃಖಿತರ
ಅನಂತ ಕವಿತೆಗಳು
ಇವನ್ನು ಯಾರು ಬರೆಯುತ್ತಾರೋ ಬಿಡುತ್ತಾರೋ
ಇವಕ್ಕೆ ಪ್ರಶಸ್ತಿ ದೊರೆಯುತ್ತದೋ ಇಲ್ಲವೋ
ಇವು ಎಂದೂ ಪೂರಾ ಗತ್ತಿನಲ್ಲಿರುತ್ತವೆ
ದೇಗುಳದ ರಾಗಗಳು, ದೇವಿಯ ಕೀರ್ತನೆಗಳು,
ದರ್ಬಾರಿನ ಮನೊರಂಜನೆಗಳು
ಕವನ ಮಹೋತ್ಸವಗಳಿಗಿಂತ ತೀರಾ ಭಿನ್ನವಾಗಿರುತ್ತವೆ
ದಿನೇ ದಿನೇ ಕಾಲವನ್ನು ಛಿದ್ರಿಸುತ್ತಿರುತ್ತವೆ
ತನ್ನ ಪರಕೆ, ಸುತ್ತಿಗೆ ಹಾಗೂ ರಂಗುರಂಗಿನ ಕನಸುಗಳಿಂದ

ಸಣ್ಣ-ಸಣ್ಣ ಜನರ ಸಣ್ಣ-ಸಣ್ಣ ಕವಿತೆಗಳು
ಸಣ್ಣ-ಸಣ್ಣ ತಾಣಗಳಲ್ಲಿ ಜೀವಿಸುತ್ತವೆ
ಕೋಟೆಯಾಗಲಿ, ದುರ್ಗವಾಗಲಿ, ಅರಮನೆಯಾಗಲಿ
ಮಹಾ ಕಟ್ಟಡಗಳಲ್ಲಿ ತೂತುಗಳ ಮಾಡುತ್ತಾ
ತಮಗಾಗಿ ಜಾಗ ಮಾಡಿಕೊಳ್ಳುತ್ತವೆ
ಸ್ವಾಗತವಂತೂ ಸಿಗುವುದಿಲ್ಲ ಇವಕ್ಕೆ
ಕೆಲ ಕಡೆ ಓಡೆಯುತ್ತಾ
ಕೆಲ ಕಡೆ ಸಿಡಿಸುತ್ತಾ
ತಮ್ಮ ಜಗತ್ತನ್ನು ರಚಿಸುತ್ತವೆ
ಮಂಚಗಳಲ್ಲಿ, ಪ್ರಪಂಚಗಳಲ್ಲಿ ಕಾಣಿಸದಿದ್ದರೇನಂತೆ
ಬಹು ಪಾಲು ಅಸ್ಪಷ್ಟ ಅಭಿವ್ಯಕ್ತಿಗಳಲ್ಲಿ ಜೀವಿಸುತ್ತಿರುತ್ತವೆ

ಬಹಳ ಸಲ ಶಬ್ದಗಳಾಗಿ ಬರುತ್ತವೆ ಅವು
ಬಹಳ ಸಲ ಶಬ್ದಗಳಾಗಿ ಬರಲು ನಿರಾಕರಿಸುತ್ತವೆ
ಹೆಚ್ಚಿನಾಂಶ ಅಕ್ಕ-ಪಕ್ಕದಲ್ಲಿ, ಮೂಲೆ-ಕೋನಗಳಲ್ಲಿ,
ದಿಣ್ಣೆ-ದಡಗಳಲ್ಲಿಯೇ
ಇರುತ್ತವೆ
ಮಗ್ಗ, ಹಗ್ಗ, ಕುಂಬಾರನ ತಿಗುರಿ, ದಬ್ಬಳ,
ಬಾವಿಗಳಲ್ಲಿ
ಅಗ್ನಿವನದಲ್ಲಿ ಅಡ್ಡಾಡುತ್ತಿರುತ್ತವೆ
ತಮ್ಮತಮ್ಮೊಳಗೆ ಜೋಡುತ್ತಾ
ಮಹಾಕಾವ್ಯಗಳನ್ನು ನಿಗ್ರಹಿಸುತ್ತವೆ
ಸಣ್ಣ-ಸಣ್ಣ ಜನರ
ಸಣ್ಣ-ಸಣ್ಣ ಕವಿತೆಗಳು
ಸಣ್ಣ-ಸಣ್ಣ ತಾಣಗಳಲ್ಲಿ ಜೀವಿಸುತ್ತವೆ

೨. ಪ್ರೇಮಪತ್ರ

ಪ್ರೇತವೊಂದು ಬರುತ್ತದೆ
ಪುಸ್ತಕದಿಂದ ಪ್ರೇಮಪತ್ರವನ್ನು ಹೊರಗೆಳೆದು ಕೊಂಡೊಯ್ಯುತ್ತದೆ
ರಣಹದ್ದು ಅದನ್ನು ಹರಿದು ಹರಿದು ತಿನ್ನುತ್ತದೆ ಬೆಟ್ಟದ ಮೇಲೆ

ಕಳ್ಳನೊಬ್ಬ ಬಂದರೆ ಪ್ರೆಮಪತ್ರವ ಕದಿಯುವನು
ಜೂಜುಗಾರ ಪ್ರೇಮಪತ್ರವನ್ನೇ ಪಣಕ್ಕಿಡುವನು
ಋಷಿಗಳು ಬಂದರೆ ಪ್ರೇಮಪತ್ರವನ್ನು ದಾನವಾಗಿ ಕೇಳುವರು

ಮಳೆ ಬಂದಾಗ
ಪ್ರೇಮಪತ್ರವನ್ನೇ ಅದು ಕರಗಿಸುತ್ತದೆ
ಬೆಂಕಿ ಬಂದಾಗ ಪ್ರೇಮಪತ್ರವನ್ನೇ ಅದು ಸುಡುತ್ತದೆ
ಪ್ರೇಮಪತ್ರಗಳ ಮೇಲೆಯೇ ನಿರ್ಬಂಧನೆಗಳನ್ನು ಹಾಕಲಾಗುತ್ತದೆ

ಹಾವು ಬಂದರೆ ಪ್ರೇಮಪತ್ರವನ್ನು ಕುಟುಕುತ್ತದೆ
ಮಿಡತೆಗಳು ಬಂದರೆ ಪ್ರೇಮಪತ್ರವನ್ನು ನೆಕ್ಕುತ್ತವೆ
ಕೀಟಗಳು ಪ್ರೇಮಪತ್ರವನ್ನೇ ಕಚ್ಚಿ ಕತ್ತರಿಸುತ್ತವೆ

ಪ್ರಳಯದ ದಿನಗಳಲ್ಲಿ
ಸಪ್ತಋಷಿಗಳು, ಮೀನುಗಳು, ಮತ್ತು ಮನು
ಎಲ್ಲರೂ ವೇದಗಳನ್ನು ಕಾಪಾಡುವರು
ಯಾರೂ ಪ್ರೇಮಪತ್ರವನ್ನು ಕಾಪಾಡಲ್ಲ

ಯಾರೋ ರೋಮ್ ನಗರವನ್ನು ಕಾಪಾಡುವರು
ಇನ್ಯಾರೋ ಮದೀನಾವನ್ನು
ಯಾರೋ ಬೆಳ್ಳಿಯನ್ನು ಕಾಪಾಡುವರು
ಇನ್ಯಾರೋ ಬಂಗಾರವನ್ನು
ಒಬ್ಬಂಟಿ ನಾನೊಬ್ಬ
ಹೇಗೆ ಕಾಪಾಡುವೆ ನಿನ್ನ ಪ್ರೇಮಪತ್ರವನ್ನು

೩. ಸಣ್ಣಪುಟ್ಟ ಬಯಕೆಗಳು

ಹಗಲೂ ರಾತ್ರಿ
ನೆನಪಿಸಿಕೊಳ್ಳುವೆ ನಾನು
ಮೆಲ್ಲ ಮೆಲ್ಲನೆ
ಈಡೇರಿದ ನನ್ನ
ಆ ಸಣ್ಣಪುಟ್ಟ ಬಯಕೆಗಳನ್ನು

ಆ ಸಣ್ಣಪುಟ್ಟ ಬಯಕೆಗಳ ಬೆನ್ನಟ್ಟುತ್ತಾ
ನನ್ನ ದೊಡ್ಡ ಬಯಕೆಗಳನ್ನು ಬದಿಗೆ ಸರಿಸಿದೆ
ಛಿ … ಧಿಕ್ಕಾರ ನನಗೆ
ಹಾಗೆಯೇ ಉಳಿದು ಹೋಯಿತು
ನನ್ನ ಬೆಟ್ಟ ಕಡಿಯುವ ಬಯಕೆ!

ಕಾಗದದ ದೋಣಿಯನ್ನು ಮಾಡಿ
ಮಹಾ ಮಹಾ ಅಲೆಗಳ ಸಮುದ್ರವ ದಾಟುವ ಬಯಕೆಯನ್ನು
ಪೂರೈಸಿದೆನೆಂದು ಭಾವಿಸಿದೆ

ಒಂದೆರಡು ಕವಿತೆಗಳನ್ನು ಬರೆದು
ಬಂಡಾಯದ ಬಯಕೆಯನ್ನು
ಪೂರೈಸಿದೆನೆಂದು ಭಾವಿಸಿದೆ
ಛಿ … ಧಿಕ್ಕಾರ ನನಗೆ,
ನನ್ನ ಸಣ್ಣಪುಟ್ಟ ಬಯಕೆಗಳಿಗೆ,
ಹಾಗೂ ಅವನ್ನು ಪೂರೈಸುವವರಿಗೆ.

೪.ಹದಿನೆಂಟು ದಿನಗಳು

ಅಕ್ಷೌಹಿಣಿ ಸೇನೆಯಲ್ಲ
ಸಹಸ್ರ ಕೋಟಿ ಆನೆಗಳಲ್ಲ
ನಾನು ನಡೆಸಬೇಕಾದದ್ದು
ನನ್ನ ವಿರುದ್ಧವೇ ಯುದ್ಧ

ಯಾವಾಗ
ಎಲ್ಲಿಯ ತನಕ
ಸಮಯವೇನೂ ನಿಗದಿತವಿಲ್ಲ
ಸೋಲು-ಗೆಲುವು ಯಾವುದೂ ನಿಶ್ಚಿತವಿಲ್ಲ
ಯಾವುದೇ ಪೂರ್ವತಯಾರಿಯೂ ಇಲ್ಲ.

ನನ್ನನ್ನು ಕತ್ತರಿಸಲಾಗುತ್ತೆ, ನನ್ನನ್ನು ಜೊಡಿಸಲಾಗುತ್ತೆ
ನಾ ಸಾಯುವೆ, ನಾ ಜೀವಂತವಾಗುವೆ.

ಖಣ ಖಣ ಚಲಿಸುತ್ತೆ ಖಡ್ಗ
ಛಪ್ ಛಪ್ ಛಪ್ ಕಡಿಯುತ್ತೆ ಕತ್ತಿ
ಸಿಡಿಲು, ಮಿನಾರ, ಭರ್ಜಿ, ಸರಪಳಿ
ಚರ ಚರ ಚಿಮ್ಮುತ್ತೆ ರಕ್ತ
ಕವಿತೆಗಳ ಮೇಲೆ.

ನೆನಪಿದೆಯಾ ನಿಮಗೆ
ಕಳೆದ ಸಲವಂತೂ
ಹದಿನೆಂಟು ದಿನಗಳ ತನಕ
ನಿರಂತರ ನಡೆಯಿತು ಯುದ್ಧ.

೫. ನಂಬಿಕೆ

ನಾನು ನಶ್ವರ
ಆದರೆ ನನಗಿಂತಲೂ ನಶ್ವರ
ನಾನು ಇಷ್ಟೊಂದು ಶ್ರದ್ಧೆಯಿಂದ
ಬರೆಯುವ ನನ್ನ ಪುಸ್ತಕಗಳು

ನಾನು ನಶ್ವರ
ಆದರೆ ನನಗಿಂತ ಕಡಿಮೆ ನಶ್ವರವೇನೂ ಅಲ್ಲ
ಆಲ್ಬಮ್ಮಿನಲ್ಲಿಟ್ಟಿರುವ ಈ ನನ್ನ ಫೋಟೋಗಳು
ನನ್ನಂತಹ ನಶ್ವರನಿಗಿಂತಲೂ
ಇನ್ನೂ ಹೆಚ್ಚು ನಶ್ವರ
ಇಷ್ಟೊಂದು ವರ್ಷಗಳಿಂದ ಬರೆಯುತ್ತಿರುವ ಈ ಡಯರಿಗಳು
ಇವೆಲ್ಲವನ್ನೂ ಹೊತ್ತು ನಾನು ಕಾಲವನ್ನು ದಾಟಿಹೋಗುವೆನಂಬ
ಈ ನನ್ನ ನಂಬಿಕೆ ಎಷ್ಟು ಅಲ್ಪಕಾಲಿಕ
ನನ್ನ ಜೀವಿತಾವಧಿಯಲ್ಲೇ ಮಾಡಿಸಿಕೊಳ್ಳುವೆ ನನ್ನ ಪ್ರತಿಮೆಗಳನ್ನು
ಹಲವು ರೂಪಗಳಲ್ಲಿ ಮಾಡಲಾದ
ನನ್ನ ಈ ಪ್ರತಿಮೆಗಳು
ಕಡಿಮೆ ನಶ್ವರವೆನೂ ಅಲ್ಲ
ಅಂತ್ಯಕ್ರಿಯೆಯಾದ ಕೂಡಲೇ ಮರೆಯಲಾಗುತ್ತೆ

ಪತ್ರಗಳಲ್ಲಿ ನಾನೇನು ಬರೆಯುವೆನೋ
ಅವು ಇನ್ನೂ ಹೆಚ್ಚು ಅಲ್ಪಕಾಲಿಕ
ವರುಷ ಮುಗಿಯುತ್ತಿದ್ದಂತೆ
ಅವನ್ನು ಸುಡಲಾಗುತ್ತೆ ಬೆಂಕಿಕಡ್ಡಿ ಗೀರಿ

ನಾನು ಯಾವುದೇ ಉಡುಗೊರೆ ಕೊಟ್ಟರೂ
ಕೆಲವೇ ದಿನಗಳಲ್ಲಿ ಒಡೆದು ಹೋಗುತ್ತೆ
ಉಡುಗೊರೆಯ ಆಯಸ್ಸು ಒಂದು ವರ್ಷ
ಶುಭಾಶಯಗಳದ್ದು ನಾಲ್ಕು ದಿನ

ನನ್ನ ಹತ್ತಿರ ಉಳಿದಿರುವ ಯಾವುದನ್ನು
ಸ್ಥಾವರ, ಅಕ್ಷರ, ಅಕ್ಷುಣ್ಣವೆಂದುಕೊಂಡು
ಅವು ಕಾಲಾತೀತವೆಂದು ಸಾಬೀತುಪಡಿಸಲು
ಹೆಣಗುತ್ತಿರುವೆನೊ
ಅವು ಹಿಮಗೋಲದಂತೆ
ಮೆಲ್ಲಮೆಲ್ಲನೆ ಕರಗಿ ಹೋಗುತ್ತೆ.

ಕೆಲವರು ಹೇಳುತ್ತಾರೆ
ನುಡಿ ಅಮರವೆಂದು
ಆದರೆ ಎರಡೇ ಹನಿ ನೀರಿನಲ್ಲಿ ಕರಗಿಹೋಗುವ
ನನ್ನ ನುಡಿಗಳನ್ನು ಹೇಗೆ ನಂಬಲಿ ನಾನು.

೬. ಎಸೆದು ಬಂದೆ ಅಮರಫಲವನ್ನು

ಯೋಚಿಸುತ್ತಿದೆ ನಾನು ಹಿಂದೊಮ್ಮೆ
ಅಮರನಾಗುವೆ ನಾನೆಂದು
ಬುದ್ಧನ ಅಮರತ್ವದ ಪರಣಾಮವನ್ನು ಕಂಡು
ಅಮರನಾಗುವ ಯೋಚನೆಯನ್ನು ಬಿಟ್ಟುಬಿಟ್ಟೆ.

ಹಲವು ದಿನ ಕನಸುಗಳಲ್ಲಿ
ಏಸು ಕ್ರಿಸ್ತ ಮರಣಕ್ಕಾಗಿ
ತಪಸ್ಸು ಮಾಡುವುದನ್ನು ಕಂಡೆ
ಮತ್ತೆ ಪುರಾಣಗಳಲ್ಲಿ ಬರುವ ನಿರ್ಭಾಗ್ಯ ಅಶ್ವತ್ಥಾಮ
ತನ್ನ ಅಮರತ್ವದಿಂದ ದುಃಖಿತನಾಗಿ
ಕೊನೆಯಿಲ್ಲದೆ ಕಿರುಚುತ್ತಿರುತ್ತಾನೆ
ಭೂಮಿಯಲ್ಲಿ ಭೂಕಂಪವುಂಟಾಗುತ್ತದೆ
ಸಮುದ್ರದಲ್ಲಿ ಬಿರುಗಾಳಿಯೇಳುತ್ತದೆ
ಆದ್ದರಿಂದಲೇ ನಾನು ಅಮರತ್ವದ ಯೋಚನೆಯನ್ನು ಬಿಟ್ಟುಬಿಟ್ಟೆ
ಅಮರಫಲವನ್ನು ಕಿಟಕಿಯ ಆಚೆ ಎಸೆದುಬಿಟ್ಟೆ

೭. ಒಬ್ಬ ಋಷಿಯಲ್ಲ, ಒಂದು ನಾಯಿ ಬರೆಯುತ್ತಿದೆ ಇದನ್ನು

ಬಡಬಡಿಕೆಗಳು ಈ ಲೋಕದ ಎಲ್ಲ ತುಳಿತಕ್ಕೊಳಗಾದವರ
ಅತಿ ವಿಶ್ವಾಸಾರ್ಹ ದಾಖಲೆಗಳಾಗಿರುತ್ತವೆ,
ಅದಕ್ಕೆಂದೇ ನಾನು ಈ ಹೆಂಗಸಿನ ಬಡಬಡಿಕೆಗಳನ್ನು ಓದುವೆ.
ಈ ನಡುಗುವ ಚಳಿಯ ಸುಂಯ್-ಸುಂಯ್ ಬೀಸುವ ಗಾಳಿಯ ಮಧ್ಯೆ
ಈ ಭೂಮಿಯ ಮೇಲಿರುವ ಒಂದು ರೈಲಿನ ಡಬ್ಬಿಯಲ್ಲಿ ಕೂತಿದ್ದಾಳೆ.

ಅವಳ ಅಮ್ಮನ ಮನೆ ಮಸೂರಿಯಲ್ಲಿದೆ ಅವಳ ಗಂಡನ ಮನೆ ಜಹಾನಾಬಾದ್-ನಲ್ಲಿದೆ,
ತನ್ನ ಪರಿವಾರದೊಂದಿಗೆ ಅವಳು ಕಲಕತ್ತಾಗೆ ಓಡಿ ಹೋಗಲು ಬಯಸುತ್ತಾಳೆ,
ಈ ಪರಿವಾರದ ಜತೆ, ಈಗ ಈ ಲೋಕದಲ್ಲಿ ಉಳಿದೇ ಇಲ್ಲದ ಪರಿವಾರದ ಜತೆ,
ಅವಳು ಕಿರುಚುತ್ತಿದ್ದಾಳೆ, ಅರಚುತ್ತಿದ್ದಾಳೆ. ಆ ಕಿರುಚುಗಳಲ್ಲಿವೆ ಎಂತಹ ಕಿರುಚುಗಳೆಂದರೆ
ಈ ಲೋಕದ ಸಮಸ್ತ ಸಾಹಿತ್ಯ ಭಂಡಾರದಲ್ಲಿ ಎಲ್ಲೂ ಕಂಡುಬರುವುದಿಲ್ಲ,
ಲಿಖಿತ ಸಾಹಿತ್ಯದಲ್ಲಂತೂ ಇಲ್ಲವೇ ಇಲ್ಲ.

ಈ ಕಂಪಿಸುವ ಚಳಿಯಲ್ಲಿ ಕಂಬಳಿ ಹೊದ್ದುಕೊಂಡಿರುವ ಯಾರನ್ನು ಕಂಡರೂ
ನನ್ನ ಕಂಬಳಿ, ನನ್ನ ಕಂಬಳಿ,
ಅಂತ ಕಿರುಚಲು ತೊಡಗುತ್ತಾಳೆ,
ನನ್ನ ಕಂಬಳಿ ವಾಪಸ್ಸು ಕೊಡು, ವಾಪಸ್ಸು ಕೊಡು ನನ್ನ ಕಂಬಳಿ.
ಚಪ್ಪಲಿ ತೊಟ್ಟಿರುವ ಯಾರನ್ನು ಕಂಡರೂ,
ನನ್ನ ಚಪ್ಪಲಿ, ನನ್ನ ಚಪ್ಪಲಿ, ನೋಡಿ ನನ್ನ ಚಪ್ಪಲಿಯನ್ನು ಅವನು ಕಸಿದುಕೊಂಡಿದ್ದಾನೆ,
ಅಂತ ಕಿರುಚಲು ತೊಡಗುತ್ತಾಳೆ.

ಯಾವುದೋ ಒಂದು ನಿಲ್ದಾಣದಲ್ಲಿ ರೈಲು ನಿಲ್ಲುತ್ತದೆ,
ಅಲ್ಲಿ ಓಡಾಡುತ್ತಿರುವ ಲೈನ್‌ಮ್ಯಾನ್ ಬಯ್ಯುತ್ತಾನೆ – ಬಾಯ್ಮುಚ್ಚು ಹುಚ್ಚಿ.
ಅದೇ ಹೊತ್ತಿಗೆ ಯಾಕೋ ಗೊತ್ತಿಲ್ಲ ನಾಯಿಯೊಂದು ಊಳೆಯಿಡಲು ಪ್ರಾರಂಭಿಸುತ್ತೆ.
ಬಹುಶಃ ಆ ನಾಯಿಯ ಕೂಗಿನಲ್ಲಿ ಈ ಹೆಂಗಸಿನ ಯಾವುದೋ
ದೊಡ್ಡ ದುರಂತದ ಕಥೆ ಅಡಗಿದೆಯೋ ಏನೋ.

ಯಾವುದರ ಬಗ್ಗೆ ಆ ಗಾರ್ಡು, ಡ್ರೈವರ್, ಜನಗಳು ಹಾಗೂ ಲೈನ್‌ಮ್ಯಾನ್ ತಿಳಿದಿಲ್ಲವೋ,
ಯಾವುದು ಅವಳು ಹುಚ್ಚಿಯಾಗಿರಬಹುದೆಂಬ ಸಾಧ್ಯತೆಯನ್ನು ಬೇರು ಸಮೇತ ಕಿತ್ತುಹಾಕುವುದೋ,
ಯಾವುದು ಆ ಹೆಂಗಸು ಪೋಲೀಸರು ಹಾಗೂ ಕೊಲೆಪಾತಕರ ವಿರುದ್ಧ ಜೀವನದುದ್ದಕ್ಕೂ
ನಡೆಸಿದ ವಿಫಲ ಪ್ರತಿರೋಧದ ಶೋಕಭರಿತ ಕಥೆಯಾಗಿರಬಹುದೋ,
ಮತ್ತೆ ಅದನ್ನು ಯಾವುದೇ ಋಷಿಯಲ್ಲ, ಈ ನಾಯಿ ಬರೆಯುತ್ತಿರಬಹುದೋ.


‍ಲೇಖಕರು Admin

12 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading