ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲ ನೆನಪಾಯ್ತು..

ಧನಂಜಯ ಕುಲಕರ್ಣಿ 

ಈ ಕೆಳಗಿನ ಚಿತ್ರದಲ್ಲಿ ಕಾಣುವ ಕಟ್ಟಡವಿದೆಯಲ್ಲ, ಅದಕ್ಕೂ ನನಗೂ ತುಂಬಾ ಹಳೆಯ ನಂಟು.

ಇಪ್ಪತ್ಮೂರು ವರ್ಷಗಳ ಹಿಂದೆ, ಅಂದರೆ 1995, ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡ ಸಮುದಾಯ ಸಿದ್ಧಪಡಿಸಿದ “ಸ್ಪಾರ್ಟಕಸ್” ನಾಟಕದ ಮೊಟ್ಟಮೊದಲ ಪ್ರದರ್ಶನ ಕಂಡಿದ್ದು ಈ ಕಟ್ಟಡದಲ್ಲಿ.

ಧಾರವಾಡದ ಜನರಿಗೆ ಇದೊಂದು ಅಭೂತಪೂರ್ವ ಅನುಭವ ನೀಡಿದ ಪ್ರಯೋಗ. ಎದುರಾದ ಅಡಚಣೆಗಳೆಷ್ಟೋ, ಪ್ರದರ್ಶನಕ್ಕೆ ಕೆಡುಕನ್ನು ಬಯಸಿದ್ದ ಆತ್ಮಗಳೆಷ್ಟೋ. ಧಾರವಾಡದ ಜಿಲ್ಲಾ ಸಾಹಿತ್ಯಭವನವನ್ನು ಸಂಪೂರ್ಣವಾಗಿ ಬಳಸಿಕೊಂಡು, ಸುಮಾರು ೫೦ ಜನ ಕಲಾವಿದರು, ಎರಡು ಗಂಟೆಗಳ ಕಾಲ ಧಾರವಾಡದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ ಪರಿ ನಿಜಕ್ಕೂ ಬೆರಗುಗೊಳಿಸಿತ್ತು.

ಇಂತಹ ಒಂದು ಐತಿಹಾಸಿಕ ಸಂಬಂಧವಿರುವ ಕಟ್ಟಡಕ್ಕೆ ನಾನು ಬರೊಬ್ಬರಿ 23 ವರ್ಷಗಳ ನಂತರ ಭೇಟಿ ನೀಡಿದೆ. ಉತ್ತರ ಕರ್ನಾಟಕದ ಹವ್ಯಾಸಿ ರಂಗಭೂಮಿಯ ಇತಿಹಾಸದ ಪುಟದಲ್ಲಿ ತಮ್ಮ ಅಚ್ಚಳಿಯದ ಛಾಪನ್ನು ಮೂಡಿಸಿರುವ ಗೋಪಾಲ ವಾಜಪೇಯಿ ಅವರನ್ನು ನೆನಪಿಸುವ ಕಾರ್ಯಕ್ರಮದಲ್ಲಿ ಉಪನ್ಯಾಸಕನಾಗಿ ಈ ಕಟ್ಟಡಕ್ಕೆ ಭೇಟಿ ನೀಡಿದ್ದೆ ನಿನ್ನೆ.

ನನ್ನ ಮೊದಲ ಪುಸ್ತಕ “ನೆನಪುಗಳ ರಾವೀ ನದಿಯ ದಂಡೆ” ಗೆ ಹಿರಿಯ ಗೆಳೆಯರಾದ  ಜಿ ಎನ್ ಮೋಹನ್ ಬರೆದ ಮುನ್ನುಡಿಯಂತೆ, ಕೇವಲ ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುವುದು ಮಾತ್ರವಲ್ಲ, ಆ ಹಳೆಯ ನೆನಪಿನ ಜಾಗದಲ್ಲಿ ಹೋಗಿ ನಿಲ್ಲುವ ಅನುಭವ ನನಗೆ ಇಂದು ದಕ್ಕಿತು. ಕಟ್ಟಡದ ಪ್ರತಿ ಮೂಲೆ, ಮೂಲೆಗೆ ಹೋಗಿ ಬಂದೆ. ೨೩ವರ್ಷದ ಹಿಂದಿನ ನಾಟಕದ ನೆನಪನ್ನು ಪ್ರತಿ ಮೂಲೆಯಲ್ಲಿ ನಿಂತು ಸವಿದೆ.

ಅಂದು ಜೊತೆಯಿದ್ದ ದಿಲಾವರ್, ರವಿ, ಮುದ್ದಣ್ಣ, ಅನಿರುದ್ಧ, ಗೋಪಾಲ, ಜಗದೀಶ್ ಎಲ್ಲರೂ ಇಂದಿಗೂ ಜೊತೆಯಿದ್ದಂತೆ ಅನಿಸಿದ್ದು ಸುಳ್ಳಲ್ಲ. ಅದೇ ನೆನಪಿನ ಗುಂಗಲ್ಲಿ ಗೋಪಾಲ ವಾಜಪೇಯಿ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 45 ನಿಮಿಷಗಳ ನಿರರ್ಗಳ ಮಾತು, ಹೊರಗೆ ನಿಸರ್ಗದ ಮಳೆ, ಒಳಗೆ ಮಾತಿನ ಮಳೆ. ಮಾತು ಮುಗಿದ ಮೇಲೆ ನಿಲ್ಲದ ಚಪ್ಪಾಳೆ…… ನಿನ್ನೆಯ ದಿನ ನನ್ನ ಜೀವನದಲ್ಲಿ ಬಹುದಿನಗಳ ಕಾಲ ನೆನಪಿನಲ್ಲುಳಿಯುವಂತಹ ದಿನ.

ಗೋಪಾಲ ವಾಜಪೇಯಿ ನೆನಪಿನಲ್ಲಿ ಒಂದು ಅದ್ಭುತ ಕಾರ್ಯಕ್ರಮವನ್ನು ನಿನ್ನೆ ಘೋಷಿಸಿದೆ. ಅದನ್ನು ಕಾರ್ಯರೂಪಕ್ಕೆ ತರಲು ನನ್ನನ್ನು ನಾನು ತೊಡಗಿಸಿಕೊಳ್ಳುತ್ತಿದ್ದೆನೆ. ಮುಂದಿನ ವಿವರಗಳು ಇಷ್ಟರಲ್ಲಿಯೇ ನಿಮ್ಮ ಮುಂದೆ ಬರಲಿದೆ…….

‍ಲೇಖಕರು avadhi

21 September, 2018

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading