ಕಾಣದ ಕಡಲಿಗೆ ಹಂಬಲಿಸಿದೆ ಮನ… ಹೆಜ್ಜೆ -3
ಮಾತು ಮಂಥನ

ಬೆಳಿಗ್ಗೆ ಸುಮಾರು ಐದು ಗಂಟೆಗೆ ಪ್ರತೀ ಕೋಣೆಯ ಬಾಗಿಲು ಬಡಿದು ಎಬ್ಬಿಸಿ ಧ್ಯಾನ ಶಿಬಿರಕ್ಕೆ ಅಣಿಯಾಗಲು ಹೇಳಿದರು. ಮುಖತೊಳೆದು ಯೋಗ ಮಾಡಲು ಹೊರಟೆ. ಯೋಗ ನಿಲ್ಲಿಸಿ ಬಹಳ ದಿನವಾಗಿದ್ದರಿಂದ ವಜ್ರಾಸನದಲ್ಲಿ ಕೂರಲು ಹಾಗೂ ಕೆಲವು ಆಸನಗಳನ್ನು ಮಾಡಲು ಕಷ್ಟವಾಯಿತು. ಮೈತುಂಬಾ ಬೆವರಿಳಿದಿದ್ದರಿಂದ ಮನಸ್ಸು ಕೂಡ ಉಲ್ಲಾಸಭರಿತವಾಯಿತು. ಹಾಗೇ ಕೋಣೆಗೆ ಹೋಗುವ ದಾರಿಯಲ್ಲಿ ಆ ಭೇದಿ ತಾತ ಮತ್ತು ಮಿಲಟರಿ ತಾತ ಕುಳಿತಿದ್ದರು. ಮಿಲಿಟರಿ ತಾತ ಸುಮ್ಮನೆ ನಕ್ಕರು. ನಾನು ಅವರನ್ನು ದಾಟಿ ಹೋಗುವಷ್ಟರಲ್ಲೇ ಆ ಭೇದಿ ತಾತ ಮಾತು ಶುರುಮಾಡಿಬಿಟ್ಟರು.
“ಏನ್ರೀ ಸಮಾಚಾರ? ಮೈಸೂರ ನಿಮ್ಮೂರು?”
ಅಯ್ಯೋ ನಿಮ್ಮ ಮನೆ ಕಾಯೋಗ, ನೆನ್ನೆಯಿಂದ ಹತ್ತು ಸಲ ಅದೇ ಪ್ರಶ್ನೆ ಕೇಳಿದ್ದೀಯಲ್ಲಪ್ಪಾ ಎಂದು ಕೇಳಬೇಕೆನಿಸಿತು. ಆದರೆ ಕೇಳಲಿಲ್ಲ.
“ಹೂಂ ಸರ್. ಮೈಸೂರು” ಎಂದಷ್ಟೇ ಉತ್ತರಿಸಿದೆ.
“ಬಹಳ ಫ್ಲೆಕ್ಸಿಬಲ್ ಇದೆ ನಿಮ್ಮ ದೇಹ. ಚೆನ್ನಾಗಿ ಯೋಗ ಮಾಡಿದಿರಿ” ಎಂದು ಹೊಗಳಿಕೆಯ ಮಾತುಗಳೊಂದಿಗೆ, ಅವರೂ ಕೂಡ ಸಣ್ಣ ವಯಸ್ಸಿನಲ್ಲಿ ಮೈಯನ್ನು ದಂಡಿಸಿ ಗಟ್ಟಿಯಾಗಿ ಇಟ್ಟುಕೊಂಡಿದ್ದು, ಅವರ ವಕೀಲ ವೃತಿ, ನಂತರದ ಆರೋಗ್ಯದ ತೊಂದರೆಗಳನ್ನು ಅವರ ಬಟ್ಲರ್ ಆಂಗ್ಲ ಭಾಷೆಯಲ್ಲಿ ವಿವರಿಸಿದರು. ನೆನ್ನೆಯಿಂದ ಇದು ನನಗೆ ಮೂರನೇ ಸಲ. ಇನ್ನು ಅವರ ಸ್ನೇಹಿತ ಮಿಲಿಟರಿ ತಾತ, ಸದಾ ಜೊತೆಯಲ್ಲೇ ಇರುವವರು, ಈ ಕಥೆಯನ್ನು ಅವರು ಎಷ್ಟು ಸಾವಿರ ಸಲ ಕೇಳಿರಬಹುದು. ಅದಕ್ಕೇ ಅನಿಸುತ್ತೆ, ಭೇದಿ ತಾತನ ವೈಲಿನ್ ನಾದ ಶುರುಮಾಡಿದರೇ ಸಾಕು, ಮಿಲಿಟರಿ ತಾತ ನಮ್ಮನ್ನು ನೋಡಿ ಹುಸಿನಗು ಬೀರುತ್ತಿರುತ್ತಾರೆ “ಮಕ್ಳಾ! ಸಿಕ್ಕಾಕೊಂಡಿರಿ” ಅಂತ. ಮತ್ತೆ ಭೇದಿಯ ವಿವರಣೆಯೊಂದಿಗೆ ಕೊನೆಯ ಹಂತ ತಲುಪಿತು. ಅದರ ಸವಿವರ ಕೊಡಲು ಶುರುಮಾಡಿದಾಗ ನಾನು ಹೇಳಿದೆ.
“ಸರ್! ನನಗೂ ಅದೇ ಪ್ರಾಬ್ಲಮ್ಮು. ಅದಕ್ಕೇ ಅವಸರವಾಗಿ ನನ್ನ ಕೋಣೆಗೆ ಹೋಗುತ್ತಿದ್ದೆ. ನೀವು ತಡೆದು ಬಿಟ್ಟಿರಿ. ನೀವು ಕಥೆ ಮುಂದುವರಿಸಿದರೆ ನಾನು ಇಲ್ಲೇ ನನ್ನ ಕೆಲಸ ಮಾಡಿ ಮುಗಿಸುತ್ತೇನೆ” ಎಂದು ಹೆದರಿಸಿದೆ.
ಗಾಬರಿಗೊಂಡು “ಸಾರಿ ಸಾರಿ! ಹೋಗಿ ಬೇಗ ನಿಮ್ಮ ರೂಮಿಗೆ. ಮತ್ತೆ ಸಿಗೋಣ” ಎಂದು ಹೇಳಿ ಅವರ ಭೇದಿ ವಿವರಣೆಯಿಂದ ನನ್ನನ್ನು ಪಾರು ಮಾಡಿದರು.
ಮತ್ತೆ ನಿಮಗೆ ನಾನು ಮುಂದಿನ ಜನ್ಮದಲ್ಲೂ ಸಿಗುವುದಿಲ್ಲ ಎಂದು ಮನಸ್ಸಿನಲ್ಲಿ ಹೇಳಿಕೊಂಡು ನಾನು ನನ್ನ ಕೋಣೆಗೆ ತೆರಳಿದೆ.
ವಾಪಸ್ಸು ಬರುವ ದಾರಿಯಲ್ಲಿ ಮತ್ತೆ ಸಿಕ್ಕ ಭೇದಿ ತಾತ “ಎಲ್ಲ ಚೆನ್ನಾಗಿ ಆಯಿತಾ?” ಎಂದು ಕೇಳಿದರು.
“ಫಸ್ಟ್ ಕ್ಲಾಸ್ ಆಗಿ ಆಯಿತು. ಆದರೆ ಅದನ್ನು ನಿಮ್ಮ ತರಹ ವರ್ಣಿಸಲು ನನಗೆ ಬರುವುದಿಲ್ಲ” ಎಂದಿದ್ದಕ್ಕೆ ಸ್ನೇಹಿತರಿಬ್ಬರೂ ಜೋರಾಗಿ ನಕ್ಕರು.
ನಾನು ಅಲ್ಲಿ ನಿಲ್ಲಲಿಲ್ಲ. ಧ್ಯಾನ ಮಂದಿರದ ಹತ್ತಿರ ಕುಳಿತರೆ ಯಾರಾದರೊಬ್ಬರು ನನ್ನನ್ನು ಮಾತನಾಡಿಸಿ ಪೀಡಿಸುತ್ತಾರೆ ಎಂದು ನೆನೆದು ಹಸುವಿನ ಕೊಟ್ಟಿಗೆಯ ಕಡೆಗೆ ನೋಡಿದೆ. ಖಾಲಿಯಿತ್ತು. ಹತ್ತಿರ ಹೋಗಿ ನೋಡಿದರೆ, ಕೊಟ್ಟಿಗೆಯನ್ನು ತೊಳೆದು ಸ್ವಚ್ಚ ಮಾಡಿದ್ದರು. ಅಲ್ಲೇ ಇದ್ದ ಒಂದು ಗೋಣಿ ಚೀಲವನ್ನು ಹಾಸಿ, ಅದರ ಮೇಲೆ ಮಂಡಿಗಳನ್ನು ಮಡಚಿ ಕುಳಿತ ತಕ್ಷಣ ನೊಣಗಳು ಮುತ್ತಿಕೊಂಡವು. ಮನುಷ್ಯರಿಗಿಂತ ನೊಣಗಳೇ ಮೇಲು, ಸುಮ್ಮನೆ ಗೋಯ್‍ಗುಟ್ಟುತ್ತವೆ. ಆದರೆ ನಮ್ಮಿಂದ ಯಾವುದೇ ಪ್ರತ್ಯುತ್ತರ ಬಯಸುವುದಿಲ್ಲ. ಅವುಗಳ ಬೆದರಿಕೆಗೆ ಜಗ್ಗದೆ ಧ್ಯಾನದಲ್ಲಿ ನಿರತನಾದೆ. ಕೆಳಗೆ ಕುಳಿತು ಅಷ್ಟಾಗಿ ಅಭ್ಯಾಸವಿಲ್ಲದ ಕಾರಣ ಮಂಡಿಗಳು ನೋಯಲು ಶುರುವಾಯಿತು. ಹಾಗೆ ಓಡಾಡಿಕೊಂಡು ಆಶ್ರಮದ ಕಡೆ ಬಂದೆ.
ತನ್ನ ಜೀವನದಲ್ಲಿ ವೈರಾಗ್ಯ ಮೂಡಿ ಸನ್ಯಾಸಿಯಾಗಲು ಪರಿತಪಿಸುತ್ತಿದ್ದ ನೀಲಕಂಠ ತನ್ನ ಪುಟ್ಟ ಪಾಕೆಟ್ ಡೈರಿಯಲ್ಲಿ ಏನೋ ಗೀಚುತ್ತಿದ್ದ. ನಾನು ಕುತೂಹಲ ತಡೆಯಲಾರದೆ ಅವನನ್ನು ಹೋಗಿ ಮಾತನಾಡಿಸಿದೆ.
“ನೀಲಕಂಠಸ್ವಾಮಿಯವರಿಗೆ ನಮಸ್ಕಾರ” ಎಂದು ನನ್ನ ತಲೆಯನ್ನು ಬಾಗಿಸಿ ನನ್ನ ಎರಡು ಕೈಗಳನ್ನು ಜೋಡಿಸಿದೆ.
“ಶರಣ್‍ರೀ. ಬನ್ನಿ” ಎಂದು ವಿನಯದಿಂದ ತನ್ನ ಪಕ್ಕ ಖಾಲಿಯಿದ್ದ ಜಾಗವನ್ನು ತೋರಿಸಿದ.
ಅವನ ಬಾಜು ಕುಳಿತು ಕೇಳಿದೆ “ಏನ್ ಬರೆಯುತ್ತಿದ್ದೀಯ? ಏನ್ ಕಥೆ ನಿಂದು?”.
“ವಚನ ಬರಯಾಕ್ ಹತ್ತೀನ್ರಿ” ಎಂದ.
ಏನು ಬರೆದಿರಬಹುದು ಎಂಬ ಕುತೂಹಲ ಮೂಡಿ “ಎಲ್ಲಿ ಏನು ಬರೆಯುತ್ತಿದ್ದೀಯ. ಓದಿ ಹೇಳು ನೋಡೋಣ” ಎಂದು ಕೇಳಿದೆ.
ಒಂದಾದರ ಮೇಲೊಂದು ತಾನು ಬರೆದ ವಚನಗಳನ್ನು ಓದುತ್ತಾ ಅದರ ಸ್ವಾರಸ್ಯವನ್ನು ವಿವರವಾಗಿ ನನ್ನ ಜೊತೆ ಚರ್ಚಿಸತೊಡಗಿದ. ನನಗೆ ಬಹಳ ಆಶ್ಚರ್ಯವಾಯಿತು. ಅವನ ಡೈರಿಯನ್ನು ತೆಗೆದುಕೊಂಡು ನೋಡಿದೆ. ಸ್ವಚ್ಚವಾದ ಬರವಣಿಗೆ, ಆದರೆ ಅಲ್ಲಲ್ಲಿ ವ್ಯಾಕರಣ ತಪ್ಪುಗಳು ಕಾಣುತ್ತಿದ್ದವು.
“ಎಷ್ಟು ನಿನ್ನ ವಯಸ್ಸು? ಏನು ಓದಿರುವೆ?” ಎಂದು ಕೇಳಿದೆ.
“ನಾನ್ ರೀ, ಎಸ್.ಎಸ್.ಎಲ್.ಸಿ ಫೇಲ್ ಆಗಿ ಮುಂದುವರಿಸಲಿಲ್ಲ್ರೀ. ಈಗ ವಯಸ್ಸು 20 ನಡಿತಾ ಐತ್ರೀ” ಎಂದ.
ಪರವಾಗಿಲ್ವೆ ಅಷ್ಟೊಂದು ವಿದ್ಯೆಯಿಲ್ಲದಿದ್ದರೂ, ವಯಸ್ಸು ಚಿಕ್ಕದಾದರೂ ವಚನಗಳನ್ನು ಬರೆಯುವಷ್ಟು ಪ್ರೌಢತೆ ಎಲ್ಲಿಂದ ಬಂತು ಎಂದು ತಿಳಿಯಲು “ಯಾವಾಗಿನಿಂದ ನಿಂಗೆ ಸನ್ಯಾಸಿ ಆಗಬೇಕು ಅಂತ ಅನಿಸತೊಡಗಿತು? ಯಾವಾಗಿನಿಂದ ವಚನ ಬರೆಯಲು ಶುರುಮಾಡಿದೆ?” ಎಂದು ಕೇಳಿದೆ.
ಬಹಳ ಚಿಕ್ಕವಯಸ್ಸಿನಿಂದಲೇ ವಚನಗಳನ್ನು ಶುರುಮಾಡಿದ್ದಾಗಿ, ಐದನೇ ತರಗತಿಯಲ್ಲಿ ಕೇಳಿದ ಪ್ರವಚನದಿಂದ ಪ್ರೇರಣೆಗೊಂಡು, ಸನ್ಯಾಸಿ ಆಗಲು ನಿರ್ಧರಿಸಿದನೆಂದು ಹೇಳಿದ. “ಆದ್ರಾ, ಒಂದು ನಿಜ ಒಪ್ಪಕೋ ಬೇಕ್ರೀ. ನಂಗಾ ಮನಸ್ಸು ಗಟ್ಟಿ ಇಲ್ರೀ. ನಾನ್ ಸುಳ್ಳೇಳಲ್ರೀ. ನಂದೂ ಬಾಳ ಚಂಚಲ ಮನಸ್ರೀ. ಇಲ್ಲಿ ಒಂದು ಹೇಳ್ತದಾ. ಮನಯಾಗ್‍ವಂದು ಹೇಳ್ತದಾ. ನಾನ್ ಒಂದ್ ಜಾಗದಲ್ಲೂ ನಿಂತಿಲ್ರೀ. ಗಾರೆ ಕೆಲಸ ಮಾಡೀನ್ರಿ, ವೆಲ್ಡಿಂಗ್ ಕೆಲಸ ಮಾಡೀನ್ರಿ, ಹೊಲದಲ್ಲಿ ಕೂಲಿ ಮಾಡೀನ್ರಿ, ಎಲ್ಲಾ ಕೆಲ್ಸಾ ಚಲೋ ಬರ್ತೈತ್ರಿ. ಆದ್ರಾ ಎಲ್ಲೂನೂ ನಿಲ್ಲೋಲ್ರೀ ಸರ್ರಾ. ಇನ್ ಎರಡು ಮೂರ್ ದಿನಾ ರೀ. ಎಲ್ಡ್ರಾಗ್‍ಗೊಂದು ನಿರ್ಧಾರ ಮಾಡ್‍ಬಿಡ್ತೀನ್ರಿ” ಎಂದ.
ನಾನೂ ಕೂಡ ನನ್ನ ವಿಷಯವನ್ನು ಹಂಚಿಕೊಂಡು ಅವನ ಮನಸ್ಸನ್ನು ಸ್ವಲ್ಪ ಸುಧಾರಿಸಿ “ಸರಿ ಅದು ಬಿಡು, ನೀ ಇಷ್ಟು ಚಂದ ವಚನ ಬರೀತೀಯಲ್ಲಾ. ಅದನ್ನಾದರೂ ಒಂದುಗೂಡಿಸಿ ಒಂದು ಪುಸ್ತಕ ಮಾಡು” ಎಂದು ಸಲಹೆಯನ್ನಿಟ್ಟು ಅಲ್ಲಿಂದ ಹೊರಟೆ.
ಮಧ್ಯಾಹ್ನದ ಊಟ, ನಿದ್ರೆ ಮುಗಿಸಿ ನಾನು ಇತ್ತ ಬರುವ ಮೊದಲೇ ನೀಲಕಂಠಸ್ವಾಮಿ ಹೊರಟು ಹೋಗಿದ್ದು ನನಗೆ ಬಹಳ ಬೇಸರವಾಯ್ತು. ಅವನ ವಚನಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಆಸೆಯಿತ್ತು. ಒಂದು ಮಾತು ಹೇಳಿ ಹೋಗಬಾರದೆ? ಸ್ಥಳ ಬದಲಾವಣೆಯಾಗಲೆಂದು ಕೊಟ್ಟಿಗೆಯೊಳಗೆ ಹೋಗದೆ, ಅದರ ಎದುರಿಗೆ ಇದ್ದ ನೀರಿನ ತೊಟ್ಟಿಯ ಮೇಲೆ ಕುಳಿತೆ. ಎಂತಹ ವಿಸ್ಮಯ ನೋಟ ಎನ್ನುತ್ತೀರ. ಒಂದು ದೊಡ್ಡ ಹಳ್ಳ. ಹಳ್ಳ ದಾಟಿದರೆ ಗುಡ್ಡಗಳ ಸಾಲು. ಸಾಲಿನ ಮಧ್ಯೆ ಕಾಣುವ ದೊಡ್ಡ ಕೆರೆ. ಗುಡ್ಡಗಳ ಮೇಲೆ ಹಾದು ಹೋಗುವ ಹೈಟೆನ್‍ಶನ್ ಪವರ್ ಲೈನ್. ಐದು ನಿಮಿಷ ಹಾಗೆಯೇ ನನ್ನ ಕಣ್ಣುಗಳನ್ನು ಅರಳಿಸಿ ನೋಡುತ್ತಾ ಕುಳಿತು ಬಿಟ್ಟೆ. ಗುಡ್ಡಗಳನ್ನು ಹತ್ತಿಳಿದರೆ ಅಲ್ಲೊಂದು ಇಲ್ಲೊಂದು ಹಳ್ಳಿ.
ಪ್ರಾರ್ಥನೆಗೆ ಗಂಟೆ ಹೊಡೆದ ಕಾರಣ, ಎದ್ದು ಮುಖತೊಳೆಯಲು ಹೊರಟೆ. ಎರಡನೇ ದಿನದ ಉಪವಾಸಕ್ಕೆ ನನ್ನ ಮೈ ಒಗ್ಗತೊಡಗಿತ್ತು. ಹಸಿವಿನ ಬಾಧೆಯು ಅಷ್ಟಾಗಿ ಕಾಡುತ್ತಿರಲಿಲ್ಲ. ದಿನಕ್ಕೆ ಎರಡು ಸಲ, ಎರಡು ಪಾಚಿ ತುಂಬಿದ ಸ್ಪಿರುಲಿನ ಮಾತ್ರೆಗಳನ್ನು ನುಂಗುತ್ತಿದ್ದೆವು. ಗುಳಿಗೆಗಳು ನಮ್ಮ ದೇಹಕ್ಕೆ ಬೇಕಾಗುವ ಕಬ್ಬಿಣ, ಕ್ಯಾಲ್‍ಶಿಯಮ್ ಮತ್ತು ಇತರೆ ಅಂಶಗಳನ್ನು ಒದಗಿಸುತ್ತಿತ್ತು. ನಾವು ಕುಡಿಯುವ ಪಾನಕದಲ್ಲಿ ಜೇನು ತುಪ್ಪ ಬೆರೆಸುವುದರಿಂದ, ನಮ್ಮ ದೇಹದಲ್ಲಿದ್ದ ಬೇಡದ ಕೊಬ್ಬನ್ನು ಕರಗಿಸಲು ಸಹಕಾರಿಯಾಗುತ್ತಿತ್ತು. ಎರಡನೇ ದಿನಕ್ಕೆ ಒಂದು ಹೊಸ ಹುರುಪು ಬಂದಿತ್ತು. ಆಶ್ರಮವೂ ಮನಸ್ಸಿಗೆ ಬಹಳ ಇಷ್ಟವಾಗತೊಡಗಿತ್ತು.
ಆಶ್ರಮದ ಹುಡುಗರೆಲ್ಲಾ ಶಿಬಿರದ ತಯಾರಿಯಲ್ಲಿ ತೊಡಗಿದ್ದರು. ಕೋಣೆಗಳನ್ನು ಸ್ವಚ್ಛಮಾಡಿ, ಹಾಸಿಗೆ ಮೇಲೆ ಹಾಸಿದ್ದ ಬೆಡ್‍ಶೀಟ್ ಮತ್ತು ಕಂಬಳಿಗಳನ್ನು ಒಗೆದು ಒಣಗಿಸುತ್ತಿದ್ದರು. ಇನ್ನೊಂದು ಗುಂಪು ಧಾರವಾಡಕ್ಕೆ ಹೋಗಿ ಶಿಬಿರಕ್ಕೆ ಬೇಕಾಗುವ ಸಾಮಾನು ಸರಂಜಾಮುಗಳನ್ನು ತರುತ್ತಿದ್ದರು. ಆದಾಗಲೇ ನನ್ನ ಕೈಲಾದ ಸೇವೆಯನ್ನು ಶುರುಮಾಡಿದ್ದರಿಂದ ಹಲವರಲ್ಲಿ ನನ್ನ ಮೇಲೆ ಕುತೂಹಲ ಹಾಗೂ ಮಮತೆ ಎರಡೂ ಮೂಡಿತ್ತು. ನಾನು ಹುಡುಗರನ್ನು ಜಾಸ್ತಿ ಒಗ್ಗಿಸಿಕೊಂಡಿರಲಿಲ್ಲ. ಏಕೆಂದರೆ ಒಗ್ಗಿದ ಮೇಲೆ ಮಾತು ಬೆಳೆಯುತ್ತದೆ. ಆಶ್ರಮದ ಸಿಬ್ಬಂದಿ ನನ್ನ ಜೊತೆ ಮಾತನಾಡಲು ಕುಳಿತರೆ, ಶಿಬಿರದ ಕೆಲಸವೂ ಕೆಡುತ್ತದೆ. ಬಿಟ್ಟಿ ಕೂಳು ತಿಂದು ಆಶ್ರಮದ ಹುಡುಗರನ್ನೆಲ್ಲಾ ಕೆಡಿಸುತ್ತಿದ್ದಾನೆ ಎಂದು ತಿಳಿದು ಅಪ್ಪಾವ್ರಿಗೆ ಬೇಸರ ಮೂಡಬಹುದು. ಅದಕ್ಕೆ ಒಂದು ತಾಜಾ ಉದಾಹರಣೆ. ಸಂಜೆ ಐದು ಗಂಟೆಯ ಸುಮಾರಿಗೆ ನನ್ನ ಪಾಡಿಗೆ ಧ್ಯಾನಮಂದಿರದ ಹತ್ತಿರ ಕುಳಿತಿದ್ದೆ. ಅಪ್ಪಾವ್ರ ಬಹುಮೆಚ್ಚಿನ ಸಹಾಯಕ ಗುಡ್ಡ ಸುತ್ತಲು ಹೊರಟಿದ್ದರು. ಸುಮಾರು ಎಪ್ಪತ್ತರ ಅಜ್ಜ. ತುಂಬಾ ಸಾತ್ವಿಕ ವ್ಯಕ್ತಿ. ನನ್ನತ್ತ ತಿರುಗಿ.
“ರೀ, ವಾಕಿಂಗ್ ಹೋಗೋಣ ಬರುತ್ತೀರ?” ಎಂದು ಕೇಳಿದ. ಬಿಳಿ ಪಂಚೆ, ಬಿಳಿ ಅಂಗಿಯ ಮೇಲೆ ಬಿಳಿ ಬಣ್ಣದ ಟವಲ್ ಅವರ ವೇಷಭೂಷಣ. ನನಗೂ ಅವರ ಕೂಡ ಹೋಗಿ ಗುಡ್ಡಗಳನ್ನು ಸುತ್ತಿಬರುವ ಆಸೆಯಾಯಿತು.
“ಹೂಂ, ಬರುತ್ತೀನಿ ಅಜ್ಜ. ತಡೀರಿ ಬಂದೆ” ಎಂದು ಹೇಳಿ ಹೊರಟೆ.
“ಬರೀಗಾಲಲ್ಲೇ ಬರುತ್ತಿದ್ದೀಯಲ್ಲಾ. ಕಲ್ಲುಗಳು ನಿನ್ನ ಕಾಲಿಗೆ ಚುಚ್ಚಬಹುದು. ಚಪ್ಪಲಿ ಮೆಟ್ಟಿಕೊಂಡು ಬಾ” ಎಂದು ತಮ್ಮ ಕಾಳಜಿ ಮೆರೆದರು. ಅವರು ಆಡುತ್ತಿದ್ದ ಭಾಷಾ ರೀತಿಯನ್ನು ನೋಡಿದರೆ ಅವರು ನಮ್ಮ ಹಳೇ ಮೈಸೂರಿನ ಕಡೆಯವರೇ ಇರಬಹುದು ಎಂದು ಕಾಣಿಸಿತು.
“ಚಪ್ಪಲಿ ಇಲ್ಲ ಅಜ್ಜ. ಊರಿನಿಂದ ಶೂ ಧರಿಸಿ ಬಂದಿದ್ದೇನೆ. ಅವು ರೂಮಿನಲ್ಲಿವೆ. ಅವನ್ನು ಮೆಟ್ಟಿಕೊಂಡು ಬರುವುದೆಂದರೆ ಸಮಯ ಹಿಡಿಯುತ್ತದೆ. ನನ್ನ ಪಾದಗಳು ಸರಿಯಾಗಿ ಭೂಮಿಯನ್ನು ಸ್ಪರ್ಶಿಸಿ ಬಹಳ ವರ್ಷಗಳೇ ಕಳೆದಿವೆ. ನಡೀರಿ ಬರೀ ಕಾಲಲ್ಲೇ ಬರ್ತೀನಿ” ಎಂದೆ.
ತುಸು ನಕ್ಕು “ಸರಿ ಬಾ” ಎಂದು ಕರೆದುಕೊಂಡು ಡಾಂಬರಿನ ರಸ್ತೆ ಹಿಡಿದು ಗುಡ್ಡಗಳ ದಾಟಿ ನಾಯಕನ ಹುಲಿಕಟ್ಟಿ ಕ್ರಾಸಿನ ಕಡೆಗೆ ಹೊರೆಟೆವು.
“ಯಾವ್ ಕಡೆಯವರು ನೀವು ಅಜ್ಜ? ಇಲ್ಲಿ ಬಂದು ಹೇಗೆ ಸೇರಿದಿರಿ?” ಎಂದು ಮಾತು ಶುರುಮಾಡಿದೆ.
ಅವರ ಹೆಸರು ಮಹಾಲಿಂಗಪ್ಪ. ತುಮಕೂರಿನ ಕಡೆಯವರು. ಅಪ್ಪಾವ್ರು ಮಹಾಲಿಂಗಪ್ಪನವರ ಕಿರಿಯ ಮಗನನ್ನು ಆಶ್ರಮಕ್ಕೆ ತಂದು ಸೇವೆ ಮಾಡಲು ಬಿಟ್ಟಿದ್ದರಂತೆ. ಅವನು ಇಲ್ಲಿ ಇರಲು ಆಗದೇ ಮಹಾಲಿಂಗಪ್ಪನವರನ್ನು ಇಲ್ಲಿ ಸಿಕ್ಕಿಸಿದನಂತೆ. ಅಪ್ಪಾವ್ರು ಇವರನ್ನು ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ ಎಂಬುದನ್ನು ಬಹಳ ತಮಾಷೆಯಾಗಿ ಹೇಳಿದರು. ಅವರ ದೊಡ್ಡ ಮಗ, ಶ್ರೀಮಂತರ ಮಗಳನ್ನು ಮದುವೆಯಾಗಿ ಮನೆ ಅಳಿಯನಾದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅವರ ಹೆಂಡತಿ ವಿಧವೆಯಾದ ತಮ್ಮ ಹಿರಿಯ ಮಗಳ ಜೊತೆ ವಾಸವಿರುವುದಾಗಿ ಹೇಳಿದರು. ಅ
ವರು ಹೇಳಿದುದರಲ್ಲಿ ನನಗೆ ತುಂಬಾ ಆಶ್ಚರ್ಯವೆನಿಸಿದ್ದು, ಅಪ್ಪಾವ್ರು ಹಾಗು ಅಮ್ಮಾವ್ರು ಮಹಾಲಿಂಗಪ್ಪನವರೊಡನೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಕೋಪಿಸಿಕೊಂಡು ಶಿಕ್ಷೆಯಾಗಿ ಇವರಿಗೆ ಹೊಡೆದದ್ದು. ಇವರು ತುಂಬಾ ಬೇಸರಿಸಿಕೊಂಡು, ಮನೆಗೆ ಹೊರಟು ಹೋಗಲು ಪರಿಚಯಸ್ತರ ಹತ್ತಿರ ಇನ್ನೂರು ರೂಪಾಯಿಯನ್ನು ಸಾಲ ಪಡೆದು ಧಾರವಾಡದ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದರಂತೆ. ಅಷ್ಟರಲ್ಲಿ ಅಪ್ಪಾವ್ರು ತಮ್ಮ ತಪ್ಪಿನ ಅರಿವಾಗಿ ಇವರಿಗೆ ದೂರವಾಣಿ ಕರೆಮಾಡಿ ವಾಪಸ್ಸು ಬರಹೇಳಿದರಂತೆ. ಎಲ್ಲವೂ ಅವರ ನೋವಿನ ಕಥೆಯಾದರೂ, ಅದನ್ನು ಬಹಳ ಹಾಸ್ಯಭರಿತವಾಗಿ ನಿರೂಪಿಸಿದರು. ಹೀಗೆ ಅವರ ಕಥೆ ಕೇಳುತ್ತಾ, ನಗುತ್ತಾ ಬಹಳ ದೂರ ಕ್ರಮಿಸಿಬಿಟ್ಟಿದ್ದೆವು.
ಅಷ್ಟರಲ್ಲಿ ಅಪ್ಪಾವ್ರು ಮಹಾಲಿಂಗಪ್ಪನವರಿಗೆ ದೂರವಾಣಿ ಕರೆಮಾಡಿ. “ಎಲ್ಲಿ ಹೋಗಿರುವೆ? ಬೇಗ ಬಾ ಇಲ್ಲಿ. ಕೆಲಸಗಳಿವೆ” ಎಂದರು. ನಾವು ಗಾಬರಿಗೊಂಡು ಆಶ್ರಮಕ್ಕೆ ಹಿಂತಿರುಗಲು ಶುರುಮಾಡಿದೆವು. ಮಹಾಲಿಂಗಪ್ಪನವರು ಬೇಜಾರು ಮಾಡಿಕೊಂಡು “ನೋಡ್ರಿ! ಮೂರು ಹೊತ್ತು ಅಲ್ಲೇ ಇರುತ್ತೀನಿ. ಯಾವಾಗಲಾದರೂ ಹೀಗೆ ಸ್ವಲ್ಪ ಹೊರಗಡೆ ಬಂದರೆ ಸಾಕು. ನನ್ನ ಗ್ರಹಚಾರಕ್ಕೆ ಆವಾಗಲೇ ಅಪ್ಪಾವ್ರ ದೂರವಾಣಿ ಕರೆ ಬರುತ್ತದೆ” ಎಂದು ನಕ್ಕರು. ಮಳೆಯ ಸೆಳೆತದಿಂದ ಡಾಂಬರಿನ ರಸ್ತೆಯ ಮೇಲೆ ಚಿಕ್ಕ ಚಿಕ್ಕ ಕಲ್ಲುಗಳು ಹರಡಿದ್ದವು. ನಾನು ಬರೀ ಪಾದದಲ್ಲೆ ನಡೆದು ಹೋಗಿದ್ದರಿಂದ ನನ್ನ ಪಾದಗಳಿಗೆ ಅವು ಚುಚ್ಚುತ್ತಿದ್ದವು. ವಾಪಸ್ಸು ಬರುವುದು ಬಹಳ ತ್ರಾಸವಾಯಿತು. ಆಗಲೂ ಮಹಾಲಿಂಗಪ್ಪನವರು ಅವರ ಕಥೆಗಳದೇ ಕಾರುಬಾರು. ಹಿರಿಯರೆಲ್ಲರ ಆಟ ಪಾಠ, ಮಾತುಗಳು ಎಷ್ಟೇ ಗಂಭೀರ ವಿಷಯವಾಗಿದ್ದರೂ, ಅವರು ಹೇಳುವ ರೀತಿಯಲ್ಲೇ ನನಗೆ ನಗು ತರಿಸುತ್ತದೆ. ಪುಟ್ಟ ಮಕ್ಕಳಂತೆ ಬಹಳ ಮುಗ್ಧತೆಯಿಂದ ಮಾತನಾಡುತ್ತಾರೆ.
ಸಂಜೆಯ ಪ್ರಾರ್ಥನೆಯಲ್ಲಿ ಅಪ್ಪಾವ್ರು ಶಿಬಿರದ ವಿವರ ಕೊಟ್ಟು, ಶಿಬಿರದ ಯಶಸ್ಸಿಗೆ ನಮ್ಮೆಲ್ಲರ ಸಹಕಾರವನ್ನು ಕೋರಿದರು. ನನಗೆ ಮಠದ ಸೇವೆ ಮಾಡಲು ಇದೇ ಸರಿಯಾದ ಸಮಯವೆಂದು, ಆ ದಿನದಿಂದಲೇ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡೆ. ಶಿಬಿರದ ಸಂಭ್ರಮ ನನ್ನಲ್ಲೂ ಆವರಿಸಿಕೊಂಡಿತು. ಕೋಣೆಗೆ ಹಿಂತಿರುಗಿದ ಮೇಲೆ ಅಪ್ಪಾವ್ರು ಮಹಾಲಿಂಗಪ್ಪನ ಮೇಲೆ ಕೋಪ ಮಾಡಿಕೊಂಡಿದ್ದು ನನ್ನನ್ನು ಕಾಡಲು ಶುರುಮಾಡಿತು. ಇಷ್ಟು ಸಾಧನೆ ಮಾಡಿದವರಲ್ಲಿ ಹೇಗೆ ಅಷ್ಟೊಂದು ಕೋಪ ಬರಲು ಸಾಧ್ಯ? ಎಲ್ಲಾ ಸಮಯದಲ್ಲೂ ಸಾದ್ವಿಗಳಂತೆ ಇರುತ್ತಾರೆ. ನಿಜವಾಗಿ ಅವರು ಕೋಪವನ್ನು ಗೆದ್ದಿರಲಿಲ್ಲವೇ? ಸಾಧುಗಳೇ ಹೀಗಾಡ ಬೇಕಾದರೆ ಇನ್ನು ಸಾಮಾನ್ಯ ಜನರ ಪಾಡೇನು? ಹೀಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡವು.
ಸನ್ಯಾಸಿಯು ಕೋಪ ತಾಪ ಗೆಲ್ಲಲಿಲ್ಲ,
ಮೌಲಿಯ ಪ್ರಚೋದನೆ ನಿಲ್ಲಲಿಲ್ಲ,
ಪಾದ್ರಿಯ ಶಾಂತಿ ಮಾತಿಗೆ ಬೆಲೆಯಿಲ್ಲ,
ಇವೆಲ್ಲ ಇಲ್ಲಗಳ ನಡುವೆ ಸೌಹಾರ್ದತೆ ಬೆಳೆಯಬೇಕೆಲ್ಲಿ? ಓ ಪ್ರಕೃತಿ
ನಮ್ಮ ವಿಜ್ಞಾನಿಯವರಿಗೇಕೋ ಮಹಾಮನೆಯ ಚಿಕಿತ್ಸೆ ಅಷ್ಟೊಂದು ಇಷ್ಟವಾಗಲಿಲ್ಲ. ಬರೀ ನಿಂಬೆರಸ-ಜೇನುತುಪ್ಪದ ಪಾನಕ ಕುಡಿಯಲು ಇಲ್ಲೇಕೆ ಬರಬೇಕು ಎಂಬುದು ಅವರ ವಾದ. ಕೋಣೆಯ ಬಾಡಿಗೆ ಮತ್ತು ಸ್ವಚ್ಛತೆಯ ಬಗ್ಗೆ ಅವರಲ್ಲಿ ತಕರಾರು ಇತ್ತು. ಅವರ ವೈದ್ಯ ಪ್ರಯೋಗಗಳನ್ನು ಕೇಳುತ್ತಾ ನಾನು ನಿದ್ರೆಗೆ ಜಾರಿದೆ.
[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 25 ಮೈಲುಗಳು]





I loved ” bedhi thatha” very funny..
Very funny:)
Wonderful…….
Thank you 🙂