-ಮಧುಸೂದನ್ ಬೆಳಗುಲಿ
ಬಾಣಸಿಗ
‘ನೀನೊಬ್ಬ ಒಳ್ಳೆಯ ಬಾಣಸಿಗ’ ನೆಂದು
ನನ್ನ ಕೈಯ್ಯಡಿಗೆ ಉಂಡವರೆಲ್ಲ ಹೇಳುತ್ತಾರೆ.
ಹೆಚ್ಚುಗಾರಿಕೆಯೇನು ಇದರಲ್ಲಿ?
‘ಗುಟ್ಟೇನು ‘ ಎಂದು ಕೇಳುವವರಿಗೆಲ್ಲ
ನನ್ನ ಮರು ಪ್ರಶ್ನೆ ‘.-
ಎಲ್ಲೊ ಬೆಳೆದ ಧಾನ್ಯಕ್ಕೆ,
ಯಾವ ಸೀಮೆಯಲ್ಲೊ ಹುಟ್ಟಿದ ತರಕಾರಿಗೆ,
ಯಾರೋ ಹುರಿದು ಮಾಡಿದ ಮಸಾಲೆ
ಸೇರಿಸಿ ಹದ ಮಾಡುವುದೇನು ಘನ ವಿದ್ಯೆಯೇ?
ಉಪ್ಪಿನಲ್ಲೆಷ್ಟು ಲಾವಣಾಂಶ
ಮೆಣಸಿನಲ್ಲೆಷ್ಟು ಖಾರ
ಹುಣಸೆಯಲ್ಲೆಷ್ಟು ಹುಳಿ ಎಂದು ನೆಕ್ಕಿ
ನೋಡಲಾದೀತೆ ?
ಅನುಭವಕ್ಕಿಂತ ಬೇರೆ ಪಾಠವುಂಟೇ?
ಕೆಡಿಸಿ ಕಲಿತದ್ದೇ ಅಲ್ಲವೇ ಮೇಟಿ ವಿದ್ಯೆ?
ಪಕ್ಕದ ಮನೆಯ ಗೃಹಿಣಿ ಗಂಡನಿಗೆ ಹೇಳುತ್ತಿದ್ದುದು
ನನ್ನ ಕಿವಿಗೂ ಬಿದ್ದಿದೆ.
‘ ನೋಡಿ ಕಲಿಯಿರಿ ಅವರನ್ನು ‘
ಏನು ಕಲಿಯಬೇಕೆಂದು ಇಂದಿಗೂ ಯಕ್ಷ ಪ್ರಶ್ನೆ.
ನೋಡಿ ಕಲಿಯಲು ಅಡುಗೆಯೇನು ಏಕಲವ್ಯನ ಬಿಲ್ವಿದ್ಯೇಯೇ?
ಮಹಿಳಾ ಮಂಡಳಿಯ ಸ್ತ್ರೀ ಚಿಂತಕಿ ನಿತ್ಯವೂ
ಸಭೆಯಲ್ಲಿ ಹೇಳುವುದುಂಟು..
‘ ಅಪರೂಪಕ್ಕೆ ಅಡುಗೆ ಮಾಡುವ ಗಂಡಸರ
ಅಡುಗೆಗೇಕೆ ‘ ನಳಪಾಕ ‘ಎನ್ನುತ್ತಾರೆ?
ದಿನಾಲೂ ಒಲೆಯಲ್ಲಿ ಬೇಯುವ ಹೆಂಗಸರಿಗೊಂದು ಹೆಸರಿಡೋಣವೇ?
ಯಾರೋ ರುಚಿಕಟ್ಟಾಗಿದೆಯೆಂದು ಹೊಗಳಿದ್ದಕ್ಕೆ
ಅಟ್ಟವೇರಿದವನಲ್ಲ ನಾನು
ನನಗೂ ಹೊಟ್ಟೆಯಿದೆ, ಹಸಿವಿದೆ
ಹೊಟ್ಟೆಯ ಪಾಡಿಗೆ, ನಾಲಿಗೆಯ ಚಪಲಕ್ಕೆ,
ಮೂಗಿಗೆ ಬಡಿವ ಸುಗಂಧಕ್ಕೆ,
ಕೈಗೆ ಮೆತ್ತುವ ಮಸಾಲೆಯ ಘಮಕ್ಕೆ
ಕಣ್ಣಳತೆಗೆ ಸಿಗುವ ಹದಕ್ಕೆ ಅಡುಗೆ ಮಾಡುತ್ತೇನೆ.
ನಿತ್ಯವೂ ‘ಉಳಿದ ಅಡುಗೆ’ ತಿನ್ನುವ
ಬೀದಿ ನಾಯಿಗಳಿಂದ ಸುಮ್ಮನೆ
ಏಕೆ ಗುರುಗುಟ್ಟಿಸಿಕೊಳ್ಳಬೇಕೆಂಬ
ಮುನ್ನೆಚ್ಚರಿಕೆಯಿಂದ
‘ಅಚ್ಚುಕಟ್ಟಾಗಿ ಅಡುಗೆ ಮಾಡುತ್ತೇನೆ’.






0 Comments