ಪ್ರಿಯದರ್ಶಿನಿ ಶೆಟ್ಟರ್
ನಮ್ಮ ಶಾಲಾಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸುವ ಕುರಿತು ಪ್ರಸ್ತಾಪಿಸಿದಾಗಲೆಲ್ಲ ಅದನ್ನು ಪಾಲಕರೂ, ಶಿಕ್ಷಕರೂ ಸೇರಿದಂತೆ ಅನೇಕರು ವಿರೋಧಿಸಿದ್ದೇ ಹೆಚ್ಚು. ಹದಿಹರೆಯದವರಲ್ಲಿ ನೈಸರ್ಗಿಕವಾಗಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು, ಸ್ವಚ್ಛತೆಯ ಪ್ರಾಮುಖ್ಯತೆ, ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಅರಿವು, ಇತ್ಯಾದಿಗಳ ಕುರಿತು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಹಾಗೂ ತಜ್ಞವೈದ್ಯರ ಸಹಾಯದಿಂದ ಸರಿಯಾದ ಮಾಹಿತಿ ನೀಡುವುದು ಅತ್ಯವಶ್ಯ.
ಮುಟ್ಟು, ಹಾರ್ಮೋನ್ಗಳಲ್ಲಿನ ಬದಲಾವಣೆ, ಮಾತೃತ್ವ- ಇವೆಲ್ಲ ನಮ್ಮ ಜೀವನದ ಒಂದು ಭಾಗ ಮತ್ತು ನಾವೂ ಸಹ ಇವುಗಳ ಅವಿಭಾಜ್ಯ ಅಂಗ. ಆದ್ದರಿಂದ ಇಂತಹ ಸೂಕ್ಷ್ಮ ವಿಷಯಗಳನ್ನು ಕಲಿಸುವವರು ಘನತೆಯಿಂದ ಕಲಿಸಬೇಕು ಜೊತೆಗೆ ವಿದ್ಯಾರ್ಥಿಗಳೂ ಕೂಡ ಅದೊಂದು ಟ್ಯಾಬೂ ಎಂದು ಕಾಣದೆ, ಪ್ರಕೃತಿಸಹಜ ಬದಲಾವಣೆ ಎಂದರಿಯಬೇಕು. ತಿಳಿಹೇಳಬೇಕಾದವರೇ ಇವೆಲ್ಲದರ ಬಗ್ಗೆ ಹೇಳದೇ ಇದ್ದರೆ, ವಿಷಯಗಳನ್ನು ಮುಚ್ಚಿಟ್ಟರೆ ಅಥವಾ ತಗ್ಗಿದ ದನಿಯಲ್ಲಿ ಮಾತಾಡಿದರೆ, ಇಂತಹ ವಿಷಯಗಳಲ್ಲಿ ಕೆಟ್ಟ ಕುತೂಹಲ ಹೆಚ್ಚುತ್ತದೆ. ಚಿಕ್ಕಂದಿನಲ್ಲಿಯೇ ಪಾಲಕರಾಗಲಿ, ಶಿಕ್ಷಕರಾಗಲಿ ಜಾಗೃತಿ ಮೂಡಿಸಿದರೆ ಲೈಂಗಿಕತೆಯ ಕುರಿತ ಅನಗತ್ಯ ಕುತೂಹಲ ತಾನಾಗಿಯೇ ಕಡಿಮೆಯಾಗುತ್ತದೆ. ಕ್ರಮೇಣವಾಗಿ ಯುವಜನತೆ ಕೀಳು ಅಭಿರುಚಿಗಳತ್ತ ವಾಲುವುದೂ ಕಡಿಮೆಯಾಗಬಹುದು. ಇವೆಲ್ಲದರ ಕಲಿಕೆಯನ್ನು ಬೇಕಾದರೆ ‘ಮೌಲ್ಯ ಶಿಕ್ಷಣ’ ಎಂದರೂ ಆದೀತು.
ಖ್ಯಾತ ಕವಯಿತ್ರಿಯೊಬ್ಬರಿಗೆ ಲೇಖಕರೊಬ್ಬರು ಕೇಳಿದರಂತೆ- “ತಮ್ಮ ಕವಿತೆಗಳಲ್ಲಿ ಕೆಲ ಅಶ್ಲೀಲ ಪದಗಳನ್ನು ಯಾಕೆ ಹೆಚ್ಚಾಗಿ ಬಳಸುತ್ತೀರಿ? ಅದರಿಂದ ಓದುಗರಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಕಡಿಮೆಯಾಗುವುದಿಲ್ಲವೇ?” ಅಂತ. ಆಗ ಕವಯಿತ್ರಿ ಹೇಳಿದರಂತೆ- “ಆ ಕುತೂಹಲ ಕಡಿಮೆಯಾಗಲೆಂದೇ ಅಂತಹ ಪದಗಳನ್ನು ನಿರ್ಭಿಡೆಯಿಂದ ಬಳಸುತ್ತೇನೆ” ಎಂದು!

ಕೆಲ ವರ್ಷಗಳ ಹಿಂದೆ ಚೇತನ್ ಭಗತ್ ಅವರ ‘ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್’ ಕಾದಂಬರಿ ಓದುತ್ತಿದ್ದೆ. ಜೊತೆಗೆ ಸಾರಾ ಅಬೂಬಕ್ಕರ್ ಅವರ ಕಥಾಸಂಕಲನವನ್ನೂ ಓದುತ್ತಿದ್ದೆ. ಚೇತನ್ ಭಗತ್ ಅವರ ಕೆಲ ಸಾಲುಗಳು ನನಗೆ ಎಷ್ಟೊಂದು ವಲ್ಗರ್ ಎನಿಸಿದ್ದುವೆಂದರೆ, ಆ ಪುಸ್ತಕದಲ್ಲಿನ ಆಸಕ್ತಿಯೇ ಇಲ್ಲವಾಯಿತು. ಅದೇ ವಿಷಯವನ್ನು ಅತ್ಯಂತ ಸೂಕ್ಷö್ಮ ಸಂವೇದನೆಯ ಸಾರಾ ಅಬೂಬಕ್ಕರ್ ಅವರ ಬರವಣಿಗೆಯಲ್ಲಿ ಓದಿದಾಗ ನನಗೆ ಒಬ್ಬ ಯುವಬರಹಗಾರನ ಪೋಲಿತನ ಹಾಗೂ ಮಧ್ಯವಯಸ್ಕ ಅನುಭವಿ ಬರಹಗಾರ್ತಿಯ ಗಾಂಭೀರ್ಯ- ಇವೆರಡರ ನಡುವಿನ ವ್ಯತ್ಯಾಸ ತಿಳಿಯಿತು. ಇದು ಸರಿ-ತಪ್ಪುಗಳ ಪ್ರಶ್ನೆಯಲ್ಲ. ಬದಲಿಗೆ ಅಭಿರುಚಿಯ ಆಯ್ಕೆಗಳ ಬಗ್ಗೆ ಇರುವ ಅಭಿಪ್ರಾಯ ಮಾತ್ರ. ಆದ್ದರಿಂದಲೇ ಕೆಲವೊಮ್ಮೆ ಹೀಗೂ ಅನಿಸುವುದುಂಟು: ಕೆಲವರ ಕೃತಿಗಳಲ್ಲಿ ಫಿಲ್ಟರ್ ಇಲ್ಲದ ವಿಷಯಗಳ ನಿರೂಪಣೆ ಮನಸ್ಸನ್ನು ಹಾಳು ಮಾಡುವುದಂತೂ ನಿಜ. ಹಾಗಾದರೆ ನಾವೇಕೆ ಸಿನಿಮಾಗಳನ್ನಷ್ಟೇ ನೋಡಬಾರದು? ಏಕೆಂದರೆ ಅಲ್ಲಿ ಕನಿಷ್ಟ ಸೆನ್ಸಾರ್ ಮಂಡಳಿಯ ಯು/ಎ ಸರ್ಟಿಫಿಕೇಟ್ ಆದರೂ ಇರುತ್ತದೆ. ಅಲ್ಲಿ ಕೆಟ್ಟ ಭಾಷೆ, ಅಶ್ಲೀಲ ಹಾಸ್ಯ ಅಲ್ಪಮಟ್ಟಿಗಾದರೂ ನಿಷಿದ್ಧ.
ಬೋಲ್ಡ್ ಆಗಿ ಮಾತನಾಡುವುದನ್ನೇ ಕೆಲವರು ಬಂಡವಾಳವನ್ನಾಗಿಸಿಕೊಂಡು, ವಿಡಿಯೋ ಮಾಡಿ ಪ್ರಚಾರ ಗಿಟ್ಟಿಸುತ್ತಾರೆ. ಹೇಳಬೇಕಿರುವುದನ್ನೇ ಸಭ್ಯ ಭಾಷೆಯಲ್ಲಿ ಆರೋಗ್ಯಕರ ಹಾಸ್ಯದೊಂದಿಗೆ ವ್ಯಕ್ತಪಡಿಸಲು ಬಾರದೆ, ಪ್ರೇಕ್ಷಕರನ್ನು ರಂಜಿಸಲು ಅಶ್ಲೀಲ ಪದಬಳಕೆ ಮಾಡುತ್ತಾರೆ. ನವಿರಾದ ಹಾಸ್ಯ ನಮ್ಮ ಚಾನೆಲ್ಗಳಲ್ಲಿ ಪ್ರಸಾರವಾಗುವ ಕಾಮಿಡಿ ಶೋಗಳಿಂದ ಮಾಯವಾಗಿ ಬಹಳ ಸಮಯವೇ ಕಳೆದಿದೆ. ಹಾಸ್ಯ, ಮನರಂಜನೆ ಎಷ್ಟು ಮುಖ್ಯವೋ ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬಾರದಂತೆ, ನೋವಾಗದಂತೆ ಮಾತನಾಡುವುದೂ ಸಹ ಅಷ್ಟೇ ಅಥವಾ ಅದಕ್ಕಿಂತಲೂ ಮುಖ್ಯ. ಹೆಣ್ಣುಮಕ್ಕಳ ನೋವು, ತುಮುಲಗಳನ್ನರಿಯಲು ಕೆಟ್ಟ ಅಭಿರುಚಿಯ ಜೋಕ್ ಬಳಸುವ ಸ್ಟಾö್ಯಂಡ್ ಅಪ್ ಕಾಮಿಡಿ ಮಾದರಿಯ ಕಾರ್ಯಕ್ರಮಗಳೇ ಆಗಬೇಕೆಂದಿಲ್ಲ.
ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರö್ಯ ಇದೆ ಎಂದ ಮಾತ್ರಕ್ಕೆ ತಮಗೆ ಬೇಕಾದ ಹಾಗೆ ನಾಲಿಗೆ ಹರಿಬಿಡುವುದು ಸಭ್ಯತೆಯಲ್ಲ. ಇತ್ತೀಚೆಗೆ ಹಿರೇಮಗಳೂರು ಕಣ್ಣನ್ ಅವರು ಆಡಿರುವ ಮಾತಿನ ಹಿಂದೆ “ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ” ಎಂದು ಅವರು ಸ್ಪಷ್ಟನೆ ನೀಡುವಂತಹ ಸನ್ನಿವೇಶಗಳನ್ನು ತಂದುಕೊಳ್ಳುವುದಾದರೂ ಏಕೆ? ಈ ಮಾತುಗಳು ‘ತಪ್ಪಾದ ವ್ಯಾಖ್ಯಾನ’ ಅಥವಾ ‘ತಿರುಚಲಾದ ಹೇಳಿಕೆ’ಗಳಂತೂ ಖಂಡಿತಾ ಅಲ್ಲ! ಸಣ್ಣಪುಟ್ಟ ಘಟನೆಗಳೇ ವಿಡಿಯೋ ಚಿತ್ರೀಕರಣದಲ್ಲಿ ಸೆರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಸಾರ್ವಜನಿಕವಾಗಿ ಮಾತನಾಡುವಾಗ ಈ ಹಿರಿಯರು ಮುಸ್ಲಿಂ ಸಹೋದರಿಯರಿಗಷ್ಟೇ ಅಲ್ಲ, ಎಲ್ಲ ಹೆಣ್ಣುಮಕ್ಕಳಿಗೂ ಮಾಡಿದ ಅವಮಾನವಿದು ಎಂದೇ ಭಾವಿಸಬೇಕಾಗುತ್ತದೆ. ಅದೂ ರಂಗೋತ್ಸವದ ಥೀಮ್ ‘ತಾಯಿ’ ಎಂಬುದನ್ನೂ ಮರೆತು, ಹಾಸ್ಯದ ಎಲ್ಲೆ ಮೀರಿ ಆಡಿದ ಮಾತುಗಳಿವು. ‘ಜಾತ್ಯಾತೀತ ನಿಲುವನ್ನು ಹೊಂದಿರುವವರು’ ಎಂದು ಹೇಳಿಕೊಳ್ಳುವ ‘ಕನ್ನಡದ ಪೂಜಾರಿ’ ಎನಿಸಿಕೊಂಡಿರುವವರ ದ ನಿರೀಕ್ಷಿಸಲಾಗದ ಕೀಳು ಭಾಷೆ ಇದು!

‘ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬಂತೆ, ಇಷ್ಟು ವರ್ಷಗಳ ಕಾಲ ಅವರ ಮಾತಿನ ಲಹರಿ, ಪಾಂಡಿತ್ಯಕ್ಕೆ ಮರುಳಾಗದವರು ವಿರಳ. ಆದರೆ ಕೆಲವೇ ನಿಮಿಷಗಳ ವಿಡಿಯೋದಲ್ಲಿನ ಅವರ ಮಾತುಗಳನ್ನು ಗಮನಿಸಿ, ಅವು ಸಂದರ್ಭಕ್ಕೆ ತಕ್ಕಂತೆಯೂ ಇಲ್ಲ ಜೊತೆಗೆ ಅವಶ್ಯವೂ ಇಲ್ಲ! ‘ಹರಟೆ’ಯಂತಹ ಸದಭಿರುಚಿಯ ಕಾರ್ಯಕ್ರಮದಲ್ಲಿ ಅರಳು ಹುರಿದಂತೆ ಮಾತನಾಡುತ್ತಿದ್ದವರಿಂದ ಇಂತಹ ಮಾತುಗಳನ್ನು ಕೇಳಿ ಆಶ್ಚರ್ಯಾಘಾತಗಳೂ ಒಟ್ಟಿಗೇ ಆದದ್ದೂ ಸುಳ್ಳಲ್ಲ!!
ಕಣ್ಣನ್ ಅವರ ಭಾಷಣದ ಸುತ್ತ ಗಿರಕಿಹೊಡೆಯುತ್ತಿರುವ ಪರ-ವಿರೋಧ ಅಭಿಪ್ರಾಯಗಳಲ್ಲಿ ಅನೇಕರು ಅವರನ್ನು ಟೀಕಿಸುವ ಸಂದರ್ಭದಲ್ಲಿಯೂ ಕೂಡ ದಶಕಗಳ ಕಾಲ ಒಂದೇ ಪರಿವಾರದಂತಿರುವ, ಅವರನ್ನು ‘ಕಣ್ಣನ್ ಮಾಮಾ’ ಎಂದು ಕರೆಯುವ ನಿಕಟವರ್ತಿಗಳೂ ಸಹ ಇಂತಹ ಸಮಯದಲ್ಲಿ ಅವರ ಪರವಾಗಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬುದು ಗಮನಾರ್ಹ ಅಂಶ! ಬಹುಶಃ ಈ ತಟಸ್ಥ ನೀತಿಯೂ ಸಹ ಪರೋಕ್ಷವಾಗಿ ಅವರ ಹೇಳಿಕೆಯನ್ನು ಒಪ್ಪದಿರುವುದನ್ನು ಸೂಚಿಸುತ್ತದೆ.
ನಮ್ಮ ಮನಸ್ಸೇ ಹಾಗೆ… ನೆಗೆಟಿವ್ ವಿಷಯಗಳನ್ನು ಆದಷ್ಟು ಬೇಗ ಹಾಗೂ ಬಹಳ ಕಾಲದವರೆಗೆ ಹಿಡಿದಿಡುತ್ತದೆ. ಅದು ಗೊತ್ತಿದ್ದೂ ನಮ್ಮ ಅಭಿರುಚಿಗಳನ್ನು, ಹವ್ಯಾಸಗಳನ್ನು ಬದಲಿಸದಿದ್ದರೆ ಅದು ಯಾರ ತಪ್ಪು? ಈಗಂತೂ ಅಭಿರುಚಿಯ ಆಯ್ಕೆ ನಮ್ಮದೇ. ರಿಮೋಟ್ ನಮ್ಮ ಕೈಯ್ಯಲ್ಲೇ ಇದೆ. ಕೈಯ್ಯಲ್ಲಿರುವ ಮೊಬೈಲ್ನಲ್ಲಿ ಏನನ್ನು ಓದುತ್ತೇವೆ, ಏನನ್ನು ನೋಡುತ್ತೇವೆ ಎಂಬುದರ ಆಯ್ಕೆ ನಮ್ಮದೇ ಆಗಿರುತ್ತದೆ. ಕೆಲ ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಹೆಚ್ಚಾಗಿ ಕಂಡುಬರುವ ಹೆಣ್ಣುವೇಷದಲ್ಲಿನ ಗಂಡುಪಾತ್ರಧಾರಿಗಳ ಅವತಾರಗಳು, ಡೈಲಾಗ್ಗಳು ನಗೆಯುಕ್ಕಿಸುವ ಬದಲು ಚಾನೆಲ್ ಚೇಂಜ್ ಮಾಡಲು ಕಾರಣವಾಗುತ್ತವೆ! ನಾವು ಏನೋ ನೋಡುತ್ತಿರುವಾಗ ಮಕ್ಕಳೋ ಅಥವಾ ವಯಸ್ಸಾದವರೋ ಬಂದರೆ ನಾವು ಚಾನೆಲ್ ಬದಲಿಸುತ್ತೇವೆ ಎಂದಾದರೆ ಅದು ಆರೋಗ್ಯಕರ ಹಾಸ್ಯವಲ್ಲವೆಂದೇ ಅರ್ಥ. ಅಲ್ಲವೇ?






Nimma sahitya sevege namanagalu
Nimma sahity ennu utamavagi munduvariyali ,