ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಎಲ್ಲಿಯ ಮಹಮ್ಮದ್ ಅಲಿ, ಎಲ್ಲಿಯ ಲಂಕೇಶ್…’ – ರಾಘವೇಂದ್ರ ಜೋಶಿ

ರಾಘವೇಂದ್ರ ಜೋಶಿ

ಸಾಹಿತ್ಯದ ಓದು ಹೇಗೆ, ಎಲ್ಲಿಂದ ಶುರುವಾಯಿತು ಅಂತ ಇವತ್ತು ಹೇಳುವದು ಕಷ್ಟ.
ಆದರೆ ಈ ಓದುವಿಕೆಯಲ್ಲಿ ಆಗೀಗ ಬಂದು ಹೋದ ಘಟನೆಗಳು, ರೂಪಗಳು, ನೆನಪುಗಳು ಮಾತ್ರ ಮರೆಯಲಾಗದಂಥವುಗಳು. ಆತನ ಹೆಸರು ಮಹಮ್ಮದ್ ಅಲಿ. ಸಣಕಲು ವ್ಯಕ್ತಿ. ಆದರೆ ನಮ್ಮ ಏರಿಯಾದ ಬಹುದೊಡ್ಡ ರೌಡಿಯಾಗಿದ್ದ. ಅವರಪ್ಪ ಕುಸ್ತಿಯಾಟದ ರೆಫ಼ರಿಯಾಗಿದ್ದ. ಹೀಗಿದ್ದ ಮಹಮ್ಮದ್ ಅಲಿಗೆ ಏರಿಯಾದ ಎಲ್ಲರೂ ಹೆದರುತ್ತಿದ್ದರು. ಆತ ಚಿತ್ರವಿಚಿತ್ರವಾಗಿ ದೊಣ್ಣೆ ತಿರುಗಿಸುತ್ತಾನೆಂದೂ, ಒಟ್ಟಿಗೇ ಏಳೆಂಟು ಜನರೊಂದಿಗೆ ಫೈಟ್ ಮಾಡಿದರೂ ಕೂಡ ಶರ್ಟಿನ ಇಸ್ತ್ರೀ ಕದಲುವದಿಲ್ಲವೆಂದೂ ಆತನ ಬಗ್ಗೆ ಹೇಳಲಾಗುತ್ತಿತ್ತಾದರೂ, ಒಮ್ಮೆಯೂ ಆತ ಫೈಟ್ ಮಾಡುವದನ್ನು ನೋಡುವ ಸೌಭಾಗ್ಯ ನನಗೆ ಸಿಗಲಿಲ್ಲ.
ಮಹಮ್ಮದ್ ಅಲಿಯ ಮುಖ್ಯ ಕಸುಬೆಂದರೆ ಸ್ಟ್ರೈಕರ್ ತಿರುಗಿಸುವದು. ಅಕ್ಕಪಕ್ಕದ ಯಾವುದಾದರೂ ಊರಿನಲ್ಲಿ ಜಾತ್ರೆಯಂಥದ್ದು ನಡೆದಾಗ ಅಲ್ಲಿ ಈತನ ಹಾಜರಿ ಇದ್ದೇ ಇರುತ್ತಿತ್ತು. ಮೂರು ಬೇರೆ ಬೇರೆ ಕಲರಿನ ಕೇರಂ ಸ್ಟ್ರೈಕರ್ ಗಳನ್ನು ಸಾಲಾಗಿ ಜೋಡಿಸಿ, ಅವುಗಳ ಮೇಲೆ ಮೂರು ಚಿಕ್ಕಚಿಕ್ಕ ಡಬ್ಬಿಗಳಿಂದ ಮುಚ್ಚಿ ಸ್ಟ್ರೈಕರ್ ಗಳನ್ನು ವೇಗವಾಗಿ ಅತ್ತಿಂದಿತ್ತ ಸ್ಥಾನಪಲ್ಲಟಗೊಳಿಸುತ್ತಿದ್ದ. ಮೊದಲ ಜಾಗದಲ್ಲಿದ್ದ ಯಾವುದೋ ಒಂದು ನಿರ್ದಿಷ್ಟ ಕಲರಿನ ಸ್ಟ್ರೈಕರ್ ಆತ ಸ್ಥಾನಪಲ್ಲಟಗೊಳಿಸಿದ ನಂತರ ಎಲ್ಲಿದೆ ಅಂತ ಜನ ಬೆಟ್ ಕಟ್ಟುತ್ತಿದ್ದರು. ಆತನ ಕೈ ಚಳಕ ಹೇಗಿರುತ್ತಿತ್ತೆಂದರೆ ಎದುರಾಳಿಗಳು ಯಾರೂ ಈತನ ಮುಂದೆ ಗೆಲ್ಲುವ ಸಂಭವಗಳು ಇರಲಿಲ್ಲ.
ಇಂತಿಪ್ಪ ಮಹಮ್ಮದ ಅಲಿಯ ಕೊನೆಯ ತಮ್ಮ ನನ್ನ ಚಡ್ಡಿ ಗೆಳೆಯನಾಗಿದ್ದ. ಆದರೆ ಅಣ್ಣನಂತೆ ರೌಡಿಯಾಗದೇ ಸಂಭಾವಿತನಾಗಿದ್ದ. ಈ ಗೆಳೆಯ ಆಗೀಗ ತನ್ನ ಅಣ್ಣನಿಗೆ ಎಲ್ಲಿಂದಲೋ ಒಂದು ಚಿಕ್ಕ ಪೊಟ್ಟಣ ತಂದು ಕೊಡುತ್ತಿದ್ದ. ಒಂದೆರಡು ಸಲ ಆ ಪೊಟ್ಟಣ ತರಲು ನಾನೂ ಅವನೊಂದಿಗೆ ಹೋಗಿದ್ದುಂಟು. ಹೀಗಿರುವಾಗ, ಒಂದು ಸಲ ನಾನು ಈ ಚಡ್ಡಿ ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಮಹಮ್ಮದ ಅಲಿ ಬಂದವನೇ ತನ್ನ ತಮ್ಮನ ಕೈಗೆ ಒಂದಿಷ್ಟು ದುಡ್ಡು ತುರುಕಿ ಒಂದು ಪತ್ರಿಕೆ ತರಲು ಹೇಳಿದ. ಆ ಪತ್ರಿಕೆಯ ಹೆಸರು ಎಷ್ಟು ವಿಚಿತ್ರವಾಗಿತ್ತೆಂದರೆ, ಅದನ್ನು ತರಲೆಂದು ಬಸ್ ಸ್ಟ್ಯಾಂಡಿನ ಬುಕ್ ಸ್ಟಾಲ್ ಗೆ ಹೋಗುವದರೊಳಗಾಗಿ ಎಲ್ಲಿ ನಾವು ಅದರ ಹೆಸರು ಮರೆತುಬಿಡುತ್ತೇವೆಂದು ಹೆದರಿದ್ದ ಮಹಮ್ಮದ ಅಲಿ ಆ ಪತ್ರಿಕೆಯ ಹೆಸರನ್ನು ಹತ್ತತ್ತು ಸಲ ತನ್ನೆದುರಿಗೆ ನಮ್ಮಿಂದ ಉರು ಹೊಡೆಸಿದ್ದ!

ಅದರ ಹೆಸರು ಲಂಕೇಶ್ ಪತ್ರಿಕೆ.
ಆವತ್ತು ಹೈಯರ್ ಪ್ರೈಮರಿಯಲ್ಲಿದ್ದ ನನಗೆ ಆ ಪತ್ರಿಕೆಯಲ್ಲಿನ ಬರಹಗಳು ಎಷ್ಟು ತಲೆಗೆ ಇಳಿದವೋ ಗೊತ್ತಿಲ್ಲ. ಆದರೆ ಅಲ್ಲಿಯವರೆಗೂ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿಕೊಂಡಿದ್ದ ನನಗೆ ಟ್ಯಾಬೋಲೈಡ್ ಲೋಕಕ್ಕೆ ತಂದು ಬಿಟ್ಟಿದ್ದು ನೋಡಿದರೆ- ಎಲ್ಲಿಯ ಮಹಮ್ಮದ್ ಅಲಿ, ಎಲ್ಲಿಯ ಲಂಕೇಶ್ ಅಂತ ಇವತ್ತು ಸೋಜಿಗವಾಗುತ್ತದೆ. ಜೊತೆಗೆ ಅವನ ಹತ್ತಿರವಿರುತ್ತಿದ್ದ ಕೇವಲ ಆ ‘ಲಂಕೇಶ್ ಪತ್ರಿಕೆ’ ಓದುವದಕ್ಕಾಗಿ ಮಹಮ್ಮದ್ ಅಲಿಗೆ ನಾನು ಒಬ್ಬಂಟಿಯಾಗಿ ಸುಮಾರು ಸಲ (ಅವನದೇ ದುಡ್ಡಿನಲ್ಲಿ) ಅವನು ಕೇಳಿದ ಆ ಚಿಕ್ಕ ಚಿಕ್ಕ ಪೊಟ್ಟಣಗಳನ್ನು ತಂದು ಕೊಟ್ಟಿದ್ದು ನೆನಪಾಗುತ್ತದೆ. ಎಷ್ಟೋ ದಿನಗಳ ಬಳಿಕ, ಹಾಗೆ ತಂದು ಕೊಡುತ್ತಿದ್ದ ಪೊಟ್ಟಣಗಳಲ್ಲಿ ಗಾಂಜಾ ಇರುತ್ತಿತ್ತು ಅಂತ ಗೊತ್ತಾಗಿದ್ದು ನೆನಸಿಕೊಂಡರೆ ಇವತ್ತಿಗೂ ಮೈ ಜುಂ ಅನ್ನುತ್ತದೆ..
(ಮನೆಯಲ್ಲಿ ಇವತ್ತಿಗೂ ಈ ವಿಷಯ ಗೊತ್ತಿಲ್ಲ. ಈಗ ಗೊತ್ತಾದರೆ ಏನೂ ಅನ್ನಲಿಕ್ಕಿಲ್ಲ. ಆದರೆ ಆವತ್ತು ಗೊತ್ತಾಗಿದ್ದಿದ್ದರೆ.. ?)
 

‍ಲೇಖಕರು G

3 September, 2014

4 Comments

  1. ಡಾ.ಶಿವಾನಂದ ಕುಬಸದ

    ”ಲಂಕೇಶ್” ಎಂಬೊಬ್ಬ ಸಾಹಿತಿ/ಲೇಖಕರಿದ್ದಾರೆಂದು ನನಗೆ ಗೊತ್ತಿರದ ಆ ದಿನಗಳಲ್ಲಿ ‘ಲಂಕೇಶ್ ಪತ್ರಿಕೆ’ ಎಂಬ ಹೆಸರು ಕೇಳಿದೊಡನೆ..ರಾವಣನ ಹೆಸರಿನ ಪತ್ರಿಕೆ ಯಾರು ಹೊರಡಿಸಿದ್ದು ಎಂಬ ಕುತೂಹಲಕ್ಕೆ ಓದಲು ಪ್ರಾರಂಭಿಸಿದವನಿಗೆ ಅಚ್ಚರಿ ಕಾಡಿತ್ತು..
    ಆ ದಿನಗಳಲ್ಲಿ ಪತ್ರಿಕೋದ್ಯಮದಲ್ಲಿ ಕ್ರಾಂತಿ ಮಾಡಿದ ಪತ್ರಿಕೆ..!
    ರವೀಂದ್ರ ರೇಷ್ಮೆ, ಸಾರಾ ಅಬೂಬಕರ್, ಬಿ ಟಿ ಲಲಿತಾ ನಾಯಕ, ಟಿ.ಎನ್.ಸೀತಾರಾಮ್, ಪೂಚಂತೇ ಅಲ್ಲದೆ ಅನೇಕ ಹೊಸ ಲೇಖಕರು,ಟೀಕೆ ಟಿಪ್ಪಣಿ,ನೀಲೂ,ಗುಂ-ಬಂ .. ….ಒಂದೇ ಎರಡೇ….!!
    ಅಂತೂ, ನಿಮ್ಮ ಲೇಖನ ಹಳೆಯ ದಿನಗಳನ್ನು ನೆನಪಿಗೆ ತಂದಿತು…
    ಧನ್ಯವಾದಗಳು…

  2. Somashekhar

    Dear Joshi , Is this Ali the one who comes in Agni Sridhar ‘a Daadaagiriya Dinagalu ? Have you reAd it ?

    • Rj

      Dear Mr.Somashekhar,
      The entire writeup is my personal experience. Mohammad Ali was my neighbor.
      -Rj

  3. ಟಿ.ಕೆ.ಗಂಗಾಧರ ಪತ್ತಾರ

    “ಅಡಿಕ್ಟ್” ಅನ್ನುವಷ್ಟರ ಮಟ್ಟಿಗೆ ಲಂಕೇಶ ಪತ್ರಿಕೆಯ ಹುಚ್ಚು ಹಿಡಿದ ದಶಕಗಳವು. ಒಮ್ಮೆ ನನ್ನ ಪ್ರತಿ ಕಾಯ್ದಿರಿಸದೇ ಇತರರಿಗೆ ಕೊಟ್ಟಿದ್ದಾಗ ಪೇಪರ್ ಅಂಗಡಿಯವನನ್ನು ಕಾಲರ್ ಹಿಡಿದು ಹಿಗ್ಗಾ-ಮುಗ್ಗಾ ಜಗ್ಗಾಡಿ ಹೊಡೆದಿದ್ದೆ. ಲಂಕೇಶ್ ದಂತಕತೆಯಾಗಿ ನಮ್ಮನ್ನು ಕನಸಾಗಿ ಕಾಡುತ್ತಿದ್ದರು. “ಅವ್ವ” ಕವಿತೆಯಿಂದ ನಮ್ಮನ್ನು ಸೆರೆ ಹಿಡಿದಿದ್ದ ಲಂಕೇಶ್ ನಮಗೆ ದಂತ ಗೋಪುರದ ಮಾಯದ ವ್ಯಕ್ತಿಯಾಗಿದ್ದರು. ಮುಂದಿನ ಜನ್ಮದಲ್ಲಾದರೂ ಅಂತಹ ಮೇಷ್ಟ್ರನ್ನು ಕಣ್ಣಾರೆ ಕಾಣುವ ಭಾಗ್ಯ ಸಿಗಲಿ ಎಂದು ಕನಸು ಕಾಣುತ್ತಿದ್ದೆ. ಆದರೆ ಇದೇ ಜನ್ಮದಲ್ಲಿಯೇ ಅವರನ್ನು ಕಾಣುವ ಅವಕಾಶ ಸಿಕ್ಕಾಗ ನಾನು ಈ ನೆಲದ ಮೇಲೆಯೇ ಇರಲಿಲ್ಲ. 28-08-1979ರ “ಸುಧಾ”ದಲ್ಲಿ ನನ್ನ ಸಣ್ಣ ಕತೆ ಅಚ್ಚಾಗಿ “ಗಿರಿಜಾಂಬ ಮೂವೀಸ್”ನವರು ಅದನ್ನು ಆಧರಿಸಿ ಸಿನಿಮಾ ತೆಗೆಯುತ್ತೇವೆಂದಾಗ ನಾನು ಮೂಕನಾಗಿದ್ದೆ. ಹಾಗೂ-ಹೀಗೂ ಅದಕ್ಕೆ ಅನುಮತಿ ಕೊಟ್ಟಾಗ ನನಗೆ ಸಿಕ್ಕ ಸಂಭಾವನೆ ಕೇವಲ ಐನೂರು ರೂಪಾಯಿ. ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಕ್ಲರ್ಕ್ ಆಗಿದ್ದ ನಾನು ಪ್ರಥಮ ಎಂ.ಬಿ.ಬಿ.ಎಸ್.ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಕರ್ತವ್ಯಕ್ಕಾಗಿ 1983ರಲ್ಲಿ ಒಂದುವಾರ ಬೆಂಗಳೂರಲ್ಲಿರಬೇಕಾಯ್ತು. ಬಿ.ಟಿ.ಲಲಿತಾನಾಯಕರ ತಂಗಿ, ನನ್ನ ಮಿತ್ರ ಕೊಪ್ಪಳ-ಭಾಗ್ಯನಗರದ ಪ್ರಹ್ಲಾದ ಬೆಟಗೇರಿಯ ಪತ್ನಿ-ಬಿ.ಟಿ.ವಿಜಯಲಕ್ಷ್ಮಿ ಲಂಕೇಶ ಪತ್ರಿಕೆ ವರದಿಗಾರ್ತಿ. ನಾನು ತಂಗಿದ್ದು ಅವರ ಮನೆಯಲ್ಲಿ. ಹೀಗಾಗಿ ವಿಜಯಲಕ್ಷ್ಮಿ ನನ್ನನ್ನು ಲಂಕೇಶ ದರ್ಶನಕ್ಕೆ ಕರೆದೊಯ್ದರು. ಅದೊಂದು ಮರೆಯಲಾಗದ ಮಧುರ ಅನುಭವ. ನನ್ನಂತಹ ಅನನುಭವಿ ಕಿರಿಯ ಬರಹಗಾರನನ್ನು “ಅಧ್ಯಾಪನ-ಕವನ-ಲೇಖನ-ಕಥೆ-ಕಾದಂಬರಿ-ಪತ್ರಿಕೋದ್ಯಮದ ದೈತ್ಯ ಪ್ರತಿಭೆ” ತನ್ನೆದುರು ಕಾಲುಗಂಟೆ ಕೂಡಿಸಿಕೊಂಡು ಮಾತಾಡಿಸಿತೇ ಎಂದು ಈಗಲೂ ವಿಸ್ಮಯವಾಗುತ್ತಿದೆ. ಮುಂದೆ ಒಂದೇ ವಾರದಲ್ಲಿ ಲಂಕೇಶ ಪತ್ರಿಕೆಯಲ್ಲಿ “ಕತೆಗಾರರಿಗೆ ಪಂಗನಾಮ”ಶೀರ್ಷಿಕೆಯಡಿ “ಲಕ್ಷಗಟ್ಟಲೆ ಸಂಭಾವನೆಯ ವಿಷ್ಣುವರ್ಧನ-ಮಾಧವಿ-ಬಿ.ಸರೋಜಾದೇವಿಯವರಂತಹ ಗಣ್ಯ ತಾರಾಗಣದ ಸಿನಿಮಾ ಮೂಲಕಥೆಯ ಲೇಖಕನಿಗೆ ಕೇವಲ ಐದುನೂರು ರೂಪಾಯಿಕೊಟ್ಟು ವಂಚಿಸಿದ್ದಾರೆ”ಎಂದು ಬರೆಸಿಬಿಟ್ಟರು-ಲಂಕೇಶ. ಆ ವರದಿ ಬಂದ ಎರಡೇ ವಾರದಲ್ಲಿ ಮುದ್ದಾಂ ಬಳ್ಳಾರಿಯ ನನ್ನ ಮುರುಕು ಗುಡಿಸಲಂತಿದ್ದ ಬಾಡಿಗೆ ಮನೆಗೆ ಬಂದ ನಿರ್ಮಾಪಕಿ ಒಂದೂವರೆ ಸಾವಿರ ರೂಪಾಯಿ ಕೊಟ್ಟದ್ದು ಈಗ ಕಥೆ. ಇಂತಹ ಲಂಕೇಶರನ್ನು ಮರೆಯಲಾದೀತೇ?. ಆಗ (1983) ಐನೂರು-ಒಂದೂವರೆ ಸಾವಿರಗಳೇ ಬಹುದೊಡ್ಡ ಮೊತ್ತವೆಂದು ಬೇರೆ ಹೇಳಬೇಕಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading