ಪುರುಷೋತ್ತಮ ಬಿಳಿಮಲೆ
ಕೊರೊನಾ ಮತ್ತು ಭಾರತದಲ್ಲಿ ಕಳೆಗುಂದುತ್ತಿರುವ ವೈಜ್ಞಾನಿಕ ಚಿಂತನೆ ಹಾಗೂ ಸಂಶೋಧನೆಗಳು:
ಕೊರೋನಾ ಇಷ್ಟೊಂದು ಅನಾಹುತಗಳನ್ನು ಉಂಟು ಮಾಡಲು ಮುಖ್ಯ ಕಾರಣವೆಂದರೆ, ಇವತ್ತಿನ ಒಕ್ಕೂಟ ಸರಕಾರಕ್ಕೆ ಆಧುನಿಕ ವಿಜ್ಞಾನ ಮತ್ತು ಸಂಶೋಧನೆಗಳ ಬಗ್ಗೆ ಗಾಢವಾದ ನಂಬಿಕೆ ಇಲ್ಲದಿರುವುದು. ನಾವ್ಯಾರೂ ಬದುಕಿರದ ಕಾಲಘಟ್ಟವೊಂದರಲ್ಲಿ ಎಲ್ಲವೂ ಇತ್ತೆಂದು ನಂಬುವವರಿಗೆ ಇವತ್ತಿನ ಬಿಕ್ಕಟ್ಟುಗಳನ್ನು ಇದಿರಿಸುವ ಸೂಕ್ಷ್ಮಗಳು ತಿಳಿದಿರಲು ಸಾಧ್ಯವೇ ಇಲ್ಲ. ಏನು ಹೇಳಿದರೂ, ಅದು ಪಾಶ್ಚಾತ್ಯರದು, ನಮ್ಮಲ್ಲಿ ಮೊದಲೇ ಇತ್ತು ಎಂದು ವಾದಿಸುವ ದೊಡ್ಡ ಗುಂಪೊಂದು ಭಾರತವನ್ನು ಸರ್ವನಾಶದತ್ತ ತಳ್ಳುತ್ತಿರುವುದನ್ನು ಕನಿಷ್ಠ ಭವಿಷ್ಯದಲ್ಲಿ ಬದುಕಬೇಕಾಗಿರುವ ಹೊಸ ತಲೆಮಾರು ಅರ್ಥಮಾಡಿಕೊಂಡಷ್ಟೂ ಅವರಿಗೇ ಕ್ಷೇಮ.
‘ಅರ್ಜುನನಲ್ಲಿ ಅಣುಬಾಂಬು ಹೊತ್ತ ಬಾಣಗಳಿದ್ದುವು, ಪ್ರಾಚೀನ ಭಾರತದಲ್ಲಿ ಹಾರುವ ತಟ್ಟೆಗಳಿದ್ದವು’ ಎಂದು ಪ.ಬಂಗಾಳದ ಗವರ್ನರ್ ಜಗದೀಪ್ ಧನ್ಕರ್ ವಿಜ್ಞಾನಿಗಳ ಸಮ್ಮೇಳನದಲ್ಲಿಯೇ ಘೋಷಿಸಿದ್ದರು. ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಕುರುಕ್ಷೇತ್ರ ಯುದ್ಧದ ವರದಿಯು ಧೃತರಾಷ್ಟ್ರನಿಗೆ ತಕ್ಷಣ ತಲುಪಬೇಕಾದರೆ, ಅ ಕಾಲದಲ್ಲಿ ನಮ್ಮಲ್ಲಿ ಸೆಟಲೈಟ್ ತಂತ್ರಜ್ಞಾನ ಇದ್ದಿರಬೇಕು ಎಂದು ಹೇಳಿದರು. ‘ಸಿವಿಲ್ ಸರ್ವೆಂಟ್’ ಆಗಲು ಸಿವಿಲ್ ಇಂಜಿನೀಯರುಗಳು ಬೇಕು, ಮೆಕ್ಯಾನಿಕಲ್ ಇಂಜಿನೀಯರುಗಳು ಬೇಡʼ ಎಂದ ಪುಣ್ಯಾತ್ಮನೂ ಈತನೇ.
ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ‘ಪ್ರಾಣಿ ಜಗತ್ತಿನಲ್ಲಿ ಗೋವುಗಳು ಮಾತ್ರ ಆಮ್ಲಜನಕವನ್ನು ಹೊರಹಾಕುತ್ತವೆ, ಅವುಗಳ ಜೊತೆನೇ ಇದ್ದರೆ ಕ್ಷಯ ರೋಗ ಬರುವುದಿಲ್ಲ’ ಎಂದು ಹೇಳಿದರು. ಇಂಥವರೊಬ್ಬರು ಕೊರೋನಾ ಹಬ್ಬುತ್ತಿರುವಾಗ, ತಾನೇ ಮುಂದೆ ನಿಂತು ಕುಂಭ ಮೇಳ ನಡೆಸಿದರೆ ಯಾರೂ ಅಚ್ಚರಿ ಪಡಬೇಕಾಗಿಲ್ಲ. ಬಾರಾಬಂಕಿಯ ಬಿಜೆಪಿಯ ನಾಯಕ ಶ್ರೀವತ್ಸ ರಂಜಿತರು ‘ಗೋವುಗಳನ್ನು ಹೂಳಿದರೆ ಅದು ಮುಸ್ಲಿಮರನ್ನು ಅನುಸರಿಸಿದಂತಾಗುತ್ತದೆ, ಹಾಗಾಗಿ ಗೋ ಮಾತೆಯನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಸುಡಬೇಕೆಂದೂ, ಅದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದೂ’ ಯೋಗಿ ಸರಕಾರವನ್ನು ಒತ್ತಾಯಿದರು.
ಪ್ರಜ್ಞಾ ಠಾಕೂರ್ ಗೋಮೂತ್ತದಿಂದಲೇ ತನ್ನ ಕ್ಯಾನ್ಸರ್ ಗುಣವಾಯಿತೆಂದು ಬಹಿರಂಗವಾಗಿಯೇ ಹೇಳಿದರು. ಜುನಾಗಢದ ಕೃಷಿ ವಿವಿಯ ಸಂಶೋಧಕರು ಗೋಮೂತ್ರದಲ್ಲಿ ಚಿನ್ನ ಇದೆ ಎಂದಿದನ್ನು ಅನೇಕ ಸ್ವಾಮಿಗಳು ಲೋಕ ತುಂಬಾ ಪ್ರಚಾರ ಮಾಡಿದರು. ಕೇಂದ್ರ ಮಂತ್ರಿ ಸತ್ಯಪಾಲ ಸಿಂಗರು ಡಾರ್ವಿನ್ನನ ವಿಕಾಸ ವಾದವು ಭಾರತೀಯರಿಗೆ ಸರಿಹೊಂದುವುದಿಲ್ಲವೆಂದೂ ಭಾರತೀಯರ ಋಷಿಗಳ ಮಕ್ಕಳೆಂದೂ ಪಾರ್ಲಿಮೆಂಟಲ್ಲೇ ವಾದಿಸಿದರು.
ಕನ್ನಡಿಗರ ಪ್ರತಿನಿಧಿ ಅನಂತಕುಮಾರ ಹೆಗಡೆಯವರು ಸಂಸ್ಕೃತದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ, ‘ಸಂಸ್ಕೃತವೇ ಮುಂದಿನ ಸೂಪರ್ ಕಂಪ್ಯೂಟರ್ ಎಂದು ಅಂತಾರಾಷ್ಟ್ರೀಯ ತಜ್ಞರು ಹೇಳಿದ್ದಾರೆ’ ಎಂದರು. ಆದರೆ ನಮ್ಮ ಪುಣ್ಯ, ಆ ತಜ್ಞರ ಹೆಸರು ಹೇಳಲಿಲ್ಲ. ಆಂಧ್ರ ವಿವಿಯ ಕುಲಪತಿ ನಾಗೇಶ್ವರ ರಾವ್ ವಿಜ್ಞಾನಿಗಳ ಸಮ್ಮೇಳನದಲ್ಲಿಯೇ ‘೧೦೦ ಕೌರವರ ಜನನವು ನಮ್ಮಲ್ಲಿ ಟೆಸ್ಟ್‌ಟ್ಯೂಬ್ ಬೇಬಿ ಸಂಶೋಧನೆಗೆ ಉದಾಹರಣೆ’ ಎಂದರು.
ಕೇಂದ್ರ ಮಂತ್ರಿ ಜಾವೇಡ್ಕರ್ ಅವರು ‘ಪರಿಸರ ಮಾಲಿನ್ಯದಿಂದ ಜೀವಿತಾವಧಿ ಏನೂ ಕಡಿಮೆಯಾಗಲ್ಲ’ ಎಂದು ವಾದಿಸಿದರು. ಇನ್ನೊಬ್ಬ ಮಂತ್ರಿ ಪೀಯೂಶ್ ಗೋಯಲ್ ‘ಗಣಿತವು ಐನ್ ಸ್ಟೈನ್ ಗೆ ಸಹಾಯ ಮಾಡಿಲ್ಲ’ ಎಂದು ಅಪ್ಪಣೆ ಕೊಡಿಸಿದರು. ಡಾ. ಕಣ್ಣನ್ ಕೃಷ್ಣನ್ ಎಂಬ ವಿಜ್ಞಾನಿಯು ಐನ್‌ಸ್ಟೈನ್ ಮತ್ತು ನ್ಯೂಟನ್ನರನ್ನು ನಿರಾಕರಿಸಿ ಗುರುತ್ವಾಕರ್ಷಣ ಶಕ್ತಿಗೆ ‘ಮೋದಿ ತರಂಗ’ ಎಂದು ಹೆಸರಿಡಲು ಸೂಚಿಸಿದರು.
ಇವತ್ತು ವಿಜ್ಞಾನಿಗಳನ್ನು, ಬುದ್ದಿಜೀವಿಗಳನ್ನು, ಚಿಂತಕರನ್ನು ಇಡೀ ಭಾರತವೇ ಗೇಲಿ ಮಾಡುತ್ತಿದೆ.
ಇದರಲ್ಲಿ ಪ್ರಧಾನಿಗಳೇ ಮುಂಚೂಣಿಯಲ್ಲಿದ್ದಾರೆ. ಅವರೇ ಮುಂಬೈ ವೈದ್ಯರ ಸಮ್ಮೇಳನವೊಂದರಲ್ಲಿ ‘ಹಿಂದಿನ ಶಕ್ತಿಯನ್ನು ನಾವು ಮತ್ತೆ ಪಡೆಯಬೇಕು’ ಎಂದು ಹೇಳಿದ್ದರು. ಹಾಗೆ ಹೇಳುವಾಗ, ಬಹುಶಃ ಅವರ ಮುಂದೆ ‘ಪ್ರಾಚೀನ ಭಾರತದಲ್ಲಿ ಪ್ಲಾಸ್ಟಿಕ್ ಸರ್ಜರಿ ನಡೆಸಿಕೊಂಡಿದ್ದ ಗಣೇಶ ಇದ್ದ ಎಂದು ತೋರುತ್ತದೆ. ಬಾಲಾಕೋಟ್ ಸಂದರ್ಭದ ಮೋಡಗಳೆಡೆಯಲ್ಲಿ ವಿಮಾನ ಕಾಣುವುದಿಲ್ಲ’ ಎಂಬ ಅವರ ‘ಮೋಡ ಸಿದ್ಧಾಂತ’ವನ್ನು ವಿಶ್ವದ ಯಾವ ದೇಶಗಳೆಲ್ಲ ಅಂಗೀಕರಿಸಿದವೋ ವರದಿಯಾಗಿಲ್ಲ. ಸ್ವತಃ ಅವರೇ ಜಗತ್ಪಸಿದ್ಧ ಹಾರ್ವರ್ಡ್ ವಿವಿಯನ್ನು ತಮಾಶೆ ಮಾಡಿ ಮಾತಾಡಿದಾಗ ಅಲ್ಲಿನ ವಿದ್ಯಾರ್ಥಿಗಳೇ’ ‘ಹಾಗೆ ಮಾತಾಡಿದ್ದು ಸರಿಯಲ್ಲ’ ಎಂದು ಪ್ರಧಾನಿಗಳಿಗೆ ಬರೆದರು.
ವೇದಗಳು, ಮಹಾಭಾರತ ಮತ್ತು ರಾಮಾಯಣಗಳಲ್ಲಿ ಇಲ್ಲದ್ದು ಯಾವುದೂ ಇಲ್ಲವೆಂದು ಭಾವಿಸುವವರು ಇನ್ನು ಕೆಲವು ದಿನಗಳಲ್ಲಿ ಕುರುಕ್ಷೇತ್ರದಲ್ಲಿ ಕಾಣಿಸಿಕೊಂಡ ಕೊರೋನಾ ಮತ್ತು ಅದನ್ನು ನಾಶ ಪಡಿಸಿದ ಋಷಿಗಳ ಬಗ್ಗೆ ಭಾಷಣ ಬಿಗಿದಾರು. ಪೂಜೆ, ಯಜ್ಞ ಇತ್ಯಾದಿಗಳು ಮನಶ್ಯಾಂತಿಗೆಂದರೆ ಸರಿ. ಆದರೆ ಅವು ರೋಗಗಳನ್ನು ನಿವಾರಿಸುತ್ತವೆ ಎಂದು ವಾದಿಸಿದರೆ ಅದು ಆತ್ಮಹತ್ಯಾಕಾರಕವಾಗಿರುತ್ತದೆ.
ಹೆಚ್ಚಿನವರ ವಾದದ ಸಾರವೆಂದರೆ, ‘ಎಲ್ಲವೂ ನಮ್ಮಲ್ಲಿತ್ತು, ಆದರೆ ಅದನ್ನು ವಿದೇಶೀಯರು ಕದ್ದರು’.
ಈ ನಂಬಿಕೆಗಳಿಗೆ ಈಗ ರಾಜಕೀಯ ಶಕ್ತಿ ಪ್ರಾಪ್ತಿಸಿದೆಯಾದ್ದರಿಂದ ಈ ಅನುಪಯುಕ್ತ ನಂಬುಗೆಗಳು ಭಾರತೀಯರು ಮನಸುಗಳನ್ನೂ ವೇಗವಾಗಿ ಆಕ್ರಮಿಸಿಕೊಳ್ಳುತ್ತಿದೆ. ಇದೊಂದು ಅತ್ಯಂತ ಅಪಾಯಕಾರೀ ಬೆಳವಣಿಗೆಯಾಗಿದ್ದು ಭಾರತೀಯ ಹೊಸ ತಲೆಮಾರನ್ನು ಸಂಪೂರ್ಣ ನಾಶಮಾಡಲಿದೆ.
ಒಂದೊಳ್ಳೆ ಲೇಖನ ಮತ್ತು ಓದುಗರ ಅವಲೋಕನಕ್ಕೆ ಸಹದಾರಿಯಾಗಿಸಿದ್ದು ಒಂದಷ್ಟು ಹೆಚ್ಚೆ ಕೃತಜ್ಞತೆ ಸಲ್ಲಿಸಬೇಕು ಎಂದೆನಿಸಿತು ಅವಧಿಗೆ ಮತ್ತು ಬಿಳಿಮಲೆ ಸರ್ ಅವರಿಗೆ ಅನೇಕ ಧನ್ಯವಾದಗಳು