ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲವೂ ಆಗಿ ಏನೂ ಆಗದವಳ ಕಥೆ

ಅಂತರಂಗ . . . .

– ಅರುಣಕುಮಾರ ಹಬ್ಬು


ನಾನೀಗ ಹೆಚ್ಚಾಗಿ ಮಾತಿಗಿಂತ ಮೌನಕ್ಕೇ ಶರಣಾಗಿದ್ದೇನೆ. ನೆನೆದರೆ ಮೈಮನವೆಲ್ಲ ನೋವಿನಿಂದ ಹಿಂಡಿ ಹಿಪ್ಪೆಯಾದ ಕಹಿ ಅನುಭವ. ಏನೂ ಬೇಡ… ಯಾರೂ ಬೇಡ. ಎಲ್ಲವನ್ನೂ ಕಳೆದುಕೊಂಡ ಹತಾಶ ಭಾವ ನನ್ನಾವರಿಸಿಬಿಡುತ್ತದೆ. ಯಾರ ಹತ್ತಿರವೂ ಮಾತು ಬೇಡ. ಏಕಾಂತವೇ ನನ್ನ ಪಾಲಿನ ಆಸರೆ. ಹರಟೆಯಂತೂ ದೂರದ ಮಾತೇ. ಉಳಿದವರಿಗೆಲ್ಲ ದೂರದಲ್ಲಿರುವ ತಮ್ಮ ಮಗನ ಚಿಂತೆ. ಯಾವಾಗ ಬರುತ್ತಾನೋ. . . ಎಷ್ಟೊತ್ತಿಗೆ ಫೋನು ಮಾಡುತ್ತಾನೋ ಎಂಬ ಕಾತರ, ಕನವರಿಕೆ. ಈಗ ಬಂದಾನು. . . ಆಗ ಬಂದಾನು ಎಂಬ ನಿರೀಕ್ಷೆ. . . ಅಷ್ಟರಲ್ಲಿಯೇ ಅವರ ಅಂದಿನ ದಿನದ ಸಮಯ ಮುಗಿದೇ ಹೋಗುತ್ತದೆ. ಇವರ ತವಕ, ಕಾತರಗಳನ್ನು ನೋಡಿದರೆ ಒಮ್ಮೆ ನಗು ಬಂದರೆ ಇನ್ನೊಮ್ಮೆ ಮೈಯೆಲ್ಲ ಉರಿದುಹೋಗುತ್ತದೆ. ಅಂದ ಹಾಗೇ ನನ್ನಲ್ಲೂ ಈ ಕಾತರ ತವಕಗಳಿದ್ದಿಲ್ಲವೇ? ಇತ್ತು ಆದರೆ ದಿನಗಳೆದಂತೆ ಈ ನಿರೀಕ್ಷೆಗಳಿಗೆ ಅರ್ಥವೇ ಕಾಣಲಿಲ್ಲ. ಏಕೆಂದರೆ ಅವರ ಜತೆ ನಾನೂ ಒಬ್ಬವನಾಗಿದ್ದೆ. ಆಗೆಲ್ಲ ಪುಸ್ತಕಗಳೇ ನನ್ನ ಸಂಗಾತಿಯಾಗಿದ್ದವು. ಕಲಿಯುವಾಗ ಆಗದ ಕೆಲಸವನ್ನು ಈಗ ಮಾಡತೊಡಗಿದ್ದೆ.
ನನಗೂ ಮಕ್ಕಳಿದ್ದಾರೆ. ಒಬ್ಬಳು ದೂರದ ಮುಂಬೈನಲ್ಲಿ. . . ಇನ್ನೊಬ್ಬ ಇನ್ನಷ್ಟು ದೂರದ ಅಮೆರಿಕದಲ್ಲಿ. . . ಬಾ ಎಂದರೆ ಹೇಗಮ್ಮ ಬರಲಿ. . . ಎಂದು ಮಗಳು ಹೇಳಿದರೆ ಅಮೆರಿಕದಿಂದ ಬರಲು ಸಾಧ್ಯವೇ ಎನ್ನುವುದು ಮಗನ ಅಳಲು. ಇನ್ನೊಬ್ಬ ತಾನಾಯಿತು ತನ್ನ ಸಂಸಾರವಾಯಿತು. ಯಾರಿಗಾಗಿ ನಿರೀಕ್ಷಿಸಲಿ? ಮಲಗಿದಾಗ ರಾಣಿ. . . ಎಚ್ಚತ್ತಾಗ ತಿರುಕ. . . ಇದು ನನ್ನ ಜೀವನದ ಪರಿ. ಒಮ್ಮೊಮ್ಮೆ ನನ್ನ ನೆನಪೆಲ್ಲವೂ ಕಾಡಿ ಹೆಣ್ಣು ಜನ್ಮವು ಸಾಕು ಎನ ಕಂಡು ನೆನೆಯಿರೋ ರಾಮ ರಾಮ . . . ಎಂದು ಅಮ್ಮ ಯಾವಾಗಲೂ ಗುನುಗುತ್ತಿದ್ದ ಹಾಡು ಮನದಾಳದಿಂದೆದ್ದು ಬಂದು ದೇಹ ಹಿಡಿಯಷ್ಟಾಗುತ್ತದೆ.
ಹೌದು. . . ಆಗಲೇ ನನಗೆ ಈ ಜನ್ಮ ಸಾಕು ಎನಿಸಿತ್ತು. ಇದ್ದು ನಾನು ಸಾಧಿಸಿದ್ದಾರೂ ಏನು? ನನ್ನ ಹುಟ್ಟೇ ಒಂದು ಅಸಹನೀಯ. ನಾನು ಹೆಣ್ಣು ಎಂದಾಗಲೇ ಅಪ್ಪನ ಮುಖ ಹಿಂಡಲಕಾಯಿ ತಿಂದಂತೆ ಆಯಿತಂತೆ. ಏನೋ ಅಮ್ಮ ನನ್ನನ್ನು ಬೆಳೆಸಿದಳು. ಅವಳ ಪ್ರೀತಿಯೊಂದೇ ನನಗಾಸರೆಯಾಯಿತು. ಹೇಗೋ ದೊಡ್ಡವಳಾದೆ. ಅಪ್ಪ ತನ್ನ ಕರ್ತವ್ಯವೆನ್ನುವಂತೆ ಶಾಲೆಗೇನೋ ಸೇರಿಸಿದ. ಅಲ್ಲಿ ನನ್ನಂತೆ ಪುಟ್ಟ ಪುಟಾಣಿಗಳ ಜತೆ ಆಡುತ್ತಿದ್ದಾಗ ಹೃದಯ ಪುಟಿದೆದ್ದು ಆಕಾಶದೆತ್ತರಕ್ಕೆ ಏರುತ್ತಿತ್ತು. ಮಾಸ್ತರರು ದೊಡ್ಟವರ ಪಾಠ ಹೇಳುತ್ತಿದ್ದಾಗ ನನ್ನಾಸೆ ಗರಿಗೆದರೆ ನಾನೂ ಅವರಂತಾದರೆ. . . ಎನ್ನುವ ಕನಸು. ಶ್ರೀನಿವಾಸ, ಶಿವರಾಮ ಕಾರಂತ, ಕವಿ ಬೇಂದ್ರೆ ಅವರ ಹೆಸರು ಕೇಳುತ್ತಿದ್ದಂತೆ ನಾನೂ ಬರೆಯುವಂತಾದರೆ. . . ಯಕ್ಷಗಾನದ ಚಂಡೆ ಮದ್ದಳೆಯ ಸದ್ದು ಗುಡುಗಿದಾಗ ನಾನೂ ಅವರಂತೆ ರಂಗದ ಮೇಲೆ ಕುಣಿಯುವಂತಾದರೆ. . . ಹಕ್ಕಿಯ ತೆರದಲಿ ಪಕ್ಕಗಳಿದ್ದರೆ ಎಂದು ಹಾಡುವಾಗಲಂತೂ ಇದೇ ಕನಸು.
ಏನು ಓದ್ತೀಯೇ? ಯಾವಾಗ ನೋಡಿದ್ರೂ ಪುಸ್ತಕ ಪುಸ್ತಕ. ಅಮ್ಮನಿಗಷ್ಟು ಸಹಾಯ ಮಾಡಬಾರದೇನೇ? ನಾಳೆ ಗಂಡನ ಮನೆಗೆ ಹೋದರೆ ಏನು ಮಾಡುತ್ತೀಯೆ? ಅಷ್ಟಿಷ್ಟು ಅಡಿಗೆ ಕಲಿತುಕೋ. ಹುಟ್ಟಿದ ಮನೆಗೂ ಹೆಸರು ಬಂದೀತು. ಇದು ಅಪ್ಪನ ಉಪದೇಶ. ಅಂದರೆ ನಾನು ಮದುವೆಗಾಗಿಯೇ ಹುಟ್ಟಿದ್ದೇ? ನನಗೆ ಎಂಟು ವರ್ಷವಷ್ಟೇ ಅದಾಗಲೇ ನನ್ನಪ್ಪನಿಗೆ ಮದುವೆ ಚಿಂತೆ. ಒಂದು ಒಳ್ಳೆ ಗಂಡು ಸಿಕ್ಕರೆ ಸಾಕು ಅವಳ ಮದುವೆ ಮಾಡಿ ಕೈತೊಳೆದುಕೊಳ್ಳುತ್ತೇನೆ ಎಂದು ನನ್ಮಮ್ಮನ ಹತ್ತಿರ ನುಡಿದಾಗ ಅಮ್ಮ ಮದುವೆ ಆಗಲೇಬೇಕೇ ಎಂದು ಕೇಳಿದ್ದೆ. ಹೌದು ಮಗಳೇ ಅದೇ ಹೆಣ್ಣಿನ ಅಂತಿಮ ಗುರಿ ಎಂಬಂತೆ ಹೇಳಿದ್ದಳು. ನಾನೂ ಮದುವೆಯಾಯ್ದಿಲ್ಯೆನೆ? ಮಕ್ಳಳನ್ನು ಹೆತ್ತು ಸಂಸಾರ ಮಾಡಲಿಲ್ಯ? ಎಂಬ ಉಪದೇಶ ಬೇರೆ.
ನಾನು ಏಳನೇ ಕ್ಲಾಸ್ ಮುಗಿಸಿದಾಗ ಹೈಸ್ಕೂಲು ಸೇರುವ ಕನಸು ಹೊತ್ತು ಅಮ್ಮನಿಗೆ ಹೇಳಿದೆ. ಅವಳು ನನಗೇನು ಗೊತ್ತು? ಅಪ್ಪನಿಗೆ ಕೇಳು ಎಂದಾಗ ನನ್ನ ಜಂಘಾಬಲವೇ ಉಡುಗಿಹೋದಂತಾಯಿತು. ಆದರೂ ಧೈರ್ಯ ಮಾಡಿ ಅಪ್ಪ ನಾನು ಹೈಸ್ಕೂಲಿಗೆ ಹೋಗ್ತೆ. . . ಎಂದಿಷ್ಟೇ ಹೇಳಿದ್ದೇ ಅಪ್ಪನ ಕೋಪ ನೆತ್ತಿಗೇರಿತು. ಸಾಕು ಸಾಕು ಇಷ್ಟು ವರ್ಷ ಶಾಲೆಗೆ ಮಣ್ಣು ಹೊತ್ತಿದ್ದು ಸಾಕಾಯ್ದಿಲ್ಯೆನೇ? ಮುಂದೆ ಕಲ್ತು ನೀ ಏನ್ ಮಾಡ್ತೆ? ಮನೆಲೇ ಕೆಲಸ ಮಾಡ್ಕಂಡಿರು.
ಇಲ್ಲೆ ಅಪ್ಪ ನನಗೂ ಕಲ್ತು ದೊಡ್ ಮನುಷ್ಯನಾಗೋ. ಓದಿ ಬರ್ದು ಹೆಸರ್ ತಗೊಳೊ. ಊಹೂಂ ಅಪ್ಪ ಜಪ್ಪಯ್ಯ ಎನ್ನಲಿಲ್ಲ. ನನ್ನ ಅಳು, ಹಠ ಎಲ್ಲ ನೀರಿನಲ್ಲಿ ಮಾಡಿದ ಹೋಮವೇ. ಕೊನೆಗೂ ಅಪ್ಪನ ಮಾತೇ ಗೆದ್ದಿತು. ಕೆಲವೇ ದಿನಗಳಲ್ಲಿ ದೊಡ್ಟ ನೌಕರಿಯಲ್ಲಿದ್ದ ಒಬ್ಬ ವರ ಅಪ್ಪಂಗೆ ಸಿಕ್ಕೇ ಬಿಟ್ಟ. ಅಂತೂ ಆತ ಕೈತೊಳೆದುಕೊಳ್ಳುವ ದಿನವೂ ಬಂತು. ಹೆಮ್ಮೆಯಿಂದ ನನ್ನ ಮಗಳಿಗೆ ದೊಡ್ಡ ವರ ಸಿಕ್ಕಿದ್ದಾನೆ ಎಂದು ಊರ ತುಂಬೆಲ್ಲ ಡಂಗುರ ಸಾರುತ್ತ ನಡೆದ. ಅದೇ ಆತನ ಜೀವನದ ಗುರಿಯೂ ಆಯಿತು. ನನ್ನ ಮನದ ಆಸೆಗಳನ್ನೆಲ್ಲ ಚಿವುಟಿ ಹಾಕಿ ಪುಟ್ಟ ಹೃದಯದ ಕನಸನ್ನೂ ಅರಿಯುವ ಪ್ರಯತ್ನ ಮಾಡದೇ ನಾನು ನೋಡದೇ ಇದ್ದ ವರನ ಜತೆ ಮದುವೆಯೂ ಮಾಡಿ ವಿಜಯ ದುಂದುಬಿ ಹಾರಿಸಿದ. ಅಮ್ಮನೂ ಸಂಪ್ರದಾಯ ಎಂಬಂತೆ ಅಳುತ್ತ ನನ್ನನ್ನು ಗಂಡನ ಮನೆಗೆ ಸಾಗ ಹಾಕಿದಳು. ಅಲ್ಲಿಗೆ ನನ್ನ ಜೀವನದ ಒಂದು ಹಂತ ಮುಗಿದಿತ್ತು.
ನನ್ನದಾದ ಮನೆಯ ಪ್ರಪಂಚವೇ ಬೇರೆ. ಮದುವೆಯಾಗಿದೆ. ಮಕ್ಕಳಂತೆ ಆಡುವಂತಿಲ್ಲ. ಹೊಸ ವಿವಾಹದ ಕನಸು ಅಂದರೆ ಅದೂ ಸಾಧ್ಯವಾಗಲಿಲ್ಲ. ಗಂಡನಿಗೆ ದಿನವಿಡೀ ಕೆಲಸ. ಬೆಳಿಗ್ಗೆ ಹೋದರೆ ರಾತ್ರಿಯೇ ಆತನ ದರ್ಶನ. ಆತ ಈಗ ಬರುತ್ತಾನೆ. . . ಆಗ ಬರುತ್ತಾನೆ ಎಂಬ ನಿರೀಕ್ಷೆಯೇ ಜೀವನವಾಯಿತು. ಬಂದಾಗ ಊಟ ಮಾಡಿ ಅವನ ಜತೆ ಮಲಗುವುದು ಅಷ್ಟೇ. ಒಂದು ಪ್ರೀತಿಯ ಮಾತಿಲ್ಲ. ಕನಸು ಕಟ್ಟುವ ಕೆಲಸವಿಲ್ಲ. ಏನಿದೀ ಜೀವನ ಎಂಬಂತೆ ರೋಸಿಹೋಯಿತು.
ವರ್ಷಗಳೇ ಕಳೆದರೂ ನನ್ನ ಸಾಧನೆಯೇನು? ಮನೆಗೆ ಬಂದ ಗಂಡನಿಗೆ ಅಡಿಗೆ ಮಾಡಿ ಹಾಕುವುದೇ? ರಾಶಿರಾಶಿಯಾಗಿ ಬಿದ್ದ ಪಾತ್ರೆಗಳನ್ನು ತೊಳೆಯುವುದೇ? ಗಂಡ ಬಿಟ್ಟುಹೋದ ಬಟ್ಟೆಗಳನ್ನು ತೊಳೆದು ಶಿಸ್ತಾಗಿ ಮಡಚಿ ಸಜ್ಜುಗೊಳಿಸುವುದೇ? ಅಥವಾ ಮಕ್ಕಳ ಲಾಲನೆ ಪಾಲನೆಯಲ್ಲಿಯೇ ಜೀವ ತೇಯುವುದೇ?. ಒಮ್ಮೆ ಅಮ್ಮನ ಮನೆಗೆ ಹೋದಾಗ ಇವೆಲ್ಲವನ್ನೂ ಹೇಳಿ ಅತ್ತಾಗ ಅವಳು ಹೇಳಿದ್ದು ಇಷ್ಟೇ. ಹೆಣ್ಣುಮಕ್ಕಳ ಜೀವನವೇ ಮದುವೆ ಮತ್ತು ಮಕ್ಕಳು.
ಆಗಲೇ ನನಗೆ ಮೂರು ಮಕ್ಕಳೂ ಆಗಿದ್ದವು. ಪುರುಸೊತ್ತೇ ಇಲ್ಲದ ಗಂಡನ ಜತೆ ಹೊರಗೆ ಹೋಗಿದ್ದೇ ಇಲ್ಲ. ಮಕ್ಕಳು ಚಿಕ್ಕವರು ಎಂದು ಅವರ ಬೆಳವಣಿಗೆಯನ್ನು ನೋಡಿಯೇ ಸಮಯ ಹೋಗುತ್ತಿತ್ತು. ಅವರು ನಕ್ಕು ನಲಿದಾಗ ಅದೇ ಸಾರ್ಥಕತೆ. ಅವರು ಅಮ್ಮ ಎಂದು ಕರೆದಾಗ ಅದೇ ಮೃದು ಮಧುರ ಹರ್ಷ. ಮುಂದೆ. ನನ್ನ ಮನದಾಳದಲ್ಲಿ ಹುದುಗಿದ್ದ ಆಸೆ ಮಾತ್ರ ಗಂಡ ಮಕ್ಕಳ ಸೇವೆಯಲ್ಲಿಯೇ ಅಡಗಿ ಹೋಯಿತು.
ಎಲ್ಲ ಸೇವೆ ಮುಗಿಸಿ ಒಮ್ಮೆ ಗಂಡ ಮನೆಗೆ ಬಂದಾಗ ಕೇಳ್ತ. . . ಮನೆಲೇ ಇದ್ದು ಬೇಜಾರಾಯ್ದು. ಎಲ್ಲಾದರೂ ಹೊರ್ಗ್ ಹೋಪನ?
ಎಂಥದ್ದೇ ನಿಂದು? ಮಕ್ಳಿಳಿದ್ವಲ್ಲೇ ಅವರ ಸಂಗ್ತಿ ನಿನ್ಗೆ ಸಮ್ಯ ಹೋಗ್ತಿಲ್ಲೆನೆ? ನಾನೇ ಬೇಕ? ನನ್ಗೆ ಎಷ್ಟೆಲ್ಲ ಕೆಲ್ಸ ಇದ್ದು ಗೊತ್ತಿದ್ದ. ಮನೆಯೊಳ್ಗೆ ಇದ್ದ ನಿನ್ಗೆ ಇದೆಲ್ಲ ಎಂಥ ಗೊತ್ತಾಗ್ತು? ಸುಮ್ನೆ ಬಿದ್ದಕೊ.
ಥೂ ನನ್ನ್ ಜನ್ಮಕ್ಕಿಷ್ಟು ಬೆಂಕಿ ಹಾಕ. ಇದೇ ಜೀವನವೇ? ಮನೆ ಮಕ್ಕಳು, ಗಂಡನ ಸೇವೆ. ಆತ ಏನೂ ಮಾಡದಿದ್ದರೂ ಸೈ. ಹೊಟ್ಟಗೆ ಹಾಕಿದರೆ ಮುಗಿಯಿತು. ಜತೆಗೆ ಆತನ ತೆವಲು ತೃಪ್ತಿಗೊಳಿಸುವ ಕರ್ತವ್ಯ ಬೇರೆ. ಅಲ್ಲವೇ? ತನ್ನನ್ನೇ ಪ್ರಶ್ನಿಸಿಕೊಂಡಳು. ಅಂದರೆ ಈ ಪ್ರಪಂಚಕ್ಕೆ ಬಂದು ಉಂಡು ತಿಂದು ಮಕ್ಕಳನ್ನು ಹಡೆದುಹೋಗುವುದೇ ಜೀವನವೇ? ಇಲ್ಲ ಏನೇನಾದರೂ ಸಾಧನೆ ಮಾಡಬೇಕೇ? ಇಲ್ಲ ಹೀಗೆ ಕುಳಿತರೆ ಜೀವನವೇ ವ್ಯರ್ಥ.
ಮಗ ಸುಬ್ಬುನಿಗೆ ಹೇಳಿದೆ. ಮಗಾ ನಿನ್ನ ಶಾಲೆಯಲ್ಲಿ ಪುಸ್ತಕ ಇಲ್ಯೆನ. ನಿಂಗೊ ಎಲ್ಲ ದೊಡ್ಡಾದಿ. ಅಪ್ಪಂಗಂತೂ ನನ್ನ ಹತ್ರ ಮಾತಾಡಲೇ ಪುರುಸೊತ್ತಿಲ್ಲೆ? ತಾನಾತು ತನ್ನ ಕೆಲಸಾತು. ನಿಂಗ್ಳ್ ಕೆಲಸ್ ನಿಂಗ ಮಾಡಕತ್ರಿ. ಕಥೆ ಕಾದಂಬರಿ ಪುಸ್ತಕ ತಂದ ಕೊಡ . . . ಎಂದು ಕೇಳಿದೆ. ಆತ ಅದೊಂದು ಕೃಪೆ ಮಾಡಿದ್ದ. ಅಂದಿನಿಂದ ಪುಸ್ತಕಗಳೇ ನನ್ನ ಸಂಗಾತಿಯಾದವು.
ಮಗ ಕಾಲೇಜಿಗೆ ಹೋದಾಗ ಕಾರಂತರು, ಕುವೆಂಪು, ಬೇಂದ್ರೆ ಮೊದಲಾದವರ ಪುಸ್ತಕಗಳನ್ನು ತಂದುಕೊಟ್ಟಿದ್ದೇ ಹೊಸ ಪ್ರಪಂಚವೇ ತೆರೆದಿಟ್ಟಂತಾಗಿತ್ತು. ಜೀವನ ಇಷ್ಟೇ ಅಲ್ಲ. ಪ್ರಪಂಚ ವಿಶಾಲವಾಗಿದೆ ಎಂದು ಅನಿಸಿದ್ದೇ ಈ ಪುಸ್ತಕಗಳಿಂದ.
ಒಂದು ದಿನ ಹೀಗೆ ಪುಸ್ತಕ ಓದುತ್ತ ನನ್ನನ್ನೇ ನಾನು ಮರೆತೆ. ಅಡುಗೆ ಮಾಡುವುದೂ ಮರೆತುಹೋಗಿತ್ತು. ಗಂಡ ಬಂದಾಗ ರಾತ್ರಿ ಎಂಟು ಗಂಟೆ. ಇನ್ನೂ ಅಡಿಗೆ ಆಯ್ದಿಲ್ಯೆನೇ? ಹಶಿವಾಗೋಯ್ದು. ಎಂಥ ಮಾಡ್ತಿದ್ಯೆ? ಇದು ಗಂಡನ ಆದೇಶ. ಬಡಬಡ ಎದ್ದು ಅಡುಗೆ ಮುಗಿಸಿದಾಗ ಗಂಡನ ತಾಳ್ಮೆ ಮೀರಿಹೋಗಿತ್ತು. ಪುಂಖಾನುಪುಂಖವಾಗಿ ಬಯ್ಗಳ ಶಬ್ದಗಳು ಹೊರಹೊಮ್ಮತೊಡಗಿದವು. ಪುಸ್ತಕ ಓದುತ್ತಿದ್ದೆ ಎಂದರೂ ಕೇಳದ ಸ್ಥಿತಿಯಲ್ಲಿ ಆತನಿದ್ದ. ಅಡಿಗೆ ಮಾಡೋದು ಬಿಟ್ಟು ಅದೆಂಥ ಪುಸ್ತಕ ಓದ್ತ್ಯೆ? ಬೇರೆ ಕೆಲ್ಸ ಇಲ್ಲೆನೆ?
ಪುಸ್ತಕ ಓದೋದು ತಪ್ಪನ? ದಿನ ಬೆಳಗಾದ್ರ ನಿಮ್ಗೆ ಕೆಲ್ಸ. ಮನೆಯ ನಾಲ್ಕು ಗೋಡೆ ಮಧ್ಯೆ ಕುಂತು ನಾನೆಂಥ ಮಾಡೊ? ಮಕ್ಕಳು ಕಾಲೇಜಿಗೆ ಹೋಗ್ತೊ. ನೀವು ಕೆಲ್ಸ ಅಂತ ನಡಿತ್ರಿ. ಇಡೀ ಮನೆಗೆ ನಾನೊಬ್ಬಳೇ ದೆವ್ವದಂತೆ ಕೂತ್ಕಳವೋ? ನಿಮ್ಗೆ ಟೈಂ ಹೋಗ್ತು. ನಾನಿದ್ದೀ ಅಂತ ನಿಮಗೆ ಗೊತ್ತಿದ್ರ ಹೇಳಿ?
ಗಂಡನ ಸಿಟ್ಟು ನೆತ್ತಿಗೇರಿತ್ತು. ನನ್ಗೆ ಕೆಲ್ಸನೇ ಮುಖ್ಯ. ಮನೆ ಸಂಸಾರ ನಡೆಸೂದು ನಿನ್ನ ಕೆಲ್ಸ. ಅದೇನೂ ನನ್ಗ್ ಗೊತ್ತಿಲ್ಲೆ. ನೀನೆ ನೋಡಕ್ಯೋ. ನಿನ್ ಸಮಸ್ಯೆ ನನ್ನ್ ತಲೆಗೆ ಹಚ್ಚಡ. ಮನೆಗೆ ಬಂದ್ರೆ ಊಟ ಹಾಕೋದು ನಿನ್ನ ಕಲ್ಸ ಅಲ್ದೆನೆ? ನಾನು ದಿನ ದುಡ್ದು ನಿನ್ನ ಸಂಸಾರಕ್ಕೆ ದುಡ್ಡು ತರ್ತನಿಲ್ಯ? ಇದು ಅವನ ಪ್ರಶ್ನೆ.
ನನಗೂ ತಾಳ್ಮೆ ಮೀರಿತ್ತು. ಇಷ್ಟು ದಿನ ಗಾಣದೆತ್ತಿನಂತೆ ಮೌನವಾಗಿ ದುಡಿದು ದುಡಿದು ಸಾಕಾಗಿ ಹೋಗಿತ್ತು. ಮಕ್ಕಳು ತಮ್ಮ ಕಾಲೇಜು, ಅಭ್ಯಾಸ ಅಂತ ಮನೆಯತ್ತ ಕಾಳಜಿಯೇ ಇಲ್ಲದಂತೆ ವರ್ತಿಸಿದರೆ ಗಂಡ ದುಡಿದು ಹಾಕುವುದಷ್ಟೇ ತನ್ನ ಕರ್ತವ್ಯ ಎಂದು ಭಾವಿಸಿ ನನ್ನನ್ನೇ ಮರೆತಿರುವುದು ಸ್ಪಷ್ಟವಾಯಿತು. ಈ ಮನೆಯಲ್ಲಿ ನನ್ನ್ ಸ್ಥಾನ ಎಂಥದ್ದು. ನಾನೇನು ನಿಮ್ಮ ಮನೆಯ ಆಳೇ? ನನ್ಗೂ ಒಂದು ಜೀವನ ಇದ್ದು ಎಂತು ತಿಳ್ಕತ್ರಿಲ್ಲೆ ಎಂತಕ್ಕೆ? ನನ್ಗೂ ಮನ್ಸಿಲ್ಯೋ? ಭಾವನೆ ಇಲ್ಯೋ?
ಅಷ್ಟು ಕೇಳಿದ್ದೇ ತಪ್ಪಾಗಿ ಹೋಯ್ತು. ನಿನ್ಗೆಂತಕ್ಕೆ ಇಲ್ಲದ ಉಸಾಬರಿ? ನಿನ್ ಕೆಲ್ಸ ಮನೆ ನೋಡಕ್ಯಳದು. ಅಷ್ಟ್ ಮಾಡಿದ್ರ ಸಾಕು. ಎಷ್ಟಂದ್ರೂ ನೀನು ಹೆಂಗ್ಸು. ಮನೆ ಬಿಟ್ಟು ಎಲ್ಲಿಗೂ ಹೋಗದ ಬ್ಯಾಡ. ಎಂದು ಕೂಗಾಡತೊಡಗಿದ.
ಅಂದ್ರೆ ನಾನು ನಿಮ್ಗೆ ದುಡಿಯೊ ಪ್ರಾಣಿ ಅಲ್ದ. ಇಷ್ಟು ದಿನ ದುಡದ್ದೆ. ಇನ್ನು ಮುಂದೆ ಹೀಗೆ ದುಡಿಯಲ್ ಬತ್ತಿಲ್ಲೆ. ಒಂದಿನಾನಾದ್ರೂ ನಂಗೆ ಏನಾಯ್ದು ಅಂತ ಕೇಳಿದ್ರ? ಮಲಕ್ಕಂಡಾಗ ಬಂದು ಏನಾದ್ರೂ ವಿಚಾರಿಸಿದ್ರ? ಅಥ್ವಾ ಪ್ರೀತಿಯಿಂದ ತಲೆ ತಿಕ್ಕಿದ್ರ. ನಾನ್ ಮಾತ್ರ ನಿಮ್ಗೇನಾದ್ರೂ ಆದ್ರೆ ಎಲ್ಲ ಸೇವೆ ಮಾಡಕ್ಕು ಅಲ್ದ. ಇನ್ನೆಷ್ಟು ದಿನ ಹೀಗೆ ಗುಲಾಮಿಯಾಗ್ಲಿ ನಾನು? ಮಾತು ನಿರರ್ಗಳವಾಗಿ ಬಂದಾಗ ಆತನ ಸಿಟ್ಟು ನೆತ್ತಿಗೇರಿ ನನ್ನ ಕಪಾಳಕ್ಕೆ ಹೊಡೆದಾಗ ತಾಳ್ಮೆಯ ಎಲ್ಲೆ ಮೀರಿ ಹೋಯಿತು.
ನಾನೂ ಸ್ವಲ್ಪ ಪುಸ್ತಕ ಓದಿದ್ದೆ. ನನಗೂ ತಿಳುವಳಿಕೆ ಇದ್ದು. ನಿಮ್ಮ್ ಗೆಲುವಿಗೆ ನಾನ್ ದುಡಿಯ.ಆದ್ರೆ ನಂಗೇನು ಕೊಟ್ರಿ? ಆಗಲೇ ಮನಸ್ಸು ಗಟ್ಟಿಯಾಗಿತ್ತು. ಇನ್ನು ಮುಂದೆ ಈ ಗುಲಾಮಗಿರಿ ಸಾಗದು. ನನ್ನನ್ನು ನಾನು ಕಂಡುಕೊಳ್ಳಬೇಕು. ಅಲ್ಲಿಂದಲೇ ನನ್ನ ಓದಿನ ಓಟ ಆರಂಭವಾಯಿತು. ಕಥೆ ಬರೆದೆ.
ಒಂದಿನ ನಾನು ಬರೆದ ಕಥೆಯನ್ನು ಪತ್ರಿಕೆಗೆ ಕಳುಹಿಸಲು ಎಲ್ಲ ಸಿದ್ಧತೆ ಮಾಡಿ ಅದನ್ನು ಅಂಚೆಗೆ ಹಾಕಿ ಬನ್ನಿ ಎಂದು ಗಂಡನಿಗೆ ಹೇಳಿದೆ. ಆತು ನೋಡ್ವ. ಪೋಸ್ಟ್ ಆಫೀಸಿಗೆ ಹೋಗಿ ಹಾಕ್ತಿ. ಎಂದು ಹೇಳಿದ. ಅಂದಿನಿಂದ ಮನೆಗೆ ಬರುವ ಪತ್ರಿಕೆಯನ್ನು ದಿನವೂ ನೋಡುವುದೇ ನನ್ನ ಕೆಲಸವಾಯಿತು. ಆದರೆ ಎಷ್ಟೋ ದಿನ ಕಳೆದರೂ ಪತ್ರಿಕೆಯಿಂದ ಯಾವುದೇ ಉತ್ತರ ಬಾರದಿದ್ದಾಗ ನನ್ನಲ್ಲಿ ಸಂಶಯದ ಸುಳಿ ಸುಳಿದಾಡತೊಡಿತ್ತು. ಒಂದಿನ ಗಂಡನಿಗೆ ಕೇಳಿದೆ. ಆದಿನ ನಿಮ್ಹತ್ರ ಪೋಸ್ಟ್ ಡಬ್ಬಿಗೆ ಹಾಕಲು ಕವರು ನೀಡಿದ್ದೆನಲ್ಲ. ಅದನ್ನು ಹಾಕಿದ್ರ?
ಆದಿನನೇ ಹಾಕಿದ್ನಲ್ಲೇ. ಎಂದು ಉಡಾಫೆಯ ಉತ್ತರ ಬಂದಾಗ ನನ್ನಲ್ಲಿನ ಸಂಶಯದ ಹುಳು ಇನ್ನಷ್ಟು ಸಕ್ರಿಯವಾಗಿತ್ತು. ಅಂದು ಗಂಡ ಕಚೇರಿಗೆ ಹೋದ ಮೇಲೆ ಕೋಣೆಗೆ ಹೋಗಿ ಪರೀಕ್ಷಿಸಿದೆ. ಅರೇ. . . ನನ್ ಲಕೋಟೆ ಇಲ್ಲೇ ಇದ್ದು. ಆ ದಿನ ಸುಳ್ಳೇ ಹೇಳಿದ್ರಂಗ್ ಕಾಣ್ತು. ಬರ್ಲಿ ಕೇಳ್ತೆ ಎಂದು ಮನದಲ್ಲಿಯೇ ಅಂದುಕೊಂಡೆ. ಸಂಜೆ ಬಂದಾಗ ಆತನಿಗೆ ಕೇಳಿದೆ. ಹೌದೇ ಮರ್ತೇ ಹೋತು ಎಂದು ಮತ್ತದೇ ಉಡಾಫೆಯ ಉತ್ತರ. ನಿನಗೆಂತಕ್ಕೆ ಈ ಕಥೆ ಬರಿಯೋ ಉಸಾಬರಿ. ನೀನೇನ್ ಪ್ರಸಿದ್ಧಿಯಾಪದಿದ್ದೋ? ಹೆಂಗ್ಸ್ರಂದ್ರೆ ಮನೆ ಸಂಸಾರ ನೋಡಕ್ಯಳವಪ್ಪ ಆಗಲೇ ಆತನ ದುಷ್ಟಬುದ್ಧಿ ಗೊತ್ತಾಯಿತು. ಈತನಿಗೆ ನಾನು ಬೆಳಕಿಗೆ ಬರೋ ಇಷ್ಟವಿಲ್ಲ. ನನ್ನಲ್ಲಿನ ನಾನು ಮೇಲೆದ್ದು ಬಂದಿದ್ದ. ಹಟ ಇಣಕಿಕ್ಕಿತ್ತು. ಅದೇ ಲಕೋಟೆಯನ್ನು ನಾನೇ ಪೋಸ್ಟ್ ಮಾಡಿದೆ. ಕೆಲವೇ ದಿನಗಳಲ್ಲಿ ನನ್ನ ಕಥೆಯೂ ಪತ್ರಿಕೆಯಲ್ಲಿ ಬಂದಿತು.
ಅದನ್ನು ಓದಿದ ನನ್ನ ಗಂಡನಿಗೆ ಈರ್ಷೆಯೋ ಕೀಳರಿಮೆಯೋ ಗೊತ್ತಾಗಲಿಲ್ಲ. ಒಮ್ಮೆಲೇ ನನ್ನ ಮೇಲೆ ಹಾರಾಡಿದ್ದ. ಅಂದಿನಿಂದ ನಾನು ಓದುವ ಬರೆಯುವ ಹವ್ಯಾಸವನ್ನು ಮಾತ್ರ ಬಿಡಲೇ ಇಲ್ಲ. ಅಲ್ಲಿಗೆ ನನ್ನ ಮತ್ತು ಗಂಡನ ಮಧ್ಯೆ ಸಾಕಷ್ಟು ಬಿರುಕು ಮೂಡಿತ್ತು. ಮಾತೂ ಅಷ್ಟಕ್ಕಷ್ಟೆ. ಆಗೀಗ ಒಂದೊಂದು ಶಬ್ದ ಬಿಟ್ಟರೆ ಬೇರೇನೂ ಇರಲಿಲ್ಲ. ನನಗೂ ಒಂದು ರೀತಿಯ ವೈರಾಗ್ಯ ಬಂದುಬಿಟ್ಟಿತ್ತು. ಯಾಂತ್ರಿಕವಾಗಿ ಅಡಿಗೆ ಮಾಡುವುದು. ಗಂಡನಿಗೆ ಬಡಿಸುವುದು. ಉಳಿದ ಸಮಯದಲ್ಲಿ ಓದು, ಬರೆಹ. ಇದೇ ನನ್ನ ಸಂಗಾತಿಯಾಯಿತು. ಮಕ್ಕಳಂತೂ ಕಾಲೇಜು, ಮನೆ, ಓದುಗಳಲ್ಲಿಯೇ ಕಾಲ ಕಳೆದರೂ ಆಗಾಗ ಬಂದು ನನ್ನನ್ನು ಅಮ್ಮ ಎಂದು ಕರೆದು ಲಲ್ಲೆಗರೆಯುವುದೇ ನನಗೆ ಇದ್ದ ಸಮಾಧಾನ. ನನಗಿನ್ನೇನು ಆಗಬೇಕಿದೆ. ಎಲ್ಲವೂ ಮುಗಿದ ಮೇಲೆ ಬೇರೆಯೇ ಮಾರ್ಗ ಕಂಡಿದೆ ತಾನೆ? ಅದನ್ನೇ ಮುಂದುವರಿಸಿದರೆಯಾಯಿತು ಎಂದುಕೊಂಡೆ.
ಒಮ್ಮೆ ನನ್ನ ಗಂಡನಿಗೆ ಆತನ ಕೆಲಸ ನೋಡಿ ಪ್ರಶಸ್ತಿಯೊಂದು ಬಂತು. ಪ್ರಶಸ್ತಿ ವಿತರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಇದೆಲ್ಲ ನನಗೆ ಗೊತ್ತಾಗಲೇ ಇಲ್ಲ. ಮಕ್ಕಳು ಬಂದು ಹೇಳಿದಾಗಲೇ ತಿಳಿದದ್ದು. ಆದರೂ ಮಕ್ಕಳ ಒತ್ತಾಯದಿಂದ ಸಮಾರಂಭಕ್ಕೆ ಹೋದೆ. ಅಲ್ಲಿ ನನ್ನ ಗಂಡ ನೋಡಿಯೂ ನೋಡದವನಂತೆ ವೇದಿಕೆಯ ಮೇಲೆ ಕುಳಿತಿದ್ದ. ನಾನು ಸಭಾಭವನದ ಒಂದು ಮೂಲೆಯಲ್ಲಿ ಮಕ್ಕಳ ಜತೆ ಕುಳಿತು ನೋಡುತ್ತಿದ್ದೆ. ಪ್ರಶಸ್ತಿ ಪ್ರದಾನವಾದ ಮೇಲೆ ಆತ ತನ್ನ ಅನಿಸಿಕೆಯನ್ನು ಹೇಳತೊಡಗಿದ. ನಾನು ಒಬ್ಬ ಸ್ವತಂತ್ರ ವ್ಯಕ್ತಿ,. ನನ್ನ ಸ್ವಂತ ಪ್ರಯತ್ನವೇ ಈ ಪ್ರಶಸ್ತಿಗೆ ಕಾರಣವಾಗಿದೆ. ಇದರಲ್ಲಿ ಬೇರೆ ಯಾರ ಪ್ರಯತ್ನವೂ ಇಲ್ಲ. . . ಹೀಗೆ ಸಾಗಿತ್ತು ಆತನ ಸ್ವಯಂ ಪ್ರಶಂಸೆ. ಎಲ್ಲಿಯಾದರೂ ನಾನು ತೆರೆಮರೆಯಲ್ಲಿ ಇದ್ದು ನನ್ನ ಗಂಡನಿಗೆ ಯಾವುದೇ ಕೊರತೆ ಬರದಂತೆ ನೋಡಿಕೊಂಡಿದ್ದ ಮಾತು ಬರುತ್ತದೆಯೋ ಎಂದು ಕಾತರಳಾಗಿ ಕುಳಿತಿದ್ದೆ. ಊಹೂಂ. ಪುರುಷನ ಯಶಸ್ಸಿನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂಬ ಪ್ರಸಿದ್ಧ ಗಾದೆ ಅತನ ಮಟ್ಟಿಗೆ ಹಳಸಲು. ನಿಸ್ಪೃಹಳಾಗಿ ಗೊಣಗದೇ ಆತನಿಗೆ ಕಾಲಕಾಲಕ್ಕೆ ಊಟ, ತಿಂಡಿ, ಬಟ್ಟೆಗಳನ್ನು ನೋಡಿಕೊಂಡು ಆತನ ಪ್ರತೀಕವಾಗಿ ಮೂರು ಮಕ್ಕಳನ್ನು ಹೆತ್ತುಕೊಟ್ಟಿದ್ದಕ್ಕೆ ಆತ ನೀಡಿದ ಬಹುಮಾನವಿದು! ಮನಸ್ಸಿಗೆ ರೇಜಿಗೆಯಾಯಿತು. ಆತನ ಕುತ್ಸಿತ ಬುದ್ಧಿ ಇಡೀ ಪುರುಷ ಸಮಾಜದ ಮನೋಪ್ರವೃತ್ತಿಗೇ ಹಿಡಿದ ಕೈಗನ್ನಡಿಯೇ ಎಂದು ಭಾವಿಸುವಂತಾಯಿತು.
ಇಷ್ಟಾಗಿ ಎಷ್ಟೋ ವರ್ಷಗಳೇ ಕಳೆದಿವೆ. ನಾನೀಗ ವಯೋವೃದ್ಧಳಾಗಿದ್ದೇನೆ. ಮಕ್ಕಳು ತಮ್ಮ ತಮ್ಮ ಉದ್ಯೋಗ ಅರಸಿ ದೂರದ ಊರಿನಲ್ಲಿ ಇದ್ದಾರೆ. ಅವರಿಗೆ ಇತ್ತ ನೋಡುವ ಪುರುಸೊತ್ತೂ ಇಲ್ಲ. ಮಗಳು ಮಾತ್ರ ಆಗಾಗ ಫೋನು ಮಾಡಿ ನನ್ನ ಮತ್ತು ಆಕೆಯ ಅಪ್ಪನ ಆರೋಗ್ಯ ಕೇಳುತ್ತಾಳೆ.
ಇದೀಗ ಗಂಡನ ಆರೋಗ್ಯವೂ ಕೆಟ್ಟಿದೆ. ಆತನಿಗೆ ಆಸರೆಯ ಅವಶ್ಯಕತೆ ಇದೆ. ಹೆಣ್ಣೆಂದರೆ ತಾಳ್ಮೆಯ ಮೂರ್ತಿಯಲ್ಲವೇ? ಏನೇ ಆದರೂ ನನ್ನ ಗಂಡ ಎಂದು ಮಾತನಾಡದೇ ಆತನ ಸೇವೆ ಮಾಡಿದೆ. ಒಂದು ದಿನ ಆತನೂ ಇಹಲೋಕವನ್ನು ತ್ಯಜಿಸಿದ. ಆದರೆ ಸಾಯುವವರೆಗೂ ನನಗೆ ಮಾಡಿದ ಅನ್ಯಾಯದ ಬಗ್ಗೆ ಆತನಲ್ಲಿ ಪಶ್ಚಾತ್ತಾಪದ ಸುಳಿವೇ ಇಲ್ಲವಾಯಿತು.
ಈಗ ನಾನು ಒಂಟಿ ಜೀವ. ದೇಹ ಗಟ್ಟಿ ಇರುವವರೆಗೆ ನಾನೇ ಎಲ್ಲವನ್ನು ನಿಭಾಯಿಸಿದೆ. ಆದರೆ ಈಗೀಗ ಅದೂ ಆಗುತ್ತಿಲ್ಲ. ಏನು ಮಾಡಲಿ. ಮಗನ ಬಳಿ ಹೋಗಲೇ? ಇಲ್ಲ ಅಲ್ಲಿ ಸರಿಹೋಗುವುದಿಲ್ಲ. ಇಲ್ಲಿದ್ದರೆ ನನ್ನನ್ನು ನೋಡುವವರು ಯಾರು? ಮಕ್ಕಳಿಗೆ ಕೇಳಿದೆ. ಏನು ಮಾಡಲಿ? ಒಬ ಮಗ ಮಂಬೈಗೇ ಬಾ ಎಂದನಾದರೂ ಅದು ಸರಿಯಾಗದು. ಇನ್ನೊಬ್ಬ ಮಗನ ಬಳಿ ಹೋಗುವಂತಿಲ್ಲ. ಏಕೆಂದರೆ ಆತ ಇರುವುದು ಅಮೆರಿಕದಲ್ಲಿ. ಇನ್ನು ಮಗಳಿಗೆ ಅವಳದ್ದೇ ಆದ ಸಂಸಾರ. ಇಲ್ಲ್ಲಿ ನಾನು ಸಂಸಾರವಿದ್ದರೂ ಒಂಟಿಯಾಗೇ ದಿನ ದೂಡಿದೆ. ಈಗಲೂ ಅಷ್ಟೇ. ಈಗ ನನ್ನ ವಿಳಾಸ ಯಾವುದು ಗೊತ್ತೇ ಜೀವನ ಸಂಧ್ಯಾ…
 

‍ಲೇಖಕರು G

25 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading