ಕಾಣದ ಕಡಲಿಗೆ ಹಂಬಲಿಸಿದೆ ಮನ…
ಹೆಜ್ಜೆ 08
ಜಾಗೃತಿ ಗರಿಗೆದರಿದಾಗ

ಪ್ರವಾಸದ ಹಿನ್ನಲೆಯನ್ನು ತಿಳಿದ ನಂತರ, ಮತ್ತೆ ವಾಸ್ತವಕ್ಕೆ ಬರೋಣ.
ಎರಡು ದಿನದಿಂದ ಸರಿಯಾಗಿ ನಿದ್ರೆಯಿಲ್ಲದಿದ್ದ ಪರಿಣಾಮವಾಗಿ ರಾತ್ರಿ ನಿದ್ರೆ ಪಸಂದಾಗಿ ಬಂದು ನನ್ನ ದೇಹ ಇನ್ನಷ್ಟು ವಿರಾಮ ಬಯಸುತ್ತಿತ್ತು. ಯೋಗಾಭ್ಯಾಸ ಮತ್ತು ಬೆಳಗಿನ ಧ್ಯಾನ ಎರಡಕ್ಕೂ ಹೋಗಲಾಗಲಿಲ್ಲ. ಅಪ್ಪಾವ್ರು ನನ್ನನ್ನೂ ಕರೆದುಕೊಂಡು ಆರೋಗ್ಯ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಮನಗುಂಡಿ ಗ್ರಾಮದ ಪಂಚಾಯಿತಿ ಕಾರ್ಯಾಲಯಕ್ಕೆ ಹೋದರು. ಜೆ.ಡಿ.ಎಸ್‍ನ ಧುರೀಣರೊಬ್ಬರು ಗ್ರಾಮದಲ್ಲಿ ಆರೋಗ್ಯ ಶಿಬಿರ ಆಯೋಜಿಸಿದ್ದರು.
ಹುಬ್ಬಳ್ಳಿಯ ಒಂದು ಆರೋಗ್ಯ ಸಂಸ್ಥೆ ಶಿಬಿರದ ಜವಾಬ್ದಾರಿ ವಹಿಸಿಕೊಂಡಿತ್ತು. ಮೂವತ್ತು ಲಕ್ಷ ರೂಪಾಯಿ ಮೌಲ್ಯದ ಎರಡು “ಕ್ವಾಂಟಮ್ ರೆಸೊನೆಂಸ್ ಮ್ಯಾಗ್ನಟಿಕ್ ಅನಲೈಜರ್” ಎಂಬ ಯಂತ್ರಗಳನ್ನು ತಂದಿದ್ದರು. ಅದರಲ್ಲಿ ತಮ್ಮ ಕೈಯನ್ನಿಟ್ಟರೆ ಸಾಕು, ತಮ್ಮ ದೇಹದ ಪೂರ್ಣ ಚರಿತ್ರೆಯನ್ನು ಒದರುತ್ತದೆ. ಖಾಸಗೀ ಆಸ್ಪತ್ರೆಯಲ್ಲಿ ಈ ಯಂತ್ರದಿಂದ ಆರೋಗ್ಯದ ವರದಿ ಪಡೆಯಲು ಸುಮಾರು ಹತ್ತರಿಂದ ಹದಿನೈದು ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದಾರೆಂದು ತಿಳಿಯಿತು. ಈ ಶಿಬಿರದಲ್ಲಿ ಕೇವಲ ನೂರು ರೂಪಾಯಿ ಪಡೆದು, ತಮ್ಮ ಸಂಪೂರ್ಣ ವರದಿಯ ಜೊತೆಗೆ, ದೇಹದ ಲೋಪದೋಷಗಳನ್ನು ಸರಿಪಡಿಸುವ ಔಷಧಿಯನ್ನೂ ಕೂಡ ಪಡೆಯಬಹುದಿತ್ತು. ಒಳ್ಳೆಯ ಬೆಳವಣಿಗೆ. ಆದರೆ ಮನಗುಂಡಿ ಗ್ರಾಮದ ಸ್ವಚ್ಛತೆ ಬಗ್ಗೆ ನನಗೆ ಬಹಳವಾಗಿ ಚಿಂತೆ ಮೂಡಿತು. ಸ್ವಚ್ಛತೆಯಿಲ್ಲದೆ ಯಾವ ರೀತಿಯ ಆರೋಗ್ಯ ಸುಧಾರಣೆಯಾಗಲು ಸಾಧ್ಯ?
ಮನಗುಂಡಿಯಿಂದ ವಾಪಸ್ಸು ಬರುವ ದಾರಿಯಲ್ಲಿ ಅಪ್ಪಾವ್ರು ಒಂದು ವಿಷಯ ಹೇಳಿದರು. “ರಾಹುಲ್, ನೀನು ಒಂದು ವಿಷಯದ ಬಗ್ಗೆ ಗಮನಕೊಟ್ಟ್ಟು ಉಪನ್ಯಾಸ ಮಾಡು. ನಿನ್ನ ಎಲ್ಲಾ ವಿಷಯಗಳ ಬಗ್ಗೆ ಉಪನ್ಯಾಸ ನೀಡಬೇಕೆಂದರೆ, ನೀನು ನಿನ್ನಲ್ಲಿ ಮತ್ತು ನಿನ್ನ ಸಂಸಾರದಲ್ಲಿ ಮೊದಲು ಅನುಷ್ಟಾನಗೊಳಿಸು. ಆನಂತರ ಉಪನ್ಯಾಸ ನೀಡಿದರೆ ಅದಕ್ಕೆ ಒಂದು ತೂಕ ಮತ್ತು ಅರ್ಥ ಬರುತ್ತದೆ” ಎಂದರು. ನನಗೂ ಅದು ಸರಿಯೆನಿಸಿತು. ನಾನು ಅಪ್ಪಾವ್ರಲ್ಲಿ ನನ್ನ ಪಯಣದ ಬಗ್ಗೆ ಬಹಳವಾಗಿ ಚರ್ಚಿಸಬೇಕೆಂದು ಎಣಿಸಿದ್ದೆ. ಆದರೆ ನನ್ನ ಗುರಿಯ ಬಗ್ಗೆ ಅವರಿಗೆ ಅಷ್ಟಾಗಿ ವಿಶ್ವಾಸ ಇದ್ದಂತೆ ಕಾಣಲಿಲ್ಲ. ನಾನು ಒಂದೆರಡು ದಿನ ಹೀಗೇ ಅಡ್ಡಾಡಿಕೊಂಡು ಮೈಸೂರಿಗೆ ಹಿಂತಿರುಗುವೆನೆಂದು ಗ್ರಹಿಸಿದ್ದರು ಎನಿಸುತ್ತದೆ.
ನನಗೆ ಇದರ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಲು ಅವರು ಸಮಯ ನೀಡಲಿಲ್ಲವೆಂಬ ಬೇಜಾರು ನನ್ನಲ್ಲಿತ್ತು. ನನ್ನ ಸಾಮಾನು ಸರಂಜಾಮುಗಳನ್ನು ಬ್ಯಾಗಿಗೆ ಹಾಕಿಕೊಂಡು ಮಧ್ಯಾಹ್ನದ ಪ್ರಸಾದವನ್ನು ಉಂಡು ಮನಗುಂಡಿ ಪ್ರೌಢಶಾಲೆಗೆ ಹೊರಟೆ. ನನ್ನ ಜೊತೆಗೆ ತಂದಿದ್ದ ಎರಡು ಕಾದಂಬರಿಗಳನ್ನು ಮಿಲಿಟರಿ ತಾತ ಹಾಗೂ ಭೇದಿ ತಾತನಿಗೆ ಕೊಟ್ಟು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ವಿನಂತಿಸಿ ಅಲ್ಲಿಂದ ಹೊರಟೆ.
ಮನಗುಂಡಿ ಶಾಲೆಗೆ ನಾನು ತಲುಪಿದಾಗ ಶಾಲೆಯ ವಿದ್ಯಾರ್ಥಿಗಳೂ ಸೇರಿದಂತೆ ಶಿಕ್ಷಕರಿಗೂ, ನಾನು ಯಾರಿರಬಹುದೆಂಬ ಆಶ್ಚರ್ಯ ಮೂಡಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ರೇಖ ಭಜಂತ್ರಿಯವರನ್ನು ಭೇಟಿಯಾಗಿ ನನ್ನ ಪ್ರಯಾಣದ ಪ್ರೇರಣೆ, ಗುರಿ ಮತ್ತು ಉದ್ದೇಶವನ್ನು ತಿಳಿಸಿದೆ. ಅವರು ಖುಷಿಯಾಗಿ ಸರ್ಕಾರದ ವತಿಯಿಂದ ಪ್ರೌಢಶಾಲೆಗಳಲ್ಲಿ ಒಂದು ಇಕೋ-ಕ್ಲಬ್ ಮಾಡಿರುವುದಾಗಿ ತಿಳಿಸಿದರು. ಪರೀಕ್ಷೆಗಳ ಅಂಕಗಳ ಜೊತೆಯಲ್ಲೇ ಇತರೆ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಎರಡು ಅಂಕಗಳನ್ನು ಜಾಸ್ತಿ ಕೊಡಬಹುದೆಂದು ತಿಳಿಸಿದರು. ಪರಿಸರ ಬಗ್ಗೆಯ ಚಟುವಟಿಕೆಗಳ ವಿವರಗಳು ತುಂಬ ಅಚ್ಚುಕಟ್ಟಾಗಿದ್ದವು. ಆದರೆ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಎಲ್ಲಾ ಶಿಕ್ಷಕರ ಜವಾಬ್ದಾರಿ ಎನಿಸಿತು.
ಮತ್ತೊಬ್ಬ ಶಿಕ್ಷಕ ಪ್ರಮೋದ್‍ರಿಗೂ ನನ್ನ ವಿಷಯ ತಿಳಿಯಿತು. ಮಧ್ಯಾಹ್ನ ಭೋಜನದ ಸಮಯವಾಗಿದ್ದರಿಂದ ಎಲ್ಲರೂ ಊಟದಲ್ಲಿ ಮಗ್ನರಾದರು. ಊಟವಾದ ನಂತರ ಶಾಲೆಯ ಮುಂದಿನ ಜಗುಲಿಯ ಮೇಲೆ ಎಲ್ಲಾ ವಿದ್ಯಾರ್ಥಿಗಳನ್ನು ಕೂರಿಸಿದರು. ಶಿಕ್ಷಕರಾದ ಪ್ರಮೋದ್‍ರವರು ವಿದ್ಯಾರ್ಥಿಗಳ ಎದುರಿಗಿಟ್ಟಿದ್ದ ಮೇಜಿನ ಮುಂದೆ ನಿಂತು, ವಿದ್ಯಾರ್ಥಿಗಳಿಗೆ ನನ್ನನ್ನು ಪರಿಚಯಿಸಿ ಬಹಳ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಶಾಲೆಯ ವಿದ್ಯಾರ್ಥಿನಿ ಒಂದು ವಿಜ್ಞಾನದ ವಿಷಯದ ಬಗ್ಗೆ ಮಾತನಾಡಿ ಉಪನ್ಯಾಸದ ಉದ್ಘಾಟನೆ ಮಾಡಿದಳು. ನಂತರ ನಾನು ಮಾತನ್ನು ಪ್ರಾರಂಭಿಸಿದೆ.
“ಎಲ್ಲರಿಗೂ ನನ್ನ ನಮಸ್ಕಾರ” ಎಂದೆ.
ವಿದ್ಯಾರ್ಥಿಗಳೆಲ್ಲರೂ “ನಮಸ್ಕಾರ ಸಾರ್” ಎಂದು ಉದ್ಗರಿಸಿದರು. ಅವರಿಗೆಲ್ಲ ಒಂದು ತರಹದ ಸಂಭ್ರಮ ಮತ್ತು ಕುತೂಹಲ.
“ನನಗೆ ಸ್ವಾಗತ ಕೋರಿದಂತಹ ಪ್ರಮೋದ್‍ರವರಿಗೂ ಮತ್ತು ನನಗೆ ಇಲ್ಲಿ ಉಪನ್ಯಾಸ ಮಾಡಲು ಅವಕಾಶ ಮಾಡಿಕೊಟ್ಟಂತಹ ಮುಖ್ಯೋಪಾಧ್ಯಾಯರಿಗೂ ಮತ್ತು ಸಹ ಶಿಕ್ಷಕವೃಂದಕ್ಕೂ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ನನ್ನ ಹಿನ್ನಲೆಯನ್ನು ಆಗಲೇ ಪ್ರಮೋದ್‍ರವರು ತಿಳಿಸಿದ್ದಾರೆ. ಈಗಾಗಲೆ ನಿಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಿರಬಹುದು. ಯಾಕಾಗಿ ಈ ಉಪನ್ಯಾಸ? ಯಾಕಾಗಿ ಈ ಪಯಣ? ಯಾಕಾಗಿ ಈ ಪರಿಶ್ರಮ? ಎಂದು. ನಾನು ಮೂರು ವಿಷಯಗಳ ಬಗ್ಗೆ ನಿಮ್ಮಲ್ಲಿ ಜಾಗೃತಿ ಮೂಡಿಸಲು ಬಂದಿದ್ದೇನೆ. ಒಂದು ಪರಿಸರ ಜಾಗೃತಿ ಮತ್ತು ಸ್ವಚ್ಛತೆ. ಎರಡನೆಯದು ಸ್ವತಂತ್ರ ಭಾರತದಲ್ಲಿ ಹಳ್ಳಿಗಳ ಪಾತ್ರ, ಶಿಕ್ಷಣದ ಅವಶ್ಯಕತೆ ಮತ್ತು ನಾವು ಭಾರತೀಯರು ಎಂಬ ಏಕತೆ, ಮೂರನೆಯದು ಮನುಷ್ಯನ ಇಚ್ಛಾಶಕ್ತಿ ಮತ್ತು ಅದರ ಪರಿಣಾಮಗಳು.
ನಾನು ನನ್ನ ಕೆಲಸಕಾರ್ಯಗಳನ್ನು ಬಿಟ್ಟು ಒಳ್ಳೆಯ ದೃಷ್ಠಿ ಮತ್ತು ಗುರಿಯನ್ನಿಟ್ಟುಕೊಂಡು ಈ ಪ್ರಯಾಣವನ್ನು ಶುರುಮಾಡಿದ್ದೇನೆ. ಹೀಗಾಗಿ ನೀವು ಏಕಾಗ್ರತೆಯಿಂದ ಕೇಳದಿದ್ದರೆ, ನನ್ನ ಸಮಯವೂ ಹಾಳು, ನಿಮ್ಮೆಲ್ಲರ ಸಮಯವೂ ವ್ಯರ್ಥವಾಗುತ್ತದೆ. ನೀವು ಈ ಉಪನ್ಯಾಸಕ್ಕೆ ನಿಮ್ಮೆಲ್ಲರ ಸಹಕಾರ ಕೊಡುವುದಾಗಿ ನನಗೆ ಭರವಸೆ ಕೊಡದಿದ್ದರೆ ನಾನು ಈಗಲೇ ನನ್ನ ಮಾತುಗಳನ್ನು ನಿಲ್ಲಿಸಿ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡದೇ ನಾನು ಹೊರಟು ಹೋಗುತ್ತೇನೆ. ಏನು? ನೀವೆಲ್ಲ ನನಗೆ ಸಹಕಾರ ನೀಡುತ್ತೀರಾ?” ಎಂದು ಕೇಳಿದೆ.
“ಹೌದು ಹೌದು” ಎಂದು ಎಲ್ಲರೂ ಒಟ್ಟಿಗೆ ಕೂಗಿ ಹೇಳಿದರು.
“ಧನ್ಯವಾದಗಳು. ನನ್ನ ಪುಣ್ಯ, ಎಲ್ಲಿ ‘ನೀವು ಮುಂದಿನ ಶಾಲೆಗೆ ಹೊರಡಬಹುದು’ ಎಂದು ಗದರಿ ನನ್ನನ್ನು ಮುಂದಿನ ಶಾಲೆಗೆ ಅಟ್ಟುತ್ತೀರ ಎಂದುಕೊಂಡಿದ್ದೆ” ಎಂದು ಹೇಳಿ ಎಲ್ಲರಲ್ಲೂ ನಗು ತರಿಸಿದೆ.
“ಈಗಾಗಲೆ ನೀವೆಲ್ಲಾ ಹಲವಾರು ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀರಿ, ಪರಿಸರ ಅವಘಡಗಳ ಬಗ್ಗೆ ಕೇಳಿದ್ದೀರಿ. ನೇಪಾಳದ ಭೂಕಂಪವಿರಬಹುದು, ಜಪಾನಿನ ಮತ್ತು ಇಂಡೋನೇಷ್ಯಾದ ಸುನಾಮಿಯಿರಬಹುದು, ಕೇದಾರನಾಥದಲ್ಲಿ ಸಂಭವಿಸಿದ ಜಲಪ್ರಳಯ, ನಮ್ಮ ಸುತ್ತ ಮುತ್ತ ಸಂಭವಿಸುವಂತಹ ಬರ ಮತ್ತು ನೆರೆ. ಇದರ ಬಗ್ಗೆ ನೀವೆಲ್ಲಾ ಕೇಳಿದ್ದೀರಾ?” ಎಂದು ಕೂಗಿ ಕೇಳಿದೆ.
“ಹೂಂ ಹೂಂ” ಎಂದರು.
“ಅವೆಲ್ಲಾ ಯಾವ ಕಾರಣಕ್ಕಾಗಿ ಸಂಭವಿಸುತ್ತವೆ ಎಂದು ನಿಮಗೆ ತಿಳಿದಿದೆಯೇ?” ಎಂದು ಕೇಳಿದೆ.
“ಪರಿಸರ ನಾಶದಿಂದ” ಎಂದರು.
“ಪರವಾಗಿಲ್ವೆ, ಎಲ್ಲರಿಗೂ ಕಾರಣ ಗೊತ್ತಿದೆ. ಆದರೆ ಅದರ ಬಗ್ಗೆ ನೀವೆಲ್ಲಾ ಏನು ಮಾಡುತ್ತಿದ್ದೀರಿ?” ಎಂದು ಕೇಳಿದೆ. ಯಾರೂ ಮಾತನಾಡಲಿಲ್ಲ.
“ಸರಿ, ನಾನು ಯಾವ ಕಾರಣಕ್ಕಾಗಿ ಈ ತರಹದ ಅವಘಡಗಳು ಸಂಭವಿಸುತ್ತವೆ ಎಂಬುದನ್ನು ಆದಷ್ಟು ಸರಳವಾಗಿ ವಿವರಿಸುತ್ತೇನೆ. ಈಗ ಒಬ್ಬಳು ಹುಡುಗಿ ಮತ್ತು ಒಬ್ಬ ಹುಡುಗ ಇಲ್ಲಿಗೆ ಬನ್ನಿ. ಒಂದು ಸಣ್ಣ ನಾಟಕವಾಡಿ, ತಮಾಷೆಯ ರೀತಿಯಲ್ಲಿ ಇದರ ಬಗ್ಗೆ ತಿಳಿದುಕೊಳ್ಳೋಣ” ಎಂದೆ.
ಅಲ್ಲೆ ಮುಂದೆ ಕುಳಿತ್ತಿದ್ದ ಇಬ್ಬರು ಬಂದು ನಿಂತರು. ಅವರ ಹೆಸರನ್ನು ಪರಿಚಯಿಸಿ, ಅವರಿಬ್ಬರನ್ನು ಪಕ್ಕಕ್ಕೆ ಕರೆದು ನಾಟಕದ ಬಗ್ಗೆ ಒಂದೆರಡು ಮಾತು ಹೇಳಿ, ಹೇಗೆ ಇಬ್ಬರು ತಮ್ಮ ಪಾತ್ರವನ್ನು ನಿರ್ವಹಿಸಬೇಕೆಂದು ಕೆಲವು ಸಲಹೆಗಳನ್ನು ನೀಡಿ, ನಾನು ಮುಂದುವರಿದೆ. ಇಬ್ಬರೂ ಚೂಟಿ ಮಕ್ಕಳಂತೆ ಕಂಡರು. ಈ ಚುಟುಕು ನಾಟಕವನ್ನು ನಿಭಾಯಿಸಬಲ್ಲರು ಎಂಬ ವಿಶ್ವಾಸ ಮೂಡಿತು. ಆದರೆ ಇದು ನನ್ನ ಮೊದಲ ಉಪನ್ಯಾಸವಾದ್ದರಿಂದ ಮತ್ತು ಈ ನಾಟಕದ ಮೊದಲ ಪ್ರದರ್ಶನವಾದ್ದರಿಂದ, ನಾನೇ ಸ್ವಲ್ಪ ಒತ್ತಡದಲ್ಲಿದ್ದೆ.
“ಈಗ ಈ ಹುಡುಗಿ ಬಂದು ನಿಂತಿದ್ದಾಳಲ್ಲ ಅವಳೇ ಭೂಮಿ ತಾಯಿ ಮತ್ತು ಈ ಹುಡುಗನೇ ಮನುಷ್ಯ. ಅವನ ತಲೆಯಲ್ಲಿರುವ ಕೂದಲುಗಳೆಲ್ಲಾ ಮನುಷ್ಯರು” ಎಂದಾಗ ಎಲ್ಲರೂ ಮತ್ತೆ ಜೋರಾಗಿ ನಕ್ಕರು.
“ಈ ಹುಡುಗ, ಇವಾಗ ತಾನೆ ಜನಿಸಿದ ಪುಟ್ಟ ಮಗು. ಸರೀನಾ?” ಎಂದೆ.
ಎಲ್ಲರೂ ನಕ್ಕು “ಹೂಂ” ಎಂದರು.
“ನಾವು ಮಗುವಾಗಿ ಜನಿಸಿದ ತಕ್ಷಣ ನಮಗೆ ಬದುಕಲು ಏನೇನು ಬೇಕು?” ಎಂದು ಕೇಳಿದೆ.
“ಗಾಳಿ, ನೀರು, ಆಹಾರ” ಎಂಬ ಉತ್ತರ ಅಸ್ಪಷ್ಟವಾಗಿ ಎಲ್ಲರ ಗದ್ದಲದಲ್ಲಿ ಮೂಡಿತು.
“ಹಾಂ, ನಮಗೆ ಹುಟ್ಟಿದ ತಕ್ಷಣ ನಾವು ಸೇವಿಸಲು ಆಮ್ಲಜನಕ, ಕುಡಿಯಲು ನೀರು, ತಿನ್ನಲು ಆಹಾರದ ಅವಶ್ಯಕತೆ ಬರುತ್ತದೆ. ಆದರೆ ಇವೆಲ್ಲಾ ಎಲ್ಲಿ ಸಿಗುತ್ತದೆ? ಯಾರು ಕೊಡುತ್ತಾರೆ? ಆಹಾರವನ್ನು ನಮ್ಮ ಅಪ್ಪ ಅಮ್ಮ ಕೊಡುತ್ತಾರೆ ಎಂದು ನೀವು ಹೇಳಬಹುದು. ಆದರೆ ಅವರಿಗೆ ಎಲ್ಲಿಂದ ದೊರೆಯುತ್ತದೆ?” ಎಂದು ಕೇಳಿದೆ.
“ಭೂಮಿಯಲ್ಲಿ” ಎಂದು ಹೇಳಿದರು.
“ಹಾಂ, ಭೂಮಿ ತಾಯಿ ಹತ್ತಿರ ಇರುತ್ತದೆ. ಅಂದರೆ ನಾವೆಲ್ಲ ಹುಟ್ಟಿದ ತಕ್ಷಣ ಭೂಮಿ ತಾಯಿಯ ಹತ್ತಿರ ಗಾಳಿ, ನೀರು, ಆಹಾರವನ್ನು ಸಾಲ ಪಡೆಯುತ್ತೇವೆ. ಅಲ್ವಾ?” ಎಂಬ ಪ್ರಶ್ನೆ ಇಟ್ಟೆ.
“ಹೂಂ ಸರ್” ಎಂದು ಒಪ್ಪಿಕೊಂಡರು.
“ನಿಮಗೆಲ್ಲಾ ಅರ್ಥವಾಗಲೆಂದು ಭೂಮಿಯಲ್ಲಿರುವ ಸಂಪತ್ತನ್ನೆಲ್ಲಾ ಕ್ರೋಢಿಕರಿಸಿ ಒಂದು ದುಡ್ಡಿನ ರೂಪ ಕೊಡೋಣ. ಈಗ ಭೂಮಿ ತಾಯಿಯ ಹತ್ತಿರ ಇನ್ನೂರು ರೂಪಾಯಿ ಇರುತ್ತದೆ ಎಂದು ತಿಳಿಯೋಣ. ಎಷ್ಟು ಇರುತ್ತೆ?” ಎಂದೆ.
“ಇನ್ನೂರು ರೂಪಾಯಿ” ಎಂದು ಹೇಳಿದರು.
“ಹಾಂ ಸರಿ. ನಮ್ಮ ಮಾನವ ಹುಟ್ಟಿದ ತಕ್ಷಣ ಭೂಮಿತಾಯಿಯ ಹತ್ತಿರ ಹೋಗಿ ಇಪ್ಪತ್ತು ರೂಪಾಯಿಯನ್ನು ಸಾಲ ಕೇಳುತ್ತಾನೆ. ಕೇಳಿಸೋಣವಾ?” ಎಂದೆ
“ಹೂಂ ಸರ್” ಎಂದು ಕೂಗಿದರು.
ಮನುಷ್ಯನ ಪಾತ್ರವಹಿಸಿದ್ದ ಹುಡುಗ ನಾ ಹೇಳಿಕೊಟ್ಟ ಹಾಗೆ ಕೇಳಿದ. “ಭೂಮಿ ತಾಯಿ ಭೂಮಿ ತಾಯಿ, ನಾನು ಈಗ ತಾನೆ ಭೂಮಿ ಮೇಲೆ ಬಂದಿರೋ ಕೂಸು. ನನಗೆ ಬದುಕಲು ಗಾಳಿ, ನೀರು, ಆಹಾರ ಬೇಕು. ನೀನು ದಯಮಾಡಿ ನನಗೆ ನಿನ್ನಲ್ಲಿರುವ ಸಂಪತ್ತಿನಲ್ಲಿ ಒಂದು ಇಪ್ಪತ್ತು ರೂಪಾಯಿಯನ್ನು ದಯಪಾಲಿಸು ತಾಯಿ” ಎಂದು ವಿನಯತೆಯಿಂದ ಎರಡು ಕೈಗಳನ್ನು ಮುಗಿದು ಕೇಳಿದ.
ಭೂಮಿ ತಾಯಿಯ ಪಾತ್ರ ಮಾಡಿದ್ದ ಹುಡುಗಿ, ನಾನು ಹೇಳಿಕೊಟ್ಟ ಹಾಗೆ ತನ್ನ ಬಲಗೈ ಹಸ್ತವನ್ನು ಎತ್ತಿ “ತಥಾಸ್ತು” ಎಂದಳು.
ಎಲ್ಲರೂ ಅಷ್ಟೇ ತನ್ಮಯತೆಯಿಂದ ಕೇಳುತ್ತಿದ್ದರು. ನಾನೆಂದೆ “ಭೂಮಿತಾಯಿ ಯಾವಾಗಲು ಧಾರಾಳ ಮನಸ್ಸಿರುವವಳು ಹಾಗೂ ನಿಸ್ವಾರ್ಥಿ. ತನ್ನ ಮಕ್ಕಳು ಕೇಳಿದಾಗ ಯಾವಾಗಲು ಇಲ್ಲವೆನ್ನಲಿಲ್ಲ. ಮನುಷ್ಯ ಭೂಮಿ ತಾಯಿಯಿಂದ ಇಪ್ಪತ್ತು ರೂಪಾಯಿಯನ್ನು ಸಾಲ ಪಡೆಯುತ್ತಾನೆ. ಸಾಲ ಪಡೆದು ಬೆಳೆಯುತ್ತಾ ಹೋಗುತ್ತಾನೆ. ಬೆಳೆಯುತ್ತಾ ಅವನ ಅವಶ್ಯಕತೆಗಳೂ ಜಾಸ್ತಿಯಾಗುತ್ತವೆ. ಅವನಿಗೆ ಕೊಟ್ಟಿದ್ದ ಇಪ್ಪತ್ತು ರೂಪಾಯಿಯನ್ನು ಅವನು ಉಳಿಸಿಕೊಳ್ಳುತ್ತಾನಾ?” ಎಂದು ಕೇಳಿದ.
“ ಇಲ್ಲಾ ಸರ್” ಎಂದು ಕೂಗಿದರು.
“ಹೌದು. ಅವನು ತನ್ನ ಅವಶ್ಯಕತೆಗಳನ್ನು ಪೂರೈಸಲು ಖರ್ಚು ಮಾಡುತ್ತಾನೆ. ನೀವು ತರುವ ಶಾಲೆಯ ಬ್ಯಾಗು, ಧರಿಸುವ ಬಟ್ಟೆ, ಚಪ್ಪಲಿ, ಪೆನ್ನು, ಪೆನ್ಸಿಲ್ ಇತ್ಯಾದಿ ಎಲ್ಲದರ ಮೂಲ ಭೂಮಿಯಿಂದಲೇ ಬರಬೇಕು. ಹೀಗೆ ನಮ್ಮ ನಾಟಕದಲ್ಲಿನ ಮಗು ಬೆಳೆದು, ನಿಮ್ಮ ತರಹ ಪ್ರೌಢಶಾಲೆಗೆ ಹೋಗುವ ಹಂತಕ್ಕೆ ಬಂದಿದ್ದಾನೆ. ನಾವು ದೊಡ್ಡವರಾಗುತ್ತಾ ಹೋದ ಹಾಗೆ, ಅವಶ್ಯಕತೆಗಳ ಜೊತೆಗೆ, ಆಸೆ ಕೂಡ ಬೆಳೆಯುತ್ತದೆ ಅಲ್ಲವೇ? ಭೂಮಿತಾಯಿಯ ಹತ್ತಿರ ಪಡೆದಿದ್ದ ಸಾಲ ಖರ್ಚಾಗಿದೆ. ಮತ್ತೆ ಯಾರ ಹತ್ತಿರ ಹೋಗಿ ಸಾಲ ಕೇಳಬೇಕು?” ಎಂಬ ಪ್ರಶ್ನೆ ಇಟ್ಟೆ.
“ಭೂಮಿ ತಾಯಿಯ ಹತ್ತಿರ” ಎಂದು ಉತ್ತರಿಸಿದರು. ಮಕ್ಕಳ ಜೊತೆಗೂಡಿ ಶಿಕ್ಷಕರೂ ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದುದು ನನಗೆ ಖುಷಿ ತಂದಿತು.
“ಸರಿಯಾಗಿ ಹೇಳಿದಿರಿ. ಕಳೆದ ಸಲ ಭೂಮಿ ತಾಯಿ ಇಪ್ಪತ್ತು ರೂಪಾಯಿ ಕೊಟ್ಟಿದ್ದಳು. ಈ ಸಲ ಅವಳಿಂದ ಜಾಸ್ತಿ ಸಾಲ ಕೇಳಬೇಕೆಂಬ ಆಸೆಯಿಂದ ನಮ್ಮ ಮಾನವ ಮತ್ತೆ ಭೂಮಿತಾಯಿಯ ಹತ್ತಿರ ಹೋಗಿ ಐವತ್ತು ರೂಪಾಯಿಯ ಸಾಲ ಕೇಳುತ್ತಾನೆ. ಕೇಳು ಪುಟ್ಟ” ಎಂದು ಮನುಷ್ಯನ ಪಾತ್ರ ಮಾಡುತ್ತಿರುವ ಹುಡುಗನ ಕೆಡೆಗೆ ತಿರುಗಿ ಹೇಳಿದೆ.
ನನ್ನ ಅಣತಿಯಂತೆ ಅವನು ಭೂಮಿ ತಾಯಿಯ ಪಾತ್ರವನ್ನು ಕೇಳಿದ “ಭೂಮಿತಾಯಿ ಭೂಮಿತಾಯಿ, ನೀನು ಕೊಟ್ಟಿದ್ದ ಸಾಲವನ್ನು ಖರ್ಚು ಮಾಡಿಕೊಂಡು ನಾನು ಬೆಳೆದಿದ್ದೇನೆ. ಈಗ ನನ್ನ ಅವಶ್ಯಕತೆಗಳೂ ಬೆಳೆದಿವೆ. ದಯಮಾಡಿ ನಿನ್ನ ಹತ್ತಿರವಿರುವ ಸಂಪತ್ತಿನಲ್ಲಿ ಐವತ್ತು ರೂಪಾಯಿಯನ್ನು ದಯಪಾಲಿಸು ತಾಯಿ” ಎಂದು ಅವನ ಮೇಲೆ ಕರುಣೆ ಬರುವಂತೆ ಕೇಳಿದ.
ಭೂಮಿತಾಯಿಯು ಮಾತನಾಡಿ “ಹೌದಾ ಮಗನೇ? ಪರವಾಗಿಲ್ಲ, ತಗೆದುಕೋ ಈ ಐವತ್ತು ರೂಪಾಯಿಯನ್ನು. ತಥಾಸ್ತು!” ಎಂದು ಹುಡುಗನಿಗೆ ವರ ನೀಡಿದಳು.
ಎಲ್ಲರೂ ತನ್ಮಯತೆಯಿಂದ ಕೇಳುತ್ತಿದ್ದರು. ನನಗೂ ಬಹಳ ಆಶ್ಚರ್ಯ. ನನ್ನ ಮೊದಲ ಉಪನ್ಯಾಸವೇ ಇಷ್ಟು ಚೆನ್ನಾಗಿ ಹೋಗುತ್ತಿದೆಯಲ್ಲಾ ಎಂದು. “ಭೂಮಿ ತಾಯಿ ಕೊಟ್ಟಳು. ಅದರಲ್ಲಿ ಸಂಶಯವೇ ಬೇಡ ಮಕ್ಕಳೇ. ನಾವು ಕೇಳಿದ್ದೆಲ್ಲಾ ಆ ಮಹಾತಾಯಿ ಕೊಟ್ಟೆ ಕೊಡುತ್ತಾಳೆ. ಆದರೆ ಈ ಮನುಷ್ಯ ಬೆಳೆಯುತ್ತಾ ಆಸೆಯೆಂಬುದು ಅತಿಯಾಸೆಯಾಗಿ ಪರಿವರ್ತನೆಯಾಗಿದೆ. ಈಗ ಇವನು ಬೆಳೆದು ಕಾಲೇಜನ್ನು ದಾಟಿದ್ದಾನೆ. ನಾವು ನಮ್ಮ ಓದನ್ನು ಮುಗಿಸಿ, ಏನು ಮಾಡುತ್ತೇವೆ?” ಎಂದು ಕೇಳಿದೆ.
ಎಲ್ಲರೂ ಸ್ವಲ್ಪ ಯೋಚಿಸುತ್ತಿದ್ದರು. ಯಾರೂ ಉತ್ತರಿಸಲಿಲ್ಲ. ನಾನು ಮತ್ತೆ ಕೇಳಿದೆ.
“ಏನ್ರಪ್ಪಾ ಏನು ಮಾಡುತ್ತೀರಾ? ಓದು ಮುಗಿಸಿ ಮನೇಲಿ ಕೂರುತ್ತೀರಾ?” ಎಂದು ಅಣಕವಾಡಿದೆ.
“ಇಲ್ಲ ಸಾರ್. ಕೆಲಸಕ್ಕೆ ಹೋಗುತ್ತೇವೆ” ಎಂದು ಕೂಗಿದರು.
“ಹೌದು, ಕಾಯಕ ಮಾಡುತ್ತೇವೆ. ಬಸವಣ್ಣನವರು ಹೇಳಿದಂತೆ ‘ಕಾಯಕವೇ ಕೈಲಾಸ’ ಅಲ್ವಾ. ಇಂಜಿನಿಯರ್, ವೈದ್ಯ, ಚಾಲಕನಿರಬಹುದು, ರೈತ, ಲಾಯರ್ ಇತ್ಯಾದಿ ಯಾವುದೇ ಕಾಯಕವಿರಬಹುದು. ಕೆಲಸಕ್ಕೆ ಸೇರಿದ ಮೇಲೆ ನಮ್ಮ ಕೈಯಲ್ಲಿ ಏನು ಬರುತ್ತದೆ?” ಎಂದು ನನ್ನ ಕೈಬೆರಳನ್ನು ದುಡ್ಡನ್ನು ಸೂಚಿಸುವ ರೀತಿ ಆಡಿಸಿ ಅವರಿಗೆ ಸುಳಿವು ಕೊಟ್ಟೆ.
ಆ ಸುಳಿವನ್ನು ಹಿಡಿದು “ರೊಕ್ಕ ಸಾರ್, ರೊಕ್ಕ” ಎಂದು ಕೂಗಿದರು.
“ಹಾಂ, ನಮಗೆ ಪಗಾರ ಸಿಗುತ್ತದೆ. ಅಂದರೆ ನಮ್ಮ ಕೈಯಲ್ಲಿ ದುಡ್ಡು ಸೇರುತ್ತದೆ. ನಮ್ಮ ಕೈಯಲ್ಲಿ ಹಣ ಸೇರಿದರೆ ನಾವು ಸುಮ್ಮನೆ ಇರುತೇವೇನ್ರೀ? ಕೋತಿಯ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ ಆಡುತ್ತೇವೆ. ಅವಶ್ಯಕತೆಯಿರುವುದು, ಅವಶ್ಯಕತೆಯಿಲ್ಲದಿರುವುದು ಎಲ್ಲವೂ ಬೇಕು. ಅತಿಯಾಗಿ ಖರ್ಚು ಮಾಡಲು ಶುರುಮಾಡುತ್ತೇವೆ. ನಡೆದುಕೊಂಡು ಹೋಗುತ್ತಿರುವವರಿಗೆ ಬಸ್ಸಿನಲ್ಲಿ ಹೋಗುವ ಆಸೆ. ಬಸ್ಸಿನಲ್ಲಿ ಹೋಗುತ್ತಿರುವವರಿಗೆ ಬೈಕಿನಲ್ಲಿ ಹೋಗುವ ಆಸೆ. ಬೈಕಿನಲ್ಲಿ ಹೋಗುವವರಿಗೆ? ಹೇಳಿ ಏನ್ ಆಸೆ?” ಎಂದು ಅವರತ್ತ ನನ್ನ ಕೈ ತೋರಿಸಿ ಕೇಳಿದೆ.
“ಕಾರು ಸಾರ್, ಕಾರು ಸಾರ್” ಎಂದು ಕೂಗಿದರು.
“ಹಾಂ, ಚಿಕ್ಕ ಕಾರಿರುವವರಿಗೆ ದೊಡ್ಡ ಕಾರು, ವಿಮಾನ, ಹಡಗು. ಚಿಕ್ಕ ಮನೆಯಲ್ಲಿ ಇರುವವರಿಗೆ ದೊಡ್ಡ ಮನೆ ಬೇಕು. ಕೆಳಗೆ ಕೂತವರಿಗೆ ಮೇಜಿನ ಆಸೆ. ಮೇಜಿನವರಿಗೆ ಸೋಫಾದ ಆಸೆ. ಹೀಗೆ ನಮ್ಮ ಆಸೆಗಳು ಅವಶ್ಯಕತೆಗಳನ್ನು ದಾಟಿ, ಅತಿಯಾಸೆಯಾಗಿ ಪರಿವರ್ತನೆಗೊಂಡಿತು. ಇಷ್ಟು ಅತೀ ಆಸೆ ಇರುವ ನಮ್ಮ ನಾಟಕದಲ್ಲಿನ ಮನುಷ್ಯನಿಗೆ ಭೂಮಿ ತಾಯಿ ಕೊಟ್ಟ ಆ ಐವತ್ತು ರೂಪಾಯಿ ಸಾಕಾಗುವುದೇ? ಅದನ್ನು ಅವನು ಉಳಿಸಿಕೊಳ್ಳುತ್ತಾನೆಯೇ?” ಎಂದು ಜೋರಾಗಿ ಕೂಗಿದೆ.
“ಇಲ್ಲಾ ಸಾರ್” ಎಂದು ಉತ್ತರಿಸಿದರು.
“ಹೌದು. ಅವನು ಅದನ್ನೂ ಕೂಡ ಖರ್ಚು ಮಾಡಿಬಿಡುತ್ತಾನೆ. ಈಗ ಮತ್ತೆ ಯಾರ ಹತ್ತಿರ ಹೋಗಬೇಕು?” ಎಂದು ಕೇಳಿದೆ.
“ಭೂಮಿ ತಾಯಿಯ ಹತ್ತಿರ ಸಾರ್” ಎಂದರು.
“ಸರಿ. ಇವನು ಮತ್ತೆ ಭೂಮಿ ತಾಯಿಯ ಹತ್ತಿರ ಹೋದ. ಆದರೆ ಈಗ ಅವನಿಗೆ ಅತಿಯಾಸೆ ಬೆಳೆದುಬಿಟ್ಟಿದೆ. ಭೂಮಿತಾಯಿಗೆ ನಾನು ಮಾಡುತ್ತಿರುವುದು ಏನು ಗೊತ್ತಾಗುತ್ತಿಲ್ಲ. ನಾನು ಕೇಳಿದನೆಲ್ಲಾ ಕೊಡುತ್ತಾಳೆ ಎಂಬುದು ಅವನ ನಂಬಿಕೆ. ನಾನು ಇಪ್ಪತ್ತು ರೂಪಾಯಿ ಕೇಳಿದಾಗ ಕೊಟ್ಟಳು, ಐವತ್ತು ರೂಪಾಯಿ ಕೇಳಿದಾಗಲೂ ಕೊಟ್ಟಳು. ಈಗ ಒಮ್ಮೆಲೆ ಒಂದು ನೂರು ರೂಪಾಯಿಯನ್ನು ಕೇಳಿಬಿಡೋಣ ಎಂದು ತಿಳಿದು ಭೂಮಿ ತಾಯಿಯ ಹತ್ತಿರ ಹೋಗಿ ನೂರು ರೂಪಾಯಿಯನ್ನು ಕೇಳುತ್ತಾನೆ” ಎಂದು ಹೇಳಿ ನಮ್ಮ ಪಾತ್ರದ ಕಡೆಗೆ ತಿರುಗಿ ಸನ್ನೆ ಮಾಡಿದೆ.
ಅವನು ಭೂಮಿ ತಾಯಿಯ ಹತ್ತಿರ ಬಂದು “ತಾಯಿ, ನೀನು ಕೊಡುತ್ತಿರುವುದು ನನಗೆ ಸಾಕಾಗುತ್ತಿಲ್ಲ. ನನಗೆ ನನ್ನ ಮತ್ತು ನನ್ನ ಕುಟುಂಬದವರ ಅವಶ್ಯಕತೆಗಳನ್ನು ಪೂರೈಸಲು, ನನಗೆ ನೂರು ರೂಪಾಯಿ ಬೇಕು. ಕರುಣಿಸು ತಾಯಿ.” ಎಂದು ಕೇಳಿದ.
“ಭೂಮಿತಾಯಿಗೆ ಅವನ ಅತಿಯಾಸೆಯ ಅರಿವಾಗಿ, ಅವನಿಗೆ ಕೆಲವು ಎಚ್ಚರಿಕೆಗಳನ್ನು ಕೊಡುತ್ತಾಳೆ. ಎಚ್ಚರಿಕೆಗಳು ಎಂದರೆ ಯಾವ ತರಹ? ಈಗ ನಿಮ್ಮ ಕಡೆ ಬಂದಿದೆಯಲ್ಲಾ ಬರ ಆ ತರಹ. ಬರ, ನರೆ, ಸಣ್ಣ ಪುಟ್ಟ ಭೂಕಂಪ, ಜಾಗತಿಕ ತಾಪಮಾನದ ಏರಿಕೆ, ಭೂ ಕುಸಿತ ಇತ್ಯಾದಿಗಳ ಮುಖಾಂತರ ಎಚ್ಚರಿಕೆಗಳನ್ನು ಕೊಡುತ್ತಾಳೆ. ಆದರೆ ನಾವು ಅವಳ ಎಚ್ಚರಿಕೆಗಳನ್ನು ಗ್ರಹಿಸಿ ಕಾರ್ಯಪ್ರವೃತ್ತರಾಗಿ ಪರಿಸರ ಉಳಿವಿನ ಕಡೆಗೆ ಕೆಲಸ ಮಾಡುತ್ತೇವೆಯೇ?. ಇಲ್ಲ, ಅವಳ ಎಚ್ಚರಿಕೆಯನ್ನು ಲೆಕ್ಕಕ್ಕೇ ತಗೆದುಕೊಳ್ಳುವುದಿಲ್ಲ. ಅದನ್ನು ಕಂಡು ಬೇಜಾರು ಮಾಡಿಕೊಂಡೇ ನಾವು ಕೇಳಿದುದನ್ನು ಕರುಣಿಸುತ್ತಾಳೆ” ಎಂದು ಭೂಮಿ ತಾಯಿ ಪಾತ್ರದ ಕಡೆಗೆ ತಿರುಗಿ ಏನು ಮಾಡಬೇಕೆಂದು ಹೇಳಿಕೊಟ್ಟೆ. ನನ್ನ ಅಣತಿಯಂತೆಯೇ ಹೇಳಿ, ಆತ ಕೇಳಿದ ದುಡ್ಡನ್ನು ಕೊಟ್ಟಳು.
“ನಮ್ಮ ಮನುಷ್ಯನು ಆ ನೂರು ರೂಪಾಯಿಯನ್ನು ತಾನೆ ಉಳಿಸಿಕೊಳ್ಳುತ್ತಾನೆಯೇ?. ಇಲ್ಲ, ಅವನು ಅದನ್ನೂ ಕೂಡ ತಿಂದು ತೇಗುತ್ತಾನೆ. ತಿಂದು ತೇಗಿದ ಮೇಲೆ ಮತ್ತೆ ಯಾರ ಹತ್ತಿರ ಹೋಗಿ ಬೇಡಬೇಕು? ಭೂಮಿ ತಾಯಿಯ ಹತ್ತಿರವೇ ಹೋಗಬೇಕು. ಆದರೆ ನಮ್ಮ ನಾಟಕದಲ್ಲಿ, ಈಗ ಭೂಮಿ ತಾಯಿಯ ಹತ್ತಿರ ಎಷ್ಟು ರೂಪಾಯಿ ಉಳಿದಿದೆ?” ಎಂದು ಕೇಳಿದೆ.
ತಕ್ಷಣವೇ ಅವರವರಲ್ಲೇ ಲೆಕ್ಕ ಹಾಕಿ “ಮೂವತ್ತು ರೂಪಾಯಿ ಸಾರ್” ಎಂದು ಒಮ್ಮಲೆ ಕೂಗಿದರು. ಎಲ್ಲರಿಗೂ ಸರಿಯಾದ ಉತ್ತರ ಹೇಳಿದೆವು ಎಂಬ ಸಂಭ್ರಮ.
“ವೆರಿ ಗುಡ್. ಈಗ ಅವನಿಗೆ ಭೂಮಿ ತಾಯಿಯ ಹತ್ತಿರ ಉಳಿದ ಮೂವತ್ತು ರೂಪಾಯಿಯ ಮೇಲೂ ಕಣ್ಣು ಬೀಳುತ್ತದೆ. ಭೂಮಿ ತಾಯಿಯ ಹತ್ತಿರ ಹೋಗಿ ಅವಳಲ್ಲಿದ್ದ ಮೂವತ್ತು ರೂಪಾಯಿಯನ್ನು ಕೇಳುತ್ತಾನೆ. ಆಗ ಭೂಮಿ ತಾಯಿ ಏನು ಮಾಡುತ್ತಾಳೆ?” ಎಂದು ಕೇಳಿದೆ.
“ಮೂವತ್ತು ರೂಪಾಯಿಯನ್ನು ಕೊಡುತ್ತಾಳೆ ಸಾರ್” ಎಂದು ಉತ್ತರಿಸಿದರು.
“ನಿಮ್ಮೆಲ್ಲರ ಉತ್ತರನೂ ತಪ್ಪು” ಎಂದ ತಕ್ಷಣ ಅವರು ತಮ್ಮ ತಪ್ಪನ್ನು ಸರಿ ಮಾಡಿಕೊಂಡು “ಕೊಡಲ್ಲ ಸಾರ್. ಕೊಡಲ್ಲ ಸಾರ್” ಎಂದು ಕಿರುಚಿದರು.
“ಹೌದು ಕೊಡಲ್ಲ. ಈಗ ಭೂಮಿಯ ಹತ್ತಿರ ಉಳಿದಿರುವುದು ಬರೀ ಮೂವತ್ತು ರೂಪಾಯಿಗಳು. ಇನ್ನೂರು ರೂಪಾಯಿ ಖಜಾನೆಯನ್ನು ನಮ್ಮ ಮನುಷ್ಯ ಮೂವತ್ತು ರೂಪಾಯಿಗೆ ತಂದು ನಿಲ್ಲಿಸಿದ್ದಾನೆ. ಈಗ ಉಳಿದಿರುವ ಮೂವತ್ತು ರೂಪಾಯಿಯನ್ನು ಕೂಡ ಕೊಟ್ಟು ಬಿಟ್ಟರೆ, ಅವಳೇ ಖಾಲಿಯಾಗುತ್ತಾಳೆ. ಖಾಲಿಯಾಗುವುದು ಎಂದರೆ ಏನರ್ಥ? ಭೂಮಿ ಬರಡಾಗುವುದು ಎಂದು. ಭೂಮಂಡಲ ನಾಶವಾಗುವುದು ಎಂದರ್ಥ. ಭೂಮಿಯೇ ನಾಶವಾದರೆ, ನಾವೆಲ್ಲಾ ಬದುಕುತ್ತೇವೇನ್ರೀ?” ಎಂದು ಸ್ವಲ್ಪ ಉದ್ವೇಗದಿಂದ ಕೇಳಿದೆ.
“ಇಲ್ಲ ಸಾರ್” ಎಂಬ ಉತ್ತರ ಬಂತು.
“ಪ್ರಾಣಿ, ಪಕ್ಷಿಯ ಸಮೇತ ಸಕಲ ಜೀವ ರಾಶಿಗಳೂ ಬದುಕುತ್ತಾವೇನ್ರೀ?” ಎಂದು ಕೇಳಿದೆ.
“ಇಲ್ಲ ಸಾರ್” ಎಂದರು.
“ಭೂಮಿ ಬರಡಾದರೆ ನಾವ್ಯಾರೂ ಉಳಿಯುವುದಿಲ್ಲ. ನಮ್ಮ ಜೊತೆ ಸಕಲ ಜೀವ ರಾಶಿಗಳೂ ಸಾಯುತ್ತವೆ. ಹಾಗಾಗಿ, ಭೂಮಿ ತಾಯಿಗೆ ಇವೆಲ್ಲದರ ಅರ್ಥವಾಗುತ್ತದೆ. ಅಲ್ಲಿಯ ತನಕ ಬಹಳ ಶಾಂತ ರೀತಿಯಿಂದ ಕೇಳಿದ್ದನ್ನೆಲ್ಲಾ ಕೊಡುತ್ತಿದ್ದ ಭೂಮಿ ತಾಯಿ ಒಮ್ಮಲೆ ಕೋಪಗೊಳ್ಳುತ್ತಾಳೆ. ಕೋಪ ಬಂದು ಮನುಷ್ಯನ ಕಪಾಳಕ್ಕೆ ಜೋರಾಗಿ ಒಂದು ಏಟು ಕೊಡುತ್ತಾಳೆ. ಈಗ ನಮ್ಮ ನಾಟಕದಲ್ಲಿ ಮನುಷ್ಯನ ಪಾತ್ರ ಮಾಡಿದವನಿಗೆ ಭೂಮಿ ತಾಯಿಯ ಕಡೆಯಿಂದ ಒಂದು ಏಟು ಹೊಡಿಸೋಣವೇ?” ಎಂದು ಕೇಳಿದೆ.
“ಹೂಂ ಸಾರ್” ಎಂದು ಕೆಲವು ಮಕ್ಕಳು, “ಬೇಡ ಸಾರ್” ಎಂದು ಕೆಲವು ಮಕ್ಕಳು ಕೂಗಿದರು.
“ಬೇಡ ಬಿಡಿ, ಪಾಪ ಒಳ್ಳೆಯ ಹುಡುಗ. ಆದರೆ ಭೂಮಿ ತಾಯಿ ಏಟು ಕೊಡುವುದು ಎಂದರೆ ಏನರ್ಥ? ನೀವು ರಸ್ತೆಯಲ್ಲಿ ಓಡಾಡುತ್ತಿದ್ದಾಗ ಅಥವಾ ಮನೆಯಲ್ಲಿ ಮಲಗಿದ್ದಾಗ ಬಂದು ನಿಮಗೆ ಜೋರಾಗಿ ಪಟೀರ್ ಎಂದು ಏಟು ಹೊಡೆಯುತ್ತಾಳೆಯೇ?” ಎಂದು ಕೇಳಿದೆ.
ನಗುತ್ತಾ “ಇಲ್ಲಾ ಸಾರ್” ಎಂಬ ಉತ್ತರ ಬಂತು.
“ಮತ್ತಿನ್ನೇನು? ಭೂಮಿ ತಾಯಿ ಏಟು ಕೊಡುವುದು ಅಂದರೆ ಏನರ್ಥ?” ಎಂದು ಕೇಳಿದೆ.
“ಭೂಕಂಪ, ಪ್ರಳಯ, ಚಂಡಮಾರುತ, ಸುನಾಮಿ” ಎಂದು ಅಸ್ಪಷ್ಟವಾಗಿ ಕೂಗಿದರು.
“ವೆರಿ ಗುಡ್. ಭೂಮಿ ತಾಯಿ ತನ್ನನ್ನು ತಾನು ಯಾವತ್ತೂ ಸರ್ವನಾಶ ಮಾಡಿಕೊಳ್ಳುವುದಿಲ್ಲ. ಆ ಪರಿಸ್ಥಿತಿ ಎದುರಾದಾಗ, ಪ್ರಕೃತಿ ದೇವಿ ತಾನಾಗಿಯೇ ಸಮತೋಲನ ಮಾಡಿಕೊಳ್ಳುತ್ತಾಳೆ. ಯಾವಾಗ ಮನುಷ್ಯನ ಅತಿಯಾಸೆ ಅತಿರೇಕಕ್ಕೆ ತಲುಪುತ್ತದೋ, ಆವಾಗ ಇಂತ ಅವಘಡಗಳು ಸಂಭವಿಸುವಂತೆ ಮಾಡುತ್ತಾಳೆ. ನನಗೆ ಇಲ್ಲಿ ನಿಮ್ಮ ಊರಿನಲ್ಲಿ ಕೇಳಿದಾಗ ತಿಳಿಯಿತು, ಈ ವರ್ಷ ಅಷ್ಟಾಗಿ ಮಳೆಯಾಗದೆ ಬೆಳೆಗಳು ನಾಶವಾಗಿದೆ ಎಂದು. ಅದೂ ಕೂಡ ಭೂಮಿತಾಯಿ ನಮಗೆ ಕೊಡುತ್ತಿರುವ ಶಿಕ್ಷೆಯೇ ಸರಿ. ಬೇಕಾದರೆ ನಿಮ್ಮ ಊರಿನಲ್ಲಿರುವ ಹಿರಿತಲೆಗಳನ್ನು ಕೇಳಿ. ಅವರ ಕಾಲದಲ್ಲಿ ವಾತಾವರಣ ಇಷ್ಟೊಂದು ಹದಗೆಟ್ಟಿತ್ತಾ ಎಂದು. ಇದಕೆಲ್ಲಾ ಏನು ಕಾರಣ?” ಎಂದು ಕೇಳಿದೆ.
“ಉಷ್ಣ ಸಾರ್. ಉಷ್ಣ” ಎಂದು ಒಬ್ಬ ಹುಡುಗ ಕೂಗಿದ.
“ಯಾರಿಗೆ ಉಷ್ಣ? ನಿನಗಾ?” ಎಂದು ಅವನ ತಮಾಷೆ ಮಾಡಿದೆ. ಎಲ್ಲರೂ ಗೊಳ್ಳೆಂದು ನಕ್ಕರು. ನನ್ನ ಉಪನ್ಯಾಸ ಸರಿಯಾದ ದಾರಿಯಲ್ಲಿ ಸಾಗುತ್ತಿರುವುದು ನನಗೂ ಖುಷಿ ತಂದಿತು.
“ಅದು ಉಷ್ಣ ಅಲ್ಲಪ್ಪಾ. ಭೂಮಿಯ ತಾಪಮಾನ ಎಂದು ಹೇಳಬೇಕು. ಈ ಮನುಷ್ಯ ಸ್ವಾರ್ಥಿ. ನಮ್ಮ ನಾಟಕದಲ್ಲಿ, ಭೂಮಿ ತಾಯಿಯ ಹತ್ತಿರ ಪಡೆದಿದ್ದ ಸಾಲದಲ್ಲಿ ಒಂದು ರೂಪಾಯಿಯಾದರೂ ವಾಪಸ್ಸು ಕೊಟ್ಟನೇ?” ಎಂದು ಕೇಳಿದೆ.
“ಇಲ್ಲಾ ಸರ್” ಎಂದರು.
“ಈಗ ನಿಮ್ಮ ಶಾಲೆಯೇ ನೋಡಿ ಎಷ್ಟು ಚೆನ್ನಾಗಿದೆ. ಗುಡ್ಡದ ಮೇಲೆ ಇಷ್ಟು ಚಂದ ಶಾಲೆ ಕಟ್ಟಲು ಕನಿಷ್ಟ ಅಂದರೂ ಇನ್ನೂರು ಮರಗಳನ್ನಾದರೂ ಕಡಿದಿದ್ದಾರೆ. ಅದೇ ಶಾಲೆಯಲ್ಲಿ ಓದುತ್ತಿರುವ ನೀವು ಎಷ್ಟು ಗಿಡಗಳನ್ನು ನೆಟ್ಟಿ ಬೆಳೆಸಿದ್ದೀರ?” ಎಂದು ಕೇಳಿದೆ.
ಯಾರು ಮಾತನಾಡಲಿಲ್ಲ.
“ನಮ್ಮ ನಾಟಕದಲ್ಲಿ ಮನುಷ್ಯನ ಪಾತ್ರ ಮಾಡಿದವ, ಭೂಮಿ ತಾಯಿಯ ಹತ್ತಿರ ಸಾಲ ಪಡೆದ ಮೇಲೆ, ತನ್ನ ಕೈಲಾದಷ್ಟು ದುಡ್ಡನ್ನು ವಾಪಸ್ಸು ಕೊಡುತ್ತಾ ಬಂದಿದ್ದರೆ, ಭೂಮಿತಾಯಿಯ ಹತ್ತಿರ ಇನ್ನೂ ಸಂಪನ್ಮೂಲ ಇರುತ್ತಿತ್ತು. ಆದರೆ ನಾವು ಹಾಗೆ ಮಾಡುತ್ತಿಲ್ಲ. ಅವಳನ್ನು ಖಾಲಿ ಮಾಡುವತ್ತ ನಾವು ಹೆಜ್ಜೆ ಇಡುತ್ತಿದ್ದೇವೆ. ಈಗ ತೀಳೀತಾ ನಾವು ಏನು ತಪ್ಪು ಮಾಡುತ್ತಿದ್ದೇವೆಂದು?” ಎಂದು ಕೇಳಿದೆ.
ಕೆಲವರು “ಹೂಂ ಸಾರ್” ಎಂದರು. ಮತ್ತೆ ಕೆಲವರು ಮಾತನಾಡದೆ ತಲೆತಗ್ಗಿಸಿದರು.
“ಈಗ ಇದನ್ನು ಸರಿಪಡಿಸಲು ಏನು ಮಾಡಬೇಕು?” ಎಂದು ಕೇಳಿದೆ.
“ಮರ ಬೆಳೆಸಬೇಕು ಸಾರ್” ಎಂಬುದು ಅವರ ಉತ್ತರ.
“ಹೌದು, ಮರ ಬೆಳೆಸಬೇಕು. ಪರಿಸರ ಕಾಪಾಡಬೇಕು. ಆದರೆ ನಾವು ಮಾಡುವುದಿಲ್ಲ. ಈಗ ನೀವು ಶಾಲೆ ಬಿಟ್ಟು ಹೋದ ಮೇಲೆ ಕೆಲವು ವರ್ಷಗಳು ಕಳೆದು ಮತ್ತೆ ತಮ್ಮ ಶಾಲೆ ನೋಡಬೇಕೆಂಬ ಆಸೆಯಿಂದ ವಾಪಸ್ಸು ಬಂದಾಗ, ನಿಮ್ಮದೆಂದು ಹೇಳಿಕೊಳ್ಳಲು ಏನಿರುತ್ತದೆ? ಏನೂ ಇರುವುದಿಲ್ಲ. ನಿಮ್ಮ ಬೆಂಚು, ತರಗತಿ, ಬೋರ್ಡು ಎಲ್ಲವನ್ನೂ ಬೇರೆ ವಿದ್ಯಾರ್ಥಿಗಳು ಉಪಯೋಗಿಸುತ್ತಿರುತ್ತಾರೆ. ಹೌದು ತಾನೆ?” ಎಂದು ಕೇಳಿದೆ.
“ಹೌದು ಸಾರ್” ಎಂಬ ಉತ್ತರ ಬಂತು.
“ನಿಮ್ಮ ಶಾಲೆಗೆ ಬಂದರೂ ಅನಾಥ ಪ್ರಜ್ಞೆ ಕಾಡುತ್ತದೆ. ಯಾರದೋ ಶಾಲೆಗೆ ಬಂದಂತಾಗುತ್ತದೆ. ಆದರೆ ಒಂದು ಗಿಡ ನೆಟ್ಟು, ಅದಕ್ಕೆ ಬೇಲಿ ಕಟ್ಟಿ ದನಕರುಗಳಿಂದ ರಕ್ಷಣೆ ನೀಡಿ, ಅದಕ್ಕೆ ನೀರು ಗೊಬ್ಬರ ನೀಡಿ ಮರವನ್ನಾಗಿ ಬೆಳೆಸಿ ನೋಡಿ. ನೀವು ಎಷ್ಟು ವರ್ಷ ಬೇಕಾದರೂ ಬಿಟ್ಟು ಬಂದರೂ ನಿಮ್ಮನ್ನು ಸ್ವಾಗತಿಸಲು ಸದಾ ಕಾಯುತ್ತಿರುತ್ತದೆ. ಆವಾಗ ನೀವು ಬಂದು ಅದರ ಪಕ್ಕ ಗರ್ವದಿಂದ ನಿಂತು ಹೇಳಬಹುದು, ಇದು ನಾನು ನೆಟ್ಟಿ ಬೆಳೆಸಿದ ಮರ ಎಂದು. ನೀವು ಮಾಡಿದ ಕೆಲಸ ಇತರರಿಗೂ ಮಾದರಿಯಾಗುತ್ತದೆ. ಸರಿ ತಾನೇ?” ಎಂದೆ.
“ಹೂಂ ಸಾರ್” ಎಂದರು.
“ನಾನು ಎಷ್ಟೋ ಸರ್ಕಾರಿ ಮಾದರಿ ಶಾಲೆಗೆ ಭೇಟಿ ಕೊಟ್ಟಿದ್ದೇನೆ. ಎಷ್ಟು ಸ್ವಚ್ಛವಾಗಿ ಹಸಿರಿನಿಂದ ಕಂಗೊಳಿಸುತ್ತದೆ ಗೊತ್ತೇನು? ಎಂತಹ ಖಾಸಗಿ ಶಾಲೆಯೂ ನಾಚಿಸುವಂತೆ ಇರುತ್ತದೆ. ನನಗೆ ಖುಷಿಯಾಗಿ ನನ್ನ ಕೈಯಲ್ಲಾದಷ್ಟು ಸಹಾಯ ಮಾಡಿ ಬಂದಿದ್ದೇನೆ. ನಿಮ್ಮ ಶಾಲೆಯನ್ನು ನೋಡಿ. ಎಲ್ಲಾ ಬೋಳು. ನಿಮ್ಮ ಶಾಲೆ ಮಾದರಿ ಶಾಲೆಯಾಗುವುದು ನಿಮಗೆ ಇಷ್ಟವಿಲ್ಲವೇನು?”
“ಇಷ್ಟ ಸಾರ್” ಎಂದರು.
“ಭೂಮಿ ತಾಯಿಯೂ ಕೂಡ ನಮ್ಮ ದೇವರೇ ತಾನೇ? ಎಲ್ಲವನ್ನು ಕೊಡುವ ಕಾಮಧೇನು. ಉಸಿರಾಡುತ್ತಿರುವ ದೇವರು. ಅವಳು ಎಲ್ಲವನ್ನೂ ತೆರೆದ ಕಣ್ಣಿನಿಂದ ನೋಡುತ್ತಿರುತ್ತಾಳೆ. ಎಲ್ಲವನ್ನೂ ಕೇಳಿಸಿಕೊಳ್ಳುತ್ತಿರುತ್ತಾಳೆ. ನಾವು ಮಾಡಿದ ತಪ್ಪಿನಿಂದ ನಮ್ಮ ಜೊತೆಗೆ ಪ್ರಾಣಿ ಪಕ್ಷಿಗಳೂ ಕೂಡ ಶಿಕ್ಷೆ ಅನುಭವಿಸುವಂತಾಗಿದೆ. ಹಾಗಾಗಿ ಭೂಮಿ ತಾಯಿಯನ್ನು ದೇವರು ಎಂದು ನಂಬಿರುವವರೆಲ್ಲರೂ ಮತ್ತು ಯಾರಿಗೆ ತಾನು ಗಿಡ ನೆಟ್ಟು ಮರವಾಗಿ ಬೆಳೆಸಬಲ್ಲೆ ಎಂಬ ಇಚ್ಚಾಶಕ್ತಿ ಇರುತ್ತದೆಯೋ ಅಂತಹವರು ಮಾತ್ರ ಭೂಮಿ ತಾಯಿಯ ಮೇಲೆ ನಾನು ಹೇಳಿಕೊಟ್ಟಂತೆ ಹೇಳಿ ಪ್ರತಿಜ್ಞೆ ಪಡೆಯಿರಿ” ಎಂದೆ.
ಬಹುತೇಕರು ನೆಲದ ಮೇಲೆ ಕೈಯಿಟ್ಟು ನನಗೆ ಕಾಯುತ್ತಾ ಕುಳಿತರು. ನಾನು ಪ್ರತಿಜ್ಞೆಯನ್ನು ಶುರುಮಾಡಿದೆ.
“ನಮ್ಮೆಲ್ಲರ ದೇವರಾದ ಭೂಮಿ ತಾಯಿಯೇ, ನಿನ್ನ ಮಕ್ಕಳಾದ ನಾವು ಈ ದಿನ ನಿನ್ನ ಮೇಲೆ ಪ್ರತಿಜ್ಞೆ ಮಾಡುವುದೇನೆಂದರೆ, ಒಬ್ಬಬ್ಬರೂ ಗಿಡ ನೆಟ್ಟು, ರಕ್ಷಿಸಿ, ಪೋಷಿಸಿ ಮರವಾಗಿ ಬೆಳೆಸಿ ನಿನ್ನ ಸಾಲವನ್ನು ಆದಷ್ಟು ತೀರಿಸಲು ಪ್ರಯತ್ನ ಮಾಡುತ್ತೇವೆ. ನಮ್ಮ ಸುತ್ತ ಆಗುತ್ತಿರುವ ಎಲ್ಲ ತರಹದ ಮಾಲಿನ್ಯಗಳನ್ನು ನಮ್ಮ ಕೈಲಾದಷ್ಟು ತಡೆಯುತ್ತೇವೆ. ನಾವು ಹೀಗೆ ಮಾಡದಿದ್ದರೆ ನಮಗೆ ಶಿಕ್ಷಿಸುವ ಎಲ್ಲಾ ತರಹದ ಹಕ್ಕು ನಿನಗಿರುತ್ತದೆ. ನಿನ್ನ ಮಕ್ಕಳಾದ ನಮ್ಮನ್ನೂ ಮತ್ತು ಸಕಲ ಸಸ್ಯ ಪ್ರಾಣಿ ಸಂಕುಲವನ್ನೂ ರಕ್ಷಿಸು ತಾಯಿ. ಜೈಹಿಂದ್. ವಂದೇ ಮಾತರಂ” ಎಂದು ಹೇಳಿಸಿ ಪ್ರತಿಜ್ಞೆ ಪಡೆದೆ.
ಪ್ರತಿಜ್ಞೆ ಪಡೆದ ನಂತರ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದರು.
“ಈಗ ಸ್ವಚ್ಛತೆಯ ವಿಷಯಕ್ಕೆ ಬರೋಣ. ಒಂದು ಮುಂಜಾನೆ ನಾನು ಹಾಗೇ ತಿರುಗಾಡಿಕೊಂಡು ಬರಲು ನಿಮ್ಮ ಊರ ಕಡೆಗೆ ಹೊರಟಿದ್ದೆ. ಇನ್ನೇನು ಊರು ತಲುಪುವಷ್ಟರಲ್ಲಿ, ಬಯಲು ಶೌಚಾಲಯದಲ್ಲಿ ನಿಮ್ಮ ಊರಿನ ಜನರು ತಮ್ಮ ನಿತ್ಯ ಕರ್ಮಗಳನ್ನು ಮುಗಿಸುತ್ತಿದ್ದುದು ನನಗೆ ಕಂಡು ಬಂತು” ಎಂದಾಗ ಎಲ್ಲರೂ ಗೊಳ್ ಎಂದು ಜೋರಾಗಿ ನಕ್ಕರು.
ನಾನು ಮುಂದುವರಿಸಿದೆ. “ನನಗೇ ಅಸಹ್ಯವಾಯಿತು. ಪಾಪ ಈ ಊರಿನ ಹೆಂಗಸರು ಮತ್ತು ಹುಡುಗಿಯರು ನನ್ನನ್ನು ನೋಡಿ ಎದ್ದು ನಿಂತುಕೊಳ್ಳಬೇಕಾಯಿತು” ಎಂದಾಗ ಹುಡುಗರೆಲ್ಲರೂ ಹುಡುಗಿಯರನ್ನು ಗೇಲಿ ಮಾಡಿದರು. ಕೆಲವು ಹುಡುಗಿಯರು ನಾಚಿಕೆಪಟ್ಟು ತಮ್ಮ ಮುಖವನ್ನು ಮರೆಮಾಚಿದರು. ನಾನು ಹುಡುಗರನ್ನು ಬಿಡುವುದುಂಟೇ? ಅವರ ಕಾಲೆಳೆದು ಹೀಗೆಂದೆ “ಪಾಪ ಹುಡುಗಿಯರ ಕತೆ ಬಿಡಿ. ಮಾನ ಮರ್ಯಾದೆ ಇರುವವರು. ಎದ್ದು ನಿಂತರು.
ಎಲ್ಲಾ ಬಿಟ್ಟವರು ಈ ಗಂಡಸರು. ನನ್ನನು ನೋಡಿದ ನಂತರವೂ, ಯಾವುದೇ ಮುಜುಗರಕ್ಕೆ ಒಳಗಾಗದೆ ತಮ್ಮ ಮಹಾಕಾರ್ಯವನ್ನು ಮುಂದುವರಿಸಿದರು. ಕೆಲವರಂತೂ ಆ ಕರ್ಮಕಾಂಡದ ಮಧ್ಯೆಯೇ ಯಾವೂರ್ರಿ ಸರ್ರಾ?’ ಎಂದು ನನ್ನನ್ನು ಯಾವೂರು, ಯಾರ ಮನೆಯ ಅತಿಥಿ ಎಂದೆಲ್ಲಾ ವಿಚಾರಿಸಿಕೊಂಡರು. ನನಗೇ ನಾಚಿಕೆಯಾಗಿ, ‘ನಾನು ಯಾವ ಊರಾದರೇನು ನೀನು ನಿನ್ನ ಕೆಲಸ ಮುಗಿಸಪ್ಪ ಮಾರಾಯ’ ಎಂದು ಹೇಳಿ ತಮ್ಮ ಕಾರ್ಯ ಮುಂದುವರಿಸಿಕೊಂಡು ಹೋಗುವಂತೆ ಸೂಚಿಸಿ ಮುಂದೆ ನಡೆದೆ” ಎಂದಾಗ ಗೇಲಿಮಾಡುವ ಸರದಿ ಹುಡುಗಿಯರದು. ಹುಡುಗರು ಊರು ಬಿಟ್ಟು ಓಡುವಂತೆ ನಕ್ಕು ತಮ್ಮ ಜಿದ್ದು ತೀರಿಸಿಕೊಂಡರು.
“ಇದು ನಗುವ ವಿಚಾರವಲ್ಲ ಮಕ್ಕಳೇ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ದಶಕಗಳಾದರೂ, ನಮ್ಮ ಮನೆಗಳಲ್ಲಿ ಒಂದು ಶೌಚಾಲಯವಿಲ್ಲ ಎಂದರೆ ಏನು ಅರ್ಥ? ಇದ್ದರೂ ಉಪಯೋಗಿಸುತ್ತಿಲ್ಲ ಎಂದರೆ ಏನು ಹೇಳುವುದು ಎಂದು ನನಗಂತೂ ಅರ್ಥವಾಗುತ್ತಿಲ್ಲ. ನಮ್ಮಂತಹವರು ಬೇರೆ ಊರಿನಿಂದ ನಿಮ್ಮ ಊರಿಗೆ ಬಂದರೆ ಇದನ್ನೆಲ್ಲಾ ನೋಡಿ ನಿಮ್ಮ ಊರಿನ ಬಗ್ಗೆ, ಊರಿನ ಜನರ ಬಗ್ಗೆ ಅಸಹ್ಯ ಮೂಡುವುದಿಲ್ಲವೇ?” ಎಂದು ಕೇಳಿದೆ.
ಯಾರೂ ಮಾತನಾಡಲಿಲ್ಲ. “ಹಾಗಾಗಿ ತಾವೆಲ್ಲರೂ ದಯಮಾಡಿ ನಿಮ್ಮ ಹಳ್ಳಿಯನ್ನು ಬಯಲು ಶೌಚಾಲಯ ಮುಕ್ತ ಹಳ್ಳಿಯನ್ನಾಗಿ ಮಾಡಬೇಕೆಂದು ವಿನಂತಿಸುತ್ತೇನೆ. ಇನ್ನು ಮನುಷ್ಯನ ಇಚ್ಛಾಶಕ್ತಿಗೆ ಬರೋಣ. ಮನುಷ್ಯನು ಛಲದಿಂದ ಏನನ್ನಾದರು ಸಾಧಿಸಬೇಕೆಂದು ಹೊರಟರೆ, ಎಷ್ಟು ದೊಡ್ಡ ಕೆಲಸವಾದರೂ ತೃಣಕ್ಕೆ ಸಮಾನವಾಗಿ ಬಿಡುತ್ತದೆ. ಒಂದು ಕೋಲು ಹಿಡಿದು, ಕಚ್ಚೆ ಕಟ್ಟಿಕೊಂಡು ಹೋರಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಹಿಮಾಲಯವನ್ನು ಒಂದು ಚಿಕ್ಕ ಗುಡ್ಡದಂತೆ ಏರಿ ಇಳಿದವರೆಷ್ಟು.
ಈಗ ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳಿ. ನಾನು ಸುಖದಿಂದ ನಗರ ಪ್ರದೇಶದಲ್ಲೇ ಬೆಳೆದವ. ನಿಮ್ಮಷ್ಟು ಗಟ್ಟಿತನವಿಲ್ಲ. ಆದರೂ ನಾನೇ ಸುಮಾರು ಐದು ನೂರು ಕಿಲೋಮೀಟರ್‍ನಷ್ಟು ನಡೆಯಲು ತಯಾರಿದ್ದೇನೆ ಅಂದರೆ, ನಿಮ್ಮನ್ನು ಕೇಳಬೇಕೆ. ನೀವೆಲ್ಲ ರೈತ ಭಾಂಧವರ ಮಕ್ಕಳು. ಬಹಳ ಗಟ್ಟಿತನದಿಂದ ಬೆಳೆದವರು. ನೀವು ಎಷ್ಟು ಕೆಲಸ ಮಾಡಬಲ್ಲೆವು ಎಂದು ನೀವೇ ತಿಳಿದುಕೊಳ್ಳಿ. ನಿಮ್ಮ ಈ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಸದ್ದಾಂ ಹುಸೇನ್, ಒಸಾಮ ಬಿನ್ ಲಾಡನ್, ಹಿಟ್ಲರ್ ಇವರೆಲ್ಲರಿಗೂ ಕೂಡ ಬಹಳ ಇಚ್ಛಾಶಕ್ತಿಯಿತ್ತು. ಆದರೆ ಅವರೆಲ್ಲರೂ ಅದನ್ನು ಸಮಾಜಕ್ಕೆ ಕೇಡು ಬಗೆಯುವ ರೀತಿಯಲ್ಲಿ ಬಳಸಿಕೊಂಡರು. ನಿಮಗೆಲ್ಲಾ ಅವರಂತೆ ಆಗಲು ಇಷ್ಟಾನಾ?” ಎಂದು ಕೇಳಿದೆ.
“ಇಲ್ಲಾ ಸಾರ್” ಎಂದರು.
“ಅದೇ ಗಾಂಧೀಜಿ, ವಿವೇಕಾನಂದರು, ಬುದ್ಧ, ಅಂಬೇಡ್ಕರ್, ನೆಲ್ಸನ್ ಮಂಡೇಲ ಇವರೆಲ್ಲರನ್ನು ನೋಡಿ. ಇವರೆಲ್ಲರಿಗೂ ಪ್ರಚಂಡ ಇಚ್ಛಾಶಕ್ತಿಯಿತ್ತು. ಅವರೆಲ್ಲರೂ ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಸಾಧಿಸಿ ತೋರಿಸಿದರು. ನೀವು ಕೂಡ ಅವರು ತೋರಿದ ದಾರಿಯಲ್ಲೇ ನಡೆಯಬೇಕು. ಈಗ ಮೂರನೆ ವಿಷಯ, ಸ್ವತಂತ್ರ ಭಾರತದಲ್ಲಿ ಶಿಕ್ಷಣ ಮತ್ತು ಏಕತೆಯ ಪಾತ್ರ. ನಮ್ಮ ಸುತ್ತ ಇರುವ ತೊಂದರೆಗಳಿಗೆಲ್ಲಾ ಶಿಕ್ಷಣವೊಂದೇ ಉತ್ತರ. ಬೇರೆ ಯಾವ ಸಾಧನದಿಂದಲೂ ಸಾಧ್ಯವಿಲ್ಲ ಮಕ್ಕಳೇ. ಶಿಕ್ಷಣ ಎಷ್ಟು ಮುಖ್ಯ ಎಂದರೆ ನನ್ನದೇ ಒಂದು ನಿದರ್ಶನ ಕೊಡುತ್ತೇನೆ. ಈಗ ನಾನು ಬರೀ ಎಸ್.ಎಸ್.ಎಲ್.ಸಿ ಫೇಲ್ ಆಗಿ ಬಂದಿದ್ದರೆ ನಿಮ್ಮ ಶಾಲೆಯಲ್ಲಿ ಉಪನ್ಯಾಸ ಕೊಡಲು ನನಗೆ ಅವಕಾಶ ಕೊಡುತ್ತಿದ್ದರೇ? ಅಂದರೆ ಶಿಕ್ಷಣವಿಲ್ಲದೇ ಇರುವ ಮನೆ ಬೆಳಕಿಲ್ಲದ ಮನೆಯಿದ್ದಂತೆ. ಹಾಗಾಗಿ ನಾನು ನಿಮ್ಮೆಲ್ಲರಲ್ಲಿ ಕಳಕಳಿಯಾಗಿ ಬೇಡುವುದೇನೆಂದರೆ, ನೀವೆಲ್ಲರೂ ಕಷ್ಟಪಟ್ಟು ಇಷ್ಟಪಟ್ಟು ಓದಿ, ಶಿಕ್ಷಿತರಾಗಿ ಮುನ್ನಡೆಯಿರಿ ಎಂದು. ಇನ್ನು ಏಕತೆಯ ವಿಷಯಕ್ಕೆ ಬರೋಣ. ಇಲ್ಲಿ ಯಾರ್ಯಾರು ವೀರಶೈವರಿದ್ದೀರ?” ಎಂದು ಕೇಳಿದೆ. ಬಹುತೇಕ ಮಂದಿ ಕೈಯತ್ತಿದರು.
“ಯಾರ್ಯಾರು ಕುರುಬರಿದ್ದೀರ?” ಎಂದು ಕೇಳಿದೆ. ಕೆಲವು ಮಂದಿ ಕೈಯೆತ್ತಿದರು.
“ಈಗ ಯಾರ್ಯಾರು ಮನುಷ್ಯರಿದ್ದೀರ ಕೈಯತ್ತಿ” ಎಂದು ಹೇಳಿದೆ. ಒಂದಿಬ್ಬರು ಸೋಮಾರಿಗಳನ್ನು ಬಿಟ್ಟು ಎಲ್ಲರೂ ಕೈಯೆತ್ತಿದರು.
“ಓಹೋ, ಎಲ್ಲರೂ ಮನುಷ್ಯರೇ. ಯಾರು ಕೈಯೆತ್ತಲಿಲ್ಲವೋ ಅವರೆಲ್ಲ ಕುರಿ, ನಾಯಿ, ಹಂದಿನಾ?” ಎಂದು ಕೇಳಿದೆ. ಎಲ್ಲರೂ ಜೋರಾಗಿ ನಕ್ಕರು.
“ಸರಿ ಸರಿ, ಇಲ್ಲಿ ಯಾರ್ಯಾರು ಭಾರತೀಯರಿದ್ದೀರ ಹೇಳಿ?” ಎಂದೆ. ಎಲ್ಲರೂ ಕೈಯೆತ್ತಿದರು.
“ಎಲ್ಲರೂ ಭಾರತೀಯರೇ. ಭಾರತೀಯರು, ಮನುಷ್ಯರೆಲ್ಲಾ ಕೈಯತ್ತಿ ಎಂದಾಗ ಎಲ್ಲರೂ ಕೈ ಎತ್ತಿದಿರಿ. ಇದರ ಅರ್ಥ ಏನು? ದೇಶದ ವಿಷಯ ಬಂದಾಗ ಅಥವಾ ಮನುಷ್ಯತ್ವದ ವಿಷಯ ಬಂದಾಗ ನಾವೆಲ್ಲರೂ ಒಂದೇ. ಯಾವ ಜಾತಿ, ಮತ, ಧರ್ಮ, ವರ್ಣಬೇದ ಮಾಡದೇ ದೇಶ ಪ್ರೇಮವನ್ನು, ಮನುಷ್ಯತ್ವವನ್ನು ಮೆರೆಯಬೇಕು. ಎಲ್ಲರ ರಕ್ತವೂ ಕೆಂಪೇ, ಕುಡಿಯುವ ನೀರು ಒಂದೇ, ಸೇವಿಸುವ ಗಾಳಿಯೂ, ತಿನ್ನುವ ಅನ್ನವೂ ಒಂದೇ” ಎಂದು ಹೇಳಿದೆ.
“ಇದು ನನ್ನ ಮೊದಲ ಉಪನ್ಯಾಸ. ನನಗೆ ತುಂಬಾ ಖುಷಿಯಾಗುತ್ತಿದೆ. ನನ್ನ ಈ ಉಪನ್ಯಾಸವನ್ನು ಎಲ್ಲರೂ ಶಾಂತ ರೀತಿಯಲ್ಲಿ ಕೇಳಿದ್ದಕ್ಕೆ ನನ್ನ ಧನ್ಯವಾದಗಳು. ನನಗೆ ಅವಕಾಶ ಮಾಡಿಕೊಟ್ಟಂತಹ ನಿಮ್ಮ ಶಾಲೆಯ ಶಿಕ್ಷಕವೃಂದಕ್ಕೂ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ” ಎಂದು ಕೈಮುಗಿದು ನಮಸ್ಕರಿಸಿ “ಜೈಹಿಂದ್” ಎಂದು ಕೂಗಿದೆ.
“ಜೈಹಿಂದ್” ಎಂದು ಉದ್ಗರಿಸಿದರು.
“ಭಾರತ್ ಮಾತಾಕಿ”
“ಜೈ”
“ವಂದೇ”
“ಮಾತರಮ್” ಎಂದು ಹೇಳಿ ಖುಷಿಯಿಂದ ಅಂತ್ಯ ಹಾಡಿದೆವು.
ನನ್ನ ಉಪನ್ಯಾಸವನ್ನು ಶಾಲೆಯ ಶಿಕ್ಷಕರು ಬಹಳ ಇಷ್ಟಪಟ್ಟು ಅಭಿನಂದಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಿಂದ ನಾನು ಉಪನ್ಯಾಸ ಕೊಟ್ಟ ಪ್ರಮಾಣ ಪತ್ರವನ್ನು ಪಡೆದು ಮುಂದಿನ ಊರಾದ ಯೆರಿಕೊಪ್ಪ ಎಂಬ ಹಳ್ಳಿಗೆ ಹೊರಟೆ. ಆ ಊರಿನ ಪ್ರೌಢಶಾಲೆಗೆ ದೂರವಾಣಿ ಕರೆ ಮಾಡಿ ನಾನು ಬರುವ ವಿಷಯವನ್ನು ತಿಳಿಸಿದ್ದರು. ಅವರೆಲ್ಲರಿಗೂ ನನ್ನ ಧನ್ಯವಾದಗಳನ್ನು ಸಲ್ಲಿಸಿ ನಾನು ಹೊರಟಾಗ 03:10 ಆಗಿತ್ತು. ಮೊದಲ ಉಪನ್ಯಾಸ ಸುಗಮವಾಗಿ ನೆರವೇರಿದ್ದರಿಂದ, ನನ್ನ ಮನಸ್ಸು ಕೂಡ ಪುಟಿದೇಳುತ್ತಿತ್ತು.
ಕಾಡುಗಳ ಕಡಿದು ಊರಾದ ಸಾಲ,
ಮರಗಳ ಕಡಿದು ಮನೆಯಾದ ಸಾಲ,
ಗುಡ್ಡಗಳ ಬಗೆದು ಹೊಲವಾದ ಸಾಲ,
ಭೂಮಿಯ ಕೊರೆದು ನೀರೆತ್ತಿದ ಸಾಲ,
ಒಡಲನ್ನು ಕೆದಕಿ ಗಣಿಯಾದ ಸಾಲ,
ಕೆರೆಗಳ ಕುಡಿದು ಬರಡಾದ ಸಾಲ,
ಪ್ರಾಣಿಗಳ ಬಡಿದು ಹಸಿವು ನೀಗಿಸಿದ ಸಾಲ,
ಉಸಿರಾಡುವ ಗಾಳಿಯ ಲೆಕ್ಕವನ್ನೂ ಸೇರಿಸಿ,
ಬಡ್ಡಿ ಸಮೇತ ತೀರಿಸಲು ಇನ್ನೂ ಕೂಡಿ ಬಂದಿಲ್ಲವೇ ಕಾಲ? ಓ ಪ್ರಕೃತಿ
ಯೆರಿಕೊಪ್ಪ ಶಾಲೆಯನ್ನು ತಲುಪಿದಾಗ ಸಮಯ 04:55. ಮುಖ್ಯೋಪಾಧ್ಯಾಯರು ಶಾಲೆಯಲ್ಲಿ ಇರಲಿಲ್ಲ. ಶಾಲೆಯ ದೈಹಿಕ ಶಿಕ್ಷಕನನ್ನು ಭೇಟಿಯಾದೆ. ಅವರು ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ತೊಡಗಿದ್ದರಿಂದ ನಾನು ಹೇಳಿದ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಲಾಗಲಿಲ್ಲ. ನಾಳೆ ಶಾಲೆಗೆ ಬಂದು ಮುಖ್ಯೋಪಾಧ್ಯಾಯರನ್ನು ಭೇಟಿಯಾಗುವಂತೆ ಹೇಳಿದರು. ಸರಿಯೆಂದು ಯೆರಿಕೊಪ್ಪ ಹಳ್ಳಿಗೆ ಬಂದೆ.
ಹಳ್ಳಿಯಲ್ಲಿ ಸಿಕ್ಕ ಹುಡಗನನ್ನು ವಿಚಾರಿಸಿದಾಗ ಗ್ರಾ.ಪಂ ಸದಸ್ಯರ ಮನೆಯ ವಿಳಾಸವನ್ನು ಕೊಟ್ಟ. ಸದಸ್ಯರೆಲ್ಲರ ಮನೆಗಳನ್ನು ಸುತ್ತಿದ್ದಾಯಿತು. ಭಿಕ್ಷುಕನನ್ನು ಓಡಿಸುವಂತೆ, ನನ್ನನ್ನು ಮನೆಯಿಂದ ಹೊರಗಟ್ಟಿಬಿಟ್ಟರು. ಒಳ್ಳೆಯ ಕಥೆಯಾಯಿತಲ್ಲಾ ಎಂದು ತಿಳಿದು ಗ್ರಾ.ಪಂ ಕಛೇರಿಗೆ ತೆರಳಿದೆ. ಕಛೇರಿಯ ಸಹಾಯಕ ಸಿಬ್ಬಂದಿ ನನ್ನನ್ನು ಮಾತನಾಡಿಸಿ ಗ್ರಾ.ಪಂ ಸದಸ್ಯರಿಂದ ಹೇಳಿಸಿದರೆ ಮಾತ್ರ ಅಲ್ಲಿ ಉಳಿಯಲು ವ್ಯವಸ್ಥೆ ಮಾಡುವುದಾಗಿ ಹೇಳಿದ.
ನನ್ನ ಈ ಪ್ರಯಾಣದ ಕಥೆಯನ್ನು ಹೇಳಿ, ಮನಗುಂಡಿ ಪ್ರೌಢಶಾಲೆಯಿಂದ ಪಡೆದಿದ್ದ ಪ್ರಮಾಣ ಪತ್ರವನ್ನು ಅವನಿಗೆ ತೋರಿಸಿದೆ. ಅವನಿಗೆ ಮನವರಿಕೆಯಾದ ನಂತರ, ಖುಷಿಪಟ್ಟು ಮಾತನಾಡಿಸಿ ಕುಡಿಯಲು ನೀರು ತಂದುಕೊಟ್ಟ. ನಂತರ ನನ್ನನ್ನು ಕರೆದುಕೊಂಡು ಹೋಗಿ ಉಪಹಾರ ಮಂದಿರದಲ್ಲಿ ಗಿರ್‍ಮಿಟ್ ಮತ್ತು ಚಹಾ ಕೊಡಿಸಿ ಸತ್ಕರಿಸಿದ. ಚೆನ್ನಾಗಿ ಹೊಟ್ಟೆ ಹಸಿದಿದ್ದರಿಂದ ಜಾಸ್ತಿ ಶೇಂಗಾವನ್ನು ಹಾಕಿಸಿಕೊಂಡು ತಿಂದೆ. ಸಾಲದೆ ಮತ್ತೊಂದು ಪ್ಲೇಟ್ ಗಿರ್‍ಮಿಟ್ ತರಲು ಹೇಳಿ, ಅದನ್ನೂ ಕೂಡ ನಾನೊಬ್ಬನೇ ತಿಂದು ಮುಗಿಸಿದೆ. ಶಿವು ಅಲ್ಲಿದ್ದವರಿಗೆಲ್ಲಾ ನನ್ನ ಕಥೆ ಹೇಳಿ ಸಂತೋಷ ಪಟ್ಟ. ನನ್ನ ಗಮನವೆಲ್ಲಾ ಗಿರ್‍ಮಿಟ್ ಮೇಲೆಯೇ ಇತ್ತು.
ನಂತರ ತನ್ನ ಸ್ನೇಹಿತರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರನ್ನು ಪರಿಚಯಿಸಿ ನನ್ನ ವಿಷಯವನ್ನು ಅವರಿಗೆ ತಿಳಿಸಿದ. ಮೂರ್ನಾಲ್ಕು ಹುಡುಗರು ನನ್ನನ್ನು ಕೂರಿಸಿಕೊಂಡು ನನ್ನ ಕಥೆ ಕೇಳಿದರು. ಪಹರೆಗೆಂದು ನಿಯೋಜಿಸಿದ್ದ ಪೊಲೀಸರರೊಟ್ಟಿಗೆ ಗ್ರಾ.ಪಂ ಕಾರ್ಯಾಲಯದ ಹೊಸ ಕಟ್ಟಡದ ಒಂದು ಕೋಣೆಯಲ್ಲಿ ನನಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ನನ್ನ ಕೃತಜ್ಞತೆಯನ್ನು ಸಲ್ಲಿಸಿ ಅವರನ್ನು ಕಳಿಸಿದೆ. ನನ್ನ ಬ್ಯಾಗನ್ನು ಕೋಣೆಯ ಒಳಗೆ ಇಟ್ಟು, ಕೈಕಾಲು ಮುಖ ತೊಳೆದು ಕುಳಿತೆ. ಕಚೇರಿಯ ಶೌಚಾಲಯದ ಕೀಲಿಕೈಯನ್ನು ನನಗೆ ಅವಶ್ಯಬಿದ್ದಾಗ ಉಪಯೋಗಿಸುವಂತೆ ಹೇಳಿ ಕೊಟ್ಟ. ಸುಮಾರು 07:30ರ ಹೊತ್ತಿಗೆ ಆರ್.ಎಸ್.ಎಸ್‍ನ ಹುಡುಗರು ಒಬ್ಬಬ್ಬರಾಗಿ ಗ್ರಾ.ಪಂ ಆವರಣದಲ್ಲಿ ದೈನಂದಿನ ಬೈಠಕ್‍ಗೆ ಸೇರತೊಡಗಿದರು. ಅವರು ಧ್ವಜ ಸ್ತಂಭಕ್ಕೆ ನಮಸ್ಕರಿಸಿ, ಕೆಲವು ದೇಶಭಕ್ತಿಯ ಗೀತೆಗಳನ್ನು ಹಾಡಿದ ನಂತರ ಮಹಾನ್ ವ್ಯಕ್ತಿಗಳ ಹಿತವಚನಗಳ ಸಾರಾಂಶವನ್ನು ವಿವರಿಸಿದರು.
ಸುಮಾರು ಇಪ್ಪತ್ತೈದು ಯುವಕರ ತಂಡ. ಒಂದು ಏಳೆಂಟು ಜನ ಬಹಳ ಶಿಸ್ತಿನಿಂದ, ಸಂಘದ ತತ್ವನಿಯಮಗಳನ್ನು ಪಾಲಿಸುತಿದ್ದುದು ನನಗೆ ಖುಷಿ ಮತ್ತು ಆಶ್ಚರ್ಯಗಳನ್ನು ತಂದಿತು. ಇನ್ನು ಮಿಕ್ಕ ಹುಡುಗರು ಸುಮ್ಮನೆ ಸಂಘದವರೆಂದು ಹೇಳಿಕೊಳ್ಳಲು ಬಂದಂತಿತ್ತು. ತದನಂತರ ಸಂಘದ ವತಿಯಿಂದ ಗುರುಪೂರ್ಣಿಮೆಯನ್ನು ಹೇಗೆ ಆಚರಿಸಬೇಕು, ಸಂಘದ ಸದಸ್ಯರಿಂದ ಎಷ್ಟು ದೇಣಿಗೆಯನ್ನು ಪಡೆಯಬೇಕು ಮತ್ತು ಯಾರನ್ನು ಆಹ್ವಾನಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಿತು. ನಂತರ ನನಗೆ ಕೆಲವು ಮಾತುಗಳನ್ನು ಆಡಬೇಕು ಎಂದು ಕೇಳಿಕೊಂಡು ಅವಕಾಶ ಮಾಡಿಕೊಟ್ಟರು. ನಾನು ಇಲ್ಲಿಗೆ ಬಂದ ಉದ್ದೇಶ, ನನ್ನ ಹಿನ್ನಲೆ, ಸಂಘದ ಶಕ್ತಿ ಮತ್ತು ಸಮಾಜಕ್ಕೆ ಯುವಕರ ಕೊಡುಗೆ ಬಗ್ಗೆ ಮಾತುಗಳನ್ನು ಆಡಿ ಮುಗಿಸಿದೆ. ನನ್ನ ಕೆಲಸವನ್ನು ಶ್ಲಾಘಿಸಿ, ನನ್ನ ಮುಂದಿನ ಪಯಣಕ್ಕೆ ಶುಭಕೋರಿದರು. ಬೈಠಕ್ ನಂತರ ಕೊಠಡಿಗೆ ಮರಳಿದಾಗ ಇಬ್ಬರು ಪೇದೆಗಳು ಮಲಗಿದ್ದರು. ಅವರು ದಸರಾ ಆಚರಣೆಗೆ ಭದ್ರತೆ ಒದಗಿಸಲು ಒಂದೆರಡು ಸಲ ಮೈಸೂರಿಗೆ ಬಂದಾಗ ಚಾಮುಂಡಿ ಬೆಟ್ಟ, ಅರಮನೆ, ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾಗಿ ಹೇಳಿ ತಮ್ಮ ತಮ್ಮ ನೆನಪುಗಳನ್ನು ಕೆದಕಿದರು.
ಮೊದಲ ದಿನದ ನಡಿಗೆಯಿಂದ ನನಗೆ ಬಹಳ ಆಯಾಸವಾಗಿತ್ತು. ಕೈಕಾಲುಗಳೆಲ್ಲಾ ಸೆಳೆಯುತ್ತಿದ್ದವು. ಮಲಗೋಣವೆಂದರೆ ತಲೆಗೆ ದಿಂಬಿಲ್ಲ, ಹೊದೆಯಲು ಕಂಬಳಿಯಿಲ್ಲ. ಬ್ಯಾಗಿನಿಂದ ಬಟ್ಟೆಗಳನ್ನು ತೆಗೆದು ತಲೆದಿಂಬಾಗಿ ಮಾಡಿಕೊಂಡು ಮಲಗಿದೆ. ಬ್ಯಾಗನ್ನು ಹೊತ್ತುಕೊಂಡು ಓಡಾಡಬೇಕಾಗಿರುವುದರಿಂದ, ಅದರ ತೂಕದ ಬಗ್ಗೆ ಯಾವಾಗಲೂ ಗಮನ ಇಟ್ಟಿದ್ದೆ. ಸೊಳ್ಳೆಗಳ ಕಾಟ ಜಾಸ್ತಿಯಾಯಿತು. ಒಬ್ಬ ಪೊಲೀಸ್ ಪೇದೆ ಎದ್ದು ಹೋಗಿ ಒಂದು ಸೊಳ್ಳೆ ಬತ್ತಿ ಹಚ್ಚಿ, ಕೋಣೆಯ ಬಾಗಿಲು ತೆಗೆದಿಟ್ಟು ಮಲಗಿಕೊಂಡ.
ಪೊಲೀಸರ ಜೊತೆಯೇ ಇದ್ದರಿಂದ ನನಗೆಂತಹ ಭಯ. ನನಗೆ ನಿದ್ರೆ ಸೆಳೆಯಲು ಶುರುವಾಯಿತು. ಅಷ್ಟರಲ್ಲಿ ನನ್ನ ಪಕ್ಕವೇ ಮಲಗಿದ್ದ ಇನ್ನೊಬ್ಬ ಪೇದೆ ನನ್ನ ಮೇಲೆ ಕರುಣೆ ತೋರಿ ಎದ್ದು ಹೋಗಿ ಒಂದು ಹಳೇ ಹೊದಿಕೆಯನ್ನು ತಂದು ನನ್ನ ಮೇಲೆ ಹೊದಿಸಿದ. ನಾನು ನಿದ್ರೆ ಮಾಡುತ್ತಿದ್ದಂತೆ ನಾಟಕವಾಡಿ ನನ್ನ ಮನಸ್ಸಿನಲ್ಲೇ ಅವನಿಗೆ ಕೃತಜ್ಞತೆ ಸಲ್ಲಿಸಿದೆ. ಮಹಾಮನೆಯ ಹೊರಗೆ ನಾನು ಕಳೆಯುತ್ತಿರುವ ಮೊದಲ ರಾತ್ರಿ. ಇನ್ನು ಯಾವ ತರಹದ ಸೌಕರ್ಯವನ್ನೂ ನಿರೀಕ್ಷಿಸುವಂತಿಲ್ಲ. ಎಲ್ಲಿ ವಾಸ್ತವ್ಯ ಸಿಗುತ್ತದೋ ಅಲ್ಲಿ ಉಳಿದುಕೊಳ್ಳಬೇಕು. ಆಯಾಸವಾಗಿದ್ದರಿಂದ ಆ ರಾತ್ರಿ ಗಾಢವಾದ ನಿದ್ರೆ ಹೊಡೆದೆ.
[ತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 36 ಮೈಲುಗಳು]





Sir I am following you from first episode. Like the way you narrated your journey
Thank you Adwaith for your support. Am happy to see the way you are receiving this story. I hope my writing will keep you intact till the end. Take care.