ಬರುತ್ತೇನೆಂದವ ಬಾರದ ಲೋಕಕ್ಕೆ ಹೋದ !
ಛಾಯಗ್ರಾಹಕ ಕೇಶವ ವಿಟ್ಲ ಇನ್ನಿಲ್ಲ
ಕಂಬನಿ
-ಚಿದಂಬರ ಬೈಕಂಪಾಡಿ
‘ಹಲೋ ನೀನು ಅಲ್ಲೆ ಇರು, ನಾನು ಸೋಮವಾರ ಬರ್ತೇನೆ, ಭೇಟಿಯಾಗೋಣ, ನಾನು ಬರದೇ ಹೋಗ್ಬೇಡ ’ಎಂದಿದ್ದ ದೂರವಾಣಿ ಕರೆ ಮಾಡಿ. ಆದರೆ ನಾನು ಇಲ್ಲೇ ಇದ್ದೇನೆ, ಅವನಿಲ್ಲ ಅವನು ಬಾರದ ಲೋಕಕ್ಕೆ ಹೋಗಿದ್ದಾನೆ, ಅವನು ಇನ್ನು ಬರುವುದೂ ಇಲ್ಲ.
-ಇದು ಮೂರು- ನಾಲ್ಕು ದಿನಗಳ ಹಿಂದೆ ಆಡಿದ ಮಾತು.
ಹೀಗೆ ಹೇಳಿದ ವ್ಯಕ್ತಿ‘ಮುಂಗಾರು’ ಖ್ಯಾತಿಯ ಛಾಯಾಗ್ರಾಹ ಕೇಶವ ವಿಟ್ಲ. ಸಾವಿನ ಮನೆ ಸೇರಿದ್ದಾನೆ.. ಮಂಗಳೂರಿನ ವೆನ್ಲಾಕ್ ಆಸ್ಪತೆಯಲ್ಲಿ ಅಸ್ವಸ್ಥಸ್ಥೆಯಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ. ಆರೋಗ್ಯ ಹದಗೆಟ್ಟು ಬೆಳಗಿನ ಜಾವ 3 ಗಂಟೆ ಹೊತ್ತಿಗೆ ಕೊನೆಯುಸಿರೆಳೆದ.
ಅವನಿಗೆ ಸಾಯುವ ವಯಸ್ಸಲ್ಲ . ಬರೇ 56 ವರ್ಷ ಪ್ರಾಯ. ಅವಿವಾಹಿತ. ಕೇಶವ ವಿಟ್ಲನನ್ನು ಪರಿಚಯಿಸಿದವರು ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರು. ಉಂಡಾಡಿ ಗುಂಡನಂತೆ ತಿರುಗುತ್ತಿದ್ದ ಹೆಗಲಲ್ಲಿ ಕ್ಯಾಮರಾ ಹಿಡಿದು 1984ರ ಹೊತ್ತಿಗೆ. ಈ ಅಲೆಮಾರಿ ಯುವಕನನ್ನು ‘ಮುಂಗಾರು’ಗೆ ಕರೆತಂದು ನನಗೆ ಪರಿಚಯಿಸಿ ‘ಇವ ಕೇಶವ ವಿಟ್ಲ ಅಂತ, ಇವನು ಫೋಟೋ ತೆಗೆಯುತ್ತಾನೆ, ನೀನು ಇವನಿಗೆ ಏನು ಬೇಕು ಅಂತಾ ತಿಳಿಸು’ ಎಂದಿದ್ದರು. ಅಂದಿನಿಂದ ಕೇಶವ ನನಗೆ ಪರಿಚಿತ.
ಕೇಶವ ಮಂಗಳೂರಲ್ಲಿ ಯಜ್ಞರನ್ನು ಬಿಟ್ಟರೆ ಬೇರೆ ಯಾರೂ ನನಗೆ ಸರಿಸಾಟಿ ಇಲ್ಲ ಎನ್ನುವ ಧಿಮಾಕು. ಇದು ಅವನಿಗಿದ್ದ ಹೆಚ್ಚುಗಾರಿಕೆಯೂ ಹೌದು. ಛಾಯಾಚಿತ್ರವನ್ನು ತೆಗೆಯುವಾಗ ಸಾಕಷ್ಟು ಕಸರತ್ತು ಮಾಡುತ್ತಿದ್ದ. ಐದಾರು ಚಿತ್ರ ಕೊಟ್ಟು ಯಾವುದು ಲೇಖನಕ್ಕೆ ಸೂಟ್ ಆಗುತ್ತೆ ಎನ್ನುತ್ತಿದ್ದ. ನಾನು ಒಂದನ್ನು ತೆಗೆದುಕೊಂಡು ಉಳಿಕೆಯದನ್ನು ಕೊಡುತ್ತಿದ್ದೆ. ಮರುದಿನ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರ ನೋಡಿ ಖುಷಿ ಪಡುತ್ತಿದ್ದ ಮಾತ್ರವಲ್ಲಾ ‘ಹೇಗೇ ಫೋಟೋ’ ಎನ್ನುತ್ತಿದ್ದ.
ಇವನು ನನ್ನೊಂದಿಗೆ ನಾಲ್ಕೈದು ವರ್ಷ ಇದ್ದ, ಅವನು ಇದ್ದಷ್ಟು ಕಾಲವೂ ಪತ್ರಿಕೆಗೆ ಉತ್ತಮ ಛಾಯಾಚಿತ್ರ ಕೊಟ್ಟ. ಅವನ ಸ್ಪೆಷಾಲಿಟಿ ಅಂದ್ರೆ ನಿರ್ಗತಿಕ ಯುವಕರು, ಗತಿಯಿಲ್ಲದ ಹೆಂಗಸರ ಛಾಯಾಚಿತ್ರ ಅದರಲ್ಲೂ ಅವರು ವಿಶ್ರಾಂತಿಗಾಗಿ ನಿದ್ದೆ ಹೋಗುತ್ತಿದ್ದ ಸಂದರ್ಭವನ್ನು ಕಾದು ಚಿತ್ರ ತೆಗೆಯುತ್ತಿದ್ದ. ಅವರು ಯಾರ ಹಂಗಿಲ್ಲದೆ ಯಾವುದಾದರೂ ಮರದ ಕೆಳಗೋ ಅಲ್ಲ ಬಾಗಿಲು ಹಾಕಿದ್ದ ಅಂಗಡಿ, ನಿಂತ ಲಾರಿ ಕೆಳಗೆ ಹೀಗೆ ಎಲ್ಲೆಂದರಲ್ಲಿ ಮಲಗಿದ್ದ ಛಾಯಚಿತ್ರಗಳು. ಈ ಚಿತ್ರ ಪತ್ರಿಕೆಯಲ್ಲಿ ಪ್ರಕಟವಾದ ಬಳಿಕ ಅವನಿಗಾಗುತ್ತಿದ್ದ ಸಂತೋಷ. ಅದನ್ನು ಗೆಳೆಯರೊಂದಿಗೆ ಹೇಳಿಕೊಂಡು ನರ್ತಿಸುವುದು ವಾಡಿಕೆ.
ನಾನು ಒಮ್ಮೆ ಇವನಿಗೆ ಕುಟ್ಯಪ್ಪು ಎನ್ನುವ ಮಹಿಳೆಯಿದ್ದಾಳೆ. ಅನಾಥೆ ಅವಳಿಗೆ ಮಧ್ಯಾಹ್ನದ ಹೊತ್ತು ದಿನವೂ ಓರ್ವ ಮಹಿಳೆ ಬಂದು ಊಟ ಉಣ್ಣಿಸಿ, ಬಾಯಿತೊಳೆದು ಹೋಗುತ್ತಾಳೆ. ಅದನ್ನು ಫೋಟೋ ತೆಗೆಯಬೇಕು ಎಂದೆ. ಕೇಶವ ಅದನ್ನು ಕೆಲವು ಕಾದುಕುಳಿತು ತೆಗೆದ. ಅದು ಮುಂದೆ ‘ಕುಟ್ಯಪ್ಪು ಕಲ್ಯಾಣಿಯಾಗಲೇ ಇಲ್ಲ’ ಎನ್ನುವ ಹೆಸರಲ್ಲಿ ಪ್ರಕಟವಾಯಿತು. ಆ ಚಿತ್ರ ಮತ್ತು ಲೇಖನ ಜನಪ್ರಿಯವಾಯಿತು.
ಒಮ್ಮೆ ಡಾ.ಶಿವರಾಮ ಕಾರಂತರು ಪುರಭವನದಲ್ಲಿ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಸಮಯಕ್ಕೆ ಸರಿಯಾಗಿ ಬಂದಿದ್ದರು. ಆದರೆ ಜನರೇ ಇಲ್ಲ. ಆಗ ಅವರು ಪ್ರೇಕ್ಷಕರ ಕೊನೆಯ ಸಾಲಿನಲ್ಲಿ ಕುಳಿತಿದ್ದರು. ನಾನು ಆಗ ಕೇಶವನಿಗೆ ಹೇಳಿದೆ ಕಾರಂತರ ಫೋಟೋ ಬೇಕಾಗುತ್ತೆ ತೆಗೆ, ಅವರು ಕುಳಿತು ಯೋಚಿಸುವುದೇ ವಿಚಿತ್ರ ಎಂದೆ. ಬೇಡ ಬೇಡ ನನಗೆ ಹೆದರಿಕೆಯಾಗುತ್ತೆ, ಬೈದರೆ ಎಂದ.
ನಾನು ಹೋಗಿ ‘ ಸಾರ್ ನಮಸ್ಕಾರ ’ಎಂದೆ. ನಮಸ್ಕಾರ ಏನಾಗಬೇಕು ಕೇಳಿದರು.‘ ಸಾರ್ ನಿಮ್ಮ ಫೋಟೋ ತೆಗೆಯಬೇಕು’ ಅಂದೆ. ಯಾಕೆ ? ಎಂದರು. ‘ಮುಂಗಾರು’ಗೆ ಎಂದೆ. ಅವರು ಸ್ವಲ್ಪ ಹೊತ್ತು ಸುಮ್ಮನಿದ್ದರು. ನಂತರ ‘ಮುಂಗಾರುಗಾದ್ರೂ ತೆಗೆದುಕೋ ಹಿಂಗಾರುಗಾದ್ರೂ ತೆಗೆದುಕೋ’ ಎಂದವರೇ ಕೈಯನ್ನು ಮೇಲಕ್ಕೆತ್ತಿದರು. ಆ ಕ್ಷಣವೇ ಕ್ಲಿಕ್ಕಿಸಿದ ಈತ. ಆ ಛಾಯಾಚಿತ್ರ ಅದ್ಭುತ.
ಹೀಗೆ ಸಾಗುತ್ತದೆ ಕೇಶವ ವಿಟ್ಲನ ಚಿತ್ರಪಯಣ. ಮತ್ತೆ ಆತ ಬೆಂಗಳೂರು ಹೊಕ್ಕಿದ. ಅಲ್ಲಿ ಆತ ಇಂಡಿಯನ್ ಎಕ್ಸ್ ಪ್ರೆಸ್- ಕನ್ನಡಪ್ರಭ ಕ್ಕೆ ಛಾಯಾಗ್ರಾಹಕ. ಮಂಗಳೂರಲ್ಲಿ ನಾನು ಕನ್ನಡಪ್ರಭ ಸೇರಿದೆ, ಆಗಾಗ ಕೇಶವ ವಿಟ್ಲನ ಫೋಟೋ ನೋಡುವ ಅವಕಾಶವಿತ್ತು.
ಕೆಲ ಕಾಲ ಇದ್ದು ಆ ಪತ್ರಿಕೆಯನ್ನು ಬಿಟ್ಟು ಬೇರೆ ಬೇರೆ ಪತ್ರಿಕೆಗಳಿಗೆ ಛಾಯಾಚಿತ್ರ ಕೊಡುತ್ತಿದ್ದ.ಅವನು ಇತ್ತೀಚೆಗೆ ‘ಫ್ಯಾಸಿಟ್ಸ್ ಆಫ್ ಕರ್ನಾಟಕ’ ಎನ್ನುವ ಫೋಟೋ ಆಲ್ಬಮ್ ಹೊರತಂದಿದ್ದ.ಅತ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿಯನ್ನು ಜೀವಮಾನದ ಸಾಧನೆಗಾಗಿ ಪಡೆದು, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದ. ಹುಟ್ಟೂರಲ್ಲಿ ಕೂಡಾ ಆತ ಸಾವಿಗೆ ಒಂದು ತಿಂಗಳ ಮೊದಲು ಪ್ರತಿಭಾನ್ವಿತನೆಂದು ಪ್ರಶಸ್ತಿ ಪಡೆದಿದ್ದ. ಈಗ ಆತ ಇಲ್ಲ, ಅವನು ಇನ್ನಿಲ್ಲ.
ಎಲ್ಲಕ್ಕೂ 'ಕಣ್ಣು' ಕೊಟ್ಟ ಕೇಶವ ವಿಟ್ಲ ಇನ್ನಿಲ್ಲ
ನಿಮಗೆ ಇವೂ ಇಷ್ಟವಾಗಬಹುದು…





0 Comments